ಕಾದಂಬರಿ : ‘ಸುಮನ್’ – ಅಧ್ಯಾಯ 17

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)
ಒಂಟಿತನ

ಮಾರನೆಯ ದಿನ ಹೊಸ ಸೆಮಿಸ್ಟರ್ ಶುರು. ಬೆಳಗ್ಗೆ ಬೇಗನೆ ಎದ್ದು ಸುಮನ್ ಅಡುಗೆ ತಿಂಡಿ ಎರಡೂ ಮಾಡಿದಳು. ಲಕ್ಷ್ಮಿ ಅಷ್ಟರಲ್ಲಾಗಲೇ ಹೊರಗಡೆ ನೀರು ಹಾಕಿ ರಂಗೋಲಿ ಹಾಕಿ ಮನೆ ಗುಡಿಸಿ ಒರಿಸಿ ಬಟ್ಟೆ ಪಾತ್ರೆ ಎಲ್ಲಾ ಮಾಡಿದ್ದಳು. ಅವಳಿಗೂ ತಿಂಡಿ ಕೊಟ್ಟು ತಾನೂ ತಿಂದಳು. ಡಬ್ಬಿ ಹಿಡಿದು ಕಾಲೇಜಿಗೆ ಹೊರಟಳು. ಸುಮನ್ ಮನೆಗೆ ಸರಿಯಾಗಿ ಬೀಗ ಹಾಕಿದ್ದಾಳೆ ಎಂದು ಒಮ್ಮೆ ಪರೀಕ್ಷಿಸಿ ಲಕ್ಷ್ಮಿ ಗಿರಿಜಮ್ಮನ ಮನೆಗೆ ಹೋದಳು.

ಒಂಬತ್ತು ಗಂಟೆಗೆ ಎಂಟನೆಯ ಸೆಮಿಸ್ಟರ್‌ಗೆ ಪಾಠ. ಎಂಟೂವರೆಗೆ ಆಗಲೇ ಸುಮನ್ ಕಾಲೇಜಿನಲ್ಲಿ ಇದ್ದಳು. ಹೊಂಗೆ ಮರದ ಕೆಳಗೆ ಹೂವುಗಳನ್ನು ತುಳಿಯದಂತೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯುತ್ತಿದ್ದಳು. ಬಿಳಿ ಮೈ, ದಟ್ಟವಾದ ಗುಲಾಬಿ ತುದಿ ಇದ್ದ ಹೂಗಳು ಚಳಿಗೆ ಮಗುವನ್ನು ಚೆನ್ನಾಗಿ ಬಟ್ಟೆಯಲ್ಲಿ ಸುತ್ತಿ ತೊಟ್ಟಿಲಲ್ಲಿ ಮಲಗಿಸಿದಂತೆ ಕಂಡವು. ಅವುಗಳ ಮೇಲೆ ಕಾಲಿಡಲು ಮನಸು ಬರದೆ ಹೊಂಗೆ ಮರವನ್ನು ಬಳಸಿ ನಡೆದಳು.

ಕೋಣೆಯ ಬಾಗಿಲು ತೆರೆದಳು. ಶ್ವೇತಾಳ ಖಾಲಿ ಮೇಜು ಕುರ್ಚಿ ಅನಾಥವಾದಂತೆ ಕಂಡವು. ತನ್ನ ಕುರ್ಚಿಯ ಮೇಲೆ ಕುಳಿತಳು. ಕಾಲೇಜು ನಿಶಬ್ದ. ಎಲ್ಲರು ಬರಲು ಇನ್ನೂ ಅರ್ಧ ಗಂಟೆ. ಸುಮನ್ ಒಬ್ಬಳೇ ಏನೋ ಯೋಚಿಸುತ್ತ ಕುಳಿತಳು. ಅಂದು ಶ್ವೇತ ಇಲ್ಲದೆ ಕೋಣೆ ಬಿಕೋ ಎನ್ನುತ್ತಿತ್ತು. ಪಾಠ ಮಾಡಿ ಬಂದರೆ ಕೋಣೆಯಲ್ಲಿ ಶ್ವೇತ ಇಲ್ಲ, ಗ್ರಂಥಾಲಯಕ್ಕೆ ಹೋಗಲು ಶ್ವೇತ ಇಲ್ಲ, ಕ್ಯಾಂಟಿನ್‍ಗೆ ಹೋಗಿ ಬರಲು ಶ್ವೇತ ಇಲ್ಲ. ಮಧ್ಯಾಹ್ನ ಊಟದ ಡಬ್ಬ ತೆಗೆದರೆ ಶ್ವೇತ ಇಲ್ಲ ಹಂಚಿ ತಿನ್ನಲು. ಯಾಕೋ ತುಂಬ ಬೇಸರವೆನಿಸಿತು. ಮೊದಲು ಕೂರುತ್ತಿದ್ದ ದೊಡ್ಡ ಸ್ಟಾಫ್ ರೂಮಿಗೆ ಹೋಗಿ ಬಿಡಲೇ ಎಂದು ಒಮ್ಮೆ ಯೋಚಿಸಿದಳು. ಆದರೇ ಅವರಿಬ್ಬರಿಗೆ ಮೀಸಲಾಗಿದ್ದ ಕಂಪ್ಯೂಟರಿನಲ್ಲಿ ಅವಳ ಪ್ರಾಜೆಕ್ಟ್ ಸಂಬಂಧಿಸಿದ ಮಾಹಿತಿ ಬಹಳವಿತ್ತು. ಐಟ್ರಿಪಲ್‍ಇ ಪೇಪರ್ ಒಂದು ಬಹಳ ಹಿಡಿಸಿ ಅದನ್ನು ಅವಲಂಬಿಸಿ ಪ್ರಾಜೆಕ್ಟ್ ಮಾಡುತ್ತಿದಳು. ಅದು ಆಗಲೇ ಅರ್ಧ ಮುಗಿದಿತ್ತು. ಇನ್ನು ಎರಡು ತಿಂಗಳಲ್ಲಿ ಮುಗಿದೇ ಹೋಗುವುದು. ಸರಿ ಊಟ ಮುಗಿಸಿ ಅದನ್ನು ಮುಂದುವರಿಸಿದಳು. ಯಾರೋ ಒಂದಿಬ್ಬರು ವಿದ್ಯಾರ್ಥಿಗಳು ಏನೋ ಕೇಳಿಕೊಂಡು ಬಂದರು. ಅವರ ಸಂದೇಹವನ್ನು ಬಗೆಹರಿಸಿ ಮತ್ತೆ ತನ್ನ ಕೆಲಸ ಮಾಡತೊಡಗಿದಳು. ಸುರೇಶ ಕರೆದು ಅವಳ ಮೂರನೆಯ ಸೆಮಿಸ್ಟರ್  ಅಂಕಗಳನ್ನು ತೋರಿಸಿ ಪ್ರಾಜೆಕ್ಟ್ ಬಗ್ಗೆ ವಿಚಾರಿಸಿದರು. ಅಷ್ಟರಲ್ಲಿ ನಾಲ್ಕು ಗಂಟೆ. ಸರಿ ಕೋಣೆಗೆ ಬೀಗ ಹಾಕಿ ಮನೆಗೆ ಹೊರಟಳು.

ಬಸ್ ಇಳಿದು ತಲೆ ಬಗ್ಗಿಸಿ ಬರುತ್ತಿದ್ದ ಸುಮನಳನ್ನು ಕಿಟಕಿಯಿಂದಲೇ ನೋಡಿದರು ಸರೋಜಮ್ಮ ಹಾಗೂ ಗಿರಿಜಮ್ಮ. ಬೀಗ ತೆಗೆದು ಒಳಗೆ ಹೋದ ಸುಮನ್ ಗೆ ಮನೆ ಬಹಳ ಬಿಕೋ ಎನ್ನಿಸಿತು. ಫೋನ್ ಟ್ರಿನ್‍ಗುಟ್ಟಿತು.  ಫೋನಿನ ಮೇಲೆ ಅವಳಮ್ಮನ ಧ್ವನಿ ತೇಲಿ ಬಂತು. ಎಲ್ಲೂ ಏನು ತೊಂದರೆಯಾಗದೆ ಸುಖವಾಗಿ ಸಂಜು ಮನೆ ತಲುಪಿದ್ದರು. ಶ್ವೇತ ಹಾಗೂ ಅವಳ ಸಂಸಾರ ಅವರ ಜೊತೆಯಲ್ಲೇ ಇದ್ದರು. ಅಶ್ವತನಾರಾಯಣರು ಅರೆಕ್ಷಣ ಮಾತಾಡಿ ಫೋನ್ ಇಟ್ಟರು. ಮನಸ್ಸು ಸ್ವಲ್ಪ ಹಗುರವಾಯಿತು. ಸ್ವಲ್ಪ ಚೇತರಿಸಿಕೊಂಡೆ ಲಿವಿಂಗ್ ರೂಮಿಗೆ ಬಂದಳು. ಬಾಗಿಲು ತೆರೆದು ಪತ್ರಿಕೆ ಹಿಡಿದು ಕುಳಿತಳು. ಕತ್ತಲಾಗುವರೆಗೂ ಅಲ್ಲೆ ಕುಳಿತ್ತಿದಳು. ದೀಪ ಹಾಕಿ ರಾತ್ರಿಗೆ ಕುಕ್ಕರ ಜೋಡಿಸಿ ಮಾರನೆಯ ದಿನದ ತಿಂಡಿಗೆ, ಅಡುಗೆಗೆ ತರಕಾರಿ ಹೆಚ್ಚಿ ದೇವರಿಗೆ ದೀಪ ಹಚ್ಚಿದಳು. ಅಷ್ಟು ಮಾಡಿದರೂ ಇನ್ನು ಬರಿ ಏಳು ಗಂಟೆ. ಟಿವಿ ಹಾಕಿ ವಾರ್ತೆಗಳನ್ನು ನೋಡಿದಳು. ಮನೆಯ ಮುಂದಿನ ದೀಪದ ಬೆಳಕಿನಲ್ಲಿ ವಾಕಿಂಗ್ ಮಾಡಿ ಹೇಗೋ ಎಂಟು ಗಂಟೆಯವರೆಗು ಕಾಲ ಕಳೆದಳು. ಕೊನೆಗೆ ಅಡುಗೆ ಪಾತ್ರೆಯನೆಲ್ಲ ಮೇಜಿನ ಮೇಲಿಟ್ಟು ಅಡುಗೆಮನೆ ಕೂಡ ಸ್ವಚ್ಛ ಮಾಡಿದಳು. ಅಷ್ಟರಲ್ಲಿ ಲಕ್ಷ್ಮಿ ಬಂದಳು. ಅವಳಿಗೆ ಊಟ ಕೊಟ್ಟು ತಾನೂ ಊಟ ಮಾಡಿ ಪಾತ್ರೆ ಆಚೆ ಹಾಕಿ ಹಾಲು ಹೆಪ್ಪು ಹಾಕಿ ಟಿವಿ ಹಾಕಿದಳು. ಲಕ್ಷ್ಮಿ  “ಮುಗಿಲು” ಹಾಕವ್ವ ಅಂದಾಗ ಅದನ್ನು ಹಾಕಿ ಕುಳಿತಳು. ಸುಮನ್‍ಗೆ ಧಾರಾವಾಹಿ ನೋಡುವ ಅಭ್ಯಾಸವಿಲ್ಲ. ಲಕ್ಷ್ಮಿ ತನ್ನ ಹಾಸಿಗೆಯನ್ನು ಅಲ್ಲೇ ಹಾಸಿಕೊಂಡು ಸಿದ್ಧಳಾಗಿ ಕುಳಿತಳು. ಅವಳನ್ನೇ ಕೇಳಿದಳು ಧಾರಾವಾಹಿಯ ಬಗ್ಗೆ. ಲಕ್ಷ್ಮಿ ತನ್ನದೇ ಭಾಷೆಯಲ್ಲಿ ಅವಳಿಗೆ ಅರ್ಥವಾದ ಹಾಗೆ ಕಥೆ ಹೇಳಿ ಟಿವಿಯ ಮೇಲೆ ಬಂದ ಪಾತ್ರಗಳನ್ನು ಪರಿಚಯಿಸಿದಳು. ಅವಳ ಕೆಲವು ಇಂಗ್ಲಿಷ ಪದಗಳ ಉಚ್ಚರಣೆಗೆ ಸುಮನ್‍ಗೆ ನಗು ಬಂದಿತು. ಆದರೆ ಅವಳಿಗೆ ಅರ್ಥ ಮಾತ್ರ ಸರಿಯಾಗಿ ಆಗಿತ್ತು. ಅದನ್ನು ನೋಡಿದರು. ಅದಾದ ನಂತರ ಲಕ್ಷ್ಮಿಯ ನಿರ್ದೇಶನದಲ್ಲಿ “ಮಿಂಚು” ನೋಡಿದ್ದಾಯಿತು. ಅದು ಮುಗಿಯುವ ಹೊತ್ತಿಗೆ ಲಕ್ಷ್ಮಿ ತೂಕಡಿಸುತ್ತಿದಳು. ಸುಮನ್ ಟಿವಿ ಆರಿಸಿ, ದೀಪ ಆರಿಸಿ ಕೋಣೆಗೆ ಹೋಗಿ  ಮಲಗಿದಳು.

ಹೀಗೇ ಒಂದು ಹೊಸ ದಿನಚರಿ ಸೃಷ್ಟಿ ಆಯಿತು. ಒಂದು ವಾರ ಆಗುವುದೊರಳಗೆ ಮನೆಯಲ್ಲು ಹೊತ್ತು ಕಳೆಯುವುದು ಕಷ್ಷವಾಗಿ ಕಾಲೇಜಿನಲ್ಲೂ ಭಾರಿ ಒಂಟಿತನ. ಬೇರೆ ಅಧ್ಯಾಪಕರ ಜೊತೆ ಬೆರೆಯುವ ಪ್ರಯತ್ನ ಮಾಡಿದಳು ಆದರೆ ಶ್ವೇತ ಜೊತೆಗಿದ್ದ ಸಲುಗೆ, ಆತ್ಮೀಯತೆ ಯಾರ ಬಳಿಯೂ ಸಿಗಲಿಲ್ಲ. ಅವಳಿಗೆ ಶ್ವೇತಗೆ ಇದ್ದ ಹಾಗೆ ಅವರಿಗೆ ಅವರದೇ ಗಳಸ್ಯ ಕಂಠಸ್ಯಗಳಿದ್ದವು. ಲೋಕಾಭಿರಾಮವಾಗಿ ಎಲ್ಲರು ಮಾತಾಡುತ್ತಿದರು.  ಅವಳು ಪ್ರಾಜೆಕ್ಟನಲ್ಲಿ ಸಾಧಿಸುತ್ತಿದ್ದ ಪುಟ್ಟ ಪುಟ್ಟ ಸಾಧನೆಗಳನ್ನು ತೋರಿಸಿ ಸಂತಸದಿಂದ ಚರ್ಚಿಸಲು ಶ್ವೇತ ಇಲ್ಲ. ತನ್ನ ವೈಯಕ್ತಿಕ ವಿಷಯಗಳನ್ನು, ಭಾವನೆಗಳನ್ನು ಹೇಳಿಕೊಳ್ಳಲು ಶ್ವೇತ ಇಲ್ಲ. ಮನೆಗೆ ಹೋಗುತ್ತ ದಾರಿಯಲ್ಲಿ ಹಾಗೇ ಅವಳ ಮನೆಗೆ ನುಗ್ಗಿ ಮಕ್ಕಳನ್ನು ಮುದ್ದಾಡಲು ಅವರ ಜೊತೆ ಆಡಿ ನಲಿಯಲು ಅವರುಗಳು ಇಲ್ಲ. ಶ್ವೇತ ಸುಮನ್ ಜೀವನದಲ್ಲಿ ಒಂದು ತುಂಬಲಾರದ ಖಾಲಿತನವನ್ನು ಬಿಟ್ಟು ಹೋಗಿದ್ದಳು. ಕೆಲವೊಮ್ಮೆ ನನಗೆ ನೀನು, ನಿನಗೆ ನಾನು ಅಂತ ಅವರಿಬ್ಬರು ಒಬ್ಬರಿಗೊಬ್ಬರು ಅಷ್ಟು ಆಸರೆಯಾಗಿದ್ದೇ ಈಗ ತಪ್ಪಾಯಿತು. ಮೊದಲಿನಿಂದಲೂ ಅವರಿಗೆ ಬೇರೆಯವರ ಅವಶ್ಯಕತೆ ಇರಲಿಲ್ಲ. ಎಲ್ಲರ ಮಧ್ಯ ಇದ್ದೂ ಅವರಿಬ್ಬರೂ ಒಂದು ಎನ್ನುವ ಅವರ ಸ್ನೇಹದ ಆಳ ಹಾಗೂ ನಿಕಟತೆಯನ್ನು ಯಾರಿಗೂ ಭೇದಿಸಲು ಆಗಿರಲಿಲ್ಲ. ಈಗ ಅದೇ ಸುಮನ್‍ಗೆ ಮುಳ್ಳಾಗಿತ್ತು. ಎಲ್ಲರ ಮಧ್ಯ ಇದ್ದೂ ಅವಳು ಒಂಟಿ. ಪಾಪ ಗೆಳತಿ ಒಬ್ಬಳೆ ಎಂದು ಶ್ವೇತ ದಿನಾ ಇಮೇಲ್ ಕಳುಹಿಸುತ್ತಿದಳು ಆದರೆ ಅದು ಅವಳಾಗದು. ಲತಾಳನ್ನು ಅರಸಿ ಅವಳ ಆಸ್ಪತ್ರೆಗೆ ಹೋಗಲು ಅಭ್ಯಾಸ ಮಾಡಿಕೊಂಡಳು. ಆದರೆ ಅವಳೋ ಬಹಳ ಬ್ಯೂಸಿ ಆದರೂ ಗೆಳತಿಯನ್ನು ಹೇಗೋ ಬಿಡುವು ಮಾಡಿಕೊಂಡು ಮಾತಾಡಿಸುತ್ತಿದ್ದಳು. ತಾನೂ ಕರೆ ಮಾಡುತ್ತಿದ್ದಳು ಹಾಗೇ ಸುಮನಳನ್ನು ಹುಡುಕಿಕೊಂಡು ಬರುತ್ತಿದ್ದಳು.

ಕಾಲೇಜಿನ ಒಂಟಿತನವನ್ನು ಮರೆಯಲು ಮನೆಯಲ್ಲೂ ಯಾರೂ ಇಲ್ಲ.  ಒಂಟಿ ತೋಳ ಸುಮನ್. ಖಾಲಿ ಮನೆಗೆ ಬರುವುದಕ್ಕೆ ಮನಸ್ಸು ಒಪ್ಪದು. ಆದರೆ ಇನ್ನೆಲಿಗೆ ಹೋಗುವುದು? ಮೊದಮೊದಲು ಅವಳು ಕಾಲೇಜಿನಿಂದ ಬರುವಾಗ ಸರೋಜಮ್ಮ ಪ್ರೀತಿಯಿಂದ ಮಾತಾಡಿಸಿ ಮನೆಗೆ ಕರೆದು ತಿಂಡಿ, ಕಾಫಿ ಕೊಟ್ಟು ಉಪಚರಿಸಿದಾಗ ಬಹಳ ಸಂತೋಷವಾಗುತ್ತಿತ್ತು. ಅರೆಘಳಿಗೆ ತನ್ನ ನೋವನ್ನು ಮರೆಯುತ್ತಿದ್ದಳು. ಆದರೆ ಅವರ ಆ ಉಪಚಾರವೇ ಅವಳಿಗೆ ತಾನು ಎಷ್ಟು ಅನಾಥೆ ಎಂದು ಅಣುಕಿಸಲು ಶುರುವಾಗಿ ಅವರಿಂದ ತಪ್ಪಿಸಿಕೊಂಡು ಮನೆ ಸೇರಿದರೆ ಸಾಕು ಎನ್ನಿಸುತ್ತಿತ್ತು. ಅವರ ಮನೆಯಿಂದ ಬಂದರೆ ದುಃಖ ಉಕ್ಕಿ ಬರುತ್ತಿತ್ತು. ಅತ್ತು ಬಿಡುತ್ತಿದ್ದಳು.

ಲಕ್ಷ್ಮಿ ಬಂದರೆ ಸಾಕು ಅವಳ ಜೊತೆಯಾದರು ಮಾತಾಡಬಹುದು. ಧಾರಾವಾಹಿಗಳ ಬಗ್ಗೆ ಅವಳ ಅಭಿಪ್ರಾಯವನ್ನು ಕೇಳಿ ನಗಬಹುದು ಎಂದು ಜಾತಕ ಪಕ್ಷಿಯ ತರಹ ಅವಳ ಬರುವನ್ನೇ ಎದುರು ನೋಡುತ್ತಿದ್ದ ಸುಮನ್‍ಗೆ ಈಗ ಅದರಲ್ಲೂ ಆಸಕ್ತಿ ಇಲ್ಲ. ಲಕ್ಷ್ಮಿಯ ಟೀಕೆಗಳಿಗೆ ಈಗ ಬರಿ ಹೂಂ ಉಹೂಂ ಅನ್ನುತ್ತ ಇರುವಳು. ಅವಳ ಅನ್ಯಮನಸ್ಕತೆಯನ್ನು ಗಮನಿಸಿದ ಲಕ್ಷ್ಮಿ ಮಾರನೆಯ ದಿನ ಗಿರಿಜಮ್ಮನಿಗೆ ಸುಮನ್ ಏನೋ ಯೋಚನೆ ಮಾಡ್ತಾ ಇರ್ತಾಳೆ ಅಂತ ವರದಿ ಒಪ್ಪಿಸುವಳು. ಸರಿ ಗಿರಿಜಮ್ಮ ಸಂಜೆ ಸುಮನ್ ಮನೆಗೆ ಬಂದ ತಕ್ಷಣ ಏನೋ ತಿಂಡಿ ಹಿಡಿದು ಎರಡು ಹೆಜ್ಜೆ ಅವಳ ಮನೆಗೆ ಬಂದು ಅವಳನ್ನು ಮಾತಾಡಿಸಿ ಹೋಗುವುದನ್ನು ರೂಡಿಸಿಕೊಂಡರು. ಇಲ್ಲವೆ ರಾತ್ರಿ ಒಬ್ಬಳೆ ಮನೆಯ ಕಾಂಪೌಡಿನ ಸುತ್ತ ವಾಕಿಂಗ್ ಮಾಡುತ್ತಿದ್ದ ಸುಮನಳನ್ನು ನೋಡಿ ತಮ್ಮ ಕೆಲಸ ಬಿಟ್ಟು ಹೊರಗೆ ಬಂದು ಅವಳನ್ನು ಮಾತಿಗೆಳೆಯುವರು. ಕೆಲವು ದಿನಗಳು “ಸುಮನ್ ಬೆಳಗ್ಗೆ ತಿಂಡಿ ಮಾಡಬೇಡ. ಇವರಿಗೆ ಇಡ್ಲಿ ಇಷ್ಟ ಮಾಡ್ತಾಯಿದೀನಿ. ನಿನಗೂ ಮಾಡಬಿಡ್ತೀನಿ. ಲಕ್ಷ್ಮಿಗೂ ನಾನೇ ಕೊಟ್ಟು ಬಿಡ್ತೀನಿ. ನೀನು ಅಡುಗೆ ಒಂದು ಮಾಡ್ಕೊ” ಅಂತ ಉಪಚರಿಸುವರು. ಸರಿ ಅವರಿಗೆ ಖಾಲಿ ಡಬ್ಬ ಹೇಗೆ ಕೊಡುವುದು, ಅಮ್ಮ ಯಾವಾಗಲೂ ಏನಾದ್ರು ಹಾಕಿ ಕೊಡ್ತಾ ಇದ್ದದ್ದು ಎಂದುಕೊಳ್ಳುತ್ತ ಭಾನುವಾರ ಏನಾದ್ರು ವಿಶೇಷ ಅಡುಗೆ ಮಾಡಿ ಡಬ್ಬವನ್ನು ವಾಪಸ್ ಮಾಡುತ್ತಿದ್ದಳು. ಲಕ್ಷ್ಮಿಯ ಕೈಯಲ್ಲಿ ಸರೋಜಮ್ಮನವರಿಗೂ ಕಳುಹಿಸುತ್ತಿದ್ದಳು. ಲಕ್ಷ್ಮಿಗೆ ತಿಂಡಿ ಊಟ ಕೊಡಬೇಕು ಎಂದು ಅವರಮ್ಮ ಕಡ್ಡಾಯ ಮಾಡಿರದ್ದಿದ್ದರೆ ಅಡುಗೆನೇ ಮಾಡುತ್ತಿರಲ್ಲಿಲ್ಲವೇನೋ ಸುಮನ್. ಎಲ್ಲೋ ಹೊರಗಡೆ ಏನೋ ಹಾಳುಮೂಳು ತಿಂದು ಜೀವಿಸುತ್ತಿದಳ್ಳೆನೋ. ಅಷ್ಟು ಬೇಸರವಾಗುತ್ತಿತ್ತು ಅವಳಿಗೆ ಈಗ. ಅವರಮ್ಮನ ಆ ಜಾಣತನದಲ್ಲಿ ಅಡಗಿದ್ದ ಅವಳ ಬಗ್ಗೆಯ ಕಾಳಜಿಗೆ ಅವಳ ಕಣ್ಣುಗಳು ಹನಿಗೂಡುತ್ತಿದ್ದವು.

ಪ್ರತಿ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ಅವರಮ್ಮನ ಕರೆ ಬರುತ್ತಿತ್ತು. ಆ ಕಡೆ ಸ್ಪೀಕರ್ ಆನ್ ಮಾಡಿ ಮನೆ ಮಂದಿಯೆಲ್ಲ ಮಾತಾಡುತ್ತಿದ್ದರು. ಏನು ಅಡುಗೆ, ತಿಂಡಿ ಮಾಡಿದ್ದೆ ಆ ವಾರದಲ್ಲಿ? ಲಕ್ಷ್ಮಿ ಬರ್ತಿದಾಳಾ? ಗಿರಿಜಮ್ಮ, ಸರೋಜಮ್ಮ ಸಿಕ್ಕಿದ್ರಾ ಅಂತ ಶುರು ಮಾಡುತ್ತಿದ್ದರು ಅವಳಮ್ಮ. ಮಧ್ಯ ಮಧ್ಯ ಅಶ್ವತನಾರಾಯಣ ಹಾಗೂ ಸಂಜು ಅವಳ ಕಾಲೇಜು, ಪ್ರಾಜೆಕ್ಟ್ ಎಲ್ಲಾ ವಿಚಾರಿಸಿ ನಂತರ ಅವರುಗಳು ಆ ವಾರದಲ್ಲಿ ಎಲ್ಲೆಲ್ಲಿಗೆ ಹೋಗಿದ್ದರು ಏನನ್ನು ನೋಡಿದ್ದರು ಅಂತ ವಿವರವಾಗಿ ಹೇಳುತ್ತಿದ್ದರು. ಹೊಸ ದೇಶ, ಹೊಸ ಜನ, ಹೊಸ ಸಂಸ್ಕೃತಿ,  ಬೇರೆ ಜೀವನಶೈಲಿ ನೋಡಲು, ಅನುಭವಿಸಲು ಎಷ್ಟು ಹೊಸತನ. ಅವರುಗಳ ಮಾತಿನಲ್ಲಿ ಎಷ್ಟು ಉತ್ಸಾಹ ಲವಲವಿಕೆ. ಅವರ ಮಾತಿನಲ್ಲಿನ ಚೈತನ್ಯ ಸುಮನ್‍ಗೂ ತಾಕಿ ಅವಳು ಬಹಳ ಕುತೂಹಲದಿಂದ ಎಲ್ಲವನ್ನು ವಿಸ್ತಾರವಾಗಿ ವಿಚಾರಿಸಿ ಕೇಳುತ್ತಿದ್ದಳು. ಕೆಲವೊಮ್ಮೆ ಒಂದೊಂದು ಗಂಟೆ ನಡೆಯುತ್ತಿತ್ತು ಅವರ ಸಂಭಾಷಣೆ. ಕೊನೆಗೆ ಲಕ್ಷ್ಮಿಯ ಬಾರಿ. ಅವಳು ಅಮ್ಮಾವರ ಕೈಯಲ್ಲಿ ಮಾತಾಡಿದ ಮೇಲೆ ಫೋನ್ ಕಟ್. ಇಡೀ ದಿನ ಸುಮನ್ ಅವರುಗಳ ಮಾತನ್ನು ಮೆಲಕು ಹಾಕುತ್ತ ಅದರ ಅಮಲಿನಲ್ಲಿ ಇರುತ್ತಿದ್ದಳು. ಎರಡು ವರ್ಷದಿಂದ ಅವಳ ದುಃಖದಲ್ಲಿ ಮುಳುಗಿದ್ದ ಅವರು ಹೀಗೆ ಪ್ರವಾಸ ಹೋಗಿದ್ದು ತುಂಬ ಒಳ್ಳೆಯದಾಯಿತು. ಈ ಖಿನ್ನವಾದ ವಾತಾವರಣದಿಂದ ಅವರಿಗೆ ರಜೆ ಸಿಕ್ಕಿದ್ದು ಅವಳ ಮನಸ್ಸಿಗೆ ನೆಮ್ಮದಿ.

ಇತ್ತ ಅವಳಮ್ಮ ಅಪ್ಪನಿಗೆ ಸುಮನ್ ಏನೂ ಹೇಳಲೇ ಇಲ್ಲ. ಯಾಕೋ ಪೆಚ್ಚಾಗಿದ್ದಾಳೇ ಅಂತ ಅನ್ನಿಸುತ್ತಿತ್ತು. ಪಾಪ ಈ ಸಮಯದಲ್ಲಿ ನಾವು ಅವಳನ್ನು ಬಿಟ್ಟು ಬರಬಾರದಿತ್ತು ಎನ್ನುವ ಕೊರಗು. ಹೀಗೇ ಎಷ್ಟೋ ಹೊತ್ತು ಕೊರಗಿದ ಮೇಲೆ ಅವಳು ತನ್ನ ಭವಿಷ್ಯದ ಬಗ್ಗೆ ಯೋಚಿಸಿ ನಿರ್ಧಾರ ಮಾಡಬೇಕು. ಅದಕ್ಕೆ ಪೂರಕವಾಗುವ ವಾತಾವರಣ ಕಲ್ಪಿಸಬೇಕಿತ್ತು. ಒಂಟಿತನ ಎಷ್ಟು ಭಯಾನಕ ಎಂದು ಅವಳಿಗೆ ತೋರಿಸಬೇಕಿತ್ತು. ಹೀಗೆ ತಮ್ಮನ್ನು ತಾವು ಸಮಾಧಾಗೊಳಿಸುತ್ತಿದ್ದರು. ಆದರೇ ಎಲ್ಲಿ ಹೋದರು ಸುಮನ್  ಇದ್ದಿದ್ದರೆ ಚೆಂದ ಎಂದು ಅನಿಸದೇ ಇರುತ್ತಿರಲಿಲ್ಲ.

***********

ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿhttp://surahonne.com/?p=38620

(ಮುಂದುವರಿಯುವುದು)

-ಸುಚೇತಾ ಗೌತಮ್.‌

10 Responses

  1. ಕಾದಂಬರಿಯ ಓಘ..ಚೆನ್ನಾಗಿದೆ…ಕುತೂಹಲ ವನ್ನು ಉಳಿಸಿಕೊಂಡು ಹೋಗುತ್ತಿದೆ..ಗೆಳತಿ..

  2. Padma Anand says:

    ಸಂದರ್ಭಗಳು ಕಥೆಗೆ ಪೂರಕವಾಗಿ ಸೃಷ್ಟಿಯಾಗಿ ಮುಂದೇನಾಗುವುದೋ ಎಂಬ ಕಾತರವನ್ನುಂಟುಮಾಡಿದೆ.

  3. ಸುಚೇತಾ says:

    ಧನ್ಯವಾದಗಳು ಮೇಡಂ

  4. ನಯನ ಬಜಕೂಡ್ಲು says:

    ಹೌದು ಒಂಟಿತನ ಬಹಳ ಕೆಟ್ಟದ್ದು, ಕೆಲವೊಂದು ಸಂಧರ್ಭದಲ್ಲಿ ಅದು ಕಾಡಿಯೇ ತೀರುತ್ತದೆ, ಅದರಿಂದ ಹೊರ ಬರುವ ಪ್ರಯತ್ನವನ್ನು ನಾವು ಮಾಡಬೇಕು. ತುಂಬಾ ಸೊಗಸಾಗಿ ಸಾಗಿದೆ ಕಾದಂಬರಿ. Beautiful.

    • ಸುಚೇತಾ says:

      ಹೌದು ಮೇಡಂ. ಒಂಟಿತನವನ್ನು ಸಹಿಸುವುದು ಕಷ್ಟ.

      ಧನ್ಯವಾದಗಳು ಮೇಡಂ .

  5. ಶಂಕರಿ ಶರ್ಮ says:

    ಓಂಟಿತನ ಕಾಡುತ್ತಾ ಪರಿತಪಿಸುವ ಸುಮನ್ ಪರಿಸ್ಥಿತಿ ಮುಂದೇನೆಂದು ಕಾಯುವಂತಾಗಿದೆ…ಸುಂದರ ಕಥಾಹಂದರ…ಸುಚೇತಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: