ಸೂರ್ಯನ ಪುತ್ರ ಯಮ
ಯಮ ಎಂಬ ಹೆಸರು ಕೇಳಿದೊಡನೆ ಸಾವಿನ ನೆನಪು ಆವರಿಸಿ ಬಿಡುತ್ತದೆ. ಆಯುಷ್ಯ ಮುಗಿದಾಗ ಯಮದೂತರು ಬಂದು ಪ್ರಾಣವನ್ನು ಎಳೆದೊಯ್ಯುತ್ತಾರಂತೆ. ಯಮಪಾಶಕ್ಕೆ ಕೊರಳೊಡ್ಡಬೇಕಂತೆ ಎಂದೆಲ್ಲ ಕಥೆಗಳಲ್ಲಿ ಕೇಳುತ್ತೇವೆ. ಇಂತಹ ಯಮನೆಂದರೆ ಯಾರು? ಆತನ ಚರಿತ್ರೆಯೇನು? ಆತನಿಗೆ ಜೀವ ಕೊಂಡೊಯ್ಯವ ಕೆಲಸವನ್ನು ಯಾರು ಕೊಟ್ಟರು?ಅವರು ಮೃತ್ಯುದೇವತೆಯೇ?
ಸೂರ್ಯ ಹಾಗೂ ದೇವಶಿಲ್ಪಿ ವಿಶ್ವಕರ್ಮನ ಮಗಳು ಸಂಜ್ಞಾದೇವಿಯರ ಪುತ್ರನೇ ಯಮ, ಸೂರ್ಯನನ್ನು ವಿವಾಹವಾದ ಸಂಜ್ಞಾದೇವಿಗೆ ಕಾಲಕ್ರಮದಲ್ಲಿ ವೈವಸ್ವತ, ಯಮ, ಯಮುನೆ ಎಂಬ ಮೂವರು ಮಕ್ಕಳಾದರು. ಕೆಲವಾರು ವರ್ಷಗಳ ಕಾಲ ಕಷ್ಟಪಟ್ಟು ಹೇಗಾದರೂ ಸೂರ್ಯನ ಶಾಖವನ್ನು ತಡೆದುಕೊಂಡು ಸಂಸಾರ ಹೂಡಿದಳು. ಆದರೆ ಮತ್ತೆ ಮತ್ತೆ ಆಕೆಗೆ ಸೂರ್ಯನ ಶಾಖವನ್ನು ತಡೆದುಕೊಳ್ಳಲು ಅಸಾಧ್ಯವಾಯಿತು. ಅವರ ದಾಂಪತ್ಯಕ್ಕೆ ವಿದಾಯ ಹೇಳಲು ತನ್ನ ಮನದೊಳಗೇ ಲೆಕ್ಕ ಹಾಕಿದಳವಳು. ಹೀಗಿರಲು ಒಂದು ದಿನ ತನ್ನಂತೆ ಇರುವ ಛಾಯಾರೂಪವನ್ನು ಸೃಷ್ಟಿ ಮಾಡಿ ಆಕೆಗೆ ಛಾಯಾದೇವಿ ಎಂದು ಹೆಸರಿಟ್ಟಳು. ಸೂರ್ಯನ ಮಡದಿಯಾದ ಸಂಜ್ಞಾದೇವಿಗೆ ಯೋಗ್ಯತೆಯೂ ದಿವ್ಯವಾಗಿತ್ತು. ತನ್ನ ತದ್ರೂಪದ ಆ ಹೆಣ್ಣಲ್ಲಿ ಈ ಗುಟ್ಟನ್ನು ಯಾರಿಗೂ ತಿಳಿಸಬೇಡ’ ಎಂದು ತಾನು ತವರು ಮನೆಗೆ ಹೋದಳು. ಕೊಟ್ಟ ಮಾತಿನಂತೆ ಈ ರಹಸ್ಯವನ್ನು ಛಾಯಾದೇವಿ ಯಾರಿಗೂ ತಿಳಿಸದೆ ಸೂರ್ಯದೇವನ ಸೇವೆ ಮಾಡುತ್ತಾ ಸಂಜ್ಞಾದೇವಿಯ ಮೂರು ಮಂದಿ ಮಕ್ಕಳನ್ನು ತನ್ನ ಮಕ್ಕಳೆಂದೇ ಅಕ್ಕರೆಯಿಂದ ನೋಡಿಕೊಳ್ಳುತ್ತಾ ಇದ್ದಳು. ಅವಳ ನಡತೆಯಿಂದ ಸೂರ್ಯನಿಗೆ ಸಂಶಯ ಹುಟ್ಟಲಿಲ್ಲ. ದಿನ ಸರಿದಂತೆ ಛಾಯಾದೇವಿಗೂ ಸೂರ್ಯನ ಅನುಗ್ರಹದಿಂದ ಮೂವರು ಮಕ್ಕಳಾದವು. ಅವರ ಹೆಸರು ಕ್ರಮವಾಗಿ ಸಾವರ್ಣಿ, ಶನಿ, ತಪತಿ, ಮಲತಾಯಿಗೆ ಮೊದಲಿನ ಹೆಂಡತಿ ಮಕ್ಕಳಲ್ಲಿ ಅಕ್ಕರೆ ಕಡಿಮೆಯಾಗುವುದು ತನಗೆ ಮಕ್ಕಳಾದ ಮೇಲೆ ಎಂಬ ಮಾತಿದೆ. ಹಾಗೆಯೇ ಆಯಿತು.
ಕ್ರಮೇಣ ಛಾಯಾದೇವಿಗೆ ಸಂಜ್ಞಾದೇವಿಯ ಮಕ್ಕಳಲ್ಲಿ ಒಲವು ಕಡಿಮೆಯಾಯಿತು. ಮಕ್ಕಳು ಈ ಸೂಕ್ಷ್ಮವನ್ನು ಅರಿತರು. ತಮ್ಮ ತಾಯಿ ಈ ರೀತಿ ಯಾಕೆ ಮಾಡುತ್ತಾಳೆ ಎಂಬುದು ಅವರಿಗೆ ಸಮಸ್ಯೆಯಾಯಿತು. ಯಮನು ಈ ರಹಸ್ಯವನ್ನು ಬಿಡಿಸಬೇಕೆಂಬ ಯೋಚಿಸುತ್ತಲೇ ಇದ್ದ. ಹೀಗಿರಲು ಆ ಸಮಯವೂ ಒದಗಿ ಬಂತು. ಅಂದು ವಿಶೇಷ ಭಕ್ಷ್ಯಗಳನ್ನು ಮಾಡಿದ ಅಡಿಗೆಯವನು ಎಲ್ಲರಿಗೂ ಸಮನಾಗಿ ಹಂಚಿದನು. ಆದರೆ ಅದೆಲ್ಲಿದ್ದ ಛಾಯಾದೇವಿ ಓಡಿಬಂದು ಸಂಜ್ಞಾದೇವಿಯ ಮಕ್ಕಳನ್ನು ಹೆದರಿಸಿ, ಬೆದರಿಸಿ ಅವರ ಕೈಯಿಂದ ತಿಂಡಿಯನ್ನು ಕಿತ್ತುಕೊಂಡು ತನ್ನ ಮಕ್ಕಳಿಗೆ ನೀಡಿದಳು. ಆಗ ಯಮನಿಗೆ ಸಿಟ್ಟು ಬಂದು ಅಮ್ಮನಾದ ಛಾಯಾದೇವಿಗೆ ತುಳಿದೇ ಬಿಟ್ಟನು. ಛಾಯೆಗೆ ಕ್ರೋಧ ಉಕ್ಕಿ ಬಂದು ನನ್ನನ್ನು ತುಳಿದ ನಿನ್ನ ಪಾದಗಳಲ್ಲಿ ಕೀವು ತುಂಬಿದ ಹುಣ್ಣುಗಳಾಗಿ ನೀನು ಯಾತನೆ ಪಡುವಂತಾಗಲಿ’ ಎಂದು ಶಾಪವಿತ್ತಳು. ಅವಳ ಶಾಪ ಫಲಿಸಿತು ಕೆಲ ದಿನಗಳಲ್ಲಿ ಯಮನ ಕಾಲು ಹುಣ್ಣುಗಳಿಂದಾವ್ರತವಾಯಿತು. ನೊಂದುಕೊಂಡ ಯಮನು ತಂದೆಯಾದ ಸೂರ್ಯ ದೇವನಲ್ಲಿಗೆ ತೆರಳಿ ‘ತಂದೆಯೇ ಅಮ್ಮನ ಶಾಪದಿಂದ ನನ್ನ ಕಾಲಿನಲ್ಲಿ ಕೀವು ತುಂಬಿದ ಹುಣ್ಣುಗಳಾಯಿತು. ನಾನೇನೋ ತಿಳಿಯದೆ ಮುಂಗೋಪದಲ್ಲಿ ತಪ್ಪು ಮಾಡಿದೆ ನಿಜ. ಆದರೆ ಹೆತ್ತ ತಾಯಿ ಮಕ್ಕಳಿಗೆ ಈ ರೀತಿ ಶಾಪ ಕೊಡುವಳೇ? ಲೋಕದಲ್ಲಿ ಕುಪುತ್ರ ಹುಟ್ಟಲೂಬಹುದು. ಆದರೆ ಕುಮಾತೆ ಇರಲಾರಳಲ್ಲವೇ?’ ಎಂದನು. ಆಗ ಸೂರ್ಯನು ‘ಹಾಗಾದರೆ… ಈಕೆ ನಿಮ್ಮ ಹೆತ್ತಮ್ಮನಲ್ಲವೇ? ಎಂದಾಗ ‘ಈಕೆ ನಮ್ಮ ಅಮ್ಮನಲ್ಲ’ ಎಂದು ದನಿಗೂಡಿಸಿದರು.
ಸೂರ್ಯನು ಛಾಯಾದೇವಿಯನ್ನು ಕರೆಸಿ ನಿಜ ವಿಷಯವನ್ನು ಹೇಳುವಂತೆ ಒತ್ತಾಯ ಹೇರಿದನು. ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಳು. ಸೂರ್ಯನು, ಯಮನಿಗೆ ನಿನ್ನ ಶಾಪ ವಿಮೋಚನೆಗೆ ಶಿವನನ್ನು ಕುರಿತು ತಪಸ್ಸು ಮಾಡು’ ಎಂದನು, ತಂದೆಯ ಆದೇಶದಂತೆ ‘ಯಮ’ನು ಶಿವನನ್ನುದ್ದೇಶಿಸಿ ಘೋರ ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿ ಒಲಿಸಿಕೊಂಡನು. ಶಿವನು ಯಮನಿಗೆ “ನಿನ್ನ ಶಾಪವು ನೀಗಲಿ, ನೀನು ಜೈಮಿನಿ ಪಟ್ಟಣಕ್ಕೆ ಅರಸನಾಗಿ ಯಮ-ನಿಯಮಗಳಿಗೆ ಅಧಿಕಾರಿಯಾಗು’ ಎಂದನು. ಮೃತ್ಯುದೇವತೆಯಾಗಿ ಯಮನನ್ನು ಪರಿಶಿವ ನೇಮಿಸಿದನು.
ದಕ್ಷಿಣ ದಿಕ್ಕಿನ ಒಡೆತನ ‘ಯಮ’ನಿಗೆ ಸೇರಿದ್ದು, ಆದ್ದರಿಂದಲೇ ನಮ್ಮಲ್ಲಿ ಸ್ವರ್ಗಸ್ಥರಾದ ಪಿತೃಗಳಿಗೆ ಶ್ರಾದ್ಧದ ದಿನ ನಮಸ್ಕಾರ ಮಾಡುವ ಪದ್ಧತಿ, ಜೀವಿತ ಹಿರಿಯರಿಗೆ ಮಾಡುವಾಗ ದಕ್ಷಿಣ ದಿಕ್ಕು ಸಲ್ಲದು. ಯಮನ ರಾಜಧಾನಿ ಜೈಮಿನಿ ಪಟ್ಟಣ.
ಯಮನು ಮೃತ್ಯುದೇವತೆಯಾದರೂ ಆತನಿಗೆ ಆ ಒಡೆತನ ನೀಡಿದ ‘ಶಿವನ ಅನುಮತಿ ಇಲ್ಲದಲ್ಲಿ ಪ್ರಾಣ ಒಯ್ಯಲಾರನು. ಅದಕ್ಕೆ ಉದಾಹರಣೆಯೇ ಮಾರ್ಕಂಡೇಯ ಚರಿತ್ರೆ. ಜನ್ಮತಃ ಅಲ್ಪಾಯುಷಿಯಾಗಿ ಹುಟ್ಟಿದ್ದ ಮಾರ್ಕಂಡೇಯ ಶಿವಭಕ್ತ ಶಿವನನ್ನು ಅಚಲವಾಗಿ ನಂಬಿ ಪೂಜಿಸಿ ತನ್ನ ಮೃತ್ಯುವನ್ನು ಜಯಿಸಿ ಚಿರಂಜೀವಿಯಾಗುತ್ತಾನೆ. ‘ಸತೀ ಸಾವಿತ್ರಿ’ಯ ಪತಿಭಕ್ತಿ ಮೆಚ್ಚಿ ಆಕೆಯ ಪತಿಯಾದ ಸತ್ಯವಂತನ ಪ್ರಾಣವನ್ನು ಆತನಿಗೇ ಒಪ್ಪಿಸುತ್ತಾನೆ. ಯಮನೇ ಕುಂತಿದೇವಿಯ ಉದರದಲ್ಲಿ ಯುಧಿಷ್ಠಿರನಾಗಿ ಜನಿಸುತ್ತಾನೆ. ಯಮನ ಕರಣೀಕ (ಲೆಕ್ಕಪರಿಶೋಧಕ)ನಿಗೆ ಚಿತ್ರಗುಪ್ತ ಎಂದು ಹೆಸರು. ಶ್ರೀರಾಮಾವತಾರದ ಕಾರ್ಯಗಳೆಲ್ಲ ಮುಗಿಯುತ್ತಾ ಬಂದಾಗ ಯಮನು ರಾಮನಿಗೆ ವೈಕುಂಠಕ್ಕೆ ತೆರಳಬೇಕೆಂದು ಎಚ್ಚರಿಸುತ್ತಾನೆ. ಅಣಿಮಾಂಡವ್ಯನ ಶಾಪದಿಂದ ಯಮನು ವಿದುರನಾಗಿ ಜನಿಸುತ್ತಾನೆ.
ಯಮದೂತ ಕಾಗೆ, ಯಮತನಯ ಧರ್ಮರಾಯ, ಯಮುನ ನಕ್ಷತ್ರ ಭರಣಿ, ಕುರುವಂಶದಲ್ಲಿ ಜನಿಸಿದ ವಿದುರ, ಧರ್ಮರಾಯರು ಲೋಕಮಾನ್ಯರಾಗಲು ಯಮನ ಅಂಶದವರು ಎಂಬುದನ್ನು ಮರೆಯುವಂತಿಲ್ಲ.
– ವಿಜಯಾಸುಬ್ರಹ್ಮಣ್ಯ, ಕುಂಬಳೆ
ಸುರಹೊನ್ನೆ ವೆಬ್ ಸೈಟಿನ ಸಂಪಾದಕಿ ಹೇಮಮಾಲ ಹಾಗೂ ಓದುಗ ಬಳಗಕ್ಕೆ ವಂದನೆಗಳು.
ಚೆನ್ನಾಗಿದೆ. ಇಂತಹ ಕಥೆಗಳನ್ನು ಓದುವುದರಲ್ಲಿಯ ಖುಷಿಯೇ ಬೇರೆ.
ಎಂದಿನಂತೆ ಪೌರಾಣಿಕ ಕತೆ ಮುದ ತಂದಿತು… ವಿಜಯಾ ಮೇಡಂ
ಉತ್ತಮ ಮಾಹಿತಿ ಯ ಲೇಖನ ಮೇಡಂ
ಧನ್ಯವಾದಗಳು
ರಮೇಶ್
ಬಹಳ ಹಿಂದೆ ಓದಿದ ಕಥೆಯನ್ನು ಮತ್ತೆ ನೆನಪು ಮಾಡಿಸಿದ್ದಕ್ಕೆ ಧನ್ಯವಾದಗಳು
ಓದಿ ಅಭಿಪ್ರಾಯ ಹೇಳಿದ ಎಲ್ಲಾ ಸೋದರ+ಸೋದರಿಯರಿಗೂ ವಂದನೆಗಳು.
ಯಮನ ಕಥೆಯ ನಿರೂಪಣೆ ಸೊಗಸಾಗಿದೆ
ಯಮನ ಪುರಾಣ ಕಥೆಯು ಕುತೂಹಲದಾಯಕವಾಗಿದೆ.