ಅವಿಸ್ಮರಣೀಯ ಅಮೆರಿಕ – ಎಳೆ 54
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಬಫೆಲೊದಲ್ಲಿ ಬೆಳಗು…
ಸ್ವಲ್ಪ ತಡವಾಗಿಯೇ ಎಚ್ಚೆತ್ತ ನಮಗೆ ಉದ್ದಿನ ದೋಸೆಯ ಘಮ ಮೂಗಿಗೆ ಬಡಿಯಿತು. ಹೊರಗಡೆಗೆ ಮಂಜು ಕವಿದ ವಾತಾವರಣದಲ್ಲಿ ಹಸಿರುಸಿರಿಯ ನಡುವೆ ಅಲ್ಲಲ್ಲಿ, ದೂರ ದೂರಕ್ಕೆ ಹಲವಾರು ಮನೆಗಳು ಮೈ ತುಂಬಾ ಮಂಜಿನ ತೆಳ್ಳಗಿನ ಬಿಳಿ ಹೊದಿಕೆ ಹೊದ್ದು ಖುಷಿಯಿಂದ ಕುಳಿತಿರುವುದು ಕಂಡಿತು. ಯಾವುದೇ ಮನೆಯ ಸುತ್ತಲು ಬೇಲಿ ಗೋಚರಿಸಲಿಲ್ಲ. ನಾವು ಉಳಕೊಂಡಿದ್ದ ಬಂಧು ವಿನೋದಾ ಉಪಾಧ್ಯಾಯ ದಂಪತಿಗಳ ಮನೆಯ ಮುಂದಿನ ಹೂದೋಟದಲ್ಲಿ ಪುಟ್ಟ ಪುಟ್ಟ ಗಿಡಗಳಲ್ಲಿ,ಮುದ್ದಾದ, ಬಣ್ಣ ಬಣ್ಣದ ಬಹು ಚಂದದ ಹೂಗಳು ಅರಳಿ ನಗುತ್ತಿದ್ದವು. ಜೊತೆಗೇ ನಮ್ಮೂರಂತೆ ಅಲ್ಲಿಯೂ ಕೆಲವು ಗಿಡಗಳ ಅಡಿಭಾಗದ ಕಪ್ಪು ಮೆದುಮಣ್ಣನ್ನು ಯಾವುದೋ ಪ್ರಾಣಿಯು ಅಡಿಮೇಲು ಮಾಡಿ ಹೋಗಿದ್ದವು…ಹುಳ ಹುಪ್ಪಟೆಗಳನ್ನು ಭಕ್ಷಿಸಲು. ಅದನ್ನು ನೋಡಿ; “ಇಲ್ಲಿಯೂ ಹೀಗೆಯಾ?!” ಎಂದೆನಿಸಿ ಆಶ್ಚರ್ಯವಾಯಿತು. ಮನೆ ಹಿಂಭಾಗದಲ್ಲಿರುವ ಚಂದದ ಪುಟ್ಟ ಲಾನ್, ಅಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಮರದ ಒರಗು ಬೆಂಚುಗಳು, ಸುತ್ತಲೂ ಹೂ ಗಿಡಗಳು, ಅಲ್ಲೇ ಪಕ್ಕದಲ್ಲಿ ವಿವಿಧ ತರಕಾರಿ ಗಿಡಗಳು…ಇವೆಲ್ಲವೂ ಕಣ್ತುಂಬಿದವು. ಬೆಳಗ್ಗೆ ಹತ್ತು ಗಂಟೆಗೆ ದೋಸೆ, ಅಪರೂಪದ ಮಾವಿನಹಣ್ಣು ರಸಾಯನ, ಚಟ್ನಿಯೊಂದಿಗಿನ ಸ್ವಾದಿಷ್ಟವಾದ ಬೆಳಗ್ಗಿನ ಉಪಾಹಾರವು ಉದರವನ್ನು ತಂಪಾಗಿಸಿತು. ನಾವು