ವಿಶೇಷ ದಿನ

ಯೋಹಾನ್‌ ಕಾರ್ಲ್‌ ಫ್ರೆಡರಿಕ್‌ ಗಾ಼ಸ಼್

Share Button

(ಡಿಸೆಂಬರ್‌ ೩೩ ರಂದು ಗಣಿತಶಾಸ್ತ್ರದ ದಿನ. ಈ ಪ್ರಯುಕ್ತ, ಮಕ್ಕಳಿಗಾಗಿ ಬರೆದ, ಪ್ರಸಿದ್ಧ ಜರ್ಮನ್‌ ಗಣಿತಶಾಸ್ತ್ರಜ್ಞ ಯೋಹಾನ್‌ ಕಾರ್ಲ್‌ ಫ್ರೆಡರಿಕ್‌ ಗಾಸ್‌ ನ ಬಗೆಗಿನ ಒಂದು ಶ್ರಾವ್ಯ ರೂಪಕವಿದು)

ದೃಶ್ಯ – 1

(ಮನೆಯ ಅಂಗಳ, ಬೆಳಗಿನ 9 ಗಂಟೆಯ ಸಮಯ)

ಜಾನ್:‌ ಗೋಡಾರ್ಡ್‌ ಡೀಡರಿಕರಿಗೆ ನಮಸ್ಕಾರ

ಗೋಡಾರ್ಡ್‌ ಡೀಡರಿಕ್: ಜಾನ್‌ ಯಾಕೆ ವಿಶೇಷ ನಮಸ್ಕಾರ?

ಜಾನ್:‌ ಇವತ್ತು ಸಂತೆ ದಿನ, ನಮಗೆ ನಮ್ಮ ವಾರದ ಬಟವಾಡೆ ಕೊಡೋ ದಿನ ಅನ್ನೋದನ್ನ ನೆನಪಿಸಿದೆ ಅಷ್ಟೇ

ಗೋಡಾರ್ಡ್‌ ಡೀಡರಿಕ್: ಜಾನ್‌, ಸಂತೆದಿನ ಯಾವತ್ತು ಅನ್ನೋದನ್ನ ಯಾರಾದರೂ ಮರೆಯೋದಿಕ್ಕೆ ಆಗುತ್ತಾ? ಸಂಜೆ ತಾನೆ ಬಟವಾಡೆ ಮಾಡೋದು. 

ಜಾನ್:‌ ಹೌದು ನೀವು ಹಣ ಜೋಡಿಸ್ಕೋ ಬೇಕಲ್ಲ. ಅದಕ್ಕೇ ಮುಂಚೇನೇ ನೆನಪಿಸಿದೆ. 

ಗೋಡಾರ್ಡ್‌ ಡೀಡರಿಕ್: ಸರಿ ಸರಿ. ಗಾರೆ ಕೆಲಸಾನ್ನೆಲ್ಲ ಮುಗಿಸಿ ಸಂಜೆ ಎಲ್ಲರೂ ಒಟ್ಟಾಗಿ ಬನ್ನಿ.

ಜಾನ್:‌ ಹಾಗೇ ಮಾಡ್ತೀವಿ, ನಮಸ್ಕಾರ

ದೃಶ್ಯ – 2

(ಮನೆಯ ಅಂಗಳ, ಸಂಜೆಯ 5 ಗಂಟೆಯ ಸಮಯ)

ಗೋಡಾರ್ಡ್‌ ಡೀಡರಿಕ್: ಜಾನ್‌, ಡೇವಿಡ್‌, ಬಾಟಮ್‌, ಹೆನ್ರಿ, ಮಾರ್ಟಿನ್‌, ಲೂಸಿ,,  ಮರಿಯಾ, ರೀಟಾ ಎಲ್ಲರೂ ಬಂದಿದ್ದಾರಾ?

ಜಾನ್‌: ಎಲ್ಲರೂ ಬಂದಿದ್ದಾರೆ ಡೀಡರಿಕ್‌ 

ಗೋಡಾರ್ಡ್‌ ಡೀಡರಿಕ್: ಜಾನ್‌ ನಿನಗೆ ವಾರಕ್ಕೆ ಇಪ್ಪತೈದು ರುಪಾಯಿ ಕೊಡಬೇಕು ಅಲ್ವಾ

ಜಾನ್:‌ ಹೌದು ಡೀಡರಿಕ್.‌

ಗೋಡಾರ್ಡ್‌ ಡೀಡರಿಕ್: ನೀನು ಎರಡುದಿನ ಕೆಲಸಕ್ಕೆ  ಬರಲಿಲ್ಲ. ಸರಿ ತಾನೆ?

ಜಾನ್:‌ ಸರಿ ಡೀಡರಿಕ್

ಗೋಡಾರ್ಡ್‌ ಡೀಡರಿಕ್: ಏಳು ದಿನಕ್ಕೆ 25 ರೂಪಾಯಿ ಆದರೆ ಒಂದು ದಿನಕ್ಕೆ ಮೂರು ರೂಪಾಯಿ ನಾಲ್ಕು ಆಣೆ ಆಯ್ತು ಅಲ್ವಾ?

ಯೋಹಾನ್:‌ ಅಪ್ಪಾ ಏಳರಿಂದ ಇಪ್ಪತೈದು ರೂಪಾಯಿಗಳನ್ನ ಭಾಗಿಸಿದ ಮೇಲೆ ಉಳಿದ ನಾಲ್ಕು ರೂಪಾಯಿಗಳನ್ನು ಹದಿನಾರರಿಂದ ಗುಣಿಸಬೇಕು. ಆಮೇಲೆ ಮತ್ತೆ ಏಳರಿಂದ ಭಾಗಿಸಬೇಕು ಅಪ್ಪಾ

ಗೋಡಾರ್ಡ್‌ ಡೀಡರಿಕ್:‌ ಅದ್ಯಾಕೆ ಯೋಹಾನ್?‌

ಯೋಹಾನ್:‌ ಅಪ್ಪಾ ಒಂದು ರೂಪಾಯಿಗೆ ಹದಿನಾರು ಆಣೆ ಅಲ್ವಾ. ನಾಲ್ಕು ರೂಪಾಯಿಗಳನ್ನ ಏಳರಿಂದ ಭಾಗಿಸೋದಿಕ್ಕೆ ಆಗೋಲ್ಲ ಅಲ್ವಾ 

ಗೋಡಾರ್ಡ್‌ ಡೀಡರಿಕ್:‌ ಹೌದು, ಹೌದು ಯೋಹಾನ್‌ 

ಯೋಹಾನ್:‌ ಅಪ್ಪಾ, ಜಾನ್‌ ಗೆ ಒಂದು ದಿನಕ್ಕೆ ಮೂರು ರೂಪಾಯಿ, ಒಂಬತ್ತು ಆಣೆ, ನಾಲ್ಕು ಕಾಸು ಕೊಡಬೇಕು ಅಪ್ಪಾ

ಗೋಡಾರ್ಡ್‌ ಡೀಡರಿಕ್:‌ ಶಾಭಾಷ್‌ ಯೋಹಾನ್‌ ಎಷ್ಟು ಚೆನ್ನಾಗಿ ಲೆಕ್ಕ ಮಾಡಿದ್ಯಲ್ಲ!

ಜಾನ್:‌ ಡೀಡರಿಕ್‌ ನಿಮ್ಮ ಮಗ ಯೋಹಾನ್‌ ಕಾರ್ಲ್‌ ಗಾಸ್‌ ಗೆ ಮೂರೇ ವರ್ಷ. ಆದರೂ ಎಷ್ಟು ಚುರುಕಾಗಿ ಲೆಕ್ಕ ಮಾಡ್ತಾನಲ್ಲ?!

ಗೋಡಾರ್ಡ್‌ ಡೀಡರಿಕ್:‌ ಹೌದು ಜಾನ್‌. ಆದರೆ ಅವನು ನನ್ನಿಂದ ನಿನಗೆ ಆಗ್ತಾ ಇದ್ದ ಅನ್ಯಾಯದಿಂದ ನನ್ನನ್ನ ಪಾರುಮಾಡಿದ. ಅದು ತುಂಬಾ ಮುಖ್ಯವಾದದ್ದು ಜಾನ್‌ 

ಯೋಹಾನ್‌: ಅಪ್ಪಾ ಜಾನ್‌ಗೆ ಹದಿನೆಂಟು ರೂಪಾಯಿ, ಎರಡು ಆಣೆ ಕೊಡಬೇಕು ಅಪ್ಪಾ ಉಳಿದವರಿಗೆಲ್ಲ ಮಾಮೂಲಿ 25 ರೂಪಾಯಿ ಕೊಡಬೇಕು ಅಪ್ಪಾ.

ಗೋಡಾರ್ಡ್‌ ಡೀಡರಿಕ್:‌ ಸರಿ ಯೋಹಾನ್.‌ ಜಾನ್ ತಗೋ ನಿನ್ನ ಕೂಲಿ.‌ ಡೇವಿಡ್‌, ಬಾಟಮ್‌, ಹೆನ್ರಿ, ಮಾರ್ಟಿನ್‌, ಲೂಸಿ,,  ಮರಿಯಾ, ರೀಟಾ ಬನ್ನಿ ನಿಮ್ಮದನ್ನೂ ತೆಗೆದುಕೊಳ್ಳಿ.

ಜಾನ್:‌ ಸರಿ, ಡೀಡರಿಕ್. ನಾವೆಲ್ಲ ಸಂತೆಗೆ ಹೋಗಿ ಬರ್ತೀವಿ ಡೀಡರಿಕ್. 

ಗೋಡಾರ್ಡ್‌ ಡೀಡರಿಕ್:‌ ಆಗಲಿ ನಾಳೆ ಸರಿಯಾದ ಹೊತ್ತಿಗೆ ಬನ್ನಿ. 

ದೃಶ್ಯ – 3

(ಮನೆಯ ಒಳಗೆ, ಬೆಳಗಿನ 9 ಗಂಟೆಯ ಸಮಯ)

ಗೋಡಾರ್ಡ್‌ ಡೀಡರಿಕ್:‌ ಯೋಹಾನ್‌, ಬಾ ಇಲ್ಲಿ.

ಯೋಹಾನ್‌ ಹೊರಗಡೆಯಿಂದ ಒಳಗೆ ಬಂದು: ಏನಪ್ಪಾ?

