ಅವಿಸ್ಮರಣೀಯ ಅಮೆರಿಕ – ಎಳೆ 57

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ನ್ಯೂಯಾರ್ಕ್ ಎಂಬ ಮಾಯಾ ಪಟ್ಟಣ..!!

ಅಮೆರಿಕ ದೇಶದ ಪೂರ್ವ ಭಾಗದಲ್ಲಿರುವ ಅಟ್ಲಾಂಟಿಕ್ ಮಹಾಸಾಗರವನ್ನು ಅಲ್ಲಿಯ ಪ್ರಸಿದ್ಧ ಹಡ್ಸನ್(Hudson) ನದಿಯು ಸಂಧಿಸುವ ಸಂಗಮ ಸ್ಥಾನದಲ್ಲಿರುವ ನ್ಯೂಯಾರ್ಕ್ ರಾಜ್ಯದ ದಕ್ಷಿಣಕ್ಕೆ ಪ್ರತ್ಯೇಕವಾಗಿದ್ದ ಐದು ಮುಖ್ಯ ಮಹಾನಗರಗಳನ್ನು 1898 ರಲ್ಲಿ ಆಡಳಿತಾತ್ಮಕವಾಗಿ ಒಗ್ಗೂಡಿಸಲಾಯಿತು. ಇದರಲ್ಲಿ ಒಂದಾದ ಮ್ಯಾನ್ ಹಟನ್(Manhattan ) ಎಂಬ ಮಹಾನಗರದಲ್ಲಿದೆ, ಈ ನ್ಯೂಯಾರ್ಕ್ ಎಂಬ ಅದ್ಭುತ ಪಟ್ಟಣ. ಪುಟ್ಟ ಪುಟ್ಟ ದ್ವೀಪಗಳ ಸಮೂಹವೂ ಆಗಿರುವ ಇದು, ನ್ಯೂಯಾರ್ಕ್ ರಾಜ್ಯದ ಮುಖ್ಯ ಪಟ್ಟಣವೂ ಹೌದು.ಹಡ್ಸನ್ ನದಿಯು ಈ ಪಟ್ಟಣದ ಮೂರೂ ಸುತ್ತಲು ಆವರಿಸಿದೆ. ಇದು ಜನಸಾಂದ್ರತೆಯಲ್ಲಿ ಅಮೆರಿಕದಲ್ಲೇ ಮೊದಲ
ಸ್ಥಾನ ಹೊಂದಿರುವುದಲ್ಲದೆ; ಜಗತ್ತಿನ ಪ್ರಮುಖ ವಾಣಿಜ್ಯ, ಸಾಂಸ್ಕೃತಿಕ, ವ್ಯಾಪಾರ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಕ್ರೀಡೆ, ಕಲೆ, ಪ್ರವಾಸೋದ್ಯಮ, ಆಹಾರೋದ್ಯಮ, ಫ್ಯಾಷನ್, ಸಂಶೋಧನೆ, ಮನೋರಂಜನೆ, ತಾಂತ್ರಿಕತೆ ಇತ್ಯಾದಿಗಳಿಗೆ ಕೇಂದ್ರಸ್ಥಾನವಾಗಿದ್ದು, ಜಗತ್ತಿಗೇ ರಾಜಧಾನಿಯಂತಿದೆ ಎಂಬ ಮಾತಿದೆ. ಸುಮಾರು 800 ಭಾಷೆಗಳನ್ನು ಮಾತನಾಡುವಜನರು ಇಲ್ಲಿ ವಾಸಿಸುವರು. ಇದು ಸುಮಾರು 784 ಚ. ಕಿ.ಮೀ. ವಿಸ್ತಾರವಾಗಿದ್ದು, ಸುಮಾರು 85 ಲಕ್ಷದಷ್ಟು ಜನರು ವಾಸಿಸುತ್ತಿದ್ದಾರೆ. ಇವರಲ್ಲಿ ಸಾಧಾರಣ ಮೂವತ್ತು ಲಕ್ಷಕ್ಕೂ ಹೆಚ್ಚು ಜನರು ಬೇರೆ ದೇಶಗಳಿಂದ ವಲಸೆ ಬಂದವರಾಗಿದ್ದಾರೆ. ಪ್ರಪಂಚದಲ್ಲಿ ಅತ್ಯಂತ ಶ್ರೀಮಂತರಿರುವ ಪಟ್ಟಣಗಳಲ್ಲಿ ಇದು ಎರಡನೇ ಸ್ಥಾನದಲ್ಲಿದೆ. ಈ ಸುಂದರ ಪಟ್ಟಣವು ಜಗತ್ತಿನಲ್ಲಿಯೇ ಅತೀ ಹೆಚ್ಚು ಛಾಯಾಚಿತ್ರ ತೆಗೆಯಲ್ಪಟ್ಟುದೆಂಬ ಗರಿಯನ್ನೂ ತನ್ನ ಮುಡಿಗೇರಿಸಿಕೊಂಡಿದೆ. ಅತ್ಯಂತ ವಿಸ್ತಾರವಾದ ಸೆಂಟ್ರಲ್ ಪಾರ್ಕ್, ಜಗತ್ಪ್ರಸಿದ್ಧ ಟೈಮ್ ಸ್ಕ್ವೇರ್, ಸ್ಟೇಚ್ಯೂ ಆಫ್ ಲಿಬರ್ಟಿ, ಅಂಪೈರ್ ಸ್ಟೇಟ್ ಕಟ್ಟಡ, ನೂರಾರು ಗಗನಚುಂಬಿ ಕಟ್ಟಡಗಳು, ಇತ್ಯಾದಿಗಳೆಲ್ಲಾ ಈ ಪಟ್ಟಣದ ಪ್ರಸಿದ್ಧಿಗೆ ತಮ್ಮ ಯೋಗದಾನವನ್ನಿತ್ತುದು ಸುಳ್ಳಲ್ಲ. ನಾವು ಮೊತ್ತ ಮೊದಲಿಗೆ ನೋಡಲಿರುವ ಈ ಸ್ಟೇಚ್ಯೂ ಆಫ್ ಲಿಬರ್ಟಿಯು ಇಲ್ಲಿಯ ರಾಷ್ಟ್ರ ಚಿಹ್ನೆಯೂ ಆಗಿದೆ.

