ಸಂಭವಾಮಿ ಯುಗೇ ಯುಗೇ
ಕೃಷ್ಣನಾಗುವ ನೆಪದಿ ಕಂಸನಂತಾಡುವರು
ಪುoಸವನಕೂ ಮುಂಚೆ ಪುಂಡಾಟ ಕಲಿತಿಹರು
ಹಂಸ ವರ್ಣದ ಮನಕೆ ಕೆಂಗೆಸರನೆರಚಿಹರು
ಸಂಗ ಸಜ್ಜನರದೇ ಕೊಡಿಸು… ಹರಿಯೇ….
ಬರಿದೆ ನೊಂದವರನೇ ಹುರಿದು ತಿನ್ನುವರು
ಮುರಿದ ಕೋಲನೆ ಮೆರೆಸಿ ಜಗವ ಮೇಸುವರು
ಬಗೆ ಬಗೆಯ ವೇಷದಲಿ ಮರುಳು ಮಾಡಿಹರು
ದುರುಳ ಮುಷ್ಟಿಯ ಬಿಡಿಸಿ… ಕಾಯೋ ಹರಿಯೇ….
ಹರಿಪಾದ ಗತಿಯೆಂದು ಎಂದಿಗರಿಯುವರು
ಹಿಂದು ಮುಂದಿನ ಕರ್ಮ ಎಂತು ಕಳೆಯುವರು
ಚಿಂತೆ ಸಾಗರದಂತೆ ಹೇಗೆ ನೀಗುವರು
ಬೇಗೆ ಬಗೆಹರಿಸುತ್ತೆಲ್ಲ ಪೊರೆಯೊ… ಹರಿಯೇ…
ಸಂಭವವು ಯುಗಕೊಮ್ಮೆ ಪುಣ್ಯ ಪುರುಷರ ಸಂಘ
ಗಮ್ಯ ಯಾನದ ಕುರುಹು ಯುದ್ಧವದು ಆರಂಭ
ಸಿದ್ಧ ಪ್ರತಿ ಕಣ ಕಣವು ವಿಶ್ವ ಗುರು ಯೋಜನೆಗೆ
ನಶ್ವರದ ಕತ್ತಲಲಿ ಹಣತೆ ನೀ…. ಹರಿಯೇ….
-ವಿದ್ಯಾಶ್ರೀ ಅಡೂರ್ , ಮುಂಡಾಜೆ
ಅರ್ಥಪೂರ್ಣ ವಾದ ಕವನ…
ಮುಖವಾಡ ಧರಿಸಿ ಮಂದಿಯನ್ನು ಮರುಳು ಮಾಡುವ ಆಷಾಢಭೂತಿಗಳ ಬಗ್ಗೆ ಸೊಗಸಾದ ಕವನ
ಬಹಳ ಸುಂದರ ಕವನ, ಅರ್ಥಪೂರ್ಣವಾಗಿದೆ.
ಅರ್ಥಪೂರ್ಣ ಚಂದವಾದ ಕವನ ಜೀ ಶುಭವಾಗಲಿ
ತುಂಬಾ ಅರ್ಥಪೂರ್ಣ ವಾಸ್ತವದ ಬರಹ
ಹರಿಯೇ ಬಂದು ನಮ್ಮನ್ನೆಲ್ಲ ಕಾಯಬೇಕಷ್ಡೆ. ಸದಾಶಯದ ಸುಂದರ ಕವನ.
ಮನುಜನ ಮುಖವಾಡ ಕಳಚುವ ಪ್ರಯತ್ನ…ಕವನ ಚೆನ್ನಾಗಿದೆ.