ವಾಟ್ಸಾಪ್ ಕಥೆ 17 : ಎತ್ತರ.
ಒಂದೂರಿನಲ್ಲಿ ಪಾರಿವಾಳಗಳ ಒಂದು ಗುಂಪು ಮಸೀದಿಯೊಂzರ ಗೋಪುರಗಳಲ್ಲಿ ಗೂಡು ಕಟ್ಟಿಕೊಂಡು ವಾಸವಾಗಿದ್ದವು. ಕೆಲವು ತಿಂಗಳುಗಳು ಕಳೆದಮೇಲೆ ಮುಸ್ಲಿಮರ ಪವಿತ್ರವಾದ ಹಬ್ಬ ರಂಜಾನ್ ಹತ್ತಿರ ಬರುತ್ತಿತ್ತು. ಭಕ್ತರುಗಳು ತಮ್ಮ ಮಸೀದಿಯ ಸಂದಿಗೊಂದಿಗಳನ್ನೆಲ್ಲ ಸ್ವಚ್ಛಗೊಳಿಸಿ ಅದಕ್ಕೆ ಹೊಸದಾಗಿ ಬಣ್ಣ ಬಳಿಸಬೇಕೆಂದು ಸಿದ್ಧತೆ ಮಾಡಿಕೊಂಡರು. ಅದನ್ನು ತಿಳಿದು ಪಾರಿವಾಳಗಳು ಅಲ್ಲಿರುವುದು ಕಷ್ಟವೆಂದು ಹೊರಟು ಸಮೀಪದಲ್ಲೇ ಇದ್ದ ಗುಡಿಯೊಂದರಲ್ಲಿ ಸ್ಥಳ ಹುಡುಕಿ ಗೂಡುಕಟ್ಟಿ ವಾಸಮಾಡತೊಡಗಿದವು. ಸ್ವಲ್ಪ ಕಾಲ ನೆಮ್ಮದಿಯಿಂದ ಕಾಲಹಾಕಿದವು. ಗುಡಿಗೆ ಬರುವ ಭಕ್ತಾದಿಗಳು ದೀಪಾವಳಿ ಹತ್ತಿರ ಬರುವುದರಿಂದ ದೇವಾಲಯವನ್ನು ಹೊಚ್ಚಹೊಸದರಂತೆ ಸುಣ್ಣಬಣ್ಣ ಮಾಡಿಸಿ ಅಲಂಕರಿಸಬೇಕೆಂದು ತೀರ್ಮಾನಿಸಿದರು. ಇದನ್ನು ಕೇಳಿಸಿಕೊಂಡ ಪಾರಿವಾಳಗಳು ದೇವಾಲಯವನ್ನು ಬಿಟ್ಟು ಸಮೀಪದಲ್ಲೇ ಇದ್ದ ಚರ್ಚೊಂದರ ಗೋಪುರದಲ್ಲಿ ಸ್ಥಳ ಹುಡುಕಿ ಅಲ್ಲಿಯೇ ವಾಸ ಮಾಡುತ್ತಿದ್ದವು. ಅಷ್ಟರಲ್ಲಿ ಹೊಸ ವರ್ಷದಾಚರಣೆಗಾಗಿ ಸಿದ್ಧತೆ ನಡೆದು ಚರ್ಚನ್ನು ಸ್ವಚ್ಚಗೊಳಿಸಲು ಪ್ರಾರಂಭಿಸಿದರು. ಪಾರಿವಾಳಗಳು ಅಲ್ಲಿಂದಲೂ ಹೊರಬಂದು ಮತ್ತೆ ತಾವಿದ್ದ ಮಸೀದಿಗೆ ಬಂದು ನೆಲೆ ನಿಂತವು.
ಕೆಲವು ತಿಂಗಳು ವಿಶೇಷವೇನೂ ಇಲ್ಲದೆ ನೆಮ್ಮದಿಯಿಂದ ಇದ್ದವು. ಒಂದು ದಿನ ಮಸೀದಿಯ ಮುಂದಿನ ರಸ್ತೆಯಲ್ಲಿ ಜನಗಳ ಕೂಗಾಟ ಕೇಳಿಬಂತು. ಕುತೂಹಲದಿಂದ ಪಾರಿವಾಳಗಳು ಬಗ್ಗಿ ನೋಡತೊಡಗಿದವು. ಎರಡು ಗುಂಪುಗಳು, ಒಂದು ಮಸಲ್ಮಾನರದ್ದು, ಇನ್ನೊಂದು ಹಿಂದೂಗಳದ್ದು ಜಗಳವಾಡುತ್ತಿದ್ದವು. ಕಾರಣ ತಿಳಿಯದಿದ್ದರೂ ಒಬ್ಬರಿನ್ನೊಬ್ಬರನ್ನು ಬೈಯುವುದು, ಬೆದರಿಸುವುದು ಗೊತ್ತಾಗುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ದೊಣ್ಣೆಗಳಿಂದ ಹೊಡೆದಾಡಿದರು. ಕೆಲವರಿಗೆ ಗಾಯಗಳಾದವು. ಪೋಲೀಸಿನವರು ಬಂದು ಗುಂಪುಗಳನ್ನು ಬೇರ್ಪಡಿಸಿದರು. ನಂತರ ಕೆಲವು ದಿನಗಳ ನಂತರ ನಾಯಕರುಗಳು ಕೆಲವರು ಬಂದು ಎರಡೂ ಗುಂಪಿನವರನ್ನು ಕೂಡಿಸಿಕೊಂಡು ಪಂಚಾಯಿತಿಮಾಡಿ ಶಾಂತಿ ಸಂಧಾನ ಮಾಡಿದರು.
ಇವೆಲ್ಲವನ್ನೂ ನೋಡುತ್ತಿದ್ದ ಪಾರಿವಾಳದ ಮರಿಯೊಂದು ತನ್ನ ತಾಯಿಯನ್ನು ಪ್ರಶ್ನಿಸಿತು. ”ಅಮ್ಮಾ ಇವರೆಲ್ಲ ಏಕೆ ಜಗಳ ಮಾಡುತ್ತಾರೆ?” ಅಮ್ಮ ಪಾರಿವಾಳ ಹೇಳಿತು ”ಮಗೂ ಅವರೆಲ್ಲ ನಮಗಿಂತ ಉನ್ನತ ವರ್ಗದ ಪ್ರಾಣಿಗಳ ಗುಂಪಿಗೆ ಸೇರಿದವರು. ಅವರಿಗೆ ಆಲೋಚಿಸಲು, ಮಾತನಾಡಲು ಬರುತ್ತದೆ. ಅವರೆಲ್ಲರ ಆಲೋಚನೆ ಮಾತ್ರ ವಿಭಿನ್ನವಾಗಿರುತ್ತದೆ. ತಮ್ಮತಮ್ಮಲ್ಲಿ ಜಾತಿ, ವರ್ಗ, ಧರ್ಮಗಳೆಂಬ ಕಟ್ಟಳೆಗಳನ್ನು ಮಾಡಿಕೊಂಡು ತಮ್ಮದೇ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಆದರೆ ಅವರು ಇನ್ನೊಂದು ಜಾತಿ, ಧರ್ಮಕ್ಕೆ ಸೇರಿದವರನ್ನು ತಮ್ಮಂತೆ ಬಗೆದು ಸಮಾನರಂತೆ ಕಾಣರು. ತಾವು ಸರಿ ಇನ್ನೊಬ್ಬರು ಸರಿಯಿಲ್ಲ ಎಂಬ ಸಂಕುಚಿತ ಮನೋಭಾವನೆಯಿಂದ ಕೂಡಿದವರು. ನಮಗಿಂತ ಎಲ್ಲ ರೀತಿಯಿಂದಲೂ ಮೇಧಾವಿಗಳಾದರೂ ನಮ್ಮಂತೆ ಸಮತಾಭಾವದಿಂದಿಲ್ಲ. ಒಂದು ರೀತಿಯಲ್ಲಿ ಈ ಭಿನ್ನತೆಯಿಂದಾಗಿ ಅವರ ನಡುವೆ ಆಗಾಗ ಜಗಳಗಳು ಆಗುತ್ತಲೇ ಇರುತ್ತವೆ”.
ಮರಿ ಪಾರಿವಾಳ ”ನಾವು ಮಸೀದಿ, ದೇವಾಲಯ, ಮತ್ತು ಚರ್ಚುಗಳ ಮೂರರಲ್ಲೂ ಇದ್ದು ಬಂದೆವಲ್ಲ ನಮಗೇನೂ ಅನ್ನಿಸಲಿಲ್ಲವಲ್ಲಾ” ಎಂದು ಪ್ರಶ್ನಿಸಿತು.
”ನಮ್ಮಲ್ಲಿ ಹಾಗಿಲ್ಲ. ನಾವೆಲ್ಲಿದ್ದರೂ ಒಂದೇ. ಇನ್ನೊಬ್ಬರಲ್ಲಿ ಭೇದವೆಣಿಸುವುದಿಲ್ಲ. ಮನುಷ್ಯರೂ ನಾವೇರಿದೆತ್ತರಕ್ಕೆ ಏರಿ ಆಲೋಚಿಸಿದರೆ ಇಂತಹ ಭಿನ್ನಾಭಿಪ್ರಾಯಗಳೇ ಇರುವುದಿಲ್ಲ ” ಎಂದು ಹೇಳಿ ಮರಿಯೊಡನೆ ರೆಕ್ಕೆ ಬಿಚ್ಚಿ ಆಕಾಶದಲ್ಲಿ ಹಾರುತ್ತಿದ್ದ ಮತ್ತೊಂದು ಪಾರಿವಾಳಗಳ ಗುಂಪನ್ನು ಸೇರಿಕೊಳ್ಳಲು ಹೊರಟಿತು. ಮರಿ ಪಾರಿವಾಳ ತಾಯಿಯ ಮಾತನ್ನು ಮೆಲುಕು ಹಾಕುತ್ತಾ ”ಬಾಳಿಗೊಂದು ಬಂಗಾರದ ಮಾತು” ಎಂದುಕೊಂಡಿತು.
-ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಉತ್ತಮ ಸಂದೇಶವನ್ನೊಳಗೊಂಡ ಕಥೆ
ಧನ್ಯವಾದಗಳು ನಯನ ಮೇಡಂ
ಪ್ರಾಣಿ ಪಕ್ಷಿಗಳಿಗಿರುವಷ್ಟು ಬುದ್ಧಿ ಕೂಡಾ ಮಾನವನಿಗಿಲ್ಲದಾಗಿದೆ! ಎಂದಿನಂತೆ ಚಂದದ ರೇಖಾಚಿತ್ರದ ಜೊತೆಗೆ ಉತ್ತಮ ಸಂದೇಶಯುಕ್ತ ಕಥೆ..ಧನ್ಯವಾದಗಳು ಮೇಡಂ.
ಬಾಳಿಗೊಂದು ಬಂಗಾರದ ಸಂದೇಶವನ್ನಿತ್ತ ಸುಂದರ ಕಥೆ.
ಧನ್ಯವಾದಗಳು ಶಂಕರಿ ಮೇಡಂ ಹಾಗೂ ಪದ್ಮಾ ಮೇಡಂ