ಜೂನ್ ತಿಂಗಳ ಆರನೇ ದಿನ….ನಾವು ನ್ಯೂಯಾರ್ಕ್ ತಲಪಿದಾಗ ರಾತ್ರಿ 11ಗಂಟೆ. ಇಡೀ ಅಮೆರಿಕದಲ್ಲೇ ಅತ್ಯಂತ ದುಬಾರಿ ಪಟ್ಟಣವೆಂದು ನ್ಯೂಯಾರ್ಕ್ ಹೆಸರುವಾಸಿ. ಇಲ್ಲಿ ಅದಾಗಲೇ ಕಾದಿರಿಸಿದ್ದ, ಎಲ್ಲಾ ಸವಲತ್ತುಗಳುಳ್ಳ, ಆದರೆ ಪುಟ್ಟದಾದ ಹಾಗೂ ಇಕ್ಕಟ್ಟಾದ Hotel 39 ಲ್ಲಿ ನಮ್ಮ ಸಾಮಾನುಗಳನ್ನು ತಂದಿರಿಸಲಾಯಿತು. ಊಟ-ತಿಂಡಿಗಳಿಗೆ ಪೂರ್ಣ ಸಸ್ಯಾಹಾರಿ ಹೋಟೇಲ್ ಗಳು ಇಲ್ಲಿ ಲಭ್ಯವಿರುವುದಿಲ್ಲ. ಆದರೆ ನಾವೇ ಅಡಿಗೆ ಮಾಡಿಕೊಳ್ಳಲು ಅನುಕೂಲತೆ ಇರುವ ಹೋಟೆಲ್ ರೂಮುಗಳು ಸಿಗುತ್ತವೆ… ಅಡುಗೆ ಸಾಮಾನುಗಳನ್ನು ಮಾತ್ರ ನಾವೇ ಒಯ್ಯುಬೇಕಷ್ಟೆ. ಆದ್ದರಿಂದ ನಮ್ಮ ಹತ್ತು ದಿನಗಳ ಪ್ರವಾಸದಲ್ಲಿ ಆಹಾರದ ಸಮಸ್ಯೆ ಇರಲಿಲ್ಲವೆನ್ನಿ. ಸ್ಥಳೀಯ ಓಡಾಟಕ್ಕಾಗಿ ಈ ವಿಶಾಲವಾದ ಪಟ್ಟಣದಲ್ಲಿ ಸಬ್ ವೇ (SUB WAY) ಎನ್ನುವ ವಿಶೇಷವಾದ ರೈಲಿನ ಸವಲತ್ತು ಇರುವುದರಿಂದ ನಾವು ಬಂದಿದ್ದ ವಾಹನವನ್ನು ಹಿಂತಿರುಗಿಸಲಾಯಿತು.

ಸಬ್ ವೇ ಎಂಬ ಬೃಹತ್ ಜಾಲ

ಮಾನವನಿಗೆ ಭೂಮಿಯ ಮೇಲೆ ಸ್ಥಳ ಸಾಕಾಗದೆ ಇರುವಾಗ ಅವನ ಕಣ್ಣು ಭೂತಳದ ಕಡೆಗೆ ಹರಿಯಿತು. ಅತ್ಯಂತ ವೇಗದ ಸಂಚಾರ ವ್ಯವಸ್ಥೆಯು ಅಮೇರಿಕದಲ್ಲಿ ಭೂಗರ್ಭದೊಳಗೆ ರೂಪುಗೊಂಡ ಬಗೆಯಿದು. ಮೊತ್ತ ಮೊದಲಿಗೆ 1870ರಲ್ಲಿ ಪ್ರಾಯೋಗಿಕವಾಗಿ ಬರೇ 95ಮೀ. ಮಾತ್ರ ಚಲಿಸಿತು ಈ ರೈಲು. ಆನಂತರ 1904ರ ಅಕ್ಟೋಬರ್ ನಲ್ಲಿ, ಗಂಟೆಗೆ 55ಮೈಲು ವೇಗದಲ್ಲಿ ಭೂಗರ್ಭದೊಳಗೆ ಓಡುವ ರೈಲು ಇಲ್ಲಿ ಪ್ರಾರಂಭವಾಯಿತು. ಈಗ ಸುಮಾರು 472 ನಿಲ್ದಾಣಗಳುಳ್ಳ ಭೂಗತ ರೈಲು ದಿನದ 24ಗಂಟೆಯೂ ವರ್ಷವಿಡೀ ಓಡುತ್ತದೆ. ಇದು ಪ್ರಪಂಚದಲ್ಲೇ ಅತೀ ಹೆಚ್ಚು ನಿಲ್ದಾಣಗಳನ್ನು ಹೊಂದಿರುವ ರೈಲ್ವೆ ಜಾಲವೆಂಬುದು ನಿಜವಾಗಿಯೂ ಬಹಳ
ಕುತೂಹಲಕಾರಿ ಸಂಗತಿಯಾಗಿದೆ. ಅಲ್ಲಿರುವ ಎಲ್ಲಾ ಐದು ಮಹಾನಗರಗಳಲ್ಲಿ ಈ ಜಾಲವು ಹರಡಿಕೊಂಡಿದೆ, ಅಲ್ಲದೆ, ಪ್ರಪಂಚದಲ್ಲೇ ಅತೀ ಹಳೆಯದು ಹಾಗೂ ಅತ್ಯಂತ ವೇಗವಾದ ಮತ್ತು ಇಲ್ಲಿಯ ಅತೀ ದೊಡ್ಡ ಸಂಪರ್ಕ ಸಾಧನ ಎಂಬ ಹೆಗ್ಗಳಿಕೆ ಪಡೆದಿದೆ. ಮೂರರಿಂದ ನಾಲ್ಕು ಜೊತೆ ಹಳಿಗಳಿಂದ ಕೂಡಿದ ಈ ಜಾಲವು ಅದ್ಭುತ ಚಟುವಟಿಕೆಯ ಕೇಂದ್ರವಾಗಿದೆ. ದಿನದಲ್ಲಿ 5.5 ಮಿಲಿಯ ಬಾರಿ ಓಡಾಟ ನಡೆಸುವ ಇಲ್ಲಿಯ ರೈಲುಗಳು ಕ್ರಮಿಸಲು ಬಳಸುವ ರೈಲು ಮಾರ್ಗದ ಉದ್ದವು ಸುಮಾರು 245 ಮೈಲುಗಳಷ್ಟಿದ್ದು, ಇದು ಈ ತರಹದ ರೈಲುಗಳಲ್ಲಿ ಜಗತ್ತಿನಲ್ಲಿಯೇ ಅತೀ ಉದ್ದವಾಗಿದೆ. ಈ ಮಾರ್ಗವು ಶೇಕಡ ನಲ್ವತ್ತು ಭಾಗದಷ್ಟು ನೆಲದ ಮೇಲಿದ್ದರೆ ಉಳಿದವು ಭೂಗತ ಮಾರ್ಗಗಳಾಗಿವೆ. ಇಲ್ಲಿ ಒಟ್ಟು 6418 ರೈಲುಗಳಿದ್ದು, ದಿನದಲ್ಲಿ ಹೆಚ್ಚೆಂದರೆ ಸುಮಾರು 6.2 ಮಿಲಿಯ ಪ್ರಯಾಣಿಕರು ಸಂಚರಿಸುತ್ತಾರೆ! ವಿಶೇಷವೆಂದರೆ, ಒಳಭಾಗದ ಹಳಿಗಳಲ್ಲಿ ಎಕ್ಸ್ ಪ್ರೆಸ್ಸ್ ರೈಲುಗಳು ಹಾಗೂ ಹೊರಭಾಗದ ಹಳಿಗಳಲ್ಲಿ ಸ್ಥಳೀಯ ರೈಲುಗಳ ಓಡಾಟ ನಡೆಯುತ್ತದೆ. ಪ್ರಕೃತಿ ವಿಕೋಪಗಳ ಸಮಯಗಳಲ್ಲಿ ಇವುಗಳ ಓಡಾಟ ಕಡಿಮೆ ಇರುತ್ತದೆ. ಪಶ್ಚಿಮ ಭೂಗೋಳದಲ್ಲಿಯೇ ಅತ್ಯಂತ ಹೆಚ್ಚು ಕಾರ್ಯನಿರತವಾಗಿರುವ ಭೂಗತ ರೈಲು ಜಾಲವೆಂಬ ಹೆಗ್ಗಳಿಕೆ ಈ ನ್ಯೂಯಾರ್ಕ್ ನಗರದ ಸಬ್ ವೇಯದ್ದು. ಈ ವ್ಯವಸ್ಥೆಯಿಂದಾಗಿ, ಅಮೇರಿಕದ ಬೇರೆ ಕಡೆಗಳಲ್ಲಿ ಕಂಡುಬರುವ ಕಾರುಗಳ ದಟ್ಟಣೆ ಈ ನಗರದಲ್ಲಿ ಕಂಡುಬರುವುದಿಲ್ಲ. ಅತೀ ಸುವ್ಯವಸ್ಥಿತ, ಅಚ್ಚುಕಟ್ಟಾದ, ನಾಗರಿಕರಿಗೆ ಸುಲಭ ಸಾಧ್ಯವಾದ ಈ ಅದ್ಭುತ ವ್ಯವಸ್ಥೆಯನ್ನು ನೋಡುವಾಗ ಬಹಳ ಆಶ್ಚರ್ಯವೆನಿಸುತ್ತದೆ! ಪ್ರತೀ ನಿಲ್ದಾಣದಲ್ಲಿ ಕೇವಲ 40-45 ಸೆಕೆಂಡುಗಳಷ್ಟು ಸಮಯ ಮಾತ್ರ ನಿಲ್ಲುವ ಈ ವಿದ್ಯುತ್ ರೈಲುಗಳು ಕರಾರುವಾಕ್ಕಾಗಿ ಚಲಿಸುತ್ತವೆ.

ಮುಂಬೈಯಂತೆ ಜನರ ಜೀವನಾಡಿಯಾಗಿ, ಸಾರ್ವಜನಿಕ ಸಾರಿಗೆಯಾಗಿರುವ ಈ ಸಬ್ ವೇಯ ನಿಲ್ದಾಣಗಳಿಗೆ ಹೋಗುವ ಭೂಗತ ಸುರಂಗಗಳಿಗೆ ಇಳಿಯುವ ಸ್ಥಳಗಳನ್ನು; ನಮ್ಮಲ್ಲಿಯ ಸಿಟಿ ಬಸ್ಸು ನಂಬರುಗಳಂತೆ, ಆಯಾಯ ರಸ್ತೆ ಪಕ್ಕಗಳಲ್ಲಿ ಅಲ್ಲಲ್ಲಿ ನಂಬರುಗಳನ್ನು ನಮೂದಿಸಿದ ದೊಡ್ಡದಾದ ಫಲಕದ ಕೆಳಗಡೆಗೆ ಇಳಿಯಲು ಮೆಟ್ಟಲುಗಳಿವೆ. ರೈಲು ಮಾರ್ಗಗಳ ಪೂರ್ತಿ ನಕಾಶೆಗಳು ಎಲ್ಲಾ ಕಡೆಗಳಲ್ಲೂ ಲಭ್ಯ..ಅಂದರೆ, ಉಳಕೊಳ್ಳುವ ಹೋಟೇಲ್ ಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಎಲ್ಲಾ ಮಾಹಿತಿಗಳ ಕೈಪಿಡಿಗಳು ಉಚಿತವಾಗಿ ನೀಡಲ್ಪಡುತ್ತದೆ. ಮರುದಿನ ಬೆಳಿಗ್ಗೆ ಅಲ್ಲಿಯ ಎಲ್ಲಾ ಹೋಟೆಲ್ ಗಳಲ್ಲೂ ಸಾಮಾನ್ಯವಾಗಿ ನೀಡಲ್ಪಡುವ ಉಚಿತ ಕಾಫಿ/ ಹಾಲು/ ಬ್ರೆಡ್ ಇತ್ಯಾದಿಗಳನ್ನು ಸ್ವಲ್ಪ ಖಾಲಿಮಾಡಿ, ನಮ್ಮ ರೂಮಿನಲ್ಲೇ ಇದ್ದ ಪುಟ್ಟ ಅಡುಗೆ ಕೋಣೆಯಲ್ಲಿ ತಯಾರಿಸಿದ ಪುಳಿಯೊಗರೆ, ಮೊಸರನ್ನದ ಡಬ್ಬಗಳಿರುವ ಚೀಲವನ್ನು ಹೆಗಲಿಗೇರಿಸಿಕೊಂಡು ನಮ್ಮ ಮುಂದಿನ ವೀಕ್ಷಣೆಗೆ ಹೊರಟೆವು…

ಸ್ಟೇಚ್ಯೂ ಆಫ್ ಲಿಬರ್ಟಿ (Statue of Liberty)

ಗುಲಾಮಗಿರಿಯ ಸಂಕೋಲೆಯನ್ನು ತೊಡೆದು, ತನ್ನ ಬಲದ ಕೈಯಲ್ಲಿ ಬೆಳಕಿನ ದೀವಟಿಗೆ ಹಿಡಿದು ಜಗತ್ತಿಗೇ ಸ್ವಾತಂತ್ರ್ಯದ ಬೆಳಕನ್ನು ಬೆಳಗಿಸುವ ಪ್ರತೀಕವಾಗಿ ಈ ಪ್ರತಿಮೆಯು ಸ್ಥಾಪಿಸಲ್ಪಟ್ಟಿದೆ. ಹಡ್ಸನ್ ನದಿಯ ಮಧ್ಯದ ಎಲ್ಲೀಸ್ ದ್ವೀಪ ( Ellis Island)ದಲ್ಲಿರುವ ಈ ಬೃಹದಾಕಾರದ ಸ್ತ್ರೀ ಮೂರ್ತಿ ನ್ಯೂಯಾರ್ಕ್ ನ ಹೆಗ್ಗುರುತು (Land mark) ) ಕೂಡಾ ಹೌದು. ಇದು ಫ್ರಾನ್ಸ್ ನಾಗರಿಕರಿಂದ 1886ರಲ್ಲಿ ಕೊಡುಗೆಯಾಗಿ ನೀಡಲ್ಪಟ್ಟಿತು.

Statue of Liberty


ತಾಮ್ರದಿಂದ ತಯಾರಿಸಲ್ಪಟ್ಟ ಈ ಪ್ರತಿಮೆಯ ತಲೆಯ ಮೇಲಿನ ಕಿರೀಟದ ಸುತ್ತಲೂ ಇರುವ 7 ಮೊನಚಾದ ಆಕಾರಗಳೇ ಮಿಂಚಿನಿಂದ ರಕ್ಷಿಸಲು ಅಳವಡಿಸಿರುವ ಮಿಂಚು ನಿರೋಧಕಗಳು. ನೆಲದಿಂದ ತಲೆ ವರೆಗೆ 305 ಅಡಿಗಳಷ್ಟು ಎತ್ತರವಿದ್ದರೆ, ಬರೀ ಪ್ರತಿಮೆಯ ಎತ್ತರ 46ಮೀಟರುಗಳಷ್ಟಿದೆ. ವರ್ಷದಲ್ಲಿ ಸುಮಾರು ಮೂರು ಮಿಲಿಯದಷ್ಟು ಜನರು ಇದನ್ನು ವೀಕ್ಷಿಸಲು ಬರುತ್ತಾರೆ. ಈ ಜಗತ್ಪ್ರಸಿದ್ಧವಾದ ಸ್ಟೇಚ್ಯೂ ಆಫ್ ಲಿಬರ್ಟಿ ಯನ್ನು ನೋಡುವುದು ನಮ್ಮ ಮೊದಲನೇ ಆದ್ಯತೆಯಾಗಿತ್ತು. ಈ ಪ್ರತಿಮೆಯ ಚಿತ್ರವನ್ನು ಸುಮಾರಾಗಿ ಎಲ್ಲರೂ ನೋಡಿರುತ್ತೇವೆ. ಆದರೆ ಅದನ್ನು ನಿಜವಾಗಿಯೂ ನೋಡಲಿರುವುದನ್ನು ಯೋಚಿಸಿಯೇ ನನಗೆ ಮೈ ರೋಮಾಂಚನ!! ಪ್ರತಿಮೆಯ ಬಳಿ ಹೋಗಬೇಕಾದರೆ, 300ಜನರು ಒಟ್ಟಿಗೆ ಪ್ರಯಾಣಿಸಬಹುದಾದ ದೊಡ್ಡದಾದ ಕ್ರೂಸ್ (ಯಾಂತ್ರೀಕೃತದೋಣಿ)ನಲ್ಲಿ ಹಡ್ಸನ್ ನದಿಯನ್ನು ದಾಟಿಸುತ್ತಾರೆ. ನಾಲ್ಕೈದು ಕ್ರೂಸ್ ಗಳು ಬೆಳಗ್ಗೆ 8ಗಂಟೆಯಿಂದ ಸಂಜೆ 6ಗಂಟೆ ವರೆಗೆ ಆಕಡೆಯಿಂದ ಈಕಡೆಗೆ ಮತ್ತು ಈಕಡೆಯಿಂದ ಆಕಡೆಗೆ ಜನರನ್ನು ಕೊಂಡೊಯ್ಯತ್ತಲೇ ಇರುತ್ತವೆ. ಅದೂ ಅಲ್ಲದೆ ಅಕ್ಕ ಪಕ್ಕದ ದ್ವೀಪಗಳ ಜನರಿಗೆ ಇವುಗಳೇ ದಿನ ನಿತ್ಯದ ವ್ಯವಹಾರಗಳಿಗಾಗಿರುವ ಓಡಾಟದ ಸಾರಿಗೆ ವ್ಯವಸ್ಥೆಯೂ ಆಗಿದೆ. ಈ ಕ್ರೂಸ್ ಬಳಿಗೆ ಹೋಗುವ ಮೊದಲೆ, ಅದಕ್ಕಾಗಿ ನಿಗದಿಪಡಿಸಿದ ದರ ತೆತ್ತು ಟಿಕೆಟ್ ಪಡೆಯಬೇಕು. ಅಲ್ಲಿಗೆ ನಾವುತಲಪಿದಾಗ ಸಾಕಷ್ಟು ಜನಸಂದಣಿ ಹಾಗೂ ಉದ್ದನೆಯ ಸರತಿಸಾಲು ಕಂಡುಬಂತು. ನಮ್ಮ ಸರದಿಯ ಟಿಕೆಟ್ ವಿತರಿಸಲು ಇನ್ನೂ ಸಮಯವಿತ್ತು. ಅಲ್ಲೇ ಪಕ್ಕದಲ್ಲಿರುವ ಸೊಗಸಾದ ಉದ್ಯಾನವನದಲ್ಲಿ ಸುತ್ತಾಡುತ್ತಾ, ಒಂದು ಡಾಲರ್ ವ್ಯಾಪಾರಿಗಳಲ್ಲಿ ವ್ಯವಹರಿಸುತ್ತಾ ನಮ್ಮ ಕೈಚೀಲ ತುಂಬುತ್ತಿದ್ದಂತೆ, ನಮ್ಮ ಟಿಕೆಟ್ ಅಳಿಯನ ಕೈಯಲ್ಲಿ ರಾರಾಜಿಸುವುದನ್ನು ಕಂಡು ನಾನಂತೂ ಅಲ್ಲಿಂದ ಕಾಲ್ಕಿತ್ತೆ… ಯಾಕೆ ಗೊತ್ತಾ… ಕ್ರೂಸ್ ಗೆ ಏರಲು ಇನ್ನೊಂದು ಮೈಲುದ್ದದ ಕ್ಯೂ ತಯಾರಾಗುತ್ತಿತ್ತು! ನಮ್ಮ ಸರದಿಗಾಗಿ ಕಾಯುತ್ತಿದ್ದಂತೆ ಪ್ರಖರ ಬಿಸಿಲಿನ ಅನುಭವವಾಗತೊಡಗಿತು…ಕಾಲು ಚುರುಗುಟ್ಟಿ, ನೀರಿನ ಬಾಟಲಿಗಳು ಖಾಲಿಯಾಗತೊಡಗಿದವು. ನದಿಯ ಕಡೆಯಿಂದ ತಂಗಾಳಿ ಬೀಸುತ್ತಿದ್ದರೂ ಅದರ ಪ್ರಭಾವ ನಮ್ಮ ಮೇಲೆ ಇನಿತೂ ಆಗಲಿಲ್ಲವೆನ್ನಿ. ಅರ್ಧತಾಸಿನ ಕಠಿಣ ಕಾಯುವಿಕೆಯ ಬಳಿಕ ನದಿಯಲ್ಲಿ ತೇಲಿ ಬಂದ ಬೃಹದ್ಗಾತ್ರದ ಕ್ರೂಸ್ ಕಂಡು ಎಲ್ಲರ ಕಣ್ಣುಗಳೂ ಮಿನುಗಿದವು..ಸಂಚಲನೆ ಆರಂಭವಾಯ್ತು. ಅದರೊಳಗಿನಿಂದ ಇಳಿಯಲು ಉಕ್ಕಿನ ಪುಟ್ಟ ಏರು ಹಲಗೆಯನ್ನು ಸೇತುವೆಯಂತೆ ಕ್ರೂಸಿಗೆ ಮತ್ತು ದಡಕ್ಕೆ ಹೊಂದಿಸಿಟ್ಟರು. ಕ್ರೂಸಿನಿಂದ ಜನರು ಇಳಿದೊಡನೆಯೇ ನಮ್ಮ ಸಾಲಿನೆದುರಿಗೆ ಸಿಕ್ಕಿಸಿದ್ದ ಬಲವಾದ ಗೇಟನ್ನು ತೆರೆದರು… ನಮ್ಮ ದಂಡು ಏರಿ ಹೋದಾಗ ಅದರೊಳಗಿನ ವ್ಯವಸ್ಥೆಗಳನ್ನು ಕಂಡೇ ಬೆರಗಾಗಿ ಹೋದೆ. ಎರಡು ಅಂತಸ್ತಿನ ಈ ಹಡಗಿನಂತಹ ದೋಣಿಯಲ್ಲಿ ಪಯಣಿಸುವುದೂ ಒಂದು ರೋಮಾಂಚಕಾರೀ ಅನುಭವ….

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  http://surahonne.com/?p=38476

-ಶಂಕರಿ ಶರ್ಮ, ಪುತ್ತೂರು. 

5 Responses

  1. ಎಂದಿನಂತೆ.. ಪ್ರವಾಸಕಥನ ಓದಿಸಿಕೊಂಡು ಹೋಯಿತು…ಮೇಡಂ… ಸೊಗಸಾದ ನಿರೂಪಣೆ…

    • ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಸ್ಪಂದನೆಗೆ ಧನ್ಯವಾದಗಳು ನಾಗರತ್ನ ಮೇಡಂ.

  2. ಚಂದದ ನಿರೂಪಣೆ
    ವಂದನೆಗಳು

  3. ನಯನ ಬಜಕೂಡ್ಲು says:

    Nice

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: