ವಾಟ್ಸಾಪ್ ಕಥೆ 13 :ಸ್ವಾಭಿಮಾನ….
ರಸ್ತೆ ಬದಿಯಲ್ಲಿ ಹೂ ಮಾರುತ್ತಿದ್ದ ಒಬ್ಬ ಮುದುಕಿ ”ಅಯ್ಯಾ ಚಂದದ ಹೂಗಳಿವೆ. ಮನೆಯವರಿಗಾಗಿ, ದೇವರ ಪೂಜೆಗಾಗಿ ಹೂ ಕೊಂಡುಕೊಳ್ಳಿರಿ” ಎಂದು ಗ್ರಾಹಕರನ್ನು ಆಕರ್ಷಿಸುತ್ತಿದ್ದಳು. ಯುವಕನೊಬ್ಬನಿಗೆ ಅವಳನ್ನು ಕಂಡು ಏಕೋ ಕನಿಕರ ಉಂಟಾಯಿತು. ಸಾಕಷ್ಟು ವಯಸ್ಸಾಗಿದ್ದರೂ ಆಕೆ ವ್ಯಾಪಾರ ಮಾಡಿ ಹಣ ಸಂಪಾದನೆ ಮಾಡುವ ಅಗತ್ಯವಿದೆಯೇ? ಎಂದು ತಿಳಿದುಕೊಳ್ಳುವ ಕುತೂಹಲ ಕೆರಳಿತು. ಆತನು ”ಅಜ್ಜೀ ನೀವು ಈ ವಯಸ್ಸಿನಲ್ಲಿ ನಿಮ್ಮ ಮನೆಯಲ್ಲಿ ಕುಳಿತು ಮೊಮ್ಮಕ್ಕಳ ಜೊತೆ ಆಟವಾಡುತ್ತಾ ಕಾಲಕಳೆಯಬೇಕು. ಅಂತಹುದರಲ್ಲಿ ಹೂ ಮಾರುತ್ತಾ ಈ ಮರದ ಕೆಳಗೆ ಕುಳಿತಿದ್ದೀರಲ್ಲಾ, ಇದೇಕೆ? ” ಎಂದು ಕೇಳಿದ.
ಅದಕ್ಕೆ ಆ ಮುದುಕಿ ”ಏನಪ್ಪಾ ನೀನು ತುಂಬ ಒಳ್ಳೆಯವನಂತೆ ಕಾಣುತ್ತೀಯೆ. ನೀನು ನನಗೆ ಯಾವುದೇ ಕೆಲಸ ಮಾಡದೆ ದುಡ್ಡು ಸಂಪಾದನೆ ಮಾಡುವ ವಿಧಾನ ಗೊತ್ತಿದ್ದರೆ ಹೇಳಿಕೊಡು. ನಾನು ಮನೆಯಲ್ಲೇ ಕುಳಿತು ನೀನು ಹೇಳಿದಂತೆಯೇ ಕಾಲಕಳೆಯುತ್ತೇನೆ” ಎಂದಳು.
ಆ ಯುವಕ ಬಹುಶಃ ಆಕೆಯ ಮನೆಯಲ್ಲಿ ಅವಳನ್ನು ನೋಡಿಕೊಳ್ಳುವವರು ಯಾರೂ ಇರಲಿಕ್ಕಿಲ್ಲ. ಅದಕ್ಕೇ ಹೀಗೆ ಹೇಳುತ್ತಿದ್ದಾಳೆ ಎಂದುಕೊಂಡು ”ಅಲ್ಲಜ್ಜೀ ಈ ವಯಸ್ಸಿನಲ್ಲಿ ನೀನೇಕೆ ಹಣ ಸಂಪಾದಿಸಬೇಕು. ನಿನ್ನ ಮಕ್ಕಳು, ಬಂಧುಗಳು, ಬಳಗದವರು ಯಾರೂ ಇಲ್ಲವೇ” ಎಂದು ಮತ್ತೆ ಕೇಳಿದ.
ಆಗ ಮುದುಕಿ ಹೇಳಿದಳು ”ಎಲ್ಲರೂ ಇದ್ದಾರಪ್ಪಾ. ಆದರೆ ನನಗೆ ಬಹಳ ಚಿಕ್ಕ ವಯಸ್ಸಿನಿಂದಲೇ ದುಡಿತದ ಅಭ್ಯಾಸವಾಯಿತು. ಆಗ ನನ್ನ ತಂದೆ, ತಾಯಿಯ ಕಷ್ಟ ನೋಡಲಾರದೇ ನಾನು ಬೇರೆಯವರ ಮನೆಯಲ್ಲಿ ದುಡಿಯಲು ಪ್ರಾರಭಿಸಿದೆ. ಗಳಿಸಿದ ಹಣವನ್ನೆಲ್ಲ ನನ್ನ ತಾಯಿಯ ಕೈಯಲ್ಲಿಡುತ್ತಿದ್ದೆ. ತಂದೆ ತನ್ನ ದುಡಿತವನ್ನೆಲ್ಲ ಕುಡಿದು ಹಾಳು ಮಾಡುತ್ತಿದ್ದ. ಅಮ್ಮ ಬಹಳ ಕಷ್ಟದಿಂದ ಸಂಸಾರ ನಡೆಸುತ್ತಿದ್ದಳು. ಮದುವೆಯಾದ ನಂತರ ಗಂಡ, ಮಕ್ಕಳು ಚೆನ್ನಾಗಿರಲಿ ಎಂದು ದುಡಿದು ಸಂಪಾದಿಸಬೇಕಾಯಿತು. ಆಗ ಒಂದು ಕಿಲುಬು ಕಾಸನ್ನೂ ನಾನು ನನಗಾಗಿ ಎತ್ತಿಟ್ಟುಕೊಳ್ಳಲಿಲ್ಲ. ಈಗ ಮಕ್ಕಳು ಅವರ ಕುಟುಂಬದ ಸಂರಕ್ಷಣೆಗಾಗಿ ದುಡಿಯುತ್ತಾರೆ. ಅವರಿಗೂ ತುಂಬ ಖರ್ಚುಗಳು, ಕಷ್ಟವಿರುತ್ತದೆ. ಅವರಿಗೆ ನನ್ನಿಂದ ಯಾವುದೇ ಭಾರವಾಗಬಾರದೆಂದು ನನ್ನ ಖರ್ಚಿಗೆ ಸಾಕಾಗುವಷ್ಟನ್ನು ಹಣವನ್ನು ಹೂಕಟ್ಟಿ ಮಾರಿ ಸಂಪಾದಿಸುತ್ತೇನೆ. ಇಷ್ಟು ದಿನ ಯಾರಿಂದಲೂ ಬೇಡದವಳು ಈಗ ಮಕ್ಕಳ ಬಳಿ ಬೇಡಲು ನನ್ನ ಮನಸ್ಸು ಒಪ್ಪುವುದಿಲ್ಲಪ್ಪ. ವಯಸ್ಸಾದರೂ ಇನ್ನೂ ದುಡಿಯುವ ಶಕ್ತಿ ಕೊಟ್ಟಿದ್ದಾನೆ ಭಗವಂತ. ಸಾಧ್ಯವಾಗುವವರೆಗೆ ಸಂಪಾದನೆ ಮಾಡುತ್ತೇನೆ. ನನ್ನ ಕತೆ ಬಿಡು, ಈಗ ಎಷ್ಟು ಹೂ ಕೊಡಲಿ?” ಎಂದಳು.
ಯುವಕನಿಗೆ ಆಕೆಯ ಸ್ವಾಭಿಮಾನವನ್ನು ಕಂಡು ಅತ್ಯಂತ ಅಭಿಮಾನ ಮೂಡಿತು. ಬದುಕಿನ ಅಮೂಲ್ಯವಾದ ಒಂದು ಪಾಠವನ್ನು ಆಕೆಯಿಂದ ಕಲಿತಂತಾಯಿತು. ತುಂಬು ಹೃದಯದಿಂದ ಆಕೆಗೆ ಧನ್ಯವಾದ ಹೇಳಿ ಹೂಗಳನ್ನು ಕೊಂಡು ಮನೆಗೆ ಹೊರಟನು. ಬದುಕಿನ ಪಾಠ ಕಲಿಯಲು ಅನೇಕವೇಳೆ ಇಂತಹ ಜನಗಳೂ ಗುರುವಾಗುತ್ತಾರೆ.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಆಶಯ ಚೆನ್ನಾಗಿದೆ
ಸ್ವಾಭಿಮಾನದ ಅಜ್ಜಿಯ ಕಥೆಯು ಅನುಕರಣೀಯ
ಧನ್ಯವಾದಗಳು ಪದ್ಮಿನಿ ಕಡಾಂಬಿ…ಮತ್ತು ಸುಧಾಮೇಡಂ
ಚಂದದ ಕಥೆ. ಸ್ವಾಭಿಮಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ.
ಧನ್ಯವಾದಗಳು ನಯನ ಮೇಡಂ
ಸ್ವಾಭಿಮಾನದಿಂದ ಉಂಟಾಗುವ ಮನೋ ನೆಮ್ಮದಿಯನ್ನು ನಿರೂಪಿಸುವ ಕಥೆ ಸೊಗಸಾಗಿದೆ. ಇಂಥಹವರನ್ನೇ ಕರ್ಮಯೋಗಿಗಳು ಎನ್ನುವುದು. ಇಂಥವರು ನಮ್ಮ ಆದರ್ಶವಾಗಬೇಕು. ಒಳ್ಳೆಯ ಕಥೆ. ಅಭಿನಂದನೆಗಳು.
ಯಾರೇ ಆಗಲಿ ಎಷ್ಟೇ ವಯಸ್ಸಾಗಿರಲಿ ಬೇರೆಯವರಿಗೆ ಹೊರೆಯಾಗದಂತೆ ಬದುಕಬೇಕೆಂಬ ಆಶಯವುಳ್ಳ ಚಿಕ್ಕ – ಚೊಕ್ಕ ಕಥೆ….
ಸ್ವಾಭಿಮಾನ ಮುಖ್ಯ ಎಂದು ಸಾರುವ ಚಿಕ್ಕ – ಚೊಕ್ಕ ಕಥೆ
ವಾಟ್ಸಾಪ್ ಕಥೆ ಎಂದಿನಂತೆ ಉತ್ತಮ ಸಂದೇಶವಾಹಕವಾಗಿದೆ. ಸ್ವರಚಿತ ರೇಖಾಚಿತ್ರವು ಕಥೆಗೆ ಮೆರುಗನ್ನು ನೀಡಿದೆ.
ಸ್ವಾಭಿಮಾನದ ಮಹತ್ವವನ್ನು ಸಾರುವ ಕಥೆ ಹಾಗೂ ಅದರ ಮೇಲಿನ ರೇಖಾಚಿತ್ರ ಎರಡು ಸುಂದರವಾಗಿವೆ
ಧನ್ಯವಾದಗಳು ಪದ್ಮಾ ಮೇಡಂ.. ಶಂಕರಿ ಮೇಡಂ
ಧನ್ಯವಾದಗಳು ವೀಣಾ ಹಾಗೂ ಸಾಹಿತ್ಯ ಸಹೃದಯಿ
ಧನ್ಯವಾದಗಳು ಗಾಯತ್ರಿ ಮೇಡಂ