ವಾಟ್ಸಾಪ್ ಕಥೆ 35: ಜೀವನವನ್ನು ಇಂದೇ ಜೀವಿಸಿ ಆನಂದಿಸೋಣ.
ಒಬ್ಬ ರೈತನು ತನ್ನ ಹೊಲದ ಅಂಚಿನುದ್ದಕ್ಕೂ ಮಾವಿನ ಗಿಡಗಳನ್ನು ನೆಟ್ಟಿದ್ದನು. ಅವುಗಳು ಬೆಳೆದು ಮರಗಳಾಗಿ ಕಾಯಿಗಳಿಂದ ತುಂಬಿದ್ದವು. ಅವೆಲ್ಲ ಬಲಿತಮೇಲೆ ಕಿತ್ತು ಹಣ್ಣುಮಾಡುವ ಸಲುವಾಗಿ ಒಂದು ಕೋಣೆಯಲ್ಲಿ ನೆಲ್ಲುಹುಲ್ಲನ್ನು ಹಾಸಿ ಕಾಯಿಗಳನ್ನು ಅದರ ಮೇಲೆ ಹರಡಿ ಮತ್ತೆ ಮೇಲೆ ಹುಲ್ಲನ್ನು ಒತ್ತಾಗಿ ಮುಚ್ಚಿದನು. ಒಂದು ವಾರ ಕಳೆದ ನಂತರ ಕೋಣೆಯನ್ನು ಪ್ರವೇಶಿಸುದ್ದಂತೆಯೇ ಅವನ ಮೂಗಿಗೆ ಮಾಗಿದ ಹಣ್ಣಿನ ವಾಸನೆ ‘ಘಂ’ ಎಂದು ಅಡರಿತು. ಖುಷಿಯಾಗಿ ಮೇಲಿನ ಹುಲ್ಲನ್ನು ಸರಿಸಿ ನೋಡಿದ. ಎಂಟುಹತ್ತು ಹಣ್ಣುಗಳು ಹದವಾಗಿ ಕಳಿತಿರುವುದು ಕಾಣಿಸಿತು. ಅವುಗಳು ಆ ದಿನವೇ ತಿನ್ನಲು ಸಿದ್ಧವಾಗಿದ್ದವು. ಆದರೆ ಹಾಗೆಯೇ ಮೂಲೆಯಲ್ಲಿದ್ದ ಐದಾರು ಹಣ್ಣುಗಳು ಆಗಲೇ ಅಲ್ಲಲ್ಲಿ ಸ್ವಲ್ಪ ಭಾಗ ಕೊಳೆಯಲು ಶುರುವಾಗಿದ್ದವು. ರೈತ ಆಲೋಚಿಸಿದ. ಈ ಭಾಗಶಃ ಕೊಳೆತ ಹಣ್ಣುಗಳ ಚೆನ್ನಾಗಿರುವ ಭಾಗಗಳನ್ನು ಈ ದಿನ ಉಪಯೋಗಿಸೋಣ. ಮಾಗಿದ ಹಣ್ಣುಗಳನ್ನು ನಾಳೆ ತಿನ್ನಬಹುದು ಎಂದು ಕೊಳೆಯಲು ಪ್ರಾರಂಭಿಸಿದ ಹಣ್ಣುಗಳಲ್ಲಿ ಚೆನ್ನಾಗಿರುವ ಭಾಗಗಳನ್ನು ಕತ್ತರಿಸಿ ತಿಂದನು. ಹದವಾಗಿದ್ದ ಹಣ್ಣುಗಳನ್ನು ಎತ್ತಿಟ್ಟುಕೊಂಡನು.
ಮಾರನೆಯ ದಿನ ಕೋಣೆಯ ಬಾಗಿಲು ತೆರೆದು ಪರೀಕ್ಷಿಸಿದಾಗ ಮತ್ತೆ ಎಂಟು ಹತ್ತು ಹಣ್ಣುಗಳು ಹದವಾಗಿದ್ದವು, ಹಿಂದಿನ ದಿನ ಮಾಗಿದ್ದವೆಂದು ಎತ್ತಿಟ್ಟುಕೊಂಡಿದ್ದ ಹಣ್ಣುಗಳಲ್ಲಿ ಕೆಲವು ಬಾಗಗಳು ಕೊಳೆಯಲು ಪ್ರಾರಂಭವಾಗಿತ್ತು. ರೈತ ”ಅಯ್ಯೋ ಇವನ್ನು ಹೀಗೇ ಬಿಟ್ಟರೆ ವ್ಯರ್ಥವಾಗುತ್ತವೆ” ಎಂದುಕೊಂಡು ಮತ್ತೆ ಕೊಳೆತ ಭಾಗಗಳನ್ನು ತೆಗೆದು ಹಾಕಿ ಚೆನ್ನಾಗಿರುವುದಷ್ಟನ್ನೇ ಉಪಯೋಗಿಸಿದ. ಹದವಾಗಿದ್ದ ಹಣ್ಣುಗಳನ್ನು ನಾಳೆಗಿರಲೆಂದು ಹಾಗೇ ಬಿಟ್ಟ. ಮತ್ತೆ ಮಾರನೆಯ ದಿನವೂ ಅದೇ ರೀತಿ ಪುನರಾವರ್ತನೆಯಾಯಿತು. ಪ್ರತಿದಿನವೂ ಭಾಗಶಃ ಕೊಳೆತಿದ್ದ ಹಣ್ಣುಗಳನ್ನೇ ತಿಂದನೇ ಹೊರತು ಹದವಾಗಿ ಮಾಗಿದ್ದ ಹಣ್ಣುಗಳನ್ನು ತಿನ್ನಲೇ ಇಲ್ಲ. ಒಟ್ಟು ಹಾಕಿದ್ದ ಹಣ್ಣಗಳು ಹೀಗೇ ಖಾಲಿಯಾದವು.
ಪ್ರತಿದಿನ ಚೆನ್ನಾಗಿರುವುವನ್ನು ನಾಳೆಗೆಂದು ಮುಂದೂಡಿ ಅವನು ಒಳ್ಳೆಯ ಹಣ್ಣುಗಳನ್ನು ತಿನ್ನುವ ಅವಕಾಶವನ್ನೇ ಕಳೆದುಕೊಂಡ. ಅವನೇನಾದರೂ ಮೊದಲನೆಯ ದಿನವೇ ಕೊಳೆತ ಹಣ್ಣುಗಳನ್ನು ಬೇರ್ಪಡಿಸಿ ಬಿಸಾಡಿ ಚೆನ್ನಾಗಿ ಮಾಗಿದ ಹಣ್ಣುಗಳನ್ನೇ ಉಪಯೋಗಿಸಿದ್ದಿದ್ದರೆ ದಿನವೂ ಅವನಿಗೆ ಒಳ್ಳೆಯ ಹಣ್ಣುಗಳನ್ನೇ ತಿನ್ನುವ ಅವಕಾಶ ಒದಗುತ್ತಿತ್ತು. ಅದನ್ನವನು ನಾಳೆಗೆ ಎಂದಂದುಕೊಂಡು ಕಳೆದುಕೊಂಡ.
ನಮ್ಮಲ್ಲಿಯೂ ಇಂತಹುದೇ ಸ್ವಭಾವ ಸಹಜವಾಗಿರುತ್ತದೆ. ನಾಳೆಗಿರಲಿ ಎಂದು ಇಂದು ಜಿಪುಣತನ ಮಾಡಿ ಕೂಡಿಡುತ್ತೇವೆ. ಮತ್ತೆ ಅದನ್ನು ಉಪಯೋಗಿಸಲು ಅವಕಾಶ ಒದಗುವುದಿಲ್ಲ. ನಾಳೆಯ ಆಸೆಯಿಂದ ಇಂದು ಅನುಭವಿಸಬಹುದಾದ ಸುಖಾನುಭವವನ್ನು ಕಳೆದುಕೊಳ್ಳುತ್ತೇವೆ. ರುಚಿಕರವಾದ ಭೋಜನ, ಕಟ್ಟಿಸಿದ ಮನೆ, ಇತರರು ನಮಗೆ ಕೊಟ್ಟ ಉಡುಗೊರೆಗಳು ಮುಂತಾದುವುಗಳ ಉಪಯೋಗವನ್ನು ನಾವು ಮುಂದೂಡುತ್ತಲೇ ಬಂದು ಕೊನೆಗೆ ಅವಾವುದನ್ನೂ ಅನುಭವಿಸದೆ ಬರಿಯ ಆಸೆಯ ಮರೀಚಿಕೆಯಾಗಿಯೇ ಉಳಿಯುವುದುಂಟು, ಜೊತೆಗೆ ಒಳ್ಳೆಯ ಸಮಾಜ ಮುಖಿ ಕಾರ್ಯಗಳನ್ನೂ ನಾಳೆ ನಾಳೆಯೆಂದು ಮುಂದೂಡುತ್ತಾ ಕೊನೆಗೆ ಮಾಡುವ ಅವಕಾಶವನ್ನು ಕಳೆದುಕೊಳ್ಳುವುದೂ ಉಂಟು.
ಭಗವಂತನು ಮನಗೆ ಜೀವನದಲ್ಲಿ ನೀಡಿದ ಅವಕಾಶದಲ್ಲಿ ನಾವು ಮಾಡಿದ ಕೆಲಸಗಳಿಂದ ಬರುವ ಲಾಭವನ್ನು ನಾವೂ ಅನುಭವಿಸಿ ಇತರರಿಗೂ ಸಾಧ್ಯವಿದ್ದರೆ ಹಂಚಲು ಪ್ರಯತ್ನಿಸಬೇಕಾದದ್ದು ಧರ್ಮ. ಜೀವನ ವ್ಯರ್ಥವಾಗದಂತೆ ಆನಂದವನ್ನು ಅನುಭವಿಸೋಣ. ಭವಿಷ್ಯದ ಕನಸಲ್ಲಿ ಇಂದಿನ ಸುಖವನ್ನು ಕಳೆದುಕೊಳ್ಳದಿರೋಣ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಚೆನ್ನಾಗಿದೆ ಕಥೆ .ಹಾಗೆ ಮಾಡುವರು .ತರಕಾರಿಯನ್ನು ಹಾಳಾದುದೇ ಮಾಡುವರು .ಒಳ್ಳೇದು ನಾಳೆಗೆ ಎಂದು ಇರುವರು ..
ಧನ್ಯವಾದಗಳು… ಆಶಾನೂಜಿ..ಅವರಿಗೆ
Very nice
ಕಟು ಸತ್ಯ…
ಕಥೆ ಚೆನ್ನಾಗಿದೆ
ನಾಗರತ್ನ ಮ್ಯಾಮ್ ಕಥೆ ತುಂಬಾ ಅರ್ಥಪೂರ್ಣವಾಗಿದೆ. ನಾವೆಲ್ಲ ಮಾಡೋದೇ ಹೀಗೆ.
ಗೆಳತಿ ಮಮತಾ ಧನ್ಯವಾದಗಳು
ಧನ್ಯವಾದಗಳು ನಯನಮೇಡಂ ಗೆಳತಿ ವೀಣಾ ಹಾಗೂ ಪದ್ಮಿನಿ ಮೇಡಂ
ನಾವೆಲ್ಲ ಹೆಂಗಸರು ಮಾಡುವ ಕೆಲಸವೇ ಇದು!
ಉತ್ತಮ ಸಂದೇಶಯುಕ್ತ ಸುಂದರ ಕಥೆಯು ಬಹಳ ಚೆನ್ನಾಗಿದೆ ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