ಅವಿಸ್ಮರಣೀಯ ಅಮೆರಿಕ – ಎಳೆ 61

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಅಂಪೈರ್ ಸ್ಟೇಟ್ ವೈಭವ..!!

ತಲೆ ಎತ್ತಿ ನೋಡಿದರೆ ನಮ್ಮೆದುರಿನಲ್ಲಿತ್ತು… ಕತ್ತಲಲ್ಲಿ ಆಗಸದೆತ್ತರ ಎದ್ದು ನಿಂತಿರುವ ಅಂಪೈರ್ ಸ್ಟೇಟ್ ಕಟ್ಟಡ(Empire State Building). 102 ಅಂತಸ್ತುಗಳುಳ್ಳ ಈ ಗಗನಚುಂಬಿ ಕಟ್ಟಡವನ್ನು 1930ರಲ್ಲಿ ಪ್ರಾರಂಭಿಸಿ; ಕೇವಲ ಒಂದು ವರ್ಷದಲ್ಲಿ, ಅಂದರೆ 1931ರಲ್ಲಿ ಪೂರ್ಣಗೊಳಿಸಲಾಯಿತು!  ಸುಮಾರು 572 ಮಿಲಿಯ ಡಾಲರ್ ಹಣವನ್ನು ಖರ್ಚು ಮಾಡಿ ಕಟ್ಟಲ್ಪಟ್ಟ ಈ ವಿಶೇಷ ಕಟ್ಟಡವು ಪ್ರಸ್ತುತ Empire State Realty Trust ಇದರ ಒಡೆತನದಲ್ಲಿದೆ. ಮಿಂಚು ನಿರೋಧಕವನ್ನೂ ಒಳಗೊಂಡಂತೆ ಇದರ ಪೂರ್ತಿ ಎತ್ತರವು 1,454 ಅಡಿಗಳಷ್ಟಿದ್ದು, ಇದರ ಮೇಲ್ಛಾವಣಿಯೇ ಸುಮಾರು 1250 ಅಡಿಗಳಷ್ಟು ಎತ್ತರವಿದೆ.

ಕಗ್ಗತ್ತಲಿನ ಒಡಲಲ್ಲಿ, ತನ್ನ ಬಹುಮಹಡಿಗಳಲ್ಲಿ ಬಹುವರ್ಣಗಳಿಂದ ಬೆಳಗುವ ವಿದ್ಯುದ್ದೀಪಗಳನ್ನು ಹೊತ್ತು; ಮೈ ತುಂಬಾ ರತ್ನ, ವಜ್ರ, ವೈಢೂರ್ಯಗಳಿಂದ ಅಲಂಕೃತಗೊಂಡ ನವ ವಧುವಿನಂತೆ ಕಂಗೊಳಿಸುತ್ತಾ ಆಗಾಧ ಎತ್ತರಕ್ಕೆ ನಿಂತಿದೆ! ಅದಾಗಲೇ ಪ್ರವಾಸಿಗರ ದಂಡು ಸಾಕಷ್ಟು ಜಮಾಯಿಸಿದುದು ಕಂಡುಬಂತು. ನಿಗದಿತ ಪ್ರವೇಶ ಶುಲ್ಕವನ್ನು ಪಾವತಿಸಿ ಪಡೆದ ಟಿಕೆಟ್ ಹಿಡಿದು ಸರತಿ ಸಾಲಿನಲ್ಲಿ ನಿಂತು ಅದರ ಮೇಲಂತಸ್ತನ್ನು ಏರುವ ಲಿಫ್ಟ್ ನೊಳಕ್ಕೆ ನುಗ್ಗಿದ್ದಷ್ಟೇ ಗೊತ್ತು…ಕ್ಷಣಾರ್ಧದಲ್ಲಿ 102 ಮಹಡಿಗಳನ್ನು ಹಾದು ನಾವು ಮೇಲಂತಸ್ತಿನಲ್ಲಿದ್ದೆವು! ಸಾಮಾನ್ಯವಾಗಿ ಲಿಫ್ಟ್ ಚಲಿಸುವಾಗ ಅದರೊಳಗಿದ್ದವರಿಗೆ ಚಲಿಸುವ  ಅನುಭವ ಸ್ವಲ್ಪವಾದರೂ ಉಂಟಾಗುತ್ತದೆ.  ಆದರೆ ಇಲ್ಲಿಯ ವಿಶೇಷ ತಾಂತ್ರಿಕತೆಯ ಲಿಫ್ಟ್ ಒಂದಿನಿತೂ ಅಲುಗಡದೆ ರಾಕೆಟ್ ವೇಗದಲ್ಲಿ ಚಲಿಸಿತ್ತು!

