ದೇವತೆಗಳ ತವರೂರು ಉನ್ನಕೋಟಿ
ಉನ್ನಕೋಟಿಯು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಊರು – ಸುತ್ತ ಇರುವ ಬೆಟ್ಟ ಗುಡ್ಡಗಳ ಸಾಲು, ಉಕ್ಕಿ ಹರಿಯುವ ಹಳ್ಳಕೊಳ್ಳಗಳು, ಬೆಟ್ಟಗುಡ್ಡಗಳ ಮೇಲೆಲ್ಲಾ ಹಚ್ಚ ಹಸಿರು ಮರಗಿಡಗಳು, ಉಲಿಯುವ ಹಕ್ಕಿಗಳು ಎಲ್ಲರನ್ನೂ ಮರುಳು ಮಾಡುವುದು. ಈ ಬಂಡೆಗಳ ಮೇಲೆ ದೇವಾನುದೇವತೆಗಳನ್ನು ಕೆತ್ತಿದ ಶಿಲ್ಪಿಗಳು ಯಾರು? ಎಲ್ಲಿಂದ ಬಂದವರು? ಶಿಲ್ಪಗಳನ್ನು ರಚಿಸಿದ ಕಾಲಮಾನ ಯಾವುದು? ಈ ಯಕ್ಷಪ್ರಶ್ನೆಗಳಿಗೆ ಉತ್ತರ ಹುಡುಕೋಣ ಬನ್ನಿ.
ತ್ರಿಪುರಾದ ರಾಜಧಾನಿಯಾದ ಅಗರ್‌ತಲಾದಿಂದ 178 ಕಿ.ಮೀ. ದುರದಲ್ಲಿರುವ ರಘುನಂದನ ಬೆಟ್ಟಗಳ ಮಧ್ಯೆ ಅರಳಿನಿಂತಿರುವುದು ಈ ಶಿವಾಲಯ. ಈ ಶಿವನ ದೇಗುಲಕ್ಕೆ ಗಗನವೇ ಮೇಲ್ಛಾವಣಿ, ಸುತ್ತಲಿರುವ ಗಿಡಮರಗಳೇ ಪುಷ್ಪಾಲಂಕಾರ, ಸುಳಿಯುತ್ತಿರುವ ಮಾರುತವೇ ಮಂತ್ರಘೋಷ, ಸುತ್ತಲಿನ ಬೆಟ್ಟಗುಡ್ಡಗಳಿಂದ ಹರಿಯುತ್ತಿರುವ ಗಂಗೆಯೇ ರುದ್ರಾಭಿಷೇಕ ಮಾಡುತ್ತಿರುವಳು. ಈ ಬಯಲು ದೇಗುಲದ ಸುತ್ತ ಅಂಕುಡೊಂಕಾಗಿ ಸುತ್ತಿಸುಳಿಯುವ ಮೆಟ್ಟಿಲುಗಳೇ ನಾಗಾಭರಣಗಳು. ಉನ್ನಕೋಟಿಯೆಂಬ ಹೆಸರು ಹೊತ್ತ, ಈ ಸ್ಥಳದ ವೈಶಿಷ್ಟ್ಯವಾದರೂ ಏನು? ಒಂದು ಕೋಟಿಗೆ ಒಂದು ಸಂಖ್ಯೆ ಕಡಿಮೆಯಿರುವ ಅಂದರೆ 99,99,999 ದೇವತೆಗಳ ಮೂರ್ತಿಗಳಿರುವ ಸ್ಥಳ. ಈ ಸ್ಥಳದ ಪೌರಾಣಿಕ ಹಿನ್ನೆಲೆ ಕೇಳೋಣ ಬನ್ನಿ. ಒಮ್ಮೆ ಲೋಕ ಸಂಚಾರ ಹೊರಟಿದ್ದ ಪರಶಿವನ ಹಿಂದೆ ದೇವಾನುದೇವತೆಗಳ ತಂಡ ಹೊರಟಿತ್ತು. ಕೈಲಾಸಕ್ಕೆ ಹಿಂತಿರುಗುವ ವೇಳೆ, ದೇವತೆಗಳು ಈ ರಮಣೀಯವಾದ ಪ್ರದೇಶವನ್ನು ಕಂಡು, ಶಿವನ ಒಪ್ಪಿಗೆ ಪಡೆದು, ಇಲ್ಲಿ ಒಂದು ದಿನ ತಂಗಿದ್ದರು. ಮರುದಿನ ಮುಂಜಾನೆ ಸೂರ್ಯೋದಯವಾಗುವುದರೊಳಗೇ ಅಲ್ಲಿಂದ ಹೊರಡಬೇಕೆಂದು ಶಿವ ತನ್ನ ಸಹಚರರಿಗೆ ಆದೇಶ ನೀಡಿದ್ದನು. ಆದರೆ ರಮ್ಯವಾದ ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಮಲಗಿದ್ದ ದೇವತೆಗಳಿಗೆ ಮುಂಜಾನೆ ಎಚ್ಚರವಾಗಲಿಲ್ಲ. ಇದರಿಂದ ಕುಪಿತಗೊಂಡ ಶಿವನು – ನೀವೆಲ್ಲಾ ಕಲ್ಲಾಗಿರಿ ಎಂದು ದೇವತೆಗಳಿಗೆ ಶಾಪವಿತ್ತು ಅಲ್ಲಿಂದ ಹೊರಟುಬಿಟ್ಟನು. ಶಿವನ ಶಾಪದಿಂದ ಕಲ್ಲಾದ ದೇವತೆಗಳ ಶಿಲ್ಪಗಳಿವು. ತಮ್ಮ ಕರ್ತವ್ಯವನ್ನು ಮರೆತು ನಿಂತ ದೇವತೆಗಳ ಪಾಡಿದು.
ಮತ್ತೊಂದು ಪೌರಾಣಿಕ ಕಥೆ ಕೇಳೋಣ ಬನ್ನಿ – ಆ ಊರಿನಲ್ಲಿ ‘ಕಲ್ಲು’ ಎಂಬ ಶಿಲ್ಪಿ ವಾಸಿಸುತ್ತಿದ್ದ. ಅವನು ದೇವಿ ಪಾರ್ವತಿಯ ಪರಮಭಕ್ತ. ತನ್ನನ್ನೂ ಕೈಲಾಸಕ್ಕೆ ಕರೆದೊಯ್ಯಿರಿ ಎಂದು ಶಿವ ಪಾರ್ವತಿಯರ ಬಳಿ ಬೇಡಿಕೊಳ್ಳುತ್ತಾನೆ. ಆಗ ಶಿವನು -” ನೀನು ಒಂದು ರಾತ್ರಿಯಲ್ಲಿ ಒಂದು ಕೋಟಿ ಶಿಲ್ಪಗಳನ್ನು ಕೆತ್ತಿದರೆ ಮಾತ್ರ ಕೈಲಾಸಕ್ಕೆ ಕರೆದೊಯ್ಯುವೆ” ಎಂದು ಹೇಳುತ್ತಾನೆ. ‘ಕಲ್ಲು’, ತಡಮಾಡದೆ ಅಲ್ಲಿದ್ದ ಶಿಲೆಗಳ ಮೇಲೆ ದೇವತೆಗಳ ಮೂರ್ತಿಗಳನ್ನು ಕೆತ್ತಲು ಆರಂಭಿಸುವನು. ರಾತ್ರಿ ಕಳೆಯುವುದರೊಳಗೆ 99,99,999 ಶಿಲ್ಪಗಳನ್ನು ಕೆತ್ತಿದ, ಇನ್ನೊಂದು ಶಿಲ್ಪ ಕೆತ್ತಬೇಕಿತ್ತು. ಆಗ ಅವನ ಮನಸ್ಸಿನಲ್ಲಿ ಭಾವನೆಯೊಂದು ಸುಳಿದಿತ್ತು. ಕೇವಲ ಒಂದು ರಾತ್ರಿಯಲ್ಲಿ, ಇಷ್ಟೊಂದು ಶಿಲ್ಪಗಳನ್ನು ಕೆತ್ತಿದ ತನ್ನಂತಹ ಚತುರನಾದ ಶಿಲ್ಪಿ ಈ ಲೋಕದಲ್ಲಿ ಇರುವುದು ಅಸಾಧ್ಯ, ಎಂಬ ಅಹಂಕಾರ ಸುಳಿದಿತ್ತು. ತನ್ನದೇ ಒಂದು ಶಿಲ್ಪವನ್ನು ಕೆತ್ತಿ ಈ ದೇವತೆಗಳ ಸಾಲಿನಲ್ಲಿ ನಿಲ್ಲಿಸಿ ಬಿಡೋಣ ಎಂದೆನಿಸಿ, ತನ್ನ ಶಿಲ್ಪವನ್ನೇ ರಚಿಸಿ ನಿಲ್ಲಿಸಿದ. ಅವನ ಅಹಂಕಾರವನ್ನು ಕಂಡ ಶಿವನು, ಕೂಡಲೇ ಅವನನ್ನು ಶಪಿಸಿದ, ಅವನ ಶಿಲ್ಪ ಚೂರು ಚೂರಾಯಿತು, ಅವನನ್ನು ಕೈಲಾಸಕ್ಕೆ ಕರೆದೊಯ್ಯಲಿಲ್ಲ. ಹಾಗಾಗಿ ಇಲ್ಲಿ ಇರುವ ಶಿಲ್ಪಗಳ ಸಂಖ್ಯೆ 99,99,999 ಮಾತ್ರ. ಚತುರನಾದ ಶಿಲ್ಪಿ ಅಹಂಕಾರದಿಂದ ಕಲ್ಲಾದ ಕಥೆಯಿದು.
ಬನ್ನಿ, ಈ ಬಯಲ ದೇಗುಲವನ್ನು ಅಲಂಕರಿಸಿರುವ ದೇವತೆಗಳನ್ನು ನೋಡೋಣ. ದೊಡ್ಡ ಬಂಡೆಗಳ ಮೇಲೆ ಕೆತ್ತಲಾಗಿರುವ ಬೃಹತ್ ಗಾತ್ರದ ಮೂರ್ತಿಗಳು ಒಂದೆಡೆ, ಮತ್ತೊಂದೆಡೆ ರಾಶಿ ರಾಶಿಯಾಗಿ ಬಿದ್ದಿರುವ ಬಿಡಿ ಬಿಡಿಯಾದ ಕಲ್ಲಿನ ಮೂರ್ತಿಗಳು. ಈ ದೇಗುಲದ ಕೇಂದ್ರಬಿಂದು ಶಿವನ ಅವತಾರವಾದ -‘ಉನ್ನಕೋಟೀಶ್ವರ ಕಾಲಭೈರವೇಶ್ವರ’. ಈ ಮೂರ್ತಿಯು ಮೂವತ್ತು ಅಡಿ ಎತ್ತರವಾಗಿದ್ದು, ಮೂರ್ತಿಯ ಜಟೆಗಳೇ ಹತ್ತು ಅಡಿ ಇದ್ದು, ಗಂಗೆ ಶಿವನ ಜಟೆಯಿಂದ ಹರಿಯುವ ಹಾಗೆ ಕೆತ್ತಲಾಗಿದೆ.
ಶಿವನು ತನ್ನ ಹಣೆಗಣ್ಣಿನಿಂದ ಈ ಜಗತ್ತನ್ನು ತೀಕ್ಷ್ಣವಾಗಿ ಗಮನಿಸುತ್ತಿರುವ ಹಾಗೆ ಭಾಸವಾಗುವುದು. ಅವನ ಚಕ್ರಾಕಾರದ ಕರ್ಣಕುಂಡಲಗಳು, ಮುಡಿಯಿಂದ ಇಳಿದು ಬರುತ್ತಿರುವ ಗಂಗೆ, ಒಂದೆಡೆ ಸಿಂಹವಾಹಿನಿಯಾಗಿರುವ ದುರ್ಗೆ, ಮತ್ತೊಂದೆಡೆ ಮಕರವಾಹಿನಿಯಾಗಿರುವ ತಾಯಿ ಗಂಗೆ ಹಾಗೂ ಮುಂದೆ ಆಸೀನನಾಗಿರುವ ನಂದಿ ಸುಂದರವಾಗಿ ಕೆತ್ತಲ್ಪಟ್ಟಿವೆ. ಒಂದಲ್ಲ, ಎರಡಲ್ಲ, ಮೂರು ನಂದಿಯ ವಿಗ್ರಹಗಳು ಶಿವನನ್ನೇ ದಿಟ್ಟಿಸುತ್ತಾ ಧ್ಯಾನದ ಭಂಗಿಯಲ್ಲಿ ಕುಳಿತಿವೆ. ಶಿವನ ಬೃಹತ್ ಮೂರ್ತಿ ಭಕ್ತರ ಮನದಲ್ಲಿ ಭಕ್ತಿಯ ತರಂಗಗಳನ್ನು ಮೂಡಿಸುವುದು. ಮುಂದೆ ಸಾಗಿದಾಗ ಕಂಡದ್ದು ವಿಘ್ನವಿನಾಶಕ ಗಣಪನ ಬೃಹದಾಕಾರದ ಮೂರ್ತಿಗಳು, ಅವನ ದಂತಗಳು, ಸೊಂಡಿಲು, ಡೊಳ್ಳು ಹೊಟ್ಟೆ ಎಲ್ಲವನ್ನೂ ವಿಭಿನ್ನ ರೀತಿಯಲ್ಲಿ ಕೆತ್ತಲಾಗಿದೆ. ಅಚ್ಚರಿಯೆನಿಸುವಂತೆ ಒಂದು ತೆಳ್ಳಗಿರುವ ಹೊಟ್ಟೆಯ ಗಣಪನನ್ನೂ ಕೆತ್ತಿದ್ದಾರೆ. ಅಲ್ಲೊಂದು ಹೆಣ್ಣಿನ ಮುಖಾರವಿಂದವುಳ್ಳ ಹಸುವಿನ ಚಿತ್ರವೂ ಇದೆ, ಓಹೋ ಅದು ಕಾಮಧೇನು. ಧ್ಯಾನಮಗ್ನನಾಗಿ ಕುಳಿತ ಶಿವನ ಮನದಲ್ಲಿ ಪ್ರೀತಿಯ ಅಲೆಗಳನ್ನು ಉಂಟುಮಾಡಲು ಮನ್ಮಥನು ಕಾಮಬಾಣಗಳನ್ನು ಹೂಡುತ್ತಿರುವ ದೃಶ್ಯವಂತೂ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಉಮೆಯನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡ ಉಮಾ ಮಹೇಶ್ವರ, ಸತಿಯನ್ನು ತನ್ನಲ್ಲಿ ಸೇರಿಸಿಕೊಂಡ ಅರ್ಧನಾರೀಶ್ವರ ನಮ್ಮನ್ನು ಹರಸುತ್ತಿದ್ದ. ಹಾವಿನಂತೆ ಅಂಕುಡೊಂಕಾದ ಮೆಟ್ಟಿಲುಗಳನ್ನೇರಿ ಹೋದರೆ ಕಾಲನ ತುಳಿತಕ್ಕೆ ಸಿಕ್ಕು ಭಗ್ನವಾದ ವಿಗ್ರಹಗನ್ನೆಲ್ಲಾ ಒಂದು ಮ್ಯೂಸಿಯಮ್‌ನಲ್ಲಿ ಓರಣವಾಗಿ ಜೋಡಿಸಿಟ್ಟಿದ್ದಾರೆ. ಪ್ರತಿಯೊಂದು ವಿಗ್ರಹದ ಕೆಳಗೆ ನಾಮಫಲಕವೂ ಇದೆ. ವಿಷ್ಣು, ಹರಗೌರಿ, ಹರಿಹರ, ನರಸಿಂಹ, ಗಣೇಶ, ಚತಿರ್ಮುಖ ಬ್ರಹ್ಮ, ಹನುಮಾನ್, ಕಲ್ಯಾಣ ಸುಂದರಮೂರ್ತಿ, ಏಕಮುಖ ಲಿಂಗ, ಚತುರ್ಮುಖ ಲಿಂಗ, ಕಿರಾತಕ ದಂಪತಿಗಳ ಮಾರುವೇಷದಲ್ಲಿರುವ ಶಿವ ಪಾರ್ವತಿಯರು ಹೀಗೆ ಹತ್ತು ಹಲವು ಮೂರ್ತಿಗಳಿವೆ. ಜೊತೆಗೇ ಬೌದ್ಧ ಭಿಕ್ಷುಗಳ ಮೂರ್ತಿಗಳೂ ಕಂಡು ಬರುತ್ತವೆ. ನಾಥ ಪಂಥದವರ ಶಿಲ್ಪಗಳೂ, ತಾಂತ್ರಿಕರ ಕೆಲವು ಮೂರ್ತಿಗಳೂ ಇರುವುದು ಇಲ್ಲಿನ ವೈಶಿಷ್ಟ್ಯ.
ಉನ್ನಕೋಟಿಯನ್ನು ಭಾರತದ ಆಂಕೋರ್ ವಾಟ್ (ಕಾಂಬೋಡಿಯಾ) ಎಂದೇ ಪರಿಗಣಿಸಲಾಗುತ್ತದೆ. ಈ ಸ್ಥಳವನ್ನು ಸ್ಥಳೀಯ ಭಾಷೆಯಲ್ಲಿ ಸುಬ್ರಾಯ್ ಖುಂಗ್ (Subrai khung) ಎಂದೇ ಕರೆಯುವರು. ಪುರಾತತ್ವಶಾಸ್ತ್ರಜ್ಞರು ಈ ಶಿಲ್ಪಗಳನ್ನು 7 ರಿಂದ 9 ನೇ ಶತಮಾನಕ್ಕೆ ಸೇರಿರಬಹುದು ಎಂದು ಅಂದಾಜಿಸಿದ್ದಾರೆ. ತ್ರಿಪುರಾದ ಜೀವನಾಡಿಯಾಗಿರುವ ಗೋಮತಿ ನದಿ ಹರಿಯುವ ಸುಮಾರು 150 ಎಕರೆ ವಿಸ್ತೀರ್ಣವುಳ್ಳ ಅರಣ್ಯ ಪ್ರದೇಶದಲ್ಲಿ ಈ ಬಯಲು ದೇಗುಲವನ್ನು ನಿರ್ಮಿಸಲಾಗಿದೆ. ಈ ಭವ್ಯವಾದ ಮೂರ್ತಿಗಳನ್ನು ಅಲಂಕರಿಸಿರುವ ಆಭರಣಗಳು ಬುಡಕಟ್ಟು ಜನಾಂಗದವರ ಆಭೂಷಣಗಳನ್ನು ಹೋಲುತ್ತವೆ. ಸಾಮಾನ್ಯವಾಗಿ ದೇಗುಲದಲ್ಲಿನ ಮೂರ್ತಿಗಳು ಪೂರ್ವಾಭಿಮುಖವಾಗಿ ಇದ್ದರೆ, ಉನ್ನಕೋಟಿಯಲ್ಲಿರುವ ಮೂರ್ತಿಗಳು ಪಶ್ಚಿಮ ದಿಕ್ಕಿನೆಡೆ ಇವೆ. ಪ್ರತಿ ವರ್ಷ ಅಶೋಕಾಷ್ಟಮಿ ಮೇಳಾವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ. ಮಳೆ, ಬಿಸಿಲಿಗೆ ಮೈವೊಡ್ಡಿ ನಿಂತಿರುವ ಈ ಕಲಾಕೃತಿಗಳನ್ನು ಸಂರಕ್ಷಿಸಬೇಕಿದೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಮುಂದಿನ ಜನಾಂಗಕ್ಕೆ ತಲುಪಿಸಬೇಕಿದೆ. ನಮ್ಮ ಪೂರ್ವಜರ ಕಲಾ ಕೌಶಲಕ್ಕೆ ಮನಸೋತ ನನಗೆ ರಥಸಪ್ತಮಿ ಸಿನೆಮಾದ ಹಾಡಿನ ಕೆಲವು ಸಾಲುಗಳು ನೆನಪಾದವು – ”ಶಿಲೆಗಳು ಸಂಗೀತವಾ ಹಾಡಿವೆ.. / ಶಿಲೆಯಲಿ ಕಲೆಯನು ಸೆರೆಹಿಡಿದಾ / ಕಲೆಯಲಿ ಶಿಲೆಯನು ಅರಳಿಸಿದಾ”.
–ಡಾ.ಗಾಯತ್ರಿದೇವಿ ಸಜ್ಜನ್
ದೇವತೆಗಳ ತವರೂರು ಉನ್ನಕೋಟೆಯ ಪರಿಚಯಾತ್ಮಕ ಲೇಖನ ಸೊಗಸಾದ ನಿರೂಪಣೆ ಯೊಂದಿಗೆ ಬಂದಿದೆ ಗಾಯತ್ರಿ ಮೇಡಂ.. ಪರಿಚಯಿಸಿದ ನಿಮಗೆ ಧನ್ಯವಾದಗಳು
Thank you for yr response
ಸೊಗಸಾಗಿದೆ
ವಂದನೆಗಳು ನಯನ ರವರಿಗೆ
ಲೇಖನ ನಮ್ಮ ಪುರಾತನ ಶಿಲ್ಪ ವೈಖರಿಗೆ ಸಲ್ಲಿಸಬೇಕಾಗದ, ಸಲ್ಲಿಸಿರುವ ಗೌರವ ಸಮರ್ಪಣೆಯಂತೆ ಸೊಗಸಾಗಿ ಮೂಡಿ ಬಂದಿದೆ.
ಕುತೂಹಲ ಮೂಡಿಸುವ ಬರಹ. ಕೃತಜ್ಞತೆ ಗಳು
ಉನ್ನಕೋಟೆಯ ವಿಚಿತ್ರವೆನಿಸುವ ಶಿವ ದೇಗುಲದ ಪರಿಚಯ ಲೇಖನವು ಬಹಳ ಚೆನ್ನಾಗಿದೆ ಮೇಡಂ.
ವಂದನೆಗಳು ಸಹೃದಯ ಓದುಗರಿಗೆ