ರಮಣರ ನೆನೆ – ನೆನೆದು……
ಕೇವಲ ನಲುಮೆಯಲಿದ್ದರೆ ಸಾಲದು; ಒಮ್ಮೆ
ಯಾದರೂ ಆಗಾಗ ಬಿಕ್ಕುತಿರಬೇಕು !
ಹಸಿವಲಿ ಒದ್ದಾಡಿದ ಹಕ್ಕಿ ಕುಕ್ಕುವ ಹುಳ
ಹುಪ್ಪಟೆಯ ಪ್ರಾಣಸಂಕಟವ ಅರಿಯಬೇಕು !!
ಒಂದರೆ ಗಳಿಗೆ ಮೀನು ನೀರ ಬಿಟ್ಟು
ಹಾರಿ ನೆಗೆದು ಮತ್ತೆ ಮುಳುಗುವ ತೆರದಿ
ಹೆಬ್ಬುಲಿಯ ಬಾಯಿಗೆ ಸಿಕ್ಕೂ ಸಿಗದಂತೆ
ಓಡಿ ತೇಕುತ ಬದುಕುವ ಹುಲ್ಲೆಯ ಭಯದಿ
ಬೀಸು ಗಾಳಿಗೆ ಬಗ್ಗುತ ಇನ್ನೇನು ಮುರಿದು
ಹೋದೇ ಎನ್ನುವಾಗ ಸೆಟೆದು ನಿಂತ ಮರದಿ
ಮೂರು ಹೊತ್ತೂ ತಿಂದು ತೇಗುವ ಮಂದಿ
ಒಮ್ಮೆ ಹಸಿವಿನಲಿ ಒದ್ದಾಡಿ ಹೋದಂಥ ಪರಿಧಿ
ಗುಡ್ಡ ಹತ್ತಿಳಿದಾಗ ಬಸವಳಿದು ಬಾಯಾರಿದ
ದೇಹಕೆ ಹನಿ ನೀರಷ್ಟು ಬೇಕೆಂಬ ತಹತಹದಿ
ಕೊಳಲ ನುಡಿಸುತಲೇ ಬಿಟ್ಟು ಹೋದವನ
ನೆನೆ ನೆನೆದು ಪರಿತಪಿಸಿದ ರಾಧೆಯ ವರದಿ
ದೂರವಾದಾಗಲೇ ಸನಿಹದ ಸ್ನೇಹ ನಿತ್ಯ
ನೆನಪಿನಲೆಗಳು ತೀರವ ಮುತ್ತುವ ಶರಧಿ
ಮೌನವಾದಾಗಲೇ ಮಾತಿನ ಮೆಹನತು
ಆತ್ಮಕೆ ಅರ್ಥವಾಗಿ ಬಿಡುವ ಮುದದಿ
ದೂರ ನಿಂತು ನೋಡಿದರಷ್ಟೇ ಈ ಬದುಕು
ಹತ್ತಿರಾದರೆ ಹರಿದ ಗೋಣಿಯ ಸಂತೆ ಸರಕು !
ನೇಸರನ ಬೆಳಕನುಂಡ ಚಂದಿರ ನಿಗಿನಿಗಿ ಕೆಂಡ-
ದುಂಡೆಯ ಬಯ್ದನೇನು? ತಂಪಾಗಿಲ್ಲವೇನು !?
-ಡಾ.ಹೆಚ್ ಎನ್ ಮಂಜುರಾಜ್, ಮೈಸೂರು
ಧನ್ಯವಾದಗಳು ಸುರಹೊನ್ನೆಗೆ.
ಬದುಕು ನೋವು ನಲಿವುಗಳ, ಸುಖ ದುಃಖಗಳ ಕಂತೆ ಎಂಬುದನ್ನು ನಿರೂಪಿಸಿರುವ ಈ ಕವನ ಚಂದವಾಗಿದೆ
ಧನ್ಯವಾದಗಳು ನಿಮ್ಮ ಮೆಚ್ಚುಮಾತಿಗೆ. ನಿಜ. ಕವಿತೆಗೆ ಬದುಕಿಗಿಂತ ಬೇರೆ ವಸ್ತು ಬೇಕೆ?
ಬದುಕು ಎಂಬ ಮೂರಕ್ಷರದಲ್ಲಿ ಏನೆಲ್ಲಾ ಅಡಗಿದೆ..ಎನ್ನುವುದನ್ನು ಕವನದ ಮೂಲಕ ಅನಾವರಣ ಗೊಳಿಸಿರುವ ರೀತಿ ಬಹಳ ಅರ್ಥ ಪೂರ್ಣ ವಾಗಿದೆ ಸಾರ್..
ಚೆನ್ನಾಗಿದೆ ಕವನ
ಬದುಕಿನ ಕಷ್ಟ ಸುಖಗಳ, ನೋವು ನಲಿವುಗಳ ಚಿಂತನೆ ತುಂಬಿದ ಕವನ ಚೆನ್ನಾಗಿದೆ.
ಕವಿ ಹೀಗೆ ಈ ಆಳಕ್ಕೆ ಇಳಿದು ಬರೆಯಬೇಕಾದರೆ ಬದುಕಿನ ಬೇಗೆಯ ನಿಗಿನಿಗಿ ಉಂಡೆಯ ಎಷ್ಟು ನುಂಗಿ ಜೀರ್ಣಿಸಿ, ಕಾದ ಬಾಡಿ ಬಾನೆಟ್ಟಿಗೆ ಅದೆಷ್ಟು ನೀರು ಸುರಿದಿರ ಬೇಡ ಅಬ್ಭಾ!
– ಕುಂದಣ ನಾಗೇಂದ್ರ
ಹಾಗಂತೀರಾ ಗುರುಗಳೇ……….!
ಆಳಕಿಳಿದೆನೋ; ಹಳ್ಳಕೇ ಬಿದ್ದೆನೋ !! ಗೊತ್ತಾಗುತಿಲ್ಲ.
ಒಟ್ಟಿನಲ್ಲಿ ಸುಮ್ಮನೆ ಬರೆಯುತ್ತೇನೆ ಅಷ್ಟೇ. ಅದು ಹೀಗಾಗುತ್ತದೆ ಇಷ್ಟೇ..
ನಿಮ್ಮ ಓದಿನ ಪ್ರತಿಕ್ರಿಯೆಯೇ ಅಮೋಘವಾಗಿದೆ. ಇನ್ನೊಂದು ಕವಿತೆಗೆ ಮೂಲವಾಗಿದೆ.
ಧನ್ಯವಾದಗಳು.
ಅತ್ಯಂತ ಅರ್ಥಪೂರ್ಣ, ಬದುಕ ಸಾರವ ಮೊಗೆ ಮೊಗೆದು ಉಣಬಡಿಸುವ ಸುಂದರ ಕವನ.
ತುಂಬಾ ಚೆಂದಾಗಿದೆ ಸರ್!