ಮಹಿಳಾ ಶಕ್ತಿ
ಸರ್ವ ಶಕ್ತಿ ಆದಿಶಕ್ತಿ ರೂಪ ಎಂದೆನ್ನ ಕರೆಯುವರು
ಇವಳೇ ಸಂಸಾರದ ಕಣ್ಣು ಬಾಳಿನ ದೀಪ ಎಂದೆಲ್ಲಾ ಹೊಗಳುವರು
ಇವಳಿದ್ದ ಕಡೆ ಶಾಂತಿ ನಲಿವು ನೆಮ್ಮದಿ ಎಂದು ಕೊಂಡಾಡುವರು
ಆದರೂ ಇಂದಿಗೂ ನಿಂತಿಲ್ಲ ನನ್ನ ಶೋಷಣೆ
ಇನ್ನೂ ಕೊನೆಗೊಂಡಿಲ್ಲ ಎನ್ನ ತೀರದ ಬವಣೆ
ಸರಿಸಮನಾಗಿ ದುಡಿಯಲು ಬಂದರೆ ನೂರಾರು ಅಡೆತಡೆಗಳು
ಮನೆಯವರಿಂದಲೇ ಮೂದಲಿಕೆಯ ಮಾತುಗಳು
ಉಟ್ಟ ಉಡುಗೆ ಧರಿಸಿದ ಆಭರಣಗಳ ಮೇಲೆ ವ್ಯಂಗ್ಯ ನುಡಿಗಳು
ಕಂಡ ಕಂಡವರ ಜೊತೆ ತಳುಕು ಹಾಕಿ ಹಬ್ಬಿಸುವ ಗಾಳಿ ಸುದ್ದಿಗಳು
ಸಾಗುವ ದಾರಿಯಲ್ಲಿ ಕೆಲಸ ಮಾಡುವ ಎಡೆಯಲ್ಲಿ ಹಿಂಬಾಲಿಸುವ ವಕ್ರ ನೋಟಗಳು
ಹೆಣ್ಣೆಂಬ ಕಾರಣಕ್ಕೆ ಸಾಧನೆಗಳಿಗೆ ಸಿಗದ ಮನ್ನಣೆಗಳು
ಮೈತುಂಬಾ ವಸ್ತ್ರ ಧರಿಸಿದರೆ ಆಧುನಿಕತೆಯ ಸೊಂಕಿಲ್ಲ ಎನ್ನುವುರು
ಸ್ವಲ್ಪ ಮೈಗೊಪ್ಪುವ ಉಡುಗೆ ತೊಟ್ಟರೆ ಭಾರೀ ಜೋರು ಕೈಗೆ ಸಿಗುವುದಿಲ್ಲವೆಂದು ಗೊಣಗುವರು
ನಡೆಸಬೇಕಿದೆ ಮೊದಲು ಹೋರಾಟ ನಮ್ಮವರ ವಿರುದ್ಧ
ಗಳಿಸಬೇಕಿದೆ ವಿಜಯ ಮುನ್ನ ನಮ್ಮ ನಂಬಿಕೆಗಳ ಮೇಲೆ
ಬರೀ ಭಾಷಣದಲ್ಲಿ ಮನಕರುಗುವ ರೂಪಕಗಳಲ್ಲಿ ಸೀಮಿತವಾಗಬಾರದು ಸ್ತ್ರೀ ಸಬಲೀಕರಣ
ಎಲ್ಲರಂತೆ ಎಲ್ಲಾ ರಂಗಗಳಲ್ಲಿ ತೊಡಗಿಸಿಕೊಂಡು ತಮ್ಮದಾಗಿಸಿಕೊಳ್ಳಬೇಕು ಯಶಸ್ಸಿನ ಹೂರಣ
ಬದಲಾಗಬೇಕು ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಕೋನ
ಸಿಗಬೇಕು ಅಭಿಮಾನ ಅವಕಾಶ ಪ್ರತಿಯೊಬ್ಬ ಬಾಲೆಯ ಸಕಲ ಸಂಕುಲಕ್ಕೀಗ
-ಕೆ.ಎಂ ಶರಣಬಸವೇಶ
ಚೆನ್ನಾಗಿದೆ ಬರಹ .ಅಭಿನಂದನೆಗಳು.
ಧನ್ಯವಾದಗಳು ವಿಜಯಾ ಸುಬ್ರಹ್ಮಣ್ಯ ಮೇಡಂ ಗೆ
ಹೌದು ಬದಲಾಗಬೇಕು ಹೆಣ್ಣನ್ನು ನೋಡುವ ದೃಷ್ಟಿಕೋನ
ಆದರೆ ಸಾಮಾಜಿಕ ಬದಲಾವಣೆಗಳು ಆಮೆಗತಿಯಲ್ಲಿ ಸಾಗಿ ಹೆಣ್ಣಿನ ಪಾಲಿಗೆ ಮರೀಚಿಕೆಯಾಗಿಯೇ ಉಳಿದು ಬಿಡುವವೆಂಬ ಅಳಲು
ಚಂದದ ಕವಿತೆ ಶರಣ್ ಸರ್
ಮುಂದಿನ ದಿನಗಳಲ್ಲಿ ಖಂಡಿತವಾಗಿ ಬದಲಾವಣೆ ಬರುತ್ತದೆ ಮೇಡಂ…. ಧನ್ಯವಾದಗಳು ಮೇಡಂ
ವಾಸ್ತವಡೊಡನೆ ಬದಲಾವಣೆಯತ್ತ ಹೆಜ್ಜೆ ಹಾಕಲು ಪ್ರೋತ್ಸಾಹಿಸುವ ಸಾಲುಗಳು ಚೆನ್ನಾಗಿವೆ.
ಧನ್ಯವಾದಗಳು ನಯನ ಬಜಕೂಡ್ಲು ಮೇಡಂ. ನೀವು ತಪ್ಪದೇ ಓದಿ ಪ್ರತಿಕ್ರಿಯೆ ನೀಡುತ್ತೀರಾ. ನಿಮ್ಮ ಆಸಕ್ತಿಗೆ ನಮಸ್ಕಾರ
ಸರಳ ಸುಂದರವಾಗಿ ಕಂಡರೂ ಸವಾಲಾಕುವ ಕವಿತೆಯ ಸಾಲುಗಳು ಚಿಂತನೆ ಗೆ ಹಚ್ಚುವಂತಿವೆ..
ಧನ್ಯವಾದಗಳು ಸಾರ್
ಧನ್ಯವಾದಗಳು ನಾಗರತ್ನ ಮೇಡಂ
ಬದಲಾವಣೆಯ ಅಗತ್ಯತೆಯನ್ನು ಸಾರುವ, ಹಾಗೆಯೇ ಮಹಿಳೆಯರ ಮೇಲೆ ಇರುವ ಕಾಳಜಿಯ ಬಿಂಬಿಸುವ ಸುಂದರ ಕವಿತೆ.
ಧನ್ಯವಾದಗಳು ಪದ್ಮಾ ಆನಂದ್ ಮೇಡಂ
ಭಾಷಣಗಳಲ್ಲಿ ಮಾತ್ರ ಮಹಿಳೆಯನ್ನು ಅಟ್ಟಕ್ಕೇರಿಸಿ, ವಾಸ್ತವದಲ್ಲಿ ಶೋಷಿಸುತ್ತಿರುವ ಸಮಾಜದ ಮುಖಕ್ಕೆ ಕನ್ನಡಿ ಹಿಡಿದಿರುವ ಕವನ ಚೆನ್ನಾಗಿದೆ.