ಮರೆಯಾಗುತ್ತಿರುವ ‘ಹಸ್ತರೆಕ್ಕೆ’
ನಮ್ಮ ಪರಿಸರದಲ್ಲಿ ಮಾನವನ ಹೊರತಾಗಿ ಒಂದಿಲ್ಲೊಂದು ಜೀವಿಗಳು ಮೂಢನಂಬಿಕೆಗೆ ಸಿಕ್ಕಿ ಬಲಿಯಾಗುವುದನ್ನು ನೋಡುತ್ತಾ ಬಂದಿದ್ದೇವೆ. ಮಾನವರೂ ಕೂಡಾ ಕೆಲವು ವಿಷಯಗಳಿಗೆ ಸಿಲುಕುವುದುಂಟು. ಆದರೆ ಮಾರಣ ಹೋಮ ಅಂತ ನಡೆದಿಲ್ಲ. ಮಾನವನ ಹೊರತಾಗಿ ಪರಿಸರದ ಸಂಘರ್ಷಣೆಯಲ್ಲಿ ಸಿಲುಕಿದ ಕೆಲವು ಜೀವಿಗಳು ಮೂಢನಂಬಿಕೆಗೆ ಬಲಿಯಾಗಿವೆ.ಒಂದಷ್ಟು ಜನ ಇಂತಹ ಮೂಢನಂಬಿಕೆಗೆಗಳ ವಿರುದ್ಧ ತಿರುಗಿಬಿದ್ದು ಆ ಜೀವಿಗಳಿಗೆ ಮುಕ್ತಿ ಕೊಡಿಸಿದರೂ ಸಹಾ, ವೈಜ್ಞಾನಿಕ ಯುಗದಲ್ಲಿ ವಿಜ್ಞಾನವನ್ನೂ ಅಲ್ಲಗಳೆದು ಇಂದೂ ಮೂಢನಂಬಿಕೆಗೆ ಅಂಟಿಕೊಂಡ ಜನರನ್ನು ನಾವು ಕಾಣುತ್ತೇವೆ.
ನಮಗೆ ಭಗವಂತ ರೆಕ್ಕೆ ಕೊಟ್ಟಿದ್ದರೆ ಅದೇನಾಗುತ್ತಿತ್ತೋ! ಬಹುಶಃ ವಾಯುಮಾರ್ಗದ ವಾಹನಗಳ ಹಾರಾಟ ಸ್ಥಗಿತವಾಗುತ್ತಿತ್ತು. ಅಂತಹ ಕೆಲಸವಂತೂ ಆಗಲಿಲ್ಲ. ಆದರೆ ನಮ್ಮಂಥ ಸಸ್ತನಿಯಾಗಿರುವ ಬಾವಲಿಗಳ ಬಗ್ಗೆ ಒಂದಷ್ಟು ವಿಚಾರಗಳ ಸಂಗ್ರಹವನ್ನು ಮೆಲುಕುಹಾಕೋಣ. ಎಷ್ಟೋ ಜೀವಗಳು ಕಣ್ಮರೆಯಾಗುತ್ತಿವೆ. ಮನೆಯಂಗಳದಲ್ಲಿ ಬಂದು ಹರಡಿದ ಧಾನ್ಯಗಳ ಕುಟುಕುವ, ಎಸೆದ ಅವರೆಹುಳುಗಳ ತಿನ್ನುವ, ಎಲ್ಲರ ಮನೆಯ ಮುಂದಿನ ಮರಗಿಡಗಳಲಿ ಚಿಲಿಪಿಲಿ ಎಂದು ಮುದಗೊಳಿಸುವ, ಕಬ್ಬಿಗರ ಪದಗಳಲಿ ಕಾವ್ಯಕ್ಕೆ ಸಿಲುಕುವ ಪುಟ್ಟ ಜೀವಿ ಗುಬ್ಬಿಯಂತೂ ಹೇಳಹೆಸರಿಲ್ಲದಂತೆ ಮಾಯವಾಯಿತು. ಇನ್ನೈದು ವರ್ಷ ಕಳೆದರೆ ಗೋಡೆಯ ಚಿತ್ರದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸುತ್ತದೆ.
ಸಂಬಂಧಗಳೆಂದರೆ ಹೇಗಿರಬೇಕು ಎಂದು ಇವುಗಳನ್ನು ನೋಡಿ ಕಲಿಯಬೇಕು. ಸ್ವಲ್ಪ ಆಹಾರಕ್ಕೂ ತನ್ನ ಬಳಗವನ್ನು ಕರೆದು ಹಂಚಿ ತಿನ್ನುವುದನ್ನು ಕಲಿಸಿದ ಕಾಗೆಗಳು ಮರೆಯಾಗುತ್ತಿವೆ. ಹಿರಿಯರ ಶ್ರಾದ್ಧಗಳಲ್ಲಿ ವಾಯಸವನ್ನು ನೆನೆಯುವ ನಾವು, ನಮ್ಮ ಪರಿಸರದ ಸ್ವಚ್ಛತೆಯನ್ನು ಕಾಪಾಡುತ್ತಿದ್ದ ಈ ಜೀವಿಗಳ ಉಳಿವಿಗೆ ತಲೆಯೇ ಕೆಡಿಸಿಕೊಳ್ಳಲಿಲ್ಲ. ಅದು ನಮ್ಮನ್ನು ಮುಟ್ಟಿದರೆ ಅಪಶಕುನ ಎಂದು ಬೈದುಕೊಳ್ಳುತ್ತಾ ತಕ್ಷಣ ಸ್ನಾನ ಮಾಡಿ ಮಡಿಯಾಗುವ ಮನಸ್ಸಿಗೆ ಅದು ಕೊಡುವ ಮುನ್ಸೂಚನೆ ಅಥವಾ ಬೇರಾವುದೋ ಕಾರಣಕ್ಕೆ ನಮ್ಮನ್ನು ತಾಕಿ ಹೋಗಿರುತ್ತದೆ. ಮನೆಯೊಳಗೇನಾದರೂ ನುಗ್ಗಿತೋ ಮುಗಿಯಿತು ಆ ಮನೆಯ ಕಥೆ. ಇಲ್ಲಸಲ್ಲದ ಊಹಾಪೋಹಗಳಿಗೆ ಮನಸ್ಸು ಕಾರಣವಾಗಿ ಮನೆಯೇ ಬಿಡುವ ಸಾಧ್ಯತೆ ಇರುತ್ತದೆ. ನನಗೊಂದು ಅರ್ಥವಾಗದ ವಿಷಯ. ಬೇಕಾದಾಗ ಬಳಿಕರೆದು, ಬೇಡವಾದಾಗ ಬಡಿದೋಡಿಸುವ ಸ್ವಭಾವದ ಬಗ್ಗೆ ಅರ್ಥವೇ ಆಗದು.
ಹೀಗೇ ಎಷ್ಟೋ ಜೀವಿಗಳು ನಮ್ಮ ಮೂಢನಂಬಿಕೆಗೆ ಬಲಿಯಾಗಿ ಅಳಿವಿನ ಸ್ಥಿತಿಯಲ್ಲಿ ನಿಂತಿವೆ. ಅವುಗಳ ಸಾಲಿಗೀಗ ಹಾರಾಡುವ ಏಕೈಕ ಸಸ್ತನಿ ಬಾವಲಿಯೂ ಸೇರುತ್ತಿವೆ. ನಿಶಾಚರ ಪ್ರಾಣಿಗಳಾದ ಬಾವಲಿ ಕೂಡಾ ಹಲವು ಮೂಢನಂಬಿಕೆಯೊಳಗೆ ಸಿಲುಕಿ ಬದುಕಿನ ಅವಸಾನ ಎಣಿಸುತ್ತಿರುವ ಜೀವವೆಂದರೆ ತಪ್ಪೇನಿಲ್ಲ. ‘ಕೈರಾಪ್ಟಿರಾ’ ಎಂಬ ಲ್ಯಾಟಿನ್ ಭಾಷೆಯ ಪದಕ್ಕೆ ನಮ್ಮಲ್ಲಿ ‘ಹಸ್ತರೆಕ್ಕೆ’ ಎಂದು ಕರೆಯುವರು. ಇವುಗಳ ಮುಂಬಾಗದ ಕಾಲುಗಳು ಹಾರುವ ರೆಕ್ಕೆಗಳಾಗಿವೆ. ಇವುಗಳಿಗೆ ವಾಸಿಸಲು ಇಂಥದ್ದೇ ಜಾಗವೆಂದಿಲ್ಲ. ಎಲ್ಲರಿಗೂ ಕಾಣುವಂತೆ, ಗಿಜಿಗಿಜಿ ಎನ್ನುವ ಜಾಗದಲ್ಲಿಯೂ ಅವು ನೆಮ್ಮದಿಯಾಗಿ ಜೀವಿಸಬಲ್ಲವು. ಬೂದು ಬಣ್ಣದ ಕಾಯಗಳಿಂದಾದ ಇವುಗಳು ರಾತ್ರಿಯ ಬಣ್ಣಕ್ಕೆ ಹೊಂದುತ್ತವೆ. ಅಪಾಯವೂ ಕಡಿಮೆ. ಆದರೆ ಮನುಷ್ಯರು ಅವುಗಳ ಮೇಲೆ ದಾಳಿಮಾಡಿ ಮಾರಣಹೋಮ ಮಾಡುವ ಅಪಾಯವೇ ಹೆಚ್ಚು.
ಮರಗಳಿಗೆ ಜೋತು ಬೀಳುವ ಇವುಗಳನ್ನು ನೋಡಿದರೆ ತಲೆಕೆಳಗಾಗಿ ನಿಂತು ತಪಸ್ಸು ಮಾಡುವ ಮುನಿಯಂತೆ ಕಾಣುತ್ತವೆ. ಯಾರಿಗೂ ತೊಂದರೆ ಕೊಡದ ಸಾತ್ವಿಕ ಸ್ವಭಾವದವು. ಪಾಳು ಬಿದ್ದ ಮನೆ, ದೇವಸ್ಥಾನ, ದೊಡ್ಡ ದೊಡ್ಡ ಮರಗಳು, ಗೋಪುರಗಳು, ಕೋಟೆಗಳು ಹೀಗೆ ತನ್ನ ವಾಸಕ್ಕೆ ಯೋಗ್ಯವಾದ ನೆಲೆಯನ್ನು ಹುಡುಕಿ ಬದುಕುತ್ತವೆ. ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಚೆನ್ನಾಗಿ ಅರ್ಥೈಸಿಕೊಳ್ಳುವ ‘ಜೈವಿಕ ಗಡಿಯಾರ ‘ ಅಂದರೆ ತಪ್ಪಿಲ್ಲ. ನಿಶಾಚರ ಪ್ರಾಣಿಗಳಾದ ಬಾವಲಿಗಳು ಕತ್ತಲನ್ನು ಸೀಳಿಕೊಂಡು ಹೊರಟವೆಂದರೆ, ಶಬ್ಧತರಂಗಗಳನ್ನು ಅನುಸರಿಸಿ ಒಂದಿಷ್ಟು ಕೀಟಗಳು, ಕಪ್ಪೆ,ಮೀನು, ಸರೀಸೃಪಗಳು, ಪುಟ್ಟ ಪಕ್ಷಿಗಳನ್ನು ಆಹಾರವಾಗಿ ಸೇವಿಸಿ ಡರ್ ಎಂದು ತೇಗಿಯೇ ಬರುವುದು.
ದಿನದಿನವೂ ಹಸಿರು ಸ್ವಲ್ಪ ಸ್ವಲ್ಪವೇ ಸರಿದು ಬಟ್ಟಂಬಯಲಾಗುತ್ತಿದೆ. ಸಿಮೆಂಟ್ ಮರಗಳು ದಿನದಿನವೂ ಆಳೆತ್ತರಕ್ಕೆ ಬೆಳೆದು ನಿಂತಿದೆ ಒಂದು ಹುಲ್ಲು ಕಡ್ಡಿಯನ್ನೂ ಬೆಳಸದ ಸಿಮೆಂಟ್ ಜನರಿಗೆ ತುಂಬಾ ಪ್ರಿಯವಾಗುತ್ತಿದೆ. ಕಾಡಿನ, ಮರಗಳ ವಿನಾಶದಿಂದಾಗುವ ದುಷ್ಪರಿಣಾಮ ಆಳುವವರಿಗೂ, ಆಳಿಸಿಕೊಳ್ಳುತ್ತಿರುವವರಿಗೂ ಅದೇಕೋ ಅರ್ಥವಾಗದ ವಿಷಯವಾಗಿ ಉಳಿದಿದೆ.
ಬಾವಲಿಗಳೇಕೆ ನನ್ನ ಬರೆಹದಲ್ಲಿ ಮುಖ್ಯವಾಗಿ ಬಂದ ಚರ್ಚಿತ ವಿಷಯವೆಂದರೆ ಕಾಡ್ಗಿಚ್ಚು ಅಥವಾ ಕುತಂತ್ರದಿಂದ ಅಳಿವಿನಂಚಿನಲ್ಲಿರುವ ಕಾಡುಗಳ ಉಳಿವಿಗೆ ಎಲ್ಲಾ ಪಕ್ಷಿಗಳಂತೆ ಬಾವಲಿಯೂ ಕೂಡಾ ಕೆಲಸಮಾಡುತ್ತವೆ. ಗಮನಿಸಬೇಕಾದ ವಿಷಯವೆಂದರೆ ಪಕ್ಷಿಗಳಿಗಿಂತಲೂ ಅಧಿಕ ಪ್ರಮಾಣದಲ್ಲಿ ಪ್ರಸರಣವನ್ನು ಬಹುದೂರದ ವರೆಗೆ ಪರಿಹರಿಸುವಲ್ಲಿ ಇದರ ಕಾರ್ಯ ದೊಡ್ಡದು. ಯಾರೂ ನೀರುಣಿಸಿ,ನೆಲೆ ನೀಡಿ ಬೆಳೆಸದ ಕಾಡಿನ ಮರಗಳು ಉಳಿಯುವಿಕೆಯಲ್ಲಿ ಬಾವಲಿಗಳ ಪಾತ್ರ ಅತ್ಯಂತ ಮಹತ್ವದ್ದು. ಅದರಲ್ಲೂ ನಮ್ಮ ಭಾರತದಂತಹ ನಗರಗಳಲ್ಲಿ ಬಾವಲಿಗಳ ಇರುವಿಕೆ ತುಂಬಾ ಅಗತ್ಯವಿದೆಯೆಂಬುದನ್ನು ನಮ್ ಜನರು ಅಂತರಾಳದ ಚಕ್ಷುವಿನಿಂದ ನೋಡಬೇಕಾಗಿದೆ. ಸ್ವಾವಲಂಬಿಗಳಾದ ಬಾವಲಿಗಳು ಮಾನವನ ಸಂಪರ್ಕವನ್ನು ಹೆಚ್ಚು ಬಯಸುವುದೇ ಅವುಗಳ ಅಳಿವಿಗೆ ಕಾರಣವಾಗಿರಬೇಕು.
ಬಾವಲಿಗಳಿಗೆ ಹಣ್ಣುಗಳೆಂದರೆ ತುಂಬಾ ಇಷ್ಟ.ಅದರಲ್ಲೂ ತುಂಬಾ ಮಾಗಿದ ಕಳಿತ ಮೆದು ಸುವಾಸನಾಭರಿತ ಹಣ್ಣುಗಳನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತವೆ. ಇದನ್ನು ಕಂಡ ಮನುಜ ಈ ಬಾವಲಿಗಳು ಹಣ್ಣುಗಳನ್ನೂ ಬಿಡುವುದಿಲ್ಲ ಎಂದು ದೂರುವವರಿದ್ದಾರೆ. ಸಾಮಾನ್ಯವಾಗಿ ಯಾರೇ ರೈತರು ಚೆನ್ನಾಗಿ ಮಾಗಿದ ಹಣ್ಣುಗಳನ್ನು ಎಲ್ಲೂ ಕೊಂಡೊಯ್ದು ಮಾರುವುದಿಲ್ಲ. ಇನ್ನೂ ಕೆಲವರು ಕೊಳೆಯಲು ಎಸೆಯುವರು. ಬಾವಲಿಗಳಿಗೆ ಚೆನ್ನಾಗಿ ಮಾಗಿದ ಮೃದು ಹಣ್ಣುಗಳೆಂದರೆ ತುಂಬಾ ಇಷ್ಟ ಪಟ್ಟು ತಿನ್ನುತ್ತವೆ. ಅದರಿಂದ ಯಾರಿಗೆ ಅನ್ಯಾಯವಾಗಿದೆ ?.
ಪ್ರಪಂಚದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಅತೀ ಹೆಚ್ಚು ಹಣಗಳಿಸಿಕೊಡುವ ಗೋಡಂಬಿ, ಅವಾಕಡೋಸ್, ಬಾಳೆ, ಮಾವು, ಅಂಜೂರ, ಬಾದಾಮಿ ಇಂತಹ ಮುಂತಾದ ಮರಗಳು ತಮ್ಮ ವಂಶಾಭಿವೃದ್ಧಿಗೆ ಈ ಬಾವಲಿಯನ್ನೇ ಅವಲಂಬಿಸಿವೆ.ಈ ಸತ್ಯ ಹೆಚ್ಚು ಜನಕ್ಕೆ ಮತ್ತು ಬೆಳೆಗಾರರಿಗೆ ತಿಳಿಯುವಂತಾಗಬೇಕು. ಕಾಡನ್ನು ಕಾಡಿನಲ್ಲಿನ ಮರಗಳನ್ನು ನಾವು ಹೆಚ್ಚು ಬೆಳೆಸುವುದಿಲ್ಲ. ಅದನ್ನು ಬೆಳೆಯುವಂತೆ ಮಾಡುವ ಜೀವಿಯೆಂದರೆ ಪಕ್ಷಿ ಮತ್ತು ಬಾವಲಿಗಳು. ಪಕ್ಷಿಗಳಿಗಿಂತ ಬಾವಲಿಗಳು ತಾವು ತಿಂದ ಆಹಾರವನ್ನು ಅತೀ ವೇಗವಾಗಿ ಅರಗಿಸಿಕೊಳ್ಳಬಲ್ಲವು. ಆದರೆ ಅಷ್ಟೇ ಬೇಗ ಮಲವಿಸರ್ಜನೆ ಮಾಡಬಲ್ಲವು ಮತ್ತು ಅತ್ಯಧಿಕ ಪ್ರಮಾಣದಲ್ಲಿ ಬೀಜಗಳನ್ನು ಹೊರಹಾಕುತ್ತವೆ. ಹಾಗಾಗಿ ಬಾವಲಿಗಳ ಸಂತತಿಯನ್ನು ಉಳಿಯಲು ಬಿಡಿ.
ಪರಾಗಸ್ಪರ್ಶ ಮಾಡುವ ಯಾವುದೇ ಜೀವಿಗಳನ್ನು ನಾವು ಕೊಲ್ಲುವುದು ಮಹಾಪಾಪ. ಅಲ್ಲದೆ ಪರಿಸರ ಸಮತೋಲನವೂ ಕುಸಿಯುವಂತಾಗುವುದು ಎಂದು ಬಿಬಿಸಿ ಹೇಳಿತ್ತು. ಮುಂದುವರಿದು ಮಳೆಯ ಕಾಡುಗಳು ಉಳಿಯುವುದಕ್ಕೆ ಬಾವಲಿಗಳು ಬಹಳ ಶ್ರಮಿಸುತ್ತವೆ. ಬಾವಲಿಗಳು ನಿರುಪದ್ರವಿಗಳು.ಅವುಗಳ ಉಳಿವು ತುಂಬಾ ಅತ್ಯಗತ್ಯ.
-ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ
ಮಾಹಿತಿ ಪೂರ್ಣ ವುಳ್ಳ..ಲೇಖನ… ಧನ್ಯವಾದಗಳು ಗೆಳತಿ ಲಕ್ಷ್ಮಿ..
ಮಾಹಿತಿಪೂರ್ಣ ಲೇಖನ. ಚೆನ್ನಾಗಿದೆ. ಧನ್ಯವಾದಗಳು ಮೇಡಂ.
ಪ್ರಕೃತಿಯಲ್ಲಿ ಬಾವಲಿಗಳ ಮತ್ತು ಇನ್ನಿತರ ಪಕ್ಷಿ ಸಂಕುಲಗಳ ಮಹತ್ವವನ್ನು ಸಾರುವ ಸುಂದರ ಲೇಖನ
ಪರಿಸರ ಸಂರಕ್ಷಣೆಯ ಬಗ್ಗೆ ಇರುವ ಸುಂದರವಾದ ಲೇಖನ ವಂದನೆಗಳು
ಜಗತ್ತಿನಲ್ಲಿ ನಮ್ಮ ಜೊತೆಗೇ ಬಾಳಲು ಅರ್ಹತೆ ಹೊಂದಿರುವ ಎಲ್ಲಾ ಜೀವಿಗಳೂ ನರ ರಾಕ್ಷಸರ ಕರಗಳಿಂದ ಧ್ವಂಸವಾಗುತ್ತಿರುವುದು ದುರಂತ! ಪ್ರಕೃತಿಯೊಂದಿಗೆ ಬಾಳಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳುವ ಲೇಖನ ಚೆನ್ನಾಗಿದೆ.