ಜೀವನ ಸಂತೆ
ಸಂಬಂಧಗಳ ಸಂತೆಯಲ್ಲಿ ಒಬ್ಬಂಟಿ ನಾನು
ನಿಸ್ವಾರ್ಥ ಪ್ರೇಮವ ಮಾರಲು ಬಂದವನು
ಶ್ರೀಮಂತ ವ್ಯಾಪಾರಿಗಳ ತಳುಕು ಬಳುಕಿನ ಸರಕಲ್ಲಿ ಎನ್ನ ವ್ಯಾಪಾರವ ಕಳೆದುಕೊಂಡವನು
ಬಣ್ಣದ ಮಾತುಗಳ ಭರದಲ್ಲಿ ತನ್ನ ಮೌಲ್ಯವ ಕುಗ್ಗಿಸಿಕೊಂಡವನು
ಹಣ ಅಂತಸ್ತಿನ ಸಂಬಂಧಗಳೇ ಈ ಸಂತೆಯಲಿ ಜೋರು ಮಾರಾಟವಾಗುವವು
ಅಧಿಕಾರ ದರ್ಪಗಳ ಅಂಗಡಿ ಮುಂದೆ ಸಾಲುಗಳೇ ತೋರುತಿಹವು
ಮೊದಲು ತೋರಿದ ಕಾಳಜಿ ಪ್ರೀತಿಗೆ ಈಗ ಬೆಲೆಯಿಲ್ಲ
ಆರ್ಥಿಕ ಹರಿವು ನಿಂತ ಮೇಲೆ ಎಲ್ಲಾ ಮರೆತು ಹೋಗಿದೆಯಲ್ಲಾ
ಬರೀ ಲಾಭದ ಲೆಕ್ಕಾಚಾರದಲಿ ಈ ಲೋಕ ಮುಳುಗಿದೆಯೆಲ್ಲಾ
ಕರಗದ ಬಾಂಧವ್ಯದ ಕಡೆ ಯಾರು ತಿರುಗಿ ನೋಡುವರಿಲ್ಲ
ಆಡಂಬರದ ವೈಭವ ಒಂದಲ್ಲ ಒಂದು ದಿನ ಕಳೆಗುಂದುವುದು
ನಿರ್ವಾಜ್ಯ ಒಲವು ಕೆನೆಯಂತೆ ಮೇಲೆ ತೇಲುವುದು
ಆ ವಿಧಾತನ ಕೈಯಲ್ಲಿ ಕಷ್ಟವೆಂಬ ಕಡೆಗೋಲಿದೆ
ಕಡೆದಂತೆ ಈ ಹುಳಿಯಾದ ನಂಟುಗಳು ಬೆಣ್ಣೆಯಾಗುವ ಕಾಲ ಬಂದಿದೆ…..
ಮಾನುಷ ಸಂಬಂಧಗಳಿಗೆ ಹಾತೊರೆಯುವುದ ನಿಲ್ಲಿಸಿ
ಭಗವಂತನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ ಮನ ರೂಪಗೊಂಡಿದೆ…..
ಬರೀ ಭಕ್ತಿ ಬಯಸುವ ದೈವದ ಮುಂದೆ ಶರಣಾಗತಿಯ ಭಾವ ತುಂಬಿದೆ…..
-ಕೆ.ಎಂ ಶರಣಬಸವೇಶ
ಜೀವನ ಸಂತೆ…ಬದುಕಿನ ಕೊನೆಯ ಹಂತದಲ್ಲಿನ ..ಕವನ ಚಿಂತನೆ ಮಾಡುವಂತಿದೆ..
ತುಂಬಾ ಚೆನ್ನಾಗಿದೆ
ತಕ್ಷಣವೇ ಓದಿ ಪ್ರತಿಕ್ರಿಯೆ ನೀಡುವ ನಾಗರತ್ನ ಮೇಡಂ ಹಾಗೂ ನಯನ ಮೇಡಂ ಗೆ ಧನ್ಯವಾದಗಳು
ಜೀವನ ಸಂತೆಯ ಜಂಜಾಟಗಳಿಂದ ದೂರ ಸರಿದು ಭಗವಂತನನ್ನು ನೆನೆಯುವ ಮನ ಮಾಡುವ ಬಯಕೆ ತುಂಬಿದ ಸೊಗಸಾದ ಕವನ.
ಪ್ರತಿಯೊಂದು ಬರಹವನ್ನು ಬಹಳ ಆಸಕ್ತಿಯಿಂದ ಓದಿ ತಪ್ಪದೇ ಪ್ರತಿಕ್ರಿಯೆ ನೀಡುವ ಅಷ್ಟೇ ಒಳ್ಳೆಯ ಬರಹಗಳನ್ನು ಸುರಹೊನ್ನೆಗೆ ನೀಡುತ್ತಿರುವ ಶಂಕರಿ ಶರ್ಮ ಮೇಡಂ ಗೆ ಧನ್ಯವಾದಗಳು. ನಮ್ಮನೆಲ್ಲಾ ಒಗ್ಗೂಡಿಸಿ ಬಹಳ ಒಳ್ಳೆಯ e – paper ಮಾಡಿರುವ ಹೇಮಮಾಲಾ ಮೇಡಂ ಗೂ ಧನ್ಯವಾದಗಳು