ಕಾಡಿನ ನಿಯಮ
ಅಮ್ಮನ ಹೊಟ್ಟೆ ಗಟ್ಟಿ ಹಿಡಿದು ಮರದಿಂದ ಮರಕ್ಕೆ ಹಾರುತ್ತಿದ್ದೆ
ತಾಯಿ ನೀಡಿದ ಸವಿ ಸವಿ ಹಣ್ಣುಗಳ ಹಿಡಿಯಾಗಿ ತಿನ್ನುತ್ತಿದ್ದೆ
ಗಳಿಗೆಯೂ ಎನ್ನ ಆ ಮಾತೆ ಬಿಟ್ಟಿರಲಿಲ್ಲ ನೆರಳಾಗಿ ಎನ್ನ ಕಾಯುತ್ತಿದ್ದಳಲ್ಲಾ
ಯಾವ ಮಾಯೆಯಲ್ಲಿ ತಾಯಿ ರಕ್ಷಣೆ ಬಿಟ್ಟು ತೆರಳಿದೆನೆಲ್ಲಾ
ಚೂರು ಸಪ್ಪಳ ಮಾಡದೆ ಚುಕ್ಕೆ ಚಿರತೆ ಬಂದಿತ್ತು
ಚೂಪಾದ ಹಲ್ಲುಗಳ ತೋರಿ ಹಿಡಿಯಲು ಹವಣಿಸಿತ್ತು
ಅದೆಲ್ಲಿತ್ತೋ ಮಮತಾಮಯಿ ಹೃದಯ ಧಾವಿಸಿ ಬಂದು ಕವಚಿ ಹಿಡಿದಿತ್ತು
ಶರವೇಗದಲ್ಲಿ ಬಿಡದೆ ಓಡಲು ಶುರುಮಾಡಿತ್ತು
ಮರಿ ಸಿಕ್ಕೀತು ಎನ್ನುವ ಭಯ ಅದರ ಕಾಲು ಕಟ್ಟಿತ್ತು
ಜಾರುವ ಎನ್ನ ಹಿಡಿಯಲು ಅದರ ವೇಗ ಕಡಿಮೆಯಾಗಿತ್ತು
ಹಸಿದ ಬೆಕ್ಕಿನ ಜಾತಿಯ ಪ್ರಾಣಿಯ ಓಟ ಜೋರ ಗತಿಯ ಪಡೆದಿತ್ತು
ನೋಡ ನೋಡುತ್ತಿದ್ದಂತೆ ಅಮ್ಮನ ಕತ್ತು ಹಿಡಿದು ಕಚ್ಚಿತ್ತು
ತಾಯಿಯ ಬೆಚ್ಚನೆಯ ರಕ್ತ ಹನಿ ಹನಿಯಾಗಿ ಇಳಿದಿತ್ತು
ಭಯದ ಚಳಿಯಿಂದ ಮರಗಟ್ಟಿದ ಎನ್ನ ದೇಹಕೆ ಬಿಸಿಯ ತರುತ್ತಿತ್ತು
ಆಹಾರಕ್ಕಾಗಿ ಎನ್ನ ಹೆತ್ತಮ್ಮನ ಕೊಂದ ಈ ಹಾಳು ಬೆಕ್ಕ ಶಪಿಸಲೇ
ಎನ್ನ ಮೇಲಿನ ಪ್ರೀತಿಗೆ ತನ್ನನ್ನೇ ಬಲಿಕೊಟ್ಟ ಅಮ್ಮನಿಗೆ ಕಡೆಯ ಮುತ್ತಿಡಲೇ
ಹೊಟ್ಟೆ ತುಂಬಿದ ಈ ಪ್ರಾಣೆ ಮೋಜಿಗಾಗಿ ಎನ್ನ ಕೊಲ್ಲದು
ಅಮ್ಮನ ಕಳೆದುಕೊಂಡರೂ ಈ ಹಾಳಾದ್ದು ಬದುಕು ನಿಲ್ಲದು…..
-ಕೆ.ಎಂ ಶರಣಬಸವೇಶ
ಪುಟ್ಟಮರಿಯ ದುಃಖ ಕಳವಳ ಮನಸ್ಸಿಗೆ ತಟ್ಟುವಂತಿದೆ
ಇದೇ ಬದುಕು ಎಂದರಿತು ಬದುಕಿನ ನಗ್ನ ಸತ್ಯವನ್ನು ಅರಿತು ಮುಂದೆ ಸಾಗಿದ ಮರಿ
ನೋವು ತುಂಬಿದ ಸಾಲುಗಳು
ಮನಮುಟ್ಟುವಂತೆ ಇದೆ ಕವಿತೆ..ಸಾರ್
ಹೌದು …ಪ್ರಾಣಿಗಳು ತಮ್ಮ ಹಸಿವಿಗಾಗಿ ಮಾತ್ರ ಇತರ ಪ್ರಾಣಿಗಳನ್ನು ಕೊಲ್ಲುತ್ತವೆ. ಸ್ವಾರ್ಥಿ ಮನುಷ್ಯನಂತಲ್ಲ..!!
ತಾಯಿ ತನ್ನ ಮಗುವಿಗಾಗಿ ತನ್ನನ್ನೇ ಬಲಿಕೊಡುವ ಪ್ರಸಂಗವು ಮನ ಮುಟ್ಟುವಂತೆ ಬಿಂಬಿತವಾಗಿದೆ. ಅಭಿನಂದನೆಗಳು.