ಜಡಭರತ ಮಹಾಮುನಿ ಎನಿಸಿದ ಬಗೆ…?

Share Button


ಎಲ್ಲವನ್ನೂ ಬಲ್ಲ ಸಕಲಗುಣ ಸಂಪನ್ನರೆಂದು ಮಾನವರಿಗೆ ಕರೆಸಿಕೊಳ್ಳುವುದಕ್ಕೆ ಕಷ್ಟ ಸಾಧ್ಯವೇ ಸರಿ. ಯಾರೂ ಪರಿಪೂರ್ಣರಾಗಲಾರರು. ಹಾಗೆಯೇ ಸಮಯ,ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ; ಬಾಲ್ಯದಲ್ಲೇ ಮಂದಬುದ್ಧಿಯೆನಿಸಿಕೊಂಡವರು ಮುಂದೆ ಚುರುಕು ಬುದ್ಧಿಯವರಾಗಬಹುದು. ಚುರುಕಿನವರು ಬುದ್ಧಿಹೀನರೂ ಸೋಮಾರಿಗಳೂ ಆಗಬಹುದು, ಉತ್ಸಾಹಿಯಾಗಿದ್ದವ ನಿರುತ್ಸಾಹಿಯಾಗಬಹುದು. ಅಂತೆಯೇ ಅರೆಹುಚ್ಚನಂತೆ ಕಾಣಿಸುತ್ತ ಅಪ್ರಯೋಜಕನೆನಿಸಿದವನೊಳಗೆ ಆತ್ಮಜ್ಞಾನ ತುಂಬಿದ್ದು, ಮುಂದೆ ಸಮಾಜೋದ್ಧಾರಕನಾಗಬಹುದು. ಈ ಒಂದು ಹಿನ್ನೆಲೆಯಿಂದ ಪುರಾಣದೊಳಗೆ ಭರತಮುನಿಯ ಚರಿತ್ರೆಯಿದೆ. ಭರತಮುನಿಯೆಂಬ ಮಹಾಯಷಿಯು ತನ್ನ ಬಾಲ್ಯದಲ್ಲಿ ‘ಜಡಭರತ’ನೆಂದು ಕರೆಸಿಕೊಂಡಿದ್ದನು. ಈತನೊಳಗೆ ಬ್ರಹ್ಮಜ್ಞಾನ, ಆಧ್ಯಾತ್ಮ ತತ್ವ ತುಂಬಿಕೊಂಡಿತ್ತೇ..

ಹಿಂದೆ ಅಂಗಿರಸ ಗೋತ್ರದಲ್ಲಿ ಒಬ್ಬ ಬ್ರಾಹ್ಮಣ ಶ್ರೇಷ್ಠನಿದ್ದನು. ಆತನಿಗೆ ಇಬ್ಬರು ಹೆಂಡತಿಯರು. ಹಿರಿ ಹೆಂಡತಿಯಲ್ಲಿ ಸದ್ಗುಣ ಸಂಪನ್ನರಾದ ಒಂಬತ್ತು ಮಂದಿ ಪುತ್ರರಿದ್ದರೆ ಕಿರಿ ಮಡದಿಯಲ್ಲಿ ಒಬ್ಬ ಮಗನೂ, ಒಬ್ಬ ಮಗಳೂ ಇದ್ದರು. ಕಿರಿ ಹೆಂಡತಿಯ ಈ ಮಗನು ಹಿರಿ ಹೆಂಡತಿಯ ಮಕ್ಕಳಂತೆ ಬುದ್ಧಿವಂತನೆನಿಸಲಿಲ್ಲ. ಕೆಲವೊಮ್ಮೆ ಹುಚ್ಚನಂತೆಯೇ ಕೆಲವೊಮ್ಮೆ ಮೂಕನಂತೆಯೂ ಅಂತರ್ಮುಖಿಯಾಗಿ ತನ್ನಲ್ಲೇ ಏನೋ ಚಿಂತಿಸುತ್ತಾ ಕಾಲ ಕಳೆಯುತ್ತಿದ್ದನು. ತಂದೆಯು ಇವನಿಗೆ ‘ಭರತ’ನೆಂದು ನಾಮಕರಣ ಮಾಡಿದ್ದರೂ, ಹಿರಿಯ ಅಣ್ಣಂದಿರು ಇತರರು ಅವನನ್ನು ಜಡಭರತನೆಂದು ಕರೆಯತೊಡಗಿದರು. ತೋರಿಕೆಗೆ ಇತರ ಮಕ್ಕಳಂತೆ ಕಾಣದಿದ್ದರೂ ತಂದೆಯು ಉಳಿದ ಮಕ್ಕಳಲ್ಲಿ ತೋರುವಂತೆಯೇ ಪ್ರೀತಿ ತೋರಿ ಸಾಕುತ್ತಿದ್ದನು. ಉಪನಯನಾದಿ ಬ್ರಾಹ್ಮಣ ಸಂಸ್ಕಾರಗಳೆಲ್ಲವನ್ನೂ ಮಾಡಿದನು. ಪುತ್ರನಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಬೇಕೆಂದು, ವೇದಾಧ್ಯಯನ, ವ್ರತ, ನಿಯಮ ಮುಂತಾದ ಬ್ರಹ್ಮಚರ್ಯಾಶ್ರಮದ ಅವಶ್ಯಕ ನಿಯಮಗಳನ್ನು ಕಲಿಸುತ್ತಲೇ ಇದ್ದನು. ಹೀಗಿರಲು ಪಿತನು ಕಾಲವಶವಾದನು.
ಪತಿಯೊಂದಿಗೆ ಸತಿ ಸಹಗಮನ ಮಾಡಿದಳು. ಇದರಿಂದಾಗಿ ಜಡಭರತನು ತಬ್ಬಲಿಯಾದನು. ಭರತನ ಒಡಹುಟ್ಟಿದವರು ಅವನಿಗೆ ಓದು-ಬರಹ ಕಲಿಸುವ ಆಸಕ್ತಿ ತೋರಲಿಲ್ಲ. ಬದಲಾಗಿ ತಮ್ಮನನ್ನು ಹುಚ್ಚ, ಮೂರ್ಖ, ಅಪ್ರಯೋಜಕ ಎಂದು ಹೀಯಾಳಿಸಿ ಮಾತನಾಡುತ್ತಿದ್ದರು. ಕಂಡ ಕಂಡವರೂ ತಮ್ಮ ಕೆಲಸಗಳನ್ನು ಭರತನಲ್ಲಿ ಹೇಳಿ ಪುಕ್ಕಟೆ ಮಾಡಿಸುತ್ತಿದ್ದರು. ಭರತನಿಗೆ ಮಾನಾಪಮಾನದ ಪ್ರಶ್ನೆಯೇ ಇರಲಿಲ್ಲ. ಯಾರೇ ಹೇಳಿದರೂ ತನ್ನಿಂದಾಗುವ ಕೆಲಸವನ್ನು ಪೂರೈಸಿ ಕೊಡುತ್ತಿದ್ದನು. ಅವರು ಕೊಟ್ಟದ್ದು ಅಮೃತವೆಂದು ಭಾವಿಸಿ ಭರತನು ತಿಂದು ಹೊಟ್ಟೆ ಹೊರೆಯುತ್ತಿದ್ದನು.

ಹೀಗಿರುವಾಗ ಆ ಊರಿನ ಕಳ್ಳರ ನಾಯಕನಿಗೆ ಮಕ್ಕಳಿಲ್ಲವೆಂದು ಕಳ್ಳ ಪುತ್ರಕಾಮನೆಗಾಗಿ ಭದ್ರಕಾಳಿಗೆ ನರಬಲಿಕೊಡಬೇಕೆಂದು ಸಂಕಲ್ಪವಾಯಿತು. ಕಳ್ಳರ ಗುಂಪಿನ ನಾಯಕನ ಸೇವಕರು ನರಬಲಿ ಕೊಡುವುದಕ್ಕಾಗಿ ತಂದಿದ್ದ ಮನುಷ್ಯ ರೂಪಿಪಶುವು ಇದ್ದಕ್ಕಿದ್ದಂತೆ ತಪ್ಪಿಸಿಕೊಂಡು ಹೋಯಿತು. ಸೇವಕರು ನಾಲ್ಕು ದಿಕ್ಕುಗಳಲ್ಲಿ ಹುಡುಕಾಡುತ್ತಾ ಹೋದರು. ಆಗ ಆಕಸ್ಮಾತ್ತಾಗಿ ಹೊಲವನ್ನು ಕಾಯುತ್ತಿದ್ದ ಭರತನನ್ನು ಕಂಡರು. ದಷ್ಟಪುಷ್ಟವಾಗಿದ್ದ ಈತನನ್ನು ಚಂಡಿಕಾ ದೇವಿಯ ಆಲಯಕ್ಕೆ ಎಳೆ ತಂದರು. ಭರತನಿಗಾದರೂ ಇದಾವುದರ ಪರಿವೆಯೂ ಇರಲಿಲ್ಲ. ಸ್ವತಃ ಸಿದ್ಧವಾದ ಜ್ಞಾನಾನಂದಸ್ವರೂಪವಾದ ಆತ್ಮಜ್ಞಾನವು ಆತನಲ್ಲಿದ್ದುದರಿಂದ ದೇಹಾಭಿಮಾನದ ಲವಲೇಶವೂ ಆತನಲ್ಲಿರಲಿಲ್ಲ. ಅವನು ಭಗವಂತನ ಸ್ಮರಣೆಯಲ್ಲಿಯೇ ಇದ್ದನು.

ದರೋಡೆಕೋರನ ಪುರೋಹಿತನು ದೇವಿಮಂತ್ರಗಳಿಂದ ಅಭಿಮಂತ್ರಿಸಿ ಒಂದು ಹರಿತ ಖಡ್ಗವನ್ನೆತ್ತಿದನು. ಭರತನ ಬ್ರಹ್ಮ ತೇಜಸ್ಸಿನ ತಾಪವು ತುಂಬಿ ಭದ್ರಕಾಳಿಯು ಇದ್ದಕ್ಕಿದ್ದಂತೆ ಮೂರ್ತಿಯನ್ನು ಒಡೆದು ಪ್ರಕಟವಾದಳು. ಪುರೋಹಿತನು ಇನ್ನೇನು ರುಂಡವನ್ನು ಕತ್ತರಿಸಬೇಕೆನ್ನುವಷ್ಟರಲ್ಲಿ ದೇವಿಯು ಭಯಂಕರ ರೂಪದಿಂದ ಅಟ್ಟಹಾಸಗೈಯುತ್ತಾ ಖಡ್ಗವನ್ನು ಅವನ ಕೈಯಿಂದ ಕಿತ್ತೊಗೆದು ಭರತನನ್ನುಳಿದು ಇತರ ಪಾಪಿಗಳೆಲ್ಲರ ತಲೆ ಕಡಿದು ಬಿಟ್ಟಳು. ಮಹಾಪುರುಷರಿಗೆ ಅತ್ಯಾಚಾರ, ಅನಾಚಾರವೆಸಗಿದರೆ ಅದು ಮಾಡಿದವರ ಮೇಲೆಯೇ ತಿರುಗಿಬೀಳುತ್ತದೆ ಎಂಬುದು ಇಲ್ಲಿ ಸತ್ಯವಾಯಿತು.

ಒಮ್ಮೆ ಸಿಂಧು-ಸೌವೀರ ದೇಶದ ಒಡೆಯ ‘ರಹೂಗಣ’ ರಾಜನು ಪಲ್ಲಕ್ಕಿಯನ್ನೇರಿ ಹೋಗುತ್ತಿದ್ದಾಗ ದೈವವಶಾತ್ ಜಡಭರತನು ಕಾಣಲು ಸಿಕ್ಕಿದನು. ಗಟ್ಟಿಮುಟ್ಟಾದ ಈತನ ಅಂಗಾಂಗಗಳು ಎತ್ತು-ಕತ್ತೆಗಳಂತೆ ಭಾರವನ್ನು ಹೊರಲು ಯೋಗ್ಯವಾಗಿವೆ’ ಎಂದೆನಿಸಿ ರಹೂಗಣನು  ಇತರ ಬೋಯಿಗಳ ಜೊತೆಯಲ್ಲಿ ಪಲ್ಲಕ್ಕಿಗೆ ಹೆಗಲು ಕೊಡಲು ಬಲತ್ಕಾರವಾಗಿ ಹಿಡಿದು ತಂದು ಪಲ್ಲಕ್ಕಿಯನ್ನು ಹೊರಿಸಿ ಬಿಟ್ಟನು. ಭರತನು ಏನನ್ನೂ ಮರು ಮಾತಾಡದೆ ಪಲ್ಲಕ್ಕಿಯನ್ನು ಹೊತ್ತನು. ಆದರೆ ಇತರ ಬೋಯಿಗಳ ಜೊತೆಯಲ್ಲಿ ಭರತನ ನಡಿಗೆ ಮಂದವಾಗಿತ್ತು. ಕಾರಣ ತನ್ನ ಕಾಲ್ತುಳಿತಕ್ಕೆ ಸಿಕ್ಕಿ ಯಾವ ಜೀವಿಯೂ ಹಿಂಸೆಗೊಳಗಾಗಬಾರದೆಂದು ಜಾಗ್ರತೆಯಿಂದ ನಡೆಯುತ್ತಿದ್ದನು. ಬೇರೆ ಬೋಯಿಗಳ ಜೊತೆಗೆ ಇವನ ನಡಿಗೆ ಸರಿಹೋಗದೆ ಪಲ್ಲಕ್ಕಿ ಅಡ್ಡಾದಿಡ್ಡಿಯಾಗಿ ಹೋಗುತ್ತಿತ್ತು. ಇದನ್ನರಿತ ರಾಜನು ಬ್ರಾಹ್ಮಣನಾದ ಭರತನಿಗೆ ವ್ಯಂಗ್ಯ ತುಂಬಿದ ಮಾತುಗಳನ್ನಾಡಿದನು.“ಅಯ್ಯಾ ನೀನೊಬ್ಬನೇ ಪಲ್ಲಕ್ಕಿ ಹೊತ್ತು ಅಷ್ಟು ದೂರ ನಡೆದೆ! ಪಾಪ! ವೃದ್ಧಾಪ್ಯ ನಿನ್ನನ್ನು ಬಾಧಿಸಿದೆ. ನಿನ್ನ ದೇಹವೂ ಹೇಳಿದಂತೆ ಕೇಳುವುದಿಲ್ಲ’ ಎಂದು ಕಟಕಿಯಾಡಿದನು. ಆದರೆ ಈ ಯಾವ ಮಾತೂ ಅವನ ಕಿವಿಗೆ ಹಾಕಿಕೊಂಡಂತಿರಲಿಲ್ಲ.ಇದರಿಂದ ಬಹಳಷ್ಟು ಕ್ರೋಧಗೊಂಡ ರಾಜನು ‘ಎಲವೋ! ಇದೇನಿದು? ನೀನು ಜೀವಂತವಿದ್ದಿಯೋ ಅಥವಾ ಸತ್ತಿರುವೆಯಾ? ನನ್ನ ಆಜ್ಞೆಯನ್ನು ಉಲ್ಲಂಘಿಸಿದ್ದೀಯಾ ನಿನಗೆ ಈಗಲೇ ಚಿಕಿತ್ಸೆಯನ್ನು ಮಾಡುತ್ತೇನೆ ಆಗ ನಿನ್ನ ಬುದ್ಧಿ ಸರಿಹೋಗಬಹುದು’ ಎಂದನು.

‘ರಹೂಗಣ’ನು ರಾಜನೆಂದ ದುರಭಿಮಾನದಿಂದ ಮನಬಂದಂತೆ ಭಕ್ತಶ್ರೇಷ್ಠನಾದ ಭರತನನ್ನು ತಿರಸ್ಕಾರ ಮಾಡಿದನು. ಆತನ ಅಪಕ್ವವಾದ ಬುದ್ಧಿಯನ್ನು ನೋಡಿದ ಭರತನು `ಎಲೈ ವೀರ ರಾಜನೇ ನೀನು ಹೇಳಿರುವುದರಲ್ಲಿ ಯಥಾರ್ಥವಿದೆ. ಭಾರವೆಂಬ ವಸ್ತು ಇರುವುದಾದರೆ ಅದು ಹೊರುವವನಿಗೆ, ಮಾರ್ಗ ಇರುವುದಾದರೆ ಅದು ನಡೆಯುವವರಿಗೆ ಇದೆ. ದಪ್ಪಗಿರುವುದು, ತೆಳ್ಳಗಿರುವುದು ಶರೀರಕ್ಕಾಗಿಯೇ ಇದೆ.ಆತ್ಮನಿಗೆ ಅಲ್ಲ. ಭಯ, ಧೈರ್ಯ, ಇಚ್ಛೆ, ಮುಪ್ಪು, ನಿದ್ರೆ, ಕ್ರೋಧ, ಸ್ತ್ರೀ ಪುರುಷರತಿ, ಅಹಂಕಾರ, ಮದ ಇವುಗಳೆಲ್ಲ ದೇಹಾಭಿಮಾನದಿಂದಾಗಿ ಉಂಟಾಗುವ ಕ್ರಿಯೆಗಳು. ಇವುಗಳು ಲೇಶಮಾತ್ರವೂ ನನ್ನಲ್ಲಿಲ್ಲ. ರಾಜನೇ ಬದುಕಿದ್ದರೂ ಸತ್ತವನು ಎಂದು ನೀನು ಹೇಳಿದ ಮಾತು ವಿಕಾರಿ ಪದಾರ್ಥಗಳಿವೆಯೋ ಅವೆಲ್ಲವುಗಳಲ್ಲಿ ನಿಯಮಿತ ರೂಪದಿಂದ ಕಂಡು ಬರುತ್ತದೆ. ಏಕೆಂದರೆ ಅವೆಲ್ಲವೂ ಆದಿ ಅಂತ್ಯಗಳು ಇರುವಂತಹವುಗಳು. ರಾಜನೇ ಸ್ವಾಮಿ-ಸೇವಕ-ಭಾವ ಸ್ಥಿರವಾಗಿರುವಲ್ಲಿಯೇ ಆಜ್ಞಾ-ಪಾಲನಾದಿಗಳು ನಿಯಮ ಹೊಂದಬಲ್ಲದು. ನೀನು ರಾಜನಾಗಿದ್ದಿ ನಾನು ಪ್ರಜೆಯಾಗಿದ್ದೇನೆ. ಇದು ವ್ಯವಹಾರ ದೃಷ್ಟಿಯಿಂದಲ್ಲದೆ ಪರಮಾರ್ಥದಿಂದ ಯಾರನ್ನೂ ಸ್ವಾಮಿ, ಯಾರನ್ನು ಸೇವಕನೆಂದು ಹೇಳುವುದು? ಆದರೂ ಅರಸನೇ ನಿನಗೆ ಸ್ವಾಮಿತ್ವದ ಅಭಿಮಾನವಿದ್ದರೆ ಹೇಳು, ನಾನು ನಿನ್ನ ಯಾವ ಸೇವೆಯನ್ನಾದರೂ ಮಾಡುವೆನು. ನಾನು ಉನ್ಮತ್ತ ಜಡನಂತೆ ಇರುತ್ತೇನೆ. ನನಗೆ ಚಿಕಿತ್ಸೆ ನೀಡಿ ನಿನಗೇನು ಸಿಗುವುದಿದೆ? ವಾಸ್ತವವಾಗಿ ನನ್ನ ದೇಹಕ್ಕೆ ನೀನು ಶಿಕ್ಷೆ ಕೊಡಬಹುದೇ ಹೊರತು ಆತ್ಮಕ್ಕಲ್ಲ! ಇದರಿಂದ ವ್ಯರ್ಥವೇ ಆದೀತಲ್ಲ.

PC: Internet

ಭರತನು ಜಡತ್ವ ನೀಗಿ ‘ರಹೂಗಣ’ ರಾಜನಿಗೆ ಯಥಾರ್ಥವಾದ ತತ್ವವನ್ನು ಉಪದೇಶ ಮಾಡುತ್ತಾ ಇದ್ದನು. ಅವನ ದೇಹಕ್ಕೆ ಹಿಡಿದದ್ದ ಜಡತ್ವವು ಈಗ ತೊಲಗಿ ಹೋಗಿತ್ತು. ಸಿಂಧು-ಸೌವೀಪತಿಯಾದ ರಹೂಗಣನು ಅನೇಕ ಯೋಗಗ್ರಂಥಿಗಳಿಂದ ಸಮರ್ಥಿತವೆಂಬಂತಹ ಬ್ರಾಹ್ಮಣೋತ್ತಮನ ವಚನವನ್ನು ಕೇಳಿ ಒಡನೆಯೇ ಪಲ್ಲಕ್ಕಿಯಿಂದ ಇಳಿದು ಭರತ ಮಹಾಮುನಿಯ ಕಾಲಿಗೆ ಬಿದ್ದು ತನ್ನ ಅಪರಾಧಕ್ಕೆ ಕ್ಷಮೆಯನ್ನು ಬೇಡುತ್ತಾ ವಿನೀತನಾದನು.

ಮುಂದೆ ರಹೂಗಣ ರಾಜನು ಆಧ್ಯಾತ್ಮ ವಿಷಯಗಳಿಗೆ ಸಂಬಂಧಪಟ್ಟಂತೆ ತನ್ನೊಳಗೆ ಹುದುಗಿದ್ದ ಸಂಶಯವನ್ನು ಭರತಮುನಿಯಲ್ಲಿ ಕೇಳಿ ಉತ್ತರವನ್ನು ಪಡೆದುಕೊಂಡನು.ಅವುಗಳಲ್ಲಿ ಭವಾಟಿವಿಯ ವರ್ಣನೆ, ಭರತವಂಶದ ವರ್ಣನೆ, ಭುವನಕೋಶದ ವರ್ಣನೆ ಕಿಂಪುರುಷ ವರ್ಷ ಮತ್ತು ಭಾರತ ವರ್ಷಗಳ ವರ್ಣನೆ ಮೊದಲಾದವುಗಳು ಭರತಮಹಾಮುನಿಯು ರಹಗಣ ರಾಜನಿಗೆ ನೀಡಿದ ಉಪದೇಶದಲ್ಲಿ ಅಡಗಿದೆ. ಈ ಮೂಲಕ ಲೋಕಕ್ಕೆ ಪ್ರಸ್ತುತಗೊಂಡಿದೆ.

ವಿಜಯಾ ಸುಬ್ರಹ್ಮಣ್ಯ, ಕುಂಬಳೆ  

5 Responses

  1. Vijayasubrahmanya says:

    ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ವಂದನೆಗಳು.

  2. ನೀವು..ಪುರಾಣ ಕಥೆಗಳನ್ನು ಬರೆಯಾವಾಗ ಅದರ ಹಿನ್ನೆಲೆ ಹೇಳಿ ಆನಂತರ ಕಥೆಗೆ ಬರುತ್ತೀರಲ್ಲ..ಆ ಪ್ರಕ್ರಿಯೆ ನನಗೆ ಬಹಳ ಮುದ ಕೊಡುತ್ತದೆ… ಧನ್ಯವಾದಗಳು ಮೇಡಂ

  3. ಶಂಕರಿ ಶರ್ಮ says:

    ಜಡಭರತನೆಂಬ ಮಹಾಜ್ಞಾನಿಯ ಕುರಿತ ಪೌರಾಣಿಕ ಕಥಾನಿರೂಪಣೆಯು ಬಹಳ ಚೆನ್ನಾಗಿದೆ ವಿಜಯಕ್ಕ.

  4. ನಯನ ಬಜಕೂಡ್ಲು says:

    ಅಪರೂಪದ ಕಥೆಗಳು. ಕೆಲವು ಕತೆಗಳನ್ನು ಎಲ್ಲೋ, ಯಾವಾಗಲೋ ಕೇಳಿದ್ದಿದೆ, ಆದರೆ ಸರಿಯಾಗಿ ನಿಮ್ಮ ಬರಹ ಮತ್ತೆ ಅವನ್ನೆಲ್ಲ ಪರಿಚಯಿಸುತ್ತಿದೆ, ನೆನಪಿಸುತ್ತಿದೆ.

  5. Padma Anand says:

    ಸುಂದರ ಆದ್ಯಾತ್ಮಿಕ ಕಥೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: