ಕಾದಂಬರಿ : ‘ಸುಮನ್’ – ಅಧ್ಯಾಯ 19
(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)
ಆರುಶಿ
ಆರು ತಿಂಗಳ ವೀಸಾ ಇದ್ದರೂ ಸಂಜು ಮನೆಯಲ್ಲಿ ಎರಡು ತಿಂಗಳು ಸಂದೀಪ ಮನೆಯಲ್ಲಿ ಎರಡು ತಿಂಗಳು ಇದ್ದು ಅವರಮ್ಮ ಅಪ್ಪ ಮರಳಲು ಕಾತುರರಾದರು. ಸುಮನ್ ಒಬ್ಬಳೇ ಇರುವಳು ಎಂದು ಹೆತ್ತ ಕರುಳು ಮಿಡಿಯತೊಡಗಿತು. ಸರಿ ಪ್ರವಾಸ ಸಾಕು ಎಂದು ಭಾರತಕ್ಕೆ ಮರಳಿದರು. ನಾಲ್ಕು ತಿಂಗಳ ನಂತರ ಮಗಳನ್ನು ಮನೆಯ ಬಾಗಿಲಲ್ಲಿ ನೋಡಿ ಇಬ್ಬರೂ ಅತ್ತು ಬಿಟ್ಟರು. ಸುಮನ್ ಕೂಡ ಅತ್ತಳು. ಅವರನ್ನು ನೋಡಿ ಲಕ್ಷ್ಮಿಯೂ ಅತ್ತಳು. ಸಾವರಿಸಕೊಂಡು ಒಳಗೆ ಬಂದರು. ಸ್ನಾನ, ಕಾಫಿ ಊಟ ಆದ ಮೇಲೆ ಸೂಟಕೇಸಿನಿಂದ ಒಂದೊಂದಾಗಿ ಸಾಮಾನು ಹೊರತೆಗೆದರು. ಸಂಜು ಅಕ್ಕನಿಗೆ ಲ್ಯಾಪಟಾಪ್ ಕಳುಹಿಸಿದ್ದ, ಸಂದೀಪ ಡಿಜಿಟಲ್ ಕ್ಯಾಮರಾ. ಗಿರಿಜಮ್ಮ ಹಾಗೂ ಸರೋಜಮ್ಮನಿಗೆ ಮೊಬೈಲ್ ಫೋನ್ ಬಂದಿತ್ತು. ಲಕ್ಷ್ಮಿಗೆ ಸ್ವೇಟರ್, ಆವಳ ಮೊಮಕ್ಕಳಿಗೆ ತರಾವರಿ ಬಟ್ಟೆಗಳು, ಅವಳ ಮಗನಿಗೆ ಮೊಬೈಲ್ ಎಲ್ಲಾ ಬಂದಿತ್ತು. ವಾರವಿಡೀ ತಂದ್ದಿದ ಸಾಮಾನುಗಳನ್ನು ಹೊರತೆಗೆದು ಎಲ್ಲರಿಗೂ ಕೊಟ್ಟು ಅವರ ಪ್ರವಾಸದ ಬಗ್ಗೆ ಹೇಳಿ ಸಂತೋಷಪಟ್ಟರು ರಾಜಲಕ್ಷ್ಮಿ. ಸುಮನ್ ಕಾಲೇಜಿಗೆ ಹೋಗಿದ್ದಾಗ ಗಿರಿಜಮ್ಮ ಹಾಗೂ ಸರೋಜಮ್ಮ ಅವರಿಂದ ಮಗಳ ಬಗ್ಗೆ ವಿಚಾರಿಸಿದರು. ಲಕ್ಷ್ಮಿ ಅವಳ ವರದಿ ಒಪ್ಪಿಸಿಯಾಗಿತ್ತು. ಅವರು ಅವಳಿಗೆ ತಂದ ಸ್ವೇಟರ್ ಹಾಕಿಕೊಂಡು ಸಂತೋಷಪಟ್ಟಿದ್ದೂ ಆಗಿತ್ತು. ಸುಮನ್ ಸ್ವಲ್ಪ ಗೆಲುವಾಗಿರುವ ಹಾಗೆ ಕಾಣಿಸಿತು ಇಬ್ಬರಿಗೂ. ಏನೋ ನಿರ್ಣಯ ಮಾಡಿರಬಹುದು ಎಂದು ಅನಿಸದೇ ಇರಲಿಲ್ಲ.
