ವಾಟ್ಸಾಪ್ ಕಥೆ 22 : ಮೂಢ ನಂಬಿಕೆ
ಒಂದು ರಾಜ್ಯದ ರಾಜಧಾನಿ. ಅಲ್ಲೊಬ್ಬ ರಾಜನಿದ್ದ. ಅವನು ಪ್ರತಿದಿನ ಮುಂಜಾನೆ ಸೂರ್ಯೋದಯವಾದ ಕೂಡಲೇ ಸೂರ್ಯದೇವನ ದರ್ಶನ ಮಾಡಿ ನಮಸ್ಕರಿಸಿ ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಅವನಿಗೆ ಮಾನಸಿಕವಾಗಿ ಇದರಿಂದ ಆತ್ಮವಿಶ್ವಾಸ ಉಂಟಾಗುತ್ತಿತ್ತು. ಉತ್ಸಾಹ ಹುಟ್ಟುತ್ತಿತ್ತು. ಅವನು ಸೂರ್ಯದೇವನ ದರ್ಶನ ತನಗೆ ಒಳ್ಳೆಯ ಶಕುನವೆಂದು ಭಾವಿಸಿ ಅದನ್ನೇ ಬಲವಾಗಿ ನಂಬಿದ್ದ. ಅವನ ನಂಬಿಕೆಯಂತೆ ಒಳ್ಳೆಯದೇ ಆಗುತ್ತಿತ್ತು.
ಒಂದು ದಿನ ಎಂದಿನಂತೆ ಸೂರ್ಯದರ್ಶನಕ್ಕಾಗಿ ಬಿಸಿಲು ಮಹಡಿಯನ್ನೇರಿ ಬಂದ. ಅಷ್ಟುಹೊತ್ತಿಗೆ ಸರಿಯಾಗಿ ಭಿಕ್ಷುಕನೊಬ್ಬ ಅರಮನೆಯ ಮುಂಬಾಗಿಲ ಬಳಿ ಬೇಡಲು ಬಂದು ನಿಂತ. ರಾಜನ ದೃಷ್ಟಿ ಮೊದಲು ಭಿಕ್ಷುಕನ ಮೇಲೆ ಬಿತ್ತು. ನಂತರ ಸುರ್ಯದೇವನಿಗೆ ನಮಸ್ಕರಿಸಿ ಒಳನಡೆದ. ಬಾಗಿಲ ಹೊಸ್ತಿಲು ಎತ್ತರವಾಗಿದ್ದು ರಾಜನ ಕಾಲು ತಾಕಿತು. ಎಡವಿದ್ದರಿಂದ ರಾಜನು ಆಯತಪ್ಪಿ ನೆಲದಮೇಲೆ ಬಿದ್ದ. ಹಣೆಗೆ ಪೆಟ್ಟಾಯಿತು. ರಕ್ತವೂ ಬಂತು. ಕೂಡಲೇ ಸೇವಕರು ಓಡಿಬಂದರು. ರಾಜನಿಗೆ ನೆರವಾದರು. ರಾಜವೈದ್ಯರು ಪರೀಕ್ಷಿಸಿ ಗಾಯಕ್ಕೆ ಪಟ್ಟಿಯೊಂದನ್ನು ಕಟ್ಟಿದರು.
ರಾಜನ ಮನಸ್ಸಿನಲ್ಲಿ ತಾನು ಬೆಳಗ್ಗೆ ಸೂರ್ಯದರ್ಶನಕ್ಕಿಂತ ಮೊದಲು ಭಿಕ್ಷುಕನ ಮುಖ ನೋಡಿದ್ದರಿಂದಲೇ ಈ ಅನರ್ಥ ಸಂಭವಿಸಿತು ಎಂಬ ಮೂಢ ನಂಬಿಕೆ ಬೇರೂರಿತು. ಕೂಡಲೇ ಸೇವಕರನ್ನು ಕಳುಹಿಸಿ ಬೆಳಗ್ಗೆ ಅರಮನೆಯ ಮುಂಬಾಗಿಲಿಗೆ ಬಂದಿದ್ದ ಭಿಕ್ಷುಕನನ್ನು ಹುಡುಕಿ ಕರೆಸಿದ. ಅವನನ್ನು ಕುರಿತು ‘ಏ ಕೆಟ್ಟ ಮುಖದವನೇ, ಮುಂಜಾನೆ ಮೊದಲಿಗೆ ನಿನ್ನ ಮುಖದರ್ಶನ ಮಾಡಿದ್ದರಿಂದ ನನಗೆ ಕೇಡುಂಟಾಯಿತು. ಆದ್ದರಿಂದ ನೀನು ದುರದೃಷ್ಟ ತರುವವನು. ನೀನು ಇರಬಾರದು. ಏಕೆಂದರೆ ಯಾರು ನಿನ್ನನ್ನು ದಿನದಾರಂಭದಲ್ಲಿ ಮೊಟ್ಟಮೊದಲು ನೋಡುತ್ತಾರೆಯೋ ಅವರಿಗೆ ಕೆಡುಕುಂಟಾಗುತ್ತದೆ. ಆದ್ದರಿಂದ ನಾನು ನಿನಗೆ ಗಲ್ಲುಶಿಕ್ಷೆಯನ್ನು ಆದೇಶಿಸಿದ್ದೇನೆ’ ಎಂದು ಅವನನ್ನು ಭಟರಿಗೆ ಒಪ್ಪಿಸಿದನು. ಅವರು ಅವನನ್ನು ಕರೆದೊಯ್ಯಲು ಸಿದ್ಧರಾದರು. ಆಗ ಭಿಕ್ಷುಕನು ಜೋರಾಗಿ ಗಹಗಹಿಸಿ ನಗತೊಡಗಿದ. ಅವನ ವರ್ತನೆಯನ್ನು ನೋಡಿ ರಾಜನಿಗೆ ಆಶ್ಚರ್ಯವಾಯಿತು. ‘ನೀನು ಸಾಯುತ್ತೀಯೆಂದು ತಿಳಿದರೂ ನಗುತ್ತಿದ್ದೀಯಲ್ಲ ಏಕೆ?’ ಎಂದು ರಾಜನು ಪ್ರಶ್ನಿಸಿದನು.
ಆ ಭಿಕ್ಷುಕನು ”ಮಹಾಸ್ವಾಮಿ, ನೀವೇನೋ ಮೊದಲಿಗೆ ನನ್ನ ಕೆಟ್ಟ ಮುಖದರ್ಶನ ಮಾಡಿದ್ದರಿಂದ ಹೊಸ್ತಿಲು ಎಡವಿಬಿದ್ದು ಗಾಯವಾಯಿತು. ಆದರೆ ನನ್ನ ಅದೃಷ್ಟಕ್ಕೆ ಏನೆನ್ನಬೇಕು. ನಾನು ಈದಿನ ಬೆಳಗ್ಗೆ ಮೊದಲು ನೋಡಿದ್ದೇ ತಮ್ಮ ಮುಖವನ್ನು. ಅದರಿಂದ ನನಗೆ ಮರಣದಂಡನೆ ಶಿಕ್ಷೆ ದೊರೆಯಿತು. ಅಂದ ಮೇಲೇ ತಮ್ಮ ಮುಖದರ್ಶನ ಎಷ್ಟು ಅದೃಷ್ಟದ್ದು” ಎಂದು ನೆನೆಸಿಕೊಂಡು ನಗು ಬಂದಿತು ಎಂದು ಭಟರೊಡನೆ ಹೊರಡಲು ಸಿದ್ಧವಾದ.
ಕೂಡಲೇ ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಮುಖದರ್ಶನದಿಂದ ಕೇಡುಂಟಾಗುತ್ತದೆ ಎಂಬುದು ತನ್ನ ಮೂಢನಂಬಿಕೆ ಎಂಬುದು ಅರ್ಥವಾಯಿತು. ಕೂಡಲೇ ಭಿಕ್ಷುಕನಿಗೆ ಆದೇಶಿಸಿದ್ದ ಗಲ್ಲುಶಿಕ್ಷೆಯನ್ನು ವಜಾಮಾಡಿದ. ಹಾಗೂ ಭಿಕ್ಷುಕನಿಗೆ ತನ್ನ ಕಣ್ಣು ತೆರೆಸಿದ್ದಕ್ಕಾಗಿ ಬಹುಮಾನ ಕೊಟ್ಟು ಕಳುಹಿಸಿದ.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಮೂಢನಂಬಿಕೆಯ ಬಗ್ಗೆ ಕಣ್ತೆರೆಸುವ ಸೊಗಸಾದ ಕತೆ.
ತುಂಬಾ ಚೆನ್ನಾಗಿದೆ. ನಾವನಂದುಕೊಂಡಂತೆಯೇ ಉಳಿದವರೂ ಅಂದುಕೊಳ್ಳಬಹುದಲ್ಲ, ಅದಕ್ಕಿಂತ ಇನ್ನೂ ಕೆಟ್ಟದಾಗಿಯೂ ಅಂದುಕೊಳ್ಳಬಹುದು ಅನ್ನುವ ಪರಿಜ್ಞಾನ ಎಲ್ಲರಲ್ಲೂ ಇರಬೇಕು. ಒಳ್ಳೆಯ ಸಂದೇಶ.
ಧನ್ಯವಾದಗಳು ಹೃಮಾ ಹಾಗೂ ನಯನಾ ಮೇಡಂ
ಇಷ್ಟು ಸರಳವಾಗಿ ಎಷ್ಟು ಉನ್ನತವಾದ ಸಂದೇಶವನ್ನು ಮನಕ್ಕೆ ಮುಟ್ಟಿಸಿತಲ್ಲ ಈ ಚಿಕ್ಕ ಕಥೆ! ಅಭಿನಂದನೆಗಳು.
ಎಂದಿನಂತೆ ಸೊಗಸಾದ ಸೂಕ್ತ ರೇಖಾಚಿತ್ರದೊಂದಿಗೆ ಕಣ್ತೆರೆಸುವ ಉತ್ತಮ ಸಂದೇಶಯುಕ್ತ ಕಥೆ.
ಉತ್ತಮವಾದ ಸಂದೇಶವುಳ್ಳ ಕಥೆ
ಧನ್ಯವಾದಗಳು ಪದ್ಮಾ ಮೇಡಂ ಹಾಗೂ ಶಂಕರಿ ಮೇಡಂ