ಭಾರತ ದೇಶ ಕಂಡ ಇಬ್ಬರು ಧೀಮಂತ ವ್ಯಕ್ತಿಗಳು:- “ಗಾಂಧಿ” ಮತ್ತು “ಶಾಸ್ತ್ರೀಜಿ”.
ನಮ್ಮ ಭಾರತ ದೇಶ ಕಂಡ ಅಪ್ರತಿಮ ಇಬ್ಬರು ನಾಯಕರ ಹುಟ್ಟು ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಭಕ್ತಿ ಪೂರ್ವಕವಾಗಿ ಆಚರಿಸಿದ್ದೇವೆ. ಇಂತಹ ರಾಷ್ಟ್ರ ಭಕ್ತರ ಆಚರಣೆಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ, ವರ್ಷಪೂರ್ತಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕು. “ರಾಷ್ಟ್ರಪಿತ” ಮಹಾತ್ಮ ಗಾಂಧೀಜಿ ಮತ್ತು “ಭಾರತದ ಹುಲಿ” ಎಂದೇ ಪ್ರಸಿದ್ಧಿಯಾದ ಲಾಲ್ ಬಹುದ್ದೂರ್ ಶಾಸ್ತ್ರೀಜಿ ಇವರಿಬ್ಬರನ್ನು ನೆನಪಿಸಿಕೊಳ್ಳಬೇಕು.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಇವರಿಬ್ಬರ ಹೆಸರು ಅಜರಾಮರ.
ಮೊದಲಿಗೆ ಮಹಾತ್ಮ ಗಾಂಧೀಜಿಯವರ ಬಗ್ಗೆ:-
ಮಹಾತ್ಮ ಗಾಂಧೀಜಿ ಅವರು ಭಾರತಕ್ಕೆ ಅಲ್ಲ ವಿಶ್ವಮಟ್ಟದಲ್ಲಿ ಪ್ರಸಿದ್ಧರು. ಸತ್ಯವೇ ದೇವರೆಂದು ನಂಬಿ ಅದರಂತೆ ನಡೆದುಕೊಂಡು, ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಹಲವು ತತ್ವಗಳನ್ನು ಅಳವಡಿಸಿಕೊಂಡು, ತಮ್ಮದೇ ಆದ ವಿಶಿಷ್ಟ ರೀತಿಯ ಚಿಂತನೆಗಳ, ಆದರ್ಶಗಳ, ಮೂಲಕ ಹೊಸ ವ್ಯಕ್ತಿಯಾಗಿ ರೂಪುಗೊಂಡು ಎಲ್ಲರ ಮನೆ- ಮನ ತಲುಪಿದ್ದಾರೆ.ಉಪವಾಸ ಸತ್ಯಾಗ್ರಹ ಅಸಹಕಾರ ಚಳುವಳಿ ಅಹಿಂಸೆ ಇಂತಹ ಹಲವು ಹೋರಾಟಗಳಲ್ಲಿ ಮುಂದಾಳತ್ವ ವಹಿಸಿಕೊಂಡು, ಭಾರತೀಯರಿಗೆ ಸ್ವಾತಂತ್ರ್ಯ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಜೊತೆಗೆ ಸ್ಪೂರ್ತಿಯ ಚಿಲುಮೆಯಂತಾಗಿದ್ದರು. ಸರಳ ವ್ಯಕ್ತಿತ್ವ, ಸರಳ ಜೀವನ, ಸರಳ ಸಜ್ಜನಿಕೆ, ಇವೆಲ್ಲದರಿಂದಾಗಿ ಇವರು ವಿಶ್ವ ಕಂಡ ಮಹಾಪುರುಷರ ಸಾಲಿಗೆ ಸೇರ್ಪಡೆಯಾಗುತ್ತಾರೆ.
