ಕೆರೋಲ್‌ಳ ಕರೋನ ಸಂಭ್ರಮ
ಅದೊಂದು ಅಮೆರಿಕದ ಟೆಕ್ಸಾಸ್ ನಗರದ ಸಮೀಪದ ಹಳ್ಳಿ. ಕೆರೋಲ್ ಮತ್ತು ರಾಬರ್ಟ್ ಓರ್ವ ಅನ್ಯೋನ್ಯ ದಂಪತಿಗಳು. ಮದುವೆಯಾಗಿ ಐವತ್ತು ವರ್ಷ ಕಳೆದಿದೆ. ಆರು ಜನ ಮಕ್ಕಳು ಹಾಗೂ ಆರು ಜನ ಮೊಮ್ಮಕ್ಕಳು ಇರುವ ಸಂಸಾರ. ಮಕ್ಕಳೆಲ್ಲ ಬೇರೆ ಕಡೆ ಚದುರಿ ಹೋಗಿದ್ದಾರೆ. ಕೆರೋಲ್ ಹಾಗೂ ರಾಬರ್ಟ್ ಅನ್ಯೋನ್ಯವಾಗಿದ್ದರಷ್ಟೆ. ಕೆರೋಲ್‌ಳೇ ಹೇಳುವ ಪ್ರಕಾರ ಕಳೆದ ಐವತ್ತು ವರ್ಷಗಳಲ್ಲಿ ಕೇವಲ ಆರು ಬಾರಿ ಅಷ್ಟೇ ತಾವು ಜಗಳವಾಡಿದ್ದೇವೆ. ಪ್ರತಿ ಬಾರಿ ರಾಜಿಯಾದಾಗಲೂ ಓರ್ವ ಮಗುವಿನ ತಾಯಿಯಾದೆ ಎಂದು ನಗುತ್ತಾ ಹೇಳುತ್ತಾಳೆ. ಅದೂ ಮೂರು ಗಂಡು, ಮೂರು ಹೆಣ್ಣು. ಕಳೆದ ಮಾರ್ಚಿನಿಂದ ಕರೋನಾದಿಂದ ದಂಪತಿಗಳಿಬ್ಬರೂ ಹೈರಾಣಾಗಿದ್ದರು. ಮನೆಬಿಟ್ಟು ಹೊರಗೆ ಹೋಗಲಾರದಂತಹ ಪರಿಸ್ಥಿತಿ. ಎಲ್ಲೆಲ್ಲೂ ಸಾವಿನ ಸುದ್ದಿ. ಹೀಗೆ ದಿನ ಕಳೆದಿತ್ತು. ಅಕ್ಟೋಬರ್ ಹೊತ್ತಿಗೆ ಛಳಿ ಪ್ರಾರಂಭ. ಪರಿಸ್ಥಿತಿ ಇನ್ನೂ ಆಗತಾನೆ ಸಹಜ ಸ್ಥಿತಿಗೆ ಮರಳುತ್ತಿತ್ತು. ಮಧ್ಯಾಹ್ನ ಮೂರು ಗಂಟೆಗೆ ಕತ್ತಲಾಗುತ್ತಿತ್ತು. ಬೆಳಿಗ್ಗೆ ಎಂಟಾದರೂ ಬೆಳಗಾಗುತ್ತಿರಲಿಲ್ಲ. ಹೀಗಾಗಿ ಒಂದು ತರಹದ ಜಿಗುಪ್ಸೆ ಎಲ್ಲರಲ್ಲೂ ತಾಂಡವವಾಡುತ್ತಿತ್ತು.
ಈ ಮಧ್ಯೆ ಕೆರೋಲ್ ಹಾಗೂ ರಾಬರ್ಟ್‌ಗೆ ಈ ಬಾರಿ ಮಕ್ಕಳು ಹಾಗೂ ಮೊಮ್ಮಕ್ಕಳೆಲ್ಲಾ ನವೆಂಬರ್ ತಿಂಗಳ ಕೊನೆಯ ಗುರುವಾರ ನಡೆಯುವ ಪ್ರಸಿದ್ಧ ಥ್ಯಾಂಕ್ಸ್ ಗೀವಿಂಗ್ ಹಬ್ಬಕ್ಕೆ ಆಹ್ವಾನಿಸಬೇಕೆಂದು ಅನಿಸಿತು. ಕರೋನಾದ ಆರ್ಭಟ, ಏಕಾಂತತೆ, ಹವಾಮಾನ ಇವುಗಳಿಂದ ಸ್ವಲ್ಪವಾದರೂ ಮನಸ್ಸಿಗೆ ನೆಮ್ಮದಿ ಸಿಗಬಹುದೆಂಬ ಒಂದು ಆಸೆ ಕೂಡ ಇಬ್ಬರಲ್ಲೂ ಇತ್ತು. ಈ ಹಬ್ಬ ಬಹಳ ಅದ್ದೂರಿಯಾದ್ದರಿಂದ ಎಲ್ಲರಿಗೂ ರಜೆಯಂತೂ ಸಿಗುತ್ತದೆ. ಇದು ರಾಷ್ಟ್ರೀಯ ಹಬ್ಬ ಅಲ್ಲವೇ ಎಂದು ಇಬ್ಬರೂ ಸಂಭ್ರಮಿಸಿದರು. ಇನ್ನು ಇದಕ್ಕೆ ಬೇಕಾದ ತಯಾರಿಗಳನ್ನು ಇಬ್ಬರೂ ಪ್ರಾರಂಭಿಸಿದರು. ಪ್ರತಿವರ್ಷ ಈ ಹಬ್ಬಕ್ಕೆ ಎಲ್ಲರಿಗೂ ಉಡುಗೊರೆ ಕೊಡುವ ಪದ್ಧತಿಯಿದೆ. ಆದರೆ ಈ ವರ್ಷ ಕೆರೋಲ್‌ಗೆ ವರ್ಷಪೂರ ಕೆಲಸ ಮಾಡಿ ಬೇಸತ್ತು ಹೋಗಿತ್ತು. ಅವಳಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಂತೂ ಇತ್ತು. ಆದ್ದರಿಂದ ಈ ಬಾರಿ ಒಂದು ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಿಸಲು ತೀರ್ಮಾನಿಸಿದ್ದಳು. ಆರು ಮಕ್ಕಳಿಗೂ, ಅಳಿಯಂದಿರೂ, ಸೊಸೆಯರೂ, ಮೊಮ್ಮಕ್ಕಳು ಸೇರಿ ಆಹ್ವಾನ ಹೋಯಿತು. ಎಲ್ಲರೂ ಭಾಗವಹಿಸುವುದಾಗಿ ತಿಳಿಸಿದರು. ಥ್ಯಾಂಕ್ಸ್ ಗೀವಿಂಗ್ ಸಮಾರಂಭ ನವೆಂಬರ್ ತಿಂಗಳ ಕೊನೆಯ ಗುರುವಾರ ಎಂದು ಸಂಭ್ರಮ ದಿನದ ಎಣಿಕೆ ಪ್ರಾರಂಭವಾಯಿತು.
ಕೆರೋಲ್ ಹಾಗೂ ರಾಬರ್ಟ್ ಹಬ್ಬದ ತಯಾರಿಗೆ ಅಕ್ಟೋಬರ್‌ನಿಂದಲೇ ಪ್ರಾರಂಭಿಸಿದ್ದರು. ಆ ದಿನ ಬಂದೇ ಬಿಟ್ಟಿತು. ಹಬ್ಬದ ಪ್ರಧಾನವಾದ ಭಕ್ಷ್ಯದ ಪಟ್ಟಿಯಲ್ಲಿ ಟರ್ಕಿಕೋಳಿ ಇರುತ್ತದೆ. ಸಂಸಾರ ದೊಡ್ಡದಾದ್ದರಿಂದ ರಾಬರ್ಟ್ ಮೂರು ಟರ್ಕಿ ಕೋಳಿ ಖರೀದಿಸಿದ್ದ. ಕೆರೋಲ್ ಅವುಗಳಲ್ಲಿ ಖಾದ್ಯ ಮಾಡಲು ತಯಾರಿ ನಡೆಸಿದ್ದಳು. ಆ ದಿನ ಎಲ್ಲ ಮಕ್ಕಳು, ಮೊಮ್ಮಕ್ಕಳು ಬಂದು ಮನೆಯ ಹಬ್ಬದ ವಾತಾವರಣ ಬಲು ಸೊಗಸಾಗಿತ್ತು. ಮನೆಯನ್ನು ಸಿಂಗರಿಸಿದ್ದರು. ಕೆರೋಲ್ ಎಲ್ಲಾ ಖಾದ್ಯಗಳನ್ನು ಊಟದ ಮೇಜಿನ ಮಧ್ಯ ತಂದಿರಿಸಿದ್ದಳು. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಎಲ್ಲರೂ ಊಟಕ್ಕೆ ಮೊದಲು ತಮ್ಮ ಹಿರಿಯರಿಗೆ ವಂದನೆ ಸಲ್ಲಿಸುವುದು ಪದ್ಧತಿ. ಅದರಂತೆ ಹಿರಿಯ ಮಗ ಸೊಸೆಯಿಂದ ಪ್ರಾರಂಭವಾಯಿತು. ನಂತರ ಮೊಮ್ಮಕ್ಕಳ ಸರದಿ. ಎಲ್ಲರೂ ಹಿರಿಯರಿಗೆ ವಂದನೆ, ಪ್ರಾರ್ಥನೆ ಸಲ್ಲಿಸಿದರು. ಮೊಮ್ಮಕ್ಕಳ ಸರದಿ ಬಂದಾಗ ವಯಸ್ಸಿನಲ್ಲಿ ಹಿರಿಯರಿಂದ ಪ್ರಾರಂಭಿಸಿ ಕಿರಿಯರಿಗೆ ಕೊನೆಯ ಅವಕಾಶ. ಮಕ್ಕಳೂ ಎಲ್ಲ ತಮ್ಮ ಹಿರಿಯರಿಗೆ ಹಾಗೂ ಖಾದ್ಯಗಳಿಗೆ ವಂದನೆ ಸಲ್ಲಿಸಿದರು.
ಕೊನೆಗೆ ಐದು ವಯಸ್ಸಿನ ಸ್ಮಿತ್‌ನ ಸರದಿ. ಅವನು ಎದ್ದುನಿಂತು ಎಲ್ಲರಿಗೂ ವಂದಿಸಿ ಪ್ರಾರ್ಥಿಸಿದ. ಹಿರಿಯರಿಗೆ ವಂದಿಸಿ, ಖಾದ್ಯಗಳಿಗೆ ವಂದಿಸಿ ಕೊನೆಗೆ ಹೇಳಿದ. ನಾನು ಮೇಜಿನ ಮೇಲಿರುವ ಟರ್ಕಿಯಾಗಲಿಲ್ಲವಲ್ಲ ಎಂದು ಭಗವಂತನಿಗೆ ವಿಶೇಷವಾದ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದೇನೆ ಎಂದ. ಅಲ್ಲಿದ್ದ ಎಲ್ಲರಿಗೂ ಒಮ್ಮೆ ದಿಗ್ಭ್ರಮೆಯಾಯಿತು. ಎಲ್ಲರೂ ಸ್ಮಿತ್‌ನನ್ನು ಮನಸಾರೆ ಕೊಂಡಾಡಿದರು. ಊಟವೆಲ್ಲ ಸಾಂಗವಾಗಿ ನೆರವೇರಿದ ಮೇಲೆ ಕೆರೋಲ್ ಎದ್ದು ನಿಂತಳು. ನಾನೀಗ ಈ ಹಬ್ಬದ ಸವಿನೆನಪಿಗಾಗಿ ಒಂದು ವಿಶೇಷವಾದ ಸ್ಪರ್ಧೆಯನ್ನು ಯೋಜಿಸಿದ್ದೇನೆ. ಎಲ್ಲರೂ ದಯವಿಟ್ಟು ಭಾಗವಹಿಸಿ ಅದನ್ನು ಸಂಪನ್ನಗೊಳಿಸಬೇಕೆಂದು ಪ್ರಾರ್ಥಿಸಿದಳು. ಕೋಣೆಗೆ ಹೋಗಿ ತನ್ನ ಛಳಿಗಾಲದ ಟೊಪ್ಪಿಗೆಯನ್ನು ತಂದು ಮನೆಯ ಹಿರಿಯ ಮಗನಿಂದ ಪ್ರಾರಂಭಿಸಿ ಎಲ್ಲರಿಗೂ ಅದರಲ್ಲಿದ್ದ ಒಂದೊಂದು ಚೀಟಿ ಎತ್ತಲು ಹೇಳಿದಳು. ಎಲ್ಲರೂ ಉಡುಗೊರೆಯ ಸಂಭ್ರಮದಲ್ಲಿದ್ದವರು ಬಹಳ ಉತ್ಸಾಹದಿಂದ ಚೀಟಿ ಎತ್ತಿದರು. ಒಂದೊಂದರಲ್ಲಿ ಒಂದು ಕೆಲಸ ಬರೆದಿತ್ತು. ಹಿರಿಯ ಮಗಳಿಗೆ ಪಾತ್ರೆ ತೊಳೆಯುವುದು, ಇನ್ನೊಬ್ಬಳಿಗೆ ಮೇಜನ್ನು ಶುಚಿಗೊಳಿಸುವುದು, ಮಗದೊಬ್ಬಳಿಗೆ ಎಲ್ಲವನ್ನು ಒರೆಸಿಡುವುದು, ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಕೆಲಸ ನಿಗದಿ ಪಡಿಸಿದ್ದಳು. ಎಲ್ಲರೂ ಅದನ್ನು ಓದಿ ಒಂದು ನಿಮಿಷ ದಿಗ್ಭ್ರಾಂತರಾದರು. ಆದರೂ ಸಾವರಿಸಿಕೊಂಡು ತಮಗೆ ಸಿಕ್ಕಿದ ಕೆಲಸಗಳಿಗೆ ಕೈ ಹಚ್ಚಿದರು. ಇತ್ತ ಕೆರೋಲ್ ಹಾಗೂ ರಾಬರ್ಟ್ ತಮ್ಮ ಮೊಮ್ಮಕ್ಕಳ ಜೊತೆ ಆಡಲು ಪಡಸಾಲೆಗೆ ಜಾರಿದರು.
ಕೆಲಸ ಎಲ್ಲ ಮುಗಿದ ಮೇಲೆ ರಾಬರ್ಟ್ ಮತ್ತು ಕೆರೋಲ್ ಎಲ್ಲರನ್ನೂ ಪಡಸಾಲೆಗೆ ಬರಹೇಳಿದರು. ಎಲ್ಲರ ಕ್ಷಮೆ ಯಾಚಿಸಿದರು. ವರ್ಷಪೂರ್ತಿ ಕರೋನಾದ ಬಾಧೆಯಿಂದ ಕಂಗೆಟ್ಟು ಮನಸ್ಸು ತೀರ ಹಾಳಾದ್ದರಿಂದ ಈ ವರ್ಷ ಈ ವಿನೂತನವಾದ ಒಂದು ಕೆಲಸ ಮಾಡಿದ್ದನ್ನು ಹೇಳಿದರು. ಎಲ್ಲರೂ ಸಂತೋಷದಿಂದ ತಮ್ಮ ಕೆಲಸ ನಿರ್ವಹಿಸಿ ಮಾಡಿ ಮುಗಿಸಿ ತಾವು ಕ್ಷಮೆ ಕೇಳುವ ಅಗತ್ಯವಿಲ್ಲವೆಂದು ಇವು ತಮ್ಮ ಕರ್ತವ್ಯವೆಂದೂ ಹೇಳಿದರು. ರಾಬರ್ಟ್ ಮತ್ತು ಕೆರೋಲ್ ಎಲ್ಲರಿಗೂ ತಮ್ಮ ಕೋಣೆಯಿಂದ ಥ್ಯಾಂಕ್ಸ್ ಗೀವಿಂಗ್‌ನ ಕೊಡುಗೆಯನ್ನು ನೀಡಿ ಸಂತೋಷ ಪಡಿಸಿದರು. ಮೊಮ್ಮಕ್ಕಳು ಈ ಸಮಾರಂಭವನ್ನು ಆನಂದಿಸಿ ಎಲ್ಲರೂ ತಮ್ಮ ತಮ್ಮ ಊರಿಗೆ ತೆರಳಲು ಅನುವಾದರು. ಮತ್ತೆ ಮನೆ ಬಿಕೋ ಎಂದಿತು. ಕತ್ತಲು ಕವಿಯಿತು. ಚಳಿ ಪ್ರಾರಂಭವಾಯಿತು. ಕೆರೋಲ್ ಹಾಗೂ ರಾಬರ್ಟ್ ಬರುವ ಕ್ರಿಸ್‌ಮಸ್ ಹೊಸವರ್ಷದ ಆಗಮನಕ್ಕೆ ಕಾಯತೊಡಗಿದರು.
–ಕೆ.ರಮೇಶ್, ಮೈಸೂರು
ಸೊಗಸಾದ ಪುಟ್ಟ ಕಥೆ..ಅಭಿನಂದನೆಗಳು ಸಾರ್.
ಚಂದದ ಕಥೆ
ಕಿರಿಯರಿಗೆ ಹಿರಿಯರು ನೀಡುವ ಉತ್ತಮ ಸಂದೇಶ
ಚೆನ್ನಾಗಿದೆ ಕಥೆ
ಕೆರೋಲ್ ದಂಪತಿಗಳು ಥ್ಯಾಂಕ್ಸ್, ಗಿವ್ವಿಂಗ್ ದಿನದಲ್ಲಿ ಏರ್ಪಡಿಸಿದ ಕಾರ್ಯಕ್ರಮ ಬಹಳ ಚೆನ್ನಾಗಿತ್ತು… ಕಥೆ ಚೆನ್ನಾಗಿದೆ ಸರ್.
ಕಥೆ, ಸಂದೇಶ ಎರಡೂ ಚೆನ್ನಾಗಿದೆ
ಚಂದದ ಕಥೆ….ಕಿರಿಯರ ಮನ ನೋಯಿಸದೆ ಅವರಿಂದ ಕೆಲಸ ಮಾಡಿಸಿಕೊಂಡ ರೀತಿ ಸೂಪರ್
ಉತ್ತಮ ಸಂದೇಶವನ್ನು ಹೊತ್ತ ಚಂದದ ಕಥೆ, ಮನದಲ್ಲಿ ಅನೇಕ ಭಾವನೆಗಳನ್ನು ಮೂಡಿಸಿತು. ಪುಟ್ಟ ಸ್ಮಿತ್ ನ ಪ್ರಾರ್ಥನೆಯಂತೂ ಮನಸ್ಸನ್ನು ಆದ್ರಗೊಳಿಸಿತು.