ಉಳುವ ವೈದ್ಯನ ನೋಡಿಲ್ಲಿ
‘ಅಂಕಲ್, ನೀವು ನಮ್ಮ ತೋಟ ನೋಡಲಿಕ್ಕೆ ಬರಲೇ ಬೇಕು, ನಾವು ಬಗೆ ಬಗೆಯ ತರಕಾರಿಗಳನ್ನು ಬೆಳೆದಿದ್ದೇವೆ’, ಎಂಬ ಮಾತುಗಳನ್ನು ಕೇಳಿದಾಗ ಅಚ್ಚರಿಯಾಗಿತ್ತು. ಯಾಕೆ ಅಂತೀರಾ? ಈ ಮಾತುಗಳನ್ನು ಹೇಳಿದವರು ಸ್ಕಾಟ್‌ಲ್ಯಾಂಡಿನಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರಿನ ರುಡಾಲ್ಫ್ ದಂಪತಿಗಳು. ಸ್ಕಾಟ್‌ಲ್ಯಾಂಡಿನಲ್ಲಿ ವೈದ್ಯನಾಗಿದ್ದ ಮಗನ ಮನೆಗೆ ಹೋದಾಗ ಕೇಳಿದ ಸಾಹಸಗಾಥೆಯಿದು. ಮಂಗಳೂರಿನಿಂದ ವಲಸೆ ಬಂದ ವೈದ್ಯ ದಂಪತಿಗಳು ಸ್ಕಾಟ್‌ಲ್ಯಾಂಡಿನ ಪ್ರಮುಖ ನಗರಗಳಲ್ಲೊಂದಾದ ಅಬರ್ಡೀನ್‌ನನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡಿದ್ದರು. ತೋಟಗಾರಿಕೆಯಲ್ಲಿ ಆಸಕ್ತಿಯುಳ್ಳ ನನ್ನ ಯಜಮಾನರು ರುಡಾಲ್ಫ್ ದಂಪತಿಗಳ ಕಮ್ಯುನಿಟಿ ಗಾರ್ಡನ್ ಸೆಂಟರ್ ನೋಡಲು ತುದಿಗಾಲಲ್ಲಿ ನಿಂತಿದ್ದರು. ಮಾರನೆಯ ದಿನ ಮಧ್ಯಾನ್ಹ ಅವರು ನಮ್ಮನ್ನು ತಮ್ಮ ತೋಟಕ್ಕೆ ಕರೆದೊಯ್ದರು.
ರುಡಾಲ್ಫ್ ದಂಪತಿಗಳು ಉತ್ಸಾಹದಿಂದ ಈ ಸಮುದಾಯದ ತೋಟಗಾರಿಕೆಯ ವಿವರಗಳನ್ನು ನಮಗೆ ತಿಳಿಸಿದರು. ನಗರಸಭಾ ಪಾಲಿಕೆಯವರು ಊರ ಹೊರಗಿನ ಖಾಲಿಯಿರುವ ಭೂ ಪ್ರದೇಶವನ್ನು ಗುರುತಿಸಿ ಒಂದು ಬೇಲಿಯನ್ನು ಹಾಕಿ, ತೋಟಗಾರಿಕೆಯಲ್ಲಿ ಆಸಕ್ತಿಯುಳ್ಳವರಿಂದ ಅರ್ಜಿಯನ್ನು ಆಹ್ವಾನಿಸುತ್ತಾರೆ. ಕ್ರಮಬದ್ಧವಾಗಿ ಅರ್ಜಿಯನ್ನು ಪರಿಶೀಲಿಸಿದ ನಂತರ ಒಂದು ಅಥವಾ ಎರಡು ಗುಂಟೆ ಜಾಗವನ್ನು ಅರ್ಜಿದಾರರಿಗೆ ಗುತ್ತಿಗೆ ಆಧಾರದ ಮೇಲೆ ನೀಡುತ್ತಾರೆ. ಮೊದಲಿಗೆ ಸ್ವಲ್ಪ ಜಾಗವನ್ನು ನೀಡಿ, ಅವರು ಸರಿಯಾದ ರೀತಿಯಲ್ಲಿ ಬಳಕೆ ಮಾಡುತ್ತಾರೋ ಇಲ್ಲವೋ ಎಂದು ಗಮನಿಸಿ, ನಂತರ ಅವರಿಗೆ ಜಾಗವನ್ನು ಮಂಜೂರು ಮಾಡುತ್ತಾರೆ. ಜಮೀನಿನ ಮೇಲಿನ ಶುಲ್ಕ ವರ್ಷಕ್ಕೆ, ಕೇವಲ ಇಪ್ಪತ್ತೈದರಿಂದ ನಲವತ್ತು ಪೌಂಡ್ ಮಾತ್ರ. ಅವರ ವಿವರಣೆ ನಮ್ಮಲ್ಲಿ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ಇಷ್ಟು ಚಿಕ್ಕ ಜಾಗದಲ್ಲಿ ಏನನ್ನು ಬೆಳೆಯಲು ಸಾಧ್ಯ? ವೈದ್ಯ ವೃತ್ತಿಯಲ್ಲಿರುವ ನಿಮಗೆ ಈ ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಬಿಡುವು ಸಿಗುವುದೇ? ಬೆಳೆದ ತರಕಾರಿಗಳನ್ನು ಮಾರಾಟ ಮಾಡುವಿರಾ? ಇತ್ಯಾದಿ. ಅವರ ಉತ್ತರ ಹೀಗಿತ್ತು – ನಮ್ಮ ಮನೆಗೆ ಬೇಕಾಗುವಷ್ಟು ತರಕಾರಿ ಬೆಳೆಯಬಹುದು. ಆಸಕ್ತಿ ಇದ್ದಲ್ಲಿ ಸಮಯ, ಅವಕಾಶ ಖಂಡಿತಾ ದೊರೆಯುವುದು. ಇಲ್ಲಿ ಯಾರೂ ಲಾಭಕ್ಕಾಗಿ ಕೃಷಿ ಮಾಡುವುದಿಲ್ಲ, ಬೆಳೆದ ತರಕಾರಿಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುತ್ತೇವೆ. ರುಡಾಲ್ಫ್ ದಂಪತಿಗಳು ನಮ್ಮ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನಕರವಾಗಿ ಉತ್ತರಿಸಿದರು. ಈ ಸಮುದಾಯ ತೋಟಗಾರಿಕೆ ವ್ಯವಸ್ಥೆಯ ಉದ್ದೇಶಗಳು ಈಗಿನ ಸಮಾಜದಲ್ಲಿ ಬಹಳಷ್ಟು ಜನ ದ್ವೀಪಗಳಂತೆ ಬದುಕುತ್ತಿದ್ದಾರೆ. ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೇ ತಿಳಿದಿರುವುದಿಲ್ಲ. ಇಲ್ಲಿ ಒಟ್ಟಾಗಿ ಸೇರಿ ತೋಟಗಾರಿಕೆ ಮಾಡುವುದರಿಂದ ಅವರ ನಡುವೆ ಮಧುರ ಬಾಂಧವ್ಯ ಬೇಳೆಯುವ ಸಂಭವ ಹೆಚ್ಚು. ಭೂದೇವಿಯ ಸಂಪರ್ಕದಿಂದ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವುದು. ಜೊತೆಗೆ ತಾವೇ ಬೆಳೆದ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ತಿನ್ನುವ ಸದವಕಾಶ. ಶಾಲಾ ಮಕ್ಕಳಿಗೆಂದೇ ಸ್ವಲ್ಪ ಸ್ಥಳವನ್ನು ಮಂಜೂರು ಮಾಡುವುದರಿಂದ, ಮಕ್ಕಳು ಬಾಲ್ಯದಲ್ಲಿಯೇ ತರಕಾರಿ ಹಣ್ಣುಗಳನ್ನು ಬೆಳೆಯುವ ಕ್ರಮವನ್ನು ಕಲಿಯುವರು. ತೋಟಗಾರಿಕೆಯಿಂದ ನಗರವು ಹಸಿರುಟ್ಟು ಕಂಗೊಳಿಸುವಳು. ಕೊವಿಡ್ ಸಮಯದಲ್ಲಂತೂ, ಈ ಸಮುದಾಯ ತೋಟ ಎಲ್ಲರ ಪಾಲಿನ ಧನ್ವಂತರಿಯೇ ಆಗಿತ್ತು.
ಅವರ ಮಾತುಗಳನ್ನು ಮಂತ್ರಮುಗ್ಧರಾಗಿ ಕೇಳುತ್ತಿದ್ದೆವು. ಅಷ್ಟರಲ್ಲಿ ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಿಕೊಂಡ ತೋಟ ನಮ್ಮ ಮುಂದಿತ್ತು. ಸ್ಕಾಟಿಷ್ ವಾಟರ್ ಎಂಬ ಫಲಕ ಹೊತ್ತ ಜಲಮಂಡಳಿಯ ಪಕ್ಕದಲ್ಲಿ ಇತ್ತು ಈ ಸಮುದಾಯ ತೋಟದ ಲೇಔಟ್. (ನಮ್ಮಲ್ಲಿ ನಿವೇಶನಗಳ ಲೇಔಟ್ ಇದ್ದಹಾಗೆ) ಮಧ್ಯೆ ಒಂದು ಕಚ್ಛಾ ರಸ್ತೆ, ರಸ್ತೆಯ ಬದಿಯಲ್ಲಿ ಆಯತಾಕಾರದ ತೋಟಗಳು, ಪ್ರತಿಯೊಂದು ತೋಟದ ಮುಂದೆ ಒಂದೊಂದು ನಂಬರ್ ಉದಾ: 32,45 ಇತ್ಯಾದಿ. ನಾವು ಕಣ್ಣರಳಿಸಿ ರುಡಾಲ್ಫ್ ದಂಪತಿಗಳು ಬೆಳೆದ ತರಕಾರಿಗಳನ್ನು ನೋಡುತ್ತಿದ್ದೆವು ತೋಟದ ಬಾಗಿಲಲ್ಲಿ ಹೊಂಬಣ್ಣದ ನಗುವ ಹೂವಿನ ಸಾಲು, ಮುಂದೆ ಸಾಗಿದರೆ – ಸೋರೇಕಾಯಿ, ಕುಂಬಳಕಾಯಿ, ಹುರುಳೀಕಾಯಿ, ಆಲೂಗೆಡ್ಡೆ, ಬೀಟ್‌ರೂಟ್, ಪಾಲಕ್ ಸೊಪ್ಪು, ಲೆಟ್ಯೂಸ್, ಇತ್ಯಾದಿ. ಜೊತೆಗೆ ಒಂದೆಲಗ, ಚಕ್ರಮುನಿ ಸೊಪ್ಪು, ತೋಟದ ಒಂದು ಭಾಗದಲ್ಲಿ ಸ್ಟ್ರಾಬೆರ್ರಿ, ರ್‍ಯಾಸ್ಪ್‌ಬೆರ್ರಿ, ಬ್ಲಾಕ್‌ಬೆರ್ರಿ ಬೆಳೆದಿದ್ದರು. ಎಲ್ಲ ಗಿಡಗಳನ್ನೂ ಸಣ್ಣ ಸಣ್ಣ ಮಡಿಗಳಲ್ಲಿ ನೆಟ್ಟದ್ದರು. ಎರಡು ಗ್ರೀನ್ ಹೌಸ್‌ಗಳಲ್ಲಿ ಈರುಳ್ಳಿ, ಟೊಮ್ಯಾಟೋ, ಮೆಣಸಿನಕಾಯಿ ಹಾಕಿದ್ದರು. ಗೊಂಚಲು ಗೊಂಚಲಾಗಿ ಬಿಟ್ಟಿದ್ದ ಟೊಮ್ಯಾಟೋ ನೋಡಿ ನಾವು ನಮ್ಮೂರಿನಲ್ಲಿ ಒಂದು ಕೆ.ಜಿ. ಟೊಮ್ಯಾಟೋಗೆ ನೂರು ರೂಪಾಯಿ ಎಂದು ನೆನೆಪಿಸಿಕೊಂಡು ನಕ್ಕೆವು. ಅವರು ಹೆಮ್ಮೆಯಿಂದ ತಮ್ಮ ತೋಟದಲ್ಲಿರುವ ಕಸ ಕಡ್ಡಿಗಳಿಂದಲೇ ಸಾವಯವ ಗೊಬ್ಬರ ಮಾಡುವುದನ್ನು ತೋರಿಸಿದರು. ಎರಡು ಸಿಂಟೆಕ್ಸ್ ಟ್ಯಾಂಕುಗಳನ್ನು ಇಟ್ಟಿದ್ದರು, ಅದರ ಕೆಳಬದಿಯಲ್ಲಿ ಗೊಬ್ಬರವನ್ನು ಹೊರತೆಗೆಯಲು ಒಂದು ಪುಟ್ಟ ಮುಚ್ಚಳವಿದ್ದ ಔಟ್‌ಲೆಟ್ ಸಹ ಇತ್ತು. ಒಂದು ಸಿಂಟೆಕ್ಸ್‌ನಲ್ಲಿ ಕಸ ಕಡ್ಡಿ ತುಂಬಿದ ಮೇಲೆ ಮತ್ತೊಂದು ಸಿಂಟೆಕ್ಸ್‌ನಲ್ಲಿ ಕಸ ಹಾಕುತ್ತಿದ್ದರು. ಅಡುಗೆ ಮನೆಯಲ್ಲಿ ಉತ್ಪನ್ನವಾಗುವ ತರಕಾರಿ ಸಿಪ್ಪೆ, ಹಣ್ಣಿನ ಸಿಪ್ಪೆ ಎಲ್ಲವನ್ನೂ ತಂದು ಈ ಗೊಬ್ಬರದ ಟ್ಯಾಂಕಿಗೆ ಸುರಿಯುತ್ತಿದ್ದರು. ಮೂರರಿಂದ ಆರು ತಿಂಗಳಲ್ಲಿ ಕಡು ಕಪ್ಪು ಬಣ್ಣದ ಮರಳು ಮರಳಾದ ಕಾಂಪೋಸ್ಟ್ ತಯಾರಾಗುತ್ತಿತ್ತು. ನಗರ ಸಭೆಯವರು ಅಲ್ಲಲ್ಲಿ ನಲ್ಲಿಗಳನ್ನು ಹಾಕಿದ್ದರೂ, ಇವರು ಮಳೆ ನೀರಿನ ಕೊಯ್ಲನ್ನೂ ಅಳವಡಿಸಿಕೊಂಡಿದ್ದರು.
ಹಿಂದಿನಿಂದ, ‘ಹಯ್ಯಾ, ನೈಸ್ ವೆದರ್’ ಎಂಬ ಇನಿದನಿ ಕೇಳಿಬಂತು. ನಾವು ಹಿಂದಿರುಗಿ ನೋಡಿದಾಗ, ಮಹಿಳೆಯೊಬ್ಬಳು ಮೆಲ್ಲನೆ ಕಾರಿನಿಂದ ಇಳಿಯುತ್ತಿದ್ದಳು. ಅವಳ ಕೈ ಕಾಲು ಅದುರುತ್ತಿತ್ತು, ಅವಳಿಗೆ ಪಾರ್ಕಿನ್‌ಸನ್ ಖಾಯಿಲೆಯಂತೆ. ಆದರೆ ಅವಳ ಜೀವನೋತ್ಸಾಹ ಮೆಚ್ಚುವಂತದ್ದೇ. ಕಾರಿನಿಂದ ನಿಧಾನವಾಗಿ ಇಳಿದವಳು, ನೀರಿನ ಪೈಪನ್ನು ನಲ್ಲಿಗೆ ಜೋಡಿಸಿ ಗಿಡಗಳಿಗೆ ನೀರುಣಿ ಸಿದಳು. ಅವಳ ತೋಟದ ತುಂಬೆಲ್ಲಾ ಬಣ್ಣ ಬಣ್ಣದ ಹೂಗಳ ನರ್ತನ. ನಾಲ್ಕಾರು ಹೂಗಳನ್ನು ಕಿತ್ತು ನಮಗೆ ನೀಡಿ ಸಂಭ್ರಮಿಸಿದಳು. ಈ ಬಾರಿ ಬಿಸಿಲು ಚೆನ್ನಾಗಿದೆ, ಇನ್ನೂ ಹೂಗಳು ನಳನಳಿಸುತ್ತಿವೆ. ಸೆಪ್ಟೆಂಬರ್ ತಿಂಗಳು ಬಂದರಾಯ್ತು, ಎಲ್ಲಾ ಹೂಗಳೂ ಬಾಡಿ ಹೋಗುವುವು. ವರ್ಷಕ್ಕೆ ಆರು ತಿಂಗಳು ಮಾತ್ರ ಇಲ್ಲಿ ಹೂ, ತರಕಾರಿ ಬೆಳೆಯಬಹುದು. ಈ ಮಣ್ಣಿನಲ್ಲಿ ಕೆಲಸ ಮಾಡಿದ ಮೇಲೆಯೇ ನನ್ನ ಖಾಯಿಲೆ ನಿಯಂತ್ರಣದಲ್ಲಿದೆ. ಹಾಗಾಗಿ ನಾನು ನಿತ್ಯ ಇಲ್ಲಿಗೆ ಬರುತ್ತೇನೆ. ರುಡಾಲ್ಫ್ ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳುತ್ತಾ ನಮ್ಮನ್ನು ಬೀಳ್ಕೊಟ್ಟಳು.
ನಾವು ಬೆರಗಿನಿಂದ ಅವಳನ್ನೇ ದಿಟ್ಟಿಸಿದೆವು. ರುಡಾಲ್ಫ್‌ರವರ ಪತ್ನಿ ಜೂಲಿ ಅಲ್ಲಲ್ಲಿ ಬೆಳೆದಿದ್ದ ಕಳೆಯನ್ನು ಕೀಳುವುದರಲ್ಲಿ ಮಗ್ನಳಾದಳು. ರುಡಾಲ್ಫ್ ನಮ್ಮನ್ನು ಆ ಸಮುದಾಯದ ತೋಟದ ಸುತ್ತ ಕರೆದೊಯ್ದರು. ಕೆಲವರು ಕಲಾತ್ಮಕವಾಗಿ ತಮ್ಮ ತೋಟವನ್ನು ಸಿಂಗರಿಸಿದ್ದರೆ, ಮತ್ತೆ ಕೆಲವರು ತರಕಾರಿಗಳನ್ನು, ಹೂಗಳನ್ನು ಬೆಳೆದಿದ್ದರು. ಆ ತೋಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಲ್ಲೊಂದು ಮಕ್ಕಳಿಗಾಗಿ ಮೀಸಲಿದ್ದ ತೋಟವಿತ್ತು, ತರಕಾರಿಗಳೊಂದಿಗೆ ಅಲ್ಲಲ್ಲಿ ಗೊಂಬೆಗಳನ್ನೂ ಇಟ್ಟಿದ್ದರು. ಸುತ್ತಮುತ್ತಲಿನ ಶಾಲೆಯ ಮಕ್ಕಳನ್ನು ಇಲ್ಲಿಗೆ ವಾರಕ್ಕೊಮ್ಮೆ ಕರೆತಂದು ಅವರಿಂದಲೇ ತರಕಾರಿ ಸಸಿಗಳನ್ನು ನೆಡಿಸಿ, ಕಳೆ ಕೀಳಿಸಿ, ಗೊಬ್ಬರ ಹಾಕಿಸುವರಂತೆ. ಅಲ್ಲಿ ಬೆಳೆದ ಹೆಚ್ಚುವರಿ ತರಕಾರಿಗಳನ್ನು ಹಾಕಲು, ಪ್ರವೇಶ ದ್ವಾರದಲ್ಲಿ ಒಂದು ದೊಡ್ಡ ಪೆಟ್ಟಿಗೆ ಇಟ್ಟಿದ್ದಾರೆ. ಆ ತರಕಾರಿಗಳನ್ನು ವಾರಕ್ಕೊಮ್ಮೆ ಹರಾಜು ಹಾಕಿ, ಬಂದ ಹಣವನ್ನು ಬಡ ಬಗ್ಗರಿಗೆ ದಾನ ಮಾಡುವರಂತೆ.
ಸಮಯ ಸರಿದದ್ದೇ ಗೊತ್ತಾಗಲಿಲ್ಲ, ರುಡಾಲ್ಫ್ ದಂಪತಿಗಳು ಸೆಪ್ಟೆಂಬರ್ ಎಂಟರಂದು ಸುಗ್ಗಿ ಹಬ್ಬ ಆಚರಿಸುವವರಂತೆ. ಅಂದು ತಮ್ಮ ಆತ್ಮೀಯ ಗೆಳೆಯರನ್ನು ಆಮಂತ್ರಿಸಿ, ಭರ್ಜರಿ ಔತಣಕೂಟವನ್ನು ಏರ್ಪಡಿಸಿ, ಸೊಪ್ಪು, ತರಕಾರಿ, ಹಣ್ಣುಗಳನ್ನು ಕೊಯ್ಲು ಮಾಡಿ ಹರಾಜು ಹಾಕುವರಂತೆ, ಬಂದ ಹಣವನ್ನು ಚರ್ಚ್‌ಗೆ ದಾನ ಮಾಡುವರಂತೆ. ಅವರ ನಿಷ್ಕಾಮ ಸೇವೆಯನ್ನು ಕಂಡು ಬೆರಗಾದೆವು. ನಮ್ಮನ್ನು ಮನೆಗೆ ಕರೆದೊಯ್ಯಲು ಬಂದ ಮಗ, ರುಡಾಲ್ಫ್ ದಂಪತಿಗಳ ನಿಷ್ಕಲ್ಮಷ ಸೇವೆಯ ಬಗ್ಗೆ ಹೇಳತೊಡಗಿದ. ಅಲ್ಲಿಗೆ ಓದಲು ಬಂದ ವಿಧ್ಯಾರ್ಥಿಗಳು, ಉದ್ಯೋಗ ಅರಸಿ ಬಂದ ನಿರುದ್ಯೋಗಿಗಳು, ಮನೆ ಹುಡುಕಲು ಬಂದವರಿಗೆಲ್ಲಾ ಆಶ್ರಯದಾತರು ರುಡಾಲ್ಫ್. ಜೂಲಿ, ತನ್ನ ಬಿಡುವಿಲ್ಲದ ಕೆಲಸದ ನಡುವೆಯೂ ಬಂದ ಅತಿಥಿಗಳಿಗೆ ಆತ್ಮೀಯತೆಯಿಂದ ಸತ್ಕಾರ ಮಾಡುವುದರಲ್ಲಿ ಎತ್ತಿದ ಕೈ. ಅಬ್ಬಾ, ಈ ಆದರ್ಶ ದಂಪತಿಗಳ ಸಾಹಸಗಾಥೆಯನ್ನು ಕೇಳಿ ನಮಗೆ ಅಚ್ಚರಿಯ ಜೊತೆ ಜೊತೆಗೇ ಅವರನ್ನು ಭೇಟಿ ಮಾಡಿದ ನಾವೇ ಪುಣ್ಯವಂತರು ಎಂದೆನಿಸಿತ್ತು. ಮಂಗಳೂರಿನ ಬಡ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ರುಡಾಲ್ಫ್, ಬಂಧು ಬಾಂಧವರ ನೆರವಿನಿಂದ ತಮ್ಮ ವಿದ್ಯಾಭ್ಯಾಸ ಮುಗಿಸಿ, ಯು.ಕೆ.ಗೆ ವಲಸೆ ಹೋದವರು, ಸದಾ ನೊಂದವರ ಪಾಲಿನ ಆಶಾಕಿರಣವಾಗಿ ಬೆಳಗುತ್ತಿದ್ದಾರೆ. ಕುವೆಂಪುರವರ ಕವನದ, ಉಳುವ ಯೋಗಿಯ ನೋಡಿಲ್ಲಿ ಎಂಬ ಸಾಲುಗಳು ಮನದಲ್ಲಿ ಪ್ರತಿಧ್ವನ್ವಿಸುತ್ತಲೇ ಇವೆ. ಮತ್ತೆಲ್ಲಿ ಕಾಣಲು ಸಾಧ್ಯ ಇಂತಹ ವೈದ್ಯನನ್ನು / ಯೋಗಿಯನ್ನು?
-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಮಾರ್ಗದರ್ಶಿ ಬದುಕಿನ ಚಿತ್ರ
ಉತ್ತಮ ವಾದ ಹಾಗೂ..ಮನಸ್ಸು ಮಾಡಿದರೆ ಯಾವ ಊರಿನಲ್ಲಾದರೂ..ಬಾಂಧವ್ಯ ಬೆಸೆಯಬಹುದು ಎಂಬುದಕ್ಕೆ ಈ ಲೇಖನ.. ಉದಾಹರಣೆ ಯಂತಿದೆ…ಮೇಡಂ.
ಹಸಿರಿನಂತೆಯೇ ನಳನಳಿಸುತ್ತಿದೆ ಲೇಖನ
ವಂದನೆಗಳು ಸಹೃದಯ ಓದುಗರಿಗೆ
ಶೀರ್ಷಿಕೆ ಹಾಗೂ ಲೇಖನ ಉತ್ತಮವಾಗಿದೆ.ಅನುಭವವನ್ನು ಬರಹವಾಗಿಸಿ ಎಲ್ಲರನ್ನು ಮುಟ್ಟುವಂತೆ ಮಾಡುವ ಶಕ್ತಿ ನಿಮ್ಮ ಬರಹಕ್ಕಿದೆ.
ವೈದ್ಯರಾದ ರುಡಾಲ್ಫ್ ಮತ್ತು ಅವರ ಪತ್ನಿಯ ನಿಷ್ಕಾಮ ಕರ್ಮದ ಬಗ್ಗೆ ತಿಳಿದು ಮನತುಂಬಿ ಬಂತು. ಸರಳ, ಸುಂದರ ಲೇಖನ ಮುದನೀಡಿತು ಮೇಡಂ.
ಆದರ್ಶ ಜೀವಿಗಳು ಮೇಡಂ
ಖುಷೀ ಆಗುತ್ತೆ ಓದುವಾಗ