ಅವಿಸ್ಮರಣೀಯ ಅಮೆರಿಕ – ಎಳೆ 66
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹಾಲಯ (Natural History Museum)
Smithsonian ಎನ್ನುವ ಸಂಸ್ಥೆಯಿಂದ ಈ ನೈಸರ್ಗಿಕ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯವು ನಡೆಸಲ್ಪಡುತ್ತದೆ. 1910ರಲ್ಲಿ ಪ್ರಾರಂಭವಾದ ಈ ವಸ್ತು ಸಂಗ್ರಹಾಲಯವು ಜನರ ವೀಕ್ಷಣೆಯಲ್ಲಿ ಜಗತ್ತಿಗೆ ಏಳನೇ ಸ್ಥಾನದಲ್ಲಿದೆ ಹಾಗೂ ಈ ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹಾಲಯ ವಿಭಾಗವನ್ನು ಅತೀ ಹೆಚ್ಚು ಜನರು ವೀಕ್ಷಿಸುತ್ತಿರುವುದರಿಂದ ಇದು ಜಗತ್ತಿಗೇ ಮೊದಲನೆಯ ಸ್ಥಾನದಲ್ಲಿದೆ. ಮುಖ್ಯ ಕಟ್ಟಡವು 1.5ಮಿಲಿಯ ಚ. ಅಡಿ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ಸುಮಾರು 3,25,000ಚ.ಅಡಿಗಳಷ್ಟು ಜಾಗದಲ್ಲಿ ವಸ್ತು ಸಂಗ್ರಹಾಲಯ, 1000 ಸಿಬ್ಬಂದಿಗಳಿಗೆ ವಸತಿ ಸೌಕರ್ಯ ಹಾಗೂ ಸಾರ್ವಜನಿಕರ ಓಡಾಟಕ್ಕಾಗಿ ಸ್ಥಳಾವಕಾಶವಿದೆ. ಇಲ್ಲಿ ಮುಖ್ಯವಾದ 145 ಮಾದರಿಗಳನ್ನು ನೋಡಬಹುದಾಗಿದೆ. ಅಲ್ಲದೆ, 185 ಹಿರಿಯ ವಿಜ್ಞಾನಿಗಳು; ಜಗತ್ತಿನೆಲ್ಲೆಡೆಯ ನೈಸರ್ಗಿಕ ಹಾಗೂ ಸಾಂಸ್ಕೃತಿಕ ಇತಿಹಾಸಗಳ ಬಗ್ಗೆ ಕಲಿಯುವಿಕೆ ಮತ್ತು ಸಂಶೋಧನೆಗಳಿಗಾಗಿ ಇಲ್ಲಿ ತಮ್ಮ ಉಚಿತ ಸೇವೆಯನ್ನು ನಿರಂತರವಾಗಿ ಮುಡಿಪಾಗಿರಿಸಿರುವರು.
1846ರಲ್ಲಿ ಈ ಸಂಗ್ರಹಾಲಯವನ್ನು Smithsonian ಸಂಸ್ಥೆಯಿಂದ, ಅವರ ಸ್ವಂತ ಕಟ್ಟಡದಲ್ಲಿ ಪ್ರಾರಂಭಿಸಲಾಯಿತು. 1858ರಲ್ಲಿ ಇದಕ್ಕಾಗಿ ವಿಶಾಲವಾದ ಪ್ರತ್ಯೇಕ ಹಜಾರವನ್ನು ರೂಪಿಸಿದರು. ದಿನವೊಂದಕ್ಕೆ ಸುಮಾರು 7.1ಮಿಲಿಯ ಪ್ರವಾಸಿಗರು ಇಂದಿಗೂ ಇಲ್ಲಿಗೆ ಭೇಟಿ ನೀಡುವರು. ಇಲ್ಲಿ ಪ್ರವೇಶ ಉಚಿತವಾದ್ದರಿಂದ, ಈ ವಸ್ತುಸಂಗ್ರಹಾಲವು ಸಾರ್ವಜನಿಕ ದೇಣಿಗೆಗಳಿಂದಲೇ ನಡೆಸಲ್ಪಡುತ್ತದೆ. ಸುಮಾರು 85ಮಿಲಿಯ ಡಾಲರ್ ಗಳಷ್ಟು ಹಣ ವ್ಯಯಿಸಿ ಕಟ್ಟಲಾದ ಈ ಬೃಹದಾಕಾರದ ಕಟ್ಟಡದ ಮಧ್ಯಭಾಗವು ಬಹು ದೊಡ್ಡದಾದ ಬುರುಜಿನಿಂದ ಕೂಡಿದ್ದು ಅತ್ಯಾಕರ್ಷಕವಾಗಿದೆ. ಇಲ್ಲಿ, ಸಸ್ಯಗಳು, ಪ್ರಾಣಿಗಳು, ಪಳೆಯುಳಿಕೆಗಳು, ಲೋಹಗಳು, ಕಲ್ಲುಗಳು, ಉಲ್ಕಾಶಿಲೆಗಳು, ಮಾನವನ ಪಳೆಯುಳಿಕೆಗಳು, ಮಾನವನ ಸಂಸ್ಕೃತಿಯ ಬದಲಾವಣೆಗಳ ಹಂತಗಳು…ಹೀಗೆ ಎಲ್ಲವೂ ಒಳಗೊಂಡಿರುವ ಪ್ರದರ್ಶನ ಅದ್ಭುತ! ಇಲ್ಲಿರುವ ಲಕ್ಷಗಟ್ಟಲೆ ವಿವಿಧ ಕಲ್ಲುಗಳು ಮತ್ತು ಅದಿರುಗಳ ಮಾದರಿಗಳು, ಸಾವಿರಗಟ್ಟಲೆ ರತ್ನಗಳು, ಲಕ್ಷಗಟ್ಟಲೆ ಖನಿಜಗಳು, ಸಾವಿರಗಟ್ಟಲೆ ಉಲ್ಕಾ ಶಿಲೆಗಳ ಸಮಗ್ರ ಸಂಗ್ರಹ ಇತ್ಯಾದಿಗಳು ಇದರ ಪ್ರಸಿದ್ಧಿಗೆ ಕಾರಣವಾಗಿವೆ.
ಈ ಅತ್ಯಪೂರ್ವ ವಸ್ತು ಸಂಗ್ರಹಾಲಯದಲ್ಲಿರುವ ನೂರಾರು ವಿಶೇಷತೆಗಳು ನಮ್ಮನ್ನು ದಿಗ್ಮೂಢಗೊಳಿಸುತ್ತವೆ. ಒಳಹೊಕ್ಕಂತೆ, ಮೊದಲಿಗೆ ನಮ್ಮನ್ನು ಎದುರುಗೊಳ್ಳುತ್ತದೆ ವಿಶಾಲವಾದ ಕೋಣೆಯ ಮಧ್ಯಭಾಗದಲ್ಲಿರುವ ನಿಜ ಗಾತ್ರದ ಗಜ ಪ್ರತಿರೂಪ. ಎಲ್ಲರೂ ಅದರೊಡನೆ ನಿಂತು ಸಂಭ್ರಮದಿಂದ ಫೊಟೋ ತೆಗೆಸಿಕೊಳ್ಳುವುದು ಕಂಡುಬರುತ್ತದೆ. ಇಲ್ಲಿಯ ಇನ್ನೊಂದು ವಿಶೇಷತೆಯೆಂದರೆ ಎಲ್ಲಿ ಬೇಕಾದರೂ, ಎಷ್ಟು ಬೇಕಾದರೂ ಛಾಯಾಚಿತ್ರಗಳನ್ನು ತೆಗೆಯಬಹುದಾಗಿದೆ…ಯಾವುದೇ ನಿರ್ಬಂಧವಿಲ್ಲ. ಇದನ್ನು ಕಂಡು ನಿಜಕ್ಕೂ ನಾನು ಆಶ್ಚರ್ಯಚಕಿತಳಾದೆ! ಇಂತಹ ಅತ್ಯಮೂಲ್ಯ ಸಂಗ್ರಹದ ವಿವರಗಳನ್ನು ಹೊರ ಜಗತ್ತಿಗೆ ಯಾವುದೇ ಭಯವಿಲ್ಲದೆ ನೀಡುವುದು ನಿಜಕ್ಕೂ ಮೆಚ್ಚುವಂತಹ ಸಂಗತಿಯಾಗಿದೆ.
ನಾವು ಒಳ ಹೊಕ್ಕಂತೆ ಕಂಡ ದೃಶ್ಯ ನಿಜಕ್ಕೂ ಖುಷಿ ಕೊಡುವಂತಿತ್ತು. ಅದಾಗಲೇ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಕುತೂಹಲದಿಂದ, ಹೊರಲೋಕದ ಪರಿವೆ ಇಲ್ಲದೆ ವೀಕ್ಷಿಸುತ್ತಿದ್ದರು! ಆಹಾ… ಅತ್ಯದ್ಭುತ!! ಅತ್ಯಂತ ಸುಸಜ್ಜಿತವಾಗಿ ಪ್ರದರ್ಶಿಸಲ್ಪಡುವ ವಸ್ತುಗಳ ಪ್ರತಿಯೊಂದು ವಿವರಗಳೂ ಅದರ ಎದುರುಗಡೆಗೆ ಲಭ್ಯ. ಎಂದರೆ, ಅವುಗಳ ಮುಂಭಾಗದಲ್ಲಿರುವ ಗುಂಡಿಗಳನ್ನು ಒತ್ತಿದರೆ ಅದರ ಪೂರ್ತಿ ಚರಿತ್ರೆಯನ್ನೆ ಇಲ್ಲಿ ಕಾಣಬಹುದು, ಅಲ್ಲದೆ ಧ್ವನಿ ಮೂಲಕ ಕೇಳಬಹುದು. ಆದ್ದರಿಂದ, ವೀಕ್ಷಣೆಗಾಗಿ ಯಾವುದೇ ಮಾರ್ಗದರ್ಶಕನ ಅಗತ್ಯವಿರುವುದಿಲ್ಲ. ಇಲ್ಲಿ ಪ್ರತಿಯೊಂದು ವರ್ಗಗಳಿಗೂ ಪ್ರತ್ಯೇಕ ವಿಭಾಗಗಳನ್ನು ಮಾಡಿರುವರು. ಪ್ರತಿಯೊಂದನ್ನೂ ವಿವರವಾಗಿ, ಪೂರ್ತಿಯಾಗಿ ವೀಕ್ಷಿಸಲು ತಿಂಗಳುಗಳೇ ಬೇಕೇನೋ! ಆದರೂ ನಾವಿರುವ ಕೆಲವೇ ಗಂಟೆಗಳಲ್ಲಿ ಆದಷ್ಟು ಬೇಗನೆ, ಆದಷ್ಟು ಹೆಚ್ಚು ಸಂಗ್ರಹಗಳನ್ನು ನೋಡಲು ಹೊರಟೆವು. ಇಲ್ಲಿ ಯಾವುದೇ ವಿಭಾಗವನ್ನು ವೀಕ್ಷಿಸಲು ಪ್ರವಾಸಿಗರಿಗೆ ಸರಿಯಾದ ಮಾರ್ಗದರ್ಶನದ ಕೈಪಿಡಿಯನ್ನು ನೀಡುವರು. ಆದ್ದರಿಂದ ನಾವು ನಮಗಿಷ್ಟದ ವಿಭಾಗವನ್ನು ನೋಡಬಹುದು.
ಮೊದಲಿಗೆ, ಪ್ರಾಣಿಗಳ ಪ್ರತಿರೂಪಗಳ ಸುಸಜ್ಜಿತ ಪ್ರದರ್ಶನದ ವಿಶಾಲವಾದ ಹಜಾರವನ್ನು ಹೊಕ್ಕೆವು. ಅತ್ಯಂತ ಅಚ್ಚುಕಟ್ಟಾಗಿ, ಪ್ರಾಣಿಗಳ ನಿಜ ಗಾತ್ರದ ಗೊಂಬೆಗಳು ಅದೇ ಪ್ರಾಣಿಗಳ ಚರ್ಮವನ್ನು ಯಥಾವತ್ತಾಗಿ ಹೊದ್ದು ನೈಜ ರೂಪದಲ್ಲಿ ಗಾಜಿನೊಳಗೆ ನಿಂತಿರುವುನ್ನು ಕಂಡಾಗ ಮೆಚ್ಚದಿರಲು ಸಾಧ್ಯವೇ? ಜಿಂಕೆ, ಸಾರಂಗ, ಮೊಲಗಳಂತಹ ಮುದ್ದಾದ ಸಾಧು ಪ್ರಾಣಿಗಳನ್ನು ಕಂಡಾಗ, ಒಮ್ಮೆ ಅವುಗಳ ಮೈದಡವುವ ಆಸೆಯಾಗುತ್ತದೆ. ಛಾವಣಿಯೆತ್ತರದ ಜಿರಾಫೆ, ಕುಣಿಯಲು ನಿಂತ ಕರಿ ಕರಡಿ, ಬಿಳಿ ಬಣ್ಣದ ಹಿಮ ಕರಡಿಗಳು; ಕೋರೆ ಹಲ್ಲು , ಕೆಂಗಣ್ಣು ಅರಳಿಸಿ ಮುಂಗಾಲುಗಳನ್ನು ಮೇಲೆತ್ತಿ ಹಿಂಗಾಲುಗಳಲ್ಲಿ ನಿಂತು, ಇನ್ನೇನು ನಮ್ಮ ಮೈಮೇಲೆ ಹಾರಿಯೇ ಬಿಡುತ್ತವೆ ಎನ್ನುವಂತೆ ನಿಂತ ಹುಲಿ, ಚಿರತೆ, ಸಿಂಹಗಳು….ಅಬ್ಬಬ್ಬಾ…ಭಯಪಡುವಂತಾಗುತ್ತದೆ! ಹೀಗೆಯೇ ನೂರಾರು ವಿವಿಧ ಪ್ರಾಣಿಗಳು… ನೋಡಿ ಮುಗಿಯದು! ಅಲ್ಲೇ ಪಕ್ಕದಲ್ಲಿದೆ, ಪ್ರಾಣಿಗಳ ಭೀಕರ ಘರ್ಜನೆ, ಪಕ್ಷಿಗಳ ಕಲರವಗಳ ಜೊತೆಗೆ ಬೆಳಕಿನ ಆಟ… ಸುಂದರ ಕಾಡಿನ ಸೃಷ್ಟಿಯಾಗಿದೆ ಇಲ್ಲಿ!
ಮಾನವನ ಮೂಲವನ್ನು ಅರಸುತ್ತಾ…..
ಈ ವಸ್ತು ಸಂಗ್ರಹಾಲಯದ ನೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅಂದರೆ, 2010ರಲ್ಲಿ ಪ್ರಾರಂಭವಾದ ಈ ವಿಭಾಗವು ಸುಮಾರು 15,000 ಅಡಿಗಳಷ್ಟು ವಿಸ್ತಾರವಾಗಿದೆ. ಆದಿ ಮಾನವನ ತಲೆಬುರುಡೆಯಿಂದ ಹಿಡಿದು ಮುಂದಕ್ಕೆ, ಬೇರೆ ಬೇರೆ ಕಾಲಘಟ್ಟಗಳ, ಅಂದರೆ ಸುಮಾರು 2ಲಕ್ಷ ವರ್ಷಗಳಿಂದ 7ಲಕ್ಷ ವರ್ಷಗಳಷ್ಟು ಹಳೆಯದಾದ ಗಂಡಸಿನ, ಹೆಂಗಸಿನ ಹಾಗೂ ಮಗುವಿನ 76ತಲೆಬುರುಡೆಗಳ ಸಂಗ್ರಹವು ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿಸುತ್ತದೆ. ಅದರೊಂದಿಗೆ, ಆರು ಮಿಲಿಯ ವರ್ಷಗಳಷ್ಟು ಹಿಂದಿನಿಂದಲೇ, ಮಾನವನು ಹಂತ ಹಂತವಾಗಿ ವಿಕಾಸದ ಹಾದಿಯಲ್ಲಿ ನಡೆದ ಚಿತ್ರಣಗಳು ಕಣ್ಣಿಗೆ ಕಟ್ಟುವಂತಿವೆ. ಮಾನವನ ಮೆದುಳು ಪ್ರಾರಂಭಿಕ ಹಂತದಲ್ಲಿ ಇದ್ದ ಗಾತ್ರವು ಮುಂದುವರಿದಂತೆ ದೊಡ್ಡದಾಗುತ್ತಾ, ಅವನ ಆಲೋಚನಾ ಶಕ್ತಿಯನ್ನು ಹೆಚ್ಚಿಸುವಲ್ಲಿ ವಹಿಸಿದ ಪಾತ್ರವು ನಮ್ಮ ಕಣ್ಣೆದುರು ಕುಣಿದು, ಯೋಚಿಸುವಂತೆ ಮಾಡುತ್ತದೆ. ಒಂದು ತಲೆಬುರುಡೆಯ ಪಕ್ಕದಲ್ಲಿಯೇ, ಬದುಕಿದ್ದಾಗ ಆ ವ್ಯಕ್ತಿ ಹೇಗಿದ್ದಿರಬಹುದೆಂಬುದನ್ನು ಊಹಿಸಿ, ಯಥಾವತ್ತಾಗಿ ತೋರಿಸಿರುವುದು ನಿಜಕ್ಕೂ ಅದ್ಭುತ! ಮಂಗನಿಂದ ಮಾನವ ಎಂಬುದು ಇಲ್ಲಿ ನಿಜ ರೂಪವನ್ನು ಪಡೆದು ವಿಜೃಂಭಿಸಿದೆ. ಹೀಗೆ, ನಾವು ನಮ್ಮ ಹಿರಿಯರ ಭೇಟಿ ಮಾಡಿ, ಅವರೊಡನೆ ಕುಶಲ ಸಂಭಾಷಣೆಯನ್ನು ಮಾಡಿ , ಅವರ ಕ್ಷೇಮ ಸಮಾಚಾರವನ್ನು ವಿಚಾರಿಸಿ ಅವರಿಂದ ಬೀಳ್ಕೊಂಡು ಮುಂದಿನ ವಿಭಾಗದತ್ತ ಹೆಜ್ಜೆ ಹಾಕಿದೆವು….ಭೀಕರ ವಿಭಾಗದತ್ತ…
ಡೈನೋಸಾರ್ ವಿಭಾಗ
ಸುಮಾರು 25,000 ಚ. ಅಡಿ ವಿಸ್ತಾರದ ಹಜಾರದಲ್ಲಿ ಅಳವಡಿಸಲ್ಪಟ್ಟ ವಿವಿಧ ಡೈನೋಸಾರ್ ಗಳ ನಿಜ ಗಾತ್ರದ ಪ್ರತಿಕೃತಿಗಳು ಗಮನಸೆಳೆಯುತ್ತವೆ. ಛಾವಣಿಯ ಮೇಲ್ಗಡೆಗೆ ಜೋಡಿಸಿಟ್ಟಿರುವ ಬಹು ದೊಡ್ಡ ಡೈನೋಸಾರ್ ನ ಯಥಾವತ್ತಾದ ಎಲುಬಿನ ಜೋಡಣೆಯು ಅತ್ಯದ್ಭುತ! ನನಗಂತೂ ಇದರ ಪೂರ್ತಿ ಚಿತ್ರವನ್ನು ನನ್ನ ಕ್ಯಾಮರಾದಲ್ಲಿ ತೆಗೆಯಲಾಗಲಿಲ್ಲ… ಅಷ್ಟು ಉದ್ದನೆಯ ಎಲುಬೇ ಇದ್ದರೆ, ಆ ಪ್ರಾಣಿ ಅದೆಷ್ಟು ದೊಡ್ಡದಿರಬಹುದೆಂದು ಊಹಿಸುವಾಗಲೇ ತಲೆ ಗಿರ್ರೆಂದಿತು! ಕೆಲವು ಸಿನಿಮಾಗಳಲ್ಲಿ, ಚಿತ್ರಗಳಲ್ಲಿ ಕಂಡ ತರಹೇವಾರು ಡೈನೋಸಾರ್ ಗಳು ನಮ್ಮನ್ನು ಆಕ್ರಮಿಸಲು ಬರುವಂತೆ ತೋರುವ ನೈಜ ಆಕೃತಿಗಳು ನಮ್ಮನ್ನು ಬೇರೆಯೇ ಲೋಕಕ್ಕೆ ಒಯ್ಯುತ್ತವೆ!
ಮುಂದಕ್ಕಿದೆ…..
ಸಸ್ತನಿಗಳ ಸಾಮ್ರಾಜ್ಯ
ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಕಶೇರುಕಗಳ ಮಾದರಿಗಳ ಸಂಗ್ರಹಣೆ ಇಲ್ಲಿದೆ. 1890ರಿಂದ 1930ರ ವರೆಗಿನ ಅವಧಿಯಲ್ಲಿ ಈ ವಿಭಾಗವನ್ನು ಬಹು ದೊಡ್ಡ ಮಟ್ಟದಲ್ಲಿ ವಿಸ್ತರಿಸಲಾಯಿತು. ದೊಡ್ಡ ಗಾತ್ರದ ಸಸ್ತನಿಗಳ ಸಾಲಿನಲ್ಲಿ ಸೇರಿದ ಎಲ್ಲಾ ಪ್ರಾಣಿಗಳ ಪ್ರತಿರೂಪಗಳು ನೈಜ ಗಾತ್ರದಲ್ಲಿ ದರುಶನ ಕೊಡುತ್ತವೆ. ಅಚ್ಚ ಬಿಳಿ ಮೈಯಲ್ಲಿ ಕಪ್ಪಗಿನ ಚುಕ್ಕಿಗಳಿಂದ ಕೂಡಿದ ದೊಡ್ಡ ಹಸುವೊಂದು ಮೈಮೇಲೆ ಹಾಯ್ದು ಬರುವಂತೆ ನಿಂತಿತ್ತು! ಅಲ್ಲಿಂದ ಹೊರ ಬರುವ ಹೊತ್ತಿಗೆ, ನಾವು ಮಾನವರೂ ಇದೇ ಗುಂಪಿಗೆ ಸೇರಿದ ಪ್ರಾಣಿಗಳೆಂಬ ಅರಿವು ಮೂಡುತ್ತದೆ… ಇದರ ಬಗ್ಗೆ ಮಾಹಿತಿ ಇಲ್ಲದವರಿಗೆ.
ಸಾಗರ ವಿಭಾಗ
1910ರಲ್ಲಿ ಪ್ರಾರಂಭವಾಗಿ, ಆ ಬಳಿಕ ಉದಾರ ದಾನಿಗಳೊಬ್ಬರು ನೀಡಿದ ಸುಮಾರು 15ಮಿಲಿಯ ಡಾಲರ್ ಹಣದಿಂದ, 2008ರಲ್ಲಿ ಬೃಹತ್ ರೂಪದಲ್ಲಿ ಪುನರ್ನಿಮಾಣಗೊಂಡ ಈ ವಿಭಾಗದಲ್ಲಿರುವ ಸಂಗ್ರಹದಲ್ಲಿ, 674 ಜಲಚರಗಳ ಮಾದರಿಗಳ ಜೊತೆಗೆ ಇತರ ಸುಮಾರು 80ಮಿಲಿಯ ಮಾದರಿಗಳನ್ನು ಒಳಗೊಂಡು, ಜಗತ್ತಿನಲ್ಲೇ ಮೊದಲ ಸ್ಥಾನ ಪಡೆದಿರುವ ಹೆಗ್ಗಳಿಕೆ ಇದರದು. ಸುಮಾರು ಐದೂವರೆ ಸಾವಿರ ಲೀಟರ್ ನೀರು ತುಂಬಿರುವ ಮತ್ಸ್ಯಾಗಾರ, ಉತ್ತರ ಅಂಟಾರ್ಕಟಿಕದ ನೀಲಿ ತಿಮಿಂಗಲ ಹಾಗೂ ಅತ್ಯಂತ ದೊಡ್ಡ ಜೆಲ್ಲಿ ಫಿಶ್ ಗಳು, ಹಜಾರದ ಮಧ್ಯಭಾಗದಲ್ಲಿ ಪ್ರದರ್ಶಿಸಿರುವ ನೀಲಿ ಬಣ್ಣದ ಸ್ಕ್ವಿಡ್ ಜಾತಿಯ ಬೃಹದಾಕಾರದ ಮೀನು ಇತ್ಯಾದಿಗಳು ಇಲ್ಲಿಯ ಆಕರ್ಷಣೆಗಳಾಗಿವೆ. ಪ್ರವಾಸಿಗರಿಗೆ ನಡೆದಾಡಲು ಇರುವ ಜಾಗದ ಇಕ್ಕೆಲಗಳಲ್ಲಿ ದೊಡ್ಡದಾದ ಮತ್ಸ್ಯಾಗಾರಗಳಲ್ಲಿ ಕಂಡು ಕೇಳರಿಯದ ನೂರಾರು ತರಹದ, ಅತ್ಯಂತ ಸುಂದರ ಬಣ್ಣಗಳ, ಬಹು ಸಣ್ಣದಾದ ಹಾಗೂ ದೊಡ್ಡದಾದ ಮೀನುಗಳು ಲವಲವಿಕೆಯಿಂದ ಗುಂಪು ಗುಂಪಾಗಿ ಓಡಾಡುವುದನ್ನು ನೋಡಲು ಕಣ್ಣುಗಳೆರಡೂ ಸಾಲವು! ನಾನಂತೂ ಇವುಗಳನ್ನು ನೋಡುತ್ತಾ ನಿಂತವಳು ಲೋಕವನ್ನೇ ಮರೆತೆ…ಮಗಳು ಎಚ್ಚರಿಸಿದಾಗಲೇ ಇಹಲೋಕದ ಅರಿವಾಯಿತು!
(ಮುಂದುವರಿಯುವುದು…..)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=38822
-ಶಂಕರಿ ಶರ್ಮ, ಪುತ್ತೂರು.
ಮಾಹಿತಿಯುಕ್ತ ಪ್ರವಾಸ ಕಥನ
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು….ನಯನಾ ಮೇಡಂ
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು..ಮಾಹಿತಿ ಪೂರ್ಣ ವಾಗಿತ್ತು.. ಶಂಕರಿ ಮೇಡಂ.. ಧನ್ಯವಾದಗಳು
ಧನ್ಯವಾದಗಳು ನಾಗರತ್ನ ಮೇಡಂ,
ನಾವೂ ಓದುತ್ತಾ ಓದುತ್ತಾ ಈ ಲೋಕವನ್ನೇ ಮರೆತೆವು. ಅತ್ಯಂತ ಮಾಹಿತಿಪೂರ್ಣವಾದ ಲೇಖನ ಮಾಲಿಕೆ.