ನಮ್ಮ ಕನ್ನಡನಾಡು

Share Button


ಕನ್ನಡರಾಜ್ಯೋತ್ಸವ: ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂದು ಹಂಬಲಿಸಿ, ಹೋರಾಡಿ ಪಡೆದ ಕನ್ನಡ ರಾಜ್ಯ ಉದಯಿಸಿದ ಸಂಭ್ರಮೋತ್ಸವ ಕನ್ನಡ ರಾಜ್ಯೋತ್ಸವ. ಇದು ಕನ್ನಡ ಭಾಷೆ, ಸಂಸ್ಕೃತಿಗಳ ನೆಲೆಯಲ್ಲಿ ನಾವೆಲ್ಲ ಒಂದು ಎಂದು ಪರಸ್ಪರ ಸೌಹಾರ್ದಯುತವಾಗಿ ಬದುಕೋಣ ಎಂಬ ಆಶಯಕ್ಕೆ, ಕನ್ನಡ ಎಂಬುದು ಬರಿಯ ಮಾತಲ್ಲ, ಅದು ನಮ್ಮ ಬದುಕಿನ ಸಾರ ಎಂಬುದನ್ನು ಮನನ ಮಾಡುವುದಕ್ಕೆ ಒಂದು ರೂಪಕ. ಜನಸಾಮಾನ್ಯರ ಮೌಲ್ಯಯುತ ಬದುಕಿನ ನೆಲೆಗಟ್ಟು ಎಂಬ ಅರ್ಥದಲ್ಲಿ ಕನ್ನಡ ಎಂಬುದು ಒಂದು ಸುಸಂಸ್ಕೃತ ಜನಪದದ ಪ್ರತೀಕ ಎಂಬುದನ್ನು ಮೊದಲಿಗೆ ಪ್ರಸ್ತಾಪಿಸಿದವನು ಕವಿರಾಜ ಮಾರ್ಗದ ಕೃತಿಕಾರ ಅಮೋಘವರ್ಷ ನೃಪತುಂಗ ಅಥವಾ ಶ್ರೀವಿಜಯ. ಈತ ಗಮನಿಸಿದ ಮೌಲ್ಯಯುತ ಬದುಕಿನ ಮತ್ತು ಜನಪದದ ನೆಲೆಗಟ್ಟು ಯಾವುದು ಎಂಬುದರ ಶೋಧ ಕನ್ನಡ ರಾಜ್ಯೋತ್ಸವದ ವಿಶೇಷತೆಯನ್ನು, ಕನ್ನಡ ಮತ್ತು ಕನ್ನಡನಾಡಿನ ಅನನ್ಯತೆಯನ್ನು ಕಂಡುಕೊಳ್ಳುವ ಶೋಧವೇ ಆಗಿದೆ.

ಐತಿಹ್ಯಐತಿಹಾಸಿಕತೆ: ನಮ್ಮದು ಅತ್ಯಂತ ಪ್ರಾಚೀನವಾದ ನಾಡು. ಮೊಹೆಂಜೊದಾರೋ ಸಂಸ್ಕೃತಿಯ ಕಾಲದಲ್ಲೇ ನಮ್ಮ ನಾಡಿನವರು ಪ್ರಸಿದ್ಧರಾಗಿದ್ದರು. ನಮ್ಮನ್ನು ಆ ಸಂಸ್ಕೃತಿಯವರು ಕಣ್ಣನಿರ್‌ ಎಂದು ಗುರುತಿಸಿದ್ದರು. ನಮ್ಮದು ಮೂಲದಲ್ಲಿ ನಾಗಾ ಬುಡಕಟ್ಟು ಮತ್ತು ಮಹೀಷಿಕ ಬುಡಕಟ್ಟು ಸಂಸ್ಕೃತಿ. ನಾಗಾಗಳು ವಾಸಿಸುತ್ತಿದ್ದ ಒಂದು ಪ್ರದೇಶ ಮಾಹಿಷ್ಮತಿ. ಬನವಾಸಿ ಮತ್ತು ಅದರ ಸುತ್ತು ಮುತ್ತಿನ ಪ್ರದೇಶಗಳು ನಾಗರ ಖಂಡ. ಮಹೀಷಿಕರು ವಾಸಿಸುತ್ತಿದ್ದ ಪ್ರದೇಶ ಮಹಿಷಮಂಡಲ, ಎರ್ಮೈನಾಡು.

ನಮ್ಮ ನಾಡನ್ನು ಈಗ ನಾವು ಕರ್ನಾಟಕ ಎಂದು ಕರೆಯುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಪುರಾಣೋಕ್ತ ವಿಷಯಗಳು ಇವೆ. ತುರ್ವಸು ವಂಶದ ಸಂಧಾನ ಎನ್ನುವವನಿಗೆ ಪಾಂಡ್ಯ, ಕೇರಳ, ಚೋಳ, ಕರ್ಣ ಎನ್ನುವ ನಾಲ್ಕು ಮಕ್ಕಳಿದ್ದರು; ಅವರವರ ಹೆಸರಿನಲ್ಲಿ ಜನಪದಗಳು ಅಭಿವೃದ್ಧಿಗೊಂಡವು ಎನ್ನುತ್ತದೆ ಮತ್ಸ್ಯಪುರಾಣ. ಸ್ಕಂದಪುರಾಣದಲ್ಲಿ ಒಂದು ಕಥೆ ಇದೆ: ಕರ್ಣಾಟ ಎನ್ನುವ ರಾಕ್ಷಸ ಇದ್ದ; ಅವನು ಧರ್ಮಾರಣ್ಯದ ಮೊಹೆರಿಕಾದಲ್ಲಿದ್ದ ಬ್ರಾಹ್ಮಣರನ್ನು ಹಿಂಸಿಸುತ್ತಿದ್ದ; ಅದರಿಂದಾಗಿ ಮಾತಂಗಿದೇವಿಯು ಅವನನ್ನು ಸಂಹರಿಸಿದಳು; ಅವನು ಮುಂದಿನ ಜನ್ಮದಲ್ಲಿ ಮಾತಂಗಿ ದೇವಿಯನ್ನು ಒಲಿಸಿಕೊಂಡು ದಕ್ಷಿಣ ಭಾರತಕ್ಕೆ ಬಂದು ಸಮುದ್ರ ತೀರದಲ್ಲಿ ತನ್ನ ಹೆಸರಿನ ಒಂದು ರಾಜ್ಯವನ್ನು ಸ್ಥಾಪಿಸಿದ. ಅವನನ್ನು ಕರ್ಣಾಟ ಎಂದು ಕರೆದದ್ದು ಕಿವಿಯಿಂದ ಹುಟ್ಟಿದ ಎನ್ನುವ ಕಾರಣಕ್ಕಾಗಿ ಎನ್ನುತ್ತದೆ ಪುರಾಣ. ನಮ್ಮ ರಾಜ್ಯ ಮನುಷ್ಯನ ಕಿವಿಯ ಆಕಾರವನ್ನು ಹೋಲುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಸ್ಕಂದ ಪುರಾಣವು ಭರತಖಂಡದಲ್ಲಿದ್ದ 72 ರಾಜ್ಯಗಳನ್ನು ಹೆಸರಿಸುತ್ತದೆ. ಅವುಗಳಲ್ಲಿ ಒಂದಾಗಿದ್ದ ಕರ್ಣಾಟಕವು ಈಜಿಪ್ಷಿಯನ್ನರ ಪೆರಿಪ್ಲಸ್‌”(ಇದು ಹಡಗಿನ ಕಪ್ತಾನನು ಸಮುದ್ರ ದಂಡೆಯಲ್ಲಿ ತಾನು ನಿರೀಕ್ಷಿಸಬಹುದಾದ ಬಂದರುಗಳು ಪರಸ್ಪರ ಎಷ್ಟು ದೂರದಲ್ಲಿವೆ, ಅವುಗಳನ್ನು ಗುರುತಿಸುವ ಭೂಭಾಗ ಮತ್ತು ಸಮುದ್ರ ದಂಡೆಯ ಲಕ್ಷಣಗಳೇನು ಎಂಬುದನ್ನು ಪಟ್ಟಿ ಮಾಡಿಟ್ಟುಕೊಂಡಿರುವ ಒಂದು ಹಸ್ತಪ್ರತಿ) ಹೇಳುವ ಬೈಝಾಂಟಿಯನ್‌ ಸುತ್ತಲಿನ ಭೂಭಾಗ ಅಂದರೆ ಬನವಾಸಿ ಆಗಿತ್ತು. ವರಾಹ ಮಿಹಿರನು ದಕ್ಷಿಣದಲ್ಲಿದ್ದ ಭರುಚ್ಚ, ವನವಾಸಿ, ಶಿಬಿಕಾ, ಫಣಿಕಾರ, ಕೊಂಕಣ, ಅಭೀರ, ಮಹಾಟವಿ, ಚಿತ್ರಕೂಟ, ನಾಸಿಕ್ಯ, ದಂಡಕಾ-ವನ ರಾಜ್ಯಗಳೊಂದಿಗೆ ಕರ್ಣಾಟ ರಾಜ್ಯವನ್ನೂ ಹೆಸರಿಸುತ್ತಾನೆ. ಶಿಲಪ್ಪದಿಕಾರಂ ಕಾವ್ಯವು ಕರ್ಣಾಟಕವನ್ನು ಕನ್ನಡ ಎಂದೂ, ನೇಪಾಳದ ಸ್ವಯಂಭೂ ಪುರಾಣವು ಕರ್ಣಾಟ ಎಂದೂ, ವೇಲ್ವಿಕುಡಿ ದಾನ ಶಾಸನ ತಾಮ್ರಪಟವು ಕರುನಾಡು ಎಂದು ಗುರುತಿಸುತ್ತದೆ. ನಮ್ಮ ನಾಡು ಕನ್ನಡ, ಕನ್ನಾಡು, ಕಣ್ಣದಿರ್‌, ಕರ್ಣಾಟ, ಕುಂತಲ ಎಂಬೆಲ್ಲ ಹೆಸರುಗಳಿಂದ ಪ್ರಾಚೀನ ಮತ್ತು ಮಧ್ಯಕಾಲೀನ ಯುಗದಲ್ಲಿ ಪರಿಚಿತ ಆಗಿತ್ತು. ಕುಂತಲ ಎನ್ನುವ ಹೆಸರು ಹೆಚ್ಚಾಗಿ ಬಳಕೆಯಲ್ಲಿತ್ತು.

ಶಾಸನೋಕ್ತ ಕನ್ನಡನಾಡು: ಅತಿ ಕೆಳಗಿನ ಸ್ತರದಲ್ಲಿ ಇರುವ ಜನಸಮೂಹಕ್ಕೆ ಅಂತಸ್ಸತ್ವವನ್ನು ದೊರಕಿಸಿ ಕೊಡುವ ಧರ್ಮ ಬೌದ್ಧಧರ್ಮ ಎಂಬ ಮಾತು ಇದೆ. ಬುದ್ಧನ ಕಾಲದಲ್ಲಿಯೇ ಅವನ ಧರ್ಮವನ್ನು ಒಪ್ಪಿದ, ಅಪ್ಪಿದ ನಾಡು ನಮ್ಮದು. ಇಂದಿನ ಅಮರಾವತಿ ಅಂದಿನ ಧಾನ್ಯಕಟಕ. ಅದನ್ನು ಬುದ್ಧ ಸಂದರ್ಶಿಸಿದ್ದ, ಅಲ್ಲಿಯವರಿಗೆ ಬೋಧಿಸಿದ್ದ ಎನ್ನುತ್ತದೆ ಒಂದು ಬೌದ್ಧ ಐತಿಹ್ಯ. ಬುದ್ಧ ಧಾನ್ಯಕಟಕದ ಸುಮೇಧ ಪರ್ವತದಲ್ಲಿ ಜನಿಸಿದ, ಪವಾಡಗಳನ್ನು ಮಾಡಿ ಮೆರೆದ, ಅಸಂಖ್ಯಾತ ಅನುಯಾಯಿಗಳನ್ನು ಪಡೆದ ಎನ್ನುತ್ತವೆ ಬೌದ್ಧ ಜಾತಕ ಕಥೆಗಳು.  ಧಾನ್ಯಕಟಕದಲ್ಲಿ ಬೋಧನೆ ಮಾಡಿದ್ದ ಎಂಬುದಕ್ಕೆ ಸಮರ್ಥನೆಯಾಗಿ “ಧಮ್ಲಾಕಡವಂದನಾಮಗೋತಿ” ಎಂದು ಬ್ರಾಹ್ಮೀಲಿಪಿಯಲ್ಲಿ ಧಾನ್ಯಕಟಕದ ಈ ಘಟನೆಯನ್ನು ಸ್ಪಷ್ಟವಾಗಿ ಗುರುತಿಸಿರುವ ಮತ್ತು ಈ ಘಟನೆಯನ್ನು ಸೆರೆ ಹಿಡಿದಿರುವ ಉಬ್ಬು ಶಿಲ್ಪಗಳ ಫಲಕವುಳ್ಳ ಒಂದು ಚತುರ್ಮುಖಿ ಸ್ತಂಭವು ದೊರೆತಿದೆ.

ಕಳಿಂಗ ಯುದ್ಧದ ನಂತರ ಕಳಿಂಗದ ನಿವಾಸಿಗಳನ್ನು ಸಮಾಧಾನ ಪಡಿಸಲು ಹೊರಡಿಸಿದ ಮಾದರಿಯಲ್ಲಿಯೇ ಗುಲ್ಬರ್ಗದ ಸನ್ನತಿಯಲ್ಲೂ ಅಶೋಕ ಒಂದು ವಿಶೇಷ ಶಾಸನವನ್ನು ಹೊರಡಿಸಿದ್ದ. ಇದರಿಂದ ಅವನು ಭೀಮಾ ನದಿಯವರೆಗೂ ಸೇನಾ ಕಾರ್ಯಾಚರಣೆ ನಡೆಸಿದ್ದ ಎಂಬುದು ಸೂಚಿತ. ಅಶೋಕ ಬೌದ್ಧ ಧರ್ಮವನ್ನು ಪ್ರಚಾರ ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳುವ ವೇಳೆಗಾಗಲೇ ಮೌರ್ಯ ಪೂರ್ವ ಯುಗದಲ್ಲಿ ನಮ್ಮ ನಾಡಿಗೆ ವಲಸೆ ಬಂದು ಇಲ್ಲಿ ನೆಲೆಸಿದ ಬೌದ್ಧರು ಇದ್ದರು. ಇವರು ತಮ್ಮೊಡನೆ ಪಾಲಿ, ಪ್ರಾಕೃತ ಭಾಷೆಗಳನ್ನೂ ತಂದಿದ್ದರು. ಇವು ನಮ್ಮ ನಾಡು ಯಾಕೆ ಬೌದ್ಧರ್ಮದ ಪ್ರಮುಖ ಕಾರ್ಯಕ್ಷೇತ್ರ ಆಯಿತು ಎಂಬುದಕ್ಕೆ; ತನ್ನ ಕಾಲದಲ್ಲಿ ಪ್ರಚಲಿತ ಆಗಿದ್ದ ಬೌದ್ಧ ಪರಂಪರೆಯನ್ನು ಅನುಸರಿಸಿದ ಅಶೋಕ ತನ್ನ ಚಟುವಟಿಕೆಯ ಕೇಂದ್ರಕ್ಕೆ ನಮ್ಮ ನಾಡಿನ ಜನಾಂಗಗಳನ್ನೂ ಯಾಕೆ ಸೇರಿಸಿಕೊಂಡ ಎನ್ನುವುದಕ್ಕೆ; ಅವನು ವೈಯಕ್ತಿಕ ಆಸಕ್ತಿ ತೋರಿ ಗುಲ್ಬರ್ಗದ ಸನ್ನತಿಯನ್ನು ಮೌರ್ಯ ಸಾಮ್ರಾಜ್ಯದ ಒಂದು ಪ್ರಧಾನ ಆಡಳಿತ ಹಾಗೂ ಧಾರ್ಮಿಕತೆಯ ಕೇಂದ್ರವಾಗಿ ಯಾಕೆ ಅಭಿವೃದ್ಧಿ ಪಡಿಸಿದ ಎನ್ನುವುದಕ್ಕೆ ವಿವರಣೆಯೂ ಆಗಿವೆ. ಬಹುಶಃ ಅಶೋಕನನ್ನು ನಮ್ಮ ನೆರೆಯ ಆಗಿನ ತಮಿಳಗಂ ಒಪ್ಪಿಕೊಳ್ಳಲಿಲ್ಲ. ಅದರಿಂದಾಗಿ ಅವನು ಬೌದ್ಧಧರ್ಮವನ್ನು ಸಿಂಹಳಕ್ಕೆ ತಲುಪಿಸಲು ನಮ್ಮ ನಾಡನ್ನೇ ತನ್ನ ದಾರಿಯನ್ನಾಗಿ ಆಯ್ಕೆ ಮಾಡಿಕೊಂಡ. ಇದಕ್ಕೆ ಒಂದು ಸಾಕ್ಷಿ ಈ ವೇಳೆಗಾಗಲೇ ಹತ್ತಾರು ವರ್ಷಗಳಷ್ಟು ಮುಂಚೆಯೇ ನಮ್ಮ ನಾಡಿಗೆ ಬಂದು ಬಂಡೆ ಶಾಸನಗಳನ್ನು ಕೊರೆದ ಖರೋಷ್ಟಿಗಳು ಬೌದ್ಧ ಧರ್ಮ ಪ್ರಚಾರಕನನ್ನಾಗಿ ಸಿಂಹಳಕ್ಕೆ ಕಳುಹಿಸಿದ ಮಹಿಂದನ ಸಂಘದಲ್ಲಿ ಇದ್ದದ್ದು.

ಅಶೋಕನ ಕಾರ್ಯಕ್ಷೇತ್ರದ ಉತ್ತರದ ಗಡಿ ಗುಲ್ಬರ್ಗದ ಸನ್ನತಿ, ದಕ್ಷಿಣದ ಗಡಿ ಚಿತ್ರದುರ್ಗದ ಸಿದ್ಧಾಪುರ, ಪಶ್ಚಿಮದ ಗಡಿ ಕೊಪ್ಪಳ ಜಿಲ್ಲೆಯ ಕೊಪ್ಪಳ ಪಟ್ಟಣ, ಪೂರ್ವದ ಗಡಿ ಕರ್ನೂಲು ಜಿಲ್ಲೆಯ ಯರ್ರಗುಡಿ ಆಗಿತ್ತು. ಈ ಸೀಮಿತ ಕ್ಷೇತ್ರದಲ್ಲಿ ಅಶೋಕ ಪ್ರಾಕೃತ ಭಾಷೆ, ಬ್ರಾಹ್ಮೀ ಲಿಪಿ ಎಂಬ ಭಾಷಾ ನೀತಿಯನ್ನು ಅನುಸರಿಸಿ ಬಂಡೆ ಶಾಸನಗಳನ್ನು ಕೊರೆಸಿದ. ಅವನು ಕೊರೆಸಿದ ಬಂಡೆ ಶಾಸನಗಳ ಗುಚ್ಛದಲ್ಲಿ ಹನ್ನೊಂದು ಕಿಬ್ಬಂಡೆ ಶಾಸನಗಳು, ಏಳು ಹೆಬ್ಬಂಡೆ ಶಾಸನಗಳಿದ್ದವು. ಅವುಗಳಲ್ಲಿ ಒಂಬತ್ತು ಶಾಸನಗಳು, ಸುಮಾರು ಶೇ.50 ರಷ್ಟು ನಮ್ಮ ನಾಡಿನಲ್ಲೇ ದೊರೆತಿವೆ. ಬಂಡೆ ಶಾಸನಗಳು ಶಾಸನ ಕ್ಷೇತ್ರ ಎನ್ನುವುದೊಂದನ್ನು ನಿರ್ಮಿಸಿದವು. ಶಾಸನ ಸಾಹಿತ್ಯ ಎನ್ನುವ ಸಾಹಿತ್ಯ ಪ್ರಕಾರವೊಂದಕ್ಕೆ ಬುನಾದಿ ಆದವು. ಇವುಗಳನ್ನು ಪ್ರಾಕೃತ ಭಾಷೆಯಲ್ಲಿ, ಬ್ರಾಹ್ಮೀ ಲಿಪಿಯಲ್ಲಿ ಕೊರೆಸಿದುದು ಪ್ರಾಕೃತಭಾಷೆ, ಬ್ರಾಹ್ಮೀಲಿಪಿಗಳನ್ನು ನಮ್ಮ ನಾಡಿಗೆ ಮಾತ್ರವಲ್ಲದೆ ನಮ್ಮ ದೇಶದ ವಿವಿಧ ಕೇಂದ್ರಗಳಿಗೆ ಮೊದಲಿಗೆ ತಲುಪಿಸಿದ ಅಶೋಕನ ಸಾಧ್ಯತೆ ಮತ್ತು ಸಾಮರ್ಥ್ಯ ಎಂಬ ಹೆಗ್ಗಳಿಕೆಗೆ ಪಾತ್ರ ಆದವು, ಆ ವೇಳೆಗೆ ಜನರ ಆಡು ಭಾಷೆ ಪ್ರಾಕೃತ ಆಗಿತ್ತು; ಆದರೆ ಅದಕ್ಕೆ ಲಿಪಿ ಇರಲಿಲ್ಲ ಎನ್ನುತ್ತಾರೆ ಸಂಶೋಧಕರು.

ಅಶೋಕನಿಂದಾಗಿ ಲಿಪಿಯೂ ದೊರೆಯಿತು, ಭಾಷೆಯನ್ನು ಸೂಕ್ತವಾಗಿ ಬಳಸುವ ಮಾರ್ಗವೂ ದೊರೆಯಿತು. ಚಾರಿತ್ರಿಕಯುಗದ ಆರಂಭಕಾಲದಲ್ಲಿ ನಾವು ಲಿಪಿ ಮತ್ತು ಭಾಷೆಗಳೆರಡನ್ನೂ ಹೀಗೆ ರೂಢಿಸಿಕೊಂಡದ್ದು, ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡದ್ದು ನಮ್ಮವಿಶೇಷತೆಯೇ. ಪ್ರಾಕೃತಭಾಷೆ, ಬ್ರಾಹ್ಮೀಲಿಪಿ, ಬುದ್ಧ-ಮಹಾವೀರರಂಥವರ ಚಿಂತನೆ-ಬೋಧನೆ, ಮೌರ್ಯ ಸಾಮ್ರಾಜ್ಯದೊಂದಿಗಿನ ವ್ಯಾವಹಾರಿಕ ಕೊಳು – ಕೊಡೆ ಇಂಥ ಅಪರೂಪದ ಸಾಧ್ಯತೆಗಳನ್ನು ನಾವು ನಮ್ಮದನ್ನಾಗಿಸಿಕೊಂಡಿದ್ದೆವು. ಇದರಿಂದ ನಾವು ಅಕ್ಷರಸ್ಥರಾದೆವು, ನಮ್ಮ ಸಮಾಜ ಅಕ್ಷರಸ್ಥ ಸಮಾಜ ಎಂದು ಮಾನ್ಯ ಆಯಿತು,

ನಾವು ಮತ್ತು ಆಂಧ್ರರು ಬ್ರಾಹ್ಮೀಯುಗದಲ್ಲಿ ಕೈ ಕೈ ಜೋಡಿಸಿದ್ದೆವು, ಬ್ರಾಹ್ಮೀಯಿಂದ ಒಂದು ಮೆಟ್ಟಲೇರಿ ಕನ್ನಡ ಲಿಪಿಯನ್ನೂ, ಕನ್ನಡ ಭಾಷೆಯನ್ನೂ ನಮ್ಮದನ್ನಾಗಿಸಿಕೊಂಡು ಆಂಧ್ರರಿಂದ ಭಿನ್ನ ಆದೆವು. ಆರಂಭದಲ್ಲಿ ನಾವು ಬಳಸಿದ ಬ್ರಾಹ್ಮೀ ಲಿಪಿಗೂ ನಮ್ಮದೇ ಆದ ಒಂದು ಪ್ರಾದೇಶಿಕ ಮುದ್ರೆ ಇತ್ತು. ಅದು ಕರ್ನಾಟಕ ಬ್ರಾಹ್ಮೀ ಲಿಪಿಯೇ ಆಗಿತ್ತು. ಆದ್ದರಿಂದಲೇ ಕ್ರಿಸ್ತಶಕ 450ರ ವೇಳೆಗೆ ನಮ್ಮದೇ ಆದ ಕನ್ನಡ ಲಿಪಿಯನ್ನೂ ಕನ್ನಡ ಭಾಷೆಯನ್ನೂ ರೂಢಿಸಿಕೊಳ್ಳಲು ನಮಗೆ ಸಾಧ್ಯವಾದದ್ದು ಹೌದಾದರೂ ಅದೊಂದು ವಿಸ್ಮಯಕಾರಿ ಸಂಗತಿಯೇ. ನಮ್ಮ ನಾಡಿಗೆ ಕ್ರಿಸ್ತ ಪೂರ್ವದಲ್ಲಿಯೇ ಉತ್ತರದ ಜೈನ ಭದ್ರಬಾಹುವಿನ ಶಿಷ್ಯ ವಿಶಾಖ ಮುನಿ ಬಂದಿದ್ದರು, ಜೈನಸಂಘವನ್ನು ಸ್ಥಾಪಿಸಿದ್ದರು. ಕೆಲ ಕಾಲದ ನಂತರ ವಿಶಾಖ ಮುನಿ ಜೈನ ಸಂಘವನ್ನು ತಮಿಳುನಾಡಿನಲ್ಲೂ ಸ್ಥಾಪಿಸಿದರು. ಅದರಿಂದ ನಮ್ಮ ನಾಡಿಗೆ ತಲುಪಿದ ಬ್ರಾಹ್ಮೀ ಲಿಪಿ ಅಲ್ಲಿಗೂ ತಲುಪಿತು.

ಕ್ರಿಸ್ತಪೂರ್ವ ಎರಡನೇ ಶತಮಾನದಿಂದ ಕ್ರಿಸ್ತಶಕ ನಾಲ್ಕನೇ ಶತಮಾನದವರೆಗಿನ ಅವಧಿಯಲ್ಲಿ ತಮಿಳಗಂನಲ್ಲಿ ಕೊರೆಸಿದ ಶಾಸನಗಳ ಸಂಖ್ಯೆ ನೂರರ ಗಡಿ ದಾಟಿರಲಿಲ್ಲ; ಅವಾದರೋ ಅಕ್ಷರಾಭ್ಯಾಸಕ್ಕೆ ಮೊದಲ ಹೆಜ್ಜೆ ಇಟ್ಟ ಬಾಲ ಲಿಪಿಕಾರರನ್ನು ನೆನಪಿಗೆ ತರುವಂತಹವು; ನಮ್ಮ ನಾಡಿನಲ್ಲಾದರೋ ಆ ವೇಳೆಗೆ ಸುದೀರ್ಘ ಶಾಸನಗಳನ್ನು ಬರೆಸುವ ಮತ್ತು ಲಿಪಿ ಮೂಲಕ ವ್ಯವಹರಿಸುವ ಜಾಣ್ಮೆ ನಮಗೆ ಕರಗತವಾಗಿತ್ತು ಎನ್ನುತ್ತಾರೆ ಸಂಶೋಧಕರು. ವಾಸ್ತವವಾಗಿ ಈ ಅವಧಿಯಲ್ಲಿ ನಮ್ಮ ನಾಡಿನ ಶಾತವಾಹನ, ಇಕ್ಷ್ವಾಕು, ಸಾಲಂಕಾಯನ, ವಿಷ್ಣುಕುಂಡಿ, ಚುಟು, ಕದಂಬ, ಪ್ರಾಕೃತ ಪಲ್ಲವ ಮೊದಲಾದ ರಾಜಮನೆತನದವರು ಬರೆಸಿದ ಒಂದು ಸಾವಿರ ಶಾಸನಗಳು ನಮ್ಮ ನಾಡಿನಲ್ಲಿದ್ದವು.  

ರಾಜಕೀಯ ಅನನ್ಯತೆ:ಕರ್ಣಾಟಕ ಎಂಬ ಹೆಸರು ಕರ್ಣ ಅಥವಾ ಕರ್ಣಿ ಎಂಬುದರಿಂದಲೇ ರೂಪುಗೊಂಡಿದೆ ಎನ್ನುತ್ತಾರೆ ಕೆಲವು ಸಂಶೋಧಕರು. ನಮ್ಮ ರಾಜ್ಯವನ್ನು ಆಳಿದ ಶಾತಕರ್ಣಿಗಳು ಇಡೀ ದಕ್ಷಿಣಾಪಥದ ಒಳಗಿನ ಮತ್ತು ಹೊರಗಿನ ವಿಸ್ತಾರವಾದ ಭೂಪ್ರದೇಶಕ್ಕೆ ಅರಸರಾಗಿದ್ದರು. ಬೌದ್ಧರ ಮಹಾವಂಶ , ದೀಪವಂಶಗಳು ಮೊಗ್ಗಲೀಪುತ್ತ ತಿಸ್ಸನು ಮಹಾದೇವನನ್ನು ಮಹಿಷಮಂಡಲಕ್ಕೂ, ರಕ್ಖಿತನನ್ನು ಬನವಾಸಿಗೂ ಬೌದ್ಧ ಮಿಷನರಿಯಾಗಿ ಕಳುಹಿಸಿದ ಎನ್ನುತ್ತವೆ. ಗಿರ್‌ ನರ್‌, ಕಾಲ್ಸ್‌ನ ಬಂಡೆ ಶಾಸನ ಇವುಗಳಲ್ಲಿ ಸತಿಯ ಪುತ್ತ ಎಂಬುವವರ ಹೆಸರು ಉಕ್ತವಾಗಿದೆ, ಈ ಸತಿಯಪುತ್ತರು ಬಹುಮಟ್ಟಿಗೆ ಶಾತವಾಹನರೇ ಎನ್ನುವ ಸಂಶೋಧಕರು ಶಾತವಾಹನರ ಕೇಂದ್ರಗಳು ನಮ್ಮ ರಾಜ್ಯದಲ್ಲಿ ಸಾಕಷ್ಟು ಇದ್ದುದನ್ನು‌ ಪತ್ತೆಹಚ್ಚಿದ್ದಾರೆ.

ತಮಿಳಗಂನಲ್ಲೂ, ಅಶೋಕನ ಶಾಸನಗಳಲ್ಲೂ ಒನ್ರುಮೊಳೆ ಕೋಶರ್‌ ಎಂದು ಗುರುತಿಸಿಕೊಂಡಿದ್ದವರು ನಮ್ಮ ನಾಡಿನ ಕೋಶರ್‌ ಎನ್ನುವ ಜನನಾಯಕರು. ನುಡಿದಂತೆ ನಡೆಯುವ, ಕೊಟ್ಟ ಮಾತನ್ನು ಮುರಿಯದ, ಅಸತ್ಯವನ್ನು ಪೋಷಿಸದ, ಸತ್ಯವನ್ನು ತಪ್ಪದೇ ಪರಿಪಾಲಿಸುವವರು ಎಂದು ಪ್ರಖ್ಯಾತರಾಗಿದ್ದ ಈ ಜನನಾಯಕರು ನಮ್ಮ ನಾಡಿನ ಗೌರವಯುತ ಕಿರೀಟ ಮಣಿಗಳು!

ಇಂದಿನ ಮೈಸೂರು ವಲಯ ಹಿಂದಿನ ಮಹಿಷ ನಾಡು. ಇದು ಎರುಮೈನಾಡೂ ಹೌದು. ಶ್ವೇತಚ್ಛತ್ರ, ರಾಜ-ಡಿಂಡಿಮಗಳ ಗೌರವ ಹೊಂದಿದ್ದ ರಾಜ ಮನೆತನದವರು ಎರುಮೈಯವರು. ಇವರು ತಮಿಳುನಾಡಿನ ಹೃದಯ ಭಾಗವಾದ ಕಾವೇರಿ, ವೈಗೈ ನದಿಗಳ ವರೆಗೂ ತಮ್ಮ ಶಕ್ತಿಯ ಪ್ರದರ್ಶನ ಮಾಡಿದ್ದರೂ ತಮಿಳಗಂರೊಡನೆ ಸ್ನೇಹ ಸಂಬಂಧವನ್ನು ಸ್ಥಾಪಿಸಲು ತಮಿಳು ಪಠ್ಯ. ಬ್ರಾಹ್ಮೀ ಲಿಪಿಯನ್ನು ಬಳಸಿಕೊಂಡ ಹೃದಯವಂತರು.

ಇದು ನೆರೆಯ ನಾಡಿನ ಜನಸಾಮಾನ್ಯರೊಂದಿಗೆ ಆತ್ಮೀಯ ಸಂಬಂಧವನ್ನು ಬೆಸೆಯುವ ಪ್ರಯತ್ನ ಮಾತ್ರ ಆಗಿರದೆ ಸಮಾಜದಲ್ಲಿ ಶಾಂತಿಯ ವಾತಾವರಣವನ್ನು ಮೂಡಿಸುವ ಉತ್ತಮ ರಾಜಕೀಯ ನಡೆಯೂ ಆಗಿತ್ತು. ಇದಕ್ಕೆ ಒಂದು ಸಾಕ್ಷಿಯಾಗಿ ಪುದುಕೊಟ್ಟೈ ಜಿಲ್ಲೆಯ ಸಿತ್ತನ್‌ವಾಸಲ್ ನ ಏಳಾಟಿಪಟ್ಟಂ ಗುಹೆಯಲ್ಲಿ ಕ್ರಿಸ್ತಪೂರ್ವ 1ನೇ ಶತಮಾನದ ಶಾಸನವೊಂದು ದೊರೆತಿದೆ.

ಕೊಡಗು, ದಿಂಡಿಗಲ್ ವರೆಗೆ ಅಧಿಕಾರ ಕ್ಷೇತ್ರ, ತಂಜಾವೂರಿನ ವರೆಗೆ ಕಾರ್ಯಕ್ಷೇತ್ರ ಹೊಂದಿದ್ದ ಎರುಮೈಯವರು ರಾಜಕೀಯದಲ್ಲಿಯೂ, ಸಾಹಿತ್ಯ ಕ್ಷೇತ್ರದಲ್ಲಿಯೂ ಆಗಿನ ಕಾಲದ ಪ್ರಧಾನ ಅರಸರನ್ನು ಸರಿಗಟ್ಟುತ್ತಿದ್ದರು ಎನ್ನುತ್ತದೆ ಪ್ರಾಚೀನ ತಮಿಳು ಸಾಹಿತ್ಯ. ಇಂಥ ಘನತೆಯುತ ಇತಿಹಾಸವನ್ನು ನಮ್ಮ ನಾಡಿಗೆ ಒದಗಿಸಿದವರು ಇವರು ಎಂಬುದು ಹೆಮ್ಮೆಯ ಸಂಗತಿ.

ಕವಿರಾಜ ಮಾರ್ಗ ಕೃತಿಯು “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್‌ ಭಾವಿಸಿದ ಜನಪದಂ” ಎಂದು ಕನ್ನಡನಾಡಿನ, ಕನ್ನಡ ಜನಪದದ ನಕಾಶೆಯನ್ನು ಗುರುತಿಸಿದಾಗ ಕಾವೇರಿ ನದಿಗೆ ಸಾವಿರ ವರ್ಷ ಕಾಲದ ಇತಿಹಾಸ ಇತ್ತು. ಚೇರ, ಕೊಂಗ, ಮೈಸೆನಾಡು ಮುಂತಾದ ರಾಜಕೀಯ ಶಕ್ತಿಗಳೊಡನೆ ಸಂಘರ್ಷಿಸುತ್ತಾ ಕ್ರಿಸ್ತಶಕ ಮೂರನೇ ಶತಮಾನದ ವೇಳೆಗೆ ಒಂದು ಸ್ಪಷ್ಟ ರಾಜಕೀಯ ಶಕ್ತಿಯಾಗಿ ರೂಪುಗೊಂಡ ನಮ್ಮ ಬುಡಕಟ್ಟು ಜನಾಂಗದ ಪುನ್ನಾಟರು ಕಾವೇರಿ, ಕಬಿನಿ ನದಿಗಳು ಅಲಂಕರಿಸಿದ ಮಹತ್ವಪೂರ್ಣ ಪ್ರದೇಶದ ಮೇಲಿನ ಒಡೆತನವನ್ನು ಹೊಂದಿದ್ದರು

ಪುನ್ನಾಟರು ಎಮ್ಮೆ, ಆಕಳು, ಕುದುರೆ, ಕುರಿ ಮುಂತಾದ ಪ್ರಾಣಿ ಸಂಪತ್ತು; ಬಂಗಾರ, ಬೆಳ್ಳಿ, ಮುತ್ತು, ಹವಳ, ರತ್ನಗಳೇ ಮುಂತಾದ ಖನಿಜ ಸಂಪತ್ತು; ಭತ್ತ, ಯವೆ, ಗೋದಿ, ದ್ವಿದಳ ಧಾನ್ಯಗಳೇ ಮೊದಲಾದ ಆಹಾರ ಸಂಪತ್ತು; ಬಾಳೆ, ಅಡಿಕೆ, ತೆಂಗು, ವೀಳೆ, ಕಬ್ಬು, ಹಲಸು ಮುಂತಾದ ವಾಣಿಜ್ಯ ಬೆಳೆ ಸಂಪತ್ತು; ಸಂಪಿಗೆ, ವಕುಳ, ಅಶೋಕ, ಪುನ್ನಾಗ ಮುಂತಾದ ಪುಷ್ಪ ಮತ್ತು ಸಸ್ಯ ಸಂಪತ್ತುಗಳ ಜೊತೆಗೆ ನಾಟಕ, ನೃತ್ಯ ಮತ್ತು ಆನೆಗಳನ್ನು ಪಳಗಿಸುವ ಕಲಾ ಕೌಶಲ್ಯ ಸಂಪತ್ತನ್ನು ಅಧಿಕವಾಗಿ ಹೊಂದಿದ್ದರು; ಆದರೂ ಸರಳ ಜೀವನವನ್ನು, ನಡೆಸುತ್ತಿದ್ದರು, ಸದಾ ಸಂತೋಷ ಮನಸ್ಕರಾಗಿ ಇರುತ್ತಿದ್ದರು ಎಂದು ಶಾಸನಗಳು ಇವರನ್ನು ಕೊಂಡಾಡುತ್ತವೆ.

ಪ್ರಜಾಪರ ಆಡಳಿತ: ನಮ್ಮ ನಾಡಿನಲ್ಲಿ ಅರಸ ಸಾರ್ವಭೌಮ ಆಗಿದ್ದರೂ ಅವನ ಅದಿಕಾರ ಚಲಾವಣೆಯ ಮೇಲೆ ಮಂತ್ರಿಗಳ ನಿಯಂತ್ರಣ ಇದ್ದುದಕ್ಕೆ ಪುರಾವೆಗಳು ಇವೆ. ಸಿಂಹಾಸನಕ್ಕೆ ಯೋಗ್ಯ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮಂತ್ರಿಗಳಿಗೆ ಅಭಿಪ್ರಾಯವನ್ನು ಮಂಡಿಸಲು, ಅದನ್ನು ಜಾರಿಗೆ ತರಲು ಅವಕಾಶ ಇರುತ್ತಿತ್ತು. 

ರಾಜ್ಯದ ಆಗುಹೋಗುಗಳು ಸುವ್ಯವಸ್ಥಿತವಾಗಿರಲು ಅರಸನಿಗೆ ಸಹಾಯಕರಾಗಿದ್ದವರಲ್ಲಿ ಹಳ್ಳಿಗಳಲ್ಲಿ, ಅಗ್ರಹಾರಗಳಲ್ಲಿ ಇದ್ದ ಮಹಾಜನರ ಪಾತ್ರ ಗಮನಾರ್ಹ. ಇವರು ಪ್ರಜಾಸತ್ತಾತ್ಮಕ ಅಂಗವೊಂದನ್ನು ರೂಪಿಸಿಕೊಂಡು ಟ್ರಸ್ಟಿಯಾಗಿ, ಬ್ಯಾಂಕರ್‌ ಆಗಿ, ಶಿಕ್ಷಣ ಸಂಸ್ಥೆಗಳ ಮ್ಯಾನೇಜರ್‌ ಆಗಿ, ಕೆರೆ ಕಟ್ಟೆಗಳು ಮತ್ತು ವಿಶ್ರಾಂತಿಗೃಹಗಳ ನಿರ್ವಹಣಾಕಾರರಾಗಿ, ಸಾರ್ವಜನಿಕ ಹಿತಕಾರ್ಯಗಳಿಗಾಗಿ ಹಣ ಸಂಗ್ರಾಹಕರಾಗಿ, ಕೇಂದ್ರಕ್ಕೆ ಸಲ್ಲಬೇಕಾಗಿದ್ದ ತೆರಿಗೆಯನ್ನು ತಲುಪಿಸುವವರಾಗಿ, ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದರು. ಇದರಿಂದ ಜನಗಳಿಗೂ, ರಾಜನಿಗೂ ಸಮಾಧಾನ ದೊರೆಯುತ್ತಿತ್ತು.

ಆರ್ಥಿಕ ಸುವ್ಯವಸ್ಥೆ: ನಮ್ಮ ನಾಡಿನಲ್ಲಿ ಸುವ್ಯವಸ್ಥೆಯ ಪರಿಕಲ್ಪನೆ ಜನರಿಗೆ ಬೇಕಾಗಿದ್ದ ಸಾಮಾನು ಸರಂಜಾಮುಗಳನ್ನು ಸಮರ್ಪಕವಾಗಿ ಒದಗಿಸುವುದಕ್ಕೂ ವಿಸ್ತೃತ ಆಗಿತ್ತು. ಈ ಕಾರ್ಯದಲ್ಲಿ ಅರಸನಿಗೆ ಸಹಾಯಕವಾಗಿದ್ದದ್ದು ಗಿಲ್ಡ್‌ಗಳು. ಶಾತವಾಹನರ ಕಾಲದಿಂದಲೂ ಕಾರ್ಯ ನಿರ್ವಹಿಸುತ್ತಿದ್ದ ಸಾಮಾಜಿಕ-ಆರ್ಥಿಕ ಸಂಸ್ಥೆ ಆಗಿದ್ದ ಗಿಲ್ಡ್‌ಗಳು ವ್ಯಾಪಾರ ಮತ್ತು ಉದ್ದಿಮೆಗಳನ್ನು ನಿರ್ವಹಿಸುತ್ತಿದ್ದವು, ವೃತ್ತಿ-ಕೈಗಾರಿಕಾ ತರಬೇತಿಗಳನ್ನು ತಂತಮ್ಮ ಗಿಲ್ಡ್‌ನ ಸದಸ್ಯರಿಗೆ ಮಾತ್ರವಲ್ಲದೆ ಆಸಕ್ತ ಸಾರ್ವಜನಿಕರಿಗೂ ನೀಡುತ್ತಿದ್ದವು, ಇವು ವಿವಿಧ ಪ್ರದೇಶದ ವಿವಿಧ ವ್ಯಾಪಾರೀ ಸಮುದಾಯಗಳನ್ನೂ ಪೂರಕವಾಗಿ ಒಳಗೊಳ್ಳುತ್ತಿದ್ದವು. ಹೆಂಜೇರುವಿನ ಗಿಲ್ಡ್‌ನಲ್ಲಿ ಕನ್ನಡಿಗರೊಂದಿಗೆ ತೆಲುಗು, ಮಲಯಾಳಿ, ತಮಿಳು ಮಾತನಾಡುವವರೂ, ವೇಣು ಗ್ರಾಮದ ಗಿಲ್ಡ್‌ನಲ್ಲಿ ಗುಜರಾತಿಗಳು, ಕೇರಳದವರು ಇದ್ದರು ಎಂದು ಶಾಸನಗಳು ಹೇಳುತ್ತವೆ.