ಅವರ ನಿರೀಕ್ಷೆ ಸುಳ್ಳಾಗಲಿಲ್ಲ. ಒಂದು ದಿನ ಸುಮನ್ ತಾನು ಕಲೆ ಹಾಕಿದ ಮಾಹಿತಿಯನ್ನು ಅವಳ ತಂದೆಯ ಮುಂದೆ ಇಟ್ಟು ತನ್ನ ನಿರ್ಧಾರವನ್ನು ತಿಳಿಸಿದಳು. ಅಲ್ಲೆ ಇದ್ದ ಅವಳಮ್ಮ ತಬ್ಬಿಬ್ಬಾದರು. ಆದರೆ ಅವಳಪ್ಪ ಅವಳು ಕಲೆ ಹಾಕಿರುವ ಮಾಹಿತಿಯನ್ನು ನೋಡೇ ಅರ್ಥ ಮಾಡಿಕೊಂಡಿದ್ದರು. ಅವಳ ನಿರ್ಧಾರ ದೃಡವಾಗಿತ್ತು ಎಂದು. ಸುಮನಳನ್ನು ವಿಧ ವಿಧವಾಗಿ ಅವಳ ನಿರ್ಧಾರದ ಬಗ್ಗೆ ವಿಚಾರಿಸಿದರು. ಸೂಕ್ಷ್ಮವಾಗಿ ಮರುಮದುವೆಯ ಬಗ್ಗೆ ಕೇಳಿದರು. ಆದರೆ ಸುಮನ್ ಅದನ್ನು ಖಚಿತವಾಗಿ ನಿರಾಕರಿಸದಳು. ಕೊನೆಗೆ ಸುಮ್ಮನಾದರು. ಅವಳು ಕೊಟ್ಟ ಮಾಹಿತಿಯನ್ನು ಓದಿ ಅರ್ಥ ಮಾಡಿಕೊಂಡರು. ತಮ್ಮ ಸಂದೇಹಗಳನ್ನು ಶ್ರೀಧರ ಮೂರ್ತಿಯ ಬಳಿ ಚರ್ಚಿಸಿ ಬಗೆಹರಿಸಿಕೊಂಡರು. ಕೊನೆಗೆ “ಹೌದು ಯಾಕಾಗಬಾರದು?” ಎಂದು ತಮ್ಮ ಹೆಂಡತಿಯನ್ನು ಸಮಾಧಾನಪಡಿಸಿದರು. ನಾವಾದ ಮೇಲೆ ಅವಳಿಗೆ ಆಸರೆ ಅವಳ ನಿರ್ಧಾರದಲ್ಲಿದೆ ನೋಡು ಎಂದು ಹೆಂಡತಿಯನ್ನು ಒಪ್ಪಿಸಿದರು.
ಇತ್ತ ಸೆಮಿಸ್ಟರ್ ಮುಗಿಯಿತು. ಸುಮನ್ ಪ್ರಾಜೆಕ್ಟ್ ರಿಪೋರ್ಟನ್ನು ಸುರೇಶ ಅವರಿಗೆ ತೋರಿಸಿ ಕಾಲೇಜಿಗೆ ಒಪ್ಪಿಸಿದಳು. ಅವರು ಅದರ ಒಂದು ಪ್ರತಿಯನ್ನು ಐ.ಐ.ಎಸ್.ಸಿಯ ತಮ್ಮ ಗೆಳೆಯನಿಗೆ ಕಳುಹಿಸಿದರು. ಓದಿನ ಮಧ್ಯದಲ್ಲೂ ನಿಷ್ಟೆಯಿಂದ ಪಾಠ ಮಾಡಿದ್ದಳು ಸುಮನ್. ಅವಳು ಹೇಳಿಕೊಟ್ಟ ವಿಷಯಗಳ ಫಲಿತಾಂಶವನ್ನು ಸುರೇಶ ಪ್ರಾಂಶುಪಾಲರ ಮುಂದೆ ಇಟ್ಟು ಅವಳಿಗೆ ಸಿನಿಯರ್ ಅಧ್ಯಾಪಕರ ಹುದ್ದೆಗೆ ಶಿಫಾರಸ್ಸು ಮಾಡಿದರು. ಒಂದೇ ತಿಂಗಳಲ್ಲಿ ಸುಮನಳ ಪ್ರಾಜೆಕ್ಟ್ ವೈವಾ ಆಯಿತು. ಇನ್ನೊಂದು ತಿಂಗಳಲ್ಲಿ ಫಲಿತಾಂಶವೂ ಬಂದಿತು. ಅಂದು ಸುರೇಶ ಅವಳ ಕೈಗೆ ಅವಳ ಪ್ರಮೋಷನ್ ಪತ್ರ ಕೈಗಿತ್ತರು. ಸುಮನ್ ಗಂಟಲುಬ್ಬಿ ಬಂತು ಅವರ ಅಭಿಮಾನಕ್ಕೆ. ಕಣ್ಣೀರು ತಡೆದು “ಥ್ಯಾಂಕ್ ಯು ಸರ್” ಎಂದು ಹೇಳಿ ಮನೆಗೆ ಬಂದಳು. ಅವಳಮ್ಮ ಅದನ್ನು ದೇವರ ಮುಂದೆ ಇಟ್ಟು ತುಪ್ಪದ ದೀಪ ಹಚ್ಚಿದರು.
**
ಸಂತೋಷದ ಸಮಾಚಾರ ಹೊತ್ತು ಸುಮನ್ ಏನೋ ಹುಷಾರಿಲ್ಲವೆಂದು ತನ್ನ ಆಸ್ಪತ್ರೆಯನ್ನೇ ಸೇರಿದ ಲತಾಳನ್ನು ನೋಡಲು ಹೊರಟಳು. ಆಸ್ಪತ್ರೆಯ ಒಳಗೆ ಕಾಲಿಟ್ಟಾಗ ಸಂಜೆ ಬಿಸಲಿಗೆ ಸುಮನಳ ಮುಖ ಕೆಂಪಾಗಿತ್ತು. ಅವಳನ್ನು ಗುರುತಿಸಿದ ನರ್ಸಮ್ಮ “ಬನ್ನಿ ಮೇಡಂ ಲತಾ ಮೇಡಂ ಇಲ್ಲಿದ್ದಾರೆ” ಎಂದಳು. ಸುಮನ್ ಕಣ್ಣುಗಳು ಅವಳ ಕೈಯಲ್ಲಿದ್ದ ಮಗುವಿನ ಮೇಲೆ ನೆಟ್ಟಿದ್ದವು. ಕೆಂಪು ಬಿಳಪು ಮಿಶ್ರಿತ ಕಂದಮ್ಮ ಕಣ್ಣು ಬಿಟ್ಟಿತು. ಅವಳನ್ನೇ ನೋಡುತ್ತಿರುವಂತೆ ಇತ್ತು. “ಓನಮ್ಮ” ಸುಮನ್ ಮೆಲ್ಲಗೆ ಅದರ ಕೈ ಮುಟ್ಟಿದಳು. ಮಗು ಅವಳ ತೋರುಬೆರಳನ್ನು ಗಟ್ಟಿಯಾಗಿ ಹಿಡಿದು ಕೊಂಡಿತು. ನರ್ಸು ನಗುತ್ತಿದ್ದಳು. ಸುಮನ್ ಗೆ ಕೈ ಬಿಡಿಸಿಕೊಳ್ಳಲು ಮನಸ್ಸು ಬರದೆ ಅವಳ ಹಿಂದೆ ನಡೆದಳು. ಮುಂದೆ ಮುಂದೆ ನರ್ಸು, ಅವಳ ಕೈಯಲಿದ್ದ ಮಗು ಸುಮನಳನ್ನು ಕೈಹಿಡಿದು ಕರೆದುಕೊಂಡು ಹೋಯಿತು.
ಕೋಣೆಯೊಳಗೆ ಬಂದ ಇವರಿಬ್ಬರನ್ನು ಲತಾ ನೋಡಿದಳು. ಮಗುವನ್ನು ನೋಡುತ್ತಿದ್ದ ಸುಮನ್ ಮುಖದಲ್ಲಿ ಮಮತೆ ಉಕ್ಕಿ ಹರಿಯುತ್ತಿತ್ತು. ಅವಳ ಕಣ್ಣುಗಳು ಮಿನುಗುತ್ತಿದ್ದವು. ಒಂದು ಕ್ಷಣ ನಗುವ ಹಳೆಯ ಸುಮನ್ ತೆರೆಯ ಮರೆಯಿಂದ ಕಂಡ ಹಾಗೆ ಆಯಿತು. “ಅದನ್ನ ಇಟ್ಕೋತಿಯಾ ಸುಮನ್. ಯಾರೋ ಮೂರು ದಿನದ ಹಿಂದೆ ನಮ್ಮ ಆಸ್ಪತ್ರೆಗೆ ಸೇರಿದ ಅನಾಥಾಶ್ರಮದ ಮೆಟ್ಟಿಲು ಮೇಲೆ ಬಿಟ್ಟು ಹೋಗಿದಾರೆ?” ಲತಾ ಕೇಳಿದಳು. ಸುಮನ್‍ಗೆ ಒಂದು ಕ್ಷಣ ಏನೂ ತೋಚಲಿಲ್ಲ. ಇನ್ನೊಂದು ಕ್ಷಣದಲ್ಲಿ ಎರಡು ಕೈ ಮುಂದೆ ಮಾಡಿ ಮಡಿಲು ಒಡ್ಡಿದಳು, ನರ್ಸು ಅವಳ ಕೈಗೆ ಮಗು ವರ್ಗಾಯಿಸಿದಳು. ಸುಮನ್ ಮಗುವನ್ನು ಎದೆಗೆ ಅಪ್ಪಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ನರ್ಸಮ್ಮ ಲತಾ ಬಳಿ ಕುರ್ಚಿ ಎಳೆದು ಸುಮನಳನ್ನು ಅದರಲ್ಲಿ ಕೂರಿಸಿ ನೋಡುತ್ತ ನಿಂತಳು. ಮೂರು ದಿನದ ಹಸುಳೆ ಇಲ್ಲಿಯವರೆಗು ಅನಾಥೆ, ಈಗ ತಾಯಿಯ ಮಡಿಲು ಸೇರಿತ್ತು. ಲತಾ ಗೆಳತಿಯನ್ನು ನೋಡುತ್ತ ಕುಳಿತ್ತಿದ್ದಳು. ಸ್ವಲ್ಪ ಸಮಯದ ನಂತರ ಸುಮನ್ ಸಮಾಧಾನಗೊಂಡಳು.
“ಮಗಳ್ನ ಏನಂತ ಕರಿತೀಯಾ?” ಲತಾ ಕೇಳಿದಳು.
“ಆರುಶಿ” ಮೊದಲೇ ತಯಾರಾದ ಉತ್ತರ ಬಂದಿತು.
“ನಾನು ಚೆನ್ನಾಗಿದೀನಿ. ಏನೋ ಹೈ ಫೀವರ್. ಸ್ವಲ್ಪ ನಿತ್ರಾಣ. ಇನ್ನೇನು ಇಲ್ಲ. ಹೋಗು ಅಮ್ಮಂಗೆ ತೋರಿಸು ನಿನ್ನ ಮಗಳ್ನ. ನಾನೇ ಫೋನ್ ಮಾಡ್ತೀನಿ” ಗೆಳತಿಯ ಮನಸ್ಸಿನ ಸ್ಥಿತಿ ಅರ್ಥ ಮಾಡಿಕೊಂಡು ಚಾಲಕನಿಗೆ ಹೇಳಿ ಲತಾ ಗೆಳತಿಯನ್ನು ತನ್ನ ಕಾರಿನಲ್ಲಿ ಕಳುಹಿಸಿದಳು.
ಮನೆಯ ಮುಂದೆ ಕಾರು ನಿಂತಾಗ ರಾಜಲಕ್ಷ್ಮಿ ವಿಸ್ಮಯದಿಂದ ಕಿಟಕಿಯಿಂದ ನೋಡಿದರು. ಗೇಟಿನ ಶಬ್ದ ಕೇಳಿ ಬಾಗಿಲು ತೆರೆದ ಅಶ್ವತನಾರಾಯಣರು ಕಾರಿಂದ ಸುಮನ್ ಇಳಿದು ಕೈಯಲ್ಲಿ ಏನೋ ತರುತ್ತಿರುವುದನ್ನು ಸೋಜಿಗದಿಂದ ನೋಡುತ್ತ ನಿಂತರು. ರಾಜಲಕ್ಷ್ಮಿ ಬಾಗಿಲಿಗೆ ಬಂದು ಮಗಳ ಕೈಯಲ್ಲಿನ ಮಗುವನ್ನು ನಿಬ್ಬೆರಗಾಗಿ ನೋಡಿದರು. ಜೀವನದಲ್ಲಿ ಮೊದಲನೆಯ ಬಾರಿ ತಕ್ಷಣ ಎಚ್ಚೆತ್ತು “ಅಲ್ಲೇ ಇರು ಸುಮನ್” ಎನ್ನುತ್ತ ಒಳಗೊಡಿದರು. ಎರಡು ನಿಮಿಷದಲ್ಲಿ ಆರತಿ ತಟ್ಟೆ ಹಿಡಿದು ಬಂದು ಮೊಮ್ಮಗಳಿಗೆ ಆರತಿ ಮಾಡಿ ಬರ ಮಾಡಿಕೊಂಡರು. ಕಿಟಕಿಯಿಂದ ನೋಡುತ್ತಿದ್ದ ಗಿರಿಜಮ್ಮ, ಸರೋಜಮ್ಮನಿಗೆ ಕರೆ ಮಾಡಿ ಓಡುತ್ತ ಬಂದರು. ಅವರ ಹಿಂದೆ ಕೆಲಸ ಬಿಟ್ಟು ಲಕ್ಷ್ಮಿ ಕೂಡ ಬಂದಳು. ಮಗುವನ್ನು ಎತ್ತಿ ಮುದ್ದಾಡಿ, ಹರಸಿ ಸುಮನಳನ್ನು ಹರಿಸುವ ಹೊತ್ತಿಗೆ ಸರೋಜಮ್ಮ ಬಂದರು. ಈಗ ಅವರ ಸರದಿ. ಕೊನೆಗೆ ಲಕ್ಷ್ಮಿ ಮಗುವನ್ನು ಸುಮನ್ ಕೈಗೆ ಕೊಡುತ್ತ “ನಿನ್ನ ಹಂಗೇ ಇದಾಳೆ ಕಣವ್ವಾ” ಎನುತ್ತ ಎಲ್ಲರ ಅಭಿಪ್ರಾಯಕ್ಕೆ ಧ್ವನಿ ಇತ್ತಳು.
ಶ್ರೀಧರ ಮೂರ್ತಿ ಅವರೂ ಬಂದು ಮಗುವನ್ನು ಮುದ್ದಾಡಿ ಹೋದರು. ಹೊರಗೆ ಹುಣ್ಣಿಮೆಯ ಚಂದಿರ ಏಳುತ್ತಿದ್ದ. ತಾತನ ಕೈಯಲ್ಲಿ ಆರುಶಿ. ಅಡುಗೆಮನೆಯಲ್ಲಿ ರಾಜಲಕ್ಷ್ಮಿ ತಾತನ ಕಾಲದ ಹಾಲಿನ ಬಾಟಲಿಯನ್ನು ತೊಳೆಯುತ್ತಿದ್ದರು. ಸುಮನ್ ಒಲೆಯ ಮೇಲಿನ ಹಾಲುನ್ನು ನೋಡುತ್ತಿದ್ದಳು.
ರಾತ್ರಿ ಹನ್ನೊಂದರ ಸಮಯ. ರಾಜಲಕ್ಷ್ಮಿ ನಿದ್ದೆ ಬರದೆ ಸುಮನಳ ಕೋಣೆಗೆ ಬಂದರು. ಹುಣ್ಣಿಮೆಯ ಚಂದಿರ ನೆತ್ತಿಗೆ ಏರಿದ್ದ. ಹಾಲ ಬೆಳದಿಂಗಳು ಸುಮನ್ ಹಾಗೂ ಮಡಿಲಿನ ಮಗುವನ್ನು ಆವರಿಸಿತ್ತು. ಸುಮನ್ ಬಗ್ಗಿ ಮಗಳಿಗೆ ಏನೋ ಹೇಳುತ್ತಿದ್ದಳು. ಮೆತ್ತಗೆ ಹೋಗಿ ಗಂಡನ ಕರೆ ತಂದರು. ಇಬ್ಬರು ಮಗಳನ್ನು ನೋಡುತ್ತ ನಿಂತರು ಬಾಗಿಲಲ್ಲಿ.
*****************
ಹತ್ತು ವರ್ಷಗಳ ನಂತರ
ಸುಮನ್ ಪಿಹೆಚ್.ಡಿ ಮಾಡಿ ಮುಗಿಸಿದ್ದಳು. ಈಗ ಅವಳ ವಿಭಾಗದ ಮುಖ್ಯಸ್ಥೆ. ಸುರೇಶ ನಿವೃತ್ತರಾದಾಗ ಅವರು ಅವಳನ್ನು ಆ ಸ್ಥಾನಕ್ಕೆ ಕೂರಿಸೇ ಹೋಗಿದ್ದರು. ಸಂಜು, ಸಂದೀಪ ಇಬ್ಬರಿಗೂ ಮದುವೆಯಾಗಿ ಮಕ್ಕಳಾಗಿದ್ದವು. ಇಬ್ಬರೂ ಅಮೆರಿಕಾದಲ್ಲಿ ನೆಲಸಿದ್ದರು. ಅವರಮ್ಮ ಅಪ್ಪ ಅದೆಷ್ಟು ಬಾರಿ ಅಮೆರಿಕಾಗೆ ಹೋಗಿ ಬಂದಿರಲಿಲ್ಲ ಆದರೆ ಅವರ ವಾಸ ಮಾತ್ರ ಊರಿನಲ್ಲಿ ಸುಮನ್ ಹಾಗೂ ಆರುಶಿಯ ಜೊತೆ. ಅವಳೇ ಅವರ ಮುದ್ದಿನ ಮೊಮ್ಮಗಳು.
ಅಂದು ಆರುಶಿಯ ಶಾಲೆಯಲ್ಲಿ ಭರತನಾಟ್ಯ ಸ್ಪರ್ಧೆ. ಅದಕ್ಕೆ ತಕ್ಕ ಉಡುಪು ತೊಟ್ಟು ಅಮ್ಮನ ಪಕ್ಕ ಕಾರಿನಲ್ಲಿ ಕುಳಿತಳು. ಹಿಂದಿನ ಸೀಟಿನಲ್ಲಿ ಅಜ್ಜಿ, ತಾತ, ಅಜ್ಜಿಯ ಪಕ್ಕ ಲಕ್ಷ್ಮಿ. ಸುಮನ್ ಕಾರು ಸ್ಟಾರ್ಟು ಮಾಡಿದಳು. ಆರುಶಿ ಗಿರಿಜಮ್ಮನಿಗೆ ಟಾಟಾ ಮಾಡಿ ತನ್ನ ಮಾತುನ್ನು ಮುಂದುವರಿಸಿದಳು. ಮೂಲೆ ತಿರುಗಿದಾಗ ಅವಳ ಧ್ವನಿ ಕೇಳಿ ಸರೋಜಮ್ಮ ಕಿಟಕಿಯಾಚೆ ನೋಡುತ್ತ ನಿಂತರು.
***************
ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: https://surahonne.com/?p=38746
(ಮುಗಿಯಿತು)
-ಸುಚೇತಾ ಗೌತಮ್.
ಕಾದಂಬರಿಯ ಕಥಾ ನಾಯಕಿ..ತನ್ನ ಬದುಕು ಬರುಡಾಗಲು ಬಿಡದೆ..ಮರುಮದುವೆಗೂ ಒಪ್ಪದೆ..ತಬ್ಬಲಿಯ ಮಗುವಿಗೊಂದು ಬದುಕ ಕಟ್ಟಿಕೊಟ್ಟು..ಬದುಕಿನಲ್ಲಿ ಏನಿಲ್ಲ ಎಂದು ನಿರಾಸೆಯೆ ಮಡುವಿನಲ್ಲಿ ಬೀಳುವವರಿಗೆ..ಹಾಗೂ..ಈ ಲೋಕದಿಂದಲೇ ಕಣ್ಮೆರೆಯಾಗುವ..ಬಲಹೀನ ರಿಗೊಂದು ಉತ್ತಮ ಸಂದೇಶ ..ಸಾರಿದ್ದಾಳೆ..ಸರಳ ಸುಂದರ.. ಶೈಲಿಯ ಸೊಗಸಾದ ನಿರೂಪಣೆಯಿಂದ ಕಟ್ಟಿಕೊಟ್ಟ ಕಾದಂಬರಿ ಕತೃವಿಗೊಂದು ಅಭಿನಂದನೆಗಳು….
ಧನ್ಯವಾದಗಳು ಮೇಡಂ
ಇಷ್ಟು ದಿನಗಳ ಕಾಲ ಸೊಗಸಾಗಿ ಮೂಡಿ ಬಂತು ಕಾದಂಬರಿ. ಮದುವೆಯೊಂದೆ ಬದುಕಿನ ಧ್ಯೇಯ, ಅಂತ್ಯ ಇಲ್ಲ, ಇದರ ಹೊರತಾಗಿಯೂ ಸುಂದರ ಬದುಕಿದೆ, ಅದನ್ನು ಗುರುತಿಸಿ ಅಪ್ಪಿಕೊಳ್ಳುವ ಸಾಹಸ ನಾವು ಮಾಡಬೇಕಷ್ಟೆ. ಅಂತ್ಯ ಬಹಳ ಸೊಗಸಾಗಿದೆ. ಒಂದು ಉತ್ತಮ ಹಾಗೂ ಸುಂದರ ಸಂದೇಶವನ್ನು ಹೊತ್ತ ಕಥೆ.
ಧನ್ಯವಾದಗಳು ಮೇಡಂ
ಮಹಿಳಾ ಸಬಲಿಕರಣ, ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ವ್ಯತ್ಯಾಸಗಳು, ಆತ್ಮವಿಶ್ವಾಸ ಜಾಗೂ ಅಂತಕರಣಗಳ ವಿವಿಧ ಆಯಾಮಗಳನ್ನು ಚಿತ್ರಿಸಿದ ಸೊಗಸಾದ ಕಾದಂಬರಿ. ಲೇಖಕಿಯವರಿಗೆ ಅಭಿನಂದನೆಗಳು..
ಧನ್ಯವಾದಗಳು ಮೇಡಂ
ಕಾದಂಬರಿ ಸೊಗಸಾಗಿ ಮೂಡಿಬಂತು. ಸುಚೇತ ಅವರಿಗೆ ಅಭಿನಂದನೆಗಳು
ಧನ್ಯವಾದಗಳು ಮೇಡಂ
Ayyo mugide hoitalla anistu Sucheta. Sundaravaagi bandide
ಧನ್ಯವಾದಗಳು ಮೇಡಂ
ಹಲವಾರು ವಾರಗಳಿಂದ ನಮ್ಮ ಕುತೂಹಲ, ಆತಂಕಗಳನ್ನು ತಣಿಸುತ್ತಾ ಇಂದು ಕೊನೆಗೊಂಡ ‘ಸುಮನ್` ಕಾದಂಬರಿಯು ಹೆಣ್ಣೊಬ್ಬಳ ಜೀವನದ ಹಲವಾರು ಮಜಲುಗಳನ್ನು ಅನಾವರಣಗೊಳಿಸುವುದರಲ್ಲಿ ಸಫಲವಾಗಿದೆ. ಅಸಹಾಯಕ ಪರಿಸ್ಥಿತಿಯಲ್ಲಿ ಎದೆಗುಂದದೆ ತನ್ನ ಅರ್ಥಪೂರ್ಣ ಹಾದಿಯನ್ನು ತಾನೇ ಹುಡುಕುವಲ್ಲಿ ಸಫಲಳಾದ ಬಗೆ ಉತ್ತಮ ಸಂದೇಶವನ್ನಿತ್ತಿದೆ. ಕಥೆಯ ಮುಕ್ತಾಯವು ಸ್ವಲ್ಪ ಅವಸರಿಸಿದೆ ಎಂದೆನಿಸಿದರೂ ತೃಪ್ತಿ ನೀಡಿದೆ. ನಮಗೆಲ್ಲರಿಗೂ ಒಂದೊಳ್ಳೆಯ ಕಾದಂಬರಿಯನ್ನು ಓದಲು ಅನುವು ಮಾಡಿಕೊಟ್ಟ ಒಳ್ಳೆಯ ಕಾದಂಬರಿಗಾರ್ತಿಯಾಗಿರುವ ಸುಚೇತಾ ಮೇಡಂ ಅವರಿಗೆ ಇನ್ನಷ್ಟು ಉಜ್ವಲ ಭವಿಷ್ಯವನ್ನು ಆಶಿಸುತ್ತಾ…
ಧನ್ಯವಾದಗಳು ಮೇಡಂ