ಅವಿಸ್ಮರಣೀಯ ಅಮೆರಿಕ – ಎಳೆ 65

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)

ಜೂನ್ 11ರ ಮಂಗಳವಾರ…ಬೆಳಗ್ಗೆ ಹನ್ನೊಂದು ಗಂಟೆಯ ಸಮಯ… ಹೊಟ್ಟೆ ತುಂಬಿಸಿಕೊಂಡು ಮಹಾನಗರ ವಾಷಿಂಗ್ಟನ್ ಡಿ.ಸಿ. ಯನ್ನು ಸುತ್ತಲು ಹೊರಟಾಗ ನನಗೋ ವಿಶೇಷವಾದ ಕುತೂಹಲ… ಯಾಕೆಂದರೆ, ಹಿಂದಿನ ದಿನ ತಡವಾದ್ದರಿಂದ ಹಾಗೂ ಕತ್ತಲಾದ್ದರಿಂದ ಯಾವುದನ್ನೂ ಸರಿಯಾಗಿ ವೀಕ್ಷಿಸಲು ಆಗಿರಲಿಲ್ಲ. ಈಗಲಾದರೂ ಮನ:ಪೂರ್ತಿ ವೀಕ್ಷಿಸಬಹುದಲ್ಲಾ ಎಂಬ ಆಸೆಯಿಂದ ಒಂದು ವಿಶೇಷವಾದ ಭವನವನ್ನು ನೋಡಲು ಹೊರಟೆವು…

ವೈಟ್ ಹೌಸ್(White House)

ದೇಶದ ಅಧ್ಯಕ್ಷರೊಂದಿಗೆ 535 ಚುನಾಯಿತ ಸದಸ್ಯರು, 9 ಮಂದಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ವಾಸಿಸುವಂತಹ ಈ ವಿಶೇಷ ಭವನದ ರಚನೆಗಾಗಿ 1791ರಲ್ಲಿ 18 ಎಕರೆಗಳಷ್ಟು ಪ್ರದೇಶವನ್ನು ಆಯ್ಕೆ ಮಾಡಲಾಯಿತು. ಈ ಭವನದ ರಚನೆಯ ವಾಸ್ತುಶಿಲ್ಪವನ್ನು  ಬಹಳ ವಿಶೇಷವಾಗಿ ರೂಪಿಸಲೋಸುಗ ಪ್ರಪಂಚದಾದ್ಯಂತ  ಇರುವಂತಹ ವಾಸ್ತುಶಿಲ್ಪಿಗಳಿಗೆ ಬೃಹತ್ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಇದರಲ್ಲಿ ಐರಿಸ್ ಮೂಲದ James Hoban ಎಂಬವರು ವಿಜೇತರಾಗಿ, ಈ ಭವನದ ನಿರ್ಮಾಣ ಕಾರ್ಯವು 1792ರಲ್ಲಿ ಪ್ರಾರಂಭಗೊಂಡು 1800ರಲ್ಲಿ ಮುಕ್ತಾಯಗೊಂಡಿತು. ಈ ಸಮಯದಲ್ಲಿ ಅದರ ಹೊರಗೋಡೆಗೆ ಹಳದಿ ಬಣ್ಣವನ್ನು ಬಳಿಯಲಾಗಿತ್ತು. ಈ ಸಮಯದಲ್ಲಿ ಇದನ್ನು ಅಧ್ಯಕ್ಷರ ಭವನ, ಅಧ್ಯಕ್ಷರ ಅರಮನೆ, ಕಾರ್ಯನಿರ್ವಾಹಕರ ಮಹಲು ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿತ್ತು.  ಆನಂತರ, 1812ರಲ್ಲಿ ನಡೆದ ಜಾಗತಿಕ ಮಹಾಯುದ್ಧದಲ್ಲಿ ಈ ಭವನವು ಬ್ರಿಟಿಷ್ ಸೈನಿಕರ ಕೈಯಿಂದ ಹಾನಿಗೊಳಗಾಯಿತು. ಆ ಸಮಯದಲ್ಲಿ ಭವನಕ್ಕೆ ಬೆಂಕಿ ಹಚ್ಚಿ ಅಮೂಲ್ಯ ಪೀಠೋಪಕರಣಗಳನ್ನು ಹಾಳುಗೆಡವಲಾಯಿತು. ಬಳಿಕ, 1817ರಲ್ಲಿ ಭವನವನ್ನು ರಿಪೇರಿ ಮಾಡಿದಾಗ, ಇದರ ಹೊರ ಗೋಡೆಗಳಿಗೆ ಬಿಳಿ ಬಣ್ಣವನ್ನು ಬಳಿಯಲಾಯಿತು. ಮುಂದೆ 1902ರ ತರುವಾಯದಲ್ಲಿ ಆಗಿನ ಅಧ್ಯಕ್ಷರ ಇಚ್ಛೆಯಂತೆ White House ಎಂದು ಕರೆಯಲಾರಂಭಿಸಿದರು.

ಈ ಭವನವನ್ನು ನೋಡಲು  ಪ್ರತ್ಯೇಕ ನಿಯಮವನ್ನು ರೂಪಿಸಲಾಗಿದೆ. ಅಮೆರಿಕದಲ್ಲಿ ನಾವು ಎಲ್ಲಿರುವೆವೋ, ಆ ಪ್ರದೇಶದ ಚುನಾಯಿತ ಸದಸ್ಯರ ಮೂಲಕ ಮೂರು ತಿಂಗಳ ಮೊದಲೇ ಅಥವಾ ಕಡಿಮೆಯೆಂದರೆ 21 ದಿನಗಳ ಮೊದಲೆ ನಮ್ಮ ಕೋರಿಕೆಯನ್ನು ಸಲ್ಲಿಸಬೇಕಾಗುತ್ತದೆ. ಸರತಿಯಂತೆ ಮೊದಲು ಕೋರಿಕೆ ಸಲ್ಲಿಸಿದವರಿಗೆ ಮೊದಲ ಆದ್ಯತೆ. ದಿನ ಒಂದಕ್ಕೆ ಸುಮಾರು 6,000 ಮಂದಿಗೆ ಮಾತ್ರ ಅವಕಾಶ. ಇಲ್ಲಿಯ ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ.