ಗೋಡಾರ್ಡ್‌ ಡೀಡರಿಕ್: ಯೋಹಾನ್‌, ನೀನು ತುಂಬಾ ಜಾಣ. ಹಾಗೇನೇ ನೀನು ತುಂಬಾ ಒಳ್ಳೇ ಹುಡುಗ….ಆದರೆ….

ಯೋಹಾನ್:‌ ಆದರೆ ಅಂತ ಮಾತನ್ನ ಅರ್ಧಕ್ಕೆ ಯಾಕೆ ನಿಲ್ಲಿಸಿದೆ ಅಪ್ಪ

ಗೋಡಾರ್ಡ್‌ ಡೀಡರಿಕ್: ಯೋಹಾನ್‌, ನಾವು ಬಡವರು, ನಾನು ಗಾರೆ ಕೆಲಸದ ಮೇಸ್ತ್ರಿ ಅಷ್ಟೇ. ಅದರಲ್ಲಿ ಎಷ್ಟು ಹಣ ಬರುತ್ತೋ ಅಷ್ಟರಲ್ಲಿ ನಮ್ಮ ಊಟ ಬಟ್ಟೆ ಮಾತ್ರ ಆಗುತ್ತೆ. ನಿನಗೆ ಸರಿಯಾದ ವಿದ್ಯಾಭ್ಯಾಸ ಕೊಡಿಸೋದಿಕ್ಕೆ ಆಗೋದಿಲ್ಲ ಅನ್ನೋದು ನನ್ನ ಚಿಂತೆ.

ಯೋಹಾನ್:‌  ಅಪ್ಪಾ, ಆ ವಿಷಯ ಬಿಡು. ಫ್ರೆಡರಿಕ್‌ ಮಾವ ಬಂದಿದ್ದಾರೆ ನೋಡು.

ಗೋಡಾರ್ಡ್‌ ಡೀಡರಿಕ್: ಹೌದಲ್ಲ, ಫ್ರೆಡರಿಕ್ ಯಾವಾಗ ಬಂದೆ? ನಾನು ನೋಡಲೇ ಇಲ್ಲ. ಯೋಹಾನ್‌ ಮಾವನಿಗೆ ಕಾಫಿ ತೆಗೆದುಕೊಂಡು ಬಾ.

ಯೋಹಾನ್:‌ ಆಗಲಿ ಅಪ್ಪಾ. (ಒಳಗೆ ಹೋಗುತ್ತಾನೆ) 

ಫ್ರೆಡರಿಕ್:‌ ಡೀಡರಿಕ್‌, ನಾನು ಬಂದು ಎಷ್ಟೋ ಸಮಯ ಆಯ್ತು. ನೀನು ನಿನ್ನ ಚಿಂತೆಯಲ್ಲಿ ನನ್ನ ಕಡೆ ನೋಡೋದೇ ಇಲ್ಲ. ಏನು ವಿಷಯ? ಏನು ಸಮಾಚಾರ?

ಗೋಡಾರ್ಡ್‌ ಡೀಡರಿಕ್:‌ ಫ್ರೆಡರಿಕ್‌ ನೀನು ನಮ್ಮ ಜೊತೆ ಸಂತೋಷದಿಂದ ಕಾಲ ಕಳೆಯೋಣ ಅಂತ ಬಂದಿದ್ದೀಯ. ಇರಲಿ ಬಿಡು. ನಮ್ಮ ಕಷ್ಟ ಇದ್ದದ್ದೇ!

ಫ್ರೆಡರಿಕ್:‌ ಡೀಡರಿಕ್‌ ನೀನು ಯಾಕೆ ಸಂಕೋಚ ಪಡ್ತೀಯ? ಕಷ್ಟ ಸುಖವನ್ನ ಒಬ್ಬರಿಗೊಬ್ಬರು ಮಾತಾಡಿಕೊಳ್ಳಲೇಬೇಕು

ಗೋಡಾರ್ಡ್‌ ಡೀಡರಿಕ್:‌ ಇನ್ನೇನಿಲ್ಲ, ನಮ್ಮ ಯೋಹಾನ ಗಣಿತದಲ್ಲಿ ತುಂಬಾ ಜಾಣ. ಅವನಿಗೆ ಒಳ್ಳೇ ವಿದ್ಯಾಭ್ಯಾಸ ಕೊಡಿಸೋದಿಕ್ಕೆ ಏನು ಮಾಡೋದು ಅನ್ನೋದೇ ನನ್ನ ಚಿಂತೆ ಫ್ರೆಡರಿಕ್‌

ಫ್ರೆಡರಿಕ್:‌ ಅದಕ್ಯಾಕೆ ಯೋಚನೆ ಮಾಡ್ತೀಯ ನಾನು ಹಣ ಕೊಡ್ತೀನಿ. ಅವನು ಗಾರೆ ಕೆಲಸ ಮಾಡಿಕೊಂಡಿರೋದು ಬೇಡ.. ಅವನನ್ನ ಸ್ಕೂಲಿಗೆ ಕಳಿಸು

ಗೋಡಾರ್ಡ್‌ ಡೀಡರಿಕ್: ಫ್ರೆಡರಿಕ್‌ ದೇವರ ಹಾಗೆ ಬಂದು ನನ್ನ ದುಃಖವನ್ನ ಇಲ್ಲವಾಗಿಸಿದೆ. ದೇವರು ನಿನಗೆ ಒಳ್ಳೇದನ್ನ ಮಾಡಲಿ

ದೃಶ್ಯ – 4

(ಶಾಲೆಯ ತರಗತಿಯಲ್ಲಿ ಮೇಸ್ಟ್ರು ಕುರ್ಚಿಯ ಮೇಲೆ ಕುಳಿತಿದ್ದಾರೆ. ತರಗತಿಯ ಒಳಗೆ ಬಂದ ಮಕ್ಕಳು)

ಮಕ್ಕಳು: ಗುಡ್‌ ಮಾರ್ನಿಂಗ್‌ ಬರ್ಟನರ್‌ ಸರ್ 

ಬರ್ಟ್ನರ್:‌ (ಗಡುಸಾದ ಧ್ವನಿಯಲ್ಲಿ) ವೆರಿ ಗುಡ್‌ ಮಾರ್ನಿಂಗ್.‌ ಇಷ್ಟು ಬೇಗ ಪ್ರೇಯರ್‌ ಮುಗಿಸಿ ಬಂದೇ ಬಿಟ್ಟರಾ? ಒಳಗೆ ಬನ್ನಿ. ಸದ್ದು ಗದ್ದಲ ಮಾಡದೆ ಗಪ್ಪಂತ ಕೂತ್ಕೊಳ್ಳಿ. ಗೊತ್ತಾಯ್ತಾ! 

ಮಕ್ಕಳು: ಸರಿ ಸರ್.‌

ಬರ್ಟ್ನರ್:‌ ಇವತ್ತು ನಂಗೆ ಆರೋಗ್ಯ ಚನ್ನಾಗಿಲ್ಲ. ಸ್ವಲ್ಪ ಹೊತ್ತು ಮಲಗ್ತೀನಿ. ನೀವೆಲ್ಲ ಒಂದರಿಂದ ನೂರರವರೆಗೆ ಇರೋ ಅಂಕಿಗಳನ್ನೆಲ್ಲ ಕೂಡಿಸಿದರೆ ಯಾವ ಮೊತ್ತ ಬರುತ್ತೆ ಅನ್ನೋದನ್ನ ಕಂಡುಹಿಡಿಯಿರಿ. (ಮಲಗಿ ಗೊರಕೆ ಹೊಡೆಯಲಾರಂಭಿಸುತ್ತಾರೆ)

ಮಾರ್ಟಿನ್:‌ ಇಷ್ಟು ದೊಡ್ಡ ಲೆಕ್ಕವನ್ನ‌ ಮಾಡಿ ಮುಗಿಸೋ ವೇಳೆಗೆ ಸಂಜೆ ಸ್ಕೂಲ್‌ ಬಿಡೋ ಹೊತ್ತೇ  ಆಗುತ್ತೆ ಅಲ್ವೇನೋ ಜಾಕಿ?

ಜಾಕ್:‌ ಹೌದೋ ಮಾರ್ಟಿನ್.‌ ಇವರಿಗೆ ಜ್ವರ ಬಂದಿದ್ದರೆ ರಜೆ ಹಾಕಿ ಮನೇಲಿ ಯಾಕಿರಬಾರದು?

ಮರಿಯ: ಅವರು  ಮನೇಲ್ಲಿ ಇದ್ದರೆ ನಮಗೆಲ್ಲ ಹೊಡೆಯೋ ಛಾನ್ಸ್‌ ತಪ್ಪಿಹೋಗೋಲ್ವೇನೋ!

ಹೆನ್ರಿ: ಹೌದು ಮರಿಯ. ಇವರಿಗೆ ಪಾಠ ಹೇಳಿಕೊಡೋದಿಕ್ಕಿಂತಲೂ ನಮಗೆ ಶಿಕ್ಷೆ ಕೊಡೋದು ಚೆನ್ನಾಗಿ ಗೊತ್ತು!

ಬರ್ಟ್ನರ್:‌ (ಆಕಳಿಸುತ್ತ) ಏನ್ರೋ ಅದು ಗುಜುಗುಜು! ಒಬ್ಬರನ್ನ ನೋಡಿಕೊಂಡು ಇನ್ನೊಬ್ಬರು ಉತ್ತರ ಬರೆದುಕೊಂಡು ಬಂದ್ರೆ ನಿಮ್ಮ ಚರ್ಮ ಸುಲೀತೀನಿ, ಗೊತ್ತಾಯ್ತಾ!

ಯೋಹಾನ್:‌ ಸರ್‌, ಲೆಕ್ಕ ಆಯ್ತು ನೋಡಿ, ಸರ್‌

ಬರ್ಟ್ನರ್:‌ (ಕಠಿಣವಾದ ಧ್ವನಿಯಲ್ಲಿ) ಏ ಯೋಹಾನ್‌, ಇಷ್ಟು ಬೇಗ ಹೇಗೋ ಮಾಡಿದೆ? ನನಗೇ ತಮಾಷೆ ಮಾಡ್ತೀಯ! ಎಲ್ಲಿ ಕೈ ಚಾಚು ಮೊದ್ಲು ಬೆತ್ತದ ಏಟಿನ ರುಚಿ ನೋಡು ಆಮೇಲೆ ತಮಾಶೆ ನೋಡುವೆಯಂತೆ!

ಯೋಹಾನ್:‌ 1, 2, 3 ಹೀಗೆಲ್ಲಾ ಕ್ರಮವಾಗಿ ಇರೋ ಅಂಕಿಗಳನ್ನ ಹೇಗೆ ಕೂಡಬೇಕು ಅನ್ನೋದಿಕ್ಕೆ ಸೂತ್ರ ಗೊತ್ತಿದೆ ಸರ್.‌

ಬರ್ಟ್ನರ್:‌ (ವ್ಯಂಗ್ಯವಾದ ಧ್ವನಿಯಲ್ಲಿ) ಸೂತ್ರ! ಇನ್ನೊಂದು ಬಕಳೆ ಬಿಡ್ತೀಯ! ನಿಂಗೆ ಕೈಮೇಲೆ ಹೊಡೆದರೆ ಸಾಲದು ಅಂತ ಕಾಣುತ್ತೆ! ಬೆನ್ನಿನ ಮೇಲೆ ಬಾಸುಂಡೇನೂ ಬೇಕೂಂತ ಕಾಣುತ್ತೆ!

ಯೋಹಾನ್:‌ ನಾನು ನಿಜವಾಗಿ ತಮಾಶೆ ಮಾಡ್ತಾ ಇಲ್ಲ ಸರ್.‌ ಇಂಥ ಅಂಕಿಗಳನ್ನ ಕೂಡೋದಿಕ್ಕೆ ಸೂತ್ರ ಕಂಡುಹಿಡಿದಿದ್ದೇನೆ ಸರ್.‌ ಅದರಿಂದ ಸುಲಭವಾಗಿ ಕೂಡಬಹುದು ಸರ್.‌

ಬರ್ಟ್ನರ್:‌ (ಅನುಮಾನದ ಧ್ವನಿಯಲ್ಲಿ) ಯಾವುದೋ ಅದು ಸೂತ್ರ?! ಹೇಳು ನೋಡೋಣ!

ಯೋಹಾನ್:‌ Sn=n(n+1)\2 ಇದೇ ಸರ್‌ ಆ ಸೂತ್ರ

ಬರ್ಟ್ನರ್:‌ (ಪ್ರಶ್ನಿಸುವ ಧ್ವನಿಯಲ್ಲಿ) ಎಲ್ಲಿ ಒಂದು ಲೆಕ್ಕ ಮಾಡು ನೋಡೋಣ?! 

ಯೋಹಾನ್:‌ ಒಂದರಿಂದ ಹತ್ತರ ವರೆಗಿನ ಅಂಕಿಗಳನ್ನಲ್ಲ ಕೂಡಬೇಕು ಅಂತ ಇಟ್ಕೊಳ್ಳಿ ಸರ್.‌ ಆಗ nನ ಬೆಲೆ ಹತ್ತು. ಅದನ್ನು ಈ ಸೂತ್ರದಲ್ಲಿ ಬರೆದುಕೊಳ್ಳಬೇಕು ಸರ್.‌ ಆಗ S10= 10(10+1)\2=55 ಆಗುತ್ತೆ ಸರ್.‌ 

ಬರ್ಟ್ನರ್:‌ (ಧ್ವನಿ ಏರಿಸಿ) ಶಾಭಾಷ್!‌ ಬ್ಯಾರಿರ್‌ಸಲ್‌ ಇಲ್ಲಿ ಬನ್ನಿ! ಈ ಯೋಹಾನ್‌ ಕೂಡೋದಿಕ್ಕೆ ಸುಲಭ ಆಗೋ ಸೂತ್ರವನ್ನ ಕಂಡುಹಿಡಿದಿದ್ದಾನೆ!

ಬ್ಯಾರಿರ್‌ಸಲ್:‌ ಬಂದೇ ಬಿಟ್ಟೆ ಬರ್ಟ್ನರ್. ಯೋಹಾನ್‌ ಕೊಡು ನಿನ್ನ ಸೂತ್ರವನ್ನ.

ಯೋಹಾನ್:‌ ತೊಗೊಳ್ಳಿ ಸರ್‌

ಬರ್ಟ್ನರ್:‌ (ಸಂತೋಷದಿಂದ) ಬ್ಯಾರಿರ್‌ಸಲ್‌ ನಾವಿಬ್ಬರೂ ಇವನಿಗೆ ಗಣಿತವನ್ನ ಅರೆದು ಕುಡಿಸೋಣ. ಅವನು ಇನ್ನೂ ಹೆಚ್ಚು ಗಣಿತ ಸೂತ್ರಗಳನ್ನ ಕಂಡುಹಿಡಿಯಲಿ!

ಬ್ಯಾರಿರ್‌ಸಲ್:‌ ಆಗಲಿ ಬರ್ಟ್ನರ್.‌

ಬರ್ಟ್ನರ್:‌ (ಡ್ರಾ ತೆಗೆದು) ಯೋಹಾನ್‌ ಯೂಕ್ಲಿಡ್ ಬರೆದಿರೋ ಈ ರೇಖಾಗಣಿತದ ಪುಸ್ತಕವನ್ನ ತೊಗೋ. ನನ್ನ ಈ ಬಹುಮಾನವನ್ನ ಚೆನ್ನಾಗಿ ಅಭ್ಯಾಸ ಮಾಡು. ಬ್ರನ್‌ವಿಕ್‌ ನಲ್ಲಿ ನನಗೊಬ್ಬ ಸ್ನೇಹಿತ ಇದ್ದಾನೆ. ಆ ನನ್ನ ಸ್ನೇಹಿತ ನಿಂಗೆ ಕೆರೋಲಿನ್‌ ಕಾಲೇಜಿನಲ್ಲಿ ಓದನ್ನ ಮುಂದುವರೆಸೋದಿಕ್ಕೆ ಸಹಾಯ ಮಾಡ್ತಾನೆ. 

ಯೋಹಾನ್: ತುಂಬಾ ಧನ್ಯವಾದಗಳು ಸರ್ 

ಬ್ಯಾರಿರ್‌ಸಲ್:‌ ಯೋಹಾನ್‌, ನನ್ನ ಸ್ನೇಹಿತ ನಿಂಗೆ ಹಣದ ಸಹಾಯವನ್ನ ಮಾಡ್ತಾನೆ

ಯೋಹಾನ್:‌ ನಿಮ್ಮಿ ಬ್ಬರ ಉಪಕಾರವನ್ನ ಯಾವತ್ತೂ ಮರೆಯೋದಿಲ್ಲ ಸರ್.‌


Johann Carl Friedrich Gauss

ದೃಶ್ಯ – 5

(ಕೆರೋಲಿನ ಕಾಲೇಜಿನ. ಆಡಿಟೋರಿಯಂ. ಪುಸ್ತಕ ಬಿಡುಗಡೆ ಸಮಾರಂಭ)

ಫಾಫ್:‌ ಸ್ನೇಹಿತರೆ, ಇಂದಿನ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು. ನಮ್ಮ ಯೋಹಾನ್‌ ಕಾರ್ಲ್‌ ಫ್ರಡರಿಕ್‌ ಗಾ಼ಸ಼್ ನ ಸಂಶೋಧನೆಗಳ ಮೊದಲನೆಯ ಪುಸ್ತಕವನ್ನು ಬಿಡುಗಡೆ ಮಾಡಲು ನನಗೆ ಬಹಳ ಸಂತೋಷವಾಗುತ್ತಿದೆ. ನಮ್ಮ ಯೋಹಾನ್‌ ಕಾಲೇಜಿನಲ್ಲಿ ಓದುತ್ತಿರುವಾಗಲೇ ಆಯ್ಲರ್‌, ಲಾಪ್ಲಾಸ್‌, ನ್ಯೂಟನ್‌ ಇವರೆಲ್ಲರ ಪುಸ್ತಕಗಳನ್ನು ಓದಿದ್ದ. ತಪಸ್ವಿಯಂತೆ ಗಣಿತಶಾಸ್ತ್ರವನ್ನು ಅಭ್ಯಾಸ ಮಾಡಿದ್ದ. ಇವನು ಇನ್ನೂ ಹೆಚ್ಚು ಹೆಚ್ಚು ಸಂಶೋಧನೆಗಳನ್ನು ಮಾಡುವಂತಾಗಲಿ. ಗಣಿತಕ್ಷೇತ್ರ ಇವನಿಂದ ಸಮೃದ್ಧವಾಗಿ ಬೆಳೆಯಲಿ ಎಂದು ಆಶಿಸಿ ಅವನಿಗೆ ಶುಭಾಶಯವನ್ನು ಕೋರುತ್ತೇನೆ. ಯೋಹಾನನ್ನು ಕುರಿತು ನಾಲ್ಕು ಮಾತಾಡಬೇಕೆಂದು ಬ್ಯಾರಿರ್‌ಸಲ್‌ ಅವರನ್ನು ಕೋರುತ್ತೇನೆ. (ಚಪ್ಪಾಳೆಯ ಸದ್ದು)

ಬ್ಯಾರಿರ್‌ ಸಲ್:‌ ಸಹೃದಯರೆ, 1777ರ ಏಪ್ರಿಲ್‌ 30ರಂದು ಬ್ರನ್‌ವಿಕ್‌ ನಲ್ಲಿ ಯೋಹಾನ್‌ ಕಾರ್ಲ್‌ ಫ್ರಡರಿಕ್‌ ಗಾ಼ಸ಼್  ಕಡು ಬಡವರ ಮಗನಾಗಿ ಹುಟ್ಟಿದ. ತನ್ನ ಇಪ್ಪತ್ತನಾಲ್ಕನೇ ವಯಸ್ಸಿನಲ್ಲಿ ಇಂಥ ಜ್ಞಾನ ಶ್ರೀಮಂತ ಆಗುತ್ತಾನೆಂದು ಯಾರೂ ನಿರೀಕ್ಷಿಸಿರಲಿಲ್ಲ. ಇಂಥ ಸಂಶೋಧನೆಗಳ ಇನ್ನೊಂದು ಗ್ರಂಥ ಬಿಡುಗಡೆಯಾಗಲಿ ಎಂದು ಹಾರೈಸುತ್ತೇನೆ, ಆ ಸಮಾರಂಭದಲ್ಲೂ ನಮಗೆ ಭಾಗಿಯಾಗುವ ಭಾಗ್ಯ ದೊರೆಯುತ್ತದೆ ಎಂದು ಆಶಿಸುತ್ತೇನೆ. ಯೋಹಾನ್‌ ಶ್ರದ್ಧೆಯಿಂದ ಗಣಿತವನ್ನು ಅಭ್ಯಾಸ ಮಾಡಿ ಗಣಿತ ಕ್ಷೇತ್ರಕ್ಕೆ ಹೊಸ ಹೊಸ ಕಾಣಿಕೆಗಳನ್ನು ಕೊಟ್ಟಿರುವುದು ಎಲ್ಲರಿಗೂ ಸಂತೋಷದ ಮತ್ತು ಹೆಮ್ಮೆಯ ವಿಷಯ. ಯೋಹಾನನಿಗೆ ಗಣಿತವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಲು ಪ್ರೋತ್ಸಾಹಿಸಿದ ಬರ್ಟ್ನರ್‌ರವರು ಯೋಹಾನನನ್ನು ಕುರಿತು ಮಾತಾಡಬೇಕೆಂದು ಕೋರುತ್ತೇನೆ. ಮತ್ತೊಮ್ಮೆ ಯೋಹಾನನಿಗೆ ಶುಭ ಹಾರೈಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ. (ಚಪ್ಪಾಳೆ)

ಬರ್ಟ್ನರ್:‌ ಮಿತ್ರರೆ, ನಮ್ಮ ಯೋಹಾನ್‌ ಬಾಲ್ಯದಿಂದಲೇ ಪ್ರತಿಭಾವಂತ. ಹೆಲ್ಮಸ್ಟಟ್‌ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರವನ್ನು ಅಭ್ಯಾಸ ಮಾಡಿ ಅದರ ಕೀರ್ತಿಪತಾಕೆಯನ್ನು ಹಾರಿಸಿದ್ದಾನೆ. ಗೊಟೆಂಜನ್‌ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸಮಾಡಿ ಅಂಕಗಣಿತದಲ್ಲಿ ವಿಶೇಷ ಪ್ರಶಸ್ತಿಯನ್ನು ಪಡೆದು ಅದಕ್ಕೂ ಹೆಮ್ಮೆಯ ಕಿರೀಟವನ್ನು ತೊಡಿಸಿದ್ದಾನೆ. ಬೀಜಗಣಿತದ ಪ್ರಾಥಮಿಕ ಸೂತ್ರಗಳಿಗೆ ಪ್ರೂಫ್, ಸಂಖ್ಯಾ ಸಿದ್ಧಾಂತ‌ ಕ್ಷೇತ್ರದಲ್ಲಿ ಹೊಸ ಥಿಯರಮ್‌, ಫಾಸ್ಟ್‌ ಫೊರಿಯರ್‌ ಟ್ರಾನ್ಸ್‌ ಫಾರ್ಮ್‌ ಅಲ್ಗಾರಿತಂ ಇವುಗಳನ್ನೆಲ್ಲಾ ಕಂಡುಹಿಡಿದಿದ್ದಾನೆ. ಇಷ್ಟರಲ್ಲಿಯೇ ಆಕಾಶಕಾಯಗಳ ಚಲನೆಯ ಬಗೆಗೂ ಪುಸ್ತಕವೊಂದನ್ನು ಪ್ರಕಟಿಸಲಿದ್ದಾನೆಂದು ತಿಳಿಸಲು ನನಗೆ ಹರ್ಷವಾಗುತ್ತದೆ. ನಮ್ಮ ಯೋಹಾನನಿಗೆ ದೇವರು ದೀರ್ಘವಾದ ಆಯುಷ್ಯ, ಆರೋಗ್ಯಭಾಗ್ಯವನ್ನು ಕರುಣಿಸಲಿ.‌ ಗಣಿತ ಕ್ಷೇತ್ರಕ್ಕೆ ಪೂರಕ ಆಗುವ ಭೌತಶಾಸ್ತ್ರ, ಖಗೋಳಶಾಸ್ತ್ರ ಗಳಲ್ಲೂ ಹೊಸ ಸಂಶೋಧನೆ ಮಾಡಲಿ ಎಂದು ಹಾರೈಸುತ್ತೇನೆ. ಈ ಸಂದರ್ಭದಲ್ಲಿ ಯೋಹಾನ್‌ ನಾಲ್ಕು ಮಾತಾಡಬೇಕೆಂದು ಕೋರುತ್ತೇನೆ. (ಚಪ್ಪಾಳೆ)

ಯೋಹಾನ್: ಸ್ನೇಹಿತರೆ, ದೇವರ ಕರುಣೆಯಿಂದ, ನಿಮ್ಮೆಲ್ಲರ ಸದಾಶಯಗಳಿಂದ ಗಣಿತಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ನನಗೆ ಸಾಧ್ಯವಾಗಿದೆ. ಪ್ರಾಚೀನ ಗ್ರೀಕರ ಕಾಲದಿಂದಲೂ ಬಿಡಿಸಲಾಗದೇ ಉಳಿದಿದ್ದ ಒಂದು ಸಮಸ್ಯೆ  ಕಾಂಪಾಸ್‌ ಮತ್ತು ಸ್ಟ್ರೈಟ್‌ ಎಡ್ಜ್‌ ಗಳಿಂದ ಪಾಲಿಗನ್‌ಗಳನ್ನು ರಚಿಸುವುದು ಹೇಗೆ ಎಂಬುದು. ಅದನ್ನು ನನಗೆ ಬಿಡಿಸಲು ಸಾಧ್ಯವಾಗಿದೆ ಎನ್ನುವ ಸಂತೋಷವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಮತ್ತೆ, ನಾನ್‌ ಯೂಕ್ಲಿಡ್‌ ಜೊಮಿಟ್ರಿ ಸಾಧ್ಯವೇ ಎಂದು ಯೋಚಿಸ್ತಾ ಇದ್ದೇನೆ. ಅದೂ ಸಾಧ್ಯವಾಗುವ ಲಕ್ಷಣಗಳು ಕಾಣುತ್ತಿವೆ. ಈ ಎಲ್ಲ ಸಾಧ್ಯತೆಗಳಿಗಾಗಿ ಮೊದಲಿಗೆ ದೇವರಿಗೆ ಹೃತ್ಪೂರ್ವಕವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.  ನನಗೆ ತಮ್ಮೊಂದಿಗೆ ಉಳಿಯಲು ಅವಕಾಶ ಮಾಡಿಕೊಟ್ಟು ಗಣಿತಶಾಸ್ತ್ರದ ಪುಸ್ತಕಗಳನ್ನು ಅಭ್ಯಾಸ ಮಾಡಲು ಕೊಟ್ಟು, ಪ್ರೀತಿಯಿಂದ ಗಣಿತದ ಪಾಠಗಳನ್ನು ಹೇಳಿಕೊಟ್ಟ ಬರ್ಟ್ನರ್‌ ಸರ್‌, ಬ್ಯಾರಿರ್‌ಸಲ್‌ ಸರ್‌, ಫಾಫ್‌ ಸರ್‌ ಇವರಿಗೆಲ್ಲ ಹೃತ್ಪೂರ್ವಕವಾದ ಧನ್ಯವಾದಗಳು. ನನಗೆ ಬಗೆ ಬಗೆಯಾಗಿ ಅಭ್ಯಾಸ ಮಾಡಲು ವಿಶೇಷವಾಗಿ ಧನಸಹಾಯ ಮಾಡಿದ ಡ್ಯೂಕ್‌ ಬ್ರನ್ಸ್‌ವಿಕ್‌ ಅವರಿಗೂ ಹೃತ್ಪೂರ್ವಕವಾದ ಧನ್ಯವಾದಗಳು. ನನ್ನ ವಿರೋಧಿ ಮಿತ್ರರಲ್ಲೂ ಕುತೂಹಲ ಹುಟ್ಟಿಸುವಂತೆ ಬರೆದ ಪುಸ್ತಕವನ್ನು ಪ್ರಕಟಿಸಲು ಸಹಾಯ ಮಾಡಿದ ನನ್ನ ಮಾವ ಫ್ರೆಡರಿಕ್‌ ಮತ್ತು ಇತರ ಅಭಿಮಾನಿಗಳಿಗೆಲ್ಲ ನನ್ನ ಪ್ರೀತಿಯ ವಂದನೆಗಳು. (ಚಪ್ಪಾಳೆ)

ಪದ್ಮಿನಿ ಹೆಗಡೆ, ಮೈಸೂರು

4 Comments on “ಯೋಹಾನ್‌ ಕಾರ್ಲ್‌ ಫ್ರೆಡರಿಕ್‌ ಗಾ಼ಸ಼್

  1. ನೀವು ಬರೆದಿರುವ ಶ್ರಾವ್ಯ ರೂಪಕ …ಚೆನ್ನಾಗಿದೆ…ಒಂದೇ ಸಾರಿಗೆ ನನಗೆ ಅರ್ಥವಾಗಲಿಲ್ಲ ಅಷ್ಟೇ…ಮೇಡಂ

  2. ಸ್ವಲ್ಪ ಕ್ಲಿಷ್ಟವಾಗಿದೆ, ಆದರೂ ಚೆನ್ನಾಗಿದೆ

  3. ಖ್ಯಾತ ಗಣಿತಜ್ಞನ ಕುರಿತಾಗಿ ನೀವು ಬರೆದಿರುವ ಶ್ರಾವ್ಯ ರೂಪಕ ಮಕ್ಕಳ ಮನಸ್ಸಿನಲ್ಲಿ ಆಸಕ್ತಿ ಮೂಡಿಸುವಂತಿದೆ. ದೊಡ್ಡವರಿಗೂ ಸಂತಸ ನೀಡುತ್ತದೆ

  4. ಕಬ್ಬಿಣದ ಕಡಲೆ ಗಣಿತವನ್ನು ಸುಲಲಿತವಾಗಿ ಬಿಡಿಸುತ್ತಾ ಸಾಗಿದ ಘಟನಾವಳಿಗಳು ಶ್ರಾವ್ಯ ರೂಪಕದಲ್ಲಿ ಬಹಳ ಚೆನ್ನಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *