ಏನೋ ಒಂದು ಬೇಕಿದೆ !
ಮೋಡ ಕಟ್ಟುತಿದೆ ಗಾಳಿ ಬೀಸುತಿದೆ
ಜೀವಜಲ ಸುರಿದು ಸಡಗರಿಸಲು
ಮಳೆ ಬೀಳುತಿದೆ ಬಿಸಿಲೂ ಹೊಳೆಯುತಿದೆ
ಕಾಮನ ಬಿಲ್ಲು ಬಣ್ಣದೋಕುಳಿಯಾಡಲು
ಕಾಲ ಸಮೀಪಿಸುತಿದೆ ನೆಲ ಒದ್ದೆಯಾಗುತಿದೆ
ಮಣ್ಣಲಿ ಬೀಜ ಮೊಳೆತು ಸಸಿಯಾಗಲು
ಮಂಜು ಸುರಿಯುತಿದೆ ಬೆಳಕು ಮೂಡುತಿದೆ
ಪಾರಿಜಾತ ಕಳಚಿ ಭುವಿಯ ಸಿಂಗರಿಸಲು
ಹೂವರಳಿ ಕಂಪಿಸುತಿದೆ ತಂಗಾಳಿ ರಮಿಸುತಿದೆ
ಮಕರಂದಕೆ ಭ್ರಮರ ದಾಳಿಯಿಡಲು
ಸಂಜೆ ಸಮೀಪಿಸುತಿದೆ ಕತ್ತಲು ಸುರಿಯುತಿದೆ
ಹಣತೆ ಹಚ್ಚುತ ಜ್ಯೋತಿ ಬೆಳಗಿಸಲು
ಆಗಸ ಮೈದೋರುತಿದೆ ಹಕ್ಕಿ ಹಾಡುತಿದೆ
ರವಿಕಿರಣ ಹೊಂಬಿಸಿಲಾಗಿ ಚೆಲ್ಲಲು
ಹೊಳೆಯು ಹರಿಯುತಿದೆ ದೋಣಿ ಸಾಗುತಿದೆ
ಯಾನ ಮುಗಿದು ದಡ ಸೇರಿ ಸುಖವಾಗಲು
ಹುಣ್ಣಿಮೆ ಹರಡುತಿದೆ ಸೆಳವು ಹೆಚ್ಚುತಿದೆ
ಶಾಂತವಿದ್ದ ಸಾಗರ ಭೋರ್ಗರೆಯಲು
ಹೃದಯ ತವಕಿಸುತಿದೆ ಬಂಧ ಮಿಡಿಯುತಿದೆ
ಪ್ರೀತಿ ಪಲ್ಲವಿಸಿ ಮೈ ಮರೆತು ಹಗುರಾಗಲು
ಬೆರಳು ನುಡಿಸುತಿದೆ ಕೊಳಲು ಉಲಿಯುತಿದೆ
ಎದೆಯೊಳಗಿನ ಕಿಚ್ಚು ರಾಗದಿ ಹೊಮ್ಮಲು
ಪೂಜೆ ನಡೆಯುತಿದೆ ಗಂಟೆ ಮೊಳಗುತಿದೆ
ದಿವ್ಯತೆ ಹರಡಿ ಜೀವ ಸಮರ್ಪಿತಗೊಳ್ಳಲು
ಮಾತು ಸೋಲುತಿದೆ ಸಾಲು ತವಕಿಸುತಿದೆ
ಕಣ್ಣ ಭಾಷೆಯ ಕಾಣ್ಕೆ ಕವಿತೆಯಾಗಲು
ಏನೋ ಒಂದು ಬೇಕಾಗಿದೆ !
ಸಹೃದಯಕೀಗ ಗೊತ್ತಾಗುತಿದೆ !!
–ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ
ಸುರಹೊನ್ನೆಗೆ ಧನ್ಯವಾದಗಳು
ಚಂದದ ಸಾಲುಗಳು
ಬಹಳ ಆಪ್ತವಾದ ಕವನ ಅದರಲ್ಲೂ ಕವನದ ಕೊನೆಯ ಸಾಲುಗಳು..ಏನೋ ಒಂದು ಬೇಕಾಗಿದೆ..ಸಹೃದಯಕ್ಕೀಗ ಗೊತ್ತಾಗುತ್ತಿದೆ…ಧನ್ಯವಾದಗಳು ಸಾರ್
ಮಾತು ಸೋಲುತಿದೆ ಗೆಳೆಯರ ಕವಿತೆಯ ಹೃದ್ಯತೆಯನ್ನು ಅನುಭವಿಸಿ ಪೊಗಳಲು.
ಏನೆಲ್ಲಾ ಇದ್ದರೂ, ಬೇರೊಂದರ ಕೊರತೆ ಕಾಣುವುದೇ ಮಾನವನ ಗುಣ, ಎನ್ನುವುದನ್ನು ಕವನ ಹೇಳುತ್ತಿದೆ.ಚೆನ್ನಾಗಿದೆ ಸರ್.❤️
ಮನಮುಟ್ಟುವಂತಿದೆ ಗುರುಗಳೆ
ಸೊಗಸಾದ ಕವನ
ಪ್ರಕೃತಿಯೆಲ್ಲಡಗಿರುವ ಏನೋ ಬೇಕೆನ್ನುವ ಹಂಬಲವನ್ನು ಕವಿತೆ ಚೆನ್ನಾಗಿ ಕಟ್ಟಿಕೊಟ್ಟಿದೆ