ವಾಟ್ಸಾಪ್ ಕಥೆ 25: ಸ್ವರ್ಗದ ಮಣ್ಣು.
ಒಂದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವನ್ನು ಪರೀಕ್ಷೆ ಮಾಡಲು ಒಂದು ಪ್ರಶ್ನೆ ಕೇಳಿದಳು. ”ಮಕ್ಕಳೇ, ನಾಳೆ ನೀವೆಲ್ಲರೂ ಶಾಲೆಗೆ ಬರುವಾಗ ಸ್ವಲ್ಪ ಸ್ವರ್ಗದ ಮಣ್ಣನ್ನು ನಿಮ್ಮೊಡನೆ ತಂದು ನನಗೆ ತೋರಿಸಿ” ಎಂದಳು.
ಮಕ್ಕಳಿಗೆ ಏನೂ ಅರ್ಥವಾಗಲಿಲ್ಲ. ಮನೆಗೆ ಹೋಗಿ ತಮ್ಮ ತಾಯಿ ತಂದೆಯರಿಗೆ ತಮ್ಮ ಶಿಕ್ಷಕರು ಹೇಳಿದ್ದನ್ನು ಗಿಳಿಪಾಠದಂತೆ ಒಪ್ಪಿಸಿದರು. ಬಹತೇಕ ತಂದೆ ತಾಯಿಯರು ಇದನ್ನು ಕೇಳಿ ಸಿಟ್ಟಿಗೆದ್ದರು. ”ನಿಮ್ಮ ಟೀಚರ್‌ಗೆ ತಲೆ ಕೆಟ್ಟಿದೆ. ಸ್ವರ್ಗವನ್ನು ಯಾರು ನೋಡಿದ್ದಾರೆ. ಸತ್ತಮೇಲೆ ಸ್ವರ್ಗ ಎಂದು ಹೇಳುತ್ತಾರೆ. ಅಲ್ಲಿಗೆ ಹೋದವರು ಯಾರೂ ಹಿಂದಕ್ಕೆ ಬಂದಿಲ್ಲ. ಅಂತಹುದರಲ್ಲಿ ಸ್ವರ್ಗದ ಮಣ್ಣನ್ನು ಹೇಗೆ ತರುವುದು. ನಿಮ್ಮ ಟೀಚರ್ ಪಾಠ ಮಾಡುವುದನ್ನು ಬಿಟ್ಟು ಇಂತಹ ತಲೆಹರಟೆ ಮಾಡುತ್ತಿದ್ದಾರೆ. ಅವರಿಗೇ ನಾವೇ ಅಲ್ಲಿಗೆ ಬಂದು ಸರಿಯಾಗಿ ಬುದ್ಧಿ ಕಳಿಸುತ್ತೇವೆ. ಇನ್ನೊಮ್ಮೆ ಇಂತಹ ಅಸಂಬಧ್ಧ ಪ್ರಶ್ನೆಗಳನ್ನು ಕೇಳಿ ಮಕ್ಕಳನ್ನು ದಿಕ್ಕು ತಪ್ಪಿಸಬೇಡಿ ಎಂದು” ಎಂದರು.
ಮಾರನೆಯ ದಿನ ಮಕ್ಕಳೊಂದಿಗೆ ತಂದೆ ತಾಯಿಗಳೂ ಶಾಲೆಗೆ ಬಂದರು. ಶಾಲೆಯ ಗಂಟೆ ಹೊಡೆದು ಶಿಕ್ಷಕಿ ತರಗತಿಗೆ ಬಂದರು. ಪೋಷಕರೆಲ್ಲರೂ ಸಿಟ್ಟಿನಿಂದ ಹಲ್ಲುಹಲ್ಲು ಕಡಿಯುತ್ತಿದ್ದರು. ಶಿಕ್ಷಕಿ ಎಂದಿನಂತೆ ಶಾಂತವಾಗಿ ”ಮಕ್ಕಳೇ, ನಾನು ನಿಮಗೆ ಒಂದು ಕೆಲಸ ಮಾಡಿಕೊಂಡು ಬರಲು ಹೇಳಿದ್ದೆ. ಎಷ್ಟು ಜನ ಮಾಡಿಕೊಂಡು ಬಂದಿದ್ದೀರಿ” ಎಂದು ಪ್ರಶ್ನಿಸಿದರು. ಯಾರೂ ಮಾತನಾಡಲಿಲ್ಲ. ಕೊನೆಯ ಬೆಂಚಿನಲ್ಲಿ ಕುಳಿತಿದ್ದ ಹುಡುಗನೊಬ್ಬ ”ಮಿಸ್, ನಾನು ತಂದಿದ್ದೇನೆ ” ಎಂದು ಒಂದು ಡಬ್ಬಿಯನ್ನು ಮೇಲೆತ್ತಿ ತೋರಿಸಿದನು. ಅಷ್ಟರಲ್ಲಿ ಪೋಷಕರೊಬ್ಬರು ಅದನ್ನು ಅವನಿಂದ ಕಿತ್ತುಕೊಂಡು ಡಬ್ಬಿತೆರೆದು ಪರೀಕ್ಷಿಸಿದರು.
”ಇದು ಸಾಮಾನ್ಯವಾಗಿ ಬೀದಿಯಲ್ಲಿರುವ ಮಣ್ಣು. ಇದುಹೇಗೆ ಸ್ವರ್ಗದ ಮಣ್ಣಾಗುತ್ತದೆ?” ಎಂದು ಕೇಳಿದರು ಅಲ್ಲದೆ ಹುಡುಗನಿಗೆ ಎರಡೇಟು ಬಾರಿಸಿಯೂ ಬಿಟ್ಟರು. ಬಾಲಕ ಅಳುತ್ತಾ ಹೇಳಿದ ”ಮಿಸ್, ನಮಗೆ ನೀವು ತಂದೆ ತಾಯಿಗಳು ದೇವರಂತೆ ಎಂದು ಹೇಳಿಕೊಟ್ಟಿದ್ದೀರಿ. ದೇವರುಗಳಿರುವುದು ಸ್ವರ್ಗದಲ್ಲಿ ತಾನೇ. ಆದ್ದರಿಂದ ನಾನು ಮನೆ ಮುಂದೆ ನಮ್ಮ ತಂದೆ ತಾಯಿಗಳನ್ನು ಭೂಮಿಯ ಮೇಲೆ ನಿಲ್ಲಿಸಿ ಅವರ ಕಾಲಿನ ಅಡಿಯ ಮಣ್ಣನ್ನು ಈ ಡಬ್ಬಿಯಲ್ಲಿ ತುಂಬಿಕೊಂಡು ತಂದಿದ್ದೇನೆ. ನನಗೆ ಇದೇ ಸ್ವರ್ಗದ ಮಣ್ಣು. ಹೌದಲ್ಲವೇ ಮಿಸ್? ”ಎಂದ. ಅವನ ಮಾತನ್ನು ಕೇಳಿದ ಕೂಡಲೇ ಟೀಚರ್ ”ಹೌದು ಮಗೂ, ಅಳಬೇಡ, ನೀನು ನನ್ನ ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೀಯೆ. ಭೇಷ್, ನಾನು ನಿಮ್ಮ ಸಾಮಾನ್ಯ ಜ್ಞಾನವನ್ನು ಪರೀಕ್ಷೆ ಮಾಡಲು ಈ ಪ್ರಶ್ನೆ ಕೇಳಿದ್ದೆ. ಅದರಲ್ಲಿ ನೀನು ಗೆದ್ದೆ” ಎಂದು ಪ್ರಶಂಸೆ ಮಾಡಿದರು. ಅಲ್ಲಿಯವರೆಗೆ ಶಿಕ್ಷಕಿಯ ವಿರುದ್ಧ ಸಿಟ್ಟಿನಿಂದ ಕುದಿಯುತ್ತಿದ್ದ ಪೋಷಕರಿಗೆ ಮುಖಭಂಗವಾಯಿತು. ಮಾತನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ನಾವು ಆತುರಪಟ್ಟು ಶಿಕ್ಷಕಿಯನ್ನು ನಿಂದಿಸಿದೆವು ಎಂದುಕೊಂಡು ಎಲ್ಲರನ್ನೂ ಕ್ಷಮೆ ಕೇಳಿ ಸದ್ದಿಲ್ಲದೆ ತರಗತಿಯಿಂದ ವಾಪಸಾದರು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಅರ್ಥಗರ್ಭಿತ, ಸುಂದರ ಕಥೆ
ಪದಪುಂಜಗಳು ನೀಡುವ ಹೊರ ಅರ್ಥಕ್ಕೂ ಜೀವನ ಸಾರವನ್ನು ತಿಳಿಸುವ ಒಳಾರ್ಥಕ್ಕೂ ಇರುವ ವ್ಯತ್ಯಾಸವನ್ನು ಕಥೆ ಚೆನ್ನಾಗಿ ವಿವರಿಸಿದೆ.
ಧನ್ಯವಾದಗಳು ನಯನ ಮೇಡಂ
ಕಥೆ ಚೆನ್ನಾಗಿದೆ
ಸೊಗಸಾದ ಕತೆ ವಂದನೆಗಳು
ಧನ್ಯವಾದಗಳು ಪದ್ಮಾ ಮೇಡಂ ಹಾಗೂ ಕೃಷ್ಣಪ್ರಭಾ ಮೇಡಂ.
ಸಿಂಪಲ್ ಲಾಜಿಕ್ ಅಷ್ಟೆ ಜೀವನ ತತ್ವ, ಉತ್ತಮ ಕತೆ.
ಧನ್ಯವಾದಗಳು ಗೆಳತಿ ವೀಣಾ
ಸಾಮಾನ್ಯವಾಗಿ ಗೂಡಾರ್ಥವು ಹೊರ ನೋಟಕ್ಕೆ ಗೌಣವೆನಿಸುತ್ತದೆ. ಎಂದಿನಂತೆ ಚಂದದ ರೇಖಾಚಿತ್ರದೊಂದಿಗೆ ಸರಳ, ಸುಂದರ ಕಥೆ ಚೆನ್ನಾಗಿದೆ ನಾಗರತ್ನ ಮೇಡಂ. ವಾಟ್ಸಾಪ್ ಕಥೆಗಳ ಸಂಗ್ರಹ
ಅತ್ಯುತ್ತಮವಾಗಿದೆ.
ಧನ್ಯವಾದಗಳು ಗಾಯತ್ರಿ ಮೇಡಂ ಹಾಗೂ ಶಂಕರಿ ಮೇಡಂ