ಯಾರು ಆ ಕಳ್ಳ?
(ಮಕ್ಕಳ ಪದ್ಯ)
“ನಿದ್ದೆ ಬರ್ತಾ ಇಲ್ಲ ಅಜ್ಜಿ
ಕತೆಗಳ ಡಬ್ಬಿ ಎಲ್ಲಿ?
ರುಚಿರುಚಿ ಕತೆಗಳ ಹೊರತೆಗೆದು
ಒಂದೊಂದೇ ಬಡಿಸಜ್ಜಿ
ರಾಜ ರಾಣಿ ಕತೆಗಳು ಬೇಡ
ಕಾಗೆ ಗುಬ್ಬಿ ಮಾತೂ ಬೇಡ
ಪೆದ್ದ ಗುಂಡನ ಪಿಟಿಪಿಟಿ ಬೇಡ
ʼಸಸ್ಪೆನ್ಸ್ʼ ಇರಲಿ ಕತೆಯಲ್ಲಿ
ʼಥ್ರಿಲ್ ಹಾರರ್ʼ ಹೆಚ್ಚಿರಲಿ
ಭಯವೇ ಇಲ್ಲ ನಮಗಜ್ಜಿ”
ಅಜ್ಜಿ ಒಪ್ಪಿ ಮೊಮ್ಮಕ್ಕಳ ಮಾತು
ಹೊಸೆದರು ಕತೆ ಹೊಸತು
“ರಾತ್ರಿಯಾಗಿದೆ ಕರಾಳ ಕತ್ತಲು
ಕಳ್ಳ ಬಂದನು ಕನ್ನ ಹಾಕಲು
ಗೋಣಿಚೀಲದ ಮುಸುಕನು ಹಾಕಿ
ಹೆಜ್ಜೆ ಸದ್ದು ಮೆಲ್ಲಗೆ ಹಾಕಿ
ಕೇಳದ ಹಾಗೆ ಉಸಿರು
ಕಾಣದ ಹಾಗೆ ಯಾರಿಗೂ
ಕಟಕಟ ಕಿಟಕಿ ಸರಳು
ಮುರಿದೇಬಿಟ್ಟನು ಜೋರು
ಹೆಜ್ಜೆಯ ಮೇಲೆ ಹೆಜ್ಜೆಯನಿಡುತ
ಗೋಡೆಯ ತಡವುತ ಮೆಲ್ಲ
ನುಗ್ಗೇಬಿಟ್ಟನು ಕಳ್ಳ!”
ಅಜ್ಜಿ ಕತೆ ಹೇಳುವುದಕ್ಕೂ
ಬಡಬಡ ಶಬ್ದ ಕೇಳುವುದಕ್ಕೂ
ಮಕ್ಕಳು ಹಾರಿ ನಡುಗುತ ಮುದುರಿ
ಕಣ್ಣ ಮುಚ್ಚಿ ಅಜ್ಜಿಯ ತಬ್ಬಿ
“ಬಂದ ಕಳ್ಳ ಬಂದ
ಅಡುಗೆ ಮನೆಯೊಳಗಿಂದ”
ಕೂಗಿದರೆಲ್ಲ ಭಯದಿಂದ
ಅಜ್ಜಿಗೆ ತುಂಬಾ ಧೈರ್ಯವಿದೆ
ದೊಡ್ಡ ಬೆತ್ತ ಬಳಿಯಲಿದೆ
ಠಪ ಠಪ ಒಳಗೆ ನಡೆದೇಬಿಟ್ಟರು
ರಪರಪ ಬೆತ್ತ ಬೀಸಿಯೆಬಿಟ್ಟರು
ಕತ್ತಲ ಮೂಲೆ ಏನದು ಸದ್ದು!?
ಕಣ್ಣು ಮುಚ್ಚಿದೆ ಕಪ್ಪು ಬೆಕ್ಕು !
ಪಚಪಚ ಕುಡಿದಿದೆ ಕೆನೆ ಹಾಲು
ಅಜ್ಜಿಯ ಬೆತ್ತಕೆ ಹೌಹಾರಿದೆ
ಓಡಿದೆ ಜೋರು ಓಡಿದೆ
ಚೀರುವ ಮಕ್ಕಳ ಮೇಲೇ
ಥಟ್ಟನೆ ಬಂದು ಹಾರಿದೆ!!
-ಅನಂತ ರಮೇಶ್
ಮಕ್ಕಳ ಪದ್ಯ…ಚೆನ್ನಾಗಿ ಮೂಡಿಬಂದಿದೆ ಸಾರ್..
Nice
ಕಳ್ಳ ಬೆಕ್ಕಿನ ಆಟೋಟಾಪವ ಚಿತ್ರಿಸಿರುವ ಸುಂದರವಾದ ಕವನ
ಶಿಶುಗೀತೆ ಖುಷಿ ಕೊಟ್ಟಿತು.