ಮಹರ್ಷಿ ಮೈತ್ರೇಯ

Share Button

ಲೋಕದಲ್ಲಿ ಒಳ್ಳೆಯವರೂ ಇದ್ದಾರೆ ಕೆಟ್ಟವರೂ ಆಗಿ ಹೋಗ್ತಾರೆ. ಕೆಟ್ಟವರು ಒಳ್ಳೆಯವರಾಗಲೂಬಹುದು. ಅಂದರೆ, ಕೆಟ್ಟವರಲ್ಲಿ ಮೂರು ತೆರನಾಗಿ ವಿಂಗಡಿಸಬಹುದು. ತಿಳಿಯದೆ ತಪ್ಪು ಮಾಡುವವರು, ತಿಳಿದು ಮಾಡುವವರು, ಇನ್ನು ಬೇರೆಯವರ ಸಹವಾಸ ದೋಷದಿಂದ ದುಷ್ಪರಾಗಿ ಬಿಡುವುದು. ತಿಳಿಯದೆ ತಪ್ಪು ಮಾಡಿದವರು ಮತ್ತೆ ತಮ್ಮನ್ನು ತಿದ್ದಿಕೊ೦ಡು ಪರಿವರ್ತನೆಯಾಗಬಹುದು. ಆದರೆ ತಿಳಿದೂ-ತಿಳಿದೂ ದುಷ್ಕೃತ್ಯ ಮಾಡುತ್ತಾ ಗುರು-ಹಿರಿಯರ ಹಿತೋಪದೇಶದಿಂದಲೂ ತಿದ್ದಿಕೊಳ್ಳದವರು ಅಧರ್ಮರೇ ಸರಿ.

ದುರ್ಗುಣಗಳನ್ನು ತಿದ್ದಿ ಸದ್ಗುಣಿಗಳಾಗುವುದಕ್ಕೆ ಬೇಕಾಗಿಯೇ ನಮ್ಮ ವೇದೋಪನಿಷತ್ತುಗಳೂ, ರಾಮಾಯಣ, ಮಹಾಭಾರತ ಮೊದಲಾದ ಕತೆಗಳೂ ನಮ್ಮನ್ನು ಪುನರಪಿ ಎಚ್ಚರಿಸುತ್ತಲೇ ಇವೆ. ಕೌರವ ಪಾಂಡವರೆಂಬ ದಾಯಾದಿಗಳು ವೈರ ಕಟ್ಟಿಕೊ೦ಡು ಎಷ್ಟೋ ಸಾವಿರ ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ನಡೆದ ಕದನವಾದರೂ ಅದು ಅಂದಿಗೂ, ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿಯೇ ಇರುವಂತಹುದು. ಧರ್ಮವನ್ನು ಉಳಿಸುವುದಕ್ಕಾಗಿ ಅಧರ್ಮವನ್ನು ಅಳಿಸಿ ಸತ್ಯ,ನ್ಯಾಯಕ್ಕೆ ಜಯ ತಂದುಕೊಡುವ ಮಹಾಭಾರತವನ್ನು ‘ಜಯ’ವೆಂದೂ ಐದನೆಯ ವೇದವೆಂದೂ ಕರೆದರು. ನಮ್ಮ ಪುರಾಣಗಳಾದ ರಾಮಾಯಣ ಮಹಾಭಾರತಗಳಲ್ಲಿ ರಾಮಾಯಣವು ಹಿಮಾಲಯವಾದರೆ ಮಹಾಭಾರತವು ಸಮುದ್ರದಂತೆ ಆಳ, ವಿಸ್ತಾರ ಎನ್ನುತ್ತಾರೆ ಪ್ರಾಜ್ಞರು. ಇವೆರಡೂ ಜೀವನ ಪಾವನವಾದವು. ರಾಮಾಯಣವು ಹೆಚ್ಚು ಮೌಲ್ಯಯುತವಾದ ಆದರ್ಶಗಳಿಂದ ತುಂಬಿದ್ದರೆ ಮಹಾಭಾರತವು ಜೀವನ ಸಂಕೀರ್ಣತೆಯಿಂದ ಕೂಡಿ ವಾಸ್ತವಿಕತೆಯಿಂದ ದಟ್ಟವಾಗಿದೆ.

ಪಾಂಡವರನ್ನು ಕಪಟ ದ್ಯೂತದಲ್ಲಿ ಸೋಲಿಸಿ ಕಾಡಿಗೆ ಕಳುಹಿಸಿದ ಕೌರವರು ಪಾಂಡವರ ನಿರ್ಮೂಲನಕ್ಕಾಗಿ ಹೊಂಚು ಹಾಕುತ್ತಲೇ ಇದ್ದರು. ವನವಾಸದಲ್ಲಿದ್ದ  ಪಾಂಡವರಿಗೆ ಹಲವಾರು ಋಷಿಮುನಿಗಳು ಸಾಂತ್ವನ ಹೇಳುತ್ತಾರೆ. ಅಲ್ಲದೆ ಹಸ್ತಿನಾವತಿಗೆ ತೆರಳಿ ದುರ್ಯೋಧನನಿಗೂ ಬುದ್ಧಿ ಮಾತು ಹೇಳುತಾರೆ. ಹೀಗೆ ದುರ್ಯೋಧನನನ್ನು ತಿದ್ದಿ ಪಾಂಡವರಿಗೆ ನ್ಯಾಯ ಒದಗಿಸಿ ಕೊಡಬೇಕಿಂದೆಣಿಸಿ ಕೌರವನಲ್ಲಿಗೆ ತೆರಳಿ ಹಿತವಚನ ಹೇಳುವವರಲ್ಲಿ ಮೈತ್ರೇಯರೂ ಒಬ್ಬರು.

ಮೈತ್ರೇಯನು ಬ್ರಹ್ಮರ್ಷಿ. ಈತನ ತಂದೆ ಕುಶಾರವ. ತಾಯಿಯ ಹೆಸರು ಮಿತ್ರೆ. ಪಾಂಡವರಿಗೆ ವನವಾಸವಾದ ವಿಚಾರ ತಿಳಿದ ಮೈತ್ರೇಯ ಮಹರ್ಷಿ ಬಹಳವಾಗಿ ನೊಂದುಕೊಳ್ಳುತ್ತಾನೆ. ದುರ್ಯೋಧನನಿಗೆ ಬುದ್ಧಿ ಬೇಳಿ ಸರಿಪಡಿಸಬಹುದೇನೋ ಎಂದೆಣಿಸಿದ ಖುಷಿ ನೇರ ಹಸ್ತಿನಾವತಿಗೆ ಬರುತ್ತಾನೆ. ಆಲ್ಲಿ ದುರ್ಯೋಧನನಿಗೆ “ಪಾಂಡವರನ್ನು ಕಾಡಿನಿಂದ ಕರೆಸಿಕೊಂಡು ಅವರಿಗೂ ಅರ್ಧ ರಾಜ್ಯವನ್ನು ಕೊಟ್ಟ ಹೊಂದಿಕೊಂಡು ಬಾಳಿರಿ’ ಎಂದು ಉಪದೇಶ ಮಾಡುತ್ತಾನೆ. ಆದರೆ ದುರ್ಯೋಧನನು ಮೈತ್ರೇಯನ ಮಾತುಗಳನ್ನು  ಆಳಿಸಿ ಹಾಕಿ ಅವಮಾನಿಸುತ್ತಾನೆ. “ಮಹರ್ಷಿಗಳೇ, ಹೊಂದಿಕೊಂಡು ಬಾಳುವುದೂ ಆಗದ ಮಾತು” ಎಂದು ಋಷಿ ಶ್ರೇಷ್ಠರ ಮುಂದೆ ತನ್ನ ತೊಡೆಯನ್ನು ತಟ್ಟಿಕೊಂಡು ಬರುತ್ತಾನೆ. ಕೌರವನ ಉದ್ಧಟತನಕ್ಕೆ ಕೋಪಗೊಂಡ ಮೈತ್ರೇಯರು “ಗರ್ವದಿಂದ ತೊಡೆತಟ್ಟಿಕೊಂಡು ನಿನ್ನ ಜಂಬ ಪ್ರದರ್ಶಿಸಿದೆ. ನನ್ನ ಮಾತನ್ನು ಒಂದಿನಿತೂ ಕೇಳುವ ಸೌಜನ್ಯ ನಿನಗಿಲ್ಲ. ಆತೀ ಶೀಘ್ರದಲ್ಲಿ ತೊಡೆ ಮುರಿದು ಸಾಯುವಂತಾಗು” ಎಂದು ಶಾಪವಿತ್ತ  ಮೈತ್ರೇಯನು ಮತ್ತು ಹೇಳುತ್ತಾನೆ ‘ಒಂದು ವೇಳೆ ಈ ನಿನ್ನ ದುಷ್ಟಗುಣ ದೂರವಾಗಿ ಮನಸ್ಸು ಪರಿವರ್ತನೆಯಾದಲ್ಲಿ ನನ್ನ  ಶಾಪವು ತಟ್ಟದಿರಲಿ‘ ಎನ್ನುತ್ತಾನೆ. ಇಲ್ಲಿ ನಾವು ಗಮನಿಸಬೇಕಾದ ಅಂತವೆಂದರೆ ಲೋಕಾನುಗ್ರಹಕ್ಕಾಗಿ ಜ್ಞಾನಿಗಳು ಕೋಪಿಸಿಕೊಂಡರೂ ಒಳ್ಳೆಯ ಚಿಂತನೆಯನ್ನೇ ಮಾಡುತ್ತಾರೆ. ಅದೆ ”ವಿನಾಶಕಾಲೇ ವಿಪರೀತ ಬುದ್ಧಿ” ಎನ್ನುವಂತೆ ವಿನಾಶ ಕಾಲ ಸನ್ನಿಹಿತವಾದ ಕೌರವ ಮೈತ್ರೇಯ ಋಷಿಯ ಮಾತಿಗೆ ಮನ್ನಣೆ ನೀಡುತ್ತಾನೆಯೇ? ಮೈತ್ರೇಯರ ಶಾಪವೂ ಭೀಮನ  ಪ್ರತಿಜ್ಞೆಯೂ ಸೇರಿದುದರಿಂದ, ಮುಂದೆ ದುರ್ಯೋಧನನು ಭೀಮನಿಂದ ತೊಡೆ ಮುರಿಸಿಕೊ೦ಡು ಮರಣಿಸುತ್ತಾನೆ ಕುರುಕ್ಷೇತ್ರದಲ್ಲಿ.

ವಿದುರನು ಕೂಡಾ ಪಾಂಡವರಿಗಾದ ಆನ್ಫಾಯಕ್ಕೆ ನೊಂದು ಬೆಂದು ನ್ಯಾಯ ಒದಗಿಸುವುದಕ್ಕಾಗಿ ಕೌರವನಿಗೆ ಬಗೆ ಬಗೆಯಲ್ಲಿ ಹಿತೋಕ್ತಿ ಹೇಳುತ್ತಾನೆ. ಯಾರ ಮಾತನ್ನೂ ಕೌರವನು ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಬದಲಾಗಿ ದುರ್ವಚನಗಳನ್ನೂ ನೋವನ್ನುಂಟು ಮಾಡುವ ಮಾತನ್ನು ಹೇಳುತ್ತಾನೆ ಕೌರವ. ವಿದುರನು ಹಸ್ತಿನಾವತಿಯನ್ನು ಬಿಟ್ಟು ಸಂಚರಿಸುತ್ತಾ ಬಂದು ಹರಿದ್ದಾರ ಕ್ಷೇತ್ರದಲ್ಲಿರುವ ಆಗಾಧ ಜ್ಞಾನಿಗಳಾದ ಮೈತ್ರೇಯ ಮಹರ್ಷಿಗಳ ಬಳಿಗೆ  ಬರುತ್ತಾನೆ,.ಮೈತ್ರೇಯರು ವಿದುರ ಸೃಷ್ಟಿ-ಸ್ಥಿತಿ-ಲಯದ ಬಗ್ಗೆ ಜ್ಞಾನೋಪದೇಶ ಮಾಡುತ್ತಾರೆ. ವಿದುರನ ಪ್ರಶ್ನೆಗಳಿಗೆ ಮೈತ್ರೇಯರಿಂದ ಸಮರ್ಪಕವಾದ ಉತ್ತರಗಳು ಶ್ರೀಮದ್ಭಾಗವತದಲ್ಲಿದೆ.

ಮೈತ್ರೇಯರು ಭಗವಂತ (ಶ್ರೀಕೃಷ್ಣನ) ಆನುರಾಗಿ ಭಕ್ತರಾಗಿದ್ದರು. ವೇದವ್ಯಾಸ ಪ್ರಿಯ ಮಿತ್ರರೂ ಪರಮಭಾಗವತರೂ ಸಿದ್ಧರೂ ಆಗಿದ್ದ ಪುರಾಣ ಪುರುಷರಾದ   ಮೈತ್ರೇಯರು ಪ್ರಾತ:ಸ್ಮರಣೀಯರು.

– ವಿಜಯಾಸುಬ್ರಹ್ಮಣ್ಯ, ಕುಂಬಳೆ

5 Responses

  1. ಕಥೆಗಳನ್ನು ಹೇಳುವುದು ಒಂದು ಕಲೆ…ಅದನ್ನು ಬರೆಯುವ ಕ್ರಮವೂ ಒಂದು ಕಲೆ …ಅದು ನಿಮಗೆ ಸಿದ್ದಿಸಿದೆ ಮೇಡಂ.. ಪುರಾಣ ಕಥೆಗಳನ್ನು ಬರೆಯುವುದರ ಮೂಲಕ ಅದನ್ನು ನಮಗೆ ನೆನಪಾಗುವಂತೆ ಮಾಡುವ ನಿಮಗೆ ನನ್ನ ದೊಂದು ನಮನ..

  2. Vijayasubrahmanya says:

    ನನ್ನ ಪುರಾಣ ಕತೆ ಹಾಗೂ ನನ್ನ ಬರವಣಿಗೆ ಬಗ್ಗೆ ಮೆಚ್ಚಿಕೊಂಡ ಆತ್ಮೀಯ ಬಿ.ಆರ್.ನಾಗರತ್ನ ಅಕ್ಕನಿಗೆ ನಮೋ ನಮಃ.

    ಬೇರೆ ಪಂಕ್ಷನಿಗೆ ಹೋದಕಾರಣನೋಡಲಾಗಿಲ್ಲ. ಈಗ ಗಮನಿಸಿದೆಯಷ್ಟೆ. ಕ್ಷಮೆಯಿರಲಿ.

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. ಶಂಕರಿ ಶರ್ಮ says:

    ಉತ್ತಮ ಸಂದೇಶ ಹೊತ್ತ ಮೈತ್ರೇಯ ಮಹರ್ಷಿಗಳ ಕುರಿತ ಕಥೆ ಚೆನ್ನಾಗಿದೆ.

  5. Padma Anand says:

    ಪುರಾಣ ಕಥೆಗಳ ಬಗ್ಗೆ ಆಗಾಗ್ಗೆ ನೆನಪು ಮಾಡಿಕೊಳ್ಳುವುದು ಜೀವನ ಪಯಣದ ದಾರಿಯಲ್ಲಿ ಸಿಗುವ ದೀಪಗಳಂತೆ.. ಆ ನಿಟ್ಟಿನಲ್ಲಿ ನಿಮ್ಮ ಕಥೆಗಳು ನಮಗೆ ದಾರಿದೀಪಗಳಾಗಿವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: