ವೇದವ್ಯಾಸರ ಆಪ್ತ ಶಿಷ್ಯ ಲೋಮಶ

Share Button

ವಿದ್ಯಾರ್ಥಿ-ಗುರು ಸಂಬಂಧವೆಂದರೆ ಅದು ಪಾರದರ್ಶಕವಾದುದು. ಶಿಕ್ಷಣದಲ್ಲಿ ಮುಚ್ಚುಮರೆಯಿಲ್ಲ. ಉತ್ತಮ ಗುರು ತನ್ನೆಲ್ಲ ಜ್ಞಾನವನ್ನು ಶಿಷ್ಯನಿಗೆ ಧಾರೆಯೆರೆಯುತ್ತಾನೆ.ಆದರೆ ಎಷ್ಟು ಜನ ವಿದ್ಯಾರ್ಥಿಗಳು ಗುರುಗಳು ಕಲಿಸಿದ್ದನ್ನು ಅರ್ಥೈಸಿಕೊಳ್ಳುತ್ತಾರೆ, ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಕೆಲವರಂತೂ ಶಿಕ್ಷಕರು ಪಾಠ ಮಾಡುವ ವೇಳೆ ತಮ್ಮ ಮನಸ್ಸನ್ನು ಬೇರೆಲ್ಲೋ ನೆಟ್ಟು ವ್ಯವಹರಿಸುತ್ತಿರುತ್ತಾರೆ. ಈಗಂತೂ ಮೊಬೈಲ್ ಯುಗ, ಬಹುತೇಕ ಸಮಯವನ್ನು ಅದರಲ್ಲೇ ಹಾಳು ಮಾಡುತ್ತಾರೆ. ಪಾಠ ಮಾಡುವ ಸಮಯದಲ್ಲೂ ಅದರಲ್ಲೇ ಗುರುಟುತ್ತಿರುತ್ತಾರೆ. ಪಾಠಕ್ಕೆ ಲಕ್ಷ್ಯವಿಲ್ಲದೆ ಪರೀಕ್ಷೆಯಲ್ಲಿ ‘ಡುಂಕಿ’ ಹೊಡೆಯುತ್ತಾರೆ.

ಗುರುಗಳು ಬೋಧಿಸಿದ್ದೆಲ್ಲವನ್ನೂ ಶಿಷ್ಯನಿಗೆ ಅರ್ಥೈಸಿಕೊಳ್ಳಲು, ಹೀರಿಕೊಳ್ಳಲು ಸಾಧ್ಯವೇ? ಎಂದಾಗ ಇಲ್ಲ ಎನ್ನಬೇಕಾಗುತ್ತದೆ. ಒಂದು ವೇಳೆ ಪಾಠ ಮಾಡುವಾಗ ಮನದಟ್ಟಾದಂತೆ ಅನಿಸಿದರೂ ಮತ್ತೆ ಮರೆತು ಬಿಡುವವರೆ ಜಾಸ್ತಿ. ಇದೆಲ್ಲ ಈಗಿನ ಕಾಲದ ಮಾತಾದರೆ ಪೂರ್ವಕಾಲದಲ್ಲಿ ಹೀಗಲ್ಲ. ಗುರುಗಳು ಕಲಿಸಿದ ಪ್ರತಿಯೊಂದು ಪಾಠವನ್ನೂ ತಮ್ಮ ಕಂಪ್ಯೂಟರ್ ತಲೆಯಲ್ಲಿ ತುಂಬಿಕೊಂಡು ಅಗತ್ಯವಿದ್ದಾಗ ತಮ್ಮ ಹೃದಯಾಂತರಂಗದಿಂದ ಜ್ಞಾನಗಂಗೆ ತರಂಗ ತರಂಗವಾಗಿ ಹೊರಹೊಮ್ಮುತ್ತಿತ್ತು. ಇದಕ್ಕೆ ಪ್ರಥಮ ಉದಾಹರಣೆ ‘ಲೋಮಶ’ ಮಹರ್ಷಿ. ‘ಲೋಮಶ’ ಮುನಿ ವೇದವ್ಯಾಸರ ಶಿಷ್ಯ ಭಗವಾನ್ ವೇದವ್ಯಾಸರ ನೆಚ್ಚಿನ ಈ ಶಿಷ್ಯ; ವ್ಯಾಸರ ಹೆಚ್ಚಿನ ಜ್ಞಾನ ಭಂಡಾರವನ್ನೆಲ್ಲ ತನ್ನ ತಲೆಯಲ್ಲಿ ತುಂಬಿಕೊಂಡವ.

ನಾವು ಯಾವುದಾದರೊಂದು ಅಪರೂಪದ ಧಾರ್ಮಿಕ ಕಾರ್ಯಕ್ರಮವನ್ನು ನಮ್ಮ ಮನೆಯಲ್ಲಿ ಮಾಡಲು ಹೊರಟಾಗ ಅದಕ್ಕೆ ಸಂಬಂಧಪಟ್ಟಂತೆ ಮೇರು ವ್ಯಕ್ತಿಗಳು ನಮ್ಮ ನಿರೀಕ್ಷೆಯಿಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದರೆ, ನಮಗೊಂದು ರೀತಿಯ ಹೇಳಿಕೊಳ್ಳಲಾಗದ ಹರ್ಷವುಂಟಾಗುತ್ತದೆ. ಹಾಗೆಯೇ ಆಯಿತು.

ನೈಮಿಷಾರಣ್ಯವು ತೀರ್ಥಗಳಲ್ಲಿ ಉತ್ತಮವೂ ಕ್ಷೇತ್ರಗಳಲ್ಲಿ ಶ್ರೇಷ್ಠವೂ ಆದುದು. ಇದು ಅಯೋಧ್ಯೆಯ ಹತ್ತಿರವಿದೆ. ಭಾರತದ ಪುಣ್ಯೇರಣ್ಯಗಳಲ್ಲೊಂದು ಇದು. ಒಮ್ಮೆ ಇಲ್ಲಿ ಅನೇಕಾನೇಕ ಮಹರ್ಷಿಗಳು, ತಪಸ್ವಿಗಳು ಸೇರಿದರು. ಸಪ್ತಋಷಿಗಳಲ್ಲದೆ ಮುದ್ಗಲ, ದಧೀಚಿ, ಪಿಪ್ಪಲಾದ, ಅಗಸ್ತ್ಯ, ಧೌಮ್ಯ, ಶೌನಕ, ಹೀಗೆ ಪೂತಾತ್ಮರೂ ವೀರ ತ್ಯಾಗಿಗಳೂ ಆದ ಮಹರ್ಷಿಗಳೂ ಮುನಿಮಂಡಲವೆಲ್ಲ ಕೂಡಿದರು. ಈ ತಪಸ್ವಿಗಳ ತಂಡಕ್ಕೆ ‘ಶೌನಕ’ರು ಮುಂದಾಳು. ಇವರೆಲ್ಲ ಸಭೆ ಸೇರಿ ಒಂದು ಯಜ್ಞ ಮಾಡುವುದಾಗಿ ತೀರ್ಮಾನಿಸಿದರು.

ಯಜ್ಞವೆಂದರೆ ಅದು ಹೋಮ ಕುಂಡದಲ್ಲಿ ಅತ್ತಿ-ಸಮಿತ್ತುಗಳಲ್ಲಿ ತುಪ್ಪವನ್ನು ಹೊಯ್ಯುವ ಯಜ್ಞವಲ್ಲ, ಅವರು ತೀರ್ಮಾನಿಸಿದ ಯಜ್ಞ ಜ್ಞಾನಯಜ್ಞ . ಪುರಾಣ,ಪುಣ್ಯ ಕಥೆಗಳ ನಿತ್ಯ ನಿರಂತರ ಪಾಠ ಪ್ರವಚನ, ಶ್ರವಣ, ಮನನ ಮಾಡುವುದೇ ಅಲ್ಲಿ ಸೇರಿದವರು ಮಾಡುವ ಯಜ್ಞಕಾರ್ಯ, ಇದು ಕಾಲ ಮಿತಿ ಇಲ್ಲದೆ ಸಾವಿರಾರು ವರ್ಷ ನಡೆಯುವ ಸಾವೇ ಇರದ ಮಹಾಯಜ್ಞ. ಇಲ್ಲಿ ಭಾಗವಹಿಸಿದವರಲ್ಲಿ ಮೇಲು-ಕೀಳು, ಜಾತಿ-ಪಂಥವೆಂಬ ಬೇಧ-ಭಾವವಿಲ್ಲದೆ ಜ್ಞಾನ ಯಜ್ಞದಲ್ಲಿ ದೀಕ್ಷೆ ಪಡೆದವರೆಲ್ಲರೂ ಸಮಾನರು. ಹೋಮ-ಧೂಮವಿಲ್ಲದ, ಪಶುಬಲಿಯಾಗಲೀ ಹಿಂಸೆಯಾಗಲೀ ಇಲ್ಲದ ಸಾತ್ವಿಕವಾದ ‘ಜ್ಞಾನ-ಯಜ್ಞ’ ಎಂದರೆ ‘ಲೋಮಶ’ರಿಗೆ ಅತ್ಯಂತ ಪ್ರಿಯ, ನೈಮಿಶಾರಣ್ಯದಲ್ಲಿ ನಡೆಯುವ ಜ್ಞಾನ ಯಜ್ಞದ ಸಮಾಚಾರ ಲೋಮಶರ ಕಿವಿಗೆ ಬಿದ್ದು ಒಂದು ದಿನ ಖುದ್ದಾಗಿ ನೈಮಿಶಾರಣ್ಯಕ್ಕೆ ಬಂದರು. ಜ್ಞಾನ ಮೇರು ಲೋಮಶರು ಅಲ್ಲಿ ಯಜ್ಞ ನಡೆಯುವಲ್ಲಿಗೆ ಬಂದಾಗ ಅಲ್ಲಿದ್ದ ಮುನಿಮಂಡಲವೆಲ್ಲ ಒಮ್ಮೆಲೇ ಎದ್ದು ನಿಂತರು. ಯಜ್ಞ ದೀಕ್ಷಿತರಿಗೆಲ್ಲ ಅತ್ಯಾಶ್ಚರ್ಯವೂ ಆನಂದವೂ ಆಯಿತು. ಆದರದ ಸಂಭ್ರಮದ ಸ್ವಾಗತದಿಂದ ಅವರನ್ನು ಕುಳ್ಳಿರಿಸಿದರು. ಉಪಚಾರದ ನಂತರ ಮುನಿತಂಡದ ಮುಂದಾಳುವಾದ ಶೌನಕರು ‘ಪೂಜ್ಯರೇ, ತಮ್ಮ ಆಗಮನದಿಂದ ನಮ್ಮೀ  ಸಭೆಯು ಸಂಪದ್ಭರಿತವಾಯಿತು. ತಮ್ಮ ಮಹಾ ಮುಖದಿಂದ ‘ಶಿವ-ಧರ್ಮ, ಶಿವರಹಸ್ಯವನ್ನು ವಿಸ್ತಾರವಾಗಿ ಹೇಳಬೇಕು. ನಾವು ಕೇಳಬೇಕು ಎಂದರು.

ಶೌನಕರ ಕೇಳಿಕೆಯಂತೆ ಮಹಾಪುರಾಣಗಳಲ್ಲಿ ಒಂದಾದ ಸ್ಕಂದ ಪುರಾಣ, ಕೈವಲ್ಯದತ್ತ ಸಾಗಿ ಸಿದ್ಧಿ ಪಡೆಯುವ, ಸತ್ಯದ ಸತ್ಪಥವೂ ಮುಕ್ತಿಯ ಮಂದಿರಕ್ಕೆ ಮುಕ್ತ ದ್ವಾರವೂ ಆಗಿರುವ ಎಲ್ಲ ಜಾತಿ, ಜನಾಂಗದವರಿಗೂ ಎಂದು ಉದ್ಘೋಷಿಸಲ್ಪಡುವ ಸ್ಕಂದ ಪುರಾಣವನ್ನು ಮುನಿಮಂಡಲದಲ್ಲಿ ಹೇಳುತ್ತಾರೆ.

ಪಾಂಡವರು ಕಾಮ್ಯಕ ವನದಲ್ಲಿದ್ದ ಕಾಲ. ಅರ್ಜುನನು ಇಂದ್ರಕೀಲ ಪರ್ವತದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಶಿವನಿಂದ ಅರ್ಜುನನಿಗೆ ಪಾಶುಪತಾಸ್ತ್ರ ಪ್ರಾಪ್ತವಾಗುತ್ತದೆ. ಅಲ್ಲಿಂದ ಇವನು ಇಂದ್ರನ ಮೂಲಕ ಸ್ವರ್ಗಕ್ಕೆ ಒಯ್ಯಲ್ಪಟ್ಟು ಇಂದ್ರನಿಂದ ಅಮೂಲ್ಯವಾದ ಕಿರೀಟವನ್ನು ಪಡೆಯುತ್ತಾನೆ. ಈ ವಿಚಾರ ತಿಳಿಯದ ಧರ್ಮರಾಯನು ಅರ್ಜುನನ ಕುರಿತಾಗಿ ಚಿಂತಿಸುತ್ತಿರುವಾಗ ‘ಲೋಮಶ’ ಮುನಿಗಳು ಅಲ್ಲಿಗೆ ಬಂದು ಅರ್ಜುನನು ಸ್ವರ್ಗದಲ್ಲಿದ್ದ ವಿಚಾರವನ್ನೂ ತಿಳಿಸುವುದಲ್ಲದೆ ಧರ್ಮರಾಯನಿಗೆ ಅರಣ್ಯವಾಸ ಕಾಲದ ದುಃಖ ನೀಗುವುದಕ್ಕಾಗಿ ತೀರ್ಥಯಾತ್ರೆಯನ್ನು ಮಾಡಿಸುವುದಲ್ಲದೆ ನಳ ದಮಯಂತಿ ಮೊದಲಾದವರ ಪುಣ್ಯಕಥೆಗಳನ್ನು ಹೇಳುತ್ತಾರೆ. ‘ಲೋಮಶ’ರು ಶಿವನ ಕುರಿತು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಅವನೊಡನೆ ಬ್ರಹ್ಮನ ದಿನವೊಂದಕ್ಕೆ ನನ್ನ ದೇಹದ ಒಂದೊಂದು ರೋಮ ಉದುರಲಿ ದೇಹದ ಎಲ್ಲ ರೋಮಗಳೂ ಉದುರಿದ ಮೇಲೆಯೇ ನನಗೆ ಮರಣ ಬರಲಿ ಎಂದು ಬೇಡಿಕೊಂಡಾಗ ಶಿವನು ‘ತಥಾಸ್ತು’ ಎಂದನಂತೆ.

ಹೀಗೆ ಲೋಮಶರು ವ್ಯಾಸ ಮಹರ್ಷಿಯ ಆಪ್ತ ಶಿಷ್ಯನಾಗಿ ಇತಿಹಾಸ ಪುರಾಣ, ಧರ್ಮಶಾಸ್ತ್ರಗಳೆಲ್ಲದರಲ್ಲೂ ಪಾರಂಗತನಾಗಿ ದೀರ್ಘಾಯುಷ್ಯನಾಗಿ ಪುರಾಣ ಪುರುಷರತ್ನವೆನಿಸಿಕೊಂಡರು.

ವಿಜಯಾಸುಬ್ರಹ್ಮಣ್ಯ, ಕುಂಬಳೆ

6 Responses

  1. ಪುರಾಣ ಕಥೆ ಗಳನ್ನು… ಮತ್ತೆ ಮತ್ತೆ ನೆನಪಿಸುವಂತೆ ಬರೆಯುವ ನಿಮಗೆ.. ಧನ್ಯವಾದಗಳು ವಿಜಯಾ ಮೇಡಂ

  2. Vijayasubrahmanya says:

    ಧನ್ಯವಾದಗಳು. ಅಡ್ಮಿನ್ ಹೇಮಮಾಲ ಹಾಗೂ ಓದುಗರಿಗೆ.

  3. Anonymous says:

    ಧನ್ಯವಾದಗಳು ‌ತಂಗಿ, ನಾಗರತ್ನ.

  4. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿದೆ. ಇಂದಿನ ವಿದ್ಯಾರ್ಥಿಗಳ ಸ್ಥಿತಿ ಯನ್ನು ಉಲ್ಲೇಖಸಿರುವುದು ವಾಸ್ತವದ ಪರಿಚಯ.

  5. ಶಂಕರಿ ಶರ್ಮ says:

    ಉತ್ತಮ ಶಿಷ್ಯನೂ, ಮಹಾಜ್ಞಾನಿಯೂ ಆದ ಲೋಮಶನ ವೃತ್ತಾಂತ ಬಹಳ ಕುತೂಹಲಕರವಾಗಿದೆ.

  6. Padma Anand says:

    ಜ್ಞಾನಯಜ್ಞ. ಹೆಸರೇ ರೋಮಾಂಚನವನ್ನುಂಟುಮಾಡುತ್ತದೆ. ಅಪರೂಪದ, ಸೊಗಸಾದ ಪುರಾಣ ಕಥೆಗಳನ್ನು ಚಂದದ ನಿರೂಪರಣೆಯಲ್ಲಿ ಪರಿಚಯ ಮಾಡಿಕೊಡುತ್ತಿರುವ ನಿಮಗೆ ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: