ಬೇಡ ಅತಿ ನಿರೀಕ್ಷೆ, ಇರಲಿ ಭರವಸೆ

Share Button

ಒಂದು ಸುಂದರವಾದ ತೋಟದಲ್ಲಿ ವಿಧವಿಧವಾದ ಪುಷ್ಪಗಳು ಅರಳುತ್ತವೆ. ಬಣ್ಣದಲ್ಲಾಗಲಿ, ಗಾತ್ರದಲ್ಲಾಗಲಿ ಅಥವಾ ಸುವಾಸನೆಯಲ್ಲಾಗಲಿ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಒಂದು ಹೂವಿನಲ್ಲಿರವ ವಿಶೇಷತೆ ಮತ್ತೊಂದರಲ್ಲಿ ಇರಲೇ ಬೇಕೆಂದಿಲ್ಲ. ಸುವಾಸನೆ ಬೀರುವ ಹೂಗಳ ನಡುವೆ ಸುವಾಸನೆಯಿರದ ಹೂಗಳೂ ಇರುತ್ತವೆ. 

ಹಾಗೆಯೇ ಮಕ್ಕಳೂ ಸಹ. ಒಂದು ಶಾಲೆಯಲ್ಲಿ ವಿಭಿನ್ನವಾದ, ವಿಶಿಷ್ಟವಾದ ಹಲವು ಬಗೆಯ ಮಕ್ಕಳಿರುತ್ತಾರೆ. ಕೆಲವರು ಓದಿನಲ್ಲಿ ಮುಂದಿದ್ದರೆ ಮತ್ತೆ ಕೆಲವರು ಪಠ್ಯೇತರ ಚಟುವಟಿಕೆಗಳಲ್ಲಿ ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಾರೆ. ಪೋಷಕರು ತಮ್ಮ ಮಕ್ಕಳ ಆಸಕ್ತಿ ಹಾಗು ಆದ್ಯತೆಗಳಿಗೆ ಅನುಗುಣವಾಗಿ ಪ್ರೋತ್ಸಾಹಿಸಬೇಕಿದೆ. ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ಅನಿವಾರ್ಯ. ಮಕ್ಕಳಿಗೆ ಆಸಕ್ತಿ ಇದೆಯೋ ಇಲ್ಲವೋ, ಅವರು ಶಾಲಾ ಪಠ್ಯಕ್ರಮವನ್ನು ಓದಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲೇಬೇಕಿದೆ. ಹತ್ತನೇ ತರಗತಿಯವರೆಗೆ, ಎಲ್ಲಾ ವಿಷಯಗಳನ್ನೂ ಅಧ್ಯಯನ ಮಾಡಲೇಬೇಕಿದೆ.

ಕೆಲವರಿಗೆ ಗಣಿತ, ಕಬ್ಬಿಣದ ಕಡಲೆಯಾದರೆ, ಇನ್ನು ಕೆಲವರಿಗೆ ವಿಜ್ಞಾನ ಅರ್ಥವಾಗದ ಜ್ಞಾನವಾಗಿ ಕಾಣುತ್ತದೆ. ಸಮಾಜ ವಿಜ್ಞಾನ ಕೆಲವರಿಗೆ ಬೇಸರ ತರಿಸಿದರೆ, ಇನ್ನೂ ಕೆಲವರಿಗೆ ಭಾಷೆಯೇ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ. ಮಕ್ಕಳು ಪದವಿಪೂರ್ವ ತರಗತಿಗಳಲ್ಲಿ, ತಮ್ಮ ಇಷ್ಟದ ಪಠ್ಯಕ್ರಮವನ್ನು ಆರಿಸಿ ಕೊಳ್ಳಬಹುದಾಗಿದೆ. ಅಲ್ಲಿಯವರೆಗೆ, ಅವರು ಎಲ್ಲಾ ವಿಷಯಗಳನ್ನೂ ಸಮನಾಗಿ ತೆಗೆದುಕೊಳ್ಳಬೇಕಿದೆ. 

ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳಿಗೆ ಪೋಷಕರ ಹಾಗು ಶಿಕ್ಷಕರ ಸಹಕಾರ ಅತಿ ಅವಶ್ಯಕ. ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಅರ್ಥೈಸಿಕೊಂಡು, ಅದಕ್ಕೆ ತಕ್ಕಂತೆ ಅವರ ಬೆನ್ನೆಲುಬಾಗಿ ನಿಲ್ಲಬೇಕಿದೆ. ಮಕ್ಕಳ ಸಾಮರ್ಥ್ಯ ಶಿಕ್ಷಕರಿಗೆ ತಿಳಿದಿರುತ್ತದೆ.ಹಾಗಾಗಿ ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ತರಬೇತಿಯನ್ನು ಕೊಡುತ್ತಿರುತ್ತಾರೆ. 

ಆದರೆ ಕೆಲವು ಪೋಷಕರಿಗೆ ತಮ್ಮ ಮಕ್ಕಳ ಸಾಮರ್ಥ್ಯದ ಬಗ್ಗೆ ಅರಿವೇ ಇರುವುದಿಲ್ಲ. ಇನ್ನು ಬಹಳಷ್ಟು ಪೋಷಕರಿಗೆ ತಮ್ಮ ಮಕ್ಕಳ ಸಾಮರ್ಥ್ಯದ ಅರಿವಿದ್ದರೂ, ಅವರ ಬಗ್ಗೆ ಅತಿಯಾದ ನಿರೀಕ್ಷೆಯನ್ನು ಬೆಳೆಸಿಕೊಂಡು ಬಿಟ್ಟಿರುತ್ತಾರೆ. ಅದು ಮಕ್ಕಳ ಮೇಲೆ ಒತ್ತಡವನ್ನು ಹೆಚ್ಚು ಮಾಡಿ ಅವರ ಕಲಿಕಾ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಮಕ್ಕಳಲ್ಲಿ ಕೀಳರಿಮೆ, ಖಿನ್ನತೆ ಮತ್ತು ಒಂಟಿತನ ಹೆಚ್ಚಾಗಿ, ತಾವು ‘ಅಸಮರ್ಥರು’ ಎಂಬ ಭಾವ ಕಾಡಲಾರಂಭಿಸುತ್ತದೆ. 

ಬಹಳಷ್ಟು ಪೋಷಕರಿಗೆ ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಶೇಕಡಾ ೮೦-೯೦ರ ಮೇಲೆಯೇ ಗಳಿಸಬೇಕಿದೆ. ತಮ್ಮ ಮಕ್ಕಳು ಹತ್ತನೇ ತರಗತಿಗೆ ಬಂದಾಗಲೇ ಈ ವಿಚಾರ ಅವರನ್ನು ಬೆಂಬಿಡದೆ ಹೇಗೆ ಕಾಡುವುದೋ  ತಿಳಿಯದಾಗಿದೆ. 

ಶಾಲೆಗೆ ಸೇರಿಸಿದ ಮೊದಲ ದಿನದಿಂದಲೂ ಮಕ್ಕಳ ಶಿಕ್ಷಣದ ಕುರಿತು, ಅವರು ಎದುರಿಸುವ ಸಮಸ್ಯೆಗಳ ಬಗ್ಗೆ, ಅದಕ್ಕೆ ಪರಿಹಾರ ನೀಡುವ ಮೂಲಕ ಪೋಷಕರು ಕಾಳಜಿ ವಹಿಸಬೇಕಾಗುತ್ತದೆ. ಬಹು ಮುಖ್ಯವಾಗಿ, ಮನೆಯ ವಾತಾವರಣ ಮಕ್ಕಳ ಓದಿಗೆ ಪೂರಕವಾಗಿರಬೇಕು. ಸಂಬಂಧಗಳಲ್ಲಿ ಬಿರುಕು, ವೈಮನಸ್ಸು, ಮಾನಸಿಕ ಒತ್ತಡಗಳಿಂದಾಗಿ ಮಕ್ಕಳು ನಲುಗಿ ಹೋಗುತ್ತಾರೆ. ಓದಿನ ಕಡೆಗೆ ಗಮನ ಹರಿಸುವುದು ಕಡಿಮೆಯಾಗುತ್ತದೆ. 

ಶಾಲಾ ಶುಲ್ಕ ಕಟ್ಟಿ, ಮಕ್ಕಳಿಗೆ ಪುಸ್ತಕ, ಲೇಖನಿ, ಓದುವುದಕ್ಕೆ ಮನೆಯಲ್ಲಿ ವ್ಯವಸ್ಥೆ ಮಾಡಿ ಕೊಟ್ಟರಷ್ಟೇ ಸಾಲದು, ಮಕ್ಕಳಿಗೆ ಸಕಾರಾತ್ಮಕ ಪರಿಸರವನ್ನು ಕಟ್ಟಿ ಕೊಡಬೇಕು. ಅವರ ಚಿಕ್ಕ ಪುಟ್ಟ ಸಾಧನೆಗಳನ್ನು ಪ್ರೋತ್ಸಾಹಿಸಿ, ನಿರಂತರವಾಗಿ ಅವರ ಜೊತೆ ತಾವಿದ್ದೇವೆಂಬ ಭಾವವನ್ನು ಅವರೊಳಗೆ ಬಿತ್ತಬೇಕು. ಮಕ್ಕಳನ್ನು ಅಂಕ ಗಳಿಸುವ ಯಂತ್ರವಾಗಿ ಭಾವಿಸದೆ, ಅವರ ಆಸಕ್ತಿ ಹಾಗು ಸಾಮರ್ಥ್ಯಕ್ಕೆ ತಕ್ಕಂತೆ ಬೆಂಬಲಿಸಬೇಕು. ಅತಿ ಮುಖ್ಯವಾಗಿ, ತಮ್ಮ ಕನಸನ್ನು ಮಕ್ಕಳು ನನಸು ಮಾಡಬೇಕೆಂಬ ಅಘೋಷಿತ ನಿಲುವನ್ನು ಹಿಂದಕ್ಕೆ ಪಡೆಯಬೇಕು. ಸದಾ ಮಕ್ಕಳನ್ನು ಬೈಯುವ, ಅವರ ಬಲಹೀನತೆಗಳನ್ನು ಹೀಯಾಳಿಸುವ,

ಮತ್ತೊಬ್ಬರೊಂದಿಗೆ ಹೋಲಿಕೆ ಮಾಡುವ ಋಣಾತ್ಮಕ ನಡಾವಳಿ ಅಡ್ಡ ಪರಿಣಾಮವನ್ನು ಬೀರುತ್ತದೆ.

ಹಾಗೆಂದ ಮಾತ್ರಕ್ಕೆ ಮಕ್ಕಳ ತಪ್ಪಿಗೆ ಶಿಕ್ಷೆ ಕೊಡುವ ಹಾಗಿಲ್ಲವೆಂದಲ್ಲ. ಮಕ್ಕಳು ಮಾಡುವ ಪ್ರತಿ ಕೆಲಸದಲ್ಲೂ ಎಷ್ಟು ಸರಿ, ಎಷ್ಟು ತಪ್ಪಿದೆ,ಯಾವ ತಪ್ಪಿಗೆ ಯಾವ ಶಿಕ್ಷೆ, ಶಿಕ್ಷೆಯ ಪ್ರಮಾಣ ಎಷ್ಟು ಎಂಬಿತ್ಯಾದಿಗಳಿಗೆ ಪೋಷಕರ ಪ್ರಬುದ್ಧ ನಡೆಯೇ ತೀರ್ಮಾನಿಸಬೇಕು. ಮಕ್ಕಳ ಮೇಲಿನ ಅತಿಯಾದ ನಿರೀಕ್ಷೆಯನ್ನು ಬಿಟ್ಟು, ವಾಸ್ತವವನ್ನು ಅರಿತು ಅವರ ಮೇಲೆ ವಿಶ್ವಾಸವನ್ನು ಇಡಬೇಕಿದೆ.

ಪೋಷಕರ ಸಕಾರಾತ್ಮಕ ಪೋಷಣೆಯಿಂದಲೇ ಮಕ್ಕಳು ಶಾಲೆಯಲ್ಲಿ ಪರಿಣಾಮಕಾರಿಯಾಗಿ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ವಿದ್ಯಾಭ್ಯಾಸ ಮಾಡಲು ಸಾಧ್ಯ. ಪ್ರಬುದ್ಧ ಶಿಕ್ಷಕರ ಹಾಗು ಜವಾಬ್ದಾರಿಯುತ ಪೋಷಕರ ನೆರಳಲ್ಲಿ ಮಕ್ಕಳು, ತಂಪಾಗಿ ಗಾಳಿ ಬೀಸುವ  ಹೆಮ್ಮರವಾಗಿ ಬೆಳೆಯುತ್ತಾರೆ. ಪ್ರಗತಿ ಪರ ಸಮಾಜದಲ್ಲಿ ಸದೃಢ ಪ್ರಜೆಗಳನ್ನು ಸೃಷ್ಟಿಸುವ ಹೊಣೆಗಾರಿಕೆ ಶಿಕ್ಷಕರ ಮತ್ತು ಪೋಷಕರ ಹೆಗಲ ಮೇಲಿದೆ. 

– ಮಾಲಿನಿ ವಾದಿರಾಜ್

6 Responses

  1. ಮಕ್ಕಳ ಮೇಲೆ ಪೋಷಕ ರ ಜವಾಬ್ದಾರಿ…ಎಕೆ…ಹೇಗೆಂಬುದರ ಒಂದು ಸೂಕ್ಷ್ಮ ನೋಟದ ಲೇಖನ..
    ಚೆನ್ನಾಗಿ ದೆ ಮೇಡಂ

  2. Brinda S kopparad says:

    Excellent
    You are very creative and a wonderful writer

  3. Radha says:

    Chennagidhe

  4. ಮಕ್ಕಳ ವಿದ್ಯಾಭ್ಯಾಸ ದಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರವನ್ನು ಅರ್ಥಪೂರ್ಣವಾಗಿ ಬಿಂಬಿಸಲಾಗಿದೆ ವಂದನೆಗಳು

  5. ಶಂಕರಿ ಶರ್ಮ says:

    ಮಕ್ಕಳ ಶಾರೀರಿಕ ಬೆಳವಣಿಗೆಯ ಜೊತೆಯಲ್ಲಿ ಬಹು ಮುಖ್ಯವಾದ ಮಾನಸಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೇನೆಂದು ಬಹಳ ಚೆನ್ನಾಗಿ ವಿವರಿಸಿದ್ದೀರಿ…ಧನ್ಯವಾದಗಳು ಮೇಡಂ.

  6. ನಯನ ಬಜಕೂಡ್ಲು says:

    ಜವಾಬ್ದಾರಿ ಯನ್ನು ನೆನಪಿಸುವ ಬರಹ, ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: