ವಾಟ್ಸಾಪ್ ಕಥೆ 27 : ಸ್ನೇಹ ಮತ್ತು ಸ್ವಾರ್ಥ.
ಒಂದೂರಿನಲ್ಲಿ ರಾಮಯ್ಯ, ಭೀಮಯ್ಯ ಎಂಬಿಬ್ಬರು ಸ್ನೇಹಿತರಿದ್ದರು. ಅವರಿಬ್ಬರೂ ವೃತಿಯಲ್ಲಿ ವ್ಯಾಪಾರಿಗಳು. ಒಮ್ಮೆ ಭೀಮಯ್ಯನಿಗೆ ವ್ಯಾಪಾರದಲ್ಲಿ ವಿಪರೀತ ನಷ್ಟವಾಗಿ ತುಂಬ ಕಷ್ಟ ಪರಿಸ್ಥಿತಿ ಒದಗಿತು. ಅವನ ದೈನಂದಿನ ಜೀವನ ನಡೆಸುವದೂ ಕಷ್ಟವೆನ್ನಿಸಿತು. ತುಂಬ ದುಃಖವಾಯಿತು. ಅವನ ಸ್ಥಿತಿ ಕಂಡು ಗೆಳೆಯ ರಾಮಯ್ಯನಿಗೆ ಕನಿಕರವಾಯಿತು. ಅವನನ್ನು ಸಮಾಧಾನ ಪಡಿಸಿ ”ವ್ಯಾಪಾರವೆಂದರೆ ಲಾಭನಷ್ಟಗಳೆರಡೂ ಉಂಟಾಗುವುದು ಸಹಜ. ಆದರೆ ಅದೇ ಖಾಯಂ ಆಗಿ ಮುಂದುವರೆಯದು. ನೀನು ಧೈರ್ಯ ಕಳೆದುಕೊಳ್ಳದಿರು. ಮತ್ತೆ ವ್ಯಾಪಾರ ಮಾಡು” ಎಂದು ಪ್ರೋತ್ಸಾಹ ನೀಡಿದನು. ಅವನಿಗೆ ಸಾಕಷ್ಟು ಬಂಡವಾಳವನ್ನು ಒದಗಿಸಿಕೊಟ್ಟನು. ಭೀಮಯ್ಯ ಅದರಂತೆ ಮುಂದುವರೆದು ವ್ಯಾಪಾರ ಮಾಡತೊಡಗಿದ. ಅದೃಷ್ಟ ಅವನ ಕೈ ಹಿಡಿಯಿತು. ಸಾಕಷ್ಟು ಪ್ರಗತಿ ಹೊಂದಿದ. ಕೆಲವೇ ವರ್ಷಗಳಲ್ಲಿ ಮೊದಲಿನಂತೆ ಸಂಪನ್ಮೂಲ ವೃದ್ಧಿಸಿಕೊಂಡು ಸಾಹುಕಾರನಾದ. ಗೆಳೆಯ ರಾಮಯ್ಯನನ್ನು ”ನನ್ನನ್ನು ಕಷ್ಟಕಾಲದಲ್ಲಿ ಕೈಹಿಡಿದ ಪುಣ್ಯಾತ್ಮ, ನೀನು ನನ್ನ ಜೀವನವನ್ನು ಉಳಿಸಿದೆ” ಎಂದೆಲ್ಲ ಹಲವಾರು ರೀತಿಯಲ್ಲಿ ಹೊಗಳಿ ಕೃತಜ್ಞತೆ ವ್ಯಕ್ತ ಪಡಿಸಿದ. ರಾಮಯ್ಯ ಅದಕ್ಕುತ್ತರವಾಗಿ ”ನನ್ನನ್ನು ತುಂಬಾ ಹೊಗಳಬೇಡ. ನನ್ನ ಸ್ನೇಹಿತನಿಗಾಗಿ ಇಷ್ಟೂ ಮಾಡದಿದ್ದರೆ ಹೇಗೆ?” ಎಂದು ವಿನಯದ ಮಾತುಗಳನ್ನಾಡಿದ.
ಕಾಲಚಕ್ರವುರುಳಿತು. ರಾಮಯ್ಯನ ಸರಕು ತುಂಬಿದ ಹಡಗು ಬೇರೆಕಡೆಗೆ ಹೋಗುತ್ತಿದ್ದಾಗ ಸಮುದ್ರದಲ್ಲಿ ಉಂಟಾದ ಚಂಡಮಾರುತದಿಂದ ಸಂಪೂರ್ಣವಾಗಿ ಮುಳುಗಿತು. ಲಕ್ಷಾಂತರ ರೂಪಾಯಿನ ವಸ್ತುಗಳು ನೀರಪಾಲಾದವು. ರಾಮಯ್ಯನಿಗೆ ಒಮ್ಮೆಲೇ ತುಂಬ ನಷ್ಟವುಂಟಾಯಿತು. ಇದರಿಂದ ಅವನು ದಿಕ್ಕೆಟ್ಟುಹೋದ. ಇಂತಹ ದುಸ್ಥಿತಿಯಲ್ಲಿ ಗೆಳೆಯ ಭೀಮಯ್ಯನ ಬಳಿಗೆ ಹೋಗಿ ಅವನಿಂದ ಸಾಧ್ಯವಾದ ನೆರವು ಕೋರಿದ. ಆ ಸಮಯದಲ್ಲಿ ಭೀಮಯ್ಯನು ತಾನು ತುಂಬ ತರಾತುರಿಯಲ್ಲಿ ಇರುವಂತೆ ವರ್ತಿಸಿದ. ತಾನೊಂದು ದೊಡ್ಡ ವ್ಯವಹಾರದಲ್ಲಿ ಹಣ ತೊಡಗಿಸಿದ್ದು ಅದು ಈಗಲೇ ಹಿಂದಕ್ಕೆ ಬಾರದು. ಆದ್ದರಿಂದ ಸದ್ಯಕ್ಕೆ ತನ್ನ ಕೈಯಲ್ಲಿ ಸಹಾಯ ಮಾಡುವಷ್ಟು ಹಣವಿಲ್ಲವೆಂದು ಸಬೂಬು ಹೇಳಿ ನುಣುಚಿಕೊಂಡ. ಅವನಿಗೆ ಕೊಡುವ ಮನಸ್ಸಿರಲಿಲ್ಲ. ತನ್ನ ಉಗ್ರಾಣದಲ್ಲಿ ಧಂಡಿಯಾಗಿ ಬಿದ್ದಿದ್ದ ಬತ್ತದ ಹೊಟ್ಟನ್ನು ಬೇಕಾದರೆ ಧಾರಾಳವಾಗಿ ತೆಗೆದುಕೊಂಡು ಹೋಗಲು ತಿಳಿಸಿದ. ಹಿಂದೆ ರಾಮಯ್ಯ ತನಗೆ ಮಾಡಿದ ಉಪಕಾರದ ಸ್ಮರಣೆಕೂಡ ಮಾಡಲಿಲ್ಲ. ಅವನ ವರ್ತನೆಯನ್ನು ಕಂಡು ನಿರಾಶೆಯಿಂದ ರಾಮಯ್ಯ ಹಿಂದಿರುಗಿದ.
ಭೀಮಯ್ಯನು ಕೊಟ್ಟ ಬತ್ತದ ಹೊಟ್ಟನ್ನೇ ಬಂಡವಾಳವನ್ನಾಗಿಸಿ ರಾಮಯ್ಯ ವ್ಯಾಪಾರ ಮಾಡಿದ. ಕ್ರಮೇಣ ಅವನ ಕೈಯಲ್ಲಿ ಹಣ ಕೂಡತೊಗಿತು. ಅದನ್ನು ತನ್ನ ಹಿಂದಿನಂತಹ ಸರಕುಗಳ ವ್ಯಾಪಾರದಲ್ಲಿ ತೊಡಗಿಸಿದ. ದೈವಕೃಪೆಯಿಂದ ಅವನ ವ್ಯವಹಾರದಲ್ಲಿ ಲಾಭವಾಗಿ ಕೆಲವೇ ವರ್ಷಗಳಲ್ಲಿ ಮೊದಲಿನ ಸ್ಥಿತಿಯನ್ನು ಮುಟ್ಟಿದ. ಆದರೆ ಅವನು ಕಷ್ಟದ ಸಮಯದಲ್ಲಿ ತನಗೆ ನೆರವಾಗದ ಗೆಳೆಯ ಭೀಮಯ್ಯನ ವಿರುದ್ಧ ದ್ವೇಷ ಸಾಧಿಸಲಿಲ್ಲ. ತಪ್ಪು ಒಪ್ಪುಗಳನ್ನೆಲ್ಲ ದೇವರ ತೀರ್ಮಾನಕ್ಕೆ ಬಿಟ್ಟು ತನ್ನ ಸಾತ್ವಿಕ ಸ್ವಭಾವದಂತೆ ಇದ್ದುಬಿಟ್ಟ.
ಭೀಮಯ್ಯನಿಗೆ ಗೆಳೆಯ ರಾಮಯ್ಯನು ತನ್ನ ಪರಿಶ್ರದಿಂದ ಮತ್ತೆ ಮೊದಲಿನ ಸ್ಥಿತಿಗೆ ಬಂದದ್ದನ್ನು ನೋಡಿ ನಾಚಿಕೆ ಉಂಟಾಯಿತು, ತಾನೇ ಖುದ್ದಾಗಿ ಬಂದು ರಾಮಯ್ಯನ ಕ್ಷಮಾಪಣೆ ಕೇಳಿದನು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಿಸಿದಕ್ಕಾಗಿ ಧನ್ಯವಾದಗಳು ಗೆಳತಿ ಹೇಮಮಾಲಾ
ನೀತಿಪೂರ್ಣ ಕಥೆ. ಉತ್ತಮ ಸಂದೇಶವಿದೆ. ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದಂತಹ ನೀತಿಯ ಉಲ್ಲೇಖ ಇದೆ.
ಧನ್ಯವಾದಗಳು ನಯನ ಮೇಡಂ
ಉತ್ತಮ ಸಂದೇಶ ಹೊತ್ತ ಪುಟ್ಟ ಕಥೆಯೊಂದಿಗಿನ ಚಂದದ ಸೂಕ್ತ ರೇಖಾಚಿತ್ರ ಮನತುಂಬಿತು.. ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಒಳ್ಳೆಯ ಸಂದೇಶ ನೀಡುವ ಸುಂದರ ಕಥೆ.
ಧನ್ಯವಾದಗಳು ಪದ್ಮಾಮೇಡಂ
ಎಷ್ಟು ಜನ ಈ ರೀತಿ ನೆನೆಸಿಕೊಳ್ಳುತ್ತಾರೆ ಹೇಳಿ, ಸೊಗಸಾದ ಕತೆ….
ಧನ್ಯವಾದಗಳು ಗೆಳತಿ ವೀಣಾ
ಒಳ್ಳೆಯ ನೀತಿಕತೆ