ಪುಸ್ತಕ ಪರಿಚಯ : ‘ಇಂಜಿಲಗೆರೆ ಪೋಸ್ಟ್’
ಸುನೀತಾ ಕುಶಾಲನಗರ ಇವರ ‘ ಇಂಜಿಲಗೆರೆ ಪೋಸ್ಟ್ ‘ ಎಂಬ ವಿನೂತನ ಶೀರ್ಷಿಕೆ ಹೊತ್ತ , ಆಕರ್ಷಕ ಮುಖಪುಟದ ಕಥಾಸಂಕಲನ ಸಾರಸ್ವತ ಲೋಕಕ್ಕೆ ಚಂದನೆಯ ಉಡುಗೊರೆ. ಹತ್ತು ಕಥೆಗಳ ಗುಚ್ಚದ ಈ ಭಾವ ಪ್ರಪಂಚದಲ್ಲಿ ನೋವು ನಲಿವಿನ ಸಂಗಮವಿದೆ. ಕೊಡಗಿನ ಪ್ರಾಕೃತಿಕ ದುರಂತಗಳನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ ಪರಿಯಂತು ಅಭೂತಪೂರ್ವವಾಗಿದೆ. “ಉಳಿದ ಕಲ್ಲುಮೊಟ್ಟೆ ಬೆಟ್ಟದ ಭಾಗ ಆಗಲೋ ಈಗಲೋ ಎಂದು ದಣಿದು ನಿಂತಿದೆ. ಅದರ ಮರೆಯಿಂದ ಕಾಲ್ಗೆಜ್ಜೆಯ ಗಿಲಕಿ ಕೇಳಿಸದಂತೆ ಕಿಲ ಕಿಲನೆ ನಕ್ಕಂತೆ . ಹೌದು! ಅದು ನೀಲುವಿನದೆ , ಮತ್ತೆ ಮತ್ತೆ ದೃಷ್ಟಿ ನಿಲುಕುವಷ್ಟು ದೂರಕ್ಕೆ ಕಣ್ಣು ಹಾಯಿಸಿದೆ. ಕಲ್ಲುಮೊಟ್ಟೆ ಕಿಸಕ್ಕನೆ ನಕ್ಕಂತೆ .” ಇದು ಕಲ್ಲುಮೊಟ್ಟೆ ಕಥೆಯ ಕೊನೆಯ ಸಾಲುಗಳು .ಇಲ್ಲಿರುವ ಕಥೆಗಳ ಪಾತ್ರಗಳೆಲ್ಲವು ಹೆಚ್ಚಾಗಿ ವಿಧಿಯ ಸುಳಿಗೆ ಸಿಲುಕಿ ತಮಗೆ ಗೊತ್ತಿಲ್ಲದೆ ಬದುಕಿನಲ್ಲಿ ಈಜಾಡುತ್ತಿರುವವರು . ಒಂದು ಸುಸಂಸ್ಕೃತ ಸಂಸಾರದ ದಿಕ್ಕನ್ನೇ ಬದಲಾಯಿಸಿದ ಕಲ್ಲುಮೊಟ್ಟೆ ಕಥೆ ನಮ್ಮ ಮನಸ್ಸಿನಾಳಕ್ಕಿಳಿದುಬಿಡುತ್ತದೆ. ಪ್ರಕೃತಿಯ ಆಟದ ಮುಂದೆ ತ್ರಣ ಸಮಾನ ಮಾನವನ ಗತಿಯ ಕುರಿತು ಕಥೆ ತೇಜೋಹಾರಿಯಾಗಿ ಮೂಡಿ ಬಂದಿದೆ. ಸ್ವಲ ಆಚೆ ಈಚೆ ಕಾಲ ತಪ್ಪಿದ್ದರೆ , ನಾವು ಉಳಿದು ಬಿಡುತ್ತಿದ್ದೆವು ಎಂಬ ಭಾವ ಮೂಡುವುದರಿಂದ ಈ ಕಥೆ ಸಾರ್ಥಕತೆ ಪಡೆದುಕೊಳ್ಳುತ್ತದೆ.
ಇತ್ತೀಚೆಗಿನ ವರ್ಷಗಳಲ್ಲಿ ಮಾನವ ಸಂಕುಲವನ್ನು ಕಂಗೆಡಿಸಿದ ಎರಡು ಭೂತಗಳೆಂದರೆ ಕೊರೋನ ಮತ್ತು ಪ್ರಾಕೃತಿಕ ವಿಕೋಪಗಳು . ಇವುಗಳನ್ನು ಶೋಧಿಸಿ ಕಥೆಯಾಗಿಸಿ ಬದುಕಿನ ವೈಪರೀತ್ಯ ಗಳಿಗೆ ಇನ್ನೂ ಅಚ್ಚರಿ ಮೂಡಿಸಿದ್ದಾರೆ. ಕೊರೋನ ಕಾಲದ ಹಿಂಸೆ ಅನುಭವಿಸಿದವರಿಗೆ ಮಾತ್ರ ಅದರ ಪರಿಪಾಟಲು ತಿಳಿದಿದೆ. ಝಕಾತ್ ಕಥೆಯ ಶಬೀಲ್ ನ ಅನುಭವ ಲೋಕದ ಹಲವಾರು ಜನರ ಅನುಭವವಾಗಿದೆ . ಈ ಕಥೆ ಕೋರೋನವನ್ನು ಹಲವಾರು ನೆಲೆಗಟ್ಟಿನಲ್ಲಿ ಶೋಧಿಸುತ್ತಾ ಹೋಗುತ್ತದೆ. ಜೀವಭಯ ಹುಟ್ಟಿಸುವ ವಾರ್ತೆಗಳಿಂದ ಏನೆಲ್ಲಾ ನಡೆದುಬಿಡುತ್ತದೆ ಎಂಬ ಅರಿವಿನ ಲೋಕವಿದೆ. ವರ್ತಮಾನದ ವಿಚಾರಗಳು , ಭೂತಕಾಲದ ನೆನಪುಗಳು ಹೆಣೆದುಕೊಂಡು ಇಲ್ಲಿನ ಕಥೆಗಳ ಹರಿವು ಮತ್ತು ಅರಿವು ಉತ್ತಮವಾದ ದಿಕ್ಕಿನ ಜಾಡಿನಲ್ಲಿಯೆ ಸಾಗುತ್ತದೆ. ಪ್ರತಿ ಕಥೆಯ ಅಂತ್ಯದಲ್ಲಿ ಸರಳ ವಿಚಾರವೊಂದು ಗಹನವಾಗಿ ನಮ್ಮ ತಲೆಯನ್ನು ಹೊಕ್ಕಿದಂತಾಗುತ್ತದೆ. ಇಂಜಿಲಗೆರೆ ಪೋಸ್ಟ್ ಕಥೆಯಲ್ಲಿ ಊರಿಗೆ ಬಂದ ಹೊಸ ಸೊಸೆ ಶಂಕ್ರಜ್ಜನೊಂದಿಗೆ ಸ್ನೇಹಪರತೆಯಿಂದ ಇದ್ದು ಊರಿನ ಹಿಂದಿನ ಆಗು ಹೋಗುಗಳನ್ನು ತಿಳಿದು, ಜೊತೆಗೆ ಇಂಜಿಲಗೆರೆಯ ಇತಿಹಾಸ ಕೇಳಿ ಕಣ್ಣರಳಿಸಿದ ಈ ಕಥೆ ಅನನ್ಯವಾಗಿದೆ.
ಸ್ವೀಕೃತೆ , ತೂಗುಸೇತುವೆ ಮುಂತಾದ ಕಥೆಗಳು ತನ್ನ ಅನನ್ಯತೆಯಿಂದ ಸಮಾಜದೊಂದಿಗೆ ಮುಖಾಮುಖಿಯಾಗುತ್ತ ಮನಸ್ಸಿನಾಳದಲ್ಲಿ ಉಳಿದು ಬಿಡುತ್ತದೆ . ಕಥೆಯಲ್ಲಿ ಬಹುಮುಖ್ಯ ಎಳೆಯನ್ನು ಹೆಣೆಯುತ್ತಾ ಹೋದ ಕುಸುರಿಗಾರಿಕೆ ಇಲ್ಲಿನ ಕಥೆಗಳ ಹೆಚ್ಚುಗಾರಿಕೆ. ಕಥೆಗಳೆಲ್ಲವು ಲೋಕಾನುಭವದೊಂದಿಗೆ ಸ್ಪಂದಿಸಿ , ನಮಗೊಂದು ಜೀವನ ದರ್ಶನವನ್ನು ಮಾಡಿಸುತ್ತದೆ. ಬಡತನದ ಒಳಹೊರಗಿನ ಜಗತ್ತು ಇಲ್ಲಿ ಅನಾಯಾಸವಾಗಿ ಪಡಿಮೂಡಿದ್ದು ಅವುಗಳಿಂದ ಜೀವನ ಮೌಲ್ಯವನ್ನು ಅರಿವಿಲ್ಲದೆ ನಾವು ಅರಿಯುತ್ತೇವೆ. ಮೇಘಸ್ಫೋಟ , ಪ್ರಶ್ನೆ ಕಥೆಗಳ ನೋವಿನೆಳೆಗಳು ವಾಸ್ತವಕ್ಕೆ ಹತ್ತಿರವಾಗಿ ಅದನ್ನು ಅತಿ ವರ್ಣರಂಜಿತ ಮಾಡದೆ ವಾಸ್ತವವನ್ನು ವಾಸ್ತವದಂತೆ ತೆರೆದಿಟ್ಟಿದ್ದಾರೆ. ಸಮಭಾವದಿಂದ , ಸಮಚಿತ್ತದಿಂದ ಸರಳ ಭಾಷೆಯಲ್ಲಿ ಎದುರಿಗೆ ಕುಳಿತು ಹೇಳಿದಂತೆ ಭಾಸವಾಗುವಂತೆ ಬರೆದಿದ್ದಾರೆ.
ಇಲ್ಲಿರುವ ಕಥೆಗಳ ಸಿದ್ಧಾಂತವೇ ಅನುಕಂಪ , ಪ್ರೀತಿ , ಕರುಣೆ , ಮಮತೆ , ಮಾನವೀಯತೆ ಇದರ ಮೇಲೆಯೇ ಅಭಿವ್ಯಕ್ತಿಗೊಂಡಿದೆ. ಹೆಚ್ಚಿನೆಲ್ಲ ಕಥೆಗಳು ಇದನ್ನು ಪುಷ್ಟೀಕರಿಸುತ್ತದೆ. ಚೇತೋಹಾರಿಯಾದ ಇಲ್ಲಿನ ಕಥೆಗಳೆಲ್ಲವು ಹೃದಯಂಗಮವಾಗಿದೆ. ಕೊರೋನಾದ ಭಯವನ್ನು ಇಲ್ಲಿನ ಓದು ಮುಕ್ತವಾಗಿಸುತ್ತದೆ. ನಡೆದಾಡಿದ ನೆಲವನ್ನು ಕಥೆಗಳಲ್ಲಿ ಧನ್ಯತಾ ಭಾವದಿಂದ ಸ್ಮರಿಸಿದ್ದಾರೆ .ಕಥೆಗಳ ಆಕರ್ಷಣೆ ಹೇಗಿದೆಯೆಂದರೆ ಪ್ರಾರಂಭಿಸಿದರೆ ಮುಗಿಸುವರೆಗು ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ತೇಜಸ್ವಿ ಯವರ ‘ ಅಬಚೂರಿನ ಪೋಸ್ಟಾಫೀಸ್ ‘ ಕೃತಿಯಂತೆ ‘ ಇಂಜಿಲಗೆರೆ ಪೋಸ್ಟ್ ‘ ಕೃತಿಯು ಲೋಕ ಮೆಚ್ಚುವ ಕೃತಿಯಾಗಿ ಹೊರ ಹೊಮ್ಮಲಿ ಎಂಬುದಾಗಿ ನಾವೆಲ್ಲ ಹಾರೈಸೋಣ. ಡಾ . ಆನಂದ ಋಗ್ವೇದಿಯವರ ಮುನ್ನುಡಿಯೊಂದಿಗೆ, ಮಾರುತಿ ದಾಸಣ್ಣರವರ ಬೆನ್ನುಡಿ , ಕೃತಿಯ ಮೌಲ್ಯವನ್ನು ಇನ್ನೂ ಹೆಚ್ಚಿಸಿದೆ.
-ಸಂಗೀತ ರವಿರಾಜ್ , ಚೆಂಬು.
ಧನ್ಯವಾದಗಳು ಸುರಹೊನ್ನೆ
ಪುಸ್ತಕ ಪರಿಚಯ ಚೆನ್ನಾಗಿದೆ…. ಮೇಡಂ
ಧನ್ಯವಾದ ಗಳು ಸುರಹೊನ್ನೆ
Thank you Sangeeta
ಉತ್ತಮವಾದ ಪುಸ್ತಕ ಪರಿಚಯ ವಂದನೆಗಳು
ಚೆನ್ನಾಗಿದೆ ಪುಸ್ತಕ ಪರಿಚಯ
ಹೌದು ಸುನೀತಕ್ಕನ ಪುಸ್ತಕ ಅತಿರಂಜಿತ ವರ್ಣನೆಗಳಿಲ್ಲದ ಸಹಜವಾಗಿದೆ.ಜೀವಪರ ಕತೆಗಳ ಗುಚ್ಛ.
ಸೊಗಸಾದ ಕಥಾಗುಚ್ಛವೊಂದರ ಪರಿಚಯ ಅಷ್ಟೇ ಚೆನ್ನಾಗಿ ಮೂಡಿಬಂದಿದೆ.
ಪುಸ್ತಕಾವಲೋಕನ ಸೊಗಸಾಗಿ ಮೂಡಿ ಬಂದಿದೆ.