ಹತ್ತಿಯಂತೆ ಜೀವನ
ಬಂಧ ಭಾರವೆನ್ನಬೇಡ
ಗಂಧ ಹಗುರ ಮರೆಯಬೇಡ
ನಿಂದ ನೆಲದಿ ಬೆಳೆಯಬೇಕು ಬೇರನಿಳಿಸುತ
ಸಂದುಹೋದ ವಿಷಯಕೆಲ್ಲ
ಇಂದು ಮರುಗಲೇಕೆ ಮರುಳೆ
ಬೆಂದು ಹೋಗಬೇಡ ನಿನ್ನೆ ನಾಳೆ ನೆನೆಯುತ
ಚಿಂತೆಯೆಂಬುದೊಂದು ಹೊರೆಯು
ಸಂತೆಯಲ್ಲು ನಿನ್ನ ಕೊರೆದು
ಭ್ರಾಂತಮಾಡಲ್ಯಾರ ನೀನು ಹೊಣೆಯ ಮಾಡುವೆ?
ನಿತಾಂತನನ್ನು ಮನದಿ ನೆನೆಯೆ
ಕಾಂತದಂತೆ ಕಷ್ಟ ಸೆಳೆದು
ಶಾಂತಿಯನ್ನು ಮನಕೆ ಕೊಡುವ ಏಕೆ ಅಂಜುವೆ?
ಮತ್ತು ತಲೆಗೆ ಏರೋ ಮುನ್ನ
ಗತ್ತುಗಳನು ಬದಿಗೆ ಸರಿಸಿ
ಹತ್ತಿಯಂತೆ ಹಗುರವಾಗು ಅಗಲಕರಳುತಾ..
ತುತ್ತು ತಿಂದ ಗುರುತಿಗಾಗಿ
ಬಿತ್ತನೊಂದು ತಿರುಗಿಕೊಟ್ಟು
ಎತ್ತ ಗಾಳಿ ಬಂತೋ ಅತ್ತ ತೂರಿಕೊಳ್ಳುತಾ..
–ವಿದ್ಯಾಶ್ರೀ ಅಡೂರ್ , ಮುಂಡಾಜೆ
ಭೋಗ ಷಟ್ಪದಿ ಯಲ್ಲಿ ರಚಿತವಾದ ಕವನ ತಾತ್ವಿಕ ಅಥ೯ಸೌಂದಯ೯ದಿಂದಲೂ ಸೂಕ್ತ ವಾದ ಪದ ಬಳಕೆ ಯಿಂದ ಲೂ ತೇಜೋಪೂಣ೯ವಾಗಿದೆ. ಹಾದಿ೯ಕ ಅಭಿನಂದನೆ ಗಳು ವಿದ್ಯಾಶ್ರೀ.
ತುಂಬಾ ಅರ್ಥಪೂರ್ಣ ವಾದ ಕವನ ಮೇಡಂ ಚೆನ್ನಾಗಿ ದೆ..
ಸೊಗಸಾಗಿದೆ ಕವನ
ಹತ್ತಿಯಂತೆ ಹಗುರವಾಗು ಎಂಬುದರ ಪ್ರಚ್ಛನ್ನ ಪ್ರತೀಕ ಈ ರಚನೆ. ಛಂದೋಬದ್ಧ ಮತ್ತು ಸುಸಂಬದ್ಧ. ಛಂದಸ್ಸು ಮತ್ತು ಕಾವ್ಯಲಹರಿ ಎರಡೂ ಸಮಾಹಿತವಾಗಿ ಬೆರೆತು ಬದುಕ ಬಂಧುರವನ್ನು ಮನಗಾಣಿಸಿದೆ. ಅಭಿನಂದನೆಗಳು ಕವಯಿತ್ರಿಗೆ………..
ತುಂಬಾ ಧನ್ಯವಾದಗಳು
ಗಾಳಿ ಬಂದಲ್ಲಿ ತೂರಿಕೊಳ್ಳು ಸ್ವಭಾವವನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಬಿಂಬಿಸುವ ಚಂದದ ಕವನ.
ಮೆಚ್ಚಿದ ಎಲ್ಲರಿಗೂ ತುಂಬಾ ಧನ್ಯವಾದಗಳು