ಮಣಿಪುರದ ತೇಲುವ ಅಭಯಾರಣ್ಯ
ಮಣಿಪುರದ ತೇಲುವ ಕಿಯಾಬುಲ್ ಲಾಮ್ ಜೋ ಅಭಯಾರಣ್ಯದ ಬಗ್ಗೆ ಆಸಕ್ತಿ, ಕುತೂಹಲ ಎರಡೂ ಒಮ್ಮೆಲೆ ಮೂಡಿದವು. ಭಾರತದ ಈಶಾನ್ಯ ರಾಜ್ಯಗಳ ಸಪ್ತ ಸಹೋದರಿಗಳಲ್ಲೊಬ್ಬಳಾದ ಮಣಿಪುರದ ಬಿಷ್ಣುಪುರದಲ್ಲಿತ್ತು ಈ ಅಪರೂಪದ ಅರಣ್ಯ. ಮಣಿಪುರದ ರಾಜಧಾನಿ ಇಂಪಾಲದಿಂದ 32 ಕಿ.ಮೀ. ದೂರದಲ್ಲಿರುವ ಲೋಕ್‌ಟಾಪ್ ಸರೋವರದ ಒಡಲಲ್ಲಿ ಹಬ್ಬಿತ್ತು ಈ ತೇಲಾಡುವ ಅಭಯಾರಣ್ಯ. ಸುಮಾರು 240 ಚದರ ಕಿ.ಮೀ. ವಿಸ್ತೀರ್ಣವುಳ್ಳ ಈ ಅಭಯಾರಣ್ಯದಲ್ಲಿ 40 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವ ಈ ತೇಲುವ ಅರಣ್ಯ ಪ್ರವಾಸಿಗರಿಗೆ ಅಚ್ಚರಿಯನ್ನುಂಟು ಮಾಡುವುದು. ಮಣಿಪುರದ ಮೈಟಿ ಜನಾಂಗದವರು ಈ ಅಭಯಾರಣ್ಯವನ್ನು ತಮ್ಮನ್ನು ಪೋಷಿಸುವ ಮಾತೆಯೆಂದೇ ಪೂಜಿಸುವರು.
ಈಶಾನ್ಯ ರಾಜ್ಯಗಳಿಗೆ ಪ್ರವಾಸಕ್ಕೆಂದು ಹೋದ ನಾವು, ಈ ಅಭಯಾರಣ್ಯದಲ್ಲಿ ವೀಕ್ಷಣಾ ಗೋಪುರದಲ್ಲಿದ್ದ ದೂರದರ್ಶಕದ ಮೂಲಕ ಈ ತೇಲುವ ಸರೋವರವನ್ನೂ ಹಾಗೂ ಇಲ್ಲಿ ವಾಸವಾಗಿದ್ದ ಸಾಂಗ್ಯ ಎಂದು ಕರೆಯಲ್ಪಡುವ ಜಿಂಕೆಗಳನ್ನು ನೋಡುವುದರಲ್ಲಿ ಮಗ್ನರಾಗಿದ್ದೆವು.. ನನಗೆ ಸಾಂಗ್ಯಾ ಜಿಂಕೆಗಳ ಬದಲಿಗೆ ಕಂಡದ್ದು ಪುಮ್ಡಿ ಎಂದು ಕರೆಯಲ್ಪಡುವ ಗಟ್ಟಯಾಗಿದ್ದ ಜೌಗಿನ ಮೇಲೆ ಕುಣಿದು ಕುಪ್ಪಳಿಸುತ್ತಿದ್ದ ನಾಲ್ಕಾರು ಜನ. ನನ್ನನ್ನು ಆಯಸ್ಕಾಂತದಂತೆ ಸೆಳೆದಿತ್ತು ಆ ನೋಟ. ತಡಮಾಡದೇ ನಾಲ್ಕಾರು ಸಹಪ್ರಯಾಣಿಕರೊಂದಿಗೆ ಸೇರಿ ಜಾರುಬಂಡೆಯಂತೆ ಇಳಿಜಾರಾಗಿದ್ದ ಹಾದಿಯಲ್ಲಿ ಸಾಗಿ ಆ ಸರೋವರದ ತಟಕ್ಕೆ ಹೊರಟೆವು. ಒಬ್ಬರ ಕೈ ಒಬ್ಬರು ಹಿಡಿದು ಸಾಗುವಾಗ ಎಲ್ಲಿ ಬಿದ್ದೇ ಬಿಡುವೆವೋ ಎಂಬ ಆತಂಕ. ನಮ್ಮ ಜೊತೆಗೆ ಬಂದ ಹಿರಿಯರೊಬ್ಬರು ಜಾರಿ ಬಿದ್ದಾಗ ಎಲ್ಲಿಲ್ಲದ ಆತಂಕ. ನಮ್ಮ ಕಾಲಿಗೆ ಸಿಕ್ಕ ಸಣ್ಣ ಪುಟ್ಟ ಕಲ್ಲುಗಳು ನಮಗಿಂತ ಮುಂಚೆ ಉರುಳಿ ಹೋಗಿ ಅದಾಗಲೇ ದಡ ಸೇರಿದ್ದವು. ಅಂತೂ ಇಂತೂ ನಾವು ಸರೋವರ ತಲುಪಿದಾಗ ಅಲ್ಲಿ ಎರಡು ದೋಣಿಗಳು ನಿಂತಿದ್ದವು. ಸರೋವರದ ಮೇಲೆಲ್ಲಾ ಜೊಂಡು ಬೆಳೆದು ನೆಲದ ಹಾಗೆಯೇ ಕಾಣುತ್ತಿತ್ತು. ಮೂರು ಅಡಿ ಅಗಲದ ಕಾಲುವೆಯೊಂದರಲ್ಲಿ ಮಾತ್ರ ನೀರು ಇದ್ದು, ಇದು ಸರೋವರ ಎಂದು ನಮಗೆ ಖಾತ್ರಿಯಾಗಿತ್ತು. ದೋಣಿಯವ ಒಂದು ಉದ್ದನೆಯ ಗಳದ ನೆರವಿನಿಂದ ದೋಣಿಯನ್ನು ನಡೆಸುತ್ತಿದ್ದ. ನಾ ಮುಂದು ತಾ ಮುಂದು ಎಂದು ನಾವು ದೋಣಿಯೇರಲು ಮುಗಿಬಿದ್ದೆವು. ಆದರೆ ಹತ್ತು ಜನಕ್ಕೆ ಮಾತ್ರ ಅವಕಾಶವಿತ್ತು. ನಾನು ದೋಣಿಯೇರಿ, ತೇಲುವ ಸರೋವರದಲ್ಲಿ ಜೊಂಡಿನ ಮೇಲೆ ಹತ್ತರಿಂದ ಹನ್ನೆರೆಡು ಅಡಿ ಬೆಳೆದಿದ್ದ ಹುಲ್ಲನ್ನುನೋಡುತ್ತಾ ಮುಂದೆ ಸಾಗಿದೆ. ಒಂದು ಬಾಗದಲ್ಲಿ ಜೊಂಡಿನ ಮೇಲೆ ಎತ್ತರವಾದ ಹುಲ್ಲಿನ ಬದಲಿಗೆ ಕುರುಚಲು ಗಿಡಗಳು ಮಾತ್ರ ಇತ್ತು. ನಾವಿಕನು ಒಬ್ಬೊಬ್ಬರನ್ನಾಗಿ ಕೆಳಗಿಳಿಸಿ, ತಾನು ನಡೆದ ಹಾದಿಯಲ್ಲಿ ಮಾತ್ರ ನಡೆಯಿರಿ ಎಂದು ಎಚ್ಚರಿಸಿದ. ಧಡೂತಿ ದೇಹವಿದ್ದ ಸುಜಯಾ ಹೆಜೆಯಿಟ್ಟ ಕಡೆ ನೀರು ಚಿಮ್ಮುತ್ತಿತ್ತು. ನಾನು ನಿಧಾನವಾಗಿ ಹೆಜ್ಜೆಯಿಡುತ್ತಾ ಹೊರಟೆ. ಟ್ರಾಮ್‌ಪೊಲಿನ್ ಮೇಲೆ ನಡೆದ ಅನುಭವ. ಐದಾರು ವರ್ಷದ ಮಕ್ಕಳ ಹಾಗೆ ಜಿಗಿಯುತ್ತಾ ನಡೆದೆ. ಎಲ್ಲರೂ ಒಟ್ಟಾಗಿ ಹಾಡಿದೆವು, ಕುಣಿದೆವು, ನಮ್ಮ ಬಾಲ್ಯಕ್ಕೆ ಹಿಂತಿರುಗಿದ್ದೆವು. ಗೆಳತಿ ಸುವರ್ಣಳಿಗೆ ಕಾಲಿನೆಡೆ ಏನೋ ಹರಿದಾಡಿದ ಅನುಭವ, ಚಿಟ್ಟನೆ ಚೀರಿದಳು, ನಾವಿಕನು ಹಾವು ಇರಬಹುದೆಂದು ಸಲೀಸಾಗಿ ಹೇಳಿದ, ನಮಗೋ ಗಾಬರಿ, ಅವನಿಗೆ ನಗು. ಆಗೊಂದು ಓತಿಕಾಟ ಮಿಂಚಿನಂತೆ ಓಡಿ ಮರೆಯಾಯಿತು. ಅದರ ಮೇಲ್ಭಾಗ ತಿಳಿ ನೀಲ ವರ್ಣದಂತೆ ಹೊಳೆಯುತ್ತಿತ್ತು. ಹಲವು ಬಗೆಯ ಪಕ್ಷಿಗಳು ಗೂಡು ಕಟ್ಟಿಕೊಂಡಿದ್ದವು. ನಮಗ್ಯಾರಿಗೂ ಅಲ್ಲಿಂದ ಕದಲುವ ಮನಸ್ಸಿಲ್ಲ, ಆದರೆ ದೋಣಿಯವ ಕೇಳಬೇಕಲ್ಲ, ಈ ವಿಶಿಷ್ಟ ಅನುಭವಕ್ಕಾಗಿ ಕಾಯುತ್ತಿದ್ದ ಸಹಪ್ರಯಾಣಿಕರೂ ಇದ್ದರಲ್ಲ. ಹಿಂತಿರುಗುವಾಗ ಆ ಸರೋವರದ ಆಳ ಹತ್ತರಿಂದ ಹನ್ನೆರಡು ಅಡಿ ಇರಬಹುದೆಂದು ದೋಣಿಯವ ಹೇಳಿದಾಗ ಗಾಬರಿಯಾಗಿತ್ತು. ನಮ್ಮಲ್ಲಿ ಕೆಲವರಿಗೆ ಈಜು ಬರುತ್ತಿರಲಿಲ್ಲ, ಬಂದರೂ ಆ ಜಲಸಸ್ಯಗಳ ಬೇರುಗಳ ಮಧ್ಯೆ ಈಜಲು ಸಾಧ್ಯವೇ? ಯಾವುದೇ ಎಚ್ಚರಿಕೆ ತೆಗೆದುಕೊಳ್ಳದೇ ಆ ತೇಲುವ ಮುಳುಗುವ ಸರೋವರದೊಳಗೆ ಹೋಗಿದ್ದೆವು.
ಈ ತೇಲುವ ಅಭಯಾರಣ್ಯದ ರಹಸ್ಯವಾದರೂ ಏನು. ಇದು ಇಡೀ ವಿಶ್ವದಲ್ಲಿಯೇ ಇರುವ ಏಕೈಕ ತೇಲುವ ಅಭಯಾರಣ್ಯ. ಸಾವಿರಾರು ವರ್ಷಗಳಿಂದ ಬೆಳೆದ ಜಲಸಸ್ಯಗಳು ಕೊಳೆತು ಮಣ್ಣಿನೊಡನೆ ಬೆರೆತು, ನಂತರದಲ್ಲಿ ಹೊಸದಾಗಿ ಬೆಳೆಯುವ ಸಸ್ಯಗಳ ಬೇರುಗಳೂ ಹೆಣೆದು ಕೊಡು ಗಟ್ಟಿಯಾದ ಪದರವಾಗಿತ್ತು. ಅದರ ಮೇಲೆ ಹತ್ತರಿಂದ ಹನ್ನೆರೆಡು ಅಡಿ ಎತ್ತರದ ಹುಲ್ಲು ಹಾಗೂ ಹಲವು ಬಗೆಯ ಸಸ್ಯಗಳು ಬೆಳೆದು ಅಭಯಾರಣ್ಯ ಸೃಷ್ಟಿಯಾಗಿದೆ. ಹಲವು ಬಗೆಯ ಜಲಚರಗಳು, ವೈವಿಧ್ಯಮಯ ಪಕ್ಷಿ ಪ್ರಬೇಧಗಳು ತಮ್ಮ ಗೂಡುಗಳನ್ನು ಕಟ್ಟಿಕೊಂಡಿವೆ. ಸಾಂಗ್ಯಾ ಜಾತಿಯ ಜಿಂಕೆ ಇಲ್ಲಿನ ವಿಶೇಷ ಅತಿಥಿ. ಈ ಜಾತಿಯ ಜಿಂಕೆ ಮತ್ತೆಲ್ಲೂ ಕಂಡು ಬರುವುದಿಲ್ಲ. ಎಲ್ಲಾ ಜಿಂಕೆಗಳಿಗೆ ಎರಡು ಕವಲು ಕವಲಾದ ಕೊಂಬುಗಳಿದ್ದರೆ, ಈ ಜಿಂಕೆಗೆ ನಾಲ್ಕು ಕವಲು ಕವಲಾದ ಕೊಂಬುಗಳಿವೆ. ಈ ಜಿಂಕೆಯ ಅಂದ, ಚೆಂದ, ಠೀವಿಯ ನಡಿಗೆ, ಚಂಗನೆ ನೆಗೆಯುತ್ತಾ ಓಡುವ ಸೊಬಗು ಎಲ್ಲರನ್ನೂ ಆಕರ್ಷಿಸಿತ್ತು. ಮಣಿಪುರದಂತಹ ರಮ್ಯವಾದ ಗುಡ್ಡಗಾಡು ಪ್ರದೇಶಕ್ಕೆ ಮನಸೋತ ಸೃಷ್ಟಿಕರ್ತನು ಅಷ್ಟೇ ಸುಂದರವಾದ ಜಿಂಕೆಯನ್ನು ಇಲ್ಲಿ ಸೃಷ್ಟಿಸಿದ್ದಾನೆ. ಪ್ರಕೃತಿಯ ಸೊಬಗಿಗೆ ಮೈಮರೆತ ಗಿಡಮರಗಳು ತಲೆದೂಗುತ್ತಿದ್ದರೆ, ಸಾಂಗ್ಯಾ ಜಿಂಕೆ ನಿಂತಲ್ಲಿ ನಿಲ್ಲದೆ ಜಿಗಿಯುತ್ತಾ ಕಣ್ಮರೆಯಾಯಿತು. ಸಾಂಗ್ಯಾ ಜಿಂಕೆಯ ಸೊಬಗಿಗೆ ಮಾರುಹೋದ ಮೈಟಿ ಜನಾಂಗದವರ ಜಾನಪದ ಕಲೆಯಲ್ಲಿ, ನೃತ್ಯ ಸಂಗೀತದಲ್ಲಿ ಈ ಜಿಂಕೆಯದೇ ಕಾರುಬಾರು. ಮೊದಲಿಗೆ ಹದಿನೈದರಿಂದ ಇಪ್ಪತ್ತು ಇದ್ದ ಜಿಂಕೆಗಳು ಈಗ (ಈ ಪ್ರದೇಶ ಸಂರಕ್ಷಿತ ಅಭಯಾರಣ್ಯವಾಗಿರುವುದರಿಂದ) ಇವುಗಳ ಸಂಖ್ಯೆ ಇನ್ನೂರಾಗಿದೆ. ಸಾಂಗ್ಯಾ ಮಣಿಪುರ ರಾಜ್ಯದ ಹೆಮ್ಮೆಯ ಪ್ರಾಣಿ ಆಗಿದೆ.
ಈ ಸರೋವರವು ಮೂರು ಬೆಟ್ಟಗಳಿಂದ ಸುತ್ತುವರೆಯಲ್ಪಟ್ಟಿದೆ – ಪಾಬೊಟ್, ಟೋಯಾ ಮತ್ತು ಚಿಂಗ್‌ಜಾವ್. ಇದನ್ನು ಜೌಗು ಎಂದು ಕರೆಯೋಣವೇ ಅಥವಾ ಸರೋವರ ಎಂದು ಕರೆಯೋಣವೇ, ಇದು ಸರೋವರದಷ್ಟು ಆಳವಾಗಿಲ್ಲ, ಜೌಗಿನಷ್ಟು ಮೇಲ್ಭಾಗದಲ್ಲಿಲ್ಲ. ಸರೋವರದಲ್ಲಿ ಬೆಳೆದಿರುವ ಈ ಜೊಂಡು ಒಂದು ಅಡಿಯಿಂದ ನಾಲ್ಕು ಅಡಿಯಷ್ಟು ಆಳವಾಗಿದ್ದು ಬೇಸಿಗೆಯಲ್ಲಿ ಮುಳುಗಿ ಭೂತಾಯಿಯ ಫಲವತ್ತತೆ ಹೀರಿಕೊಂಡು, ಮಳೆಗಾಲದಲ್ಲಿ ತೇಲಿ ಹಲವು ಬಗೆಯ ಸಸ್ಯಗಳು ಬೆಳೆಯಲು ಅನುವು ಮಾಡಿಕೊಡುವುದು. ಸಾವಿರಾರು ವರ್ಷಗಳಿಂದ ನಿರ್ಮಾಣವಾಗಿರುವ ಈ ತೇಲುವ ಅgಣ್ಯ ಪ್ರಕೃತಿಯ ಒಂದು ವಿಸ್ಮಯವೇ ಸರಿ. ಮಾನವ ಪ್ರಗತಿಯ ಹೆಸರಿನಲ್ಲಿ ಈ ತೇಲುವ ಅಭಯಾರಣ್ಯವನ್ನು ವಿನಾಶದ ಅಂಚಿಗೆ ನೂಕುತ್ತಿದ್ದಾನೆ. ಲೋಕ್‌ಟಾಪ್ ಸರೋವರದ ಅಡ್ಡ ನಿರ್ಮಿಸಲಾಗಿರುವ ಅಣೆಕಟ್ಟಿನಿಂದ ನೀರಿನ ಮಟ್ಟ ಸದಾ ಏರುವುದರಿಂದ ಜೊಂಡಿನ ತೇಲುವ ಮುಳುಗುವ ಪ್ರಕ್ರಿಯೆ ನಡೆಯದೆ, ಈ ತೇಲಾಡುವ ಅರಣ್ಯ ಸೊರಗಿದೆ. ಜೊತೆಗೆ ವ್ಯವಸಾಯಕ್ಕೆಂದು ಉಪಯೋಗಿಸಲ್ಪಡುವ ಕ್ರಿಮಿನಾಶಕಗಳೂ ಸೇರಿ ಈ ಅರಣ್ಯ ಪ್ರದೇಶವು ಕುಸಿಯುತ್ತಿದೆ. ಪ್ರಗತಿಯ ಜೊತೆ ಜೊತೆಗೇ ಪ್ರಕೃತಿ ಸಂರಕ್ಷಣೆಯೂ ನಡೆದರೆ ಇಂತಹ ಹತ್ತು ಹಲವು ಪ್ರಕೃತಿ ವಿಸ್ಮಯಗಳು ಬದುಕುಳಿಯಬಲ್ಲವು.
– ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ.
ನಿಜವಾಗಲೂ ಪ್ರವಾಸ ಕಥನ ಮುದತಂದಿತು…ನೀವೆಲ್ಲಾ ಎಷ್ಟು ಪುಣ್ಯ ವಂತರು ಅನ್ನಿಸುತ್ತದೆ… ಅದರ ಅನುಭವವನ್ನು ..ಸೊಗಸಾಗಿ ಉಣಬಡಿಸುತ್ತೀರಾ …ಅದಕ್ಕೆ ಧನ್ಯವಾದಗಳು ಗಾಯತ್ರಿ ಮೇಡಂ
Very nice article. We too visit ed
ಲೇಖನವನ್ನು ಓದಿ ಪ್ರತಿಕ್ರಿಯೆಯನ್ನು ತಿಳಿಸಿದ ಗೆಳತಿಯರಿಗೆ ಧನ್ಯವಾದಗಳು
ಬಹಳ ಸುಂದರವಾಗಿದೆ
ಮಣಿಪುರದ ವಿಶೇಷವಾದ ತೇಲುವ ಅಭಯಾರಣ್ಯ, ಅದರಲ್ಲಿರುವ ಸುಂದರ ಸಾಂಗ್ಯಾ ಜಿಂಕೆ..ಅದ್ಭುತವೆನಿಸಿತು…ಚಂದದ ಪ್ರವಾಸಾನುಭವ… ಧನ್ಯವಾದಗಳು ಗಾಯತ್ರಿ ಮೇಡಂ.
ವಿವರಣೆ ಚೆನ್ನಾಗಿದೆ…ನನಗೂ ಮಣಿಪುರಕ್ಕೆ ಹೋಗಬೇಕೆನಿಸುತ್ತಿದೆ
ನಿಜಕ್ಕೂ ಪ್ರಕೃತಿಯ ವಿಸ್ಮಯಗಳಿಗೆ ಎಲ್ಲೆಯೇ ಇಲ್ಲ. ಸುಂದರ ವಿವರಣೆಯ ಸುಲಲಿತ ಪ್ರವಾಸೀ ಲೇಖನ.