ಕಾದಂಬರಿ : ‘ಸುಮನ್’ – ಅಧ್ಯಾಯ 3
ಹೊಸ ಜೀವನಶೈಲಿ
ಒಂದು ವಾರ ಕಳೆಯಿತು. ಬಂದಾಗಿನಿಂದ ಬೆಳಗ್ಗೆ ಬ್ರೆಡ್, ಜಾಮ್ ಮತ್ತು ಗಿರೀಶಗೆ ಆಮಲೆಟ್ ಮಾಡಿ ಹಾಕಿದ್ದ ರಂಗಪ್ಪ. ಅಂದೂ ಅದನ್ನೆ ತಂದಿರಿಸಿದಾಗ “ಏನು ರಂಗಪ್ಪ ದಿನಾಲು ತಿಂಡಿಗೆ ಬ್ರೆಡ್ಡಾ? ನಿಮಗೆ ಉಪ್ಪಿಟ್ಟು, ರೊಟ್ಟಿ, ಅವಲಕ್ಕಿ ಮಾಡೋಕ್ಕೆ ಬರಲ್ವಾ” ಸುಮನ್ ತುಸು ಮುನಿಸಿನಿಂದ ಕೇಳಿದಳು.
ರಂಗಪ್ಪ ಗಿರೀಶನ ನೋಡಿದ.
ಗಿರೀಶ “ಸುಮನ್ ಇಲ್ಲಿ ಇದೇ ತಿಂಡಿ. ನಂಗೆ ಇದೇ ಅಭ್ಯಾಸ. ನೀನೂ ಅಭ್ಯಾಸ ಮಾಡಿಕೋ” ಸ್ವಲ್ಪ ಗಡುಸಾಗಿ ಉತ್ತರಿಸಿದ.
ಸುಮನ್ ಗಿರೀಶನ ಧಾಟಿಗೆ ಬೆಚ್ಚಿದಳು. ಅವಳಮ್ಮ ಪ್ರೀತಿಯಿಂದ ಬೆಳಗ್ಗೆ ಸಂಜೆ ಎನ್ನದೆ ತರಾವರಿ ತಿಂಡಿ ಅಡುಗೆ ಮಾಡಿ ಬಡಿಸಿದ್ದು ಜ್ಞಾಪಕ ಬಂತು. ಮದುವೆಯಾದಾಗಿನಿಂದ ಬ್ರೆಡ್ ಕಡೆದು ಕಡೆದು ಬೇಜಾರಾಗಿತ್ತು. ಗಿರೀಶ ತಿನ್ನುವ ಆಮಲೆಟ್ ವಾಸನೆಯೇ ಅವಳಿಗೆ ಹೇಸಿಗೆ ಇನ್ನು ಅವಳು ಅದನ್ನು ತಿನ್ನುವುದು ದೂರವೇ ಉಳಿಯಿತು. ಕಣ್ಣಲ್ಲಿ ನೀರು ಚಿಮ್ಮಿತು. ಕಷ್ಟಪಟ್ಟು ಒಂದು ಬ್ರೆಡ್ಡನ್ನು ಕೈಗೆತ್ತಿಕೊಂಡಳು. ಗಿರೀಶ ಅವಳ ಕಣ್ಣೀರು ನೋಡಿಯೂ ನೋಡದಂತೆ ಮಜವಾಗಿ ಇನ್ನೊಂದು ಬ್ರೆಡ್ಡಿಗೆ ಜಾಮ್ ಹಚ್ಚಿದ.
ರಂಗಪ್ಪ ಹೀ ಎಂದು ಹಲ್ಲು ಬಿಟ್ಟುಕೊಂಡು ಅಡುಗೆಮನೆಗೆ ನಡೆದ.
ಜೀವನದಲ್ಲಿ ಮೊದಲು ಬಾರಿ ಅವಳನ್ನು ಯಾರಾದರೂ ಗದರಿಸಿದ್ದರು. ನೋವಿನ ಜೊತೆ ಅವಮಾನ ಸೇರಿ ತಡೆಯಲಾರದಷ್ಟು ದುಃಖ, ಕಣ್ಣೀರು ಕೆನ್ನೆಯ ಮೇಲೆ ಧಾರಾಕರವಾಗಿ ಹರೆಯಿತು. ಬಿಕ್ಕುತ್ತ ಸುಮನ್ ಕೈಗೆ ಒಂದು ಟಿಶ್ಯೂ ಎತ್ತಿಕೊಂಡಳು. ಗಿರೀಶ ತಿಂಡಿ ತಿಂದು ತಯಾರಾಗಲು ಎದ್ದು ಹೋದ. ಈ ನಿರ್ಲಪ್ತತೆ ಸುಮನಳನ್ನು ತೀರ ಅಧೀರಳನ್ನಾಗಿ ಮಾಡಿತು. ಬಿಕ್ಕಲಾರಂಭಿಸಿದಳು. ಗಿರೀಶ ತಾನು ತಪ್ಪು ಮಾಡಿಲ್ಲದವನಂತೆ ತನ್ನ ಪಾಡಿಗೆ ತಾನು ಆಫೀಸಿಗೆ ಹೋದ. ಬಾಗಿಲು ಹಾಕಿದ ಶಬ್ದ ಕೇಳಿ ಸುಮನ್ ಸಾವರಿಸಿಕೊಂಡು ತನ್ನ ಕೋಣೆಗೆ ಹೋದಳು. ಸ್ವಲ್ಪ ಹೊತ್ತಿಗೆ ಕಣ್ಣೀರು ನಿಂತಿತು. ಟಾಮಿ ಅವಳಿಗಾಗಿ “ಬೌ ಬೌ” ಅನ್ನುವುದನ್ನು ಕೇಳಿ ತೋಟಕ್ಕೆ ಹೋದಳು. ಟಾಮಿ ಓಡಿ ಬಂದು ಅವಳ ಮೈಮೇಲೆ ಹತ್ತಿ ಅವಳನ್ನು ನೆಕ್ಕಿ ತಾನೂ ಮುದ್ದು ಮಾಡಿಸಿಕೊಂಡಿತು. ಸುಮನ್ ಗಿಡಗಳನ್ನು ನೋಡುತ್ತ ಸ್ವಲ್ಪ ಸಮಯ ಅಲ್ಲೆ ಹೊರಗಡೆ ಇದ್ದು ಟಾಮಿ ಸಮೇತ ಒಳ ಬಂದಳು. ಮಕ್ಕಳು ಜ್ಞಾಪಿಸಿಕೊಂಡು ಅವಾಗವಾಗ ಅಳುವ ಹಾಗೆ ಇಡೀ ದಿನ ಒಂದೊಂದು ಕಣ್ಣೀರು ಸುಮನಳ ಕೆನ್ನೆ ಮೇಲೆ ಹರಿಯುತ್ತಿತ್ತು. ಟಾಮಿ ಎಷ್ಟು ಪ್ರಯತ್ನಪಟ್ಟರೂ ಅಂದು ಸುಮನ್ ಅದನ್ನು ನಗುತ್ತ ಮಾತಾಡಿಸಲಿಲ್ಲ.
ಸಂಜೆ ಗಿರೀಶ ಬಂದು ತನ್ನನ್ನು ಓಲೈಸುತ್ತಾನೆ ಎಂದು ಕಾದ ಸುಮನ್‍ಗೆ ಅವಾಗಲೂ ಕಣ್ಣೀರೇ ಕಾದಿತ್ತು. ಗಿರೀಶ ಬೆಳಗ್ಗಿನ ತನ್ನ ನಡತೆಯ ಬಗ್ಗೆ ತಲೆಯೇ ಕೆಡಸಿಕೊಂಡಿರಲಿಲ್ಲ. ಅವನು ಮಜವಾಗಿಯೇ ಇದ್ದ. ದಿಂಬಿಗೆ ತಲೆ ಇಟ್ಟಾಗಲೂ ಸುಮನ್ ಅಳುತ್ತಲೇ ಇದ್ದಳು.
ಒಂದು ವಾರ ಹೇಗೋ ಬ್ರೆಡ್ ಜಾಮ್ ತಿಂದಳು ಸುಮನ್. ಇನ್ನು ಮಧ್ಯಾಹ್ನ ಊಟದಲ್ಲಿ ತನಗೆ ಯಾವ ವ್ಯಂಜನಕ್ಕೆ ಬೇಕೋ ಅದಕ್ಕೆ ಬೆಳ್ಳುಳಿ ಹಾಕಿರುತ್ತಾನೆ ರಂಗಪ್ಪ ಎಂದು ಅರಿತು ಸುಮನ್ ಬೆಳಗ್ಗಿನ ಬ್ರೆಡ್ ಬಿಟ್ಟು ಒಂದಿಡೀ ಸ್ವಿಸ್ ಚಾಕಲೇಟ್ ತಿನ್ನತೊಡಗಿದಳು. ಗಿರೀಶಗೆ ಕೊಡಲು ಹೋದರೆ “ಬೇಡ ನಂಗೆ ಬೇಡ. ನೀನೂ ನಿನ್ನ ಫಿಗರ್ ನೋಡಿಕೋ” ಎಂದಿದ್ದನ್ನು ಕೇಳಿ ಜೋರಾಗಿ ನಕ್ಕು ಬಿಟ್ಟಳು. ಗಿರೀಶ ನಗಲಿಲ್ಲ. ಅವಳು ತಿನ್ನುವುದನ್ನೇ ಓರೆಗಣ್ಣಿನಿಂದ ನೋಡುತ್ತಿದ್ದ.
ಗಿರೀಶ ಆಫೀಸಿಗೆ ಹೋದ ನಂತರ ಸುಮನ್ ಲವಲವಿಕೆಯಿಂದ ಟಾಮಿ ಜೊತೆ ಮನೆ ಸುತ್ತ ಓಡಾಡಿ ಸಂಭ್ರಮದಿಂದ ತನ್ನ ಕೋಣೆಗೆ ಓಡಿದಳು. ಬೀರುವಿನಿಂದ ಅವಳಮ್ಮನ ಕೈಯಲ್ಲಿ ಕೇಳಿ ಬರೆದುಕೊಂಡ ಅಡುಗೆ ಪುಸ್ತಕ ತೆಗೆದಳು. ಅಂದು ಗಿರೀಶ ಮಧ್ಯಾಹ್ನ ಊಟಕ್ಕೆ ಬರುವುದಾಗಿ ಹೇಳಿದ್ದ. ಗಂಡನಿಗೆ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸುವ ಆಸೆ ಅವಳಿಗೆ. ಪುಸ್ತಕದಲ್ಲಿದ್ದ ಪುಟಗಳನ್ನು ಒಮ್ಮೆ ತಿರುವಿ ಆಲುಗಡ್ಡೆ ಇರುಳ್ಳಿ ಹುಳಿ, ಹೀರೆಕಾಯಿ ಬೋಂಡಾ ಮಾಡುವುದು ಎಂದು ತೀರ್ಮಾನಿಸಿದಳು. ಅವಕ್ಕೆ ಬೇಕಾಗಿರುವ ಸಾಮಾನಿನ ಪಟ್ಟಿ ಹಿಡಿದು ಅಡುಗೆಮನೆಗೆ ಓಡಿದಳು ಟಾಮಿಗೆ ಅವಳ ಸಂಭ್ರಮದ ಕಾರಣ ತಿಳಿಯದಿದ್ದರೂ ಅದೂ ಕುಣಿಯುತ್ತ ಕುಪ್ಪಳಿಸುತ್ತ ಅವಳ ಹಿಂದೆ ಓಡಿತು.
“ರಂಗಪ್ಪ ಇವೆಲ್ಲ ಸಾಮಾನು ಇದ್ಯಾ ನೋಡಿ” ರಂಗಪ್ಪನ ಕೈಗೆ ಚೀಟಿ ಕೊಟ್ಟಳು.
“ಓ ಎಲ್ಲಾ ಇದೆ. ಯಾಕೆ ಮೇಡಂ?”
“ಎಲ್ಲಾ ಸಾಮಾನು ತೆಗೆದು ಕಟ್ಟೆ ಮೇಲೆ ಇಟ್ಟು ಬಿಡಿ. ನಾನೇ ಅಡುಗೆ ಮಾಡ್ತೀನಿ ಇವತ್ತು.”
“ಅಯ್ಯೋ ಬೇಡ ಮೇಡಂ. ಸಾರ್‌ಗೆ ಇಷ್ಟ ಆಗಲ್ಲ.”
ಅವನ ಮಾತು ಅವಳಿಗೆ ಕೇಳಿಸಲೇ ಇಲ್ಲ. ಚಾಕು, ತರಕಾರಿ, ಹೆಚ್ಚುವ ಮಣೆ ಎತ್ತಿಕೊಂಡು ಊಟದ ಮೇಜಿನ ಮೇಲಿಟ್ಟಳು. ಫ್ರಿಜ್ ತೆಗೆದು ಹೀರೆಕಾಯಿ ಹೊರಗೆ ತೆಗೆದಳು. ರಂಗಪ್ಪನಿಗೆ ಅಸಮಾಧಾನ, ಅವಳ ಮೇಲೆ ಸ್ವಲ್ಪ ಸಿಟ್ಟು ಬಂತು. ಈ ಅಮ್ಮಾನೇ ಮನೇಲಿ ಅಡುಗೆ ಮಾಡಿದ್ರೇ ನಾನೆಲ್ಲಿ ಹೋಗಲಿ? ಇದು ಅವನ ಚಿಂತೆ.
“ಸಾರ್ ಗೆ ನಾನು ಮಾಡೋ ಅಡುಗೆ ಇಷ್ಟ. ಅದರ ಮೇಲೆ ನಾನು ಇಪತ್ತು ವರ್ಷದಿಂದ ಕೆಲಸ ಮಾಡಿದೀನಿ. ಯಾರ ಮನೆಲೂ ಮನೆಯ ಮಾಲೀಕಳು ಅಡುಗೆ ಮಾಡಿದ್ದು ನೋಡಿಲ್ಲ” ಸಿಟ್ಟು ಅಸಹನೆಯಿಂದ ಅವಳಿಗೆ ಕೇಳುವ ಹಾಗೆ ಹೇಳಿ ಹೊರಗೆ ಹೋಗಿ ಬೀಡಿ ಸೇದುತ್ತ ನಿಂತ.
ಏನೋ ಹಾಡುತ್ತ ಹೀರೆಕಾಯಿ, ಆಲುಗಡ್ಡೆ ಇರುಳ್ಳಿ ಎಲ್ಲಾ ಹೆಚ್ಚಿ ಕುಕ್ಕರ್ ಜೋಡಿಸಿದಳು. ಹುಳಿಗೆ ರುಬ್ಬಿ ಬೋಂಡಾಕ್ಕೆ ಹಿಟ್ಟು ಕಲೆಸಿಕೊಂಡಳು. ಒಂದು ಕಡೆ ಹುಳಿಗೆ ಕುದಿಯಲು ಇಟ್ಟು ಇನ್ನೊಂದು ಕಡೆ ಬೋಂಡಾಗೆ ಎಣ್ಣೆ ಇಟ್ಟು ಬೋಂಡಾ ಕರೆದಳು. ಎಲ್ಲಾ ಇಪ್ಪತ್ತು ಸಲಿ ಅವಳ ಅಡುಗೆ ಪುಸ್ತಕ ನೋಡಿ. ಟಾಮಿ ಅಡುಗೆಮನೆಯ ಬಾಗಿಲಲ್ಲಿ ಕುಳಿತು ಘಮಘಮ ಅಡುಗೆ ವಾಸನೆಯನ್ನು ಹೀರುತ್ತ ಕೂತ್ತಿತ್ತು. ಬೀರುವಿನಲ್ಲಿದ್ದ ಪಿಂಗಾಣಿ ಪಾತ್ರೆಗಳಲ್ಲಿ ಎಲ್ಲಾ ವ್ಯಂಜನಗಳನ್ನು ತೋಡಿ ಅಣಿಯಾಗಿ ಊಟದ ಮೇಜಿನ ಮೇಲಿಟ್ಟಳು. ಟಾಮಿಗೆ ಅನ್ನ ಹುಳಿ ಕಲಿಸಿ ಎರಡು ಬೋಂಡಾ ಅದರ ಬಟ್ಟಲಿಗೆ ಹಾಕಿ ಹೊರಗೆ ಅಟ್ಟಿದಳು. ದಡಬಡ ಮೇಲೆ ಹೋಗಿ ಅವಳು ಫ್ರೆಶ್ ಆಗುವುದಕ್ಕು ಗಿರೀಶ ಕರಘಂಟೆ ಒತ್ತುವುದಕ್ಕು ಸರಿ ಹೋಯಿತು. ಸಂಭ್ರಮದಿಂದ ಊಟದ ಕೋಣೆಗೆ ಓಡಿ ಲೋಟಗಳಿಗೆ ನೀರು ಹಾಕಿ ಗಿರೀಶಗಾಗಿ ಕಾಯುತ್ತ ನಿಂತಳು. ಗಿರೀಶ ಕೈ ತೊಳೆದು ತಟ್ಟೆ ಮುಂದೆ ಕುಳಿತ. ಅವಳು ಅನ್ನ ಬಡಿಸಿ ಬೋಂಡಾ ಹಾಕುವುದನ್ನು ಅಚ್ಚರಿಯಿಂದ ನೋಡಿದ. ಸುಮನ್ ತುಪ್ಪ ಬಡಿಸಿ ತನ್ನ ಕುರ್ಚಿಯ ಮೇಲೆ ಕುಳಿತಳು. ಹುಬ್ಬು ಗಂಟು ಹಾಕಿದ್ದ ಗಂಡನನ್ನು ದಿಗ್ಭ್ರಮೆಯಿಂದ ನೋಡಿ ಅವಳ ಉತ್ಸಾಹ ಜರ್ರನೆ ಇಳಿಯಿತು.
ಚುರುಗುಟ್ಟುತ್ತಿದ್ದ ಹೊಟ್ಟೆಗೆ ತುಪ್ಪದ ವಾಸನೆ ಬಿದ್ದ ಗಿರೀಶ ಕೆಂಡಮಂಡಲವಾದ. ತಟ್ಟೆಗೆ ಹಾಕಿದ್ದ ಕೈಯನ್ನು ತೆಗೆದು
“ಯಾರು ಮಾಡಿದ್ದು ಅಡುಗೆನಾ?” ಗರ್ಜಿಸಿದ.
ಅವನ ಸಿಟ್ಟಿನ ಮೂಲ ತಿಳಿಯದ ಸುಮನ್ ಮೆಲ್ಲಗೆ “ನಾನು” ಉತ್ತರಿಸಿದಳು.
ಪಟಾರನೆ ತಟ್ಟೆ ಮೇಜಿನ ಕೆಳಗೆ ಬಿದ್ದಾಗ ಅವಳ ಪಸೆ ಆರಿ ಹೋಯಿತು.
“ಯಾರು ನಿಂಗೆ ಅಡುಗೆ ಮಾಡೋಕ್ಕೆ ಹೇಳಿದ್ದು? ರಂಗಪ್ಪ ಇರೋದು ಯಾಕೆ? ಯಾರ್ ಯಾರ್ ಮನೆಲಿ ಏನೇನು ಕೆಲಸ ಮಾಡಬೇಕೋ ಅವ್ರು ಅದನ್ನ ಮಾಡಬೇಕು. ನಿಮ್ಮ ಅಮ್ಮನ ಮನೆ ಸಂಪ್ರದಾಯ ಬಿಟ್ಟ ಇಲ್ಲಿಯ ಜೀವನಶೈಲಿ ಸ್ವಲ್ಪ ಕಲಿತುಕೋ. ಆಳು ಆಗೊಕ್ಕೆ ಹೋಗಬೇಡ” ಗಿರೀಶ ಜೋರಾಗಿ ಕೂಗಾಡಿದ.
ಸುಮನ್ ಅಳುತ್ತ ಇರುವುದನ್ನು ಗಮನಿಸಲಿಲ್ಲ ಗಿರೀಶ. ಅದ್ಯಾವುದೋ ಮಾಯದಲ್ಲಿ ರಂಗಪ್ಪ, ಕೆಲಸದ ವಿಜಯ ಇಬ್ಬರು ಬಂದು ಹೀ ಎನ್ನುತ್ತ ಬಾಗಿಲ ಬಳಿ ನಿಂತಿದ್ದರು.
“ರಂಗಪ್ಪ ಬ್ರೆಡ್ ಟೋಸ್ಟ ಮಾಡಿಕೊಂಡು ಬಾ ಅದನ್ನೆ ತಿಂದು ಹೋಗ್ತೀನಿ.”
“ಹೂಂ ಸಾರ್. ನಾನು ಹೇಳದೇ ಮೇಡಂಗೆ ಅಡುಗೆ ನೀವು ಮಾಡೋದು ಬೇಡಾಂತ” ಎಲ್ಲರಿಗೂ ಕೇಳಿಸುವ ಹಾಗೆ ಹೇಳುತ್ತ ಅಡುಗೆಮನೆ ಹೊಕ್ಕ ರಂಗಪ್ಪ ವಿಜೃಂಭಣೆಯಿಂದ.
ಸುಮನ್‍ಗೆ ಏಟಿನ ಮೇಲೆ ಏಟು. ಅವಮಾನದ ಮೇಲೆ ಅವಮಾನ. ಅಳುತ್ತ ಕೋಣೆಗೆ ಓಡಿದಳು. ಹೇಳತೀರದ ದುಃಖ. ಅತ್ತು ಅತ್ತು ಕಣ್ಣು ಮೂಗು ಕೆಂಪಾದವು. ಅಡುಗೆ ಚೆನ್ನಾಗಿಲ್ಲ ಅನ್ನಲಿಲ್ಲ. ಬಾಯಿಗೆ ತುತ್ತೇ ಇಡಲಿಲ್ಲ ಗಿರೀಶ. ಗಂಡನಿಗೆ ರುಚಿ ರುಚಿಯಾಗಿ ಅಡುಗೆ ಮಾಡಿ ಹಾಕಬೇಕು ಎಂದು ಕಂಡಿದ್ದ ಕನಸು ನುಚ್ಚು ನೂರಾಯಿತು. ತನ್ನ ಗಂಡ “ಚಿನ್ನ ನಿನ್ನ ಕೈ ರುಚಿ ಬಲು ಚೆನ್ನ” ಅಂತ ಲಲ್ಲೆಗರೆಯುವನು ಇಲ್ಲ “ನೀನು ಪ್ರೀತಿಯಿಂದ ಮಾಡಿದ್ದು ಏನಾದರೇನು” ಅಂತ ತಿನ್ನುವನು ಎಂದು ಕನಸು ಕಂಡಿದ್ದಳು. ಒಂದು ತುತ್ತು ಅನ್ನ ಜಾಸ್ತಿ ತಿಂದಿದ್ದರೂ ಅವಳಿಗೆ ಬೆಟ್ಟದಷ್ಟು ಸಂತೋಷವಾಗುತ್ತಿತ್ತು. ಇಲ್ಲಿ ನೋಡಿದರೇ ರಂಪ ರಾದ್ಧಾಂತ. ಕೆಲಸದವರ ಮುಂದೆ ಹೀಯಾಳಿಕೆ, ಅವಮಾನ. ಜೀವನದಲ್ಲಿ ಎಂದೂ ಅಡುಗೆ ಮಾಡಿಲ್ಲದ ಸುಮನ್ ಒಲುಮೆಯ ಗಂಡನಿಗೆ ಅಡುಗೆ ಮಾಡಿ ಬಡಿಸಿದ್ದಳು. ಎಲ್ಲಾ ನೀರಿನಲ್ಲಿ ಹೋಮ ಮಾಡಿದಂತೆ ಆಗಿತ್ತು. ತಾನು ಊಟ ಮಾಡದಿದ್ದರೂ ಗಂಡ ಬರಿ ಬ್ರೆಡ್ ತಿಂದು ಹೋದ ಎಂದು ಅವಳ ಹೊಟ್ಟೆ ಚುರುಗುಟ್ಟುತ್ತಿತ್ತು. ಹೂವಿನಂತ ಮನಸ್ಸಿಗೆ ಬಲವಾದ ಪೆಟ್ಟು ಬಿದ್ದಿತ್ತು. ಶ್ರಾವಣ ಮಾಸದ ಜಿಟಿಜಿಟಿ ಮಳೆಯಂತೆ ಮೂರು ದಿನ ಅತ್ತಿದ್ದಳು. ಗಿರೀಶ ಅವಳನ್ನೇನು ರಮಿಸಿರಲಿಲ್ಲ.
ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=38067
(ಮುಂದುವರಿಯುವುದು)
-ಸುಚೇತಾ ಗೌತಮ್.
ಬ್ಯೂಟಿಫುಲ್. ಹಂತ ಹಂತವಾಗಿ ತೆರೆದುಕೊಳ್ಳತೊಡಗಿದೆ ಗಿರೀಶ್ – ಸುಮನ್ ಜೀವನ.
ಧನ್ಯವಾದಗಳು ಮೇಡಂ
ಅಡುಗೆ ಮಾಡಿದ ಆರಂಭವೇ ಅದ್ವಾನ ಇನ್ನು ಆಪುಣ್ಯಾತ್ಮ ತಲೆಯಲ್ಲಿ ಏನು ಹೊಕ್ಕಿದೆಯೋ ನೋಡಬೇಕು..ಮನೆ ಯಜಮಾನ ಬೆಲೆಕೊಡಲಿಲ್ಲದಿದ್ದರೆ…ಕೆಲಸದವರ ಮುಂದೆ..ಛೆ..ಸೂಕ್ಷ್ಮ ಮನಸ್ಸಿನ ನಾಯಕಿಯ ಅಸಹಾಯತೆ ..ಓದಿ ಕನಿಕರ ವೆನಿಸಿತು…ಕಾದಂಬರಿಯ ಮುಂದಿನಕಂತು ಕಾಯುವಂತೆ ಇದೆ…
ಧನ್ಯವಾದಗಳು ಮೇಡಂ
ಮಾಡಿದ ಮೊದಲ ಅಡುಗೆಯೇ ಪತಿ ಗಿರೀಶನಿಂದ ತಿರಸ್ಕರಿಸಲ್ಪಟ್ಟು ಕೆಲಸದವರ ಮುಂದೆ ಅವಮಾನಿತಳಾದ ಸುಮನ್ ಳ ಕಣ್ಣೀರು ಇನ್ನು ಕೋಡಿ ಹರಿಯದಿರದು… ದೇವಾ..ಕಾಪಾಡು!!
ಸರಳ, ಸುಂದರ ಕಥಾಹಂದರ…ಧನ್ಯವಾದಗಳು ಮೇಡಂ.
ಧನ್ಯವಾದಗಳು ಮೇಡಂ
ಗಂಡನ ಪ್ರೀತಿಯೆಲ್ಲ, ‘ ಹೊಸದರಲ್ಲಿ ಅಗಸ ಗೋಣೀಚೀಲವನ್ನೂ ಎತೆತ್ತಿ ಒಗೆದಂತಾಯಿತು. ನಿಜ ಬಣ್ಷ ಅನಾವರಣಗೊಳ್ಳೊಡಗಿತು.
ಓದುಗರ ಕುತೂಹಲ ಹೆಚ್ಚಾಗತೊಡಗಿತು.