ನನ್ನ ತಲೆಯಲ್ಲಿ ಈರುಳ್ಳಿ
ನನಗೆ ಇತ್ತೀಚಿಗೇ ತಿಳಿಯಿತು. ಹಸಿವಾದಾಗಲೆಲ್ಲ ಯೂಟ್ಯೂಬ್ ನಲ್ಲಿ ʼಈಜ಼ೀ ಸ್ನ್ಯಾಕ್ಸ್ʼ ಎಂಬ ವಿಡಿಯೋಗಳನ್ನು ನೋಡಬಹುದೆಂದು. ನೋಡುತ್ತಾ ನೋಡುತ್ತಾ ಅತ್ಯಂತ ಸುಲಭವಾದದ್ದನ್ನು ಮಾಡಬಹುದಲ್ಲವೇ ಎಂದುಕೊಂಡು ಎದ್ದು ಅಡುಗೆ ಮನೆಗೆ ಹೋಗುವುದು; ಅಥವಾ ಇನ್ನೂ ಒಳ್ಳೆಯ ಅನುಭೂತಿಗೆ ಅಮ್ಮನಿಗೆ ಅದೇ ವಿಡಿಯೋವನ್ನು ಫಾರ್ವರ್ಡ್ ಮಾಡುವುದು. ʼಅಮ್ಮಾ ಮಾಡಿಕೊಡುʼ ಎಂದು ಪೇಚಾಡುವುದರೊಳಗೆ ತಿನ್ನುವ ಆಸೆಯೂ, ಹಸಿವು ಶಮನವಾಗುವುದು.
(ನಂತರ ಅದನ್ನು ಅಮ್ಮ ಮಾಡಿಕೊಡುವರು ಎಂಬುದು ತಿಳಿದ ಸಂಗತಿಯೇ. ತಿಳಿಯದೆ ಇದ್ದಿದ್ದರೆ ಈಗ ತಿಳಿದುಕೊಳ್ಳಿ)
ಈ ವಿಧಾನದಲ್ಲಿ ನೋಡುವ ಕಣ್ಣಿಗೂ ಹಸಿವನ್ನು ತೀರಿಸುವ ಶಕ್ತಿ ಇದೆಯೆಂದು ತಿಳಿಯಿತು.
ಈ ಪೀಠಿಕೆಯ ಮೂಲಕ ವಿಷಯವನ್ನು ಪ್ರಸ್ತಾಪಿಸುತ್ತೇನೆ.
ರುಚಿಗೆ ತಕ್ಕಷ್ಟು ಉಪ್ಪು, ಮಸಾಲೆ ಇತ್ಯಾದಿಯಾಗಿ ಕೇಳಿದ್ದೇವೆ. ಹಾಗೆಯೇ ಬಂಗಾರ ಬಣ್ಣಕ್ಕೆ ತಿರುಗುವವರೆಗೂ ಬಾಣಲೆಯಲ್ಲಿ ಇದನ್ನು ಹುರಿಯಿರಿ ಎಂದು ಕೆಲವು ಪದಾರ್ಥಗಳನ್ನೂ ಸೂಚಿಸುತ್ತಾರೆ. ಉಪ್ಪು ಮಸಾಲೆಗಳು ಸಾಮಾನ್ಯವಾಗಿ ಶಾಕಾಹಾರಿ ಮಾಂಸಾಹಾರಿ ಎನ್ನದೆ ಎಲ್ಲಕ್ಕೂ ಉಪಯೋಗಿಸುವಂತಹ ಅತ್ಯಗತ್ಯ ವಸ್ತು. ಅದನ್ನು ಬಿಟ್ಟರೆ ಮೆಣಸಿನಕಾಯಿ ಒಂದು ಹಂತದವರೆಗೂ. ಇನ್ನು ಎಲ್ಲದರಲ್ಲೂ ಸಾಮಾನ್ಯವಾಗಿ ಕಂಡುಬರುವುದು ಈರುಳ್ಳಿ ಎಂಬ ವಿಶೇಷ ತರಕಾರಿ.
ಈ ಈರುಳ್ಳಿ ಏನು ಸಾಮಾನ್ಯ ಎಂದುಕೊಂಡಿರೇ? ಹಾಗೆ ಕಡೆಗಣಿಸಲೇಬೇಡಿ. ಅದರ ಹಿಂದೆ ದೊಡ್ಡ ಚರಿತ್ರೆಯೇ ಇದೆ.
ಇದನ್ನು ಮೊದಲು ಬೆಳೆದಿದ್ದು ಯಾರು? ಎಲ್ಲಿ? ಎಂಬುದರ ಬಗ್ಗೆ ಹಲವಾರು ಚರ್ಚೆಗಳಿವೆ, ಇನ್ನೂ ನಡೆಯುತ್ತಲೇ ಇವೆ. ಆದರೆ ಕೆಲವು ಆಧಾರಗಳ ಮೂಲಕ ಇಂದಿನ ಪಾಕಿಸ್ತಾನದ ಪ್ರದೇಶಗಳು ಹಾಗು ಇರಾನಿನ ಕೆಲವು ಪ್ರದೇಶಗಳಲ್ಲಿ 5,000 ವರ್ಷಗಳ ಹಿಂದೆ ಇದನ್ನು ಬೆಳೆದಿದ್ದಿರಬಹುದೆಂದು ತಿಳಿಯುತ್ತದೆ. ಅಧಿಕೃತವಾಗಿ ತನ್ನ ಛಾಪನ್ನು ಇತಿಹಾಸದಲ್ಲಿ ಮೂಡಿಸುವಂತೆ, ಚೀನಾದಲ್ಲಿ ನಡೆದ ಕೆಲವು ಉತ್ಖನನಗಳಲ್ಲಿ ಈ ಈರುಳ್ಳಿಯ ಗುರುತುಗಳು ದೊರಕಿವೆಯಂತೆ. ಅಲ್ಲಿಗೆ ಈರುಳ್ಳಿ ಎಷ್ಟು ದಿನ ಇಟ್ಟರೂ ಏನೂ ಆಗೋದಿಲ್ಲ ಎಂಬ ಮಾತಿಗೆ ಸಾಕ್ಷ್ಯ ದೊರಕಿತು.
ಇನ್ನೂ ವಿಚಿತ್ರ ಎಂದರೆ, ಈಜಿಪ್ಟಿನ ಓರ್ವ ದೊರೆಯಾಗಿದ್ದ ರಾಮೆಸೆಸ್ 3 ಇವನ ಮಮ್ಮಿ (ಅಮ್ಮ ಅಂತ ಅಲ್ಲ, ಅವನ ಮೃತ ದೇಹವನ್ನ ಸಂರಕ್ಷಿಸಿಟ್ಟಿರುವ ಪರಿ)ಯ ಒಳಗೆ, ಇವನ ತಲೆಬುರುಡೆಯ ಕಣ್ಣುಗುಡ್ಡೆಗಳ ಜಾಗದಲ್ಲಿ ಈರುಳ್ಳಿಗಳ ಕುರುಹುಗಳು ದೊರಕಿತಂತೆ! ಈರುಳ್ಳಿಯನ್ನು ಕತ್ತರಿಸುತ್ತಾ ಕಣ್ಣೀರು ಸುರಿಸಿರುವವರನ್ನ ನೋಡಿದ್ದೀವಿ, ಇವನು ನೋಡಿ ಮೃತದೇಹದಲ್ಲಿ ಕಣ್ಣಿನ ಬದಲಾಗಿ ಈರುಳ್ಳಿಗಳನ್ನೇ ಇರಿಸಿಕೊಂಡುಬಿಟ್ಟಿದ್ದಾನೆ!
ಇದು ಈಜಿಪ್ಟಿನ ಕಥೆಯಾಯಿತು. ಇನ್ನು ಯೂರೋಪಿನಲ್ಲಿ ರೋಮನ್ನರ ಸಾಮ್ರಾಜ್ಯವು ನೆಲಕಚ್ಚಿದ ಮೇಲೆ, ತಿನ್ನಲು ಏನೂ ಗತಿ ಇಲ್ಲದೆ ಗೆಡ್ಡೆಕೋಸು, ಹುರುಳಿಕಾಯಿ, ಈರುಳ್ಳಿಗಳನ್ನೇ ತಿಂದುಕೊಂಡು ಬದುಕುತ್ತಿದ್ದರಂತೆ. ಅದರಲ್ಲೂ ಈರುಳ್ಳಿ ಸಾಹುಕಾರರ ತರಕಾರಿ. ಆ ಕಾಲದ ಯೂರೋಪಿನಲ್ಲಿ ಮನೆಯ ಬಾಡಿಗೆಯನ್ನೆಲ್ಲಾ ಈರುಳ್ಳಿಯ ರೂಪದಲ್ಲಿ ಕೊಡುತ್ತಿದ್ದರಂತೆ! ಅಲ್ಲಿಗೆ ಅದರ ಬೆಲೆ ಎಷ್ಟಿದ್ದೀತು ಯೋಚಿಸಿ! ನಂತರ ಚೇತರಿಸಿಕೊಂಡು ಎದ್ದ ಯೂರೋಪು ನವೋದಯ ಕಾಲ, ಅದೂ-ಇದೂ ಎಂದೆಲ್ಲಾ ಮತ್ತೆ ಎತ್ತರದ ಸ್ಥಾಯಿಯನ್ನು ಮುಟ್ಟಿತು. ಆಗ ತಮ್ಮ ಹಡಗುಗಳಲ್ಲಿ ಈ ಈರುಳ್ಳಿಗಳನ್ನೇ ಹೊತ್ತು ಹೋಗುತ್ತಿದ್ದರಲ್ಲದೆ, ಹೋದ ಕಡೆಯಲ್ಲೆಲ್ಲಾ ಇದರ ವಹಿವಾಟನ್ನೂ ಮಾಡುತ್ತಿದ್ದರಂತೆ.
ಅಮೆರಿಕದ ವಿಷಯಕ್ಕೆ ಬಂದರೆ, ಅಲ್ಲಿನ ಆದಿವಾಸಿಗಳು ಈ ಈರುಳ್ಳಿಯನ್ನು ಅಲಂಕಾರದ ವಸ್ತುವಾಗಿಯೂ, ಆಟದ ವಸ್ತುವಾಗಿಯೂ ಉಪಯೋಗಿಸುತ್ತಿದ್ದರಂತೆ!
ನಮ್ಮದೇ ಭಾರತದ ಕಥೆಗೆ ಬರೋಣವಾಗಲಿ.
ಶ್ಲೇಷ್ಮಲೋಮಾರುತಘ್ನಶ್ಚಪಲಾಣ್ಡುರ್ನಚಪಿತ್ತನುತ್ ।
ಆಹಾರಯೋಗೀಬಲ್ಯಶ್ಚಗುರುರ್ವೃಷ್ಯೋಽಥರೋಚನಃ॥೧೭೫॥
ಕ್ರಿಮಿಕುಷ್ಠಕಿಲಾಸಘ್ನೋವಾತಘ್ನೋಗುಲ್ಮನಾಶನಃ।
ಸ್ನಿಗ್ಧಶ್ಚೋಷ್ಣಶ್ಚವೃಷ್ಯಶ್ಚಲಶುನಃಕಟುಕೋಗುರುಃ॥೧೭೬॥
ಎಂದು ಚರಕ ಸಂಹಿತೆಯ ಅನ್ನಪಾನವಿಧಿ ಅಧ್ಯಾಯದಲ್ಲಿ ʼಹರಿತವರ್ಗʼದ ಕುರಿತು ಹೇಳುವಾಗ ಹೇಳಿದ್ದಾರೆ. ಸಂಸ್ಕೃತದಲ್ಲಿ ʼಪಲಾಂಡುʼ ಎಂದರೆ ಈರುಳ್ಳಿ; ಲಶುನ ಎಂದರೆ ಬೆಳ್ಳುಳ್ಳಿ. ಈ ಮೇಲಿನ ಶ್ಲೋಕಗಳ ಪ್ರಕಾರ, ಈರುಳ್ಳಿಯು ವಾತದ ಚಿಕಿತ್ಸೆಯಲ್ಲಿ ಸಹಾಯಕ. ಕಫ ದೋಷವನ್ನು ಅದು ಉತ್ತೇಜಿಸುತ್ತದೆ. ಇದಲ್ಲದೆ, ಈ ಪಲಾಂಡುವು ಹಸಿವನ್ನುಂಟು ಮಾಡುತ್ತದೆ; ಶಕ್ತಿಯನ್ನು ವರ್ಧಿಸುತ್ತದೆ, ಅಷ್ಟೇ ಅಲ್ಲದೆ ಇದು ಕಾಮವನ್ನು ಉತ್ತೇಜಿಸುತ್ತದೆ. ಇದು ಹೊಟ್ಟೆಗೆ ಭಾರ ಎನಿಸುವಂಥದ್ದು. ಇನ್ನೊಂದು ಶ್ಲೋಕದ ಪ್ರಕಾರ್ ಬೆಳ್ಳುಳ್ಳಿ ಅಥವಾ ಈ ಲಶುನ, ಚರ್ಮರೋಗಗಳ ಚಿಕಿತ್ಸೆಯಲ್ಲಿ ಸಹಾಯಕ. ಇದೂ ಸಹ ಹಸಿವನ್ನೂ, ಕಾಮವನ್ನೂ ಉಂಟುಮಾಡುವಂಥದ್ದು. ಇದು ಕಟು ಖಾರ ಎಂದು ಚರಕ ಸಂಹಿತೆಯು ಹೇಳುತ್ತದೆ.
ಈ ಈರುಳ್ಳಿ – ಬೆಳ್ಳುಳ್ಳಿ ಎರಡಕ್ಕೂ ಇಷ್ಟೂ ಔಷಧೀಯ ಗುಣಗಳಿವೆ. ಆದರೆ ಗುರುಕುಲಗಳಲ್ಲಿ, ಬ್ರಹ್ಮಚಾರಿಗಳಿಗೆ ಇವುಗಳನ್ನು ನೀಡುತ್ತಿರಲಿಲ್ಲವಂತೆ. ಕಾರಣ-ಇವೆರಡೂ ಕಾಮವನ್ನು ಹೆಚ್ಚಿಸುವಂತಹ ಪದಾರ್ಥಗಳು, ಹೊಟ್ಟೆಗೆ ಭಾರ ಆಗುವಂತಹವು.
ಹಾಗೆಯೇ ಈರುಳ್ಳಿಯು ಬಾಯಾರಿಕೆಯನ್ನೂ ನಿವಾರಿಸುತ್ತದೆಯಂತೆ!
ಇಷ್ಟೆಲ್ಲಾ ಔಷಧೀಯ ಗುಣಗಳಿದ್ದರೂ ರುಚಿಕರವಾಗಿರುವ ಕೆಲವು ವಿರಳ ತರಕಾರಿಗಳಲ್ಲಿ ಈ ಈರುಳ್ಳಿಯೂ ಒಂದು.
ಅಷ್ಟಕ್ಕೂ ಈರುಳ್ಳಿಯ ಬಗ್ಗೆ ಇಷ್ಟು ಬಡಬಡಾಯಿಸುತ್ತಿದ್ದೇನೇಕೆ?
ನನಗೆ ಈರುಳ್ಳಿ ಉಪ್ಪಿಟ್ಟು ಎಂದರೆ ಇಷ್ಟವಾಗದು; ಈರುಳ್ಳಿ ಸಾಂಬಾರು ಸಹ. ಈರುಳ್ಳಿ ಚಿತ್ರಾನ್ನವೂ ಹಾಗೆಯೇ; ಆದರೆ ಮಾಡಿ ಹಾಕಿದರೆ ಬೇಡ ಎನ್ನುವುದಿಲ್ಲ.
ಮಸಾಲೆ ಪುರಿ, ಚುರುಮುರಿ ಇತ್ಯಾದಿಗಳ ಜೀವವೇ ಈ ಈರುಳ್ಳಿ. ಸಮಸ್ಯೆಯೇ ಅಲ್ಲಿದೆ. ರಹಸ್ಯವಾಗಿ ಈ ಹಾಳೂಮೂಳುಗಳನ್ನ ತಿಂದು ಮನೆಗೆ ಹೋದರೆ ಥಟ್ಟನೆ ಗೊತ್ತಾಗಿಬಿಡುತ್ತದೆ. ಚರಕ ಸಂಹಿತೆಯೇ ಹೇಳಿಲ್ಲವೇ? ʼಲಶನಃ ಕಟುಕೋಗುರುಃʼ ಕಟು ಖಾರವೂ, ತಿಂದವನ ನಾಲಗೆಯಲ್ಲಿ ತಾಂಡವವಾಡಿಬಿಡುವ ಈ ಉಳ್ಳಿ ಸಹೋದರರು: ಈರುಳ್ಳಿ-ಬೆಳ್ಳುಳ್ಳಿಯು ಮೈಗೆಲ್ಲಾ ವ್ಯಾಪಿಸಿಬಿಡುತ್ತದೆ. ಉಸಿರು ಉಸಿರಲ್ಲೂ ಅವುಗಳದ್ದೇ ವಾಸನೆ. ಕೇವಲ ಉಸಿರಿನಲ್ಲಾಗಿದ್ದರೆ ಹೇಗೋ ಅದೂ ಇದೂ ಲವಂಗ ಇತ್ಯಾದಿಗಳನ್ನು ತಿಂದು ಸಾಗಿಹಾಕಿಬಿಡಬಹುದಿತ್ತು. ದೇಹದ ಬೆವರು, ಬೇರೆ ಬೇರೆ ರಂಧ್ರಗಳಲ್ಲಿ ಉಂಟಾಗುವ ಅಷ್ಟಕ್ಕೂ ವ್ಯಾಪಿಸಿಬಿಡುವಂತಹ ಪ್ರಾಬಲ್ಯ ಇವುಗಳದ್ದು.
ಬೌದ್ಧ ಭಿಕ್ಷುಗಳು ಈ ಈರುಳ್ಳಿಯನ್ನೂ ನಿಷೇಧಿಸಿಬಿಟ್ಟಿದ್ದರಂತೆ. ಒಂದು ಕಾರಣ ಅದು ಕಾಮೋತ್ತೇಜಕ ಅನ್ನುವುದು; ಅದಕ್ಕಿಂತಲೂ ಈ ಭಿಕ್ಷುಗಳು ಧ್ಯಾನಕ್ಕೆಂದು ಎಲ್ಲರೂ ವೃತ್ತಾಕಾರದಲ್ಲಿ ಕುಳಿತುಕೊಳ್ಳುತ್ತಿದ್ದರಂತೆ. ಕುಳಿತು ಒಟ್ಟಿಗೆ ಧಮ್ಮಪದವನ್ನೋ, ಶೂನ್ಯಧ್ಯಾನವನ್ನೋ ʼಬುದ್ಧಂ ಶರಣಂ ಗಚ್ಛಾಮಿʼ ಎಂದು ಹೇಳುವಾಗಲೆಲ್ಲ ಈ ಈರುಳ್ಳಿಯ ನಾತವು ಬಾಯಿಂದ ಹೊರಟು ವೃತ್ತದಲ್ಲೆಲ್ಲಾ ವ್ಯಾಪಿಸಿ, ಅಬ್ಬಾ! ಸಹ್ಯವಲ್ಲವೇ ಅಲ್ಲ!
ನನ್ನದೂ ಇದೇ ಸಮಸ್ಯೆ. ಮನೆಯಲ್ಲಿ ಅಮ್ಮನನ್ನು ʼಅಮ್ಮಾ ನಿನ್ ದಮ್ಮಯ್ಯ ಅಂತೀನಿ ಈರುಳ್ಳಿ ಮಾತ್ರ ಮಾಡ್ಬೇಡʼ ಎಂದು ಕೇಳಿಕೊಂಡಾಗ, ʼಮಗನೇ ಆ ಶೆಟ್ಟಿ ಚುರುಮುರಿಯಲ್ಲಿ ಲೊಚ್ಚುಗೊಟ್ಟುಕೊಂಡು ತಿಂತೀಯಾ ಈರುಳ್ಳೀನಾ ಪ್ಲೇಟು ಪ್ಲೇಟುʼ ಎಂದು ಮಾನವನ್ನೇ ತೆಗೆದುಬಿಡುತ್ತಾರೆ. ನಾನು ಏನೂ ಹೇಳಲಾರದೆ ಸುಮ್ಮನಾಗಿಬಿಡುತ್ತೇನೆ.
ನಿಮ್ಮ ಮಿತ್ರರನ್ನು ನಿಮ್ಮಿಂದ ದೂರ ಮಾಡಿಕೊಳ್ಳಬೇಕೆ? ಯಥೇಚ್ಛವಾಗಿ ಈ ಉಳ್ಳಿ ಸಹೋದರರನ್ನು ಸೇವಿಸಿ ಅವರಿಗೆ ಹತ್ತಿರವಾಗಿ ಗುಟ್ಟುಗಳನ್ನು ಹೇಳಿ. ಅವನಿನ್ನು ನಿಮ್ಮ ಹತ್ತಿರ ಬರುವುದಿಲ್ಲ. ತಿನ್ನುವಾಗಲೇನೋ ರುಚಿ ರುಚಿಯಾಗಿರುವ ಈ ಈರುಳ್ಳಿಯು ನಂತರ ಭಾರವಾಗುತ್ತದೆ, ಬಾಯಿ ವಾಸನೆ ಹೊಡೆಯುತ್ತದೆ.
ನಮ್ಮ ಮನೆಯಲ್ಲಿ ಮಡಿ ಮಡಿಯಾದ ಅಜ್ಜಿ ಹಾಗು ಇನ್ನು ಕೆಲವರು ಹಿರಿಯರಿದ್ದಾಗ ಈ ಈರುಳ್ಳಿಯು ಪ್ರತಿಬಂಧಿತ ಪದಾರ್ಥವಾಗಿತ್ತು; ಇಲ್ಲವೇ ಮಾಡಿದರೂ ಎಂದೋ ವಾರಾಂತ್ಯಗಳಲ್ಲಿ ಮಾಡಿ ತಿನ್ನುತ್ತಿದ್ದರು.
ಈಗ ನಮ್ಮಮ್ಮನಿಗೆ ಯಾರೂ ಹೇಳುವವರಿಲ್ಲ ನೋಡಿ. ನಾನು ಈರುಳ್ಳಿ ಬೇಡ ಅಂದರೆ, ಮಾತು ಅಪ್ಪನ ಬಳಿ ಹೋಗಿ ನಾನು ಮೆಣಸಿನಕಾಯಿ ತಿನ್ನಬೇಕಾದೀತು!
ಅದಕ್ಕೇ ʼಅಮ್ಮ; ಈರುಳ್ಳಿ ತರಬೇಡಿʼ ಎಂದು ದೊಡ್ಡವನಂತೆ-ವ್ರತವನ್ನು ಮಾಡುತ್ತಿರುವವನಂತೆ ಹೇಳಿದರೆ, “ಮಾಡಿದ್ದನ್ನ ಮುಚ್ಚಿಕೊಂಡು ತಿನ್ನುವುದು ಒಳ್ಳೆಯದು” ಎಂದು ನನ್ನ ಮಾತಿಗೆ ಬೆಲೆಯೇ ಇಲ್ಲದಂತೆ ನುಡಿಯುವುದಲ್ಲದೆ, ಮಾರುಕಟ್ಟೆಗೆ ಹೋಗಲು ಹೊರಗೆ ಹೋಗುತ್ತಾ, “ಇವನೊಬ್ಬ; ಮಾವ ನನಗೆ” ಎಂದು ಗೊಣಗುತ್ತಾರೆ.
ಹೋಗಲಿ ಬಿಡಿ, ಈಗ ದೋಸೆ ಆಲೂಗಡ್ಡೆ ಈರುಳ್ಳಿ ಪಲ್ಯ ಮಾಡಿದ್ದಾರೆ. ನಾನು ತಿನ್ನಲು ಹೋಗ್ತಾ ಇದೀನಿ. ನಿಮ್ಮನ್ನೂ ಅಡುಗೆಮನೆ ಕರೆಯುತ್ತಿದೆ ನಡೀರಿ ನಡೀರಿ!
– ತೇಜಸ್ ಎಚ್ ಬಾಡಾಲ.
ತೇಜಸ್, ಒಂದು ಅತಿ ಸಾಮಾನ್ಯ ವಿಷಯವನ್ನು ಇಟ್ಟುಕೊಂಡು ದೊಡ್ಡ, ಮಾಹಿತಿಪೂರ್ಣ ಲೇಖನವನ್ನೇ ಬರೆದಿದ್ದೀರಿ. ತುಂಬಾ ಚೆನ್ನಾಗಿದೆ ಅಷ್ಟೇ ಅಲ್ಲ ತಿಳಿ ಹಾಸ್ಯ ಲೇಪಿತ.
ಮುಂದೆಯೂ ನಿಮ್ಮಿಂದ ಇಂತಹ ಉತ್ತಮ ಬರಹಗಳ ನಿರೀಕ್ಷೆ ಇದೆ ತೇಜಸ್, ದಯವಿಟ್ಟು ಬರಹವನ್ನು ಮುಂದುವರಿಸಿ.
ಖಂಡಿತ ಮೇಡಂ, ಇನ್ನಷ್ಟು ಓದಿ ಓದಿ ಬರೆಯುತ್ತೇನೆ, ಪ್ರಣಾಮಗಳು!
ವಾಹ್..ಬಾಯಲ್ಲಿ ನೀರೂರಿತು…ತೇಜಸ್… ನಿನಗೆ ಈರುಳ್ಳಿ..ಅಷ್ಟು.. ಪ್ರಿಯವಲ್ಲವೆಂದು ನಿರ್ವಾಹವಿಲ್ಲದೆ..ತಿನ್ನುತ್ತೀ..ಎಂದೂ.. ನಿನ್ನ ಹೆತ್ತಮ್ಮ ಹೇಳಿ ದಂತೆ ನಿನಗೆ ಬೇಕಾದಾಗ ಸಹ್ಯ ಎನಿಸಿಕೊಂಡು…ತಿನ್ನುತ್ತೀ ಎಂದು…ಅದೇನಾದರಿರಲಿ..ಅದರ ಬಗ್ಗೆ ಮಾಹಿತಿ.. ಸಂಗ್ರಹಿಸಿ…ಲೇಖನ ಬರದಿದ್ದೀಯಲ್ಲಾ ಅದು ನಮಗೆ ಸಹ್ಯವಾಯಿತು..ಹಾಸ್ಯ ದ ತಿಳಿ ಲೇಪನ..ಸ್ತುತ್ಯಾರ್ಹವಾಗಿದೆ…ಅಭಿನಂದನೆಗಳು..
ಬರಹಕ್ಕಾಗಿ ಇಡು ಒಂದು ಗಳಿಗೆ…
ಧನ್ಯವಾದಗಳು ನಾಗರತ್ನ ಮೇಡಮ್, ನೀವೇ ನನಗೆ ಸ್ಫೂರ್ತಿ!
ತುಂಬಾ ಮಾಹಿತಿಯುಕ್ತ ಬರಹ.. ಉತ್ತಮ ನಿರೂಪಣೆ
ಧನ್ಯವಾದಗಳು ಮೇಡಮ್!
ನೀರುಳ್ಳಿ ಬೆಳ್ಳುಳ್ಳಿ ಅವಳಿ ಸೋದರರ ಇತಿಹಾಸ ಚೆನ್ನಾಗಿ ಮೂಡಿ ಬಂದಿದೆ. ಸೊಗಸಾದ ತಿಳಿಹಾಸ್ಯ ಮಿಶ್ರಿತ ನಿರೂಪಣೆಯು ನಗು ಮೂಡಿಸಿತು.
ಧನ್ಯವಾದಗಳು ಮೇಡಮ್