ಮೈಸೂರು ದಸರಾ..ಎಷ್ಟೊಂದು ಸುಂದರ!

Share Button


ವಿಶ್ವವಿಖ್ಯಾತ ಮೈಸೂರು ದಸರಾ ಬಂದಿದೆ. ನಗರದ ಅನೇಕ ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿ!. ಆಹಾರಮೇಳ, ಪುಸ್ತಕ ಮೇಳ, ಫಲ ಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ನಾಡು- ನುಡಿ ಪ್ರತಿಬಿಂಬಿಸುವ ಚಿತ್ರಕಲೆಗಳು, ಜೊತೆಗೆ ಅನೇಕ ಕಲಾವಿದರುಗಳಿಗೆ ವೇದಿಕೆಯಾಗಿದೆ. ಪ್ರವಾಸಿಗರ ಸ್ವರ್ಗ, ರಾಜರಾಳಿದ ನಾಡು, ಮೈಸೂರಿನ ಅಧಿದೇವತೆ ಚಾಮುಂಡಿ, ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಮೈಸೂರು ಒಳಗಿರುವ ಪ್ರಸಿದ್ಧ ಸ್ಥಳ ಪುರಾಣಗಳು, ಮೈಸೂರಿನ ಹೆಸರಿನೊಂದಿಗಿನ ವಿಶೇಷತೆಗಳು, ಮೈಸೂರು ಕುರಿತು ಬಂದಿರುವ ಚಲನಚಿತ್ರ ಗೀತೆಗಳು, ಇವುಗಳೆಲ್ಲದರ ನಡುವೆ ಕರ್ನಾಟಕದ ಮೊದಲ ರಾಜಧಾನಿ ಮತ್ತು ಈಗ ಸಾಂಸ್ಕೃತಿಕರಾಜಧಾನಿ ನಮ್ಮ ಮೈಸೂರು ಎನ್ನುವ ವಿಶೇಷ!.

ಮೈಸೂರು ಪಿಂಚಣಿದಾರರ ಸ್ವರ್ಗ ಕೂಡ. ಮೈಸೂರಿನಲ್ಲಿ ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಮನ್ನಣೆ ಇದೆ. ಜೊತೆಗೆ ಇಲ್ಲಿ ಅನೇಕ ಸಾಹಿತಿಗಳು, ಸಂಗೀತಗಾರರು ವಾಸವಾಗಿದ್ದಾರೆ. ಅಲ್ಲದೆ ಮೈಸೂರು ಹಲವು ಪ್ರಥಮಗಳಿಗೆ ನಾಂದಿಯಾಗಿದೆ. ಮುಖ್ಯವಾಗಿ ಮೈಸೂರು ದಸರಾ ಎಲ್ಲರ ಕಣ್ಮನ ಸೆಳೆಯುತ್ತದೆ. ಈ ಹೊತ್ತಲ್ಲಿ ಮೈಸೂರಿನ ಸವಿ ಸವಿ ನೆನಪುಗಳ ಮೆರವಣಿಗೆ ನಿಮಗಾಗಿ…..!. ಮೈಸೂರು ದೇಶದ “ನಂಬರ್ ಒನ್ ಸ್ವಚ್ಛ ನಗರ” ಎಂಬ ಗರಿ ಹೊಂದಿರುವ ಊರು ಕೂಡ ಆಗಿದೆ. ಮೈಸೂರಿನ ಸುತ್ತಮುತ್ತ ಅನೇಕ ಗ್ರಾಮ್ಯ ಭಾಷೆಗೆ ಹೆಸರುವಾಸಿಯಾಗಿದೆ.

ನಾವು ಬೇರೆ ಜಿಲ್ಲೆಗಳಿಗೆ ಪ್ರವಾಸ ಹೋದಾಗ ನೀವು ಯಾವ ಜಿಲ್ಲೆಯವರು? ಎಂದು ಕೇಳುತ್ತಾರೆ. ಆಗ ನಾವು ಮೈಸೂರು ಜಿಲ್ಲೆಯವರು ಎಂದು ಹೇಳಿದಾಗ “ಓ ನೀವು ಮೈಸೂರಿನವರ….” ಎಂದು ಸಂಭ್ರಮ ಪಡುತ್ತಾರೆ! “ಮೈಸೂರು” ಎಂಬ ಮೂರಕ್ಷರ ಕೇಳಿದೊಡನೆ ಏನೋ ಒಂದು ರೀತಿಯಲ್ಲಿ ಹೆಮ್ಮೆ ನಮಗೆ!. ಜೊತೆಗೆ ನಾವು ಮೈಸೂರಿನಲ್ಲಿ ಇರುವುದು ಕೂಡ ನಮ್ಮಗಳ ಪುಣ್ಯವೇ ಸರಿ!!ಮೊದಲು ನಾವು ಮೈಸೂರಿನ ಹೆಸರಿನೊಂದಿಗೆ ಇರುವ ಸ್ಥಳ ವಿಶೇಷತೆಗಳ ಬಗ್ಗೆ ತಿಳಿಯಲೇಬೇಕು.

ಮೈಸೂರಿನ ಅರಮನೆಯೊಂದಿಗೆ ನಮ್ಮ ಪಯಣ ಪ್ರಾರಂಭವಾಗುತ್ತದೆ. ಮೈಸೂರಿನ ಪಾರಂಪರಿಕ ಕಟ್ಟಡಗಳು, ಮೈಸೂರು ಪೇಟ, ಮೈಸೂರು ವೀಳ್ಯದೆಲೆ, ಮೈಸೂರ್ ಪಾಕ್, ಮೈಸೂರು ಮಲ್ಲಿಗೆ, ಮೈಸೂರು ಬದನೆಕಾಯಿ, ಮೈಸೂರು ರೇಷ್ಮೆ, ಮೈಸೂರು ಶ್ರೀಗಂಧ. ಮೈಸೂರು ದಸರಾ, ಮೈಸೂರು ಸಾಂಪ್ರದಾಯಿಕ ವರ್ಣ ಚಿತ್ರಗಳು, ಮೈಸೂರು ಗಂಜೀಫಾ ಕಾರ್ಡ್ ಗಳು, ಮೈಸೂರು ಮಹಾರಾಜರು, ಮೈಸೂರು ಮಸಾಲಾ ದೋಸೆ, ಮೈಸೂರು ಅಗರಬತ್ತಿ, ಮೈಸೂರು ಬಿಟಿಯ ಕೆತ್ತನೆಗಳು, ಮೈಸೂರು ಆಕಾಶವಾಣಿ, ಮೈಸೂರು ಟಾಂಗಾ, ಮೈಸೂರು ಮೃಗಾಲಯ, ರೈಲ್ವೆ ಮ್ಯೂಸಿಯಂ, ಒಂಟಿಕೊಪ್ಪಲು ಪಂಚಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಮಹಾರಾಜ ಮತ್ತು ಮಹಾರಾಣಿ ಕಾಲೇಜು, ಮೈಸೂರು ಗರಡಿ ಮನೆ, ಮೈಸೂರು ನೋಟು ಮುದ್ರಣಾಲಯ, ಮೈಸೂರು ಲ್ಯಾಂಪ್ಸ್, ಮೈಸೂರು ದಸರಾ ಗೊಂಬೆ, ಮೈಸೂರು ರಂಗಾಯಣ, ಕೆ ಆರ್ ಆಸ್ಪತ್ರೆ, ಹೀಗೆ ಒಂದೇ ಎರಡೇ? ಸ್ಥಳ ವಿಶೇಷತೆಗಳ ಪಟ್ಟಿಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ!.

ಮುಂದುವರೆದಂತೆ ಮೈಸೂರಿನ ರಸ್ತೆಗಳು ಕೂಡ ನಮ್ಮ ಕಣ್ಮಣ ಸೆಳೆಯುತ್ತವೆ. ಜೊತೆಗೆ ಆ ರಸ್ತೆಯ ಇಕ್ಕಡೆಗಳಲ್ಲಿ ಪಾರಂಪರಿಕ ಕಟ್ಟಡಗಳು ಕೂಡ ಇತಿಹಾಸ ಸಾರುತ್ತವೆ. ಮೈಸೂರಿನ ರೈಲ್ವೆ ಸ್ಟೇಷನ್ ನಿಂದ ಸಾಗಿ ಮೆಟ್ರೋಪಾಲ್…. ರಾಮಸ್ವಾಮಿ ಸರ್ಕಲ್….. ಚಾಮುಂಡಿಪುರಂ ಸರ್ಕಲ್….. ಎಲೆ ತೋಟ….. ನಂಜನಗೂಡು ರಸ್ತೆ……. ನಂತರ ಸಿಗುವ ಚಾಮುಂಡಿ ಬೆಟ್ಟದ ಮೆಟ್ಟಿಲು ಸ್ಥಳದವರೆಗೂ ಕೂಡ “ಜೆ ಎಲ್ ಬಿ” (ಝಾನ್ಸಿ ಲಕ್ಷ್ಮೀಬಾಯಿ ರಸ್ತೆ) ರಸ್ತೆ ಪ್ರಸಿದ್ಧಿಯಾಗಿದೆ. ಇದು ಮೈಸೂರಿನ ಅತ್ಯಂತ ಉದ್ದನೆಯ ರಸ್ತೆ.

ಜೊತೆಗೆ ನಮ್ಮ ಮೈಸೂರಿನಲ್ಲಿ ಪುರಾತನ ದೇವಾಲಯಗಳು, ಚರ್ಚುಗಳು, ಮಸೀದಿಗಳು, ಕೋಟೆ ಕೊತ್ತಲಗಳು, ಅಲ್ಲದೆ ರಸ್ತೆಯ ಎಲ್ಲಾ ಸರ್ಕಲ್ ಗಳಿಗೂ ಕೂಡ ಗಣ್ಯ ವ್ಯಕ್ತಿಗಳ ಹೆಸರಿಟ್ಟಿರುವುದು, ಹಲವು ಸ್ಮಾರಕಗಳು, ಗಣ್ಯ ವ್ಯಕ್ತಿಗಳ ಪ್ರತಿಮೆಗಳು, ಅರಸು ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ ಸಂತೆಪೇಟೆ, ಮಾರುಕಟ್ಟೆ, ಮನ್ನಾರ್ಸ್ ಮಾರ್ಕೆಟ್….. ಮುಂತಾದ ವ್ಯಾಪಾರ ಕೇಂದ್ರದ ರಸ್ತೆಗಳು, ಅಂಗಡಿಗಳು. ಗುರು ಸ್ವೀಟ್, ಮಹಾಲಕ್ಷ್ಮಿ ಸ್ಪೀಟ್, ಮುಂತಾದ ಬೇಕರಿ ತಿನಿಸುಗಳು. ಪ್ರಸಿದ್ಧ ಹೋಟೆಲ್ ಗಳು, ದೊಡ್ಡ ದೊಡ್ಡ ಮಾಲ್ಗಳು, ಸಿನಿಮಾ ಥಿಯೇಟರ್ ಗಳು, ಹೀಗೆ ನಮ್ಮ ಮೈಸೂರಿನಲ್ಲಿ ಅಡಿಯಿಂದ ಮುಡಿವರೆಗೆ ಎನ್ನುವಂತೆ ಎಲ್ಲವುಗಳು ಒಂದಲ್ಲ ಒಂದು ರೀತಿಯಲ್ಲಿ ಮೈಮನಗಳಿಗೆ ಮುದ ನೀಡುತ್ತವೆ.

ವಿಶ್ವವಿಖ್ಯಾತ ಮೈಸೂರು ದಸರಾದ ಈ ಸಂದರ್ಭದಲ್ಲಿ ಮೈಸೂರಿನ ಇಕ್ಕೆಡೆಗಳಲ್ಲಿ ರಸ್ತೆಗಳು, ಕಟ್ಟಡಗಳು, ಮರಗಳು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ಇನ್ನು ಮೈಸೂರಿನ ಅರಮನೆಯ ಸುತ್ತಲಿನ ರಸ್ತೆ ಧರೆಯೇ ಸ್ವರ್ಗದಂತೆ ಕಾಣುತ್ತಿವೆ! ಇನ್ನು ಮೈಸೂರಿನ ಹೆಸರಿನೊಂದಿಗೆ ಚಲನಚಿತ್ರಗಳಲ್ಲಿ ಪ್ರಸಿದ್ಧವಾಗಿರುವ ಅನೇಕ ಹಾಡುಗಳು ಸದಾ ಗುನುಗುವಂತೆ ಮಾಡುತ್ತವೆ!. ಅವುಗಳನ್ನೆಲ್ಲ ಕೇಳುತ್ತ ಹೋದಂತೆ ನಮ್ಮ ಮೈಸೂರಿನ ಪ್ರೀತಿ ಹೆಚ್ಚುತ್ತದೆ. “ಮೈಸೂರು ದಸರಾ ಎಷ್ಟೊಂದು ಸುಂದರ”- ಎಂಬ “ಕರುಳಿನ ಕರೆ” ಚಿತ್ರದ ಗೀತೆ ದಸರಾಬಂದಾಗ ಮೊದಲು ನೆನಪಾಗುತ್ತದೆ!!.


ಇದೇ ರೀತಿ “ಮೈಸೂರ್ ಸೀಮೆಯ ಹೆಣ್ಣು ನೋಡು”, “ನಮ್ಮೂರು ಮೈಸೂರು ನಿಮ್ಮೂರು ಯಾವೂರು”, “ದಸರಾ ಗೊಂಬೆ ನಿನ್ನನು ನೋಡಲು ಮೈಸೂರಿಂದ ಬಂದೆ ಕಣೆ”, “ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ”, “ಕೂರಕುಕ್ರಳ್ಳಿ ಕೆರೆ ತೇಲಕ್ ಕಾರಂಜಿ ಕೆರೆ”, “ಮೈಸೂರು ಮಲ್ಲಿಗೆ ಮೈಯೆಲ್ಲಾ ಹೋಳಿಗೆ”, “ಆ ಆ ಮೈಸೂರ ಮಲ್ಲಿಗೆ”, “ಮಲ್ನಾಡ್ ಅಡಿಕೆ ಮೈಸೂರು ವೀಳ್ಯದೆಲೆ”, “ಜಾಣ ಜಾಣ ಮೈಸೂರು ಜಾಣ”, “ಮೈಸೂರು ಮಾವ ಮಂಡ್ಯದ ಜೀವ”, “ಆಲಯ ಮೃಗಾಲಯ ಬಾನಾಡಿಗಳ ನಿಲಯ”, “ಮೈಸೂರಿನಿಂದ ಕೈ ಹಿಡಿದು ಬಂದ ನನ್ನಾಸೆ ಮಹಾರಾಜ”, “ನೋಡು ಬಾ ನೋಡು ಬಾ ನಮ್ಮೂರ”, “ಮೈಸೂರಿಗೆ ಐಶು ಬಂದ್ಲು ಮೈಲಾರಿ ದೋಸೆ ತಿಂದ್ಲು”, “ಹಬ್ಬ ಹಬ್ಬ ಇದು ಕರುನಾಡ ಮನೆ ಮನೆ ಹಬ್ಬ”, “ಮೈಸೂರು ಮಲ್ಲಿಗೆ ಅಂದವೇ ಅಂದ”, “ಮೈಸೂರ ಮಲ್ಲಿಗೆಯ ಯವ್ವನ ನೀನೇನಾ”,……… ಹೀಗೆ ಅನೇಕ ಗೀತರಚನಾಕಾರರು ಮೈಸೂರಿನ ಸುತ್ತಮುತ್ತಲಿನ ಸ್ಥಳ ಪುರಾಣದೊಂದಿಗೆ ಮೈಸೂರನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ!. ಜೊತೆಗೆ ನಮ್ಮ ಮೈಸೂರಿನ ಪ್ರಸಿದ್ಧ ಚಿತ್ರ ನಿರ್ಮಾಪಕರು, ನಿರ್ದೇಶಕರು, ನಟರು, ನಟಿಯರು, ಹಾಸ್ಯ ಕಲಾವಿದರು, ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಇದ್ದಾರೆ. ಮೈಸೂರಿನ ಒಳಗೆ ಮತ್ತು ಹೊರಗೆ ಅನೇಕ ಚಲನಚಿತ್ರಗಳ ಶೂಟಿಂಗ್ ಕೂಡ ನಡೆದಿದೆ ಜೊತೆಗೆ ಮೈಸೂರಿನ ಅನೇಕ ಸ್ಥಳಗಳು ಚಿತ್ರರಂಗದಲ್ಲಿ ಸೇರಿವೆ. ರಾಜೇಂದ್ರ ಸಿಂಗ್ ಬಾಬು, ಶಂಕರ್ ಸಿಂಗ್, ಅಶ್ವಥ್, ಮೈಸೂರು ಲೋಕೇಶ್, ರತ್ನಾಕರ, ವಿಷ್ಣುವರ್ಧನ್, ದ್ವಾರಕೀಶ್, ಹುಣಸೂರು ಕೃಷ್ಣಮೂರ್ತಿ, ಇನ್ನು ಮುಂತಾದವರು ಮೈಸೂರಿನ ಕೀರ್ತಿ ಹೆಚ್ಚಿಸಿದ್ದಾರೆ.

ಮೈಸೂರಿನ ಒಳಗಡೆ ಇರುವ ಪ್ರಸಿದ್ಧ ತಾಣಗಳು ಅಂಬವಿಲಾಸ ಅರಮನೆ, ಇನ್ನಿತರ ಹತ್ತಾರು ಅರಮನೆಗಳು, ಚಾಮುಂಡಿ ಬೆಟ್ಟ, ಸಂತ ಫಿಲೋಮಿನಾ ಚರ್ಚ್, ಶತಮಾನ ಕಂಡ ಮೈಸೂರು ವಿಶ್ವವಿದ್ಯಾಲಯ, ಪ್ರಾಚ್ಯ ವಿದ್ಯಾ ಸಂಶೋಧನಾಲಯ, ಜಾನಪದ ವಸ್ತು ಸಂಗ್ರಹಾಲಯ, ರೈಲ್ವೆ ಮ್ಯೂಸಿಯಂ, ರಾಷ್ಟ್ರೀಯ ಮಾನವ ಸಂಗ್ರಹಾಲಯ, ವ್ಯಾಕ್ಸ್ ಮ್ಯೂಸಿಯಂ, ಮೃಗಾಲಯ, ಫ್ಯಾಂಟಸಿ ಪಾರ್ಕ್, ಅವಧೂತದತ್ತ ಪೀಠ ಮುಂತಾದವುಗಳು.ಇನ್ನು ಮೈಸೂರು ನಗರದಿಂದ ಸುತ್ತಮುತ್ತ ಇರುವ ಮೈಸೂರು ಜಿಲ್ಲೆಗೆ ಸೇರಿರುವ ತಾಲೂಕು ಸ್ಥಳಗಳಾದ ನಂಜನಗೂಡು, ತಲಕಾಡು, ಸೋಮನಾಥಪುರ, ಬೈಲುಕುಪ್ಪೆ, ಸುತ್ತೂರು, ಗೊಮ್ಮಟಗಿರಿ, ಚುಂಚನಕಟ್ಟೆ, ರಾಷ್ಟ್ರೀಯ ಉದ್ಯಾನವನಗಳು, ಕಬಿನಿ ಜಲಾಶಯ ಇವೆಲ್ಲವನ್ನೂ ಒಂದು ದಿನದಲ್ಲಿ ನೋಡಿ ಬರಬಹುದು. ಇನ್ನು ಮೈಸೂರು ಜಿಲ್ಲೆಯ ಅಕ್ಕಪಕ್ಕ ಜಿಲ್ಲೆಗಳಾದ ಮಂಡ್ಯ, ಹಾಸನ, ಮಡಿಕೇರಿ, ಚಾಮರಾಜನಗರ ಇಲ್ಲೂ ಕೂಡ ಅನೇಕ ಪ್ರಮುಖ ಪ್ರವಾಸಿ ತಾಣಗಳಿವೆ. ಒಟ್ಟಿನಲ್ಲಿ ಮೈಸೂರಿನ ಸುತ್ತಮುತ್ತ 40 ರಿಂದ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅನೇಕ ಪ್ರವಾಸಿ ಸ್ಥಳಗಳಿವೆ.

ಮೈಸೂರನ್ನು ಕಾಪಾಡುತ್ತಿರುವ ಅಧಿದೇವತೆ ಚಾಮುಂಡಿ ಮಾತೆ ಮೈಸೂರಿಗರಿಗೆ ಭಕ್ತಿ- ಭಾವ ಮೂಡಿಸುತ್ತದೆ. ಚಾಮುಂಡಿ ಬೆಟ್ಟದಿಂದ ಸುಂದರ ನಗರಿ ಮೈಸೂರನ್ನು ನೋಡುವುದೇ ಒಂದು ರೀತಿಯಲ್ಲಿ ಸೋಜಿಗ!. ಮೈಸೂರಿನ ಸುತ್ತಮುತ್ತಲಿನ ಸ್ಥಳವನ್ನು ಮತ್ತೆ ಮತ್ತೆ ನೋಡಿ ಕಣ್ತುಂಬಿಸಿಕೊಳ್ಳಬಹುದು. ಚಾಮುಂಡಿ ಬೆಟ್ಟದಿಂದ ಮೈಸೂರಿನ ಅರಮನೆ, ರೇಸ್ ಕೋರ್ಸ್, ಬಹು ಎತ್ತರದ ಕಟ್ಟಡಗಳು, ನಗರದ ಅನೇಕ ಬಡಾವಣೆಗಳನ್ನು, ರಸ್ತೆಗಳನ್ನು ಕಾಣಬಹುದು. ಇನ್ನು ಚಾಮುಂಡಿ ಬೆಟ್ಟದಲ್ಲಿ ನಂದಿ ವಿಗ್ರಹ ತನ್ನದೇ ಆದ ಇತಿಹಾಸ ಹೊಂದಿದೆ. ಚಾಮುಂಡಿ ಬೆಟ್ಟವನ್ನು ಹತ್ತಿ ಇಳಿಯಬಹುದು. ಪ್ರತಿದಿನ ಸ್ಟೆಪ್ಸ್ ಗಳ ಮೂಲಕ ಬೆಟ್ಟವನ್ನು ಹತ್ತಿ ಇಳಿಯುವವರ ಸಂಖ್ಯೆಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮೈಸೂರಿನ ಅಂಬಾ ವಿಲಾಸ ಅರಮನೆಯ ಆವರಣದಲ್ಲಿ 12ಕ್ಕೂ ಪ್ರಸಿದ್ಧ ದೇವಸ್ಥಾನಗಳು ಇವೆ. ದಸರಾ ಬಂದರೆ ಸಾಕು ಅರಮನೆಯ ಆವರಣದ ಶಿವ ದೇವಸ್ಥಾನದ ಹಿಂದಗಡೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಆನೆಗಳ ತಾಣ ಕಾಣಸಿಗುತ್ತದೆ. ಅಲ್ಲಿನ ದಿನಚರಿ ಎಂದರೆ ಆನೆಗೆ ನಿತ್ಯ ಮಜ್ಜನ, ಆಹಾರ ವಿಹಾರ ಜೊತೆಗೆ ಮಾವತರ ಕುಟುಂಬದ ಸದಸ್ಯರು, ಅದನ್ನು ನೋಡುವ ಪ್ರವಾಸಿಗರು ಎಲ್ಲವೂ ಕೂಡ ಸೆಳೆಯುತ್ತದೆ. ಅರಮನೆಗೆ ದಿನಾಲು ಲಕ್ಷಾಂತರ ಪ್ರೇಕ್ಷಕರು ಅರಮನೆಯ ಸೌಂದರ್ಯವನ್ನು ವೀಕ್ಷಿಸುತ್ತಾರೆ. ಅದರಲ್ಲೂ ರಜಾದಿನಗಳಲ್ಲಿ ಸಂಜೆ 7 ರಿಂದ ಒಂದು ಅಥವಾ ಎರಡು ಗಂಟೆವರೆಗೆ ಹಾಕುವ ವಿದ್ಯುತ್ ದೀಪಗಳಿಂದ ಅಲಂಕೃತವಾದ ಅರಮನೆಯನ್ನು ನೋಡುವುದೇ ಒಂದು ರೀತಿಯಲ್ಲಿ ಖುಷಿ ತರುತ್ತದೆ. ಅರಮನೆಯ ಹೊನಲು ಬೆಳಕಿನ ಪ್ರದರ್ಶನವೂ ಕೂಡ ನಿಗದಿತ ಸಮಯದಲ್ಲಿ ನಡೆಯುತ್ತದೆ.

ನಗರದ ಹೊರ ಪ್ರದೇಶಗಳಿಗೆ ಮುಂಜಾನೆ ವಾಯು ವಿಹಾರಕ್ಕೆ ಹೋಗುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಜೊತೆಗೆ ನಗರದ ಎಲ್ಲಾ ಬಡಾವಣೆಗಳಲ್ಲೂ ಕೂಡ ಪತಂಜಲಿ ಯೋಗ ಶಿಕ್ಷಣ ಕೇಂದ್ರದವರು ಉಚಿತವಾಗಿ ಯೋಗಾಸನವನ್ನು ಹೇಳಿಕೊಡುವುದರಿಂದ ಈಗ ಮೈಸೂರು “ಯೋಗನಗರಿ” ಎಂದುಕೂಡ ಪ್ರಸಿದ್ಧಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮೈಸೂರು ಯೋಗದ ತವರಾಗಿದೆ. ಕಾರಂಜಿ ಕೆರೆ, ಕುಕ್ಕರಳ್ಳಿ ಕೆರೆ, ಲಿಂಗಾಂಬುದಿಕೆರೆ ಈಗಲೂ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಮೈಸೂರಿನ ಸಿಟಿ ಬಸ್ ನಿಲ್ದಾಣದಿಂದ ಎಲ್ಲಾ ಬಡಾವಣೆಗೆ, ಗ್ರಾಮಾಂತರ ಪ್ರದೇಶಗಳಿಗೆ ಬಸ್ಸಿನ ಸೌಕರ್ಯವಿದೆ. ಜೊತೆಗೆ ಸಬರ್ ಬಸ್ ಸ್ಟ್ಯಾಂಡ್ ನಿಂದ ಎಲ್ಲಾ ಜಿಲ್ಲೆಗಳಿಗೂ ಕೂಡ ಬಸ್ಸಿನ ಸೌಕರ್ಯವಿದೆ. ಅದೇ ರೀತಿ ರೈಲ್ವೆ ಸೌಕರ್ಯವೂ ಕೂಡ ನಮ್ಮ ಜಿಲ್ಲೆಯ ನಂಜನಗೂಡು, ಕೆ ಆರ್ ನಗರ ತಾಲೂಕುಗಳಿಗೆ ಇದೆ. ಅಲ್ಲದೆ ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು ಮುಂತಾದ ಕಡೆಗೂ ಕೂಡ ರೈಲ್ವೆ ಸಂಪರ್ಕ ದಿಂದಾಗಿ ಮೈಸೂರಿಗೆ ಬರಲು ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಇನ್ನು ಮೈಸೂರಿನಿಂದಾ ಹತ್ತು ಕಿಲೋಮೀಟರ್ ಅಂತರದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣವು ಕೂಡ ಇದೆ. ಬೆಂಗಳೂರಿಗೆ ಇನ್ನಿತರ ಪ್ರದೇಶಗಳಿಗೆ ವಿಮಾನ ಸೌಕರ್ಯ ಕೂಡ ಇದೆ.

ಅನೇಕರು ವಿವಿಧ ಜಿಲ್ಲೆಗಳಿಂದ ಮೈಸೂರಿಗೆ ಬಂದು ಇಲ್ಲೇ ನಿವೇಶನ ಖರೀದಿಸಿ, ಮನೆ ಕಟ್ಟಿಕೊಂಡು ವಾಸ ಮಾಡುವವರ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಇಲ್ಲಿ ಸಂಚಾರ ವ್ಯವಸ್ಥೆಯ ಕಿರಿಕಿರಿ ಇರುವುದಿಲ್ಲ. ಒಂದು ರೀತಿಯಲ್ಲಿ ಯಾವುದೇ ಅನಾಹುತಗಳಿಗೂ ಕೂಡ ಈ ಸ್ಥಳ ಎಡೆ ಮಾಡಿಕೊಡದೆ ಶಾಂತವಾಗಿ ಮೈಸೂರು ಇರುವುದರಿಂದ ಇದನ್ನು ಇಷ್ಟಪಡುವ ಜನರು ಹೆಚ್ಚಿದ್ದಾರೆ.
ನಾನು ಮೊದಲೇ ಹೇಳಿದಂತೆ ಸಾಹಿತ್ಯ, ಸಂಗೀತಕ್ಕೆ ಮೈಸೂರು ಹೇಳಿ ಮಾಡಿಸಿದಂತಿದೆ!. ಅನೇಕ ಪ್ರಖ್ಯಾತ ಕವಿಗಳು, ಲೇಖಕರು ಇಲ್ಲಿ ವಾಸವಾಗಿದ್ದಾರೆ. ಜೊತೆಗೆ ಸಂಗೀತ ವಿದ್ವಾಂಸರು ಕೂಡ ಇಲ್ಲಿದ್ದಾರೆ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ರಾಗ “ದರಬಾರಿ ಕಾನಡಾ ರಾಗ” ಹುಟ್ಟಿದ್ದು ಕೂಡ ಮೈಸೂರಿನಲ್ಲಿ ಎಂಬುದು ವಿಶೇಷ!. ಮೈಸೂರಿನಲ್ಲಿ ಹಾಡಿದ್ದು ಕೂಡ ಪ್ರಥಮ. ಮೈಸೂರು ಅರಮನೆ ದರ್ಬಾರ್ ನಲ್ಲಿ ಈ ರಾಗವನ್ನು ಹಾಡಿದವರು ತಾನ್ಸೇನ್ ರವರು. ಅದರಿಂದಾಗಿ ಈ ರಾಗಕ್ಕೆ “ದರಬಾರಿ ಕಾನಡಾ” ಎಂಬ ಹೆಸರಿಟ್ಟಿದ್ದಾರೆ.

ಇನ್ನು ಕ್ರಿಕೆಟಿಗರಾದ ಜಾವುಗಲ್ ಶ್ರೀನಾಥ್, ಅನಿಲ್ ಕುಂಬಳೆ ಕೂಡ ಮೈಸೂರಿನಲ್ಲಿ ನೆಲೆಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಮೈಸೂರು ಚಲೇಜಾವ್ ಚಳುವಳಿ ಕೂಡ ಪ್ರಸಿದ್ಧವಾಗಿದೆ. ನಮ್ಮ ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಮೈಸೂರಿನ ಅನೇಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಗಾಂಧೀಜಿಯವರು ಕೂಡ ಮೈಸೂರಿನ ಹಲವು ಸ್ಥಳಗಳಿಗೆ ನಂಜನಗೂಡು ತಾಲೂಕಿನ ಹಲವು ಸ್ಥಳಗಳಿಗೆ ಬಂದಿದ್ದಾರೆ. ಹೀಗೆ ಮೈಸೂರು ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಪ್ರವಾಸ ಸ್ಥಳಗಳ ತಾಣವಾಗಿ ಪ್ರಸಿದ್ಧಿ ಪಡೆದಿದೆ.

ಇಷ್ಟೆಲ್ಲಾ ವಿಶೇಷತೆಗಳಿಂದ, ಸ್ಥಳಗಳಿಂದ ಪ್ರಸಿದ್ಧಿ ಪಡೆದಿರುವ ನಮ್ಮ ಮೈಸೂರು ವರ್ಷಕ್ಕೊಮ್ಮೆ ನಡೆಯುವ ವಿಶ್ವವಿಖ್ಯಾತ “ದಸರಾ”ದಲ್ಲಿ ಮತ್ತಷ್ಟು ರಂಗು ಮೂಡಿಸಿಕೊಳ್ಳುತ್ತದೆ! ರಾಜರಾಳಿದ ದಸರಾಕ್ಕು, ಸರ್ಕಾರ ನಡೆಸುವ ದಸರಕ್ಕೂ ಅಜಗಜಾಂತರ ವ್ಯತ್ಯಾಸವಿದ್ದರೂ ಕೂಡ, ದಸರಾ ತನ್ನ ವೈಭವದಲ್ಲಿ ಎಂದಿಗೂ ಕೂಡ ರಾಜಿ ಮಾಡಿಕೊಂಡಿಲ್ಲ. ವರ್ಷದಿಂದ ವರ್ಷಕ್ಕೆ ಹಲವು ಸಮಸ್ಯೆಗಳು ಇದ್ದರೂ ಕೂಡ ಮೈಸೂರು ದಸರಾ ತನ್ನತನವನ್ನು ಮೆರೆದಿದೆ. ಜೊತೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ವಿಶ್ವವಿಖ್ಯಾತ ಮೈಸೂರು ದಸರಾದಜಂಬೂಸವಾರಿ ಪ್ರಸಿದ್ಧಿ ಪಡೆದಿದೆ. ಅನೇಕ ಸಾಂಸ್ಕೃತಿಕ ತಂಡಗಳು, ಜಾನಪದ ತಂಡಗಳು ನಮ್ಮ ನಾಡು- ನುಡಿ ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳ ವಿವಿಧ ಪೆರೇಡ್ಗಳು, ಪೊಲೀಸ್ ವಾದ್ಯ, ಅನೇಕ ಜಿಲ್ಲೆಗಳ ವಿಶೇಷತೆಗಳು, ಎಲ್ಲವುಗಳಿಂದ ದಸರಾದ ಜಂಬೂಸವಾರಿ ಲಕ್ಷಾಂತರ ಜನರೊಟ್ಟಿಗೆ ಕಣ್ಮನ ಸೂರ್ಯಗೊಳ್ಳುತ್ತದೆ. ನಂತರ ಆನೆಯ ಮೇಲೆ ಚಿನ್ನದ ಅಂಬಾರಿಯ ಒಳಗೆ ತಾಯಿ ಚಾಮುಂಡಿ ಎಲ್ಲರಿಗೂ ಆಶೀರ್ವಾದ ಮಾಡುತ್ತಾಳೆ. ಆ ಕ್ಷಣವನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ರೀತಿಯಲ್ಲಿ ರೋಮಾಂಚನವನ್ನುಂಟುಮಾಡುತ್ತದೆ.

ಜೊತೆಗೆ ಅಂದು ವರುಣರಾಯನು ಕೂಡ ಸ್ವಲ್ಪ ಮಟ್ಟಿಗಾದರೂ ತನ್ನ ಅಮೃತ ಸಿಂಚನ ಮಾಡುತ್ತಾನೆ. ಮೈಸೂರಿನ ಅರಮನೆಯ ಮುಂದಿನಿಂದ ಕೆ ಆರ್ ಸರ್ಕಲ್ ಮೂಲಕ ಕೆ ಆರ್ ಆಸ್ಪತ್ರೆ ನಂತರ ಹೈವೇ ಸರ್ಕಲ್ ಮೂಲಕ ಸಾಗಿ ಬನ್ನಿಮಂಟಪ ಪ್ರವೇಶ ಮಾಡುವವರೆಗೂ ಕೂಡ ರಸ್ತೆಯ ಎರಡು ಕಡೆ ಅಪಾರ ಜನಸ್ತೋಮ ತುಂಬಿರುತ್ತದೆ.ಮೈಸೂರಿನ ಅರಮನೆಯ ಮುಂದೆ ಸಾಂಸ್ಕೃತಿಕ ತಾಣಗಳ ಮುಂದೆ ಕಟ್ಟಡಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುವುದೇ ಒಂದು ರೀತಿಯಲ್ಲಿ ಸಂಭ್ರಮ!. ದಸರಾ ವೀಕ್ಷಕ ವಿವರಣೆಯನ್ನು ನಾವು ಮೈಸೂರು ಆಕಾಶವಾಣಿಯ ಮೂಲಕ ಕೇಳುವುದೇ ಒಂದು ರೀತಿಯಲ್ಲಿ ಸೊಗಸು. ಎಲ್ಲಾ ಕಲಾತಂಡಗಳನ್ನು, ಸ್ತಬ್ಧ ಚಿತ್ರಗಳನ್ನು, ವಿಶೇಷತೆಗಳನ್ನು ಅನೇಕ ಉದಾಹರಣೆಗಳ ಮೂಲಕ ಆಕಾಶವಾಣಿಯ ಅಧಿಕಾರಿ/ ಸಿಬ್ಬಂದಿ ವರ್ಗ, ತಂತ್ರಜ್ಞರು ವಿಶ್ವಕ್ಕೆ ಮುಟ್ಟಿಸುತ್ತಾರೆ. ಇದೇ ರೀತಿ ಚಂದನ ದೂರದರ್ಶನ ತಂಡವು ಕೂಡ ಶ್ಲಾಘನೀಯ ಕಾರ್ಯ ಮಾಡುತ್ತದೆ.

ವಿಶ್ವವಿಖ್ಯಾತ ಮೈಸೂರು ದಸರಾದ ಈ ಶುಭ ಸಂದರ್ಭದಲ್ಲಿ ನವರಾತ್ರಿಯ ವೈಭವ ಎಲ್ಲರ ಮನೆ- ಮನ ಸೂರೆಗೊಳ್ಳಲಿ. ಬೆಟ್ಟದ ತಾಯಿ ಚಾಮುಂಡಿ ಎಲ್ಲರಿಗೂ ಆಶೀರ್ವಾದ ನೀಡಲಿ. ಎಂಬುದು ನಮ್ಮೆಲ್ಲರ ಆಶಯ.
ಸಮಸ್ತರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

6 Responses

  1. ಹಚ್. ಎಸ್. ರಾಮು. says:

    ಮೈಸೂರಿನ ನಾಡಹಬ್ಬ ದಸರಾ ಮಹೋತ್ಸವದ ಬಗ್ಗೆ ವಿವರವಾದ ಮಾಹಿತಿಯನ್ನು ಒಳಗೊಂಡ ವಿಸ್ತೃತ ಮತ್ತು ಮನಮುಟ್ಟುವಂತಹ ಬರವಣಿಗೆ. ಶಿವಕುಮಾರ್ ನಿಮಗೆ ಧನ್ಯವಾದಗಳು.

  2. ವಾವ್..ಮೈಸೂರು.. ದಸರ ಎಷ್ಟೊಂದು ಸುಂದರ… ಲೇಖನ..ಸೊಗಸಾಗಿ ಮೂಡಿಬಂದಿದೆ… ಧನ್ಯವಾದಗಳು ಸಾರ್

  3. ಶಂಕರಿ ಶರ್ಮ says:

    ಮೈ ಮನಸ್ಸಿಗೆ ಸಂತಸದ ಭಾವ ನೀಡುವ ಸುಂದರ ನಗರಿ ಮೈಸೂರು ಎಲ್ಲರಿಗೂ ಅಚ್ಚುಮೆಚ್ಚು…ಚಂದದ ಲೇಖನ ನಮ್ಮನ್ನು ಮೈಸೂರು ಸುತ್ತಾಡಿಸಿತು!

  4. ನಯನ ಬಜಕೂಡ್ಲು says:

    ಹೌದು ಮೈಸೂರು ಬಹಳ ಸುಂದರವಾದ ಜಿಲ್ಲೆ. ಅಲ್ಲಿನ ಹವಾಮಾನ, ವಾತಾವರಣವೂ ಬಹಳ ಹಿತ ನೀಡುವಂತದ್ದು. ತುಂಬಾ ಚೆನ್ನಾಗಿದೆ ಸರ್ ಲೇಖನ.

  5. Padma Anand says:

    ಮೈಸೂರಿನ ಸಮಸ್ತ ಸೊಬಗನ್ನೂ ಸುಂದರವಾಗಿ, ಮಾಹಿತಿಪೂರ್ಣವಾಗಿ, ಅಭಿಮಾನಪೂರ್ವಕವಾಗಿ ಕಟ್ಟಿಕೊಟ್ಟಿರುವ ಚಂದದ ಲೇಖನ.

  6. Anonymous says:

    ಶಿವ ಕುಮಾರ್ ಬಹಳಷ್ಟು ಶ್ರಮವಹಿಸಿ ಈ ಲೇಖನ ಸಿದ್ದಗೂಳಿಸಿದ್ದೀರಿ ಮೈಸೂರು ಒಮ್ಮೆ ಸುತ್ತಿ ಬಂದು ಹಾಗಾಯಿತು ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: