ಭೂಮಿಯ ಸ್ವತ್ತು..

Share Button


ಪುಟ್ಟ ಹಳ್ಳಿಯಲೊಂದು ಇಪ್ಪತ್ತು ಮಕ್ಕಳಿರುವ ಪುಟ್ಟ ಶಾಲೆ.  ಈ ಶಾಲೆಯಲ್ಲಿ ಒಬ್ಬರು ಲಕ್ಷ್ಮಿ ಎನ್ನುವ ಶಿಕ್ಷಕಿ ಪರಿಸರದ ಬಗ್ಗೆ ಅತೀವ ಕಾಳಜಿಯಿಂದ ಮಕ್ಕಳಿಗೆ ಪಾಠ ಬೋಧಿಸುತ್ತಿದ್ದರು. ಅದಕ್ಕೆ ತಕ್ಕಹಾಗೆ ಎಲ್ಲೆಲ್ಲಿಂದನೊ ತಂದು ಮರಗಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದರು. ಹಾಗೇ ತಾವೇ ನಿಂತು ನೀರುಹಾಕುತ್ತಿದ್ದರು.  ಬಿಡುವು ಸಿಕ್ಕಾಗೆಲ್ಲ ಪರಿಸರ ಗೀತೆ,ಕಥೆಗಳನ್ನು ಹೇಳಿ ಮಕ್ಕಳಿಗೆ ಪರಿಸರದ ಬಗ್ಗೆ ಅರಿವನ್ನೂ ಮೂಡಿಸುತ್ತಿದ್ದರು.

ಹೀಗೆ ಒಂದು ದಿನ ಮಕ್ಕಳೆಲ್ಲ ಲಕ್ಷ್ಮಿಗೆ ಕಥೆ ಹೇಳಲು ಪೀಡಿಸಿದರು. ಆಯ್ತು ಹೇಳುವೆ ಎಂದು ಕಥೆ ಪ್ರಾರಂಭ ಮಾಡಿದರು.
“ಬನ್ನಿ ನಾವೆಲ್ಲಾ ನಮ್ಮ ಶಾಲೆಯಲ್ಲಿರುವ ನೇರಳೇ ಮರದ ಕೆಳಗೆ ಕುಳಿತು,ಆರಾಮವಾಗಿ ಗಾಳಿತೆಗೆದುಕೊಳ್ಳುತ್ತಾ ಕಥೆ ಕೇಳುವಾ ” ಎಂದು ಮರದ ನೆರಳಿಗೆ ಕರೆದೊಯ್ದು ಕುಳ್ಳಿರಿಸಿದರು. 

“ಸರಿ ಮಕ್ಕಳೇ, ಜೂನ್ 5 ರಂದು ಪರಿಸರ ದಿನಾಚರಣೆಯನ್ನು ಆಚರಿಸಲು ನಾವು ಸಿದ್ಧತೆ ಮಾಡಿಕೊಳ್ಳಬೇಕಿದೆ.   ನಾವ್ಯಾಕೆ ಈ ದಿನ ಪರಿಸರದ  ದೇವತೆಯಾದ ಈ ಮರಗಳ ಬಗ್ಗೆ ಕಥೆ ಕೇಳಬಾರದು. ಇವತ್ತು ನಮ್ಮ ಭೂಮಿಯನ್ನು ಕಾಪಾಡುತ್ತಿರುವ ಈ ಮರಗಳ ಬಗ್ಗೆಯೇ ಕಥೆ ಕೇಳೋಣ”. 

“ಆದರೆ ಒಂದು ಬದಲಾವಣೆ.  ಆ ಕಥೆಯನ್ನು ನಾವೇ ಅನುಭವಿಸಿ ತಿಳಿಯೋಣ, ಸರಿನಾ ” ಎಂದು ಪಾತ್ರಹಂಚಿಕೆ ಮಾಡುತ್ತಾರೆ. ಇವರ ಪಾಠವೇ ಹಾಗೇ ಏನನ್ನೇ ಕಲಿಸಿದರು ಅದು ವಿಶೇಷವಾಗಿರುತ್ತಿತ್ತು ಮತ್ತು ಬೇಗ ಅರ್ಥವಾಗುತ್ತಿತ್ತು. 

“ನಮ್ಮ ಶಾಲೆಯಲ್ಲಿ ನಾವು ಎಷ್ಟೆಲ್ಲಾ ಮರ ಬೆಳೆದಿದ್ದೇವೆ. ಅದರಲ್ಲಿ ತುಂಬಾ ವಿಶಾಲವಾಗಿ ಬೆಳೆದ ಈ ನೇರಲೆ ಮರ ನೋಡಿ. ಇದು ಏನು ಹೇಳುತ್ತೆ ಎಂದರೆ….ಹು…ಏ… ಸಿದ್ಧ ಬಾ ಇಲ್ಲಿ . ನೀನು ನೋಡೋಕೆ ಉದ್ದವಾಗಿರುವೆ , ನೀನು ನೇರಳೆ ಮರವಾಗು. ಪವನ ನೀನು ಗಟ್ಟಿಯಾಗಿರುವೆ ಕಾಂಡವಾಗು, ಕಾವ್ಯ ನೀ  ಕೊಂಬೆಗಳಾಗು, ನಂದಿತ ನೀನು ಎಲೆಗಳಾಗು, ಮೋನಿಕ ನೀನು ಹೂವಾಗು, ರಾಹುಲ್ ನೀನು ಇದರ ಹಣ್ಣಾಗು. ಹೂಂ……ಇದರ ಬೇರು ಯಾರಾಗುವಿರಿ ? ,,,, ‘ ಮಿಸ್ ನಾನಾಗುವೆ ‘ಎಂದು ಭೈರ  ಕೈ ಎತ್ತಿದ.

”ಸರಿ ನೀವೆಲ್ಲಾ ಈಗ ಒಂದು ಮರ ಮತ್ತು ಅದರ ಭಾಗಗಳು ಎಂದು ಭಾವಿಸಿ. ಈಗ ಒಬ್ಬೊಬ್ಬರಾಗಿ ಬಂದು ನಿಮ್ಮ ಕಾರ್ಯವನ್ನು ಹೇಳಬೇಕು” ಎಂದು ಅವರಿಗೆ ಮನವರಿಕೆ ಮಾಡಿದರು.

ಸಾಮಾನ್ಯವಾಗಿ ಗಿಡ- ಮರದ ಭಾಗದ ಕಾರ್ಯವನ್ನು  ಅವರಿಗೆ ತಿಳಿದಂತೆ ಅವರ ಭಾಷೆಗಳಲ್ಲಿ ಹೇಳಿ ಮುಗಿಸಿದರು.
ಲಕ್ಷ್ಮಿ ಚಪ್ಪಾಳೆಹೊಡೆಯುತ್ತಾ ಹೇಳಿದಳು. “ನೀವು ಇನ್ನೂ ಕೆಲವು ಅಂಶಗಳನ್ನು ಬಿಟ್ಟಿರುವಿರಿ. ಅದೇನೆಂದರೆ  ಎಲ್ಲಾ ಮರಗಳ ಬೇರೂ ನೆಲದ ಮಣ್ಣನ್ನು ಭದ್ರವಾಗಿ ಹಿಡಿದಿಡುತ್ತದೆ, ಮಣ್ಣು ಸಡಿಲವಾಗದಂತೆ, ಮೇಲ್ಮಣ್ಣು ಸವಕಲಾಗದಂತೆ ಕಾಪಾಡುತ್ತದೆ. ಬೇರುಗಳು ಭೂಮಿಯ ಆಳಕ್ಕಿಳಿದು ಸಾಕಷ್ಟು ದೂರದವರೆಗೆ ಮಣ್ಣನ್ನು ಹಿಡಿದಿಡುವುದರಿಂದ ಭೂಕುಸಿತ, ಭೂಕಂಪ ಆಗುವುದನ್ನು ತಪ್ಪಿಸಬಹುದು.  ಹಾಗೆ ಮರಗಳನ್ನು ಹೆಚ್ಚು ಬೆಳೆದಷ್ಟು ಮಳೆ ಚೆನ್ನಾಗಿ ಬಂದು ಭೂಮಿಯಲ್ಲಿ ಬೆಳೆಗೆ ಸಹಾಯ ಮಾಡುತ್ತವೆ.

ನಮ್ಮ ಶಾಲೆಯ ಆವರಣದಲ್ಲಿ ಇರುವ ಬೇವು, ನೇರಳೆ, ನುಗ್ಗೆ, ಸೀಬೆ, ದಾಳಿಂಬೆ ಈ ರೀತಿಯ ಮರದ ಎಲೆ, ಕಾಂಡ, ಹೂ, ಕಾಯಿ, ಹಣ್ಣು ಇವೆಲ್ಲವೂ ಔಷಧಿಯಾಗಿ ಬಳಕೆಗೆ ಬರುವಂತ ಮರಗಳು. ಹಾಗೆ ಇಲ್ಲಿರುವ ಸಾಕಷ್ಟು ಗಿಡಗಳು ಸಹಾ ಔಷಧೀಯ ಸಸ್ಯಗಳು. ಮಕ್ಕಳೇ ಈ ನೆಲ ಏನಾದರೂ ಬದುಕಿದೆ ಅಂದರೆ ಅದು ಈ ಮರಗಳಿಂದ ಮಾತ್ರ. ಈ ಮರಗಿಡಗಳು ನಮಗೆ ಸಾಕಷ್ಟು ಆಮ್ಲಜನಕವನ್ನು ಬಿಡುಗಡೆಮಾಡಿ ನಮ್ಮ ಉಸಿರಾಟಕ್ಕೆ ಸಹಾಯ ಮಾಡಿವೆ. ಈ ಮರಗಳಿಲ್ಲವೆಂದರೆ ನಮ್ಮ ಉಸಿರಾಟನಿಂತುಹೋಗುತ್ತಿತ್ತು. ಮರಗಳು ಪರರ ಉಪಕಾರಕ್ಕೆ ಬದುಕಿವೆ. ಅವು ನಮಗೆ ಆಹಾರ,ಔಷಧಿ,ಆಶ್ರಯ, ಉರುವಲು, ಗಾಳಿ, ಹೀಗೆ ತಮ್ಮ ಜೀವವನ್ನೇ ನಮಗಾಗಿ ಧಾರೆಯೆರೆಯುತ್ತವೆ”.

“ಆದರೆ ಅವಕ್ಕಾಗಿ ನಾವು ಏನು ಕೊಡುತ್ತಿದ್ದೇವೆ…..?”   (ಶಿಕ್ಷಕಿ ಸ್ವಲ್ಪ ಹೊತ್ತು ಭಾವುಕರಾದರು)……”ನಮಗೆ ಆದರೆ ಕೆಲವೊಮ್ಮೆ ನೀರು ಕೊಡುತ್ತೇವೆ. ಅಷ್ಟೇ.

“ನಮಗಾಗಿ ಬದುಕಿರುವ ಈ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಎಲ್ಲರೂ ಕತ್ತರಿಸಿ ಬಿಸಾಡುತ್ತಾರೆ. ಸರೀನಾ.  ಮನೆಕಟ್ಟಿ ವಾಸಮಾಡಲು ಜಾಗವಿಲ್ಲ ಅಂತ ಅರಣ್ಯ ಪ್ರದೇಶದಲ್ಲಿರುವ ಮರಗಳನ್ನು ಕಡಿದು ಮನೆಕಟ್ಟುತ್ತಾ ಹೋದರೆ ನಾಳೆ ಯಾರು ನಮಗೆ ಆಮ್ಲಜನಕ ಕೊಡವವರು?

ಹಾಗೆ, ಈ ಮರಗಳಿಂದ ಬಿದ್ದ ಎಲೆಗಳನ್ನು. ಕಸ ಎಂದು ಒಂದು ಕಡೆ ಗುಡ್ಡೆ ಹಾಕಿ ಸುಡುವುದು, ಇದರಿಂದ ಎಲೆಗಳಿಂದ ಉತ್ಪತ್ತಿಯಾಗುವ ಸಾವಯವ ಗೊಬ್ಬರದ ನಾಶವಾಗುತ್ತದೆ ಜೊತೆಗೆ ಮೇಲ್ಪದರದ ಗುಣಮಟ್ಟದ ಮಣ್ಣು ಸುಟ್ಟ ಅದರ ಸತ್ವವೂ ನಾಶವಾಗುತ್ತದೆ. ಎಷ್ಟೋ ಕಡೆ ಒಣಗಿದ ಕಟ್ಟಿಗೆ, ತರಗೆಲೆ ಹೀಗೆ ಎಕರೆಗಟ್ಟಲೆ ಸುಟ್ಟು ಹಾಕುತ್ತಾರೆ. ಹೀಗೆ ಮಾಡುವ ಬದಲು ಅಲ್ಲಿಯೇ ಬಿಟ್ಟರೆ ಕೊಳೆತು ಗೊಬ್ಬರವಾಗುತ್ತದೆ. ಎರೆಹುಳುಗಳು ಜಾಸ್ತಿಯಾಗಿ ಒಳ್ಳೆಯ ಫಸಲು ಕೊಡುವ ಮಣ್ಣು ನಮ್ಮದಾಗುತ್ತದೆ.  ಈ ಮರ ಎಂದೆಂದೂ ಈ ಭೂಮಿಯ ಸ್ವತ್ತು. ಈ ಭೂಮಿ ನೆಮ್ಮದಿಯಾಗಿ ಬಾಳಲು ಗಿಡ ಮರಗಳು ತುಂಬಾ ಅವಶ್ಯಕತೆ ಇದೆ. ಏನಂತಿರಾ ಮಕ್ಕಳ?  ಇನ್ನು ಮುಂದೆ ಇಂತಹ ಅಂಶಗಳನ್ನು ನೆನಪಿಟ್ಟುಕೊಂಡು ಪರಿಸರದ ಕಾಳಜಿ ವಹಿಸುವಿರಿ ತಾನೆ ” ….?

ಮರ-ನೆಲದ ಕಥೆಯನ್ನು ಮುಗಿಸಿದ ಶಿಕ್ಷಕಿಯ ಮುಖ ನೋಡುತ್ತಾ ಮಕ್ಕಳೆಲ್ಲಾ ಒಕ್ಕೊರಲಿನಿಂದ ಕೂಗಿದರು….  “ಖಂಡಿತಾ ಮಿಸ್. ನಿಮ್ಮ ಮಾತುಗಳನ್ನು ನಾವು ಯಾವಾಗಲೂ ಪಾಲಿಸುತ್ತೇವೆ. ಹಾಗೆ ಮಾತುಕೊಡುತ್ತೇವೆ “ಎಂದು ಕೈ ಚಾಚಿದರು.  ಚಾಚಿದ ಕೈಗಳನ್ನು ಹಿಡಿಯುತ್ತ ಭರವಸೆಯ ನೋಟದಿಂದ ತರಗತಿಯ ಒಳಗೆ ನಡೆದರು.

ತಂಗಾಳಿ ಸೂಸುತ್ತಿದ್ದ ನೇರಳೆಮರವು ಅತ್ಯಂತ ಆನಂದದಿಂದ ತಲೆದೂಗುತ್ತಿತ್ತು.

-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

2 Responses

  1. Hema says:

    ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಸೊಗಸಾದ ಕತೆ.

  2. ಶಂಕರಿ ಶರ್ಮ says:

    ಪರಿಸರ ದಿನದಂದು ಮಾತ್ರ ಗಿಡ ನೆಟ್ಟು ಫೋಟೋ ತೆಗೆಸಿಕೊಳ್ಳುವ ಮಂದಿಗೆ ಸವಲೊಡ್ಡುವಂತೆ ಶಿಕ್ಷಕಿಯು ತನ್ನ ವಿದ್ಯಾರ್ಥಿಗಳಿಗೆ ಪರಿಸರದ ಅರಿವನ್ನು ಮೂಡಿಸಿದ ರೀತಿ ಅನುಕರಣೀಯ. ಉತ್ತಮ ಸಂದೇಶ ಹೊತ್ತ ಕಥೆ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: