ವಾಟ್ಸಾಪ್ ಕಥೆ 39 : ಆಲಸ್ಯದಿಂದ ದಾರಿದ್ರ್ಯ.
ಒಂದೂರಿನಲ್ಲಿ ಒಬ್ಬ ದೊಡ್ಡ ಜಮೀನುದಾರನಿದ್ದ. ಅವನ ಬಳಿ ಸಾಕಷ್ಟು ಹೊಲಗದ್ದೆಗಳಿದ್ದವು. ಕೃಷಿ ಕೆಲಸಕ್ಕೆ ಸಹಾಯ ಮಾಡಲು ಹತ್ತಾರು ಕೆಲಸಗಾರರೂ ಇದ್ದರು. ಅವರೆಲ್ಲ ತಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಆಮೀನುದಾರನಿಗೆ ಜಮೀನುಗಳಿಂದ ಒಳ್ಳೆಯ ಉತ್ಪತ್ತಿಯಾಗಿ ಕೈತುಂಬ ಹಣಕಾಸು ಲಭ್ಯವಾಗುತ್ತಿತ್ತು. ಅವನು ನೆಮ್ಮದಿಯಾಗಿದ್ದ.
ಕೆಲವು ವರ್ಷಗಳು ಹೀಗೆಯೇ ನಡೆಯುತ್ತಿದ್ದಂತೆ ಜಮೀನುದಾರನಿಗೆ ಹೇಗಿದ್ದರೂ ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುತ್ತಿದೆಯಲ್ಲಾ. ನಾನೇಕೆ ಕಷ್ಟಪಡಬೇಕು? ಎಂದು ಆಲಸ್ಯದ ಮನೋಭಾವ ಮೂಡಿತು. ದಿನವೂ ಹೊಲಗದ್ದೆಗಳ ಕೆಲಸಗಳನ್ನು ನೋಡಲು ಹೋಗುವುದನ್ನು ನಿಲ್ಲಿಸಿ ಮನೆಯಲ್ಲೇ ಸೋಮಾರಿಯಾಗಿ ಕಾಲ ಕಳೆಯುತ್ತಿದ್ದ. ದಿನಗಳೆದಂತೆ ಕೆಲಸಗಾರರೂ ಸೋಮಾರಿಗಳಾದರು. ಅಲ್ಲದೆ ಜಮೀನುದಾರನು ಹೇಗೂ ಬರುವುದಿಲ್ಲವೆಂದು ಕಳವು ಮಾಡಲೂ ಪ್ರಾರಂಭಿಸಿದರು. ಇದರಿಂದಾಗಿ ಕೃಷಿ ಉತ್ಪತ್ತಿಯೂ ಕಡಿಮೆಯಾಗಲು ಪ್ರಾರಂಭವಾಯಿತು. ಜಮೀನುದಾರನಿಗೆ ವರ್ಷೇ ವರ್ಷೇ ಆದಾಯ ಕಡಿಮೆಯಾಗಲು ಕಾರಣವೇನು? ಎಂಬ ಚಿಂತೆಯಾಯಿತು.
ಅವನು ಪೂಜ್ಯಭಾವನೆಯಿಂದ ಕಾಣುತ್ತಿದ್ದ ಗುರುಗಳೊಬ್ಬರಿದ್ದರು. ಅವರು ಸಂನ್ಯಾಸಿಗಳು. ಆಮೀನದಾರನು ಅವರ ಬಳಿಗೆ ಹೋಗಿ ತನ್ನ ಸಮಸ್ಯೆಯನ್ನು ಹೇಳಿಕೊಂಡನು. ಅವರು ಇವನಿಂದ ಮೊದಲು ವ್ಯವಸ್ಥೆ ಹೇಗಿತ್ತು, ಈಗ ಹೇಗಾಗಿದೆ ಎಂಬುದೆಲ್ಲವನ್ನೂ ಕೂಲಂಕುಷವಾಗಿ ಕೇಳಿಕೊಂಡರು. ನಂತರ ಜಮೀನುದಾರನಿಗೆ ”ನಾನೊಂದು ತಾಯತ ಮಾಡಿ ಕೊಡುತ್ತೇನೆ. ಅದನ್ನು ಭಕ್ತಿಯಿಂದ ಪೂಜಿಸಿ ಧರಿಸಬೇಕು. ಹಾಗೂ ಪ್ರತಿದಿನ ಬೆಳಗ್ಗೆ ಒಂದುಬಾರಿ, ಸಾಯಂಕಾಲ ಮತ್ತೊಂದು ಬಾರಿ ನಿನ್ನ ಜಮೀನುಗಳನ್ನೆಲ್ಲ ಒಮ್ಮೆ ಸುತ್ತಿ ಬರಬೇಕು. ಇದನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. ಇದರಿಂದ ನಿನ್ನ ಸಮಸ್ಯೆ ಪರಿಹಾರವಾಗುತ್ತದೆ” ಎಂದು ಉಪದೇಶಿಸಿದರು.
ಗುರುಗಳಲ್ಲಿ ಜಮೀನುದಾರನಿಗೆ ಅಪಾರವಾದ ನಂಬಿಕೆ. ಅವರು ಹೇಳಿದಂತೆ ತಾಯತವನ್ನು ಪೂಜಿಸಿ ಧರಿಸಿಕೊಂಡು ಬೆಳಗ್ಗೆ ಮತ್ತು ಸಂಜೆ ತನ್ನ ಜಮೀನುಗಳನ್ನು ಸುತ್ತು ಹಾಕತೊಡಗಿದನು. ಇವನು ಹೀಗೆ ಬರುತ್ತಿರುವುದನ್ನು ಕಂಡ ಮೈಗಳ್ಳ ಕೆಲಸಗಾರರು ಚುರುಕಾಗಿ ಕೆಲಸ ಮಾಡತೊಡಗಿದರು. ಹಾಗೂ ಪದಾರ್ಥಗಳನ್ನು ಕಳವು ಮಾಡುತ್ತಿದ್ದವರು ಸಿಕ್ಕಿಬೀಳುವ ಹೆದರಿಕೆಯಿಂದ ಅದನ್ನು ಬಿಟ್ಟುಬಿಟ್ಟರು. ಆವರ್ಷ ಉತ್ಪತ್ತಿ ಎಂದಿಗಿಂತಲೂ ಹೆಚ್ಚಾಗಿತ್ತು. ಆಮೀನುದಾರನಿಗೆ ಗುರುಗಳ ಉಪದೇಶದಿಂದ ಒಳ್ಳೆಯದಾಯಿತೆಂದು ನಂಬಿಕೆ ಬಂದಿತು. ಆದರೆ ವಾಸ್ತವವಾಗಿ ಸ್ವತಃ ಮೇಲ್ವಿಚಾರಣೆ ಮಾಡಿದ್ದರಿಂದ ಅವನಿಗೆ ಹುಟ್ಟುವಳಿಯಲ್ಲಿ ಯಾವುದೇ ಕೊರತೆಯಾಗಲಿಲ್ಲವೆಂಬುದೇ ಸತ್ಯ.
ಯಾವುದೇ ಕೆಲಸ ಮಾಡಿದಾಗಲೂ ಶ್ರದ್ಧೆ, ಸ್ವಪ್ರಯತ್ನ ಮತ್ತು ಎಚ್ಚರಿಕೆಯಿಂದ ಒಳ್ಳೆಯ ಫಲಿತಾಂಶ ಬರುತ್ತದೆ. ಶ್ರಮ ವಹಿಸದೆ ಆಲಸ್ಯ ಮಾಡಿದರೆ ಬರುವ ಫಲ ಕೊರತೆಯಾಗಿ ಕಾಲಕ್ರಮೇಣ ದಾರಿದ್ರ್ಯ ಬಂದೆರಗಿದರೂ ಆಶ್ಚರ್ಯವಿಲ್ಲ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಉತ್ತಮ ಸಂದೇಶವುಳ್ಳ ಕಥೆ. ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು ಅನ್ನುವ ಗಾದೆ ಮಾತೇ ಇದೆಯಲ್ಲ.
ಧನ್ಯವಾದಗಳು ನಯನಮೇಡಂ
ಸಾರ್ವಕಾಲಿಕ ಸತ್ಯ. ಇಂದಿನ ಯುವ ಜನತೆಗೆ ಸರಿಯಾಗಿ ಹೊಂದುವ ಕಥೆ. ನಲವತ್ತು ವರ್ಷಕ್ಕೆ ನಿವೃತ್ತಿ ಹೊಂದಿ, ಆರಾಮವಾಗಿ ಇರಬೇಕೆಂಬ ಆಶಯ ಹೊಂದಿದ ಪ್ರತಿಯೊಬ್ಬರಿಗೂ ಜೀವನ ಪಾಠ ಹೇಳುವ ಸೊಗಸಾದ ಕಥೆ
ಧನ್ಯವಾದಗಳು ಮಾಲಿನಿ ಮೇಡಂ
ಸೋಮಾರಿತನದಿಂದ ಆಗುವ ಅನಾಹುತವನ್ನು ಬಿಚ್ಚಿಟ್ಟ ಸೊಗಸಾದ ನೀತಿಕಥೆಯ ಜೊತೆಗೆ, ಎಂದಿನಂತೆ ಚಂದದ ಪೂರಕ ಚಿತ್ರವು ಖುಷಿಕೊಟ್ಟಿತು ನಾಗರತ್ನ ಮೇಡಂ…ಧನ್ಯವಾದಗಳು.
ಧನ್ಯವಾದಗಳು ಶಂಕರಿ ಮೇಡಂ
ಕಾಯಕವೇ ಕೈಲಾಸ ನೀತಿಯನ್ನು ಬೋಧಿಸುವ ಕತೆ
ಧನ್ಯವಾದಗಳು ಗಾಯತ್ರಿ ಮೇಡಂ