ಪ್ರತಿಯೊಂದು ಉದ್ಯೋಗದವರಿಗೂ ಒಂದೊಂದು ಗಿಲ್ಡ್‌ ಇರುತ್ತಿತ್ತು. ವೀಳೆದೆಲೆ ಮಾರಾಟಗಾರರ, ಅಡಿಕೆ ಮಾರಾಟಗಾರರ, ಎಣ್ಣೆ ತೆಗೆಯುವವರ, ಪಲ್ಲಕ್ಕಿ ಹೊರುವವರ, ಕೃಷಿಕರ, ಕಲ್ಲುಕುಟಿಗರ, ಬಡಗಿಗಳ, ಕಮ್ಮಾರರ, ಅಕ್ಕಸಾಲಿಗರ, ನೇಕಾರರ, ಕುಂಬಾರರ, ಹಣ್ಣು ಮಾರಾಟಗಾರರ, ಬಟ್ಟೆ ಮಾರುವವರ, ಹಾಲು ಮಾರಾಟಗಾರರ, ಸೇಂದಿ ಇಳಿಸುವವರ, ಬುಟ್ಟಿ ಹೆಣೆಯುವವರ, ಚಾಪೆ ಹೆಣೆಯುವವರ, ಹೂ ಮಾರಾಟಗಾರರ, ಹತ್ತಿ ವ್ಯಾಪಾರದ ದಲ್ಲಾಳಿಗಳ, ಆಭರಣ ತಯಾರಕರ, ಸುಗಂಧದ್ರವ್ಯ ತಯಾರಕರ ಗಿಲ್ಡ್‌ಗಳಲ್ಲದೆ ಅಗಸರ ಗಿಲ್ಡ್‌ ಸಹ ಇದ್ದುದರ ಬಗ್ಗೆ ಶಾಸನಗಳು ಹೇಳುತ್ತವೆ.

ಗಿಲ್ಡ್‌ನ ಮುಖ್ಯಸ್ಥರು ಪದಾರ್ಥಗಳನ್ನು ರಾಜ್ಯದಿಂದಾಚೆಯೂ ಮಾರಾಟ ಮಾಡುವುದರ ಜೊತೆಗೆ ವ್ಯವಹಾರದಲ್ಲಿ ನಷ್ಟ ಆಗದಂತೆ ಎಚ್ಚರಿಕೆ ವಹಿಸುತ್ತಿದ್ದರು, ತಮ್ಮ ಎಲ್ಲ ವ್ಯವಹಾರಗಳನ್ನು ಸರ್ವ‌ ಸದಸ್ಯರ ಸಭೆಯಲ್ಲಿ ನಿರ್ಧರಿಸುತ್ತಿದ್ದರು, ಪರಸ್ಪರ ಹೊಂದಿಕೊಂಡು ವೃತ್ತಿ ನಿರ್ವಹಣೆ ಮಾಡುತ್ತಿದ್ದರು. ಹಬ್ಬಗಳನ್ನು ಆಚರಿಸುತ್ತಿದ್ದರು, ದೇವಸ್ಥಾನಗಳನ್ನು ಕಟ್ಟಿಸುತ್ತಿದ್ದರು, ದಾನ ದತ್ತಿಗಳನ್ನು ನೀಡುತ್ತಿದ್ದರು, ವಿದ್ಯಾರ್ಥಿವೇತನಗಳನ್ನು ಕೊಡುತ್ತಿದ್ದರು, ಜಾತ್ರೆ ಉತ್ಸವಗಳನ್ನು ಏರ್ಪಡಿಸುತ್ತಿದ್ದರು.


ಸ್ತ್ರೀಯರ ಸ್ಥಾನ: ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಮಾತ್ರ ಅಲ್ಲ ಬೇರೆ ದೇಶಗಳಿಗೆ ಹೋಲಿಸಿದರೂ ನಮ್ಮ ನಾಡಿನಲ್ಲಿ ಸ್ತ್ರೀಯರ ಸ್ಥಾನ ವಿಶಿಷ್ಟವಾದದ್ದು ಆಗಿತ್ತು ಎನ್ನುವ ಮಾತು ಇದೆ. ಅವರಿಗೆ ಉತ್ತಮ ಆಡಳಿತಗಾರ್ತಿಯರಾಗುವ, ರಣರಂಗದಲ್ಲಿ ಹೋರಾಡುವ, ಉತ್ತಮ ಸಾಹಿತಿಗಳಾಗುವ, ಆಧ್ಯಾತ್ಮಿಕವಾಗಿ ಸಾಧು ಸಂತರ ಸಾಲಿನಲ್ಲಿ ಮರ್ಯಾದಿತ ಆಗುವ ಅವಕಾಶ ಇತ್ತು. ರಾಣಿಯರಿಗೆ ತಮ್ಮದೇ ಆದ ನಿರ್ಣಯಗಳನ್ನು ಕೈಗೊಳ್ಳಲು, ಜಾರಿಗೆ ತರಲು ಅವರದೇ ಆದ ಆಡಳಿತ ಕೇಂದ್ರವೂ ಇರುತ್ತಿತ್ತು. ಧಾರ್ಮಿಕ ಕ್ಷೇತ್ರದಲ್ಲಿ ತಮಗೆ ಸೂಕ್ತ ಎನ್ನಿಸಿದ ಕಾರ್ಯಗಳನ್ನು ಕೈಗೊಳ್ಳಲು ಅವರಿಗೆ ಸ್ವಾತಂತ್ರ್ಯ ಇರುತ್ತಿತ್ತು. ರಾಜ್ಯದ ಆಗುಹೋಗುಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ತನ್ನ ರಾಣಿಯರು, ಮಕ್ಕಳು ಮತ್ತು ರಾಜ ಪರಿವಾರದವರಿಗೆ ಸೂಕ್ತ ಶಿಕ್ಷಣ ದೊರೆಯುವ ಎಚ್ಚರವನ್ನು ಅರಸ ವಹಿಸುತ್ತಿದ್ದ.

ಜಯಸಿಂಹನ ಸೋದರಿ ಅಕ್ಕಾದೇವಿ ಯುದ್ಧದಲ್ಲಿ ರಣಭೈರವಿ ಎನ್ನಿಸಿಕೊಂಡದ್ದು, ಎರಡನೇ ಬಲ್ಲಾಳನ ರಾಣಿ ಉಮಾದೇವಿ ದೇವಸ್ಥಾನಗಳ ಮ್ಯಾನೇಜ್ಮೆಂಟ್ ನೋಡಿಕೊಳ್ಳುತ್ತಿದ್ದದ್ದು, ಜಕ್ಕಿಯಬ್ಬೆ ನಾಗರಖಂಡದ ನಾಡಗಾವುಂಡ ಆಗಿದ್ದದ್ದು, ಗಿರಿಯಮ್ಮ ಸಂತಳೆನಿಸಿಕೊಂಡದ್ದು, ಜೈನ ಬಸದಿಯೊಂದರಲ್ಲಿ 500 ಮಹಿಳಾ ವಿದ್ಯಾರ್ಥಿಗಳಿದ್ದದ್ದುಸ್ತ್ರೀಯರಿಗಿದ್ದ ಉನ್ನತ ಸ್ಥಾನಮಾನಕ್ಕೆ ಒಂದೊಂದು ಉದಾಹರಣೆ. 

ರಘುನಾಥಾಭ್ಯುದಯ ಕೃತಿಯ ರಚನಕಾರ್ತಿಯರು ತಿರುಮಲಾಂಬ ಮತ್ತು ರಾಮಭದ್ರಾಂಬ. ಅವರು ತಮ್ಮ ಕೃತಿಯಲ್ಲಿ “ಸ್ತ್ರೀಯರು ಚಿತ್ರ, ಬಂಧ, ಗರ್ಭಾ, ಆಶು ಎಂಬ ನಾಲ್ಕು ರೀತಿಯ ಪದ್ಯಗಳನ್ನು ರಚಿಸಬಲ್ಲವರು; ವಿವಿಧ ಭಾಷೆಯ ಕೃತಿಗಳನ್ನು ವಿವರಿಸ ಬಲ್ಲವರು; ಶತಲೇಖಿನಿ ಎನ್ನುವ ವಿದ್ಯೆಯಲ್ಲಿ ಪರಿಣತರು; ಗಂಟೆಗೆ ನೂರು ಪದ್ಯಗಳನ್ನು ರಚಿಸ ಬಲ್ಲವರು; ಅಪೂರ್ಣ ಪದ್ಯವನ್ನು ಚೆಂದಾಗಿ ಪೂರ್ಣಗೊಳಿಸ ಬಲ್ಲವರು; ಸಂಸ್ಕೃತ, ತೆಲುಗು ಮತ್ತು ಆರು ರೀತಿಯ ಪ್ರಾಕೃತ ಭಾಷೆಗಳಲ್ಲಿ ಪದ್ಯ ರಚಿಸ ಬಲ್ಲವರು; ಕರ್ನಾಟ ಮತ್ತು ದೇಶೀ ಸಂಗೀತದ ಸೂಕ್ಷ್ಮಗಳನ್ನು ವಿವರಿಸ ಬಲ್ಲವರು; ಮಧುರವಾಗಿ ಹಾಡ ಬಲ್ಲವರು; ವೀಣೆ, ರಾವಣ ಹಸ್ತ ಮುಂತಾದ ಸಂಗೀತ ವಾದ್ಯಗಳನ್ನು ನುಡಿಸ ಬಲ್ಲವರು; ವಿವಿಧ ರೀತಿಯ ನೃತ್ಯಗಳನ್ನು ಮಾಡ ಬಲ್ಲವರು; ದೇವಾಲಯ ಮತ್ತಿತರ ಸೇವಾ ಸಂಸ್ಥೆಗಳಿಗೆ ದಾನದತ್ತಿಗಳನ್ನು ನೀಡುವ ಉದಾರಿಗಳು” ಎಂದು ಸ್ತ್ರೀಯರನ್ನೂ ಅವರಿಗೆ ದೊರೆಯುವ ಶಿಕ್ಷಣದ ಉನ್ನತ ಮಟ್ಟವನ್ನೂ ಪರಿಚಯಿಸಿದ್ದಾರೆ. 

ಸಾಂಸ್ಕೃತಿಕ ಪರಿಸರ: ನಮ್ಮ ನಾಡಿನಲ್ಲಿ ಧರ್ಮಸಹಿಷ್ಣುತೆ ಇತ್ತು. ಬಾದಾಮಿಯಲ್ಲಿ ಹರಿ, ಹರ, ಬ್ರಹ್ಮ, ಬುದ್ಧ, ಜಿನರನ್ನು ಒಂದೇ ಸ್ಥಳದಲ್ಲಿ ಪೂಜಿಸುವ ಪರಿಸರ ಇತ್ತು; ಬೆಳಗಾಂನಲ್ಲಿ ಹರಿ, ಹರ, ಕಮಲಾಸನ, ವೀತರಾಗ, ಬುದ್ಧ ಮಠಗಳಿದ್ದವು.ಅಗ್ರಹಾರ, ಬ್ರಹ್ಮಪುರಿ, ಮಠ, ಘಟಿಕಾ, ದೇವಾಲಯಗಳಲ್ಲಿ ಸಾರ್ವಜನಿಕ ಶಿಕ್ಷಣ ಸೌಲಭ್ಯ ಇತ್ತು. ಸಾಲೊಟಗಿ, ತಾಳಗುಂದ ಅತ್ಯಂತ ಪ್ರಸಿದ್ಧವಾದ ಶಿಕ್ಷಣ ಕೇಂದ್ರಗಳಾಗಿದ್ದವು. ಅನಾಥರ ಆರೋಗ್ಯ ರಕ್ಷಣೆಗಾಗಿ ಚಿಕಿತ್ಸಾಲಯಗಳಿದ್ದವು. ಕೋಡಿ ಮಠದ ಚಿಕಿತ್ಸಾಲಯ ಸುಪ್ರಸಿದ್ಧವಾದದ್ದು ಆಗಿತ್ತುಶೈಕ್ಷಣಿಕ ಕೇಂದ್ರಗಳಲ್ಲಿ ಕಲಿಕೆಯ ವಿಷಯ ನಾಲ್ಕು ವೇದಗಳು, ಅವುಗಳ ಅಂಗಗಳು ಮತ್ತು ಉಪಾಂಗಗಳು, ಮೀಮಾಂಸೆ, ಲೋಕಾಯತ, ಬೌದ್ಧ, ಸಾಂಖ್ಯ, ವೈಶೇಷಿಕ ಮತ್ತಿತರ ಶಾಸ್ತ್ರಗಳು ಮಾತ್ರವಲ್ಲದೆ ನಾಗರ, ಕನ್ನಡ, ತಿಗುಳ (ತಮಿಳು), ಆರ್ಯಾ (ಮರಾಠಿ) ಭಾಷೆಗಳು ಹಾಗೂ ಯುದ್ಧ ತರಬೇತಿಯೂ ಆಗಿದ್ದವು. ಅಗ್ರಹಾರಗಳಲ್ಲಿ ಸರಸ್ವತಿ ಭಂಡಾರ, ಭಂಡಾರಕ ಎಂದು ಕರೆಸಿಕೊಳ್ಳುವ ದೊಡ್ಡ ಗ್ರಂಥಾಲಯ ಇರುತ್ತಿದ್ದವು.

ಕನ್ನಡದ ಅನನ್ಯತೆ, ಕನ್ನಡಾಭಿಮಾನ:ಮೂರನೇ ಶತಮಾನದ ಪುನ್ನಾಟರು ಕ್ರಿಸ್ತಶಕ 550 ರಲ್ಲಿ ಮೂರು ಶಾಸನಗಳನ್ನು ಬರೆಸಿದರು. ಇದೊಂದು ಐತಿಹಾಸಿಕ ಮಹತ್ವದ ಹೆಜ್ಜೆ. ಅದರಲ್ಲಿ ಒಂದು ಮಾತ್ರ ಪೂರ್ಣ ಸಂಸ್ಕೃತ ಭಾಷೆಯಲ್ಲಿ ಇದೆ. ಉಳಿದ ಎರಡು ಶಾಸನಗಳು ಕನ್ನಡ ಪದಗಳನ್ನು ಪೋಣಿಸಿಕೊಂಡ ಮಿಶ್ರ‌ ಸಂಸ್ಕೃತದಲ್ಲಿ ಇವೆ. ಈ ಶಾಸನಗಳು ಕನ್ನಡ ಭಾಷೆಯ ವಾಹಕವಾಗಿ ಕನ್ನಡ ಲಿಪಿಯನ್ನು ನಾವು ವಿಕಾಸ ಪಡಿಸಿಕೊಂಡದ್ದನ್ನು ಹೇಳುತ್ತವೆ. ಪ್ರಬುದ್ಧ ಸಂಸ್ಕೃತ ಭಾಷೆಯ ಪಠ್ಯವನ್ನು ಕನ್ನಡ ಲಿಪಿಯಲ್ಲಿ ಸಮರ್ಥವಾಗಿ ಬರಹಕ್ಕೆ ಇಳಿಸಿದುದು ಇವುಗಳ ಒಂದು ವಿಶೇಷತೆ. ಸಂಸ್ಕೃತ ಪಠ್ಯದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬೆರೆಸಿ ಮಿಶ್ರ ಪಠ್ಯವೊಂದನ್ನು ಸೃಜಿಸಿದುದು ಇನ್ನೊಂದು ವಿಶೇಷತೆ. ಅಶೋಕನ ಶಾಸನಗಳಂತೆ ಈ ಶಾಸನಗಳೂ ಸಹ ಜನಸಾಮಾನ್ಯರನ್ನು ಅರಿವಿನ ಉನ್ನತ ಮಟ್ಟಕ್ಕೆ ಏರಿಸುವ ಆಶಯವುಳ್ಳದ್ದು ಎನ್ನುವುದು ಮತ್ತೊಂದು ವಿಶೇಷತೆ. ಈ ವಿಶೇಷತೆಗಳು ನಮ್ಮ ನಾಡಿನ ಬುಡಕಟ್ಟು ಜನಾಂಗವಾದ ಪುನ್ನಾಟರ ಹೆಗ್ಗಳಿಕೆಯೂ ಹೌದು.  ಇವರ ಕಾಲದಲ್ಲಿಯೇ ಕಾವೇರಿ ನದಿಯ ದಕ್ಷಿಣದ ಆಚೆ ಮತ್ತು ಉತ್ತರದ ಈಚೆಗಿನ ಪ್ರದೇಶಗಳಲ್ಲಿ ಆಶ್ಚರ್ಯ ಚಕಿತಗೊಳಿಸುವಷ್ಟು ದೇಸೀ ವೈವಿಧ್ಯತೆ ಮತ್ತು ಪ್ರಬುದ್ಧತೆಗಳೂ ಇದ್ದವು. ಈ ಮಿಶ್ರ ಪಠ್ಯ ಇವುಗಳಿಗೆ ಮತ್ತೊಂದು ಗರಿಮೆಯ ಗರಿ!  ಇದಕ್ಕೆ ಮುಖವಾಣಿ ಕ್ರಿಸ್ತಶಕ 550ರ ಮಾಂಬಳ್ಳಿ ಶಾಸನ.

ಸಂಸ್ಕೃತ ಭಾಷೆಯಲ್ಲಿ ಕನ್ನಡ ಮೂಲದ ಪದಗಳು ಇವೆ ಎಂಬುದು ಕನ್ನಡದ ಹಿರಿಮೆಯೇ. ಮನೆ ಇಂದ ಮಂದಿರ, ಪಾಡು ಇಂದ ಪಟ್ಟ ಪಟ್ಟಣ, ಬಿಲ್‌ ಇಂದ ಭಿಲ್ಲ, ಮುನ್‌ ಇಂದ ಮುನಿ, ನಾಡು ಇಂದ ನಟ ನಾಟಕ, ಮರಡಿ ಇಂದ ಮರಡಿ, ಮಲೆ ಇಂದ ಮಲಯ, ಪಲ್ಲಿ ಇಂದ ಪಲ್ಲಿ, ಮೀನ್‌ ಇಂದ ಮೀನ, ಕೆನ್ ಇಂದ‌ ಕನಕ, ಪುಲಿ ಇಂದ ಪುಳಿಂದ ಎನ್ನುವ ಸಂಸ್ಕೃತ ಪದಗಳು ರೂಪುಗೊಂಡಿವೆ ಎಂದು ಕಿಟ್ಟೆಲ್‌ ಇಂಥ ಮತ್ತಿತರ ಹಲವಾರು ಉದಾಹರಣೆಗಳನ್ನು ಹೆಕ್ಕಿ ಕೊಡುತ್ತಾರೆ. ಜೈನರ ಪ್ರಕಾರ ಕನ್ನಡದ ಹದಿನೆಂಟು ವರ್ಣಗಳನ್ನು ಕಂಡುಹಿಡಿದವಳು ಪ್ರಥಮ ತೀರ್ಥಂಕರ ವೃಷಭದೇವನ ಮಗಳು ಬ್ರಾಹ್ಮೀ. ಇದಕ್ಕೆ ಸಂಬಂಧಿಸಿದಂತೆ ಕ್ರಿಸ್ತ ಶಕ 9ನೇ ಶತಮಾನದ ಶಾಸನವೊಂದು ದೇವಘರ್‌ ಕೋಟೆಯಲ್ಲಿಯ ಜೈನ ದೇವಾಲಯದಲ್ಲಿ ಇದೆ.

ಹತ್ತನೇ ಶತಮಾನದ ನಂತರ ಕನ್ನಡ ಕವಿಗಳು ತಮ್ಮದೇ ಆದ ಛಂದಸ್ಸಿನಲ್ಲಿ ಕಾವ್ಯವನ್ನು ರಚಿಸಲು ಆರಂಭಿಸಿದರು. ಅವರು ಬಳಸಿದ ಛಂದಸ್ಸು – ಪದ, ಸುಳಾದಿ, ಉಗಾಭೋಗ, ತತ್ವ ಸುವ್ವಾಲಿ, ಶ್ಲೋಕ, ಕಂದ, ವಚನ, ಸೀಸ ಪದ್ಯ, ವೃತ್ತ, ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ, ಅಷ್ಟಪದಿ, ರಗಳೆ, ಏಳೆ, ಸಾಂಗತ್ಯ ಮೊದಲಾದವುಗಳು. ಈಗ ದೊರೆತಿರುವ ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯ ಕೃತಿಗಳ ಸಂಖ್ಯೆ 934 ಎನ್ನುತ್ತಾರೆ. ಅವುಗಳಲ್ಲಿ 42 ಸ್ತ್ರೀಯರದು. ಸಾಹಿತ್ಯ ಕ್ಷೇತ್ರಕ್ಕೆ ಜೈನರು, ವೀರಶೈವರು, ಬ್ರಾಹ್ಮಣರಂತೆ ಇನ್ನಿತರ ಸಮುದಾಯಗಳವರೂ ಕೊಟ್ಟಿರುವ ಕೃತಿ-ಕಾಣಿಕೆ 104. ತಿರುಮಲಾಂಬ, ರಾಮಭದ್ರಾಂಬರವರು ರಚಿಸಿದ ರಘುನಾಥಾಭ್ಯುದಯ ಕೃತಿಯು ಆಗ ಪ್ರಚಲಿತವಾಗಿದ್ದ ರಾಗಗಳು ಜಯಮಂಗಳ, ಸಿಂಹಳಲೋಲ ಇತ್ಯಾದಿಗಳು; ತಾಳಗಳು ರತಿಲೀಲಾ, ತುರಂಗಲೀಲಾ, ರಂಗಾಭರಣ, ಅನಂಗ ಪರಿಕ್ರಮಣ, ಅಭಿನಂದನ, ನಂದ ನಂದನ, ಅಭಿಮಾಲಾ ಎನ್ನುತ್ತದೆ. ಇವೆಲ್ಲಾ ಇಂದು ಅಪರಿಚಿತ.

ನಮ್ಮ ನಾಡಿನವರಿಗೆ ಕನ್ನಡ ಎಂದರೆ ವಿಪರೀತ ಅಭಿಮಾನ. ಆಡಳಿತದಲ್ಲಿ ಕನ್ನಡವನ್ನು ಬಳಸಲು ಮೊಟ್ಟಮೊದಲಿಗೆ ಪ್ರಯತ್ನಿಸಿದವನು ಎರಡನೇ ಪುಲಿಕೇಶಿ. ಕಬ್ಬಿಗರ ಕಾವ ಬರೆದ ಆಂಡಯ್ಯ ಕನ್ನಡ ಪದಗಳ ಹೊರತಾಗಿ ಇನ್ನೊಂದು ಭಾಷೆಯ ಪದಗಳನ್ನು ಬಳಸುವುದಿಲ್ಲ ಎನ್ನುವ ಕನ್ನಡಾಭಿಮಾನವನ್ನು ಮೆರೆದವನು. ಅನುಭವಾಮೃತವನ್ನು ಬರೆದ ಮಹಲಿಂಗರಂಗಕನ್ನಡ ಭಾಷೆ ಎಂದರೆ “ಸುಲಿದ ಬಾಳೆಯ ಹಣ್ಣಿನಂದದಿ| ಕಳೆದಸಿಗುರಿನಕಬ್ಬಿನಂದದಿ| ಅಳಿದಉಷ್ಣದಹಾಲಿನಂದದಿಸುಲಭವಾಗಿರ್ಪ| ಲಲಿತವಹಕನ್ನಡದನುಡಿಯಲಿ| ತಿಳಿದುತನ್ನೊಳುತನ್ನಮೋಕ್ಷವ| ಗಳಿಸಿಕೊಂಡೊಡೆಸಾಲದೇಸಂಸ್ಕೃತದೊಳಿನ್ನೇನು?”ಎಂದು ಸಾರಿದರೆ ಕನ್ನಡ ಭಾಷೆಯನ್ನು ಯಾರಾದರೂ ದ್ವೇಷಿಸಿದರೆ ಅವರು ಸೂರ್ಯನ ಬೆಳಕಿನ ಪ್ರಯೋಜನವನ್ನು ನಿರಾಕರಿಸುವ ಕಳ್ಳನ ಮನಸ್ಥಿತಿಗಿಂತ ಭಿನ್ನವಾದ ಮನಸ್ಸು ಉಳ್ಳವರು ಆಗಿರುವುದಿಲ್ಲ ಎಂದು ಜಗನ್ನಾಥ ದಾಸರು ಘೋಷಿಸಿದ್ದಾರೆ.ಕವಿರಾಜಮಾರ್ಗವು ಇಡೀ ಜಗತ್ತನ್ನೆಲ್ಲ ಜಾಲಾಡಿದರೂ ಕನ್ನಡಕ್ಕಿಂತ ಸುಂದರ ಭಾಷೆಯನ್ನಾಡುವ ಜನರು ಮತ್ತು ನಾಡು ದೊರೆಯುವುದಿಲ್ಲ ಎಂದು ಹೇಳುತ್ತದೆ. ಇದು ನಮ್ಮ ಮನಸ್ಥಿತಿಯೂ ಆಗುವುದು ನಮ್ಮ ಹಿರಿಮೆಯೂ ಹೌದು, ನಮ್ಮ ನಾಡಿನ ಗರಿಮೆಯೂ ಹೌದು.

ಇಂಥ ಹಿನ್ನೆಲೆಯಲ್ಲಿ ಕವಿರಾಜಮಾರ್ಗದ ಕನ್ನಡದೊಳ್‌ ಭಾವಿಸಿದ ನಮ್ಮ ಜನಪದವು ನದಿಗಳ ನಡುವಿನ ಭೂ ಪ್ರದೇಶ ಮಾತ್ರ ಆಗಿರದೆ ನದಿಗಳು ಸಂಕೇತಿಸುವ ವಿಶಾಲ ಪ್ರದೇಶದ ಸಾಂಸ್ಕೃತಿಕ ವಲಯವೂ ಆಗಿದೆ; ಆಡಳಿತಗಾರ ಹೇಗೆ ಇರಬೇಕು ಎಂಬುದಕ್ಕೂ, ಒಂದು ಆಡಳಿತ ವಿಭಾಗದ ವ್ಯಾಪ್ತಿಯಲ್ಲಿಯ ಜನಸಮುದಾಯ ಹೊಸ ಹೊಸ ಸಂಗತಿಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಾ ತಮ್ಮತನವನ್ನು ಕಳೆದುಕೊಳ್ಳದೆ ಅಭಿವೃದ್ಧಿಯ ಮಾರ್ಗದಲ್ಲಿ ತಮ್ಮನ್ನು ಹೇಗೆ ಇರಿಸಿಕೊಳ್ಳಬಹುದು ಎಂಬುದಕ್ಕೂ ಒಂದು ಮಾರ್ಗಸೂಚಿ ಆಗಿದೆ

ಕೆ.ಎಲ್.‌ ಪದ್ಮಿನಿ ಹೆಗಡೆ

3 Responses

  1. ಮಾಹಿತಿ ಪೂರ್ಣ.. ಸೊಗಸಾದ ನಿರೂಪಣೆ ಯುಳ್ಳ ಲೇಖನ…ಧನ್ಯವಾದಗಳು ಮೇಡಂ.

  2. ನಯನ ಬಜಕೂಡ್ಲು says:

    ನಮ್ಮ ಕನ್ನಡ, ಕರುನಾಡಿನ ಕುರಿತಾದ ಸಮೃದ್ಧ ಹಾಗೂ ಸಮಗ್ರ ಮಾಹಿತಿಗಳನ್ನೊಳಗೊಂಡ ಸೊಗಸಾದ ಬರಹ.

  3. ಶಂಕರಿ ಶರ್ಮ says:

    ಅದ್ವಿತೀಯ ಮಾಹಿತಿಗಳನ್ನು ಒಳಗೊಂಡ ಪ್ರಬುದ್ಧ ಲೇಖನ…ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: