‘ಸಾಂದೀಪನಿ’ ಮಹರ್ಷಿ ಅಪೇಕ್ಷಿಸಿದ ಗುರುದಕ್ಷಿಣೆ

Share Button

ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿಯಬೇಕು . ಹಾಗೆಯೇ ವಿದ್ಯಾರ್ಜನೆ ಮಾಡಿದ ಮೇಲೆ ಗುರುದಕ್ಷಿಣೆಯನ್ನೂ ಕೊಡಬೇಕು. ಗುರುವಿಲ್ಲದೆ ಅಥವಾ ಗುರುದಕ್ಷಿಣೆ ಇಲ್ಲದೆ ಕಲಿತ ವಿದ್ಯೆ ಸಿದ್ಧಿಸಲಾರದು. ಅಥವಾ ಪ್ರಯೋಜನಕ್ಕೆ ಬಾರದು. ಇದು ಸನಾತನದಿಂದಲೇ ಬಂದ ಅನುಭವ. ಇಂತಹ ಗುರುದಕ್ಷಿಣೆಯನ್ನು ಯಾವ ರೂಪದಿಂದಲೂ ಕೊಡುತ್ತಿದ್ದರು. ಧನ, ಕನಕ, ಭೂಮಿ, ವಸ್ತ್ರ ಅಲ್ಲದೆ ಮಾನವೋಪಯೋಗಿ ಇತರ ವಸ್ತುಗಳನ್ನೂ ಕೊಡುತ್ತಿದ್ದರು.ಇಷ್ಟು ಮಾತ್ರವಲ್ಲದೆ ತಮ್ಮ ದೇಹದ ಒಂದು ಭಾಗವನ್ನೇ ಗುರುವಿಗೆ ದಕ್ಷಿಣೆಯಾಗಿ ನೀಡಿದ ವಿಚಿತ್ರ! ಅದ್ಭುತ! ತ್ಯಾಗಿಗಳೂ ನಮ್ಮ ಭರತ ಖಂಡದಲ್ಲಿ ಆಗಿಹೋಗಿದ್ದಾರೆ. ವಿದ್ಯೆ ಕಲಿಸಲು ಒಪ್ಪದಿದ್ದ ಗುರು!. ಆತನ ಪ್ರತಿಮೆಯನ್ನಾದರೂ ಮಾಡಿ ಪ್ರತ್ಯಕ್ಷ ಗುರುವೆಂದು ನಂಬಿ ಬಿಲ್ಲು ಕಲಿತ ಏಕಲವ್ಯ!.

ವಿದ್ಯೆ ಕಲಿಸಲು ಒಪ್ಪದಿದ್ದ ಗುರುವು ದಕ್ಷಿಣೆ ಕೇಳಿದನೆಂದು! ಅದೂ ಶಿಷ್ಯನ ಹೆಬ್ಬೆರಳನ್ನು! ಇದು ಎಷ್ಟೋ ಸಹಸ್ರ ವರ್ಷಗಳ ಹಿಂದೆ ಆಗಿಹೋದ ಘಟನೆಯಾದರೂ ಈಗಲೂ ಅದನ್ನೋದುವಾಗ ಕರುಳು ಮಿಡಿದ ಅನುಭವಾಗುವುದಿಲ್ಲವೇ!?  ಇರಲಿ.

ಇದರ ಹಿಂದೆ ಅರ್ಜುನನ ಹಿತ ಕಾಯ್ವ ಯೋಚನೆ ದ್ರೋಣಾಚಾರ್ಯರಿಗೆ!.ಶಿಷ್ಯರ ಮುಖೇನ ತಮ್ಮ ಸ್ವಂತ ಅಥವಾ ಲೋಕಮುಖಿ ಕೆಲಸವಾಗಬೇಕೆಂದು ತಮ್ಮ ಬೇಡಿಕೆಯನ್ನು ಶಿಷ್ಯರ ಮುಂದಿಟ್ಟು ಗುರುದಕ್ಷಿಣೆ ನೆಪದಲ್ಲಿ ಆ ಮಹತ್ಕಾರ್ಯವನ್ನು  ಸಾಧಿಸಿಕೊಳ್ಳುವ ಉದ್ದೇಶ. ಶಿಷ್ಯರೆನಿಸಿದ ಆಚಾರ್ಯರು, ಈ ನಿಟ್ಟಿನಲ್ಲಿ ‘ಸಾಂದೀಪನಿ’ ಮುನಿವರ್ಯರು ನೆನಪಿಗೆ ಬರುತ್ತಾರೆ.ಇವರು ಯಾರಿಗೆ ವಿದ್ಯೆ ಕಲಿಸಿ  ಗುರುವಾದರು? ಯಾವ ಗುರುದಕ್ಷಿಣೆಯನ್ನು ಅಪೇಕ್ಷಿಸಿದರು? ನೋಡೋಣ.

‘ಸಾಂದೀಪನಿ’ ಒಬ್ಬ ವಿದ್ವಾಂಸ ಬ್ರಾಹ್ಮಣ. ಮಾಳವ ದೇಶದಲ್ಲಿ ವಾಸಿಸುತ್ತಿದ್ದವ. ಬಲರಾಮ ಮತ್ತು ಶ್ರೀಕೃಷ್ಣರಿಗೆ ಈತನೇ ವಿದ್ಯೆ ಹೇಳಿಕೊಟ್ಟಾತ.

ಒಮ್ಮೆ ಈತನು ತನ್ನ ಪತ್ನಿಯೊಂದಿಗೆ ಪ್ರಭಾಸ ಕ್ಷೇತ್ರಕ್ಕೆ ಹೋಗಿದ್ದಾಗ; ಈತನ ಮಗನನ್ನು ಪ್ರಹ್ಲಾದನ ತಮ್ಮ ಸಂಹ್ಲಾದನ ಮಗನಾದ ಪಂಚಜನನು ಎತ್ತಿಕೊಂಡು ಸಮುದ್ರ ಪ್ರವೇಶಿಸಿದನು. ಮಗನಿಲ್ಲದ ಕೊರಗು ‘ಸಾಂದೀಪನಿ’ ಯ ಮನದಲ್ಲಿ ಆಳವಾಗಿ ನೆಲೆಸಿತ್ತು. ಇತ್ತ ಶ್ರೀಕೃಷ್ಣನು ತನಗೆ ವಿದ್ಯೆ ಹೇಳಿಕೊಟ್ಟ ಗುರುವಿನಲ್ಲಿ ಒಂದು ದಿನ ಗುರುದಕ್ಷಿಣೆಯಾಗಿ ಏನು ಕೊಡಬೇಕೆಂದು ಕೇಳಿಕೊಂಡನು. ಆಗ ಗುರು ಹಾಗೂ ಗುರುಪತ್ನಿ ಇಬ್ಬರೂ ಸೇರಿಕೊಂಡು  ”ನಮ್ಮ ಮಗನನ್ನು ಸಂಹ್ಲಾದನ ಮಗನಾದ ಪಂಚಜನನು ಕೊಂಡೊಯ್ದು ಸಮುದ್ರದ ತಳದಲ್ಲಿರಿಸಿದ್ದಾನೆ. ಅವನನ್ನು ಜೀವಸಹಿತ ನಮಗೆ ತಂದೊಪ್ಪಿಸಬೇಕು. ಇದುವೇ ನಾವು ಅಪೇಕ್ಷಿಸುವ ಗುರುದಕ್ಷಿಣೆ” ಎಂದರು.

ಶ್ರೀಕೃಷ್ಣನು ಸಮುದ್ರನನ್ನು ಸಂಪರ್ಕಿಸಿ  ‘ಪಂಚಜನ’ ನಿರುವ  ಸ್ಥಳವನ್ನು ಹುಡುಕಿ ನೋಡಿದಾಗ ಅಲ್ಲಿ ಗುರುಪುತ್ರನು  ಕಾಣಲಿಲ್ಲ. ಗುರುಪುತ್ರ ಯಮಲೋಕದಲ್ಲಿದ್ದಾನೆಂದು ತಿಳಿಯಿತು. ಕೂಡಲೇ ಈ ರಾಕ್ಷಸ ಪ್ರವೃತ್ತಿಯವನಾದ ಪಂಚಜನ ನನ್ನು ಕೊಂದು; ಅವನ ಮೂಳೆಯಿಂದ ‘ಪಾಂಚಜನ್ಯ’ ವೆಂಬ ಶಂಖವನ್ನು ನಿರ್ಮಿಸಿಕೊಂಡು ಯಮಲೋಕಕ್ಕೆ ಹೋದನು. ‘ಪಾಂಚಜನ್ಯ’ದ ಸಹಾಯದಿಂದ ಯಮಲೋಕಕ್ಕೆ  ಹೋಗಲು ಸುಲಲಿತವಾಯಿತು. ಯಮನ ಪಟ್ಟಣವಾದ ‘ಶೈಮಿನಿ’ ಯಲ್ಲಿಗೆ ಬಂದು ಗುರುಪುತ್ರನನ್ನು ತನ್ನ ಗುರುವಾದ  ‘ಸಾಂದೀಪನಿ’ ಮುನಿಗೆ ತಂದೊಪ್ಪಿಸಿದನು. ತಮ್ಮ ಪುತ್ರ ‘ಪುನರ್ದತ್ತ’ ನನ್ನು ಪಡೆದ ಮುನಿ ದಂಪತಿಗಳು ಹರ್ಷಿತರಾದರು. ಗುರುವಿನ ಅಪೇಕ್ಷೆಯನ್ನು ಈಡೇರಿಸಿದ ಶ್ರೀಕೃಷ್ಣನ ಮನದಲ್ಲೂ ಧನ್ಯತಾಭಾವ ಮೂಡಿತು.ಅವತಾರ ಪುರುಷನಾದ  ಶ್ರೀಕೃಷ್ಣನಿಗೆ  ಅರುವತ್ತನಾಲ್ಕು ವಿದ್ಯೆಯನ್ನು ಕಲಿಸಿದ ಸಾಂದೀಪನಿ ಮುನಿಯು ಲೋಕಪ್ರಸಿದ್ಧನಾದನು.

– ವಿಜಯಾಸುಬ್ರಹ್ಮಣ್ಯ ಕುಂಬಳೆ.

7 Responses

  1. Vijayasubrahmanya says:

    ನನ್ನ ಲೇಖನ ಪ್ರಕಟಿಸಿದ ಅಡ್ಮಿನರ್ ಹೇಮಮಾಲ ಹಾಗೂ ಓದಿ ಮೆಚ್ಚಿದ ಓದುಗರಿಗೆ ಧನ್ಯವಾದಗಳು.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. ಸೊಗಸಾದ ನಿರೂಪಣೆ

  4. ಈ ಸಂದೀಪನಿ ಮಹರ್ಷಿ ಕಥೆ ನನಗೆ ಸರಿಯಾಗಿ ಗೊತ್ತಿರಲಿಲ್ಲ.
    ನಿಮ್ಮ ಪುರಾಣ ಕಥೆ ಮೂಲಕ ತಿಳಿಸಿ ಕೊಟ್ಟ ನಿಮಗೆ..ಧನ್ಯವಾದಗಳು ವಿಜಯಾ ಮೇಡಂ.

  5. Padma Anand says:

    ಅಪರೂಪದ ಚಂದದ ಕಥೆ.

  6. SHARANABASAVEHA K M says:

    ಪೌರಾಣಿಕ ಕತೆಗಳನ್ನು ಓದುವುದೇ ಒಂದು ಹಬ್ಬ…. ನಿಮ್ಮ ಬರಹ ಮಾಹಿತಿಪೂರ್ಣವಾಗಿರುತ್ತದೆ ಓದಿಸಿಕೊಂಡು ಹೋಗುತ್ತದೆ…..ಅಜ್ಜಿ ಹೇಳಿದ ಕತೆ ತರಾ…..ಧನ್ಯವಾದಗಳು ವಿಜಯಾ ಮೇಡಂ

  7. ಶಂಕರಿ ಶರ್ಮ says:

    ಶ್ರೀಕೃಷ್ಣ ಬಲರಾಮರ ಗುರು ಸಾಂದೀಪನಿ ಹಾಗೂ ಪಾಂಚಜನ್ಯ ಶಂಖದ ಕುರಿತ ಅಪರೂಪದ ಕಥೆ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: