ಮನಸಿನ ಪುಟಗಳ ನಡುವೆ…
ಎಲ್ಲರಿಗೂ ಗೊತ್ತಿದೆ ಇಲ್ಲಿರುವ ಆಸ್ತಿಪಾಸ್ತಿ, ಅಂತಸ್ತು ಇದು ಯಾವುದನ್ನೂ ಯಾರೂ ಈ ಉಸಿರು ನಿಲ್ಲುವಾಗ ಕೊಂಡೊಯ್ಯುವುದಿಲ್ಲ. ಆದರೆ ನಮ್ಮ ಹಿರಿಯರಿಂದ ಬಂದದ್ದನ್ನು ನಾವು ಇರುವಷ್ಟು ದಿನ ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ, ಜವಾಬ್ದಾರಿ. ಇದನ್ನು ನಾನು ಕೊನೆಯವರೆಗೂ ಮಾಡುತ್ತೇನೆ. ಉಳಿದಂತೆ ನಾನು ಹೋಗುವಾಗ ಬರೀ ಖಾಲಿ ಕೈ ಇರುತ್ತದೆ ನೋಡುತ್ತಿರು ನಯನ, ಈ ಮಾತು ನಿನಗೆ ಆ ದಿನ ನೆನಪಾಗುತ್ತದೆ” ಅಂದಿದ್ದರು ಆ ಆಪ್ತ. ಜನ, ಸಂಬಂಧಿಕರು ಎಲ್ಲವನ್ನು ಬಾಚಿದ, ಒಳಗೆ ಹಾಕಿಕೊಂಡ ಅಂತೆಲ್ಲ ಅವರವರ ಮೂಗಿನ ನೇರಕ್ಕೆ, ಮನಸ್ಸಿಗೆ ಬಂದಂತೆ ಹೇಳುತ್ತಾರೆ, ಹೇಳಬಹುದು, ಆಡಿಕೊಳ್ಳಬಹುದು. ಇರಲಿ ಮೇಲಿರುವ ಆ ಭಗವಂತನಿಗೂ, ನನ್ನ ಆತ್ಮಸಾಕ್ಷಿಗೂ ನಾನು ಮಾಡುವ ಕೆಲಸಗಳು ಗೊತ್ತಿವೆ, ಬೇರೆಯವರ ಹೊಗಳಿಕೆ, ತೆಗಳಿಕೆ ಯಾವುದನ್ನೂ ನಾನು ತೆಗೆದುಕೊಳ್ಳುವುದಿಲ್ಲ. ನನಗೆ ಸರಿ ಅನ್ನಿಸಿದ್ದನ್ನು, ಸರಿಯಾದದ್ದನ್ನು, ನ್ಯಾಯವಾದದ್ದನ್ನು ನಾನು ಮಾಡಿಯೇ ತೀರುತ್ತೇನೆ. ಮನುಷ್ಯರನ್ನು ಸಮಾಧಾನ ಪಡಿಸುವುದು ಎಂದಿಗೂ ಆಗದ ಮಾತು ಅಂದಿದ್ದರು. ಹೌದು ಇವತ್ತು ಅವರು ಕೇವಲ ನೆನಪಾಗಿ ಉಳಿದಿದ್ದಾರೆ. ನುಡಿದಂತೆಯೇ ಬರಿ ಕೈಯನ್ನು ತೋರಿಸಿ ತೆರಳಿದ್ದಾರೆ. ಅಷ್ಟೇ ಅಲ್ಲ ಯಾವುದೂ ಅಂದರೆ ಯಾವುದೂ ಜೊತೆಯಲ್ಲಿ ಬರುವುದಿಲ್ಲ ಅನ್ನುವ ಸತ್ಯವನ್ನು ಕೊನೆಯಲ್ಲಿಯೂ ಸಾಬೀತುಪಡಿಸಿ, ಯಾವತ್ತೂ ಮರೆಯಲಾರದಂತಹ ಪಾಠ ಹೇಳಿದ ಮೇಷ್ಟ್ರನ್ನು ನಾನು ಬದುಕಲ್ಲಿ ಮೊದಲ ಬಾರಿ ಕಂಡೆ.
ಈ ಮೇಷ್ಟ್ರು, ನನ್ನನ್ನೂ ಅವರ ಮಗಳಂತೆಯೇ ಕಂಡ ಚಿಕ್ಕಪ್ಪ.ಮನಸ್ಸು ಮಾಡಿದ್ದರೆ ಅವರಿದ್ದ ವೃತ್ತಿಯಲ್ಲಿ ಎಲ್ಲವನ್ನು ಬಿಟ್ಟು ಸ್ವಂತ ಗೂಡು ಕಟ್ಟಿಕೊಂಡು ಸುಖವಾಗಿ ಇರಬಹುದಿತ್ತು. ಆದರೆ ಈ ಆಪ್ತ ಹಿರಿಯರ ಮನೆ, ಮನೆತನವನ್ನು ಕಾಪಾಡುವ ಪಣತೊಟ್ಟವರು. ಶಿಕ್ಷಕ ವೃತ್ತಿಯ ಜೊತೆ ಜೊತೆಗೆ ಭೂಮಿಯನ್ನು ಉತ್ತಿ ಬಿತ್ತಿ ಬೆಳೆ ಬೆಳೆಯುತ್ತಿದ್ದ ಅನ್ನದಾತ ಕೂಡಾ. ಹೇಗೆ ಹೆಮ್ಮೆ ಪಡದಿರಲು ಸಾಧ್ಯ ಇವರೆಂದರೆ? ತುಸು ಮುಂಗೋಪವಿತ್ತು, ಆದರೆ ಆ ಮುಂಗೋಪವನ್ನು ಸಮಾಧಾನದಿಂದ ಹೋಗಲಾಡಿಸಿ ಮನೆ, ಸಂಸಾರ ಉಳಿಸುವಲ್ಲಿ ಸದಾ ಕೈ ಜೋಡಿಸಿ ಜೊತೆಯಾದವರು ಪ್ರೀತಿಯ ಚಿಕ್ಕಮ್ಮ. ಅವರು ಮನಸ್ಸು ಮಾಡಿದ್ದರೆ ಯಾವತ್ತೋ ಇವೆಲ್ಲದರಿಂದ ಚಿಕ್ಕಪ್ಪನನ್ನು ದೂರವಾಗಿಸಿ ತಮ್ಮದೇ ಸ್ವಂತ ಮನೆ, ಬದುಕು ಕಟ್ಟಿಕೊಳ್ಳಬಹುದಿತ್ತು.ಆದರೆ ಈ ಚಿಕ್ಕಮ್ಮ ಯಾವತ್ತೂ ಹಾಗೆ ಮಾಡಲಿಲ್ಲ. ಗಂಡನ ಕೆಲಸದಲ್ಲಿ ಜೊತೆಯಾದರು,ಆಸರೆಯಾದರು ಅಷ್ಟೇ ಅಲ್ಲ ಗಂಡನ ಮನೆತನ, ಕುಟುಂಬವನ್ನು ಒಗ್ಗೂಡಿಸುವಲ್ಲಿ ಹೆಗಲಾದರು, ನಮ್ಮೆಲ್ಲರನ್ನೂ ಪ್ರೀತಿಯಿಂದ ತಮ್ಮ ಮಕ್ಕಳಂತೆ ಕಂಡರು. ಚಿಕ್ಕಪ್ಪನೂ ಮಕ್ಕಳ ಜೊತೆ ಅವರಂತೆಯೇ ಬೆರೆತು ನಕ್ಕು ನಗಿಸುತ್ತಿದ್ದವರು.
7 ಮಂದಿ ಗಂಡು ಹಾಗೂ 4 ಮಂದಿ ಹೆಣ್ಣುಮಕ್ಕಳನ್ನು ಒಳಗೊಂಡ ಸಂಸಾರ ಎಲ್ಲೂರಿನ ಬಳ್ಳಿ ಮನೆ ಕುಟುಂಬ. ಅದರಲ್ಲಿ ಇಬ್ಬರು ದೊಡ್ಡಪ್ಪಂದಿರು ನಾನು ಹುಟ್ಟುವ ಮೊದಲೇ ಅನಾರೋಗ್ಯ ದಿಂದ ತೀರಿ ಹೋಗಿದ್ದರೆ ಇನ್ನೊಬ್ಬರು ದೊಡ್ಡಪ್ಪ ನಾನು ಚಿಕ್ಕವಳಿದ್ದಾಗ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದರು. ಇನ್ನೂ ಇಬ್ಬರು ದೊಡ್ಡಪ್ಪಂದಿರು ಇತ್ತೀಚಿನ ಎರಡು ವರ್ಷಗಳಲ್ಲಿ ತೀರಿಕೊಂಡರು. ಅತ್ತೆಯಂದಿರಲ್ಲಿ ದೊಡ್ಡ ಅತ್ತೆ ತೀರಿ ಹೋಗಿ 4-5 ವರ್ಷವಾಯಿತು. ಎಲ್ಲ ಅತ್ತೆಯಂದಿರಲ್ಲೂ ವಾತ್ಸಲ್ಯವಿತ್ತು/ಇದೆ. ದೊಡ್ಡಪ್ಪಂದಿರು ಎಂದರೂ ಪ್ರೀತಿ ಇತ್ತು. ಆದರೂ ಈ ಚಿಕ್ಕಪ್ಪನಲ್ಲಿ (ಎಲ್ಲೂರು ಬಳ್ಳಿಮನೆ ಮಾಧವ ರಾವ್) ಮಾತ್ರ ತುಸು ಹೆಚ್ಚಿನ ಆಪ್ತತೆ.
ಯಾರಿಗೆ ಏನೇ ಕಷ್ಟವಿದ್ದರೂ ಅವರು ಬೆಂಬಲವಾಗಿ ನಿಲ್ಲುತ್ತಿದ್ದರು. ಜೊತೆಗಿದ್ದೇನೆ ಅನ್ನುವ ಭರವಸೆ ಮೂಡುವಂತೆ ಇರುತ್ತಿದ್ದರು.
ನನ್ನ ತಮ್ಮ ದಾರಿ ತಪ್ಪಿದ ಮಗ. ಚಿಕ್ಕಂದಿನಿಂದಲೇ ಅವನನ್ನು ತಿದ್ದಲು ಚಿಕ್ಕಪ್ಪ ಹಾಗೂ ನನ್ನ ಸೋದರ ಮಾವ ಮಾಡದ ಪ್ರಯತ್ನಗಳಿಲ್ಲ. ಅವನನ್ನು ಸರಿ ದಾರಿಗೆ ತರಲು ಹೇಳಿದ ಬುದ್ದಿವಾದಗಳಿಗೇನು ಕಮ್ಮಿಯಿಲ್ಲ, ಇಷ್ಟೆಲ್ಲ ಮಾಡಿಯೂ ಅವನು ಸುಧಾರಿಸಲೇ ಇಲ್ಲ. ಈಗ ಎರಡು ತಿಂಗಳ ಹಿಂದೆಯೂ ಮಾತನಾಡುವಾಗ ಚಿಕ್ಕಪ್ಪ ನನ್ನ ಬಳಿ- “ಅವನು ಕೆಟ್ಟ ಚಾಳಿಗಳನ್ನು ಎಲ್ಲಾ ಬಿಟ್ಟು ಗೌರವಯುತವಾಗಿ ಬದುಕುತ್ತಾನೆ ಎಂದಾದರೆ ನಾನೇ ಅವನ ಬದುಕಿಗೆ ಬೇಕಾದ ವ್ಯವಸ್ಥೆ ಮಾಡಿ ಕೊಡಲು ಈಗಲೂ ಸಿದ್ದನಿದ್ದೇನೆ” ಅಂದ ಮಹಾನುಭಾವ. ಇವತ್ತಿನ ಕಾಲದಲ್ಲಿ ಬಹುಷಃ ಇಂತಹ ಮನೋಭಾವ ಹೊಂದಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಇರಬಹುದೇನೋ. ಬಳ್ಳಿ ಮನೆ ಕುಟುಂಬದ ಎಲ್ಲರ ಕಷ್ಟಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಹೆಗಲಾದ ಚಿಕ್ಕಪ್ಪನ ಮೇಲೆ ಹೇಗೆ ಅಭಿಮಾನ, ವಾತ್ಸಲ್ಯ ಮೂಡದಿರಲು ಸಾಧ್ಯ? ಊರಿನಲ್ಲಿಯೂ ಅಷ್ಟೇ ಎಲ್ಲರಿಗೂ ಬೇಕಾದ ವ್ಯಕ್ತಿ, ತನ್ನಿಂದಾದ ನೆರವನ್ನು ಮಾಡುತ್ತಿದ್ದವರು. ಸದಾ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿರುತ್ತಿದ್ದವರು. ಚಿಕ್ಕಪ್ಪ ಸುಲಭಕ್ಕೆ ಯಾರಿಗೂ ಅರ್ಥವಾಗುತ್ತಿರಲಿಲ್ಲ, ಆದರೆ ಅರ್ಥವಾದ ಮೇಲೆ ಯಾರೂ ಅವರಿಂದ ದೂರವಾಗುತ್ತಿರಲಿಲ್ಲ ಇಂತಹ ವ್ಯಕ್ತಿತ್ವ. ಅದೆಷ್ಟೋ ಮಂದಿಯ ಬದುಕಲ್ಲಿ ಮೇಷ್ಟರಾಗಿ ವಿದ್ಯೆಯ ದೀವಿಗೆ ಬೆಳಗಿದ ಗುರು.
ಒಂದು ದಿನ ದೇವರು, ದೇವಸ್ಥಾನದ ವಿಚಾರದಲ್ಲಿ ಅವರು ಮತ್ತು ನನ್ನ ನಡುವೆ ನಡೆದ ಮಾತುಕತೆ. ದೇವರು ಎಂದರೆ ಎಲ್ಲವನ್ನು ತಿಳಿದಿರುವವನಲ್ವಾ ಚಿಕ್ಕಪ್ಪ ಹಾಗಿರುವಾಗ ಅವನ ಹತ್ತಿರ ನಾವು ಪುನಃ ನನಗೆ ಅದು ಕೊಡು, ಇದು ಕೊಡು ಅಂತ ಯಾಕೆ ಕೇಳಬೇಕು, ಅವನಿಗೆ ಗೊತ್ತಿರುತ್ತದೆ ಅಲ್ವಾ ನಮಗೇನು ಬೇಕು ಅಂತ, ದೇವಸ್ಥಾನಕ್ಕೆಯೇ ಹೋಗಿ ಯಾಕೆ ಕೈ ಮುಗಿಯಬೇಕು? ಅನ್ನುವುದು ನನ್ನ ಪ್ರಶ್ನೆಯಾಗಿತ್ತು. “ನೋಡಮ್ಮ ಅದು ಹಾಗಲ್ಲ. ಈ ಪ್ರಪಂಚದಲ್ಲಿ ಅದೆಷ್ಟೋ ಕೋಟಿ ಜನರಿದ್ದಾರೆ, ಜೀವಿಗಳು ಇವೆ. ಹಾಗಿರುವಾಗ ದೇವಸ್ಥಾನ ಅಥವಾ ದೇವರ ಮುಂದೆ ನಿಂತು ಅವನ ಮೂರ್ತಿಯ ಮೇಲೆ ದೃಷ್ಟಿ ನೆಟ್ಟು ನೋಡು ತಂದೆ ನಾನು ನಿನ್ನನ್ನು ನೋಡಲು ಬಂದಿದ್ದೇನೆ, ಅನುಗ್ರಹಿಸು ಅಂತ ಶರಣಾಗತ ಭಾವದಿಂದ ತಲೆಬಾಗಿ ನಮಸ್ಕರಿಸಿದಾಗಲೇ ನಮ್ಮ ಪ್ರಾರ್ಥನೆ ಪೂರ್ಣ ಆಗುವುದು, ಸಫಲ ಆಗುವುದು, ದೇವರ ದರ್ಶನ ಸಾರ್ಥಕ ಆಗುವುದು” ಅಂದಿದ್ದರು. ಈ ಮಾತು ಅದ್ಯಾಕೋ ಆಳವಾಗಿ ನನ್ನ ಮನಸ್ಸನ್ನು ಹೊಕ್ಕಿತ್ತು, ನಿಜ ಅನ್ನಿಸಿತ್ತು.
ಹೀಗೆ ಅವರೊಂದಿಗಿನ ಒಡನಾಟದ ನೆನಪುಗಳು ಮಾತ್ರ ಈಗ ಜೊತೆಯಲ್ಲಿ. ಆ ನೆನಪುಗಳೂ ಬಹಳ ಕಾಡುತ್ತವೆ. ಅವರ ಬಳಿ ಕೇಳಿ ಪರಿಹರಿಸಿಕೊಳ್ಳಲು ಬಾಕಿ ಉಳಿದಿರುವ ಪ್ರಶ್ನೆಗಳು ಅವೆಷ್ಟೋ. ಎಲ್ಲವೂ ಇನ್ನು ಬರಿ ಪ್ರಶ್ನೆಗಳಷ್ಟೇ. ಒಂದು ನೋವಿನ ಎಳೆ ಅವರು ನೆನಪಾದಾಗಲೆಲ್ಲ ಹಾದು ಹೋಗುತ್ತದೆ. ಕಳೆದುಕೊಂಡ, ಕಳೆದುಕೊಂಡವರ ನೋವಿಗೆ ಸಾಂತ್ವನ ಮಾತಿನಲ್ಲಿ ನೀಡಲು ಸಾಧ್ಯವಿಲ್ಲ.ಕಾಲವೊಂದೇ ಎಲ್ಲವನ್ನು ಮಾಗಿಸಬೇಕಷ್ಟೆ.
-ನಯನ ಬಜಕೂಡ್ಲು
ನೆನಪಿನಬುತ್ತಿ ಉಣಬಡಿಸಿದ ಸೊಗಸಾದ ಲೇಖನ ..ನಮ್ಮ ನೆನಪಿನ ಉಗ್ರಾಣಕ್ಕೂ ಲಗ್ಗೆ ಹಾಕುವಂತೆ ಮಾಡಿತು..ಧನ್ಯವಾದಗಳು ನಯನಮೇಡಂ
ಧನ್ಯವಾದಗಳು ಮೇಡಂ
ಆದರ್ಶಪ್ರಾಯವಾದ ಬದುಕು ಬದುಕಿದವರು ಮನಗಳಲ್ಲಿ ಅಮರರಾಗಿರುತ್ತಾರೆ. ಅವರು ಬಾಳಿ ತೋರಿದ ಶುದ್ಧ ಬಾಳಪಥ ಅನೇಕವೇಳೆ ದಾರಿದೀಪವಾಗುತ್ತವೆ. ಸುಂದರ ಬರಹ.
ಧನ್ಯವಾದಗಳು ಮೇಡಂ
ಪರಿಪೂರ್ಣವಾದ ವ್ಯಕ್ತಿಗಳ ಪರಿಚಯ ಅಂತ ಕರಣವನ್ನು ಕಲಕುವಂತಿದೆ
ಧನ್ಯವಾದಗಳು ಮೇಡಂ
ಮಾತಿನ ಸಾಂತ್ವನದಿಂದ ಮನದಲುಳಿದ ನೋವು ಕೂಡಲೇ ಮಾಸಿ ಹೋಗಿದೆ..ಕಳೆದುಕೊಂಡ ಮೇಲೆ ನಾವು ಕಳೆದುಕೊಂಡ ಅರಿವಾಗುವುದು..
ಧನ್ಯವಾದಗಳು ಮೇಡಂ
ದೇವರಲ್ಲಿ ನಾವು ಬೇಡಿಕೊಳ್ಳಬೇಕಾದದ್ದು ಇಷ್ಟೇ
ನನ್ನ ಕರ್ಮದ ಲೆಕ್ಕಾಚಾರ ನೀನು ಬಲ್ಲೆ.ಅಂತಿರುವಾಗ
ನನ್ನ ಯೋಗ್ಯತೆಗೆ ತಕ್ಕದ್ದು ನೀಡು ಎಂದು ಮಾತ್ರ ಬೇಡಿಕೊಂಡರೆ ಸಾಕು
ನನ್ನ ಕರ್ಮದ ಫಲವನ್ನಷ್ಟೇ ನೀಡು ಎಂದು ಪ್ರಾರ್ಥನೆ ಮಾಡಿದರೆ ಸಾಕು
ಚೆನ್ನಾಗಿ ಹೇಳಿದ್ರಿ ಸರ್, ಧನ್ಯವಾದಗಳು
ಚಿಕ್ಕಪ್ಪನವರ ಅಂತ:ಕರಣವನ್ನು ತೆರೆದಿಟ್ಟ ಭಾವಪೂರ್ಣ ಲೇಖನ ಮನಮುಟ್ಟುವಂತಿದೆ, ನಯನಾ ಮೇಡಂ.
ಧನ್ಯವಾದಗಳು ಮೇಡಂ
ಬಹಳಷ್ಟು ಕಲಿಯಬೇಕು ಇಂತಹ ಅವರಿಂದ.
ಧನ್ಯವಾದಗಳು ಮೇಡಂ