ಸುಮಾರು 55,000 ಚ.ಅಡಿ ವಿಸ್ತಾರವಾಗಿರುವ ಈ ಭವನದಲ್ಲಿ 132ಕೋಣೆಗಳು, 32ಸ್ನಾನದ ಕೋಣೆಗಳು, ದಿನವಿಡೀ ಇರುವ 5 ಮಂದಿ ಅಡಿಗೆಯವರು,  140ಮಂದಿ ಅತಿಥಿಗಳಿಗೆ ಸಕಲ ಸೌಕರ್ಯಗಳೊಂದಿಗೆ ಆದರೋಪಚಾರದ ವ್ಯವಸ್ಥೆ ಮಾತ್ರವಲ್ಲದೆ, 1000ಮಂದಿಗೆ ಒಮ್ಮೆಲೇ ಯಾವುದೇ ಸಮಯದಲ್ಲೂ ಊಟದ ವ್ಯವಸ್ಥೆಯಿದೆ. ಈ ಅದ್ಭುತ ಭವನದಲ್ಲಿ,  412ಬಾಗಿಲುಗಳು, 147ಕಿಟಿಕಿಗಳು, ಚಳಿಗಾಲದಲ್ಲಿ ಉಪಯೋಗಿಸಲು 28ಅಗ್ಗಿಷ್ಟಿಗೆಗಳು, 7ಕಡೆಗಳಲ್ಲಿ ಮೇಲೇರಲಿರುವ ಮೆಟ್ಟಿಲುಗಳು, 3ಅಡುಗೆ ಕೋಣೆಗಳು,  ಕುಟುಂಬಗಳು ಹಾಗೂ ಅತಿಥಿಗಳಿಗಾಗಿ ಪ್ರತ್ಯೇಕವಾಗಿ 16ಗೃಹಗಳು, 3ಲಿಫ್ಟ್ ಗಳಿವೆ. ಅಲ್ಲದೆ, ಟೆನ್ನಿಸ್ ಕೋರ್ಟ್, ಜಾಗಿಂಗ್ ಟ್ರಾಕ್ ಗಳು, ಈಜುಕೊಳ, ಸಿನಿಮಾಮಂದಿರ ಮಾತ್ರವಲ್ಲದೆ ಬಿಲಿಯರ್ಡ್ಸ್ ಆಡಲು ಅನುಕೂಲವಿದೆ. 6ಅಂತಸ್ತುಗಳುಳ್ಳ ಈ ಪೂರ್ತಿ ಕಟ್ಟಡದ ಹೊರಭಾಗಕ್ಕೆ ಬಳಿಯಲು ಸುಮಾರು 570ಗ್ಯಾಲನ್ ಬಣ್ಣ ಬೇಕಾಗುವುದು!  ಇದರಲ್ಲಿ ಅಧ್ಯಕ್ಷರು ಮಾತ್ರವಲ್ಲದೆ, ಉಪಾಧ್ಯಕ್ಷರು, ಅವರ ಸಿಬ್ಬಂದಿ ವರ್ಗದವರೂ ವಾಸಿಸುವರು.

ಇಲ್ಲಿ ಒಂದು ಬೃಹತ್ ವಸ್ತು ಸಂಗ್ರಹಾಲಯವೂ ಇದೆ. ಈ ಮೊದಲು, ಇಲ್ಲಿಯ ಸುಮಾರು 150ವರ್ಷಗಳಷ್ಟು ಹಳೆಯದಾದ ವಸ್ತುಗಳನ್ನು ಹರಾಜು ಹಾಕಲಾಗುತ್ತಿತ್ತು. 1961ರ ಬಳಿಕ, ಆಗಿನ ಅಧ್ಯಕ್ಷರ ಆದೇಶದಂತೆ, ಇಂತಹ ವಸ್ತುಗಳಿಗಾಗಿ ವಸ್ತು ಸಂಗ್ರಹಾಲಯವನ್ನು ಪ್ರಾರಂಭಿಸಲಾಯಿತು. ಹಿಂದೆ ಭವನದೊಳಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರಲಿಲ್ಲ. ಆದರೆ, 1829ರಲ್ಲಿಆಂಡ್ರ್ಯೂ ಜಾಕ್ಸನ್ ಅವರು ಅಧ್ಯಕ್ಷರಾಗಿ ಆಯ್ಕೆಯಾದಾಗ ಸುಮಾರು 20,000 ಮಂದಿ ಉತ್ಸಾಹೀ ಅಭಿಮಾನಿಗಳು ಭವನದೊಳಕ್ಕೆ ನುಗ್ಗಿ ಬಹು ದೊಡ್ಡ ಗಲಭೆಗೆ ಕಾರಣರಾದರು. ಇದರಿಂದಾಗಿ, ಅಧ್ಯಕ್ಷರು ಒಳಗಿಂದೊಳಗೆ ಅಲ್ಲಿಂದ ಹೋಟೇಲಿನತ್ತ ಪಯಣಿಸಿ ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎನ್ನಲಾಗಿದೆ. ಆ ಬಳಿಕ ಭವನದೊಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಯಿತು. ಪ್ರಸ್ತುತ ಸುಮಾರು ಐನ್ನೂರು ಮೀಟರ್ ದೂರದಿಂದ ಭವನವನ್ನು ವೀಕ್ಷಿಸಬಹುದು.

ವಾಹನ ನಿಷೇಧಿತ ಪ್ರದೇಶದ ಹೊರಗಡೆಯೇ ನಮ್ಮ ವಾಹನವನ್ನು ಇರಿಸಿ, ಸುಮಾರು ಎರಡು ಕಿ.ಮೀ ದೂರ ನಡೆದುಕೊಂಡು ಭವನದತ್ತ ಸಾಗಬೇಕು. ಅಂತೆಯೇ ನಾವು ಅತ್ಯಂತ ದಟ್ಟ ಜನಸಂದಣಿಯ ಮಧ್ಯೆ ನುಸುಳಿಕೊಂಡು ವಿಶಾಲವಾದ ಕಾಲುದಾರಿಯಲ್ಲಿ ಸಾಗುತ್ತಿದ್ದಾಗ, ಅದರ ಪಕ್ಕದಲ್ಲಿ ನಮ್ಮಲ್ಲಿಯಂತೆ ಭವಿಷ್ಯ ಹೇಳುವವರನ್ನು ಕಂಡು ಆಶ್ಚರ್ಯವಾಯ್ತು. ನಾವು ಹೋಗುತ್ತಿದ್ದಂತೆ ರಸ್ತೆಯಲ್ಲಿ ವಿಚಿತ್ರವೊಂದನ್ನು ಕಂಡೆವು. ಸಮವಸ್ತ್ರದಲ್ಲಿದ್ದ ಐದಾರು ಪುಟ್ಟ ಮಕ್ಕಳು, ಅವರ ಜೊತೆ ಇಬ್ಬರು ಮಹಿಳೆಯರು ರಸ್ತೆ ದಾಟುತ್ತಿದ್ದರು. ಸೋಜಿಗದ ವಿಷಯವೆಂದರೆ, ಮಕ್ಕಳನ್ನು ಒಬ್ಬರಿಗೊಬ್ಬರ ಸೊಂಟದ ಮೂಲಕ ನೀಲಿ ಹಗ್ಗದಿಂದ ಕಟ್ಟಲಾಗಿತ್ತು. ಅಲ್ಲದೆ ಅದರ ತುದಿಗಳನ್ನು ಮಹಿಳೆಯರು ಹಿಡಿದುಕೊಂಡಿದ್ದರು. ತುಂಟ ಮಕ್ಕಳು ಎಲ್ಲೆಂದರಲ್ಲಿ ಓಡಿ ತಪ್ಪಿಸಿಕೊಳ್ಳದಂತೆ ಸುರಕ್ಷತೆಗಾಗಿ ಈ ವ್ಯವಸ್ಥೆಯಿದೆ ಎಂದು ನೋಡಿದ ಕೂಡಲೇ ನನಗೆ ಅರ್ಥವಾದರೂ, ಮನದೊಳಗೆ ಏನೋ ನೋವಿನ ಭಾವ ಮೂಡಿತು. ಪ್ರಾಣಿಗಳಂತೆ ಹಗ್ಗದಲ್ಲಿ ಕಟ್ಟಿ ಒಯ್ಯುವುದು ಯಾಕೋ ಸರಿಯೆನಿಸಲಿಲ್ಲ. ಹಿಂದೊಮ್ಮೆ ನಾನು ಯಾವುದೋ ವಿಮಾನ ನಿಲ್ದಾಣದಲ್ಲಿ ಮಗುವೊಂದನ್ನು ಈ ತರಹ ಹಗ್ಗದಲ್ಲಿ (ನಾಯಿ ಮರಿಯಂತೆ) ಹಿಡಿದುಕೊಂಡು ಹೋಗುವುದು ನೋಡಿದಾಗ ಸಂಕಟ ಪಟ್ಟಿದ್ದು ನೆನಪಾಯಿತು. ಇಲ್ಲಿ ಮಕ್ಕಳನ್ನು ಗದರಿಸಿ ಹೊಡೆಯುವುದು ಅಪರಾಧವಾದ್ದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ತರಹದ ವ್ಯವಸ್ಥೆಯೂ ಸರಿಯೇನೋ ಅನ್ನಿಸಿದುದು ಸುಳ್ಳಲ್ಲ.

ನಾನು ಗಮನಿಸಿದಂತೆ, ಈ ಪ್ರದೇಶದಲ್ಲಿ ಅತಿ ವಿರಳ ಬಹುಮಹಡಿ ಕಟ್ಟಡಗಳಿವೆ. ಬೀದಿಯ ಇಕ್ಕೆಲಗಳಲ್ಲಿ ಸೊಗಸಾದ ಹಸಿರು ಮರಗಳು ಬಿಸಿಲಿಗೆ ತಂಪನೆಯ ನೆರಳನ್ನು ನೀಡಿವೆ. ಅಲ್ಲಿಗೆ ತಲಪಿದಾಗ, ಭವನದ ಆವರಣದೊಳಗೆ ಹೋಗುವ ದ್ವಾರಗಳನ್ನೆಲ್ಲಾ ಮುಚ್ಚಲಾಗಿತ್ತು..ಸರದಿಯಂತೆ ನಿಶ್ಚಿತ ಸಂಖ್ಯೆಯ ಜನರನ್ನು ಮಾತ್ರ ಒಳಗೆ ಬಿಡಲಾಗುತ್ತಿತ್ತು… ಹಾಗೆಯೇ ನಾವು ನಮ್ಮ ಸರದಿಗಾಗಿ ಕಾಯಬೇಕಾಗಿ ಬಂತು. ನಮ್ಮ ಸರದಿ ಬಂದ ತಕ್ಷಣ ಭದ್ರತಾಪಡೆಯವರು ನಮ್ಮ ಬಳಿ ಇದ್ದ ವಿವರಗಳನ್ನು ಪರಿಶೀಲಿಸಿ ಒಳಬಿಟ್ಟರು. ಅದು ಕೂಡಾ, ಒಮ್ಮೆಗೆ ಒಬ್ಬರು ಮಾತ್ರ ಒಳಹೋಗಬಹುದಾದಂತಹ ಇಕ್ಕಟ್ಟಾದ ಜಾಗವನ್ನು ಅದಕ್ಕಾಗಿಯೇ ನಿರ್ಮಿಸಿದ್ದರು.

ಭವನದ ಆವರಣದೊಳಗೆ ಹೋಗುತ್ತಿದ್ದಂತೆಯೇ, ಮುಂಭಾಗದಲ್ಲಿರುವ ಬಹಳ ವಿಶಾಲವಾದ ರಸ್ತೆಯಲ್ಲಿ ಜನರ ಓಡಾಟ, ಎಲ್ಲಾ ಕಡೆಗಳಲ್ಲಿಯೂ ಹೂಗಿಡಗಳು, ಮರಗಳು, ಮಕ್ಕಳ ನಲಿದಾಟ, ಅಲ್ಲಲ್ಲಿ ನೆರಳಿನಡಿಯಲ್ಲಿ ಕುಳಿತುಕೊಳ್ಳಲು ಸೊಗಸಾದ ಸಿಮೆಂಟಿನ ಆಸನಗಳು ನೋಡಲು ಚೇತೋಹಾರಿಯಾಗಿತ್ತು. ನಾನಂದುಕೊಂಡಂತೆ ಕಟ್ಟುನಿಟ್ಟಾದ ಗಂಭೀರ ವಾತಾವರಣ ಎಲ್ಲೂ ಕಾಣಲಿಲ್ಲ. ಈಗಾಗಲೇ ಸಾಕಷ್ಟು ನಡೆದು ಬಂದ ಆಯಾಸವನ್ನು ಪರಿಹರಿಸಲು ಅಲ್ಲಿಯ ಒರಗು ಬೆಂಚುಗಳಲ್ಲಿ ಬೀಸುವ ತಂಗಾಳಿಗೆ ಮೈಯೊಡ್ಡಿ ಸ್ವಲ್ಪ ಹೊತ್ತು ಕುಳಿತು ಮುಂದುವರಿದೆವು.


ಆಹಾ…ಮುಂಭಾಗದಲ್ಲಿಯೇ ಕಾಣಿಸುತ್ತಿದೆ ಜಗತ್ಪ್ರಸಿದ್ಧ ವೈಟ್ ಹೌಸ್… ಶುದ್ಧ ಬಿಳಿ ಬಣ್ಣದ ಮೈಹೊತ್ತು! ಭವನದ ಮೇಲೆ ಎತ್ತರಕ್ಕೆ ಹಾರುವ ರಾಷ್ಟ್ರಧ್ವಜವು ಭವನಕ್ಕೆ ವಿಶೇಷ ಮೆರುಗನ್ನು ನೀಡಿತ್ತು. ಎದುರು ಭಾಗದಲ್ಲಿರುವ ವಿಶಾಲವಾದ ಹುಲ್ಲುಹಾಸು, ಕಾರಂಜಿಗಳು ನಯನ ಮನೋಹರವಾಗಿದ್ದವು. ಅನತಿ ದೂರದಲ್ಲಿ ಹಾಕಿದ್ದ ಬಲವಾದ ಕಬ್ಬಿಣದ ಬೇಲಿಯಾಚೆಯಿಂದ ಭವನವನ್ನು ನೋಡುವ ಅವಕಾಶ ನಮ್ಮದು… ಇದು ನನಗೆ ಸ್ವಲ್ಪ ನಿರಾಶೆಯನ್ನುಂಟು ಮಾಡಿದ್ದಂತೂ ನಿಜ. ಭವನದ ಅಂದ ಚಂದಗಳು ದೂರದ ವೀಕ್ಷಣೆಗೆ ಸ್ಪಷ್ಟವಾಗಿ ಕಾಣದಾಯಿತು. ನಾವು ಪ್ರವಾಸಿಗಳೆಲ್ಲರೂ ಅತ್ಯಂತ ಕುತೂಹಲದಿಂದ ಬೇಲಿಯ ಮೇಲಿನಿಂದಲೇ ಜೋತು ಬಿದ್ದು, ಜನರ ಗುಂಪಿನ ಮಧ್ಯೆ ಇಕ್ಕಟ್ಟಾದ ಜಾಗದಲ್ಲಿ ಇಣುಕಿ  ನೋಡಿ ತೃಪ್ತಿ ಪಟ್ಟುಕೊಳ್ಳುತ್ತಿದ್ದೆವು. ನಾವಿದ್ದ ಸ್ಥಳ ಮತ್ತು ಭವನದ ನಡುವಿನಲ್ಲಿ ಬಹಳ ವಿಶಾಲವಾದ ರಸ್ತೆಯು ಮೈಚಾಚಿ ಮಲಗಿತ್ತು…. ಅದರೊಳಗೆ ಯಾರೂ ನುಸುಳದಂತೆ ಎಲ್ಲಾ ಕಡೆಗಳಿಂದಲೂ ಭದ್ರವಾದ ಪಹರೆ. ಆ ರಸ್ತೆಯಲ್ಲಿ ಕಪ್ಪು ಸಮವಸ್ತ್ರಧಾರಿಗಳಾದ ಸುಮಾರು ಹದಿನೈದು ಮಂದಿ ಭದ್ರತಾಪಡೆಗಳು ಒಮ್ಮೊಮ್ಮೆ ಓಡುತ್ತಾ, ಇನ್ನೊಮ್ಮೆ ಜೋರಾಗಿ ನಡೆಯುತ್ತಾ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದರು. ಇದು ಮೋಜೆನಿಸಿದರೂ, ಬಳಿಕ ಅದರ ಬಗ್ಗೆ ವಿಚಾರಿಸಿದಾಗ, ಅದು ಅಲ್ಲಿಯ ಕ್ಷಣ ಕ್ಷಣದ ಕಾವಲಿನ ರೀತಿಯೆಂದು ತಿಳಿಯಿತು. ನಾವಿದ್ದಾಗ ಅಲ್ಲಿಗೆ ಒಂದು ವಿಶೇಷವಾದ ಹೆಲಿಕಾಪ್ಟರ್ ಬಂದುದು ನಮ್ಮ ಇನ್ನೊಂದು ಸಂಭ್ರಮಕ್ಕೆ ಕಾರಣವಾಯಿತು ಎನ್ನಬಹುದು. ನಾವು ನಿಂತಲ್ಲಿ ಹಿಂದುಗಡೆಗೆ ಸಣ್ಣದಾದ ಗುಡಾರವೊಂದರಲ್ಲಿ ಕೆಲವರು, ತಮ್ಮ ಕೋರಿಕೆಗಳನ್ನು ಬರೆದು ಪ್ರದರ್ಶನ ಮಾಡುತ್ತಿರುವುದು ಕಂಡು ಬಹಳ ಆಶ್ಚರ್ಯವಾಯ್ತು…ದೇಶದ ಅಧ್ಯಕ್ಷರ ನಿವಾಸದ ಎದುರಿಗೇ ಚಳುವಳಿ!!

ಅದಾಗಲೇ ನಡು ಮಧ್ಯಾಹ್ನ… ಬಿಸಿಲು ತನ್ನ ಪ್ರತಾಪವನ್ನು ತೋರಿಸುತ್ತಿತ್ತು. ನಾವು ಊಟದ ಚಿಂತನೆಯೊಂದಿಗೆ, ಮರದ ನೆರಳಿನಡಿಯಲ್ಲಿರುವ ಆಸನಗಳಲ್ಲಿ ಕುಳಿತು ನಮ್ಮೊಡನಿದ್ದ ಡಬ್ಬಗಳನ್ನು ಖಾಲಿ ಮಾಡಿದೆವು. ಮುಂದಕ್ಕೆ ಅಲ್ಲಿಯ ಇನ್ನೊಂದು ಬಹು ಮುಖ್ಯವಾದ, ಅದ್ಭುತ ಸ್ಥಳಕ್ಕೆ ಭೇಟಿ ಕೊಡಲು ಉತ್ಸಾಹದಿಂದಲೇ ಹೊರಟೆವು… ಆಗಲೇ ಮಧ್ಯಾಹ್ನ ಗಂಟೆ ಎರಡು….  

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:   http://surahonne.com/?p=38758

-ಶಂಕರಿ ಶರ್ಮ, ಪುತ್ತೂರು. 

6 Responses

  1. ನಯನ ಬಜಕೂಡ್ಲು says:

    Nice

  2. Anonymous says:

    ಪ್ರವಾಸ ಕಥನ ಎಂದಿನಂತೆ ಓದಿಸಿಕೊಂಡು ಹೋಯಿತು..ಶಂಕರಿ ಮೇಡಂ..

  3. ಶಂಕರಿ ಶರ್ಮ says:

    ಧನ್ಯವಾದಗಳು

  4. Padma Anand says:

    ಜಗತ್ತಿನ ದೊಡ್ಡಣ್ಣ ಅಮೆರಿಕೆಯ ಅಧ್ಯಕ್ಷರ ನಿವಾಸವಾದ ವೈಟ್‌ ಹೌಸಿನ ಸಂಪೂರ್ಣ ಮಾಹಿಯನ್ನು ತಿಳಿಸಿಕೊಟ್ಟಿತು, ಈ ಸಲದ ಪ್ರವಾಸೀ ಕಥನ.

  5. Sakshi Devaraddi says:

    ಕಾಮೆಂಟರಿಯಂತೆ ಶ್ವೇತಾಂಬರಿಯನ್ನು ಪರಿಚಯಿಸಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: