ವಾಟ್ಸಾಪ್ ಕಥೆ 11 :ಪತ್ರವು ತಂದ ಖುಷಿ.
ಅಣ್ಣತಮ್ಮಂದಿರಿಬ್ಬರು ಬೇರೆಬೇರೆ ಊರುಗಳಲ್ಲಿ ತಮ್ಮ ಜೀವನ ನಡೆಸಿಕೊಂಡು ಇದ್ದರು ಅವರಿಬ್ಬರ ನಡುವೆ ತುಂಬ ಪ್ರೀತಿ, ಅಭಿಮಾನಗಳಿದ್ದವು. ಅಣ್ನನು ಯೋಗಕ್ಷೇಮಕ್ಕೆ ತಮ್ಮನಿಗೆ ಆಗಿಂದಾಗ್ಗೆ ಪತ್ರ ಬರೆಯುತ್ತಿದ್ದ. ಅವನು ಬರೆಯುತ್ತಿದ್ದ ಪತ್ರಗಳಲ್ಲಿ ತಮ್ಮನ ಬಗ್ಗೆ ಅವನಿಗಿದ್ದ ಪ್ರೀತಿ ವಿಶ್ವಾಸದ ನುಡಿಗಳು ತುಂಬಿರುತ್ತಿದ್ದವು. ತಮ್ಮನಿಗೆ ಆ ಪತ್ರಗಳನ್ನು ಓದುವುದೇ ಒಂದು ಆನಂದದ ಅನುಭವವನ್ನು ಕೊಡುತ್ತಿತ್ತು.
ಒಮ್ಮೆ ಕಾರ್ಯನಿಮಿತ್ತ ಅಣ್ಣನು ತಮ್ಮನಿದ್ದ ಊರಿಗೆ ಬಂದ. ಪೇಟಯಲ್ಲಿ ಏನನ್ನೋ ಖರೀದಿಸಬೇಕಾಗಿತ್ತು. ಆಗ ಅವನಲ್ಲಿದ್ದ ಹಣ ಸ್ವಲ್ಪ ಕಡಿಮೆಯಾಯ್ತು. ತನ್ನ ತಮ್ಮನಿಂದ ಹತ್ತು ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದು ತನ್ನ ಖರೀದಿ ಮುಗಿಸಿದ. ಊರಿಗೆ ಹೊರಡುವ ಮುನ್ನ ತಮ್ಮಾ ನಿನ್ನಿಂದ ತೆಗೆದುಕೊಂಡ ಹತ್ತುಸಾವಿರ ರುಪಾಯಿಗಳನ್ನು ಒಮ್ಮೆಗೇ ಹಿಂತಿರುಗಿಸಲು ನನಗೆ ಸಾಧ್ಯವಾಗುವುದಿಲ್ಲ. ಅದನ್ನು ಪ್ರತಿ ತಿಂಗಳೂ ಒಂದು ಸಾವಿರದಂತೆ ಕಂತಿನಲ್ಲಿ ಹಿಂದಿರುಗಿಸುತ್ತೇನೆ ಎಂದು ಹೇಳಿ ತನ್ನೂರಿಗೆ ಹಿಂದಿರುಗಿದ. ತಮ್ಮ ಅನುಕೂಲವಂತ. ಆದ್ದರಿಂದ ಅದರ ಬಗ್ಗೆ ಯೋಚಿಸಲಿಲ್ಲ.
ಒಂದು ತಿಂಗಳಾದ ನಂತರ ಅಣ್ಣನಿಂದ ಮೊದಲ ಕಂತಾಗಿ ಒಂದುಸಾವಿರ ರೂಪಾಯಿಗಳ ಜೊತೆಗೆ ಒಂದು ಸುದೀರ್ಘ ಪತ್ರ ತಮ್ಮನ ಕೈ ಸೇರಿತು. ಅವನು ಪತ್ರವನ್ನು ಮತ್ತೆ ಮತ್ತೆ ಓದಿದ. ಅಣ್ಣ ಎಷ್ಟು ಚೆನ್ನಾಗಿ ನನಗೆ ಪತ್ರ ಬರೆಯುತ್ತಾನೆ ಎಂದು ಸಂತೋಷ ಪಟ್ಟುಕೊಂಡ. ಇದು ಹೀಗೇ ಪ್ರತಿ ತಿಂಗಳೂ ಮುಂದುವರೆದು ಹತ್ತನೇ ತಿಂಗಳು ಕೊನೆಯ ಕಂತಾಗಿ ಒಂದು ಸಾವಿರ ರೂಪಾಯಿ ಮತ್ತು ಪತ್ರ ಬಂದಿತು. ತಮ್ಮನಿಗೆ ಅಣ್ಣನಿಂದ ಮುಂದಿನ ತಿಂಗಳು ಇಂತಹ ಪತ್ರ ಬರುವುದಿಲ್ಲವಲ್ಲಾ ಎಂದು ಚಿಂತೆಯಾಯಿತು. ಕುಡಲೇ ಮರು ಟಪಾಲಿನಲ್ಲಿ ಅಣ್ಣನಿಗೆ ಹತ್ತುಸಾವಿರ ರುಪಾಯಿಗಳ ಜೊತೆಗೆ ಒಂದು ಪತ್ರವಿಟ್ಟು ತಮ್ಮ ಕಳಿಸಿಕೊಟ್ಟ. ಪತ್ರದಲ್ಲಿ ಅಣ್ಣಾ ನೀನು ಕಳಿಸುವ ಹಣಕ್ಕಿಂತಲೂ ನೀನು ಬರೆಯುವ ಪತ್ರ ನನಗೆ ಹೆಚ್ಚು ಖುಷಿ ಕೊಡುತ್ತದೆ. ಅದನ್ನು ಕಳೆದುಕೊಳ್ಳಲು ನನಗಿಷ್ಟವಿಲ್ಲ. ಆದ್ದರಿಂದ ಈ ಹಣವನ್ನು ನಿನಗೆ ಮತ್ತೆ ಕಳುಹಿಸಿದ್ದೇನೆ. ಮೊದಲಿನಂತೆ ನೀನು ಪ್ರತಿ ತಿಂಗಳೂ ನನಗೆ ಪತ್ರ ಬರೆಯುವುದನ್ನು ನಿಲ್ಲಿಸಬೇಡ ಎಂದು ಕೇಳಿಕೊಂಡಿದ್ದ.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ವಾಹ್
ಬಹಳ ಚಂದದ ಭಾವನಾತ್ಮಕ ಕಥೆ ಮನಮುಟ್ಟಿತು.
ನಿಜ ಪತ್ರ ಓದುವುದು ಖುಷಿ ಕೊಡುವ ವಿಷಯ. ಚೆನ್ನಾಗಿ ಬರೆದಿದ್ದೀರಿ ಸೋದರಿ
ಬಹಳ ಸುಂದರವಾಗಿದೆ ಕಥೆ.
ಧನ್ಯವಾದಗಳು ಶಂಕರಿ ಸುಧಾ ಮೇಡಂ
ಎಂದಿನಂತೆ ಸುಂದರ ಸಂದೇಶ ಹೊತ್ತ ಭಾವನಾತ್ಮಕ ಕಥೆ.
ಧನ್ಯವಾದಗಳು ಸೋದರಿ ಸುಜಾತ ಹಾಗು ನಯನ ಮೇಡಂ
ಹಣಕ್ಕಿಂತ ಅಣ್ಣನ ಪ್ರೀತಿ ವಾತ್ಸಲ್ಯವನ್ನು ಮೆಚ್ಚಿದ ಕಥೆ
ಇಂದಿನ ಯುಗದಲ್ಲಿ ಅಪರೂಪವೇ ಸರಿ
ಧನ್ಯವಾದಗಳು ಗಾಯತ್ರಿ ಮೇಡಂ