ವಾಟ್ಸಾಪ್ ಕಥೆ 31 : ನಿಷ್ಠೆಯ ದುಡಿಮೆಯ ಮಹತ್ವ.
ಒಂದು ಊರಿನ ದೊಡ್ಡ ಬೀದಿಯೊಂದರಲ್ಲಿ ದೊಂಬರು ಆಟ ತೋರಿಸುತ್ತಿದ್ದರು. ಅದು ಅವರ ಹೊಟ್ಟೆಪಾಡಿನ ಕಸುಬು. ಒಬ್ಬಾತ ಡೋಲನ್ನು ಬಾರಿಸುತ್ತಿದ್ದ. ಒಬ್ಬ ಹುಡುಗ ತಾಳದ ಲಯಕ್ಕೆ ತಕ್ಕಂತೆ ಹಲವು ಕಸರತ್ತುಗಳನ್ನು ಮಾಡಿ ರಂಜಿಸುತ್ತಿದ್ದ. ಸುತ್ತ ನೆರೆದಿದ್ದ ನೂರಾರು ಜನರು ಆಟದ ಮಜಾ ತೆಗೆದುಕೊಳ್ಳುತ್ತಿದ್ದರು. ಹುಡುಗನು ಮುಂದಿನ ಆಟವಾಗಿ ಕೋಲಿನ ಸಹಾಯದಿಂದ ಮನೆಯಷ್ಟು ಎತ್ತರಕ್ಕೆ ನೆಗೆದು ತೋರಿದ. ಅಲ್ಲದೆ ಒಬ್ಬಾತನು ಹಿಡಿದುಕೊಂಡಿದ್ದ ಬಿದಿರಿನ ಗಳುವೊಂದನ್ನು ಸಲೀಸಾಗಿ ಹತ್ತಿ ಅದರ ತುದಿಯಲ್ಲಿ ಸುಮಾರು ಮೂವತ್ತು ಅಡಿ ಎತ್ತರದಲ್ಲಿ ನಿಂತು ಕೆಲವು ಆಟ ತೋರಿಸಿದ. ಅವನು ಎತ್ತರಕ್ಕೆ ಜಿಗಿಯುವುದು ಮತ್ತು ಬರಿಯ ಬೊಂಬಿನ ಮೇಲೆ ಚಕಚಕನೆ ಹತ್ತಿಹೋಗುವುದನ್ನು ನೋಡುತ್ತಿದ್ದ ಕಸುಬುದಾರ ಕಳ್ಳನಿಗೆ ಒಂದು ಉಪಾಯ ಹೊಳೆಯಿತು.
ಈ ಹುಡುಗನನ್ನು ಹೇಗಾದರೂ ಮಾಡಿ ನನ್ನ ಜೊತೆಯಲ್ಲಿ ಸೇರಿಸಿಕೊಂಡರೆ ನನಗೆ ಅನುಕೂಲವಾಗುವುದು. ಹುಡುಗ ಎತ್ತರದ ಗೋಡೆಗಳನ್ನು ಬೊಂಬಿನ ಸಹಾಯದಿಂದ ಏರಿ ಆಚೆಯ ಬದಿಗೆ ಹೋಗಬಹುದು. ಮನೆಯ ಒಳಗಿನಿಂದ ಬಾಗಿಲ ಚಿಲಕವನ್ನು ಸಡಿಲಿಸಿದರೆ ಸಾಕು, ಮುಂದೆ ನನ್ನ ಕೆಲಸ ಸಲೀಸಾಗುತ್ತದೆ. ದೊಡ್ಡದೊಡ್ಡ ಮನೆಗಳನ್ನು ಲೂಟಿಮಾಡಿ ಒಮ್ಮೆಗೇ ಸಾಕಷ್ಟು ಕಮಾಯಿ ಮಾಡಿಕೊಳ್ಳಬಹುದು ಎಂದು ಆಲೋಚಿಸಿದ.
ದೊಂಬರ ಆಟ ಮುಗಿಯುವ ತನಕ ಕಾಯ್ದಿದ್ದು ಆ ಹುಡುಗನೊಡನೆ ಮಾತನಾಡಿದ. ಅವನಿಗೆ ”ನೀನು ದಿನವೆಲ್ಲ ಬೀದಿಗಳಲ್ಲಿ ಮೈ ನೋಯಿಸಿಕೊಂಡು ಆಟವಾಡಿದರೆ ಜನ ಎಷ್ಟು ಕೊಡುತ್ತಾರೆ? ಅದು ಒಂದು ದಿನಕ್ಕೆ ಖರ್ಚಾಗಿ ಹೋಗುತ್ತದೆ. ನನ್ನ ಜೊತೆಯಲ್ಲಿ ಬಂದರೆ ಒಂದು ರಾತ್ರಿಯಲ್ಲಿ ನಿನಗೆ ಸಾವಿರಾರು ರೂಪಾಯಿ ಕೊಡುತ್ತೇನೆ. ನೀನು ಬಹಳಷ್ಟು ಕಾಲ ಹಾಯಾಗಿರಬಹುದು. ಆಲೋಚಿಸಿ ನನ್ನ ಜೊತೆ ಸೇರಿಕೋ” ಎಂದು ಆಸೆ ಹುಟ್ಟಿಸಿದನು.
ಹುಡುಗನಿಗೂ ಇದು ಸರಿಯೆನ್ನಿಸಿತು. ಸಾವಿರಾರು ರೂಪಾಯಿ ಒಂದೇ ಬಾರಿಗೆ ಬರುತ್ತದೆನ್ನುವ ದುರಾಸೆಯಿಂದ ಒಪ್ಪಿ ಕಳ್ಳನೊಡನೆ ಹೋದ.
ರಾತ್ರಿ ಕತ್ತಲಾದಮೇಲೆ ದೊಡ್ಡ ಶ್ರೀಮಂತರ ಮನೆಯೊಂದನ್ನು ಆಯ್ಕೆ ಮಾಡಿಕೊಂಡು ಕಳ್ಳ ಲೂಟಿಮಾಡಲು ಆಲೋಚಿಸಿದ. ಮನೆಯ ಬಳಿಗೆ ಬಂದಾಗ ಹುಡುಗನ ಕಿವಿಯಲ್ಲಿ ನೀನು ಈಗ ಕಾಂಪೌಂಡು ಜಿಗಿದು ಒಳಗಡೆಗೆ ಹೋಗಬೇಕು. ಮಹಡಿಯಿಂದ ಮನೆಯ ಒಳಕ್ಕೆ ಪ್ರವೇಶಿಸಿ ಒಳಗಿನ ಚಿಲಕವನ್ನು ಸರಿಸಿ ನಾನು ಒಳ ಬರಲು ಸಹಾಯ ಮಾಡಬೇಕು ಎಂದು ಹೇಳಿದ.
ಅದಕ್ಕೆ ಹಾಗೇ ಆಗಲೆಂದು ತನ್ನ ಕೈಯಲ್ಲಿದ್ದ ಬಿದಿರಿನ ಗಳುವನ್ನು ಹಿಡಿದು ”ಸರಿ ಈಗ ನೀನು ಡೋಲು ಬಾರಿಸಿದರೆ ನನಗೆ ಜಿಗಿಯಲು ಪ್ರೇರೇಪಣೆ ಸಿಗುತ್ತದೆ. ಜೋರಾಗಿ ಡೋಲು ಬಾರಿಸು” ಎಂದನು. ಕಳ್ಳನಿಗೆ ದಿಗ್ಭ್ರಮೆಯಾಯ್ತು. ಇವನಿಗೆ ಡೋಲಿನ ಸದ್ದಿಲ್ಲದೆ ಕೆಲಸ ಮಾಡಲು ಬರುವುದಿಲ್ಲ. ನಾನೇನಾದರೂ ಇಲ್ಲಿ ಶಬ್ಧ ಮಾಡಿದರೆ ಇಬ್ಬರೂ ಕಾವಲಿನವರಿಗೆ ಸಿಕ್ಕಿ ಜೈಲು ಸೇರುವುದು ಖಂಡಿತ. ಎಂದು ನಿರಾಶೆಯಿಂದ ಕಳ್ಳತನದ ಯೋಜನೆಯನ್ನು ರದ್ದುಮಾಡಿ ಹುಡುಗನನ್ನು ಓಡಿಸಿಬಿಟ್ಟ.
ಕಳ್ಳ, ದೊಂಬರಹುಡುಗ, ಡೋಲಿನ ಶಬ್ಧಗಳೆಲ್ಲವೂ ಇಲ್ಲಿ ಸಾಂಕೇತಿಕವಾದವು. ತಮ್ಮತಮ್ಮ ನಿಯೋಜಿತ ಕೆಲಸಗಳಲ್ಲಿ ನಿಷ್ಟೆಯಿಂದ ತೊಡಗಿದರೆ ಅದರಲ್ಲಿ ಸಂಪಾದನೆ, ಅಥವಾ ನಿರೀಕ್ಷಿತ ಫಲ ದೊರೆಯುವುದು ಖಂಡಿತ. ಅದಕ್ಕಾಗಿ ಪ್ರೇರಣೆಗಾಗಿ ಕಾಯುವುದು ಅಗತ್ಯವಿಲ್ಲ. ತಮಗೆ ಗೊತ್ತಿರುವ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ತಾವಂದುಕೊಂಡಂತೆ ಮುಂದುವರೆಯಬೇಕು. ಕಾರ್ಯಸಾಧನೆಗೆ ನಿಷ್ಠೆ, ಪರಿಶ್ರಮವೇ ಮುಖ್ಯವಾಗುತ್ತದೆ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪೂರಕ ರೇಖಾಚಿತ್ರದೊಂದಿಗೆ ಅತ್ಯುತ್ತಮ ಸಂದೇಶ ಹೊತ್ತ ಕಥೆ ಎಂದಿನಂತೆ ಚಂದ ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಉತ್ತಮ ಸಂದೇಶ ಇರುವ ಉತ್ತಮ ಕಥೆ
ಧನ್ಯವಾದಗಳು ನಯನಮೇಡಂ
ಎಂದಿನಂತೆ ಪೂರಕ ರೇಖಾ ಚಿತ್ರದೊಂದಿಗರ ತುಂಬಾ ಒಳ್ಳೆಯ ಸಂದೇಶ ನೀಡುವ ಸುಂದರ ಕಥೆ.
ಧನ್ಯವಾದಗಳು ಪದ್ಮಾ ಮೇಡಂ
ಕಥೆ ಪ್ರಕಟಿಸಿದ ಹೇಮಮಾಲಾ ಮೇಡಂ ಗೆ ಧನ್ಯವಾದಗಳು.
ಕತೆ ಚೆನ್ನಾಗಿದೆ ಮೇಡಂ
ಧನ್ಯವಾದಗಳು ಗೆಳತಿ ಸುಚೇತಾ