ಜೂನ್ ನಲ್ಲಿ ಜೂಲೇ : ಹನಿ 16
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಚಾಂಗ್ಲಾ ಪಾಸ್ – ಲಡಾಕ್ ನ ಎರಡನೇ ಎತ್ತರದ ದಾರಿ
28 ಜೂನ್ 2018 ರಂದು ಎಂದಿನಂತೆ ಮುಂಜಾನೆ ನಾಲ್ಕು ಗಂಟೆಗೆ ಬೆಳಕಾಯಿತು. ಸ್ನಾನ ಮಾಡಿ , ಉಪಾಹಾರ ಮುಗಿಸಿ ಸಿದ್ದರಾದೆವು. ಓಯೋ ಟ್ರಾವೆಲ್ಸ್ ನವರು ನೇಮಿಸಿದ ಒಬ್ಬರು ಬಂದು ನಮ್ಮ ಆ ದಿನ ಹಾಗೂ ಮರುದಿನದ ವೇಳಾಪಟ್ಟಿಯನ್ನು ವಿವರಿಸಿದರು. ಅಂದು ನಾವು ಲಡಾಕ್ ನ ಎರಡನೇ ಎತ್ತರದ ದಾರಿಯಾದ ಚಾಂಗ್ಲಾ ಪಾಸ್ ಮೂಲಕ ಹೊರಟು ಚೀನಾದ ಗಡಿಯಲ್ಲಿರುವ ‘ಪ್ಯಾಂಗೋಗ್ ‘ ಸರೋವರದ ಕಡೆ ಪ್ರಯಾಣಿಸಲಿದ್ದೆವು. ಈ ದಾರಿಯಲ್ಲಿ ಚಾಂಗ್ಲಾ ಪಾಸ್ ಸಿಗುತ್ತದೆ. . ಲೇಹ್ ನಿಂದ ಚಾಂಗ್ಲಾ ಪಾಸ್ ಗೆ ತಲಪಲು 3 ಗಂಟೆ ಪ್ರಯಾಣಿಸಬೇಕು. ಸಮುದ್ರ ಮಟ್ಟದಿಂದ 17688 ಅಡಿ ಎತ್ತರದಲ್ಲಿರುವ ಈ ಸ್ಥಳದಲ್ಲಿ ಸಾಧು ಚಾಂಗ್ಲಾ ಬಾಬಾ ಅವರ ಮಂದಿರವಿದೆ. ಹಾಗಾಗಿ ಆ ಹೆಸರು ಬಂತು.
ನಿನ್ನೆ ತಾನೇ ಅತಿ ಎತ್ತರದ ಕರ್ದೂಂಗ್ಲಾ ಪಾಸ್ ನಲ್ಲಿ ಅಪಾಯದ ಸಂದರ್ಭದಲ್ಲಿ ಸಿಲುಕಿ, ಬಚಾವ್ ಆಗಿ ಬಂದಿದ್ದ ನಾವು ‘ಎರಡನೇ’ ಎತ್ತರದ ಪಾಸ್ ನಲ್ಲಿಯೂ ಅಪಾಯವಾಗುತ್ತದೆಯೇ ಎಂದು ಹೋಟೆಲ್ ನ ಮಾಲಿಕ ಗಿರಿಯವರನ್ನು ಕೇಳಿದೆವು. ಅವರು ‘ಚಾಂಗ್ಲಾ ಪಾಸ್ ನಲ್ಲಿಯೂ ಕೆಲವೊಮ್ಮೆ ಭೂಕುಸಿತ, ಕಲ್ಲುಗಳ ಪತನ ಆಗುತ್ತದೆಯಾದರೂ ಕರ್ದೂಂಗ್ಲಾ ಪಾಸ್ ನಷ್ಟು ಅಪಾಯಕಾರಿ ಅಲ್ಲ, ಆರಾಮವಾಗಿ ಹೋಗಿ ಬನ್ನಿ’ ಎಂದು ನಕ್ಕರು.
ಲಡಾಕ್ ನ ದಕ್ಷಿಣ ಭಾಗದಲ್ಲಿರುವ ಈ ಬೆಟ್ಟಹತ್ತುವ ಬಳಸುದಾರಿಯಲ್ಲಿ ಕಣ್ಣಿಗೆ ಮುದ ಕೊಡುವ ಪ್ರಕೃತಿ ಸೌಂದರ್ಯ, ಹಿಮ ಬೆಟ್ಟಗಳ ಮೆರವಣಿಗೆ, ಅಲ್ಲಲ್ಲಿ ಕಣಿವೆಗಳಲ್ಲಿ ಹಸಿರು ಹೊಲಗಳು, ಅಲ್ಲಲ್ಲಿ ಹಳದಿ ಬಣ್ಣದ ಹೂಗಳುಳ್ಳ ಸಾಸಿವೆ ಹೊಲಗಳು, ಮೊನಾಸ್ಟ್ರಿಗಳು….. ಹೀಗೆ ಪುನರಾವರ್ತಿತವಾಗುತ್ತಿದ್ದುವು. ಮಧ್ಯಾಹ್ನದ ಅಂದಾಜಿಗೆ ಚಾಂಗ್ಲಾ ಪಾಸ್ ತಲಪಿದೆವು . ಅಲ್ಲಿದ್ದ ಕೆಫೆಯಲ್ಲಿ ನಮಗೆ ಬೇಕಾದುದನ್ನು ಕೊಂಡೆವು. ಒಂದಷ್ಟು ಪೊಟೋ ಕ್ಲಿಕ್ಕಿಸಿ ‘ಪ್ಯಾಂಗಾಂಗ್’ ಸರೋವರದತ್ತ ಹೊರಟೆವು.
ಈ ದಾರಿಯಲ್ಲಿ ‘ ಚಾಂಗ್ ತಾಂಗ್ ‘ ವನ್ಯಜೀವಿ ಸಂರಕ್ಷಣಾ ವಲಯವೂ ಸಿಗುತ್ತದೆ. ಕರಡಿ, ಚಿರತೆ, ಹಿಮಾಲಯದಲ್ಲಿ ಮಾತ್ರ ಕಾಣಸಿಗುವ ವಿಶಿಷ್ಟ ಪಕ್ಷಿಗಳು, ಅಳಿಲುಗಳು ಇವೆ ಎಂಬ ಸೂಚನೆಗಳು ಅಲ್ಲಲ್ಲಿ ಇದ್ದುವು. ಮರಗಳು ತೀರಾ ಕಡಿಮೆ ಇದ್ದ ಜಾಗದಲ್ಲಿ ಪ್ರಾಣಿಗಳು ಎಲ್ಲ್ರಿರುತ್ತವೆ ಎಂದು ಕತ್ತು ಚಾಚಿ ಹೊರಗಡೆ ನೋಡುತ್ತಾ ಇದ್ದೆವು. ಒಂದೆಡೆ ದೊಡ್ಡ ಜಾತಿಯ ಅಳಿಲು ಮಾತ್ರ ಕಾಣಸಿಕ್ಕಿತು.
ಸಾಲ್ಟೆಕ್- ಮಂಜುಗಡ್ಡೆಯಾದ ಸರೋವರ
ಮಧ್ಯದಾರಿಯಲ್ಲಿ ಒಂದೆಡೆ ಸರೋವರವೊಂದರ ನೀರು ಮಂಜುಗಡ್ಡೆಯಾಗಿತ್ತು. ಜನರು ಮಂಜುಗಡ್ಡೆಯ ಮೇಲ, ಅರ್ಥಾತ್ ಸರೋವರದ ಮೇಲೆ ನಡೆದು ಸಂತಸ ಪಡುತ್ತಿದ್ದರು . ಪಕ್ಕದಲ್ಲಿದ್ದ ಒಂದು ಟೆಂಟ್ ನಲ್ಲಿ ಕಾಫಿ-ಚಹಾ ಇತ್ಯಾದಿ ಮಾರಾಟಕ್ಕೆ ಲಭ್ಯವಿತ್ತು. ಅದರಾಚೆಗೆ, ಬೇಲಿ ಹಾಕಿದ್ದ ಜಾಗದಲ್ಲ್ಲಿ ಒಬ್ಬಾಕೆ ಏನೋ ಕೆಲಸ ಮಾಡುತ್ತಿದ್ದಳು. ಆಕೆಯನ್ನು ಮಾತನಾಡಿಸಿ, ಆ ಸರೋವರದ ಹೆಸರೇನು ಅಂದೆ. ‘ ಜುಮ್ಲಾಂಗ್’ ಅಂದಳು. ಆಕೆ ಯಾಕ್ ಮೃಗವನ್ನು ಸಾಕುತ್ತಾಳಂತೆ. ಒಟ್ಟು ೧೫ ಯಾಕ್ ಗಳಿವೆ, ಈಗ ಮೇಯಲು ಕೆಳಗೆ ಹೋಗಿವೆ ಎಂದಳು. ಅವಳ ಜೊತೆಗೆ ಫೊಟೋ ಕ್ಲಿಕ್ಕಿಸಿ ಮೊಬೈಲ್ ನಲ್ಲಿ ತೋರಿಸಿದೆ. ಹಿಗ್ಗಿನಿಂದ ನಕ್ಕಳು. ನನ್ನ ಕೈಯಲ್ಲಿದ್ದ ಬಿಸ್ಕಿಟ್ ಪೊಟ್ಟಣವನ್ನು ಆಕೆಗೆ ಕೊಟ್ಟು ವಿದಾಯ ಹೇಳಿದೆ. ಇಂತಹ ಜಾಗಗಳಲ್ಲಿ ಜೀವನ ಎಷ್ಟು ದುಸ್ತರ ಎಂಬುದು ಬಯಲುಸೀಮೆಯ ಬಿಸಿಲುನಾಡಿನ ನಮಗೆ ಊಹಿಸಲೂ ಅಸಾಧ್ಯ.
(ಮುಂದುವರಿಯುವುದು..)
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=37478
-ಹೇಮಮಾಲಾ, ಮೈಸೂರು
ಬಹಳ ಸವಿ ಸವಿಯಾದ ಪ್ರವಾಸ ಕಥನ.
ಸೊಗಸಾದ ಪ್ರವಾಸ ಕಥನ
ಚುಟುಕಾದ ಪ್ರವಾಸ ಕಥನ ಚೆನ್ನಾಗಿ ಓದಿಸಿಕೊಂಡು ಹೋಯಿತು.. ಗೆಳತಿ ಹೇಮಾ..
ಪ್ರವಾಸದ ವೇಳೆ ಎಷ್ಟೊಂದು ವಿಭಿನ್ನ ಅನುಭವಗಳು ನಮ್ಮದಾಗುತ್ತಲ್ಲವೇ. ಪ್ರಕೃತಿಯ ಸುಂದರ ತಾಣಗಳ ವರ್ಣನೆ ಸೊಗಸಾಗಿ ಮೂಡಿಬಂದಿದೆ.
ಸರೋವರದ ಮೇಲಿನ ನಡಿಗೆ, ಸುಂದರ ಪ್ರಕೃತಿ ನಡುವಿನ ಪ್ರಯಾಣ, ಯಾಕ್ ಒಡತಿಯೊಂದಿಗಿನ ಸ್ನೇಹ…. ಚೊಕ್ಕದಾದ ಪ್ರವಾಸ ಕಥನ ಮುದನೀಡಿತು… ಧನ್ಯವಾದಗಳು ಮಾಲಾ ಅವರಿಗೆ.
ಬಹಳ ಚೆನ್ನಾಗಿರುವ ಕಥನ