ಮಧ್ಯರಾತ್ರಿ  11ಗಂಟೆಯಿಂದ 2ಗಂಟೆಯ ವರೆಗೆ ಪ್ರವಾಸಿಗರ ವೀಕ್ಷಣೆಗಾಗಿ ತೆರೆದಿರುವ ಈ ಅದ್ಭುತ ಕಟ್ಟಡದ ಮೇಲ್ಭಾಗ ತಲಪಿ ಕೆಳಗಡೆ ನೋಡಿದಾಗ ನಾವು ಅಂತರಿಕ್ಷದಲ್ಲಿ ವಿಹರಿಸಿದ ಅನುಭವ! ನ್ಯೂಯಾರ್ಕ್ ಪಟ್ಟಣದ ಅತೀ ಎತ್ತರದ ಸ್ಥಳದಲ್ಲಿ ನಾವಿದ್ದೆವು. ಇಡೀ ಪಟ್ಟಣವೇ ನಮ್ಮ ಕೆಳಗಿತ್ತು! ಸುತ್ತಲೂ ಅತ್ಯಂತ ವಿಶಾಲವಾಗಿ ಹರಡಿರುವ ಲಕ್ಷಾಂತರ ಬೆಳಕಿನ ಪುಂಜಗಳು ಕಣ್ಣು ಬಿಟ್ಟು ಆಗಸವನ್ನು ದಿಟ್ಟಿಸುತ್ತಿರುವ ದೃಶ್ಯವು ನಮ್ಮ ನಯನಗಳಿಗೆ  ಅತ್ಯಪೂರ್ವ ಹಬ್ಬ ನೀಡಿದ್ದಂತೂ ನಿಜ! ಅತ್ಯಂತ ರಭಸದಲ್ಲಿ ಬೀಸುವ ಗಾಳಿಯು ನಾವೆಲ್ಲಿ ಹಾರಿ ಹೋಗಿವೆವೋ ಎಂಬ ಭಯವನ್ನು ಹುಟ್ಟಿಸುತ್ತಿತ್ತು. ಧರಿತ್ರಿಯ ಒಡಲ ತುಂಬಾ  ತಾರೆಗಳ ತೋಟವಾದರೆ; ಆಕಾಶರಾಯನ ಚಾಪೆಯಲ್ಲಿ ಆರಾಮವಾಗಿ ಪವಡಿಸಿರುವ ಪುಟ್ಟ ತಾರೆಗಳು ಮಂಕಾಗಿ, ನಮ್ಮ ಕಣ್ಣಿಗೆ ಗೋಚರಿಸದೆ ಅಲ್ಲೇ ಹುದುಗಿ ಹೋಗಿದ್ದವು. ಇಲ್ಲಿ ಮಾನವ ನಿರ್ಮಿತ, ವಿದ್ಯುಚ್ಛಕ್ತಿಯ ಅಂದದ ಬೆಳಕಿನ ಸಾಗರವು, ಆಗಸದ ನೈಸರ್ಗಿಕ ಚೆಲುವನ್ನು ಕಬಳಿಸಿಬಿಟ್ಟುದನ್ನು ಗಮನಿಸಿ ನನ್ನ ಮನ ಕೊಂಚ ಮಂಕಾದುದಂತೂ ಸತ್ಯ. ಆದರೆ ಸದ್ಯಕ್ಕೆ ನನ್ನ ಎಲ್ಲಾ ಯೋಚನೆಗಳನ್ನೂ ಒತ್ತಟ್ಟಿಗಿರಿಸಿ, ಒದಗಿ ಬಂದ ಸುವರ್ಣಾವಕಾಶದ ಕ್ಷಣಗಳನ್ನು ಒಂದಿಷ್ಟೂ ಬಿಡದೆ ಸವಿಯತೊಡಗಿದೆ.

ನಾವು ನಿಂತಿದ್ದ ಕಟ್ಟಡದ ಕೊನೆಯ ಅಂತಸ್ತಿನ ಹೊರಗಡೆಗೆ ಸುತ್ತಲೂ ಐದು ಅಡಿಗಳಷ್ಟು ಅಗಲದ ಜಗುಲಿಯ ಹೊರಗಡೆಗೆ ಸುರಕ್ಷತೆಗಾಗಿ ನಾಲ್ಕು ಅಡಿಗಳಷ್ಟು ಎತ್ತರದ ಗೋಡೆ..ಅದರ ಮೇಲ್ಗಡೆಗೆ ಗಾಜಿನ ಬಲವಾದ ಕಿಟಿಕಿಗಳು, ಅದರ ಮೇಲಿನಿಂದ ಕಬ್ಬಿಣದ ಬಲವಾದ ಬೇಲಿ ಇದೆ. ನಾವು ಗಾಜಿನ ಮೂಲಕ ಹೊರಗಡೆಗೆ ನೋಡಬೇಕಾಗುತ್ತದೆ. ಅಲ್ಲದೆ, ದೂರದ ಸುಂದರ ದೃಶ್ಯಗಳನ್ನು ಸವಿಯಲು ನಾಲ್ಕೂ ದಿಕ್ಕುಗಳಲ್ಲಿ  ಶಕ್ತಿಯುತ ದೂರದರ್ಶಕಗಳನ್ನೂ ಇರಿಸಲಾಗಿದೆ. ಒಂದು ಕಡೆಯಲ್ಲಿ ನಿಂತು ದಿಟ್ಟಿಸಿದರೆ, ನಮ್ಮ ಕಣ್ಣು ನಿಲುಕುವಷ್ಟು ದೂರವೂ ಗಗನಚುಂಬಿ ಕಟ್ಟಡಗಳಲ್ಲಿ ಮಿನುಗುವ ವಿದ್ಯುದ್ದೀಪಗಳ ವೈಭವವಾದರೆ; ಇನ್ನೊಂದು ಪಕ್ಕದಲ್ಲಿ ಇನ್ನೂ ಹೆಚ್ಚಿನ ಸುಂದರ ದೃಶ್ಯ!! ನಮ್ಮ ದೀಪಾವಳಿಯ ಸಮಯದಲ್ಲಿ; ಬೇರೆಲ್ಲಾ ಕಡೆಗಳಿಗಿಂತಲೂ, ಚೆನ್ನೈಯಲ್ಲಿ ಅತ್ಯಂತ ಹೆಚ್ಚು ಪಟಾಕಿ ಸಿಡಿಸುವರು. ಆ ಸಮಯದಲ್ಲಿ ಅಲ್ಲಿಗೆ ಹೋಗಿದ್ದಾಗ, ಅಲ್ಲಿರುವ ನಮ್ಮ ಬಂಧುಗಳ ಮನೆಯ ಟೆರೇಸ್ ಮೇಲೆ ನಿಂತು ನಗರದ ಪಟಾಕಿ ಸಿಡಿಸುವ ಸಂಭ್ರಮವನ್ನು ಸವಿದ ನೆನಪಾಯಿತು.  ಅಲ್ಲಿ ಕೆಳಗಿನಿಂದ, ಆಕಾಶದಲ್ಲಿ ಹರಡುವ ಚಿಂಗಾರಿಗಳನ್ನು ಕಂಡರೆ, ಇಲ್ಲಿ  ನಾವು ಆಗಸದೆತ್ತರದಿಂದ ಕೆಳಗಡೆಯಲ್ಲಿರುವ ನಿಶ್ಚಲ ಬೆಳಕಿನ ಮಣಿಗಳನ್ನು ಕಾಣುತ್ತೇವೆ. ಬಹು ದೂರದಲ್ಲಿ ಹರಿಯುವ ಹಡ್ಸನ್ ನದಿಯಲ್ಲಿ ಮಿಣಮಿಣನೆ ಹೊಳೆಯುವ ದೀಪಗಳ ಪ್ರತಿಬಿಂಬಗಳಿದ್ದರೆ, ಇನ್ನೊಂದೆಡೆ ದೀಪದ ಬೆಳಕಿನಲ್ಲಿ, ಹಸಿರು ಬಣ್ಣದಲ್ಲಿ ಮಿಂಚುವ ಸ್ಟೇಚ್ಯೂ ಆಫ್ ಲಿಬರ್ಟಿ ಇತ್ಯಾದಿಗಳ ನೋಟ ಬಹಳ ಆನಂದದಾಯಕ. ಸುಮಾರು ಒಂದು ತಾಸು, ಈ ಅದ್ಭುತ, ಕಣ್ಣು ಕೋರೈಸುವ ದೃಶ್ಯವನ್ನು ಎಲ್ಲಾ ಕಡೆಗಳಿಂದಲೂ ವೀಕ್ಷಿಸಿ ಕಣ್ತುಂಬಿಕೊಂಡು, ಅಲ್ಲಿರುವ ದೂರದರ್ಶಕದಲ್ಲಿ ಕಣ್ಣಿಟ್ಟು, ಬಹು ದೂರದಲ್ಲಿ ಚುಕ್ಕಿಯಂತೆ ಕಾಣುವ ಬಹುಮಹಡಿಯ ಕಟ್ಟಡದಲ್ಲಿ ಯಾರಿರುವರೆಂದು ಪತ್ತೇದಾರಿ ಕೆಲಸ ಮಾಡಿ, ಒಂದಷ್ಟು ಹೊತ್ತು ಸುಂಟರಗಾಳಿಯಂತೆ ಬೀಸುತ್ತಿರುವ ಕುಳಿರ್ಗಾಳಿಗೆ ಮೈಯೊಡ್ಡಿ ಒಳಬಂದೆವು.


ಬಹು ವಿಶಾಲವಾದ ಹಜಾರದಲ್ಲಿ ಚಂದದ ಸುಖಾಸೀನಗಳನ್ನು ಇರಿಸಲಾಗಿತ್ತು. ಅದರಲ್ಲಿ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾಗ;   ಅಲ್ಲಿಯೇ ಇದ್ದ ವೃದ್ಧ ಸಂಗೀತಗಾರನೊಬ್ಬ ತನ್ನ ಸಂಗೀತ ಉಪಕರಣವನ್ನು ನುಡಿಸುತ್ತಿದ್ದುದನ್ನು ಗಮನಿಸಿದೆವು. ನಮ್ಮ ಪುಟ್ಟ ಮೊಮ್ಮಕ್ಕಳು ಅವರ ಉಪಕರಣವನ್ನು ಮುಟ್ಟಿ, ತಟ್ಟಿ ನೋಡಿ, ಅವರಲ್ಲಿ ಮಾತನಾಡಿದಾಗ ಆ ವೃದ್ಧರು ಬಹಳ ಸಂತಸಗೊಂಡರು. ಅವರಿಗೆ ಸ್ವಲ್ಪ ಹೆಚ್ಚೇ ಭಕ್ಷೀಸು ನೀಡಿ ರಾಕೆಟ್ ಲಿಫ್ಟಿನಲ್ಲಿ ಕೆಳಬಂದು ನಮ್ಮ ಹೋಟೇಲ್ ಕೋಣೆ ಸೇರಿದಾಗ ಮಧ್ಯರಾತ್ರಿ ಗಂಟೆ ಒಂದು!

ಮರುದಿನ …. ಜೂನ್ 9ನೇ ದಿನ ಭಾನುವಾರ. ನಮ್ಮ ಎಲ್ಲಾ ಸರಂಜಾಮುಗಳನ್ನೂ ಒಟ್ಟುಗೂಡಿಸಿ, ಬೆಳಗ್ಗಿನ ಉಪಾಹಾರ ಮುಗಿಸಿ, ಮಧ್ಯಾಹ್ನದ ಊಟಕ್ಕೂ ಪ್ರತ್ಯೇಕವಾದ ಬಂದೋಬಸ್ತು ಮಾಡಿಕೊಂಡು, ಬಾಡಿಗೆ ಕಾರೊಂದನ್ನು ಪಡೆದು, ಅದರಲ್ಲಿ ನಮ್ಮೆಲ್ಲಾ ಸಾಮಾನುಗಳನ್ನು ತುಂಬಿಸಿ ಹೊರಟೆವು…ಇನ್ನೊಂದು ಬಹು ಚಂದದ ಜಾಗಕ್ಕೆ…ಅದುವೇ ಸೆಂಟ್ರಲ್ ಪಾರ್ಕ್…

ಸೆಂಟ್ರಲ್ ಪಾರ್ಕ್(Central Park)

ನಗರದ ಮಧ್ಯಭಾಗದಲ್ಲಿ ಸುಮಾರು 840 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಪಸರಿಸಿರುವ ಈ ಪಾರ್ಕ್, ಪಟ್ಟಣದಲ್ಲಿ ಐದನೇ ಸ್ಥಾನವನ್ನು ಪಡೆದಿದ್ದರೂ, ಇಡೀ ಅಮೆರಿಕದಲ್ಲೇ ಅತ್ಯಂತ ಹೆಚ್ಚು, ಎಂದರೆ ವರ್ಷದಲ್ಲಿ ಸುಮಾರು 42 ಮಿಲಿಯ ಪ್ರವಾಸಿಗರು ಭೇಟಿ ಕೊಡುವ ಪಾರ್ಕ್ ಇದಾಗಿದೆ. ಅತೀ ಹೆಚ್ಚು ಚಲನಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಿದ ಹೆಗ್ಗಳಿಕೆ ಕೂಡಾ ಇದರದಾಗಿದೆ. 1857ರಲ್ಲಿ ಸುಮಾರು 778 ಎಕರೆ ಜಾಗದಲ್ಲಿ ನಿರ್ಮಾಣಗೊಂಡ ಈ ಪಾರ್ಕ್, 1858ರಲ್ಲಿ ಲೋಕಾರ್ಪಣೆಗೊಂಡಿತು. ಆ ಬಳಿಕ, ಇನ್ನೂ ಹೆಚ್ಚು ವಿಸ್ತಾರಗೊಳಿಸಿದ ಪಾರ್ಕ್ 1876ರಲ್ಲಿ ಜನಸಾಮಾನ್ಯರಿಗಾಗಿ ತೆರೆಯಲಾಯಿತು. ಇಲ್ಲಿಯ ನೈಸರ್ಗಿಕ ಹಸಿರು ವನಸಿರಿ, ಅಲ್ಲಲ್ಲಿ ಜುಳುಜುಳು ಹರಿಯುವ ನೀರ ತೊರೆಗಳು, ಅವುಗಳಿಗೆ ಅಡ್ಡಲಾಗಿ ಕಟ್ಟಿರುವ ಸುಂದರ ವಿವಿಧ ಮಾದರಿಗಳ ಸೇತುವೆಗಳು,ಸಂಗೀತ, ನೃತ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಮತ್ತು ಕಲಿಯಲು ಅನುಕೂಲ ಒದಗಿಸುವ ವಿವಿಧ ಕೇಂದ್ರಗಳು ಇಲ್ಲಿಯ ಮುಖ್ಯ ಆಕರ್ಷಣೆಗಳಾದರೂ; ಇಲ್ಲಿ ಆಗೊಮ್ಮೆ, ಈಗೊಮ್ಮೆ ನಡೆಯುವ ಕೊಲೆ, ದರೋಡೆಗಳಂತಹ ದುಷ್ಕೃತ್ಯಗಳಿಗೂ ಮೂಕ ಸಾಕ್ಷಿಯಾಗಿರುವುದು ಸುಳ್ಳಲ್ಲ.  

ಈ ಸೆಂಟ್ರಲ್ ಪಾರ್ಕಿಗೆ ನಾಲ್ಕೂ ದಿಕ್ಕುಗಳಲ್ಲಿ ಪ್ರವೇಶದ್ವಾರಗಳಿದ್ದು; ಸಾವಿರಾರು ಗಗನಚುಂಬಿ ಕಾಂಕ್ರೀಟ್ ಕಟ್ಟಡಗಳ ಕಾಡಿನ ನಡುವೆ ಇಂತಹದೊಂದು ಹಸಿರು ವನ ಇರುವುದೆಂದು ನಂಬುವುದೇ ಅಸಾಧ್ಯ! ವೈಭವೋಪೇತ ಜಗತ್ತಿನಿಂದ ಸುಂದರ ಪ್ರಕೃತಿಯ ಮಡಿಲಿಗೆ ಕೆಲವೇ ಹೆಜ್ಜೆಗಳ ಅಂತರ! ನಾವು ಪಾರ್ಕಿನೊಳಗೆ ಹೋಗುತ್ತಿದ್ದಂತೆಯೇ, ಅದರೊಳಗಿನ ಆಗಸದೆತ್ತರ ಬೆಳೆದು ನಿಂತಿರುವ ವಿವಿಧ ಜಾತಿಯ ಮರಗಳು, ದೊಡ್ಡ ಪೊದೆಗಳು,  ಹಸಿರು ಹುಲ್ಲು ಹೊದ್ದು ಮಲಗಿರುವ ಬಯಲು, ದಿನ್ನೆಗಳು, ಪುಟ್ಟ, ದೊಡ್ಡ ತೊರೆಗಳಲ್ಲಿ ಹರಿಯುವ ಸ್ಪಟಿಕಜಲ, ಅಗಲವಾದ ರಸ್ತೆಗಳು, ಚಿಕ್ಕಮಕ್ಕಳಿಗಾಗಿ ಅಲ್ಲಲ್ಲಿ ಜಾರುಬಂಡಿ, ಜೋಕಾಲಿಗಳಿರುವ ಆಟದ ತಾಣಗಳು, ಅಲ್ಲಲ್ಲಿ ಕಸದ ಡಬ್ಬಗಳು…ಎಲ್ಲೆಲ್ಲೂ ಸ್ವಚ್ಛ…ಸುಂದರ! ಹಬ್ಬದ ಸಂಭ್ರಮ ಎಲ್ಲೆಡೆ ಹರಡಿತ್ತು. ಹುಲ್ಲು ಹಾಸಿನ ಮೇಲೆ ಕುಳಿತ ಹಿರಿಯರು, ಆಟವಾಡುವ ಮಕ್ಕಳು, ಹಾರಾಡುವ ಬೆಲೂನ್ ಗಳು, ಪಾರ್ಕಿನಲ್ಲಿ ಮತ್ತಷ್ಟು ಸಂಭ್ರಮವನ್ನು ತುಂಬಿದ್ದವು. ರಸ್ತೆ ಪಕ್ಕದಲ್ಲಿ ಸಾಬೂನು ಗುಳ್ಳೆಯಲ್ಲಿ ವಿಶೇಷ ಆಕಾರಗಳಲ್ಲಿ ಮಾಡಿ ಮಕ್ಕಳ ಗಮನ ಸೆಳೆಯುತ್ತಿದ್ದ ವ್ಯಾಪಾರಿಯ ಬಳಿ ಹೋದ ನಮ್ಮ ಮೊಮ್ಮಕ್ಕಳೂ ಅದರೊದನೆ ಆಡಿ ಅದರ ಆನಂದ ಪಡೆದರು. ಬಹಳ ವೇಗವಾಗಿ, ಹಿಂಡು ಹಿಂಡಾಗಿ ಸಾಗುತ್ತಿದ್ದ ಜನರ ಹಿಂದುಗಡೆಯೇ ನಾವೂ ಹೊರಟೆವು.

ನಾವು ಅಲ್ಲಿದ್ದ ದಿನದಂದು Puerto Rican Day Parade ಎಂಬ ಮೆರವಣಿಗೆಯು ನಡೆಯುತ್ತಿದ್ದುದು ವಿಶೇಷವಾಗಿದ್ದು, ಅದನ್ನು ವೀಕ್ಷಿಸುವ ಸದವಕಾಶವೂ ನಮ್ಮದಾಯಿತು. ಪೋರ್ಟೊ ರಿಕೊ ಎಂಬುದು ಕೆರೆಬಿಯನ್ ಸಮುದ್ರದ ಈಶಾನ್ಯ ದಿಕ್ಕಿನಲ್ಲಿರುವ ಒಂದು ಪುಟ್ಟ ದ್ವೀಪ ಸಮೂಹ. ಇದರಲ್ಲಿ ಒಂದು ದೊಡ್ಡದಾದ ದ್ವೀಪವಿದ್ದು, ಉಳಿದಂತೆ ನಾಲ್ಕು ಪುಟ್ಟ ದ್ವೀಪಗಳಿವೆ. ಒಟ್ಟಾಗಿ, 100ಮೈಲು ಉದ್ದ ಹಾಗೂ 35 ಮೈಲು ಅಗಲವಿರುವ ದ್ವೀಪ ಇದಾಗಿದೆ. ಸುಮಾರು 4000ವರ್ಷಗಳ ಇತಿಹಾಸವಿರುವ ಈ ದ್ವೀಪವು, 1941ರಲ್ಲಿ ಅಮೆರಿಕದ ಕೈವಶವಾಯಿತು. ಇದರ ಮೂಲ ನಿವಾಸಿಗಳೇ ಪೋರ್ಟೊ ರಿಕೊಸ್.  ಈ ದ್ವೀಪವು ದಟ್ಟ ಹಸಿರು ಹೊದ್ದು, ಹಲವಾರು ಜಲಪಾತಗಳು, ಗುಡ್ಡ, ಬೆಟ್ಟಗಳು, ಅಹ್ಲಾದಕರ ಹವೆಯಿಂದ ಕೂಡಿ ಅತ್ಯಂತ ಸುಂದರವಾಗಿದೆ. ಇಲ್ಲಿ ಸುಮಾರು 3.2 ಮಿಲಿಯ ಜನರು ವಾಸಿಸುವರು. ಅವರೀಗ ಅಮೆರಿಕದ ಆಡಳಿತಕ್ಕೆ ಒಳಪಟ್ಟಿದ್ದರೂ, ಈ ಪಂಗಡವರು  ಈ ದಿನವನ್ನು, ಎಂದರೆ, ಜೂನ್ ತಿಂಗಳ ಎರಡನೇ ಆದಿತ್ಯವಾರವನ್ನು ಸುಂದರ ಮೆರವಣಿಗೆಯ ಮೂಲಕ ಅವರದೇ ದಿನವೆಂದು ಎಲ್ಲೆಡೆ ಆಚರಿಸಿ ಸಂಭ್ರಮಿಸುವರು. ಈ ಮೆರವಣಿಗೆಯು ಅಮೆರಿಕದಲ್ಲೇ ಅತ್ಯಂತ ದೊಡ್ಡದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹತ್ತಿರದಲ್ಲೇ  ಬ್ಯಾಂಡ್, ವಾದ್ಯಗಳ ಸುಶ್ರಾವ್ಯ ನಾದ ಕೇಳತೊಡಗಿತು.  ಹೋ… ಹತ್ತಿರದಲ್ಲೇ ಇದೆ ಅಂದುಕೊಂಡು ಮುಂದಕ್ಕೆ ಹೋಗುತ್ತಿದ್ದರೆ, ಅದೆಷ್ಟು ನಡೆದರೂ ಅವುಗಳ ಮೂಲ ಸಿಗಲೇ ಇಲ್ಲ. ಅಷ್ಟರೊಳಗೆ ಆಕಾಶದಲ್ಲಿ, ತಲೆಯ ಮೇಲ್ಗಡೆಯೇ ಹೆಲಿಕಾಪ್ಟರ್ ಹಾರಾಟದ ಸದ್ದು ಕೇಳತೊಡಗಿತು. ಅದೇಕೆಂದು ಕೇಳಿದಾಗ; ಸುರಕ್ಷತಾ ಕ್ರಮವಾಗಿ ಗಸ್ತು ತಿರುಗುತ್ತಿರುವುದೆಂದು ತಿಳಿಯಿತು. ಅಲ್ಲೇ ಮುಂದಕ್ಕೆ, ಹಲವಾರು ಸೈನಿಕರು ಶಿಸ್ತಿನಿಂದ, ಬರುವ ಜನರಿಗೆ ಉಚಿತ ಮಾಹಿತಿಗಳನ್ನಿತ್ತು ಸಹಕರಿಸುತ್ತಿದ್ದರು. ರಸ್ತೆಯಲ್ಲಿ ಮುಂದಕ್ಕೆ ಹೋಗುತ್ತಿದ್ದಂತೆಯೇ  ರಸ್ತೆಯ ಇಕ್ಕೆಲಗಳಲ್ಲೂ ಜನಸಾಗರ..! ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿರುವ ತೆರೆದ ವಾಹನಗಳಲ್ಲಿ ಸಂಗೀತ ವಾದ್ಯಗಳ ಹಿಮ್ಮೇಳದೊಂದಿಗೆ; ಇಲ್ಲಿಯ ಹೆಸರಾಂತ ಗಾಯಕ, ಗಾಯಕಿಯರು ಗಟ್ಟಿ ಸ್ವರದಲ್ಲಿ ಹಾಡುತ್ತಿದ್ದರು. ಕೆಲವು ವಾಹನಗಳಲ್ಲಿ , ಮೈಯಿಡೀ ಹಕ್ಕಿ ಗರಿಗಳು, ಮಣಿಸರಗಳು ಇತ್ಯಾದಿ ಪೋರ್ಟೊ ರಿಕೊಸ್ ಜನಾಂಗದ ಸಾಂಪ್ರದಾಯಿಕ ವೇಷಗಳಲ್ಲಿ ವಿಜೃಂಭಿಸುತ್ತಿದ್ದರು. ತಾಸುಗಳು ಕಳೆದರೂ, ಮೆರವಣಿಗೆ ಕೊನೆಯೇ ಇಲ್ಲವೇನೋ ಎನ್ನುವಂತೆ ಒಂದೇ ಸಂಭ್ರಮದಲ್ಲಿ ಸಾಗುತ್ತಿತ್ತು. ಅದಾಗಲೇ ನಡುಹಗಲು… ನಾವು ನಮ್ಮ ಸಮಯವನ್ನು ಸಂಭಾಳಿಸಬೇಕಾದ ಅಗತ್ಯವಿದ್ದುದರಿಂದ ಅಲ್ಲಿಂದ ಹೊರಟು, ಪಾರ್ಕಿನೊಳಗೆ ಹುಲ್ಲು ಹಾಸಿನ ಮೇಲೆ ಕುಳಿತು ಚುರುಗುಟ್ಟುವ ಹೊಟ್ಟೆಯನ್ನು ತಂಪಾದ ಮೊಸರನ್ನದಿಂದ ಸಮಾಧಾನಪಡಿಸಿದೆವು… ತುಸು ಹೊತ್ತು ತಂಗಾಳಿಗೆ ಮೈಯೊಡ್ಡಿ ಪ್ರಕೃತಿಯ ಸೊಬಗನ್ನು ಆನಂದದಿಂದ ಸವಿದೆವು…

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:   http://surahonne.com/?p=38610

-ಶಂಕರಿ ಶರ್ಮ, ಪುತ್ತೂರು. 

12 Responses

  1. ಸುಚೇತಾ says:

    Very nice

  2. ಪ್ರವಾಸ ಕಥನ ಎಂದಿನಂತೆ ಓದಿಸಿಕೊಂಡು ಹೋಯಿತು ಶಂಕರಿ ಮೇಡಂ..

    • ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು . …ನಾಗರತ್ನ ಮೇಡಂ.

  3. ಚಂದದ ಪ್ರವಾಸ ಕಥನ

  4. Padma Anand says:

    ಸೆಂಟ್ರಲ್ ಪಾರ್ಕಿನ ವಿವರಣೆಗಳು ಕಣ್ಣಿಗೆ ಕಟ್ಟುವಂತೆ ಮೂಡಿ ಬಂದಿದೆ.

    • ಶಂಕರಿ ಶರ್ಮ says:

      ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ವಂದಿಸಿದೆ…ಪದ್ಮಾ ಮೇಡಂ.

  5. ನಯನ ಬಜಕೂಡ್ಲು says:

    ಸೊಗಸಾಗಿದೆ ಪ್ರವಾಸ ಕಥನ

  6. ಮಹಾಬಲ says:

    ನಿರೂಪಣೆ ಸೊಗಸಾಗಿದೆ

  7. ಮಹಾಬಲ says:

    ಸುಂದರ ಪ್ರವಾಸ ಕಥನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: