ಬಂದಿದೆ ಯುಗ ಯುಗಾದಿ…..
ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/
ಲೋಕವ ಶೃಂಗರಿಸಿ ಚೆಲುವಿನಲಿ ನಲಿಯುತ/
ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/
ಪ್ರಪಂಚವ ಅಲಂಕರಿಸಿ ಗೆಲುವಿನಲಿ ಕುಣಿಯುತ/
ಬಂದಿದೆ ಯುಗ ಯುಗಾದಿ……
ಮರಗಿಡಗಳ ಹಸಿರಿನಲಿ ಅರಳಿದ ಕುಸುಮಗಳಲಿ ಹೊಸ ಜೀವ ಹರಿಸಿದೆ/
ಕೋಗಿಲೆಯ ಸಿರಿಕಂಠದಲಿ ಹರಿಯುವ ತೊರೆಗಳಲಿ ನವಚೇತನ ಹೊಮ್ಮಿಸಿದೆ/
ಬೀಸುವ ತಂಗಾಳಿಯಲಿ ಹಕ್ಕಿಗಳ ಇಂಚರದಲಿ ಸಂತೋಷವ ಸಿಂಪಡಿಸಿದೆ/
ಹೊಸ ವರುಷ ಹೊಸ ಹರುಷದಲ್ಲಿ ಹೊಸಭಾವ ತೇಲಿಸಿದೆ/
ಬಂದಿದೆ ಯುಗ ಯುಗಾದಿ……
ವನಸಿರಿಯ ಬನಸಿರಿಯಲ್ಲಿ ಬೃಂಗವು ಝೇಂಕರಿಸಿದೆ ಉಲ್ಲಾಸದಲ್ಲಿ ಗುಯ್ಗುಟ್ಟಿದೆ/
ಗೋಮಾಳದಲ್ಲಿ ಹುಲ್ಲುಗಾವಿನಲ್ಲಿ ಪಶುಪಕ್ಷಿಗಳು ವಿಹರಿಸುತಿದೆ ಉತ್ಸಾಹದಲ್ಲಿ ಮೆರದಾಡುತಿದೆ/
ಬಾಳಿಗೊಂದು ಬದುಕಿಗೊಂದು ಹೊಸಜೀವ ಜನಿಸಿದೆ ನವಜೀವ ನಲಿದಿದೆ/
ವರ್ಣ ವರ್ಣಗಳಲ್ಲಿ ಜೀವನವು ಬೆಳಗುತಿದೆ ರಂಗುರಂಗಿನಲ್ಲಿ ರಾರಾಜಿಸುತಿದೆ/
ಬಂದಿದೆ ಯುಗ ಯುಗಾದಿ……
ಗಳಿಗೆಗೊಂದು ಹೊಸತು ಜೀವನ ಹೊಸತು ಹೊಸತು ಕಂಪನ/
ಗಳಿಗೆಗೊಂದು ಹೊಸತು ಸ್ಪಂದನ ಹೊಸತು ಹೊಸತು ಚೇತನ/
ಅಖಿಲಜೀವಕೆ ಒಂದೆ ಜನನ ಒಂದೆ ಪಯಣ ಒಂದೆ ಮರಣ/
ಅಖಿಲಜೀವಕೆ ಒಂದೆ ದಾರಿ ಒಂದೇ ಗಮ್ಯಸ್ಥಾನ ಒಂದೇ ತಲಪುದಾಣ/
– ಮಿತ್ತೂರು ರಾಮ ಪ್ರಸಾದ್
ಚೆನ್ನಾಗಿದೆ ಕವನ
ವಸಂತನಾಗಮನದ ಕುರುಹಾದ ಯುಗಾದಿ ಹಬ್ಬದ ಸಂಭ್ರಮ ಕವಿತೆಯಲ್ಲಿ ಸೊಗಸಾಗಿ ಗರಿಗೆದರಿದೆ. ಅಭಿನಂದನೆಗಳು.