ಮಹಾತ್ಮ ಗಾಂಧೀಜಿಯವರ ಜೀವನ ಚರಿತ್ರೆಯ ಬಗ್ಗೆ ಓದೋದೇ ಒಂದು ರೀತಿಯಲ್ಲಿ ಕೌತುಕ!. ಅವರ ಹೋರಾಟದ ಹೆಜ್ಜೆಗಳು ಎಂದೆಂದಿಗೂ ಮಾದರಿ. ಒಬ್ಬ ಮನುಷ್ಯ ಅಂದಮೇಲೆ ತಪ್ಪುಗಳು ಇದ್ದೇ ಇರುತ್ತವೆ. ಮಹಾತ್ಮ ಗಾಂಧೀಜಿಯವರು ಕೂಡ ಬಾಲ್ಯದಲ್ಲಿ ತಮಗರಿವಿಲ್ಲದೆ ಅನೇಕ ತಪ್ಪುಗಳನ್ನು ಮಾಡಿದ್ದರು. ನಂತರದಲ್ಲಿ ಅವರು ಅವನ್ನೆಲ್ಲ ತಿದ್ದಿಕೊಂಡು ಮಹಾತ್ಮ ಎಂದಿನಿಸುತ್ತಾರೆ! ಎಂದರೆ ಇದು ಚಿಂತಿಸಬೇಕಾದ ವಿಷಯ.
ಪ್ರತಿಯೊಬ್ಬರಿಗೂ ಕೂಡ ಬಾಲ್ಯ ಎನ್ನುವುದು ಒಂದು ರೀತಿಯಲ್ಲಿ ಸುವರ್ಣ ಯುಗ!. ಈ ಹಂತದಲ್ಲಿ ನಾವು ಏನೆಲ್ಲಾ ಕಲಿಯುತ್ತೇವೆ……. ಅದು ಮುಖ್ಯವಾಗುತ್ತದೆ. ಆ ಬಾಲ್ಯದ ಕಲಿಕೆ ಒಬ್ಬ ಪರಿಪೂರ್ಣ ವ್ಯಕ್ತಿಯನ್ನು ರೂಪಿಸುವ, ಒಂದು ರೀತಿಯಲ್ಲಿ ತರಬೇತಿ ಸಂಸ್ಥೆಯಂತೆ ಕೆಲಸ ಮಾಡುತ್ತದೆ!. ನಮ್ಮ ಬಾಲ್ಯದ ದಿನಗಳು. ಬಾಲ್ಯದಲ್ಲಿ ನಾವು ನೋಡಿದ, ಕೇಳಿದ, ಓದಿದ, ಅನೇಕ ಘಟನೆಗಳು ನಮ್ಮ ಜೀವನವನ್ನೇ ಬದಲಿಸಿ ಬಿಡುತ್ತವೆ. ಅಂತಹ ಬದಲಾವಣೆಗೆ ಮಹಾತ್ಮ ಗಾಂಧೀಜಿಯವರು ಕೂಡಒಳಪಟ್ಟರು.
ಅವರು ಬಾಲ್ಯದಲ್ಲಿ ವೀಕ್ಷಿಸಿದ “ಸತ್ಯ ಹರಿಶ್ಚಂದ್ರ” ನಾಟಕ ಅವರ ಜೀವನದಲ್ಲಿ ಮಹತ್ವಪೂರ್ಣವಾಗಿ ಬದಲಾವಣೆ ತಂದಿತು. ತಂದೆ ತಾಯಿಗಳು ಹೇಳಿಕೊಟ್ಟ ಕಥೆಗಳು- ಶ್ರವಣ ಕುಮಾರನು ತಂದೆ ತಾಯಿಯನ್ನು ದೇವರೆಂದು ನಂಬಿ ಅವರ ಆಸೆಗಳನ್ನು ಪೂರೈಸಿದ ಕಥೆಗಳು, ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಮಹಾತ್ಮ ಗಾಂಧೀಜಿಯವರ ಜೀವನದ ಮೇಲೆ ಪ್ರಭಾವ ಬೀರಿದವು.
ಗಾಂಧೀಜಿಯವರ ಸಿದ್ಧಾಂತಗಳು ಕೂಡ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಕಾಯಕನಿಷ್ಠ, ಸತ್ಯ ಮತ್ತು ಅಹಿಂಸಾ ತತ್ವ ಇವೆಲ್ಲವಕ್ಕೂ ಅನೇಕರು ಒಳಗಾಗಿದ್ದರು. ಜೊತೆಗೆ ಎಲ್ಲರನ್ನೂ ಸಮಾನವಾಗಿ ಸ್ವೀಕರಿಸುವ ಗುಣ, ಮಹಿಳೆಯರನ್ನು ಗೌರವಿಸುತ್ತಿದ್ದ ಪರಿ, ಯಾವುದೇ ಒಂದು ಸಮಸ್ಯೆಗೆ ಕಂಡುಕೊಳ್ಳುತ್ತಿದ್ದ ಪರಿಹಾರದ ಕ್ರಮ, ಇಂದಿನ ಪ್ರಸ್ತುತ ದಿನಗಳಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.
“ಒಂದು ಶಾಂತಿಮಂತ್ರದಿಂದ ಹಲವರನ್ನು ಗೆಲ್ಲಬಹುದು”- ಎನ್ನುವ ಮಾತಿದೆ. ಅದನ್ನೇ ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ದ್ವೇಷಕ್ಕೆ ಪ್ರೀತಿಯೇ ಮದ್ದು ಎಂದು ನಂಬಿದ್ದರು. ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಮ್ಮ ವಿಚಾರಧಾರೆಗಳನ್ನು ತಿಳಿಸಿ, ಗಮನ ಸೆಳೆಯುತ್ತಿದ್ದರು. ನಮಗೆ ಸಾಮಾನ್ಯವಾಗಿ ಗಾಂಧೀಜಿ ಎಂದರೆ ಇವರು ಸ್ವತಂತ್ರವನ್ನು ತಂದುಕೊಟ್ಟರು ಎನ್ನುವ ಒಂದು ಮಾತಿದೆ. ಅದಕ್ಕೂ ಮೀರಿ ಇವರು ರಾಷ್ಟ್ರ ನಿರ್ಮಾಣದಲ್ಲಿ ಜೊತೆಗೆ ಹಲವು ವ್ಯಕ್ತಿಗಳಿಗೆ ಮಾದರಿಯಾಗಿದ್ದರು. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರು ತಮ್ಮ ಕೊನೆಯ ದಿನಗಳಲ್ಲಿ ಗಾಂಧೀಜಿಯವರ ಪುಸ್ತಕಗಳನ್ನು ಸ್ವಲ್ಪ ಮಟ್ಟಿಗಾದರೂ ದಿನನಿತ್ಯ ಓದುತ್ತಿದ್ದರಂತೆ. ಈ ರೀತಿ ಅನೇಕರಿಗೆ ಗಾಂಧೀಜಿಯವರ ತತ್ವ ಚಿಂತನೆಗಳು ಇಷ್ಟವಾಗುತ್ತಿದ್ದವು.
ಸ್ವದೇಶಿ ವಸ್ತುಗಳ ಮೇಲೆ ಇದ್ದ ಪ್ರೀತಿ ಅಪಾರ. ನಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ವಸ್ತುಗಳನ್ನು ನಾವೇ ಬಳಸಬೇಕು ಇದರಿಂದಾಗಿ ನಾವು ಲಾಭವನ್ನು ಕೂಡ ಪಡೆಯಬಹುದು ಎಂದು ಗುಡಿ ಕೈಗಾರಿಕೆಗಳಿಗೆ ಕರೆ ನೀಡಿದ್ದರು. ನೇಕಾರರ ಸಂಕಷ್ಟವನ್ನು ಅರಿತು ತಾವೇ ಚರಕ ಹಿಡಿದು ನೂಲನ್ನು ನೈದು ಖಾದಿ ಬಟ್ಟೆ ಧರಿಸುತ್ತಿದ್ದರು. ಜೊತೆಗೆ ಸರಳ ಸಜ್ಜನಿಕೆ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು. ಇವತ್ತಿನ ದಿನಗಳಲ್ಲಿ ಇವೆಲ್ಲವನ್ನೂ ಮೈಗೂಡಿಸಿಕೊಳ್ಳುವವರು ಕಡಿಮೆಯಾಗುತ್ತಿದ್ದಾರೆ ಎಂದೇ ಹೇಳಬೇಕು. ಅದರಲ್ಲೂ ನಮ್ಮ ಯುವಜನತೆ ಗಾಂಧೀಜಿಯವರ ಚಿಂತನೆಗಳನ್ನು…… ಅವರ ಬದುಕಿನ ರೀತಿಯನ್ನು….. ಅವರು ಬರೆದ ವಿಚಾರಧಾರೆಗಳನ್ನು…. ಓದಿ ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳುವಂತಾಗಬೇಕು.
ಮುಂದುವರಿದು ಗಾಂಧೀಜಿಯವರು ಮುಖ್ಯವಾಗಿ ಗ್ರಾಮಗಳ ಅಭಿವೃದ್ಧಿಯ ಬಗ್ಗೆ ಸದಾ ಚಿಂತನೆಯಲ್ಲಿ ಇರುತ್ತಿದ್ದರು ನಮ್ಮ ಗಾಂಧೀಜಿಯವರು. ಗ್ರಾಮೀಣಾಭಿವೃದ್ಧಿ ಕೆಲಸಕ್ಕಾಗಿ ಹಲವು ರಚನಾತ್ಮಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಮೊದಲೇ ಭಾರತ ದೇಶ ಹಳ್ಳಿಗಳಿಂದ ಕೂಡಿದ್ದು, ಮೊದಲು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳು ಸಿಗಬೇಕು ಆಗ ಮಾತ್ರ ನಮ್ಮ ದೇಶ ತಾನಾಗಿಯೇ ಅಭಿವೃದ್ಧಿ ಪಡೆಯುತ್ತದೆ ಎಂದು ಎಲ್ಲೆಡೆ ಸಾರುತ್ತಿದ್ದರು.
ಇವತ್ತಿಗೂ ರಾಷ್ಟ್ರದ ವಿವಿಧ ಪಟ್ಟಣ, ನಗರ, ಹಳ್ಳಿ, ಉದ್ಯಾನವನ, ಶಾಲಾ ಕಾಲೇಜು ಆವರಣ, ಹೀಗೆ ಎಲ್ಲಾ ಕಡೆ ಗಾಂಧೀಜಿಯವರ ಪ್ರತಿಮೆ ಇದ್ದೇ ಇರುತ್ತದೆ. ಆಬಾಲರುದ್ಧರಾಗಿಯಾಗಿ ಗಾಂಧೀಜಿಯವರು ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಮಾದರಿಯಾಗುತ್ತಾರೆ.ಈಗಲೂ ಕೂಡ ಹಲವರು ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ಮುಂದೆ ಕುಳಿತು ಧ್ಯಾನಸ್ಥರಾಗಿ ತಮ್ಮ ಮನದಲ್ಲಿ ತಾಂಡವ ನೃತ್ಯ ಮಾಡುತ್ತಿದ್ದ ಅಶಾಂತಿಯನ್ನು ತೊಲಗಿಸಿ ಶಾಂತಿ ಮಂತ್ರವನ್ನು ಜಪಿಸುವಂತೆ ಶಕ್ತಿ ಪಡೆಯುತ್ತಾರೆ!.
ಇವರು ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುತ್ತಿದ್ದರು. ಜೊತೆಯಲ್ಲಿ ದೇವರು ನೆಲೆಸಿದ್ದಾನೆ ಎಂದು ನಂಬಿದ್ದರು ಒಂದು ಗ್ರಾಮದ ಎಲ್ಲಾ ಮನೆಗಳು ಸ್ವಚ್ಚವಾಗಿರಬೇಕು ಎನ್ನುವ ಆಸೆ ಪಡುತ್ತಿದ್ದರು. ಈ ರೀತಿ ಇದ್ದಾಗ ಮಾತ್ರ ಅರ್ಧ ಕಾಯಿಲೆಗಳು ಮನುಷ್ಯನಿಗೆ ಬರುವುದೇ ಇಲ್ಲ ಎನ್ನುವ ದೃಷ್ಟಿ ಇವರಲಿತ್ತು. 2014ರಲ್ಲಿ ಗಾಂಧೀಜಿ ಜನ್ಮದಿನದಂದು ಸ್ವಚ್ಛ ಭಾರತ್ ಅಭಿಯಾನಕ್ಕೆ ರಾಷ್ಟ್ರ ವ್ಯಾಪಿ ಚಾಲನೆಯನ್ನು ನೀಡಲಾಯಿತು. ಜೊತೆಗೆ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಗೆ ಕೂಡ ಚಾಲನೆ ನೀಡಲಾಗಿದೆ. ಈ ಬೃಹತ್ ಯೋಜನೆಯಿಂದಾಗಿ ಭಾರತದ ಪ್ರತಿಯೊಂದು ಹಳ್ಳಿಗಳು ಕೂಡ ಒಂದಲ್ಲ ಒಂದು ರೀತಿಯಲ್ಲಿ ಮೂಲಭೂತ ಸವಲತ್ತುಗಳನ್ನು ಪಡೆದುಕೊಂಡಿವೆ. “ಹಳ್ಳಿಗಳ ಉದ್ಧಾರವೇ ದೇಶೋದ್ಧಾರ” ಎಂಬ ಗಾಂಧೀಜಿಯ ಕನಸು ಬಹುಮಟ್ಟಿಗೆ ನನಸಾಗಿದೆ. ಇಂತಹ ಅನೇಕ ಯೋಜನೆಗಳು ಜಾರಿಯಲ್ಲಿದ್ದು ಹಂತ ಹಂತವಾಗಿ ಅಭಿವೃದ್ಧಿಯತ್ತ ಸಾಗುತ್ತಿವೆ. ಈಗ “ಗಾಂಧಿ ಗ್ರಾಮ ಪುರಸ್ಕಾರ” ಎಂಬ ಪ್ರಶಸ್ತಿಗೂ ಕೂಡ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡುತ್ತ, ಮತ್ತಷ್ಟು ಸ್ಪೂರ್ತಿ ತುಂಬುತ್ತಿದೆ ಇದರಿಂದಾಗಿ ವರ್ಷವೂ ಕೂಡ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಹಲವು ಗ್ರಾಮ ಪಂಚಾಯಿತಿಗಳು ಭಾಜನವಾಗುತ್ತಿವೆ. ಗಾಂಧಿ ಜಯಂತಿಯಂದು ಗಾಂಧಿ ಗ್ರಾಮ ಪುರಸ್ಕಾರ ವನ್ನು ಪ್ರದಾನ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲು ಕೆಲವಾರು ಮಾನದಂಡಗಳನ್ನು ಬಳಸಲಾಗುತ್ತದೆ. ಜನರ ಗುಣಮುಟ್ಟದ ಸುಧಾರಣೆ, ಸಂಪನ್ಮೂಲ ಕ್ರೂಢೀಕರಣ, ಶೌಚಾಲಯ, ಕುಡಿಯುವ ನೀರು, ನೈರ್ಮಲ್ಯ, ರಸ್ತೆ , ಬೀದಿ ದೀಪಗಳ ನಿರ್ವಹಣೆ, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಗ್ರಾಮಗಳಾದ ಅಭಿವೃದ್ಧಿ. ಮನೆ ಮನೆಗಳಿಂದ ಘನತ್ಯಾಜ್ಯ ಸಂಗ್ರಹಣೆ ಹೀಗೆ ಹಲವು ವಿಷಯಗಳ ಸುತ್ತ ಈ ಗಾಂಧಿ ಗ್ರಾಮ ಪುರಸ್ಕಾರ ಒಳಗೊಂಡಿರುತ್ತದೆ.
ಈ ಬಾರಿ 200ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ಗಾಂಧಿ ಗ್ರಾಮ ಪುರಸ್ಕಾರಕ್ಕೆ 5 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ. ಜೊತೆಗೆ ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ, ಸ್ಮರಣಿಕೆ ನೀಡುತ್ತಾರೆ. ಹೀಗೆ ಒಬ್ಬ ಪುಣ್ಯಾತ್ಮನ ಹೆಸರಿನಲ್ಲಿ ಈ ರೀತಿಯ ಪ್ರಶಸ್ತಿಗಳು, ಪುರಸ್ಕಾರಗಳು, ಯೋಜನೆಗಳು ಜಾರಿಯಲ್ಲಿವೆ. ಅವನ್ನೆಲ್ಲ ಸರ್ಕಾರದ ಜೊತೆಗೆ ನಾವುಗಳು ಕೂಡ ಕೈಜೋಡಿಸಿ ಮತ್ತಷ್ಟು ಯಶಸ್ವಿಯಾಗಲು ಸಹಕಾರ ನೀಡಬೇಕಾಗಿದೆ. ಹೀಗೆ ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಅನೇಕ ವಿಚಾರಧಾರೆಗಳೊಂದಿಗೆ ನಮ್ಮ ಮುಂದೆ ಗಾಂಧೀಜಿಯವರು ಸದಾ ನೆನಪಿಗೆ ಬರುತ್ತಾರೆ. ಗಾಂಧೀಜಿಯವರ ಬಗ್ಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹಲವು ಪುಸ್ತಕಗಳು ಬಂದಿವೆ. ನಾಟಕಗಳು ಕೂಡ ಅನೇಕ ಇವೆ. ಅವನ್ನೆಲ್ಲ ನಮ್ಮ ಯುವಜನತೆ ಓದಿ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಗಾಂಧಿ ಜಯಂತಿಗೆ ಒಂದು ಅರ್ಥ ಬರುತ್ತದೆ. ಗಾಂಧೀಜಿಯಂಥ ಪುಣ್ಯಾತ್ಮರು ಮತ್ತೊಮ್ಮೆ ಹುಟ್ಟಿ ಬರಲಿ.
ಇನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ:-
“ಭಾರತದ ಹುಲಿ” ಎಂದೇ ಪ್ರಸಿದ್ಧರಾದ ಶಾಸ್ತ್ರೀಜಿ ರವರು ಭಾರತ ಕಂಡ ಮತ್ತೊಬ್ಬ ಧೀಮಂತ ವ್ಯಕ್ತಿ. ದೇಶದ ಉನ್ನತಿಯೇ ಸರ್ವೋನ್ನತಿ ಎಂದು ಬಲವಾಗಿ ನಂಬಿದ್ದರು ಲಾಲ್ ಬಹುದ್ದೂರ್ ಶಾಸ್ತ್ರೀಜಿ ರವರು. ಪ್ರಧಾನಿ ಪಟ್ಟಕ್ಕೇರಿದರು ಕೂಡ ಸರಳವಾಗಿ ತಮ್ಮ ಅಧಿಕಾರ ನೆರವೇರಿಸಿದವರು. ತಮ್ಮ ಅವಧಿಯಲ್ಲಿ ಅನೇಕ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ. ಇವರು ಹಸಿರು ಕ್ರಾಂತಿ ಮತ್ತು ಶ್ವೇತ ಕಾಂತ್ರಿ ಹರಿಕಾರ. ಭಾರತ ದೇಶದ ಸರ್ವತೋಮುಖ ಅಭಿವೃದ್ಧಿಗೆ ಒಂದಲ್ಲ ಒಂದು ಯೋಜನೆಗಳನ್ನು ರೂಪಿಸುತ್ತಿದ್ದರು. ಅದರ ರೂವಾರಿ ಕೂಡ ಆಗಿದ್ದರು. ಸಹನೆ, ಚಾತುರ್ಯ, ಬುದ್ಧಿವಂತಿಗೆ, ಕೌಶಲಗಳಿಗೆ ಹೆಸರುವಾಸಿಯಾಗಿದ್ದರು. ವರ್ಷವಿದ್ದಾಗಲೇ ತಮ್ಮ ತಂದೆಯನ್ನು ಕಳೆದುಕೊಂಡ ಶಾಸ್ತ್ರಿ ರವರು ಬಾಲ್ಯದಲ್ಲಿ ಆರನೇ ತರಗತಿಯವರೆಗೆ ಅವರ ಊರಿನಲ್ಲಿ ವಿದ್ಯಾಭ್ಯಾಸ ಪಡೆದರು. ನಂತರ ಕಾಶಿಯಲ್ಲಿ ಓದಿದರು. ಭಾರತದ ಪ್ರಧಾನಿಯಾಗಿ ವೈಭವದ ಜೀವನಕ್ಕೆ ಅವರು ಆಸೆಪಡಲಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದಾಗ ವಾರದ ಒಂದು ಹೊತ್ತು ಉಪವಾಸ ಮಾಡುವ ನಿರ್ಧಾರ ಕೈಗೊಂಡರು. ದೇಶವಾಸಿಗಳಲ್ಲೂ ಕೂಡ ಈ ರೀತಿಯ ಉಪವಾಸದ ಬಗ್ಗೆ ಮನವಿ ಮಾಡಿದರು. ದೇಶದ ಜನರು ಸ್ಪಂದಿಸಿದರು. ಸೋಮವಾರದಂದು ಉಪವಾಸ ಮಾಡಲು ಇಡೀ ದೇಶವೇ ಕೈಜೋಡಿಸಿತು!. ಇನ್ನೂ ಭಾರತ ಚೀನಾ, ಭಾರತ- ಪಾಕಿಸ್ತಾನ, ಯುದ್ಧಗಳ ಸಂದರ್ಭದಲ್ಲಿ ಯಾವುದೇ ಹೆದರಿಕೆಯಿಲ್ಲದೆ ದೃಢ ನಿರ್ಧಾರ ತೆಗೆದುಕೊಂಡು ಯಶಸ್ವಿಯಾದ ನಾಯಕ.
ಇಂತಹ ಧೀಮಂತ ವ್ಯಕ್ತಿಗಳು ಹುಟ್ಟಿದ ನಾಡು ನಮ್ಮ ಭಾರತ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಕೂಡ ನಡೆಯುತ್ತಾ ಮಹಾತ್ಮರು ಕಂಡುಂಡ ಅನುಭವಿಸಿದ ವಿಚಾರಧಾರೆಗಳನ್ನು ನಾವು ಕೂಡ ಓದುತ್ತಾ ಅವನ್ನೆಲ್ಲಾ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಅವರ ಚಿಂತನೆಗಳನ್ನು ನಮ್ಮ ಮನದಲ್ಲಿ ಸದಾ ಸ್ಮರಿಸುತ್ತ ನಮ್ಮ ದೇಶದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ದುಡಿಯೋಣ.
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಇಬ್ಬರು..ಶ್ರೇಷ್ಠ… ವ್ಯಕ್ತಿ ಗಳ ಪರಿಚಯ… ಹಾಗೂ ನಿಮ್ಮ ಸದಾಶಯ….ಲೇಖನ ದಲ್ಲಿ ಚೆನ್ನಾಗಿ ಮೂಡಿಬಂದಿದೆ.. ಸಾರ್…
ಇಬ್ಬರು ಧೀಮಂತ ವ್ಯಕ್ತಿಗಳ ಪರಿಚಯ ಚೆನ್ನಾಗಿ ಮೂಡಿ ಬಂದಿದೆ
ಶಾಸ್ತ್ರಿ ಅವರ ಪರಿಚಯದಲ್ಲಿ ಜೈ ಜವಾನ್ ಜೈ ಕಿಸಾನ್ ಎಂಬ ಉಕ್ತಿ ಬಿಟ್ಟುಹೋಗಿದೆ
ಉತ್ತಮ ಪರಿಚಯ ಲೇಖನ
ದೇಶದ ಅಪ್ರತಿಮ ಧೀಮಂತ ವಿಶೇಷ ವ್ಯಕ್ತಿಗಳಾದ ಮಹಾತ್ಮಾ ಗಾಂಧಿ ಮತ್ತು ಶಾಸ್ತ್ರೀಜಿ ಅವರ ಕುರಿತ ಲೇಖನವು ಸೊಗಸಾಗಿ ಮೂಡಿಬಂದಿದೆ.