ವಾಟ್ಸಾಪ್ ಕಥೆ 21:ಮೂರ್ಖರಿಗೆ ಬುದ್ಧಿವಾದ
ಒಂದು ಮರದಲ್ಲಿ ಅನೇಕ ಪಕ್ಷಿಗಳು ವಾಸವಾಗಿದ್ದವು. ಅವುಗಳಲ್ಲಿ ಒಂದು ಗೀಜಗನ ಹಕ್ಕಿಯೂ ಇತ್ತು. ಅದು ಗೂಡು ಕಟ್ಟುವುದರಲ್ಲಿ ನಿಷ್ಣಾತನೆನ್ನಿಸಿಕೊಂಡಿತ್ತು. ಕೊಂಬೆಯಿಂದ ನೇತಾಡುತ್ತ ಸುಂದರವಾದ ಜೋಕಾಲಿಯಂತೆ ಭಧ್ರವಾದ ಗೂಡನ್ನು ಕಟ್ಟಿ ಅದರಲ್ಲಿ ತನ್ನ ಮೊಟ್ಟೆಗಳನ್ನಿಟ್ಟು ಕಾವು ಕೊಡುತ್ತಿತ್ತು. ಅಲ್ಲಿಗೆ ಒಂದು ಮಂಗ ಆಗಾಗ್ಗೆ ಬರುತ್ತಿತ್ತು. ಅದು ಆ ಕೊಂಬೆಯಿಂದ ಈ ಕೊಂಬೆಗೆ ನೆಗೆಯುತ್ತ ಆಟವಾಡಿ ಹೋಗುತ್ತಿತ್ತು. ಮಳೆಗಾಲ ಬಂದಾಗ ಮಂಗನಿಗೆ ಆಶ್ರಯವಿರಲಿಲ್ಲ. ಅದು ಸಮೀಪದಲ್ಲಿದ್ದ ಯಾವುದೋ ಹಳೆಯ ಮನೆಯಲ್ಲೋ, ಹಾಳುಬಿದ್ದ ಮಂಟಪದಲ್ಲೋ. ಕಛೇರಿಗಳ ಮುಂದಿದ್ದ ವೆರಾಂಡಾದ ಮೂಲೆಗಳಲ್ಲೋ ಮುದುಡಿ ಕುಳಿತು ಆಶ್ರಯ ಪಡೆಯುತ್ತಿತ್ತು.
ಮಂಗನ ಪರದಾಟವನ್ನು ಕಂಡ ಗೀಜಗನ ಹಕ್ಕಿ ”ಮಂಗಣ್ಣಾ ನೀನು ನಮಗಿಂತಲೂ ಬುದ್ಧಿವಂತ. ನೀನೇಕೆ ಹೀಗೆ ಆಶ್ರಯಕ್ಕಾಗಿ ಒದ್ದಾಡಬೇಕು. ನಿನ್ನದೇ ಒಂದು ಗೂಡನ್ನು ಏಕೆ ಕಟ್ಟಿಕೊಳ್ಳಬಾರದು” ಎಂದು ತನಗೆ ತಿಳಿದ ಬುದ್ಧಿಮಾತುಗಳನ್ನು ಹೇಳಿತು. ಮಂಗನಿಗೆ ಅದರ ಮಾತುಗಳು ಹಿಡಿಸಲಿಲ್ಲ. ಅದು ಒಂದು ಕ್ಷಣ ಸುಮ್ಮನೆ ಕುಳಿತಿತ್ತು. ನಂತರ ”ಒಹೋ ನೀನೇ ಬಹಳ ಬುದ್ಧಿವಂತನೆಂದು ನಿನಗೆ ಜಂಬ. ನೋಡು ನಾನೇನು ಮಾಡುತ್ತೇನೆ” ಎಂದು ಗೀಜಗನ ಗೂಡಿನೊಳಕ್ಕೆ ಕೈಹಾಕಿ ಅದರ ಮೊಟ್ಟೆಗಳನ್ನು, ಪುಟ್ಟ ಮರಿಗಳನ್ನು ತೆಗೆದು ಹೊರಕ್ಕೆಸೆಯಿತು. ಅಷ್ಟೇ ಅಲ್ಲದೆ ಗೀಜಗನ ಗೂಡನ್ನು ಕಿತ್ತು ಚಿಲ್ಲಾಪಿಲ್ಲಿಯಾಗಿ ಎಸೆಯಿತು. ಸಿಟ್ಟಿನಿಂದ ಅಲ್ಲಿಂದ ಓಡಿಹೋಯಿತು. ಗೀಜಗನ ಹಕ್ಕಿಗೆ ತುಂಬ ದುಃಖವಾಯಿತು. ತಲೆಹರಟೆ ಮಂಗನಿಗೆ ಬುದ್ಧಿ ಹೇಳಲು ಹೋಗಿ ನನ್ನ ಗೂಡು ಮತ್ತು ಮರಿಗಳನ್ನು ಕಳೆದುಕೊಂಡೆನಲ್ಲಾ ಎಂದು ವ್ಯಥೆ ಪಟ್ಟಿತು.
ಇದನ್ನೆಲ್ಲ ನೋಡುತ್ತಿದ್ದ ಗಿಳಿಯೊಂದು ಹತ್ತಿರ ಬಂದು ಗೀಜಗನ ಹಕ್ಕಿಗೆ ಸಮಾಧಾನ ಮಾಡಿತು. ‘‘ದುಃಖಿಸಬೇಡ ಗೀಜಗವೇ, ಮೂರ್ಖರಿಗೆ ಬುದ್ಧಿ ಹೇಳಲು ಹೋಗಬಾರದು” ಎಂದು ಬುದ್ಧಿ ಹೇಳಿತು.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಚೆನ್ನಾಗಿದೆ
ಧನ್ಯವಾದಗಳು ನಯನ ಮೇಡಂ
ಸುಂದರ ಸಂದೇಶ ಹೊತ್ತ ಚಂದದ ಕಥನ.
ಧನ್ಯವಾದಗಳು ಪದ್ಮಾ ಮೇಡಂ
ಎಂದಿನಂತೆ ಸೊಗಸಾದ ಸೂಕ್ತ ಚಿತ್ರದೊಂದಿಗೆ ಸಂದೇಶಯುಕ್ತ ಕಥೆ.