ಒಂದು ಗೂಡಿನ ಸುತ್ತ
ಮಳೆಹನಿಗಳ ಸದ್ದು ಅಡಗಿದ್ದರಿಂದ ಸೂರ್ಯ ಮೆಲ್ಲನೆ ಆಕಾಶದಿಂದ ಧರೆಯತ್ತ ಇಣುಕಿದ್ದ. ಅಷ್ಟೇನೂ ಪ್ರಖರವಲ್ಲದ ಮಂದ ಬಿಸಿಲು ಹಿತವಾಗಿ ಭೂಮಿಯನ್ನು ತಬ್ಬಿತ್ತು. ಬೆಳಗಿನ ಎಂಟಕ್ಕೆ ನಾನೂ ಮನೆಯಿಂದ ಹೊರಗೆ ಹೊರಟಿದ್ದೆ. ಎಳೆಬಿಸಿಲಿನಲ್ಲಿ ಹಕ್ಕಿಗಳು ಹಾರಾಟ ನಡೆಸಿದ್ದವು. ಅವುಗಳ ಆ ಹಾರಾಟವನ್ನೇ ನೋಡುತ್ತ ನಿಂತೆ. ಇದ್ದಕ್ಕಿದ್ದಂತೆ ಒಂದು ಹಕ್ಕಿ ದೂರದ ಮರದತ್ತ ಸಾಗಿ ಎಲೆಗಳ ನಡುವೆ ಮರೆಯಾಯಿತು. ಅಲ್ಲಿ ಅದರ ಗೂಡಿರಬಹುದೇನೋ ಎಂದು ಯೋಚಿಸಿದೆ. ಒಣಹುಲ್ಲಿನ ಕಡ್ಡಿಗಳನ್ನು ಕೊಕ್ಕಿನಲ್ಲಿ ಆರಿಸಿ ತಂದು ತುಂಬಿದ ಎಲೆಗಳ ನಡುವೆ ಸುರಕ್ಷಿತವಾದ ಸ್ಥಳವೊಂದನ್ನು ಆಯ್ಕೆಮಾಡಿ ತನ್ನದೇ ಆದ ಗೂಡೊಂದನ್ನು ನಿರ್ಮಿಸಿಕೊಳ್ಳುವ ಕಲೆಯನ್ನು ಪಕ್ಷಿಗಳು ಹೇಗೆ ಕಂಡುಕೊಂಡಿವೆ ಎನ್ನುವುದು ಮಾನವರಾದ ನಮಗೆ ಅರ್ಥವಾಗದ ವಿಷಯ. ಮೇಲ್ನೋಟಕ್ಕೆ ಅದೊಂದು ಚಿಕ್ಕ ಗೂಡು ಎಂದು ನಮಗೆ ಅನ್ನಿಸಿದರೂ ಅದರ ಒಳಗೆ ವಿಶ್ರಾಂತಿಯ ಕೋಣೆಯೂ ಸೇರಿದಂತೆ ಮರಿಗಳನ್ನೂ ಒಳಗೊಂಡಂತೆ ಒಂದು ಸಂಸಾರದ ಸದಸ್ಯರಿಗೆ ಸಾಕಾಗುವ ರೀತಿಯಲ್ಲಿ ತನಗೆ ಬೇಕಾದ ರೀತಿಯಲ್ಲಿ ಅನುಕೂಲತೆಗಳನ್ನು ಹೊಂದಿರುವಂತೆ, ಮುಖ್ಯವಾಗಿ ಗಾಳಿ ಬೆಳಕುಗಳ ಪ್ರವೇಶಕ್ಕೆ ತಡೆಯಾಗದಂತೆ ಗೂಡನ್ನು ನಿರ್ಮಿಸಿಕೊಳ್ಳುವ ಹಕ್ಕಿಗಳ ಜಾಣ್ಮೆಯನ್ನು ಎಷ್ಟು ಪ್ರಶಂಸಿಸಿದರೂ ಅದು ಕಡಿಮೆಯೇ.
ಆ ಕ್ಷಣದಲ್ಲಿ ನಾನೂ ಒಂದು ಹಕ್ಕಿಯಾಗಿ ಹೀಗೆ ಮರದ ಮೇಲೆ ಗೂಡೊಂದನ್ನು ಕಟ್ಟಿ ಅದರಲ್ಲಿ ವಾಸಿಸಬೇಕು ಎನ್ನಿಸಿದರೂ ಮರುಕ್ಷಣದಲ್ಲೇ ಬಾಗಿಲೇ ಇಲ್ಲದ ಆ ಗೂಡು ಸುರಕ್ಷಿತವೇ ಎನ್ನಿಸಿತ್ತು. ಟೈಲರ್‌ಹಕ್ಕಿ ತನ್ನ ಚೂಪಾದ ಕೊಕ್ಕಿನಿಂದ ಎಲೆಗಳನ್ನು ಹೊಲಿಯುತ್ತಲೇ ತನ್ನ ಗೂಡನ್ನು ನಿರ್ಮಿಸಿಕೊಳ್ಳುವ ಕೌಶಲ್ಯವನ್ನು ಗಳಿಸಿಕೊಂಡಿದೆ. ನಮ್ಮದೇ ಆದ ಪುಟ್ಟ ಮನೆಯೊಂದನ್ನು ನಾವೇ ನಿರ್ಮಿಸಿಕೊಳ್ಳಬೇಕೆಂದರೆ ನಾವು ವಾಸ್ತುಶಿಲ್ಪಶಾಸ್ತ್ರವೂ ಸೇರಿದಂತೆ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ನಾಲ್ಕು ವರ್ಷಗಳ ಕಾಲ ಶಿಕ್ಷಣವನ್ನು ಪಡೆಯಬೇಕು. ನಂತರವೂ ಅನುಭವದ ಕೊರತೆ ಮತ್ತು ಇನ್ನಿತರ ಸಮಸ್ಯೆಗಳು ನಮ್ಮನ್ನು ಕಾಡಬಹುದು. ಇಷ್ಟಾದರೂ ಮನೆಗೊಂದು ಮಾಲೀಕತ್ವ, ಸಾಕ್ಷಿಸಹಿತ ಪತ್ರದ ಸೃಷ್ಟಿ, ಅದರ ನೋಂದಣಿ, ಅದಕ್ಕೊಂದು ಉಯಿಲು, ಸ್ವತ್ತು ಹಸ್ತಾಂತರದ ರೀತಿಗೊಳಪಡಿಸುವ ಕಾನೂನಾತ್ಮಕ ಪ್ರಕ್ರಿಯೆಗಳು, ಬಾಡಿಗೆ ಕರಾರು ಪತ್ರ-ಹೀಗೆ ಮನೆಯನ್ನು ಕಾಪಿಟ್ಟುಕೊಳ್ಳುವಜೊತೆಗೆ ಅದರ ಉದ್ದಕ್ಕೂ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತ, ಆಗಾಗ ರಿಪೇರಿಗಳಿಗೆ ಕೈಹಾಕಿ ಸುಣ್ಣ ಬಣ್ಣಗಳಿಂದ ಸಿಂಗರಿಸುತ್ತ ಇದ್ದರೂ ಒಂದು ದಿನ ಹಳೆಮನೆಯೆಂದು ಹೇಳುವ ಜನ ನಮ್ಮ ಉತ್ಸಾಹವನ್ನು ಮತ್ತು ಹೆಮ್ಮೆಯನ್ನು ಕಡಿತಗೊಳಿಸುತ್ತಾರೆ. ಆದರೆ ಪಕ್ಷಿಗಳಿಗೆ ಅಷ್ಟು ಕಷ್ಟಪಟ್ಟು ಕಟ್ಟಿದ ಗೂಡಿನ ಬಗೆಗೆ ಮೋಹ ಮಮಕಾರ ಯಾವುದೂ ಕಾಡಿಸುವುದಿಲ್ಲ. ನಮ್ಮ ನಂತರ ಈ ಗೂಡಿನಲ್ಲಿ ಯಾರು ವಾಸಿಸುತ್ತಾರೆ ಎನ್ನುವ ಯೋಚನೆಯಿಲ್ಲ, ಪವರ್ ಆಫ್ ಅಟಾರ್ನಿಯ ಸೃಷ್ಟಿ, ಮತ್ತೆ ಬಂದು ಇಲ್ಲೇ ವಾಸಿಸಬೇಕೆನ್ನುವ ಆಸೆ, ನನ್ನ ಮರಿಗಳಿಗೇ ಈ ಗೂಡು ಸೇರಬೇಕು ಎಂಬ ಇಚ್ಛೆ ಯಾವುದೂ ಹಕ್ಕಿಗಳನ್ನು ಕಾಡುವುದಿಲ್ಲ. ಮರಿಗಳನ್ನು ಬೆಳೆಸಿದ ನಂತರ ಗೂಡನ್ನು ತೊರೆದು ಹಾರಿಹೋಗುವ ಹಕ್ಕಿಗಳು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ತಿಳಿಸಿದಂತೆ ಸ್ಥಿತಪ್ರಜ್ಞನ ಲಕ್ಷಣಗಳನ್ನು ಹೊಂದಿರುವ ಜೀವಿಗಳು ಎನ್ನಬಹುದು.
ಮಾನವರಾದ ನಾವು ಹಾಗಿರಲಾದೀತೇ? ಆಸೆ ನಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿರುವವರು ನಾವು. ಏನಿದ್ದರೂ ಎಷ್ಟಿದ್ದರೂ ನಮಗೆ ಬೇಕು. ಅದರಲ್ಲೂ ನಮ್ಮದಾಗಿರುವ ಮನೆಯೊಂದು ಬೇಡವೇ? ಕನಸಿನಲ್ಲೂ ಮನೆ ಎಂದು ಕನವರಿಸುವವರು ನಾವು. ಮಾರುಕಟ್ಟೆಯಲ್ಲಿದ್ದಾಗ ಇಬ್ಬರ ನಡುವೆ ನಡೆದ ಸಂಭಾಷಣೆ ಅಪ್ರಯತ್ನವಾಗಿ ಕಿವಿಯ ಮೇಲೆ ಬಿದ್ದಿತ್ತು. ಮನೆ ತೊಗೊಳ್ಳೋಕೆ ಅಂತ ಬ್ಯಾಂಕಲ್ಲಿ ಸಾಲ ಕೇಳಿದೆ, ಈಗ ಸಾಲ ಕೊಡೋಕೆ ಆಗೋದಿಲ್ಲ, ಹದಿನೈದು ದಿನ ಬಿಟ್ಟು ಬನ್ನಿ ಅಂದಿದಾರೆ, ಮನೆ ಮಾರೋವನು-ಬೇಗ ರಿಜಿಸ್ಟರ್ ಮಾಡಿಸ್ಕೊಳ್ಳಿ, ನಾನು ಯುಕೆಗೆ ಹೋಗ್ಬೇಕು-ಅಂತ ಹೇಳ್ತಿದ್ದಾನೆ, ಏನ್ಮಾಡೋದೋ ಗೊತ್ತಾಗ್ತಿಲ್ಲ-ಎಂದವನ ಮಾತಿನಲ್ಲಿ ಸ್ವಂತಮನೆಯಿಲ್ಲವೆನ್ನುವ ನೋವು ಹಣುಕುತ್ತಿತ್ತು ಮಾತ್ರವಲ್ಲ, ತನಗೆ ಮನೆ ಮಾಡಲಾಗುವುದೋ ಇಲ್ಲವೋ ಎನ್ನುವ ಅನುಮಾನವೂ ಕಾಣುತ್ತಿತ್ತು. ಸ್ವಂತದ ಸೂರು ಮಾನವರಾದ ನಮ್ಮೆಲ್ಲರ ಕನಸೂ ಆಗಿದೆ ಎಂದರೆ ಅಚ್ಚರಿಯಲ್ಲ, ಏಕೆಂದರೆ ವಸತಿಸಮಸ್ಯೆಯನ್ನು ಶಾಶ್ವತವಾಗಿ ನೀಗುವ ಸ್ವಂತದ ಮನೆ ಆಹಾರದ ನಂತರದ ನಮ್ಮ ಪ್ರಾಥಮಿಕ ಅಗತ್ಯವಾಗಿದೆ. ಆಸೆಯೇ ದುಃಖಕ್ಕೆ ಮೂಲ ಎನ್ನುವ ಬುದ್ಧನ ನುಡಿ ಸ್ವಂತದ ಸೂರನ್ನು ಹೊಂದುವ ಆಸೆಗೆ ಅನ್ವಯಿಸುವುದಿಲ್ಲ ಎಂಬುದು ನನ್ನ ಭಾವನೆ.
ನಿವೇಶನವನ್ನು ಖರೀದಿಸಿ ಅದರಲ್ಲಿ ಮನೆ ಕಟ್ಟಿಸಲು ಕಷ್ಟವೆಂದು ಭಾವಿಸುವವರು ಕಟ್ಟಿದ ಮನೆಯನ್ನೇ ಖರೀದಿಸಲು ಮುಂದಾಗುತ್ತಾರೆ. ಒಟ್ಟಿನಲ್ಲಿ ನಮ್ಮದೇ ಆದ ಮನೆಯೊಂದಿರಬೇಕು ಎಂಬುದು ಮಾನವರೆಲ್ಲರ ಕನಸು ಮತ್ತು ಆಸೆ. ಆದರೆ ಮನೆ ಹೇಗಿದ್ದರೂ ಸರಿ ಎಂದು ಮಾತ್ರ ಯಾರೂ ಒಪ್ಪುವುದಿಲ್ಲ. ಮನೆ ವಾಸ್ತುಪ್ರಕಾರ ಇರಬೇಕು ಎಂದು ಬಯಸುವವರ ಸಂಖ್ಯೆ ಹೆಚ್ಚೇ ಇದೆ. ಆದರೆ ಗಾಳಿ ಮತ್ತು ಬೆಳಕು ಮನೆಯ ಒಳಗೆ ಪ್ರವೇಶಿಸುವಂತಿರಬೇಕು ಎನ್ನುವವರ ಸಂಖ್ಯೆ ಕಡಿಮೆಯೇ. ತೊಟ್ಟಿಮನೆಗಳಲ್ಲಿ ನಡುವೆ ಇರುವ ಅಂಗಳದಲ್ಲಿ ನಿಂತು ಮಳೆ, ಗಾಳಿ, ಬೆಳಕುಗಳನ್ನು ಆಸ್ವಾದಿಸಬಹುದಾದರೂ ಅದು ಹಳೆಯ ಕಾಲದ ರಚನೆಯೆಂದು ಭಾವಿಸಿ ನವೀನರೀತಿಯಲ್ಲಿ ಮನೆಗಳನ್ನು ಕಟ್ಟಿ ಸಂಭ್ರಮಿಸುತ್ತಾರೆ. ಅದೆಷ್ಟೋ ಮನೆಗಳಲ್ಲಿ ಹಗಲಿನ ಸಮಯದಲ್ಲೇ ಒಳಗೆ ಬೆಳಕಿನ ಅಭಾವ ಕಾಡುವಂತಿರುತ್ತದೆ. ಇದೇ ಯೋಚನೆಯಲ್ಲಿದ್ದಾಗಲೇ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾಗಿದ್ದ ಮನೆಯ ಚಿತ್ರವೊಂದು ನನ್ನ ಗಮನ ಸೆಳೆಯಿತು.
ವಿದೇಶೀ ಕಲಾವಿದನ ಕೈಚಳಕದಿಂದ ಅರಳಿದ್ದ ಆ ಕಲಾಕೃತಿಯನ್ನು ಕಸದ ಬುಟ್ಟಿಯನ್ನು ಸೇರಬೇಕಾಗಿದ್ದ ಗಾಜಿನ ಬಾಟಲ್‌ಗಳನ್ನು ಬಳಸಿ ಮಾಡಿದ್ದು ಎನ್ನುವ ಮಾಹಿತಿಯನ್ನು ಓದಿ ಅಚ್ಚರಿಯೆನಿಸಿತ್ತು. ಒಳಗೆಲ್ಲ ಬೆಳಕೇ ಬೆಳಕು! ಮನೆ ಎಂದರೆ ಹೀಗಿರಬೇಕು ಎನ್ನಿಸಿ ಮತ್ತೊಮ್ಮೆ ನನ್ನ ಮನದಲ್ಲಿ ಮನೆಯ ಕನಸು ಜಾಗೃತಗೊಂಡಿತ್ತು. ಈಗ ಕುಳಿತಲ್ಲಿ ನಿಂತಲ್ಲಿ ನನಗೆ ಗಾಜಿನ ಮನೆಯೇ ಕಾಣುವಂತಾಯ್ತು. ನನ್ನದೂ ಒಂದು ಗಾಜಿನ ಮನೆಯಿದ್ದರೆ ! ನಾನು ಕನಸು ಕಾಣತೊಡಗಿದ್ದೆ. ಗಾಜಿನಮನೆಯಲ್ಲಿ ವಾಸಿಸದಿದ್ದರೆ ಜೀವನವೇ ವ್ಯರ್ಥ ಎನ್ನಿಸಿತು. ಅಂತೂ ಒಂದುದಿನ ನನಗೆ ಗಾಜಿನಮನೆಯಲ್ಲಿ ವಾಸಿಸುವ ಯೋಗ ಲಭಿಸಿತ್ತು. ಸೂರ್ಯೋದಯದೊಂದಿಗೇ ಮನೆಯ ಒಳಗೆ ಬೆಳಕು ಹರಿದಿತ್ತು. ನಿದ್ರೆ ಕಳೆದು ಕಣ್ತೆರೆದ ನನ್ನ ಸಂತೋಷಕ್ಕೆ ಸಂಭ್ರಮಕ್ಕೆ ಕ್ಷಣಕಾಲ ನನ್ನನ್ನೇ ಮರೆತಿದ್ದೆ. ನಾನು ಮರೆತರೂ ನನ್ನೊಳಗಿನ ಕಶ್ಮಲ ಹೊರಬರಲು ಸಿದ್ಧವಾದಾಗ ಶೌಚಾಲಯದತ್ತ ತೆರಳಿದ್ದೆ. ಹೊರಗಿನಿಂದ ಯಾರಾದರೂ ನೋಡುವರೋ ಎಂದು ತಿಳಿಯಲು ಕಮೋಡ್‌ನ ಮೇಲೆ ಕುಳಿತುಕೊಳ್ಳುವ ಮೊದಲು ಹೊರಗೆ ದೃಷ್ಟಿ ಹರಿಸಿದ್ದೆ. ಸದ್ಯ! ಯಾರೂ ಕಾಣಲಿಲ್ಲ. ಶೌಚ ಮುಗಿಸಿ ಬಂದು ಸ್ನಾನಕ್ಕೆಂದು ಬಾಯ್ಲರ್ ಸಂಪರ್ಕದ ಸ್ವಿಚ್ ಒತ್ತಿದೆ. ನೀರು ಬಿಸಿಯಾಗತೊಡಗಿತು. ಈ ವೇಳೆಗೆ ಗಂಟೆ ಎಂಟಾಗಿತ್ತು. ನಾನು ಗಡಿಬಿಡಿಯಿಂದಲೇ ಸ್ನಾನದ ಮನೆಯ ಒಳಹೊಕ್ಕು ಸ್ನಾನದ ನಂತರ ಹಾಕಿಕೊಳ್ಳಬೇಕಾದ ಉಡುಪನ್ನು ಸ್ಟಾಂಡ್‌ಗೆ ಹಾಕಿ ಸುತ್ತ ನೋಡಿದೆ. ಆಗಲೇ ಹೊರಗೆ ಅಕ್ಕಪಕ್ಕದ ಮನೆಯ ಜನರು ಓಡಾಡಲಾರಂಭಿಸಿದ್ದರು. ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡುಹೋಗುವವರು ಅತ್ತಿತ್ತ ನೋಡಿ ನಡೆಯಲಾರಂಭಿಸಿದ್ದನ್ನು ನೋಡಿದ ನನಗೆ ಈಗ ಬಟ್ಟೆ ತೆಗೆಯುವುದಾದರೂ ಹೇಗೆ ಎನ್ನುವ ಸಮಸ್ಯೆ ಶುರುವಾಗಿತ್ತು. ಯಾರಾದರೂ ನಾನು ಸ್ನಾನಮಾಡುತ್ತಿರುವಾಗ ನೋಡಿಬಿಟ್ಟರೆ ಎಂದು ಯೋಚಿಸುತ್ತ ನಿಂತೆ. ಬಿಸಿನೀರು ತಣ್ಣಗಾಗುತ್ತಿತ್ತು. ಏನಾದರೂ ಜನರ ತಿರುಗಾಟ ಮಾತ್ರ ನಿಲ್ಲಲೇಇಲ್ಲ. ಈಗ ಗಾಜಿನಮನೆಯ ಸುಖ ಏನೆಂದು ಅರಿವಾಗಿತ್ತು. ಏನೂ ಮಾಡಲು ತಿಳಿಯದೆ ಕಣ್ಣುಬಿಟ್ಟೆ. ಎಚ್ಚರವಾದಾಗ ಎದುರಿಗೆ ಕಂಡಿದ್ದು ಮಾನವನ್ನು ಉಳಿಸುವ ಇಟ್ಟಿಗೆ ಸಿಮೆಂಟಿನಿಂದ ಕಟ್ಟಿದ ಗೋಡೆ. ಆ ಕ್ಷಣವೇ ಆ ಗೋಡೆಗೆ ನನಗೇ ಅರಿವಿಲ್ಲದಂತೆ ಕೈಮುಗಿದಿದ್ದೆ. ಗಾಜಿನಮನೆಯ ಹುಚ್ಚು ಇಳಿದಿತ್ತು.
–ಲಲಿತ ಎಸ್.
ವಾವ್ ಎಂತಹ ಅದ್ಭುತವಾದ ಕಲ್ಪನಾ ಲೋಕ
ಸೊಗಸಾಗಿದೆ
ತುಂಬಾ ತುಂಬಾ ಸೊಗಸಾದ ಕಲ್ಪನೆ ಅದರ ನಿರೂಪಣೆ… ಧನ್ಯವಾದಗಳು ಗೆಳತಿ ಲಲಿತಾ
THANKS TO ALL OF YOU FOR YOUR ENCOURAGING WORDS
LALITHA S
ಕಲ್ಪನಾ ಲಹರಿ ಓದಿ ಖುಷಿಯಾಯ್ತು… ಗಾಜಿನ ಮನೆಯ ವಾಸದ ಆಸೆ ಕನಸಲ್ಲಿ ನನಸಾಗಿ ಇಕ್ಕಟ್ಟಿಗೆ ಸಿಲುಕಿದ್ದು ನಗು ತರಿಸಿತು.
ಸೊಗಸಾದ ನಿರೂಪಣೆಯೊಂದಿಗೆ ಸುಂದರ ಕಲ್ಪಾನಾ ಲೋಕದಲ್ಲಿ ವಿಹಾರ ಕರೆದೊಯ್ದಿದ್ದೀರಿ. ಅಭಿನಂದನೆಗಳು. ಚಂದವೆನಿಸಿತು.
Thanks to all of u