ವಾಟ್ಸಾಪ್ ಕಥೆ 41 : ನಿಜವಾದ ಸಂಪತ್ತು.
ಒಂದೂರಿನಲ್ಲಿ ಒಬ್ಬ ಸಿರಿವಂತನಿದ್ದನು. ಅವನಿಗೆ ನಾಲ್ಕು ಜನ ಗಂಡುಮಕ್ಕಳಿದ್ದರು. ಎಲ್ಲರಿಗೂ ಮದುವೆಯಾಗಿ ನಾಲ್ಕು ಜನ ಸೊಸೆಯಂದಿರು ಬಂದಿದ್ದರು. ಸಿರಿವಂತನು ಮಡದಿ, ಮಕ್ಕಳು ಮತ್ತು ಸೊಸೆಯಂದಿರೊಟ್ಟಿಗೆ ಸುಖವಾಗಿದ್ದನು. ಅವರೆಲ್ಲರೂ ಪ್ರೀತಿ ವಿಶ್ವಾಸದಿಂದಿದ್ದರು. ಸಿರಿವಂತನಿಗೆ ಹೀಗಾಗಿ ಯಾವುದಕ್ಕೂ ಕೊರತೆ ಎಂಬುದೇ ಇರಲಿಲ್ಲ.
ಹೀಗಿರುವಾಗ ಒಂದುದಿನ ಸಿರಿವಂತನಿಗೆ ಕನಸಿನಲ್ಲಿ ಲಕ್ಷ್ಮೀದೇವಿಯು ಕಾಣಿಸಿಕೊಂಡಳು. ಅವಳನ್ನು ಕಂಡು ಯಾರೆಂದು ಗೊತ್ತಾಗದೆ ‘ನೀನು ಯಾರಮ್ಮಾ? ದೇವತೆಯಂತೆ ಕಾಣಿಸುತ್ತೀಯೆ’ ಎಂದು ಕೇಳಿದನು.
‘ಹೌದು, ಹೌದು ನಾನು ಲಕ್ಷ್ಮೀದೇವಿ. ನಿನ್ನ ಮನೆಯಿಂದ ಹೊರಕ್ಕೆ ಹೊರಟಿದ್ದೇನೆ. ಹೋಗುವಾಗ ನಿನಗೊಂದು ವರವನ್ನು ಕೊಡಬೇಕೆನ್ನಿಸುತ್ತಿದೆ. ಅದಕ್ಕೆ ನಿನ್ನ ಎದುರಿಗೆ ಕಾಣಿಸಿಕೊಂಡೆ. ಕೇಳು ಯಾವ ವರ ಕೊಡಲಿ?’ ಎಂದಳು.
ಸಿರಿವಂತನು ಸ್ವಲ್ಪಹೊತ್ತು ಆಲೋಚಿಸಿ ‘ಅಮ್ಮಾ, ನಾನು ಈಗಾಗಲೇ ಮನೆಯ ಸಮಸ್ತ ಜವಾಬ್ದಾರಿಗಳನ್ನು ನನ್ನ ಮಕ್ಕಳಿಗೆ, ಸೊಸೆಯಂದಿರಿಗೆ ವಹಿಸಿಬಿಟ್ಟಿದ್ದೇನೆ. ಅವರನ್ನು ಒಮ್ಮೆ ಕೇಳಿ ಹೇಳುತ್ತೇನೆ ಆಗಬಹುದೇ?’ ಎಂದ.
‘ಓಹೋ ! ಅದಕ್ಕೇನಂತೆ ನಾಳೆ ಇದೇ ವೇಳೆಗೆ ನಾನು ಮತ್ತೆ ನಿನಗೆ ಕಾಣಿಸಿಕೊಳ್ಳುತ್ತೇನೆ. ಆಗ ಹೇಳು’ ಎಂದು ಮಾಯವಾದಳು.
ಮಾರನೆಯ ದಿನ ಎದ್ದ ಕೂಡಲೇ ಹಿಂದಿನದಿನ ಕನಸಿನಲ್ಲಿ ನಡೆದಿದ್ದುದನ್ನು ಮನೆಯ ಎಲ್ಲ ಸದಸ್ಯರಿಗೆ ತಿಳಿಸಿದ. ದೇವಿಯನ್ನು ಏನು ಕೇಳಬೇಕು ಎಂಬುದರ ಬಗ್ಗೆ ತಮ್ಮತಮ್ಮ ಅಭಿಪ್ರಾಯಗಳನ್ನು ತಿಳಿಸಲು ಕೋರಿದನು.
ಹಿರಿಯ ಮಗ ಹೇಳಿದ ‘ಲಕ್ಷ್ಮೀದೇವಿಯೇ ಸಂಪತ್ತಿಗೆ ಒಡತಿ. ಅವಳೇ ಮನೆಬಿಟ್ಟು ಹೋದರೆ ಇನ್ನೇನು ಗತಿ. ಆದ್ದರಿಂದ ಆಕೆ ಹೋದರೂ ನಮ್ಮಲ್ಲಿರುವ ಸಂಪತ್ತು ಕಿಂಚಿತ್ತೂ ಕರಗಬಾರದು ಹಾಗೆ ವರವನ್ನು ಕೇಳಿಕೋ’ ಎಂದನು.
ಎರಡನೆಯ ಮಗ ‘ಸಂಪತ್ತನ್ನು ಕಳ್ಳರು ಕದ್ದೊಯ್ಯಬಹುದು. ಆದರೆ ಭೂಮಿಯಾದರೆ ಯಾರೂ ಕಳವು ಮಾಡಲಾರರು. ಅದರಿಂದ ಸಂಪತ್ತನ್ನು ಸಂಪಾದಿಸಬಹುದು. ನೀವು ಸಾವಿರಾರು ಎಕರೆ ಭೂಮಿಯನ್ನು ಕೇಳಿ’ ಎಂದು ಹೇಳಿದನು.
ಮೂರನೆಯ ಮಗ ‘ಸಂಪತ್ತು, ಭೂಮಿ ಇವೆಲ್ಲವನ್ನೂ ಗಳಿಸಬಲ್ಲ ಅಧಿಕಾರವೊಂದಿದ್ದರೆ ಸಾಕು. ಉಳಿದೆಲ್ಲವೂ ತಾವಾಗಿಯೇ ಬರುತ್ತವೆ. ಆದ್ದರಿಂದ ಪ್ರಬಲವಾದ ಅಧಿಕಾರವನ್ನು ಕೇಳಿಕೊಳ್ಳಿ’ ಎಂದನು.
ನಾಲ್ಕನೆಯ ಮಗ ”ಅಪ್ಪಾ ನನಗಿಂತಲೂ ನನ್ನ ಹೆಂಡತಿ ಹೆಚ್ಚು ಬುದ್ಧಿವಂತೆ. ಮಿಗಿಲಾಗಿ ಅಪಾರ ದೈವಭಕ್ತೆ ಕೂಡ. ಇಂತಹ ವಿಷಯದಲ್ಲಿ ಅವಳು ನನಗಿಂತ ಸರಿಯಾಗಿ ವಿಚಾರಮಾಡಿ ಹೇಳುತ್ತಾಳೆ. ಅವಳನ್ನೇ ಕೇಳೋಣ” ಎಂದು ಸಲಹೆಕೊಟ್ಟ.
ಕಿರಿಯ ಸೊಸೆಯನ್ನು ಕೇಳಿದಾಗ ಅವಳು ”ಅಯ್ಯೋ ನಾನು ಈ ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವಳು. ನಾನೇನು ಸಲಹೆ ಕೊಡಬಲ್ಲೆ? ಆದರೂ ನೀವೆಲ್ಲರೂ ಕೇಳುತ್ತಿದ್ದೀರಲ್ಲಾ ಎಂದು ಹೇಳುತ್ತೇನೆ. ನಮಗೆ ಸಿರಿಸಂಪತ್ತು, ಭೂಮಿ, ಅಧಿಕಾರ ಇವೆಲ್ಲವುಗಳಿಗಿಂತ ಪ್ರೀತಿ, ವಿಶ್ವಾಸ, ನಂಬಿಕೆಗಳೆಂಬ ಸೂತ್ರಗಳೊಡನೆ ಸದಾ ಬಾಳುವಂತಹ ವರವನ್ನು ಕೇಳಿಕೊಳ್ಳಿ” ಎಂದಳು.
ಸಿರಿವಂತನು ರಾತ್ರಿ ಮಲಗಿದಾಗ ಮನಸ್ಸಿನಲ್ಲಿ ಲಕ್ಷ್ಮೀದೇವಿಯನ್ನು ನೆನೆಸಿಕೊಂಡ. ದೇವಿ ಮಾತು ಕೊಟ್ಟಂತೆಯೇ ಕಾಣಿಸಿಕೊಂಡಳು. ಸಾಹುಕಾರ ತನ್ನ ಕಿರಿಯ ಸೊಸೆ ಸಲಹೆ ನೀಡಿದಂತೆ ಮಾತುಗಳನ್ನು ಚಾಚೂ ತಪ್ಪದೆ ಹೇಳಿ ಆ ವರವನ್ನು ದಯಪಾಲಿಸು ಎಂದು ಕೇಳಿಕೊಂಡ.
ದೇವಿಯು ಅವನ ಮಾತನ್ನು ಕೇಳಿ ಪ್ರಸನ್ನ ಮುಖದಿಂದ ಮತ್ತೆ ಮನೆಯೊಳಕ್ಕೆ ಹಿಂದಿರುಗತೊಡಗಿದಳು. ಇದನ್ನು ಗಮನಿಸಿದ ಸಿರಿವಂತ ”ಏಕೆ ತಾಯಿ, ನೀನು ನನ್ನ ಮನೆ ಬಿಟ್ಟು ಹೊರಡುತ್ತೇನೆಂದು ಹೇಳಿದ್ದೆ? ಈಗ ನೋಡಿದರೆ ಒಳಕ್ಕೆ ಹೋಗುತ್ತಿದ್ದೀಯೆ” ಎಂದು ಕೇಳಿದನು.
ದೇವಿಯು ”ಇಲ್ಲ ಸಿರಿವಂತನೇ ನನಗೆ ಬೇಕಾದ ಉತ್ತರ ನಿನ್ನ ಕಿರಿಯ ಸೊಸೆಯ ಮಾತಿನಿಂದ ದೊರಕಿತು. ಹಾಗಿದ್ದಮೇಲೆ ನಾನೇಕೆ ಹೋಗಲಿ. ಎಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಇರುತ್ತವೆಯೋ ಅಲ್ಲಿ ನನ್ನ ಸಂಬಂಧವೂ ಉಳಿಯುತ್ತದೆ.” ಎಂದು ಹೇಳಿ ಮನೆಯೊಳಕ್ಕೆ ನಡೆದಳು.
ಸಿರಿವಂತನು ನೆಮ್ಮದಿಯಿಂದ ತನ್ನ ಪರಿವಾರದವರೊಂದಿಗೆ ಸುಖವಾಗಿದ್ದನು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರೀತಿ ವಿಶ್ವಾಸ ನಂಬಿಕೆಯನ್ನು ಸಾರುವ ಈ ಪುಟ್ಟ ಕಥೆ ಸೊಗಸಾಗಿದೆ ವಂದನೆಗಳು
ಧನ್ಯವಾದಗಳು ಗಾಯತ್ರಿ ಮೇಡಂ
ಚಂದದ ಕಥೆ. ಸೊಗಸಾದ ಸಂದೇಶವಿದೆ
ಧನ್ಯವಾದಗಳು ನಯನ ಮೇಡಂ
ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗಳ ಅಗಾಧ ಶಕ್ತಿಯನ್ನು ತಿಳಿಯಪಡಿಸುವ ಸುಂದರ ಕಥೆಯು ಸೂಕ್ತ ಚಿತ್ರದೊಂದಿಗೆ ರಂಜಿಸಿದೆ….ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಪ್ರೀತಿ, ವಿಶ್ವಾಸ, ನಂಬಿಕೆಗಳ ಮಹತ್ವವನ್ನು ಸಾರುವ ಸುಂದರ ಕಥೆ.
ಧನ್ಯವಾದಗಳು ಪದ್ಮಾ ಮೇಡಂ