ಹೋಗುವಲ್ಲಿ ಸರಿಯಾದ ಸಸ್ಯಾಹಾರದ ಊಟ ಸಿಗಲಾರದೆಂದು; ಮಧ್ಯಾಹ್ನದ ಉಪಯೋಗಕ್ಕಾಗಿ ಬಿಸಿ ಬಿಸಿ ಉಪ್ಪಿಟ್ಟನ್ನೂ ತಯಾರಿಸಿ ಡಬ್ಬದಲ್ಲಿ ಹಾಕಿಕೊಟ್ಟರು. ಅವರ ಪ್ರೀತಿಯ ಆದರಾತಿಥ್ಯಗಳನ್ನು ಸವಿದು ವಿದಾಯಗೊಂಡು ಮುಂದಕ್ಕೆ ನಮ್ಮ ಪಯಣ ಹೊರಟಿತು…ಜಗತ್ಪ್ರಸಿದ್ಧ ಜಲಪಾತವಿರುವ ನಯಾಗರದತ್ತ…
ಅದ್ಭುತ ನಯಾಗರ ಜಲಪಾತದತ್ತ…
ಅಮೇರಿಕಾದ ನ್ಯೂಯಾರ್ಕ್ ನ ಬಫೆಲೋ ಪಟ್ಟಣದಲ್ಲಿದೆ, ಜಗತ್ತಿನ ಪ್ರಾಕೃತಿಕ ಅದ್ಭುತಗಳಲ್ಲೊಂದಾದ ಈ ನಯಾಗರ ಜಲಪಾತ. 1678ನೇ ಇಸವಿಯಲ್ಲಿ ಈ ಜಲಪಾತದ ಇರುವಿಕೆಯನ್ನು ಅನ್ವೇಷಣಾ ಪ್ರವೃತ್ತಿಯ ಫ್ರೆಂಚ್ ಧರ್ಮಗುರುಗಳೊಬ್ಬರು ಗಮನಿಸಿ ಹೊರಪ್ರಪಂಚಕ್ಕೆ ತಿಳಿಯಪಡಿಸಿದರು. ಆನಂತರದ ದಿನಗಳಲ್ಲಿ, ಜಲಪಾತದ ನೀರಿನ ಪ್ರಚಂಡ ಶಕ್ತಿಯನ್ನು ಅಲ್ಲಿಯ ಜನರು ತಮ್ಮ ಮಿಲ್ಲುಗಳಿಗೆ ಮತ್ತು ವಿವಿಧ ಕಾರ್ಖಾನೆಗಳಿಗೆ ಬಳಸತೊಡಗಿದರು. ಅವುಗಳಿಂದ ಹೊರ ಬಂದ ತ್ಯಾಜ್ಯಗಳಿಂದಾಗಿ ನದಿಯ ನೀರು ತುಂಬಾ ಕಲುಷಿತಗೊಳ್ಳುತ್ತಿತ್ತು. ಆ ದಿನಗಳಲ್ಲಿ ಜಲಪಾತದ ವೀಕ್ಷಣೆಗಾಗಿ ಜನ ಸಾಮಾನ್ಯರಿಂದ ದುಡ್ಡು ವಸೂಲಿ ಕೂಡಾ ಮಾಡಲಾಗುತ್ತಿತ್ತು. ಇದರೆಲ್ಲದರ ವಿರುದ್ಧ ನಯಾಗರ ಬಿಡುಗಡೆಗಾಗಿ ಅತ್ಯಂತ ಬಿರುಸಿನ ಚಳುವಳಿಗಳು( Free Niyagara Movement) ಆರಂಭವಾದವು. 1885ರಲ್ಲಿ T.V. Welch ಇವರ ನೇತೃತ್ವದಲ್ಲಿ ನಯಾಗರದ ಬಿಡುಗಡೆಗೆ ಕಾನೂನನ್ನು ರಚಿಸಲಾಯಿತು. ಇದರಿಂದಾಗಿ ಎಲ್ಲಾ ಬಗೆಯ ಚಟುವಟಿಕೆಗಳೂ ನಿಷೇಧಿಲ್ಪಟ್ಟು, ಜಲಪಾತವು ಪ್ರಕೃತಿಯ ನೈಜ ಸೌಂದರ್ಯವನ್ನು ಪಡೆಯಿತಲ್ಲದೆ, ವೀಕ್ಷಣೆಯು ಜನಸಾಮಾನ್ಯರಿಗೆ ಸುಲಭಸಾಧ್ಯವಾಯಿತು. ಆದ್ದರಿಂದ ಈಗ ಜಲಪಾತವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ನಯಾಗರ ನದಿಯು ಕೆನಡದಿಂದ ಹರಿದು ಬಂದು ಅಮೆರಿಕದ ಹಾಗೂ ಕೆನಡದ ಭೂಭಾಗಗಳಲ್ಲಿ ಜಲಪಾತವಾಗಿ ರೂಪುಗೊಂಡಿದೆ. ಈ ಜಲಪಾತದ ನೀರಿನಿಂದ ಸುಮಾರು 19ನೇ ಶತಮಾನದ ಕಾಲದಿಂದ ಜಲವಿದ್ಯುತ್ ಉತ್ಪಾದನೆ ಆರಂಭವಾಯಿತು. ಇದು ಕೆನಡ ಮತ್ತು ಅಮೆರಿಕ ರಾಷ್ಟ್ರಗಳ ಗಡಿಭಾಗದಲ್ಲಿರುವುದರಿಂದ; ಜಲಪಾತದಿಂದ ಉತ್ಪಾದಿಸಲ್ಪಡುವ ಮಿಲಿಯಗಟ್ಟಲೆ ಕಿ.ವಾ.ಗಳಷ್ಟು ವಿದ್ಯುಚ್ಛಕ್ತಿಯನ್ನು ಅಮೇರಿಕಾ ಮತ್ತು ಕೆನಡ ದೇಶಗಳು ಸಮನಾಗಿ ಹಂಚಿಕೊಳ್ಳುತ್ತಿವೆ. ನೂರಾರು ವರುಷಗಳ ಹಿಂದೆ, ಅಲ್ಲಿಯ ಜನರು ಜಲಪಾತದ ನೀರಿನಿಂದ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಖಾನೆಗಳ ಪಳೆಯುಳಿಕೆಗಳನ್ನು ಇಂದಿಗೂ ನದಿ ತೀರದಲ್ಲಿ ಕಾಣಬಹುದು.. ಅವುಗಳನ್ನು ಬಹಳ ಜೋಪಾನವಾಗಿ ಸಂರಕ್ಷಿಸಿ ಇಡಲಾಗಿದೆ.
ಈ ಮೊದಲೇ ತಿಳಿಸಿದಂತೆ, ಅಮೆರಿಕದಲ್ಲಿ ನಮ್ಮೂರಿನಂತೆ ನೀರಿನ ಮೂಲ ಆಗಸದಿಂದ ಸುರಿವ ಮಳೆಯಲ್ಲ. ಚಳಿಗಾಲದಲ್ಲಿ ಪರ್ವತ ಪ್ರದೇಶಗಳಲ್ಲಿ ಬೀಳುವ ಹಿಮ, ಹೆಪ್ಪುಗಟ್ಟಿದ ನೀರು, ಮಂಜುಗಡ್ಡೆ ಇತ್ಯಾದಿಗಳು ಬೇಸಿಗೆಯಲ್ಲಿ ಸೂರ್ಯನ ಶಾಖಕ್ಕೆ ಕರಗಿ ನದಿಗಳಲ್ಲಿ ನೀರಾಗಿ ಹರಿದು ಜೀವಿಗಳ ಜಲಮೂಲವಾಗುತ್ತದೆ. ಕೆಲವೊಮ್ಮೆ ಹಿಮಪಾತದ ಕೊರತೆಯಿಂದಾಗಿ ಕೆಲವು ರಾಜ್ಯಗಳು ನೀರಿನ ಕ್ಷಾಮವನ್ನು ಎದುರಿಸುವುದು ಕೂಡಾ ಸಾಮಾನ್ಯ. ಅಮೆರಿಕದ ಉತ್ತರ ಪರ್ವತ ಸಾಲುಗಳಲ್ಲಿರುವ ಮಂಜುಗಡ್ಡೆಯು ಬೇಸಿಗೆಯಲ್ಲಿ ಕರಗಿ ನಯಾಗರ ನದಿಯಲ್ಲಿ ನೀರಾಗಿ ಹರಿಯುವುದು. ಅದರ ಅಗಾಧ ನೀರಿನ ಹರಿವಿನಿಂದ ರೂಪುಗೊಂಡ ನಯಾಗರ ಜಲಪಾತವು; ಅಮೆರಿಕ ಫಾಲ್ಸ್, ಬ್ರೈಡಲ್ ವೇಲ್ ಮತ್ತು ಹಾರ್ಸ್ ಶೂ ಎಂಬ ಮೂರು ಜಲಪಾತಗಳನ್ನು ಒಳಗೊಂಡಿದೆ… ನಮ್ಮ ಜೋಗದ ರಾಜ, ರಾಣಿ, ರೋರರ್, ರಾಕೆಟ್ ತರಹ. ಹಾರ್ಸ್ ಶೂ ಜಲಪಾತವನ್ನು ಕೆನೆಡಿಯನ್ ಜಲಪಾತ ಎಂದೂ ಕರೆಯುವರು; ಯಾಕೆಂದರೆ ಅದು ಕೆನಡ ದೇಶದ ಭೂಭಾಗವನ್ನೂ ಆವರಿಸಿದೆ. ನಯಾಗರ ಜಲಪಾತದ ಎತ್ತರವು ಸುಮಾರು176ಮೀ, ಅಂದರೆ ನಮ್ಮ ಜೋಗ ಜಲಪಾತ(253ಮೀ)ಕ್ಕಿಂತ ಕಡಿಮೆ. ಅದರೂ ಅದರ ಭವ್ಯ ಮನೋಹರತೆ, ಅದ್ಭುತ ವಿಶಾಲತೆ ಹಾಗೂ ಸೌಂದರ್ಯಕ್ಕಾಗಿಯೇ ಅದು ಜಗತ್ಪ್ರಸಿದ್ಧ! ಈ ಜಲಪಾತದಲ್ಲಿ ಸಾಮಾನ್ಯವಾಗಿ ಸರಾಸರಿ ಸೆಕೆಂಡಿಗೆ 85,000 ಘನ ಅಡಿಗಳಷ್ಟು ನೀರು ಹರಿದರೆ, ಕಡು ಬೇಸಗೆಯಲ್ಲಿ ಸೆಕೆಂಡಿಗೆ 2,25,000 ಘನ ಅಡಿಗಳಷ್ಟು ಗರಿಷ್ಠ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಅಮೆರಿಕ ಫಾಲ್ಸ್ ಮತ್ತು ಹಾರ್ಸ್ ಶೂ ಫಾಲ್ಸ್ ನಡುವೆ ಇರುವ ನಡುಗುಡ್ಡೆಯನ್ನು Goat Island ಎನ್ನುವರು. ಹಾಗೆಯೇ ಬ್ರೈಡಲ್ ಫಾಲ್ಸ್ ಉಳಿದ ಇನ್ನೆರಡು ಜಲಪಾತಗಳಿಂದ Luna Island ಎಂಬ ಪುಟ್ಟ ನಡುಗುಡ್ಡೆಯಿಂದ ಬೇರ್ಪಟ್ಟಿದೆ. ಇನ್ನೊಂದು ವಿಶೇಷತೆಯೆಂದರೆ ಇಲ್ಲಿರುವ ಎರಡು ಅಂತಾರಾಷ್ಟ್ರೀಯ ಸೇತುವೆಗಳು. ಇವುಗಳು ನಯಾಗರ ನದಿಯ ಅಡ್ಡಲಾಗಿ, ಕೆನಡ ದೇಶವನ್ನು ಸಂಪರ್ಕಿಸಲು ನಿರ್ಮಿಸಲಾಗಿವೆ.
ಇಲ್ಲಿ ನನಗೊಂದು ತಮಾಶೆ ವಿಷಯ ನೆನಪಾಗುತ್ತಿದೆ…ನನ್ನ ಚಿಕ್ಕಂದಿನಲ್ಲಿ, ನಾವಿರುವ ಪ್ರದೇಶದ ಮೂಲಕ ಕರ್ನಾಟಕ- ಕೇರಳ ರಾಜ್ಯದ ಗಡಿಯು ಹಾದು ಹೋಗುತ್ತಿತ್ತು. ಒಂದು ಕಾಲನ್ನು ಆಚೆ ಕಡೆಗೆ ಹಾಗೂ ಇನ್ನೊಂದನ್ನು ಈಚೆ ಕಡೆಗಿಟ್ಟು ಸಂಭ್ರಮಿಸುತ್ತಿದ್ದೆವು. ಎರಡೂ ಕಡೆಗಳಲ್ಲಿ ಏನೂ ವ್ಯತ್ಯಾಸವಿಲ್ಲವಲ್ಲ ಎಂದು ಆಶ್ಚರ್ಯವಾಗುತ್ತಿತ್ತು…ಒಂದೇ ಭೂಮಿ…ಒಂದೇ ಮಣ್ಣು! ಆಗಿನಂತೆ ಈಗಲೂ ಈ ಎರಡೂ ಭೂ ಭಾಗಗಳಲ್ಲಿ ವ್ಯತ್ಯಾಸವೇನೂ ಗೋಚರಿಸದಿದ್ದರೂ, ಕಾನೂನುಗಳಲ್ಲಿರುವ ವ್ಯತ್ಯಾಸ ಮಾತ್ರ ಎದ್ದು ಕಾಣುತ್ತಿದೆ. ಎಲ್ಲಾ ಗೋಜಲು… ಮಾನವ ನಿರ್ಮಿತ ಅಗೋಚರ ಬೇಲಿ..!! ನಯಾಗರದಲ್ಲಿ ಕೂಡಾ ಎರಡು ರಾಷ್ಟ್ರಗಳ ನಡುವಿನ ನಿರ್ಬಂಧದ ಬೇಲಿ ಎದ್ದುಕಾಣುತ್ತದೆ! ಇಂತಹ ಸಂದಿಗ್ಧ ಪ್ರಶ್ನೆಗಳ ನಡುವೆಯೇ ನಮ್ಮ ವಾಹನವು ಜಲಪಾತ ಪ್ರದೇಶದ ಆವರಣದ ಬಳಿ ಬಂದು ನಿಂತಿತು…Niyagara Falls State Park ಎದುರುಗಡೆಗೆ…
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: http://surahonne.com/?p=38346
-ಶಂಕರಿ ಶರ್ಮ, ಪುತ್ತೂರು.
Beautiful
ಧನ್ಯವಾದಗಳು ನಯನಾ ಮೇಡಂ,
ನಯಾಗರಾಗೆ ಹೋದವರು ಶಂಭು ಉಪಾಧ್ಯಾಯ ರ ಮನೆಗೆ ಭೇಟಿಕೊಡಲೇಬೇಕು. ನಾವೂ ಹೋಗಿದ್ದೆವು. ಶಂಭು ಉಪಾಧ್ಯಾಯ ನಮ್ಮ ಸೋದರಭಾವ.
ಇದನ್ನು ಓದಿದಾಗ ೫ ವರ್ಷದ ಹಿಂದಿನ ನೆನಪು ಮರುಕಳಿಸಿತು.
ಹೌದು…ಉಪಾಧ್ಯಾಯ ದಂಪತಿಗಳ ಅತಿಥಿ ಸತ್ಕಾರ ಸೂಪರ್
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು..
ವಿವರಣೆ ನನಗೆ ತುಂಬಾ ಮುದತಂದಿತು…ಶಂಕರಿ ಮೇಡಂ