ಶತನಮನ
ಭೂಮಾತೆಯ ಪ್ರಿಯ ಸಹೋದರ
ಭೂಮ್ಯಾಂತರಾಳ ಬೆಳಗುವ ಚಂದಿರ
ಭೂತನಾಥನ ಶಿರದಿ ಹೊಳೆವ ತಂಗದಿರ
ಭೂತ ವರ್ತ ಭವಿಷ್ಯ ಕೌತುಕದ ಮಂದಿರ.
ಆಸ್ತಿಕರ ಪಾಲಿಗೆ ಜಾತಕ ಲಗ್ನಾಧಿಪತಿಯು
ನಾಸ್ತಿಕರ ಪಾಲಿಗೆ ಭೂಪರಿಧಿ ಉಪಗ್ರಹವು
ಕ್ಷೀರಪದಧಿ ಪ್ರಕಾಶಿಸುವ ಉಡುಗಳ ರಾಜನು
ಕ್ಷಿತಿಜದ ಮಕ್ಕಳು ಮುದ್ದಿಸುವ ಚಂದಮಾಮನು.
ವಿಜ್ಞಾನಿಗಳ ದೃಷ್ಟಿಗಿದುವೇ ಅನ್ವೇಷಣೆಯ ತಾಣ
ವಿವಿಧ ದೇಶಗಳ ಬಾನಧಿಪತ್ಯಕ್ಕಿದುವೇ ನಿಲ್ದಾಣ
ವಿಕ್ರಮನು ಚಂದಿರನಂಗಳದೆಡೆಗೆ ಹೊರಟ ಯಾತ್ರೆ
ವಿಶ್ವರಂಗದಿ ದಾಖಲಿಸಿದನು ಭಾರತದ ಚರಿತ್ರೆ.
ತಿಂಗಳನ ದಕ್ಷಿಣ ಮುಖಕ್ಕೆ ಮುತ್ತಿಟ್ಟಂತಹ ಕ್ಷಣ
ಕೋಟ್ಯಂತರ ಭಾರತೀಯರಿಗೆ ರೋಮಾಂಚನ
ಶಶಿಯೆದೆ ಮೇಲೆ ಮೂಡಿತು ರಾಷ್ಟ್ರಲಾಂಛನ
ಶತಕೋಟಿ ಹೃದಯಗಳಿಂದ ಶತನಮನ.
ನೂರಾರು ಉಪಗ್ರಹಗಳನು ಉಡಾಯಿಸಿ
ಕೋಟ್ಯಂತರ ಕನಸುಗಳ ಸಾಕಾರಗೊಳಿಸಿದರು
ನೂರ್ಮಡಿಯ ಆತ್ಮವಿಶ್ವಾಸವನು ತುಂಬುತ
ನೂರ ನಲ್ವತ್ತು ಕೋಟಿ ಹೃನ್ಮನ ಗೆದ್ದರು.
ಖಗೋಳ ವಿಜ್ಞಾನದಿ ಸೋಲುಗಳೆಂಬುವುದಿಲ್ಲ
ಖಗೋಳ ರಹಸ್ಯದ ಪ್ರಯೋಗಗಳಾಗಿವೆಲ್ಲ
ಇಂದು ಅಂಗಳದಿ ತ್ರಿವರ್ಣ ಧ್ವಜವ ಹಾರಿಸಿದರಲ್ಲ
ಇಸ್ರೋ ವಿಜ್ಞಾನಿಗಳಿರಲಿ ಸದಾ ನಮ್ಮೆಲ್ಲರ ಬೆಂಬಲ.
–ಶಿವಮೂರ್ತಿ.ಹೆಚ್. ದಾವಣಗೆರೆ.
ಚೆನ್ನಾಗಿದೆ
ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿದೆ ಸಾರ್..
ಧನ್ಯವಾದಗಳು ಮೇಡಂ
ಭಾರತೀಯರೆಲ್ಲರೂ ಹೆಮ್ಮೆ ಪಡುವ ಕ್ಷಣಗಳು. Very nice
ಧನ್ಯವಾದಗಳು ಮೇಡಂ
ದೇಶದ ಹೆಮ್ಮೆಯ ಕ್ಷಣಗಳನ್ನು ಹಿಡಿದಿಟ್ಟ ಸೊಗಸಾದ ಕವನ.
ಧನ್ಯವಾದಗಳು ಮೇಡಂ
ಚಂದ್ರಯಾನ – 3 ರ ಯಶಸ್ಸು ನಮ್ಮ ಭಾರತಕ್ಕೆ ತಂದುಕೊಟ್ಟಿತು ಉಮ್ಮಸ್ಸು……ಜರೆದವರ ಮುಂದೆ ವಿಕ್ರಮನ ಸಾಧನೆ ಪ್ರಜ್ಞಾನ್ ನ ಓಡಾಟ…….ಜಗತ್ತಿನ ಗಮನ ನಮ್ಮ ಕಡೆ ಸೆಳೆದಿದೆ…… ಆ ಐತಿಹಾಸಿಕ ಕ್ಷಣಗಳ ದಾಖಲಿಸುವ ನಿಮ್ಮ ಕವನ ಚೆನ್ನಾಗಿ ಮೂಡಿಬಂದಿದೆ.
ನಿಮ್ಮ ನುಡಿಗಳು ತುಂಬಾನೇ ಅರ್ಥಪೂರ್ಣ ಮೇಡಂ